ಕರಗಿ ಹೊಸ ಜೀವ, ಹೊಸ ಜಗವು ಹುಟ್ಟುಪಡೆದಂತೆ..

ಹೊಸ ಹುಟ್ಟು

ಜಿ ಪಿ ಬಸವರಾಜು

ನಿತ್ಯ ನಡೆಯುವ ಬೀದಿಗಳೆ ನಿರ್ಜನವಾಗಿವೆ,
ಬೀದಿನಾಯಿಗಳೂ ಮರೆಯಾಗಿವೆ; ಸಂಜೆ
ಸೂರ್ಯನ ಕಿರಣಗಳೂ ಬಣ್ಣಮಾಸಿ ಬಾಡಿವೆ
ಬೀಸುವ ಗಾಳಿ ಮಾಯವಾಗಿದೆ, ಮರಗಿಡಗಳು
ಅಲ್ಲಾಡುತ್ತಿಲ್ಲ, ಎಲ್ಲಿ ಹೋದವು ಹಾಡುಹಕ್ಕಿಗಳು,
ಊರು ಗುಳೆ ಹೊರಟವರ ಬೀಡಾಗಿದೆ;

ತೆರೆಯದ ಬಾಗಿಲುಗಳು, ಮರೆಯಾದ
ಮೋರೆಗಳು, ಮಾತುಕತೆಗಳಿಲ್ಲ, ಮೆಲು-
ದನಿಗಳಿಲ್ಲ, ಕಣ್ಣ ನೋಟಗಳಿಲ್ಲ, ಸೋಜಿಗದ
ಸೂಜಿ ಮಲ್ಲಿಗೆಯೂ ಅರಳಿಲ್ಲ ಎಲ್ಲೂ ;

ಬೆಚ್ಚಿಬೀಳಿಸುವ ಬಿದಿಯಲ್ಲಿ ಬಂತೊಂದು
ರೂಪರೇಖೆ ಮುರಿದು ಖಾಲಿತನವನ್ನು,
ಮಾನವನೆ, ಅವನ ನೆರಳೆ, ಅಥವಾ
ಬರಿಯ ಛಾಯಾ ರೂಪಿಯೇ, ಮುಖಕ್ಕಾಗಿ
ತಡಕಾಡಿದರೆ ಅದನ್ನು ಮುಚ್ಚಿದೆ ಮುಖವಾಡ
ತಲೆ ಕೈಕಾಲು ಯಾವುದೂ ನಿಚ್ಚಳವಾಗುತ್ತಿಲ್ಲ
ನಗುವೊ, ದುಗುಡವೊ, ಚಿಂತೆಯೊ, ದಿಕ್ಕೆಟ್ಟ
ಕಂಗಾಲು ಸ್ಥಿತಿಯೋ ತಿಳಿಯುತ್ತಿಲ್ಲ ಯಾವುದೂ;

ಅವನಾದರೆ ಅವನಂತೆಯೂ ಕಾಣುತ್ತಿಲ್ಲ, ಅವಳಾದರೆ
ಅವಳೂ ತಿಳಿಯುತ್ತಿಲ್ಲ, ಯಾರದೋ ನೆರಳಿನಂತೆ
ಸುಳಿದಾಡುತ್ತಿದೆ, ನನ್ನಂತೆಯೋ ನೋಡುತ್ತಿದೆ ಅದು
ಕಂಗೆಟ್ಟ ನೋಟದಲ್ಲಿ, ನನ್ನ ವೈರಿಯೇ, ನನ್ನ ಗೆಳೆಯನೆ,
ನನ್ನ ಭ್ರಮೆಯೇ, ನನ್ನ ಭರವಸೆಯೆ, ನಿಲ್ಲು ನಿಲ್ಲು,
ನೆರಳಾದರೂ ಸರಿ, ಒಂಟಿಯಾದ ನನಗೆ, ತುಸು
ಹೊತ್ತಾದರೂ ನೀನೊಂದು ಆಸರೆ, ನಂಬಿಕೆ, ನಿನಗೂ
ಇರಬಹುದು ಅಂಜಿಕೆ, ಅನುಮಾನ, ಆದರೂ ತಡೆ,
ಆಡು ಒಂದೆರಡು ಮಾತು-ಬೇಸರಿಕೆ, ಒಂಟಿತನ ನೀಗಲು;

ನಿಂತರೂ ನಿಲ್ಲುವುದಿಲ್ಲ ಅದು, ದೂರ ದೂರ ಸಾಗುತ್ತಿದೆ
ಇನ್ನೆಷ್ಟು ದೂರ, ಭೂಮಿಯಿಂದ, ಮನುಕುಲದಿಂದ
ದೂರ ದೂರ? ಅಲ್ಲಿ-ಬೇರೆ ಗ್ರಹ ತಾರೆಗಳಲ್ಲೂ ಇರಲಾರದು
ನಿನಗೆ ಗಾಳಿ, ಬೆಳಕು, ಬಿಸಿಲು, ನೀರು, ಚಿಗುರಲು ಒಂದು
ಹಿಡಿ ಮಣ್ಣು, ಅದೆಲ್ಲವನ್ನೂ ಇಲ್ಲಿಂದಲೇ ಒಯ್ಯಬೇಕೇನೊ

ಮುಂದೆ ಮುಂದೆ ನಡೆದೆ; ಎತ್ತ ಹೋದರೂ ಇದೇ ಚಿತ್ರ
ಚಿತ್ರವಿಲ್ಲದ, ಬಣ್ಣವಿಲ್ಲದ ಖಾಲಿ ಕ್ಯಾನ್‌ವಾಸು, ವಿನಾಶದ
ತುತ್ತ ತುದಿಯೇ ಇದು ಎನ್ನಿಸಿ, ಮೈಮುಟ್ಟಿ ನೋಡಿಕೊಂಡೆ
ಇದ್ದೆ ನಾನು, ನನ್ನ ಕೈ ಕಾಲು, ರುಂಡ ಮುಂಡ, ಮುಖ
ಮುಚ್ಚಿಕೊಂಡಿದೆ ಮುಖವಾಡದಲ್ಲಿ, ನನಗೂ ಇರಬಹುದೆ
ನನ್ನ ನೆರಳು ನೋಡಿದರೆ ಮಬ್ಬುಮಬ್ಬು ಕತ್ತಲಿಳಿಯುತ್ತಿತ್ತು

ಮುಂದಿನ ದಾರಿ ಇಲ್ಲದೆ, ಹಿಂದಿನ ದಾರಿ ಕಾಣದೆ, ತಿರುಗಿದೆ
ಸಿಕ್ಕ ತಿರುವಿನಲ್ಲಿ, ಆಹಾ! ಎಂಥ ಸೋಜಿಗ, ಬಂತೊAದು
ಆಕೃತಿಯು, ಎದೆ ಉಬ್ಬಿಸಿ ಗಾಳಿ ಹೀರಿ ನೋಡಿದೆ: ಅದು
ನನ್ನಂತೆಯೇ ಇನ್ನೊಂದು ಜೀವ ಅನ್ನಿಸಿ ನಿರಾಳವಾಯ್ತು
ಮನಸ್ಸು, ಮತ್ತೆ ಮತ್ತೆ ನೋಡಿದೆ, ಈ ನೆರಳು, ಈ ಭೂತ
ಮರೆಯಾಗುವ ಮೊದಲೇ ಕಣ್ತುಂಬ ತುಂಬಿಕೊಳ್ಳುವ ಆಸೆ,
ಅದೂ ಹತ್ತಿರ ಬಂತು, ಹತ್ತಿರವಾದರೂ ಇಟ್ಟುಕೊಂಡಿತ್ತು
ಬೇಕಾದಷ್ಟು ದೂರ, ನನ್ನ ನೋಡಿತು, ನನ್ನ ಹಾಗೆಯೇ

‘ಗೆಳೆಯಾ ಹೆದರಬೇಡ, ಪಕ್ಕದ ಬೀದಿಯವನು ನಾನು
ನಾನಿನ್ನೂ ಉಳಿದುಕೊಂಡಿದ್ದೇನೆ, ನಿನ್ನಂತೆಯೇ ನಾಳೆಯ
ಹೊತ್ತುಕೊಂಡು’-ಮಂಜಿನ ಗುಡ್ಡವೊಂದು ಕರಗಿ, ಮಬ್ಬು
ಗತ್ತಲೆಯೂ ಸರಿದು, ನೋಡಿದೆ-ಈ ಗೆಳೆಯನನ್ನು, ಕೇಳಿದೆ
ಈ ಗೆಳೆಯನ ಮಾತುಗಳನ್ನು, ಹೊಸ ಗಾಳಿ, ಹೊಸ ಬೆಳಕು
ಹೊಸ ಮಾತು, ಹೊಸ ಭರವಸೆ, ಹೊಸ ಸಂಜೆ, ಹೊಸ
ಬೀದಿ, ಹೊಸ ಊರು ಕಂಡಂತೆ ಪುಲಕಗೊಂಡು, ಎರಡು
ಹೆಜ್ಜೆ ಹತ್ತಿರ ಹೋಗಿ ನಕ್ಕೆ, ಅವನೂ ನಕ್ಕ, ಇಡೀ ಬೀದಿಯೇ
ನಕ್ಕಂತೆ, ಇಡೀ ಊರೇ ನಕ್ಕಂತೆ, ಭೂಗೋಳವೇ ಬೆಳಗಿದಂತೆ,
ಮೂಡಣವೊ, ಪಡುವಣವೊ, ಹೊಸ ದಿಕ್ಕಿನಲ್ಲಿ ಹೊಸಸೂರ್ಯ
ಉದಯಿಸಿದಂತೆ ಬೆಳಕಾಯಿತು. ಹೊಸ ಬೆಳಕಲ್ಲಿ ಇಬ್ಬರೂ
ಒಬ್ಬರನೊಬ್ಬರು ದಿಟ್ಟಿಸಿ ಮತ್ತೆ ಮತ್ತೆ ನಕ್ಕೆವು-ನಮ್ಮ ನೋವೆಲ್ಲ
ಕರಗಿ ಹೊಸ ಜೀವ, ಹೊಸ ಜಗವು ಹುಟ್ಟುಪಡೆದಂತೆ

 

‍ಲೇಖಕರು avadhi

April 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Vijayaraghavan

    ಹೊಸ ಬೆಳಕಲ್ಲಿ ಇಬ್ಬರೂ
    ಒಬ್ಬರನೊಬ್ಬರು ದಿಟ್ಟಿಸಿ ಮತ್ತೆ ಮತ್ತೆ ನಕ್ಕೆವು-ನಮ್ಮ ನೋವೆಲ್ಲ
    ಕರಗಿ ಹೊಸ ಜೀವ, ಹೊಸ ಜಗವು ಹುಟ್ಟುಪಡೆದಂತೆ……..

    ಇವತ್ತಿಗೆ ಭರವಸೆಯ ಮಾತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: