ಕನ್ನಡಿ ಮುಂದೆ ನಿಂತು..

‘ರೀ ಟಚ್ – ಎಂಬ ಮುಂತಯಾರಿ’

ವಸುಂಧರಾ ಕದಲೂರು

ಒಬ್ಬಾಕೆ ಮಗುವಿಗೆ ಉಣಿಸುತ್ತಾ ಬೆಳಗಿನ ತಯಾರಿಯ ಧಾವಂತದಲ್ಲಿರುತ್ತಾಳೆ. ನಡುವೆ ಅದೂ ಇದೂ ಕೇಳುತ್ತಾ   ಕಿರಿಕಿರಿ ಮಾತನಾಡುವ ಗಂಡನಿಗೆ ಸಮಾಧಾನದಲಿ ಉತ್ತರಿಸುತ್ತಾ ಸಂಯಮಿಯಾಗಿ ತೋರುತ್ತಾಳೆ. ಆತ ಹೊರ ಬಾಲ್ಕನಿಯಲ್ಲಿರುವ ವೇಯ್ಟ್ ಲಿಫ್ಟಿಂಗಿನ ಸರಳನ್ನು ವ್ಯಾಯಾಮ ಮಾಡುವ ಸಲುವಾಗಿ ಬೆಡ್ರೂಮಿನ ಒಳತಂದಾಗ  ಸಣ್ಣಗೆ ಪ್ರತಿರೋಧ ತೋರುವ ಆಕೆಯ ನಿರಾಕರಣೆ, ಆಕ್ಷೇಪಣೆಗೆ ಆತನ ಬಳಿ ಬೆಲೆಯಿರುವುದಿಲ್ಲ.

ಹೆಚ್ಚು ಮಾತುಗಾರಿಕೆಯಿಲ್ಲದೇ ನಾಕಾರು ದೃಶ್ಯಗಳಲ್ಲಿ ಮುಗಿದು ಹೋಗುವ ಈ ಘಟನೆಗಳು ಹೃದಯಕ್ಕೆ ನಾಟುವುದಿಲ್ಲ. ಆದರೆ ಅನಂತರ ನಡೆಯುವ ಒಂದೇ ಘಟನೆ ಮುಂದಿನ ಇಡೀ ಚಿತ್ರವನ್ನು ಕುರ್ಚಿಯ ಅಂಚಿನಲ್ಲಿ ಕುಳಿತು ನೋಡುವಂತೆ ಮಾಡಿಬಿಡುತ್ತದೆ.

ಕನ್ನಡಿ ಮುಂದೆ ನಿಂತು ತಯಾರಾಗಿ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದವಳನ್ನು ಗೊಗ್ಗರು ದನಿಯಲ್ಲಿ ಸಹಾಯಕ್ಕೆ ಕೂಗಿಕೊಳ್ಳುವ ಆತನ ಕುತ್ತಿಗೆಯ ಮೇಲೆ ಆ ವೇಯ್ಟ್ ಲಿಫ್ಟಿನ ಸರಳು ಅಡ್ಡ ಬಿದ್ದಿರುತ್ತದೆ. ಅಸಹಾಯಕತೆಯಿಂದ ಜೋರಾಗಿ ಚೀರಲೂ ಆಗದೆ, ಎದ್ದೋಡಲೂ ಆಗದ ಆತನ ಬಳಿ ಓಡಿ ಬರುವ ಆಕೆ ಸರಳನ್ನು ಎತ್ತಲು ಸಣ್ಣ ಪ್ರಯತ್ನ ಮಾಡಿಯೇ ಮಾಡುತ್ತಾಳೆ. ಆದರೆ ಮಂಚದ ಕೆಳಗೆ ಸೇರಿಕೊಂಡ ವೇಯ್ಟ್ ಲಿಫ್ಟಿನ್ನು ಅದರ ಭಾರದ ಕಾರಣಕ್ಕೆ ಆಕೆಯಿಂದ ಕಿಂಚಿತ್ತೂ ಜರುಗಿಸಲಾಗುವುದಿಲ್ಲ.

ರೂಮಿನ ಒಳಗೆ ಬರಲು ಯತ್ನಿಸುವ ಮಗುವನ್ನು  ಬಾಗಿಲ ಹೊರಗೇ ತಡೆದು ಅಸಹಾಯಕನಾಗಿ ಸಹಾಯಕ್ಕಾಗಿ ಗೊರಗೊರ ಸದ್ದಿನಲ್ಲೇ ಪ್ರಾಣ ಉಳಿಸುವಂತೆ ಅಂಗಲಾಚುವ
ಗಂಡನ ಸಾವನ್ನು ಖಚಿತ ಪಡಿಸಿಕೊಂಡೇ ಮನೆಯಿಂದ ಹೊರ ಬೀಳುವ ಆಕೆಯ ನಿರ್ಭಾವುಕ ಮುಖವನ್ನು ಇಡೀ ಚಿತ್ರದಲ್ಲಿ ತಂದು ತೋರುತ್ತಾ ಆಕೆಯ ಮನಸ್ಥಿತಿಯ ದೃಢತೆಯನ್ನು ಸ್ಥಾಯಿಯಾಗಿ ಉಳಿಸಿಕೊಳ್ಳುವ ನಿರ್ದೇಶಕ ಆ ನಿಶ್ಯಬ್ದದಲ್ಲಿ ವೀಕ್ಷಕರಿಗೆ ಉಂಟಾಗುವ ಭಾವನೆಗಳ ಅಂದಾಜುಗಳನ್ನೆಲ್ಲಾ ಆರೋಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಾನೆ.

ಆಕೆ ಇಡೀ ದಿನ ಎಲ್ಲಿಯೂ ಅಸಹಜವಾಗಿ ನಡೆದುಕೊಳ್ಳುವುದಿಲ್ಲ. ನಿತ್ಯದಂತೆ ದಿನದೂಡುತ್ತಿರುತ್ತಾಳೆ.   ಗಂಡನ ಕಚೇರಿಯಿಂದ ಬರುವ ಫೋನ್ ಕಾಲ್ ಗಳು ಆಕೆಯ ಮುಂದಿನ ನಡೆಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ. ಕೆಲಸಕ್ಕೆ ಹಾಜರಾಗದ, ಫೋನ್ ಕಾಲ್ ರಿಸೀವ್ ಮಾಡದಿರುವ ಬಗ್ಗೆ ಅಲ್ಲಿ ಆಕ್ಷೇಪಗಳಿರುತ್ತವೆ. ಸಹೋದ್ಯೋಗಿಗಳಿಗೆ ಇದು ತಿಳಿಯಲೆಂದೇ ಅವರ ಮುಂದೆ ಗಂಡನಿಗೆ ಕರೆ ಮಾಡುವುದು, ವಾಯ್ಸ್ ಮೆಸೇಜ್, ಟೆಕ್ಟ್ಸ್ ಮೆಸೇಜ್ ಕಳಿಸುವುದು ಮಾಡುತ್ತಾಳೆ. ತಾಳ್ಮೆಯಿಂದಿರುವ ಆಕೆಯ ಮನಸ್ಸಿನೊಳಗೆ ಎಷ್ಟೊಂದು

ಡೇ ಕೇರ್ ನಲ್ಲಿ ಬಿಟ್ಟು ಬಂದ ಮಗುವನ್ನು ಪುನಃ ಮನೆಗೆ ಕರೆದುಕೊಂಡು ಹೋಗುವಾಗ, ಮಗು ಮನೆಯ ವಿಚಾರವಾಗಿ ಏನಾದರು ಬಡಬಡಾಯಿಸಿತೇ ಎಂದು ಕೇಳಿ, ಪಾಲಕಿಗೆ ಯಾವ ಸಂಶಯವೂ ಹುಟ್ಟಿಲ್ಲವೆಂದು ಖಚಿತ ಪಡಿಸಿಕೊಂಡು ಮನೆಯತ್ತ ಮರಳುತ್ತಾಳೆ.

ಮನೆಗೆ ಬಂದವಳೇ ಬೆಳಿಗ್ಗೆಯೇ ಕಣ್ಣೆದುರು ಜೀವಭಿಕ್ಷೆಗೆ ಅಂಗಲಾಚಿಕೊಂಡು ಸತ್ತ ಗಂಡನನ್ನು ಕಂಡು ಹೇಗೆ ಅದನ್ನು  ಈಗ ತಾನೇ ಕಾಣುತ್ತಿರುವುದೆಂದು ಜಗತ್ತಿಗೆ ಒಪ್ಪಿಸಲು ಒಂದಷ್ಟು ತಾಲೀಮು ನಡೆಸುತ್ತಾಳೆ. ಒಂದೆರಡು ಬಾರಿ ಮುಂತಯಾರಿ ಮಾಡಿದವಳೇ.. ಕಡೆಗೊಮ್ಮೆ ಮಗುವಿನೊಡನೆ ಮನೆಯ ಹೊರಹೋಗಿ ಪುನಃ ಒಳಬಂದು ಹಾಸಿಗೆಯ ಮೇಲೆ ಹಾರಿ, ಚೀರಿ, ಸಹಾಯಕ್ಕಾಗಿ ಜನರನ್ನು ಕೂಗುತ್ತಾ.. ಮಗುವಿನ ಅಳು.. ಒಂದಷ್ಟು ಜನ ಸೇರುವ ಗದ್ದಲದೊಳಗೆ ಚಿತ್ರ ಮುಗಿಯುತ್ತದೆ.

ಈ ಚಿತ್ರ ಹೆಣ್ಣಿನ ಮಾನಸಿಕ- ಕೌಟುಂಬಿಕ ದೌರ್ಜನ್ಯದ ಬಗ್ಗೆ ಹೇಳಲು ಹೊರಟಿದೆಯೇ? ಅಥವಾ ಮನೆ- ಹೊರಗೆ, ಮಗು- ಗಂಡನ ದುಡಿಮೆಯಲ್ಲಿ ಅಸಹಾಯಕ ಹೆಣ್ಣೊಬ್ಬಳು ಅನುಭವಿಸುವ ನಿರಂತರದ ಅನಿಯಮಿತ ಕಿರಿಕಿರಿಗೆ ನೀಡಿದ ಪ್ರತಿಕ್ರಿಯೆಯೇ..?

ದೃಶ್ಯ ಮಾಧ್ಯಮದ ಸಾಧ್ಯತೆಯ ಒಂದು ಉದಾಹರಣೆಯಾಗಿ ಯೂಟೂಬ್ ನಲ್ಲಿ ಸಿಗುವ  ‘ ರೀ ಟಚ್’ ಎನ್ನುವ ಇರಾನಿಯನ್ ಕಿರುಚಿತ್ರ ನೋಡಿ. ಇಂಗ್ಲಿಶ್ ಸಬ್ ಟೈಟಲ್ನೊಂದಿಗೆ ಲಭ್ಯ.

 

‍ಲೇಖಕರು avadhi

April 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: