ಕರಿಸ್ವಾಮಿ ಕೆಂಚಣ್ಣ ಓದಿದ ‘ಸುವರ್ಣಮುಖಿ

ಕರಿಸ್ವಾಮಿ ಕೆಂಚಣ್ಣ

ಸುಮಾರು ಮೂರೂವರೆ ದಶಕಗಳ ಕಾಲ ಇಂಗ್ಲಿಷ್ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಿರುವ, ‘ಕಾವ್ಯ ಸಂವಹನ’ ಸಂಶೋಧನಾ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ (ಡಿ.ಲಿಟ್) ಪದವಿ ಪಡೆದಿರುವ ಲೇಖಕ ಸಿದ್ದಗಂಗಯ್ಯ ಹೊಲತಾಳು (ಹೋ.ರಂ.ಸಿ) ಅವರು ಕೊರಟಗೆರೆ ತಾಲ್ಲೂಕು ಚೆನ್ನರಾಯನದುರ್ಗ ಹೋಬಳಿಯನ್ನು ನಡಿಗೆ ಮೂಲಕ ಸುತ್ತಾಡಿ ಕಟ್ಟಿಕೊಟ್ಟಿರುವ ಪ್ರವಾಸ ಕಥನ ‘ಸುವರ್ಣಮುಖಿ’

ಕೊಟೆ-ಕೊತ್ತಲುಗಳಿಂದ ಅಲಂಕೃತಗೊಂಡ ಬೆಟ್ಟ, ಗುಡ್ಡಗಳು ಸೃಷ್ಟಿಸಿರುವ ರಮಣೀಯ ದೃಶ್ಯ ವೈಭವದ ನಾಡು, ಲೋಕಪ್ರಸಿದ್ದ ಸಿದ್ದರ ಬೆಟ್ಟದ ಸುತ್ತಲೂ ಹರಡಿಕೊಂಡಿರುವ ಸುಮಾರು ಎಂಭತ್ತು ಗ್ರಾಮಗಳನ್ನು ಕುರಿತ ವಿವರಗಳೇ ಈ ಪುಸ್ತಕದ ಹೂರಣ. ಇಲ್ಲಿನ ಬಹುತೇಕ ವಿವರಗಳನ್ನು ಹೋ.ರಂ.ಸಿ, ಅವರೇ ಸ್ವತಃ ನೋಡಿ, ಕೇಳಿ ದಾಖಲಿಸಿರುವುದರಿಂದ ಈ ಪುಸ್ತಕಕ್ಕೆ ಅನೇಕ ಆಯಾಮಗಳು ದಕ್ಕಿವೆ. ಈ ನಡಿಗೆಯಲ್ಲಿ ಇಡೀ ಸೀಮೆಯ ಸುಮಾರು ೫೦ ವರ್ಷಗಳ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದಾರೆ.

ನಿವೃತ್ತರಾದ ನಂತರ, ತಮ್ಮ ಜಮೀನನ್ನೇ ಅನೌಪಚಾರಿಕ ಬೇಸಾಯ, ತೋಟಗಾರಿಕಾ ಸಂಸ್ಕೃತಿ ಕೇಂದ್ರ (ಅಬೇತೋಸಂ)ವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ಅನೇಕ ಪ್ರಯೋಗಗಳನ್ನು ಮಾಡುತ್ತಿರುವ ಹೋ.ರಂ.ಸಿ, ಅವರು, ತಮ್ಮ ಸುತ್ತಲ ಪರಿಸರದ ಅನೇಕ ವಿವರಗಳನ್ನು ಡ್ರೋಣ್ ಕಣ್ಣಿನಿಂದ ಕಂಡವರಂತೆ ಸಂಭ್ರಮಿಸಿ ಬರೆದಿದ್ದಾರೆ. ಹಾಗಾಗಿ, ಈ ಪುಸ್ತಕಕ್ಕೆ ಪುರಾಣ, ಭೂಗೋಳ, ಐತಿಹಾಸ, ಸಾಮಾಜಿಕ, ಸಾಂಸ್ಕ್ರತಿಕ ಆಯಾಮಗಳಲ್ಲದೆ, ಪರಿಸರ, ವಿಜ್ಞಾನ, ಸಾಹಿತ್ಯ ಹಾಗೂ ವರ್ತಮಾನದ ಅನೇಕ ವಿವರಗಳು ದಕ್ಕಿವೆ.

ಸ್ಥಳೀಯ ವಿಶ್ವಕೋಶ ಎಂದು ಕರೆಯಬಹುದಾದ ‘ಸುವರ್ಣಮುಖಿ’ ಕೃತಿ ವರ್ತಮಾನದ ಚಟುವಟಿಕೆಗಳಿಗೆ ಆದ್ಯತೆ ಕೊಡುವ ಮೂಲಕ, ಪ್ರಯೋಗಶೀಲ ರೈತರು, ವಿವಿಧ ಕಸುಬುದಾರ ಕುಶಲಕರ್ಮಿಗಳು ಹಾಗೂ ಸಾಧಕರೊಂದಿಗೆ ಸಂವಾದಕ್ಕಿಳಿಯುತ್ತಾ ಓದುಗರಿಗೆ ಮುಖಾಮುಖಿಯಾಗಿಸುತ್ತದೆ. ವಿವಿಧ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳ ಚಿತ್ರಣ, ಅರ್ಥಿಕತೆ, ಬಡತನದ ಸಂಕಷ್ಟಗಳನ್ನು ವಿವರಿಸುವಾಗ ಇದು ನಮ್ಮೆಲ್ಲರ ಕಥೆಯಲ್ಲವೇ ಅನಿಸುತ್ತದೆ.

ನೆನಪು-ವಾಸ್ತವಗಳ ಮೆರೆವಣಿಗೆಯಲ್ಲಿ ಓದಗರೂ ಸಹ ಲೇಖಕರ ಸಹ ಪ್ರಯಾಣಿಕರಾಗಿರುವಂತೆ ಭಾಸವಾಗುವಷ್ಟು ನಿರೂಪಣೆ ನವಿರಾಗಿದೆ. ವಿವರಗಳನ್ನು ದಾಖಲಿಸುವಾಗ ಅಂಧಾನುಕರಣೆ, ಮೂಢನಂಭಿಕೆಗಳನ್ನು ತಣ್ಣಗೆ ಟೀಕಿಸುತ್ತ ವೈಜ್ಞಾನಿಕ ಮನೋಭಾವನೆಗಳಿಗೆ ಒತ್ತು ಕೊಡುತ್ತಾರೆ. ಎಲ್ಲಿಯೂ ತಮ್ಮ ಅಭಿಪ್ರಾಯಗಳನ್ನು ಹೇರುವುದಿಲ್ಲ.

ಒಮ್ಮೆ ತೇಜಸ್ವಿ ಅವರ ಪ್ರಸಿದ್ಧ ಕೃತಿ ‘ಕರ್ವಾಲೋ’ದಂತೆಯೂ, ಇನ್ನೊಮ್ಮೆ ವೆರಿಯರ್ ಎಲ್ವಿನ್ ಅವರ ‘ಗಿರಿಜನಪ್ರಪಂಚ’ದಂತೆಯೂ ಕಂಡುಬರುವ ಈ ಕೃತಿ, ಸಿದ್ದರಬೆಟ್ಟದ ಸುತ್ತಲಿನ ಸಮಗ್ರ ಚಿತ್ರಣವನ್ನು ಎಲ್ಲ ಆಯಾಮಗಳಲ್ಲೂ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಹಿತವಾಗುವಂತೆ ಕಟ್ಟಿಕೊಡುತ್ತದೆ.

ಸ್ಥಳೀಯತೆಯನ್ನು ಹೇಗೆ ಪ್ರೀತಿಸಬೇಕು, ಹೇಗೆ ದಾಖಲಿಸಬೇಕು ಎಂಬುದನ್ನಲ್ಲದೆ ಜೀವನವನ್ನು ಹೀಗೂ ಸಂಭ್ರಮಿಸಬಹುದೆಂಬ ಹೊಸ ಸಾಧ್ಯತೆಯನ್ನು ಈ ಪುಸ್ತಕ ತೆರೆದಿಡುತ್ತದೆ. ಬೇರೆ ಬೇರೆ ಭಾಗದ ವಿಷಯಗಳನ್ನು ಚರ್ಚಿಸುವಾಗ ಅನಗತ್ಯವಾದ ಕೆಲ ವ್ಯಕ್ತಿಗತ ಅಂಕಿ-ಅಂಶಗಳು ಹಾಗೂ ತೋಟಗಾರಿಕಾ ಬೆಳೆಗಳ ಕುರಿತ ಕೆಲ ವಿವರಗಳು ಪುನಾರಾವರ್ತಿತ ಅನಿಸುತ್ತವೆ. ಆದರೆ, ಸಾಂಸ್ಥಿಕವಾಗಿ ಮಾಡಬಹುದಾದಂತಹ ಬೃಹತ್ ಕೆಲಸವೊಂದನ್ನು ಲೇಖಕರು ಏಕಾಂಗಿಯಾಗಿ ಮಾಡಿರುವುದು ಅಭಿನಂದನಾರ್ಹ.

ತನ್ನ ನೆಲ-ಜಲ ಭಾಷೆ, ಸಂಸ್ಕೃತಿ ಪರಿಸರ, ಇತಿಹಾಸ ಮತ್ತು ಹಾಗೂ ವರ್ತಮಾನಗಳ ಬಗೆಗಿನ ತೀವ್ರ ತುಡಿತವಿರುವವರು ಮಾತ್ರ ಮಾಡಬಹುದಾದ ಇಂತಹ ಕೆಲಸಗಳು ಇನ್ನಷ್ಟು ಸಾಧ್ಯವಾಗಲು ‘ಸುವರ್ಣಮುಖಿ’ಯಂತಹ ಪುಸ್ತಕಗಳಿಂದ ನಾವೆಲ್ಲರೂ ಪ್ರೇರಣೆ ಪಡೆಯಬೇಕಿದೆ. ಮತ್ತೆ ಮತ್ತೆ ಓದಬೇಕಾದ, ಕಾಲದ ಬೆಳವಣಿಗೆಗಳನ್ನು ಅಳೆಯಲು ಬೇಕಾದ ಅತ್ಯಂತ ದೊಡ್ಡ ಮತ್ತು ಅಮೂಲ್ಯ ದಾಖಲೆಗಳು ಮತ್ತು ಮಾಪನಗಳಿರುವ ಪುಸ್ತಕವಿದು. ಸ್ಥಳೀಯತೆಯ ಮಹತ್ವವನ್ನು ಸಾರುವ ಇಂತಹ ಪುಸ್ತಕಗಳು ಗ್ರಾಮ ಪಂಚಾಯಿತಿಗೊಂದು ಬರಬೇಕಾದ ಅಗತ್ಯವಿದೆ.

‍ಲೇಖಕರು Admin

July 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: