ಶ್ಯಾಮಲಾ ಮಾಧವ ಆತ್ಮ ಕಥನ ಸಜ್ಜಾಗಿದೆ

ಖ್ಯಾತ ಬರಹಗಾರರಾದ ಶ್ಯಾಮಲಾ  ಮಾಧವ ಅವರ ಆತ್ಮ ಕಥನ ಇನ್ನು ಕೆಲವೇ ದಿನಗಳಲ್ಲಿ ಓದುಗರ ಕೈ ಸೇರಲಿದೆ. 

‘ಗಾನ್ ವಿಥ್ ದಿ ವಿಂಡ್’ನಂತಹ ಮಹತ್ವದ ಕೃತಿಯನ್ನು ಕನ್ನಡಕ್ಕೆ ಕೊಟ್ಟ ಶ್ಯಾಮಲಾ ಅವರ ಕೃತಿಗೆ ಖ್ಯಾತ ಲೇಖಕಿ ವೈದೇಹಿ ಬರೆದ ಬೆನ್ನುಡಿ ಇಲ್ಲಿದೆ-

ಭಾವಶೀಲ ಲೇಖಕಿ ಶ್ಯಾಮಲಾ ಮಾಧವ; ಅವರು ತಮ್ಮ ಬಾಲ್ಯದಿಂದ ತೊಡಗಿ ಇದುವರೆಗಿನ ಬದುಕಿನ ನೆನಪುಗಳನ್ನು ಅಕ್ಷರಕ್ಕಿಳಿಸಿದ ಪುಟ್ಟ ಸ್ಮೃತಿಸಂಪುಟವಿದು.

ಗಿಡಮರ ಹೂವುಹಣ್ಣು ಪ್ರಾಣಿಪಕ್ಷಿ ನದಿ ನದ ಕಡಲು ಗುಡ್ಡೆ – ಒಟ್ಟು ಪ್ರಕೃತಿಯ ಹಾಗೂ ಬಂಧುಬಾಂಧವರ ಬೆಚ್ಚಗಿನ ಮಡಿಲಲ್ಲಿ ಬೆಳೆದ ಜೀವವೊಂದು ತಾನು ಕಳೆದ ನಿನ್ನೆಗಳ ಚೆಲುವನ್ನು ಸುಖದುಃಖವನ್ನು ಇಲ್ಲಿ ಮೆಲುಪಲುಕಿನಲ್ಲಿ ಆರ್ದ್ರವಾಗಿ ಹಾಡಿಕೊಂಡಿದೆ.

ಜೀವನಮೌಲ್ಯ ಆದರ್ಶಗಳೇ ಮುಖ್ಯಪ್ರಾಣದಂತಿದ್ದ ಅಪ್ಪ ಅಮ್ಮ ನಾನಾ ಹಿರಿಕಿರಿಯ ಸಂಬಂಧಿಕರು ಸ್ನೇಹಿತಬಳಗ ಅಷ್ಟೇ ಅಲ್ಲ ತಮ್ಮ ಮನೆ ನಾಯಿ ಬೆಕ್ಕಿನಾದಿಯಾಗಿ ಎಲ್ಲರ ಪ್ರೀತಿ ವಾತ್ಸಲ್ಯದ ಋಣವನ್ನು ನೆನೆಯುತ್ತ ಈ ಋಣವನ್ನು ತಾನು ತೀರಿಸುವ ಬಗೆಯೆಂತು? ಎಂದು ಚಿಂತಿಸುವ ಹಿತಸುಖದ ತಳಮಳದ ಈ ಕೃತಿ ಒಂದು ರೀತಿಯಲ್ಲಿ ಲೇಖಕಿ ಶ್ಯಾಮಲಾ ಅವರೊಬ್ಬರ ಸ್ಮೃತಿಪಯಣವಷ್ಟೇ ಅಲ್ಲ, ಇಂಡಿಯಾದ ಜನಪದ ಹಾದು ಬಂದ ಮಾರ್ದವ ಗತದ ಚರಿತ್ರೆಯೂ. ಲೇಖಕಿ ಹೆಜ್ಜೆಹೆಜ್ಜೆಗೆ ನೆನೆದು ನಿಟ್ಟುಸಿರು ಬಿಡುವ ಬದಲಾದ ಮಂಗಳೂರಿನ ಕತೆಯಂತೂ ಅನುದ್ದೇಶಪೂರ್ವಕವಾಗಿ, ಎಲ್ಲ ನಗರಗಳ ರೂಪ-ವಿರೂಪಗಳ ದಾಖಲೆಯಂತಿದೆ.

ಅಚ್ಚರಿಯೆಂದರೆ – ಈ ಇಡೀ ಕಥನದಲ್ಲಿ ಒಂದೇ ಒಂದು ಕಹಿನುಡಿ, ಕಹಿಮನಸ್ಸುಗಳು ಕಾಣದೇ ಇರುವುದು; ಮಾತ್ರವಲ್ಲ ಸ್ವ-ಇಚ್ಛೆಯಿಂದ ನಡೆದ ಮತಾಂತರಗಳಂತಹ ಘಟನೆಗಳನ್ನೂ ಕುಟುಂಬ ಹಾಗೂ ಅಂದಿನ ಸಮಾಜ ಯಾವುದೇ ಹಾಹಾಕಾರ ಮಾಡದೆ ತಣ್ಣಗೆ ಜೀರ್ಣಿಸಿಕೊಂಡಿರುವುದು; ಬಾಂಧವ್ಯದ ಬೆಸುಗೆ ಒಂದಿಷ್ಟೂ ಧಕ್ಕೆಯಾಗದೆ ಇಂದಿಗೂ ಯಥಾಪ್ರಕಾರ ಮುಂದರಿದುಕೊಂಡಿರುವುದು.

ಇಷ್ಟು ಆರೋಗ್ಯಪೂರ್ಣ ಸುಶುಭ್ರ ಸುಸಂಸ್ಕೃತ ಸುಭಗ ಶೈಕ್ಷಣಿಕವಾಗಿಯೂ ಮುಂದರಿದ ವಾತಾವರಣ ಸಿಗುವುದು ಅತ್ಯಂತ ಅಪರೂಪ ಮತ್ತು ದೊಡ್ಡ ಅದೃಷ್ಟವೂ. ಅಂಥ ಅದೃಷ್ಟಶಾಲಿ ಲೇಖಕಿ ಶ್ಯಾಮಲಾ ಮಾಧವ ತಮ್ಮ ಮನೋಭಿತ್ತಿಯಲ್ಲಿ ಕೆತ್ತಿ ನಿಂತ ಘಟನೆಗಳನ್ನು, ಅನಂತಾನಂತ ವ್ಯಕ್ತಿತ್ವಗಳನ್ನು ಕಂಡೆಕಂಡೆ ಎಂಬಂತೆ ಭಾವನೆಯ ಓಘದಲ್ಲಿ ಅದ್ದಿ ವರ್ಣಿಸುತ್ತಾರೆ. ಹೇಗೆಂದರೆ ಬರಹದೊಡನೆ ಸಾಗುತ್ತ ನಾವೂ ಸರಾಗ ಒಳಗೊಳಗೆ ಇಳಿಯುವಂತಾಗಿ ನಂನಮ್ಮ ನೆನಪುಗಳೂ ಕಲಕಿ ಉಮ್ಮಳಿಸುತ್ತ ಕಣ್ಣೆವೆ ತೋಯುವಂತೆ.

ಸದಾ ತಮ್ಮ ಕೃತಿಗಳ ಮೂಲಕ ಸಾರ್ಥಕ ಅನುಭವ ನೀಡುವ ಆತ್ಮೀಯ ಶ್ಯಾಮಲಾಗೆ ಎಲ್ಲ ಶುಭಾಶಯ, ಅಭಿನಂದನೆ.

ವೈದೇಹಿ, ಮಣಿಪಾಲ

‍ಲೇಖಕರು avadhi

April 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ರಾಜೀವ ನಾಯಕ

    ಅಭಿನಂದನೆಗಳು ಶ್ಯಾಮಲಾ ಮ್ಯಾಡಮ್…ವೈದೇಹಿಯವರು ಹೇಳಿದಂತೆ ಆರೋಗ್ಯಪೂರ್ಣ, ಸುಸಂಸ್ಕೃತ ಮನಸ್ಸು ನಿಮ್ಮದು. ಮುಂಬೈನ ಕಾಂಕ್ರೀಟ್ ಕಾಡಿನಲ್ಲಿಯೂ ಚಿಗುರಿದ ತಳಿರಿನಂಥ ವ್ಯಕ್ತಿತ್ವವನ್ನು ಕಾಪಾಡಿಕೊಂಡ ನಿಮ್ಮ ಆತ್ಮಕಥನಕ್ಕೆ ಸ್ವಾಗತ.

    ಪ್ರತಿಕ್ರಿಯೆ
  2. Jayalaxmi Patil

    ಹೃತ್ಪೂರ್ವಕ ಅಭಿನಂದನೆಗಳು ಶ್ಯಾಮಲಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: