
ಮೂಲ: ಸಾನೆಟ್ ಮಾಂಡಲ್
ಕನ್ನಡಕ್ಕೆ: ಕಮಲಾಕರ ಕಡವೆ
ನನ್ನ ಅವ್ವನ ಹಳ್ಳಿಗೆ ಭೇಟಿ ಕೊಟ್ಟಿರಾದರೆ ನೀವು,
ಕಾಣುವಿರಿ ಅಲ್ಲಿ ಕಾಣಲು ಹೆಚ್ಚೇನೂ ಇಲ್ಲವೆಂದು.
ಇದ್ದಾವೆ ಅಲ್ಲಿ ನನ್ನ ಮುತ್ತಜ್ಜನ ವಿಚಾರಗಳಿಗಿಂತ
ಹಳೆಯ ಆಲದ ಮರವೊಂದು,
ಪುರಾತನ ನಗರಗಳಿಗಿಂತ ಹಳೆಯ ಕೆಲವು ಮನೆಗಳು,
ನನ್ನವ್ವನಿಗಿಂತಲೂ ಹಿಂದಿನ ಒಂದು ದೇವಾಲಯ,
ಹಾಗೂ ಅಲ್ಲಿಯ ರೈತರ ಕನಸುಗಳಿಗಿಂತ ವಿಶಾಲ
ಎಲ್ಲೆಯಿಲ್ಲದ ಭತ್ತದ ಹೊಲಗಳು.

ನನಗೂ ಕಾಣಲು ಹೆಚ್ಚೇನೂ ಇಲ್ಲ ಅಲ್ಲಿ.
ನನ್ನ ತಾಯಿಮನೆಗಿಂತ ಹೆಚ್ಚು ವಯಸ್ಸು
ನನಗಾಗಿದೆ ಎಂಬಂತ ಭಾವ ನನ್ನಲ್ಲಿ.
ಹೀಗಿದ್ದರೂ, ನೋಡುವ ಮನಸ್ಸು ನಿಮ್ಮದಾಗಿದ್ದರೆ
ಮಳೆಗಾಲದ ಒಂದು ದಿನ
ಯಾವುದಾದರೂ ಛಾವಣಿಯ ಹತ್ತಿ
ಎಲೆಗಳ ಬಳಿ ಮಳೆ ಪಿಸುನುಡಿವುದನ್ನು ಕೇಳಿಸಿಕೊಳ್ಳಿ
ಮತ್ತು ಗಮನಿಸಿ ಹೇಗೆ ಹಳ್ಳಿಯೊಂದು
ಎರಡು ಕಾಡುಗಳ ನಡುವೆ ತೊನೆಯುವುದೆಂದು.
ಹೆಚ್ಚೇನೂ ಇಲ್ಲ ಅಲ್ಲಿ –
ಆದರೂ ಈ ಸಾಮಾನ್ಯತೆಯೇ ಇಲ್ಲಿನ ಬಾಳಿಗೆ ಬೆಳಕಾಗಿರುವಂತಿದೆ –
ಗಾಳಿಯಲ್ಲಿ ತೇಲುವ ಫುಕ್ಕದಂತೆ.






0 Comments