ಪಿ ಚಂದ್ರಿಕಾ ಅಂಕಣ- ಕನಸಿನ ಮನೆಯ ಬಾಗಿಲನ್ನು ತೆರೆದೆವು

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

5

ಬೆಳಗಿನಿಂದ ಸಂಜೆಯವರೆಗೆ ಮಗುವನ್ನು ಆಡಿಸುತ್ತಾ ಕಾಲ ಕಳೆಯುತ್ತಿದ್ದ ಹಸೀನಮ್ಮ. ಅಲ್ಲಿಲ್ಲಿ ಮಾತಿಗೆ ಸಿಗುತ್ತಿದ್ದ ಜನರ ಜೊತೆ ಸಮಸಮವಾಗಿ ಮಾತಾಡುತ್ತಿದ್ದ ಅತ್ತೆ ಜರೀನಾಬಿ. ಮಗುವನ್ನು ಆಡಿಸುವ ನೆಪದಲ್ಲಿ ಪದಾರ್ಥ ರುಚಿ ನೋಡಬಹುದಾದ ಅವಕಾಶ. ಈ ಕಾರಣಕ್ಕೆ ಹಸೀನಮ್ಮನಿಗೆ ಸುಬಾಷ ನಗರದ ಹೆಂಗಸರೆಲ್ಲರೂ ಆಪ್ತವಾಗಲು ಬಯಸುತ್ತಿದ್ದರು. ಇದೆಲ್ಲ ಏನೂ ಕದ್ದು ಮುಚ್ಚಿ ಆಗುತ್ತಿರಲಿಲ್ಲ.

ಹಸೀನಮ್ಮನೂ ಧಾರಾಳವಾಗಿ ಕೊಟ್ಟುಬಿಡುತ್ತಿದ್ದಳು. (ಮುಂದಿನ ದಿನಗಳಲ್ಲಿ ಇದು ನಮ್ಮ ಅನುಭವಕ್ಕೂ ಬಂದಿತ್ತು) ಕಂಕಳಲ್ಲಿದ್ದ ಓರೆಯಾದ ಮಗುವನ್ನು ಹಿಡಿದ ಕೈಗಳಿಂದ ಸ್ವಲ್ಪವೇ ಎಗರಿಸಿ ಸರಿಯಾಗಿ ಕೂಡಿಸಿಕೊಂಡಳು. ಒಳಗೆ ಅವಳ ಅತ್ತೆ ನಮಾಜು ಮುಗಿಸಿ ದುವಾ ಮಾಡುತ್ತಿದ್ದುದು ಕಾಣುತ್ತಿತ್ತು.

‘ಅಲ್ಲಾ… ಈ ಮನೆಯಲ್ಲಿ ಕಾಕ ವಾಸ ಇಲ್ಲ ನೀವು ಶೂಟಿಂಗ್ ಮಾಡುವುದಾದರೆ ಯಾವ ತೊಂದರೆಯೂ ಇಲ್ಲ. ಅದಕ್ಯಾಕೆ ಕಾಕನನ್ನು ಹುಡುಕುವುದು?’ ಇಪ್ಪತ್ತೈದರ ಹಸೀನಮ್ಮನ ಮುಖ ದಲ್ಲಿ ಇದ್ದುದು ಹುಡುಗು ಕಳೆಯೋ ಅಥವಾ ಕೀಟಲೆಯೋ ಗೊತ್ತಿಲ್ಲ. ಎರಡೂ ಒಮ್ಮೊಮ್ಮೆ ಗೋಚರಿಸಿ ಗೊಂದಲವನ್ನು ಉಂಟುಮಾಡಿತು. ‘ಇಲ್ಲ ಹಾಗೆ ಸಿನಿಮಾ ಮಾಡಬೇಕಾದರೆ ಮನೆಯ ಓನರ್‌ರಿಂದ ಪರ್ಮೀಷನ್ ಬೇಕಲ್ಲವಾ?’ ಎಂದೆ.

ಹಸೀನಮ್ಮ ನಗುತ್ತಾ ‘ಸರಿಯಾಯಿತು, ನೀವು ಮನೆಯನ್ನು ಬರಿಯ ಶೂಟಿಂಗ್ ಮಾಡುವುದು ತಾನೆ? ಮನೆಯನ್ನು ಬೀಳಿಸುವುದಿಲ್ಲ ತಾನೆ? ಮತ್ತಿನ್ಯಾಕೆ ಪರ್ಮೀಷನ್ನು? ಶೂಟಿಂಗ್ ಮಾಡಿಕೊಂಡು ಹೋಗಿ’ ಎಂದಳು ಅವಳೇ ಮನೆಯ ಓನರ್ ಎನ್ನುವ ಹಾಗೆ. ಈಗ ಗೊಂದಲಕ್ಕೆ ಬಿದ್ದದ್ದು ನಾವು. ಚಂದ್ರಹಾಸರಿಗೆ ಬ್ಯಾರಿ ಭಾಷೆ ಗೊತ್ತಿತ್ತು. ಅವರ ಭಾಷೆಯಲ್ಲೇ ಹೇಳಿದರೆ ಅರ್ಥವಾಗುತ್ತೆ ಎನ್ನುವ ಹಾಗೆ ಬ್ಯಾರಿಯಲ್ಲೇ ಮಾತಾಡಿದರು. ಅವಳಿಗೆ ತಿಳಿಹೇಳುವುದರಲ್ಲಿ ಕಡೆಗೂ ಯಶಸ್ವಿಯಾಗಿ ಅವಳ ಬಳಿಯೇ ಇದ್ದ ಕೀಲಿ ಕೈಯಿಂದ ನಮ್ಮ ಕನಸಿನ ಮನೆಯ ಬಾಗಿಲನ್ನು ತೆರೆದೆವು.

ಬಾಗಿಲನ್ನು ತೆರೆದು ಯಾವ ಕಾಲ ಆಗಿತ್ತೋ ತಿಳಿಯದು, ಬಾಗಿಲಿಗೆ ಅಂಟಿಕೊಂಡಂತೆ ಬಿದ್ದ ಮರಳು ಜರಿದು ಮನೆಯ ಒಳಗೆ ಜಾರಿತು. ಜಾರಿದ ಮರಳು ಎರಡಡಿಯ ಕೆಳಗೆ ಇದ್ದ ನೆಲಕ್ಕೆ ಬಿದ್ದು ಇಳಿಯಲಿಕ್ಕೆ ಇದ್ದ ಮೆಟ್ಟಿಲನ್ನು ಮುಚ್ಚಿಹಾಕಿತ್ತು. ಹಾಲ್ ಎಂದರೆ ಬರೀ ಹತ್ತಡಿಯ ಜಾಗ. ಗೋಡೆಯ ಮೇಲೆ ಕಾಬಾದ ಮಿಂಚುವ ಹಳೆಯ ಫೋಟೋ, ಅದರ ಕೆಳಗೆ ಜಗುಲಿ ಅದು ಕೂಡಲಿಕ್ಕೆ ಮಲಗಲಿಕ್ಕೆ ಎಲ್ಲಕ್ಕೂ ಅನುಕೂಲಕರವಾಗಿತ್ತು.

ಎರಡು ಮುರಿದ ಬಾಗಿಲುಗಳ ಪುಟ್ಟ ಪುಟ್ಟ ಕಿಟಕಿಗಳು. ಒಂದು ರೂಂ, ಅದರ ಬಾಗಿಲು ಕೂಡಾ ಅರ್ಧಂಬರ್ಧ ಒಡೆದು ಒಳಗಿನದ್ದೆಲ್ಲಾ ಕಾಣುತ್ತಲಿತ್ತು. ಅದರ ಪಕ್ಕಕ್ಕೆ ಅಂಟಿಕೊಂಡ ಹಾಗೆ ಸಣ್ಣದೊಂದು ಅಡುಗೆ ಮನೆ. ಅಲ್ಲಿ ಎಂದೋ ಉರಿದ ಒಲೆಯ ಗುರುತು. ತೆಗೆಯಲು ಸಾಧ್ಯವೇ ಇಲ್ಲದಂತೆ ಮೊಳೆ ಹೊಡೆದು ಮುಚ್ಚಿದ ಕಿಟಕಿ.

ಮನೆ ಪೂರಾ ಗಲೀಜು. ಆದರೂ ನಮಗೆ ಅಂಥಾ ಮನೆ ಇನ್ನೊಂದು ಸಿಗಲಾರದು ಎನ್ನುವುದು ನಂಬಿಕೆ. ನಾನಾಗಲೇ ಎಲ್ಲೆಲ್ಲಿ ಏನೇನನ್ನು ತುಂಬಿಸಬೇಕು, ಫ್ರೇಂಗೆ ಏನು ಸಿಗಬೇಕು ಎಂದೆಲ್ಲಾ ಯೋಚನೆ ಮಾಡುತ್ತಿದ್ದೆ. ಮಂಗಳೂರಿನ ಕಡಲ ಬದಿಯ ಮನೆಯಲ್ಲಿ ಹೊರಗಿಗಿಂತ ಹೆಚ್ಚು ಸೆಖೆ, ಎಲ್ಲ ಕಿಟಕಿಗಳೂ ಮುಚ್ಚಿದ್ದರಿಂದ ಹೊರಗಿನ ಗಾಳಿ ಕೂಡಾ ಒಳಗೆ ನುಸುಳಲಾರದು. ಮಾಡಿನಲ್ಲಿ ಹಾಕಿದ್ದ ಗಾಜಿನಿಂದ ಬೆಳಕು ಮಾತ್ರ ಧಾರಾಳ.

ಸಂತೃಪ್ತಿಯಿಂದ ಹೊರಬಂದ ನಾವು ಹಸೀನಮ್ಮನನ್ನು ಜಕ್ಕು ಮಹಮದ್‌ನ ಮನೆಯ ಅಡ್ರಸ್ ಕೇಳಿದೆವು. ‘ಮುಕ್ಕಚ್ಚೇರಿಯ ಒಂಬತ್ತು ಕೆರೆ ಉಂಟಲ್ಲಾ ಅಲ್ಲೇ ಸರ್ಕಾರಿ ಸ್ಕೂಲ್ ಹತ್ತಿರ ಯುಟಿ ಕಾಂಪೊಂಡ್ ಇದೆ ಅಲ್ಲಿ ಹೋಗಿ ಯಾರನ್ನು ಬೇಕಾದರೂ ಕೇಳಿ, ಜಕ್ಕು ಮಹಮದ್… ಅದೇ ಅಲಿಯಬ್ಬನ ಅಂಗಡಿಯ ಬಳಿ ಇದಾರಲ್ಲ ಅವರೇ ಅಂತ. ಬೇರೆ ಯಾವ ವಿವರವೂ ಬೇಡ… ಜಕ್ಕು ಮಹಮದ್ ಅನ್ನಿ ಸಾಕು’ ಎಂದು ಒತ್ತಿ ಒತ್ತಿ ಹೇಳಿದಳು.

ಹಸೀನಮ್ಮ ಹೇಳಿದ ಅಡ್ರಸ್ ಹಿಡಿದು ಜಕ್ಕು ಮಹಮದ್ ಅವರನ್ನು ಹುಡುಕುತ್ತಾ ಹೊರಟೆವು. ಆಗಲೇ ಸಂಜೆ ಐದರ ಸಮಯ. ಸೂರ್ಯ ಇನ್ನೇನು ಮುಳುಗುವ ಆತುರದಲ್ಲಿದ್ದ. ಚಂದ್ರಹಾಸರ ಕಾರು ಸುಸ್ಥಿತಿಯಲ್ಲಿತ್ತು. ಹುಡುಗರು ಮಾತ್ರ ತಮ್ಮಪಾಡಿಗೆ ತಾವು ಕೂಗಾಡುತ್ತಿದ್ದರು. ಕಾರು ಹೊರಡುವಾಗ ನಮಗೆ ದಾರಿ ಮಾಡಿಕೊಟ್ಟು ಮತ್ತೆ ತಮ್ಮ ಜಾಗಕ್ಕೆ ಮರಳಿದರು.

ಮುಕ್ಕಚೇರಿಯ ರಸ್ತೆಯಲ್ಲಿ ಜಕ್ಕು ಮಹಮದ್‌ರನ್ನು ಹುಡುಕುತ್ತಾ ಹೊರಟೆವು. ಯಾವುದೋ ಸರ್ಕಾರಿ ಸ್ಕೂಲು ಕಾಣಿಸಿತು. ನಿಲ್ಲಿಸಿ ನೋಡುವಾಗ ಹೊಸಬರಂತೆ ಕಾಣುತ್ತಿದ್ದ ನಮ್ಮನ್ನು ನೋಡಿ, ದಾರಿಹೋಕರು ‘ಯಾರು ಬೇಕು? ಕೇಳಿದರು. ಒಂಬತ್ತು ಕೆರೆಯ ಸ್ಕೂಲ್ ಬಳಿ, ಯುಟಿ ಕಾಂಪೊಂಡ್ (ಅದು ರಾಜಕಾರಣಿ ಯುಟಿ ಖಾದರ್ ಅವರ ತಂದೆ ಹಜಿ ಯುಟಿ ಫರೀದ್ ಅವರ ಮನೆಯಾಗಿತ್ತು) ಅಲಿಯಬ್ಬನ ಅಂಗಡಿ ಎಂದೆಲ್ಲಾ ಕೇಳುವಾಗ ‘ಅರೆ, ಇಷ್ಟೆಲ್ಲಾ ಯಾಕೆ? ಬರೀ ಅಲಿಯಬ್ಬನ ಅಂಗಡಿ ಎಂದು ಕೇಳಿದರೆ ಯಾರು ಬೇಕಾದರೂ ಹೇಳುತ್ತಾರೆ’ ಎಂದು ನಕ್ಕರು. ತುಂಬಾ ಸರಿಯಾಗಿ ಅಡ್ರಸ್ ಹೇಳುತ್ತಿದ್ದೇವೆ ಎಂದು ಕೊಂಡಿದ್ದ ನಾವು ‘ಓ ಹೌದಾ!’ ಎಂದೆವು ಪೆಚ್ಚಾದೆವು.

‘ಹೀಗೆ ಒಂದೇ ರಸ್ತೆ. ಅಲ್ಲೊಂದು ದೊಡ್ಡ ಮರ ರಸ್ತೆಯ ಕಡೆಗೆ ಬಾಗಿರುತ್ತೆ, ಅಲ್ಲೆ ಪಕ್ಕಕ್ಕೆ ನಿಮ್ಮ ಬಲಕ್ಕೆ ಪುಟ್ಟಂಗಡಿ ಇದೆ. ಅಂಗಡಿಯ ಒಳಗಿಗಿಂತ ಹೆಚ್ಚು ಸಾಮಾನನ್ನು ಹೊರಗೇ ಜೋಡಿಸಿರುತ್ತಾರೆ. ಅದೇ ಅಲಿಯಬ್ಬನ ಅಂಗಡಿ’ ಎಂದರು. ನಾವು ಇನ್ನೇನಾದರೂ ಕೇಳಬಹುದು ಎಂದು ಅವರು ಕಾದರು. ನಮಗೆ ಅಲಿಯಬ್ಬನ ಅಂಗಡಿ ಸಿಕ್ಕರೆ, ಜಕ್ಕು ಮಹಮದ್ ಸಿಕ್ಕ ಹಾಗೆನಿಸಿದ್ದರಿಂದ ನಾಲ್ಕೂ ಜನ ಅಲ್ಲಿಂದ ಹೊರಟೆವು. ಅಲ್ಲಿಗೂ ನನ್ನ ಮನಸ್ಸಿಗೆ ಜಕ್ಕು ಮಹಮದ್‌ರ ಬಗ್ಗೆ ಕೇಳಲಾ ಎನ್ನುವ ಪ್ರಶ್ನೆ ಬಂದಿತಾದರೂ ಪಂಚಾಕ್ಷರಿ ಮತ್ತು ಚಂದ್ರಹಾಸರು ಹೊರಟಿದ್ದರಿಂದ ನಾನೂ ಸುಮ್ಮನಾದೆ.

ಅಲಿಯಬ್ಬನ ಅಂಗಡಿ ತುಂಬಾ ಸುಲಭಕ್ಕೆ ಸಿಕ್ಕಿಬಿಟ್ಟಿತು. ದೊಡ್ಡ ಆಲದ ಮರದ ಎದುರೇ ಇತ್ತು. ಕಾರನ್ನು ಚಂದ್ರಹಾಸ್ ಪಕ್ಕಕ್ಕೆ ಹಾಕಿದರು. ನಾನು ಚಂಚಲ ಒಂದು ಕಡೆ ನಿಂತೆವು. ಚಂದ್ರಹಾಸ್ ಮತ್ತು ಪಂಚಾಕ್ಷರಿ ಜಕ್ಕು ಮಹಮದರ ಮನೆಯ ವಿಳಾಸ ಕೇಳಲು ಹೊರಟರು. ಚಂಚಲ ಉಡುಪಿಯ ಹುಡುಗಿ. ಅಚ್ಚ ಬಿಳುಪು ಮೈಬಣ್ಣ. ಸಣ್ಣ ಕಣ್ಣುಗಳೇ ಆದರೂ ಆಕರ್ಷಕ ನಿಲುವು, ಅರ್ಧ ಗುಂಗುರು ಕೂದಲನ್ನು ಪಕ್ಕಕ್ಕೆ ತಳ್ಳುತ್ತಾ ‘ಈ ಜಕ್ಕು ಮಹಮದ್ ಮನೆಗೆ ಇನ್ನೆಷ್ಟು ದೂರವೋ?’ ಎಂದರು. ಆಕೆಗೆ ‘ಜಕ್ಕು ಎಂದರೆ ಏನು?’ ಎಂದೆ. ನನ್ನ ಕಡೆಗೆ ಗೊಂದಲದಲ್ಲಿ ನೋಡುತ್ತಾ ‘ಅದೊಂದು ಅಡ್ದ ಹೆಸರು, ನಿಜ ಹೇಳ್ಬೇಕಂದ್ರೆ ನನಗೂ ಗೊತ್ತಿಲ್ಲ, ತಿಳಿದುಕೊಳ್ಳೋಣ ಇರಿ’ ಎಂದರು.

ನನಗೀಗ ಅರ್ಜೆಂಟ್ ಜಕ್ಕು ಮಹಮದ್‌ರನ್ನು ನೋಡುವುದು ಬೇಕಿತ್ತು. ಇಂಥಾ ಅಡ್ಡ ಹೆಸರಲ್ಲಿ ನನ್ನ ಜ್ಞಾನೇಂದ್ರಿಯಗಳನ್ನು ಕೆಣಕುತ್ತಿರುವ ಈ ಪುಣ್ಯಾತ್ಮ ನೋಡಲಿಕ್ಕೆ ಹೇಗಿದ್ದಾನು?! ಆಜಾನುಬಾಹು, ಒಳ್ಳೆಯ ಸ್ಫುರದ್ರೂಪಿ, ಐವತ್ತರ ಆಸು ಪಾಸಿನವ… ಹೀಗೆ ಏನೇನೋ ಊಹಿಸಿಕೊಳ್ಳತೊಡಗಿದೆ. ಅಲಿಯಬ್ಬನ ಅಂಗಡಿಯ ಹತ್ತಿರವೇ ನಿಂತು ಪಂಚಾಕ್ಷರಿ ಮತ್ತು ಚಂದ್ರಹಾಸರು ನಮ್ಮಿಬ್ಬರನ್ನು ಬರುವಂತೆ ಸನ್ನೆ ಮಾಡಿದರು.

ನಾವು ರಸ್ತೆ ದಾಟಿ ಆ ಬದಿಗೆ ಹೋದೆವು. ‘ಇಲ್ಲೆ ಹಿಂದೆ ಮನೆಯಂತೆ ಹೋಗೋಣ’ ಎನ್ನುತ್ತಾ ಸಣ್ಣ ಕಾಲು ದಾರಿಯಲ್ಲಿ ನಡೆಯತೊಡಗಿದೆವು. ಗೇಟುಗಳ ಮೇಲೆ ಗೇಟು. ಪಕ್ಕದಲ್ಲಿ ಸಣ್ಣ ಓಡಾಡುವ ಜಾಗ. ದನ ಕರುಗಳು ನುಸಿಯದ ಹಾಗೆ ಮಧ್ಯದಲ್ಲಿ ನೆಟ್ಟ ಮರದ ಕಂಬ. ‘ಅರೆ ಇದೇನು ಏಳು ಸುತ್ತಿನ ಕೋಟೆ ದಾಟಿ ಹೋಗ್ತಾ ಇದೀವಿ, ಅಬ್ಬಕ್ಕನ ಆಸ್ಥಾನಕ್ಕೆ’ ಎಂದೆ. ‘ಅಬ್ಬಕ್ಕಾ ಅಲ್ಲ ಅಬ್ಬಣ್ಣ’ ಎಂದು ಚಂದ್ರಹಾಸ್ ನಕ್ಕರು. ಮನೆಯ ಮುಂದೆ ಇದ್ದವರನ್ನು ಮತ್ತೆ ನಮ್ಮ ಜಕ್ಕು ಮಹಮದ್‌ರ ಬಗ್ಗೆ ಕೇಳಿದೆವು. ‘ರಸ್ತೆಗೆ ಆತುಕೊಂಡಿದ್ದ ಮನೆಯ ಹಿಂಬದಿಯ ಮನೆ’ ಎಂದು ತೋರಿಸಿದವರು. ‘ನಿಮಗೆ ಈ ಮನುಷ್ಯ ಯಾಕೆ ಬೇಕು?’ ಎಂದು ಕೇಳದೆ ಮಾತ್ರ ಇರಲಿಲ್ಲ. ‘ಸ್ವಲ್ಪ ಕೆಲಸ ಇತ್ತು’ ಎನ್ನುವಾಗ, ಅವರ ಮುಖದಲ್ಲಿ ‘ಇವರಿಗೆ ಎಂಥಾ ಕೆಲಸ?’ ಎನ್ನುವ ಕುತೂಹಲ ಕಾಡದೇ ಇರಲಿಲ್ಲ. ಮನೆ ಸಿಕ್ಕಿತು ಆದರೆ ಮನುಷ್ಯ ಸಿಕ್ಕಲಿಲ್ಲ. ಮನೆ ಬೀಗ ಹಾಕಿತ್ತು. ‘ಛೇ ಎಂಥಾ ಕೆಲಸ ಆಯಿತು’ ಎಂದು ಕೈ ಹಿಸುಕಿಕೊಳ್ಳುವಾಗ ಅಲ್ಲೇ ಇದ್ದ ಪುಟ್ಟ ಹುಡುಗ ‘ಜಕ್ಕು ಕಾಕ ಅಬ್ಬಾಗೆ ಗೊತ್ತು. ಅವರು ಎಲ್ಲಿರ್ತಾರೆ ಅಂತ ಅಬ್ಬು ಹೇಳ್ತಾರೆ’ ಎಂದಿದ್ದೇ ತಡ ‘ನಿಮ್ಮನೆ ಎಲ್ಲಿ?’ ಎನ್ನುತ್ತಾ ಅವನ ಹಿಂದೆ ಹೊರಟೆವು.

। ಇನ್ನು ಮುಂದಿನ ವಾರಕ್ಕೆ । 

‍ಲೇಖಕರು Admin

July 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: