ಕಮಲಾಕರ ಕಡವೆ ಅವರ ‘ಅಕ್ಕಪಕ್ಕದ ಪಾತರಗಿತ್ತಿ’‌

ಕನ್ನಡದ ಹೊಸ ತಲೆಮಾರಿನ ಕವಿಗಳು ಹಾಗೂ ಅನುವಾದಕರಾದ ಡಾ. ಕಮಲಾಕರ ಕಡವೆಯವರು ವಿವಿಧ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದ 90 ಕವನಗಳ ಸಂಕಲನವನ್ನು ಕುವೆಂಪು ವಿಶ್ವವಿದ್ಯಾಲಯ ದ ಪ್ರಸಾರಾಂಗವು ಇತ್ತೀಚೆಗೆ (ಜುಲೈ 2021) ಪ್ರಕಟಿಸಿದೆ.  ಈ ಕಾವ್ಯಾನುವಾದಗಳ ಸಂಕಲನದ ಹೆಸರು – “ಅಕ್ಕಪಕ್ಕದ ಪಾತರಗಿತ್ತಿ”.  

ಈ ಗುಚ್ಚಕ್ಕೆ ಮತ್ತೊಬ್ಬ ಅನುವಾದಕ ಎಸ್ ಜಯಶ್ರೀನಿವಾಸ ರಾವ್ ಬರೆದ ಮುನ್ನುಡಿ ಇಲ್ಲಿದೆ.

ಎಸ್ ಜಯಶ್ರೀನಿವಾಸ ರಾವ್

ಕಳೆದ ಸುಮಾರು ಒಂದೂವರೆ ವರ್ಷಗಳ ಅವಧಿಯಲ್ಲಿ ದಿನಕ್ಕೊಂದು ಕವಿತೆಯ ಅನುವಾದದ ಗುರಿಯಿಟ್ಟುಕೊಂಡು ‌ಫೇಸ್‌ಬುಕ್ ನಲ್ಲಿ ‘ಅನುದಿನ ಅನುವಾದ’ ಶೀರ್ಷಿಕೆಯಡಿಯಲ್ಲಿ ಕಮಲಾಕರ್ ಕಡವೆಯವರು ನಮ್ಮ ದೇಶದ ಹಲವಾರು ಭಾಷೆಗಳಿಂದ ಹಾಗೂ ವಿಶ್ವದ ಬೇರೆ ದೇಶಗಳಿಂದ 360ಕ್ಕೂ ಹೆಚ್ಚು ಕವನಗಳನ್ನು ಕನ್ನಡ ಕಾವ್ಯಪ್ರಿಯರ ಮುಂದಿಟ್ಟಿರುವರು. ಕಡವೆಯವರ ‘ಅನುದಿನ ಅನುವಾದ’ದ ಮೂಲಕ ಕನ್ನಡ ಕಾವ್ಯಪ್ರಿಯರಿಗೆ ಹೊಸದಾಗಿ ಪರಿಚಯವಾದ ಕವಿಗಳು ಅನೇಕರು; ಕಾವ್ಯಭಾಷೆಗಳು ಕಾವ್ಯಾನುಭವಗಳು ಹಲವು.  

ಹೀಗೆ ಅನುವಾದವಾದ ಕವನಗಳಿಂದ ಕಮಲಾಕರ ಕಡವೆಯವರು 90 ಕವನಗಳನ್ನು ಆಯ್ದು ಒಂದು ಕಾವ್ಯಗುಛ್ಚವನ್ನು ನಮಗೆ ಕೊಟ್ಟಿದ್ದಾರೆ.  ಭಾರತದ ಹನ್ನೊಂದು ಭಾಷೆಗಳಿಂದ 90 ಕವಿಗಳ ಕವನಗಳು ಇಲ್ಲಿವೆ. ಕವನಗಳ ಅನುವಾದ ಯಾವಾಗಲೂ ಕಷ್ಟದ ಕೆಲಸವೇ. ಮೂಲ ಕವನ ಓದಿದಾಗ ಒಂದಲ್ಲ ಎರಡಲ್ಲ, ಹಲವಾರು ಅರ್ಥಗಳು ಮೂಡಿಬರುತ್ತವೆ. ಹೀಗಿರುವಾಗ ಪದ್ಯದ ಅನುವಾದ ಕೇವಲ ಪದಗಳ ಅನುವಾದವಾಗಬಾರದೆಂದು ಅನುವಾದಕಿ ಆದಷ್ಟು ಪ್ರಯತ್ನ ಪಡ್ತಾಳೆ. ಆದರೂ ಬಹಳಷ್ಟು ಅರ್ಥಗಳು ಪದ್ಯದ ಸಾಲುಗಳ ಮಧ್ಯೆ ಜಾರಿ ಹೋಗುತ್ತವೆ. 

ಕವನದ ಮೂಲ ಭಾಷೆ, ಸಂಸ್ಕೃತಿ, ಕವಿಯ ಅನುಭವಗಳು, ಇವೆಲ್ಲವನ್ನೂ ಹಾಗೆಯೇ ಸಲ್ಲುವ ಭಾಷೆಗೆ ತರಬೇಕೋ, ಅಥವಾ ಮೂಲ ಕವನವನ್ನು ಸಲ್ಲುವ ಭಾಷೆ, ಸಂಸ್ಕೃತಿಯ ಚೌಕಟ್ಟಿನೊಳಗೆ ಅನುವಾದ ಮಾಡಬೇಕೋ – ಇದು ಇನ್ನೊಂದು ಪ್ರಶ್ನೆ. ಇಂತಹ ಕೆಲವು ಸವಾಲುಗಳನ್ನು ಒಬ್ಬ ಅನುವಾದಕ ಎದುರಿಸಬೇಕು. ನೂರಾರು ವರ್ಷಗಳಿಂದ, ಇಂತಹ ಸವಾಲುಗಳ ಮಧ್ಯೆಯೂ, ಅನುವಾದ ಕಾರ್ಯ ನಡೆಯುತ್ತಲೇ ಬಂದಿದೆ.        

ಒಂದೇ ಕವಿಯ 15-20 ಕವನಗಳನ್ನು ಅನುವಾದ ಮಾಡುವುದು ಆರಂಭದಲ್ಲಿ ಕಷ್ಟವೆನಿಸಿದರೂ, 4-5 ಕವನಗಳ ಅನುವಾದದ ನಂತರ ಕವಿಯ ಶೈಲಿ, ಭಾವ ಸೂಕ್ಷ್ಮತೆ, ಪದಗಳ ಪ್ರಯೋಗ, ಸಂವೇದನೆ, ಇವೆಲ್ಲಾ ಅರ್ಥವಾಗುತ್ತಾ ಹೋದ ಹಾಗೆ, ಆ ಕವಿಯ ಕವನಗಳ ಜತೆ ಒಂದು ಹಿತವಾದ ನಂಟು ಬೆಳೆಯುತ್ತದೆ, comfort level ಹೆಚ್ಚುತ್ತದೆ. ಕಮಲಾಕರ ಕಡವೆಯವರು ಇಲ್ಲಿ 90 ಕವಿಗಳ ಕವನಗಳನ್ನು ಅಷ್ಟು ಸೊಗಸಾಗಿ ಅನುವಾದಿಸಿದ್ದಾರೆಂದರೆ ಅಷ್ಟೂ ಕವಿಗಳ ಶೈಲಿಗಳನ್ನು, ಭಾವ ಸೂಕ್ಷ್ಮತೆಗಳನ್ನು ಅವರು ಗ್ರಹಿಸಿದ್ದಾರೆ, ಚಂದವಾಗಿ ಕನ್ನಡಕ್ಕೆ ತಂದಿದ್ದಾರೆ. ಇದೊಂದು ದೊಡ್ಡ ಸವಾಲೇ ಸರಿ.

ಈ ಸಂಕಲನದಲ್ಲಿರುವ ಕವನಗಳೆಲ್ಲವೂ ಭಾರತೀಯ ಕವಿಗಳದ್ದು. ಕಮಲಾಕರ ಕಡವೆಯವರಿಗೆ ತಿಳಿದಿರುವ ಭಾರತೀಯ ಭಾಷೆಗಳಾದ ಮರಾಠಿ ಮತ್ತು ಹಿಂದಿಯಿಂದ ನೇರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಗ್ಲಿಷಿನಲ್ಲಿ ಕವಿತೆ ಬರೆಯುವ ಭಾರತೀಯ ಕವಿಗಳ ಕವನಗಳನ್ನು ಕೂಡ ಅನುವಾದಿಸಿದ್ದಾರೆ. ಈ ಭಾಷೆಗಳಲ್ಲದೇ ಅವರು ಮೂಲ ಗುಜರಾತಿ, ಉರ್ದು, ತಮಿಳು, ಮಲಯಾಳಂ, ಪಂಜಾಬಿ, ಬೆಂಗಾಲಿ, ಅಸಮಿಯಾ, ಮಣಿಪುರಿ ಭಾಷೆಗಳಲ್ಲಿ ಬರೆದ ಕವನಗಳನ್ನು ಅವುಗಳ ಹಿಂದಿ ಅಥವಾ ಇಂಗ್ಲಿಷ್ ಅನುವಾದಗಳಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. 

ಇನ್ನೊಂದು ಮುಖ್ಯವಾದ ವಿಷಯವೆಂದರೆ ಮೂಲ ಇಂಗ್ಲಿಷ್ ಭಾಷೆಯಲ್ಲಿ ಬರೆದ 28 ಕವನಗಳ ಅನುವಾದಗಳು ಇಲ್ಲಿವೆ. ಈ ಕವಿಗಳು ಭಾರತದ ಬೇರೆ ಬೇರೆ ರಾಜ್ಯಗಳಿಗೆ ಸೇರಿದವರು, ಬೇರೆ ಬೇರೆ ಭಾಷಾ ಹಿನ್ನೆಲೆಯುಳ್ಳವರು. ಒಡಿಯಾ, ತೆಲುಗು, ಕಶ್ಮೀರಿ ಮೂಲದ ಕವಿಗಳಿದ್ದಾರೆ.  ಇಷ್ಟೊಂದು ಭಾಷೆಗಳು, ಹಿನ್ನೆಲೆಗಳು, ಸಂಸ್ಕೃತಿಗಳು, ಸಂವೇದನೆಗಳು, ಕಾವ್ಯರೂಪಗಳು, ಒಂದು ಕವನ ಸಂಕಲನದೊಳಗೆ ಸೇರುವುದೆಂದರೆ ಅದೊಂದು ಅಪರೂಪದ ಸಂಗತಿ.  

ಈ ಕವನಗಳಲ್ಲಿ ಭಾವನೆಗಳ ಭಂಡಾರವೇ ಇದೆ – ಕೋಪ, ಭಯ, ಶೋಕ, ದುಃಖ, ಪ್ರೀತಿ, ಪ್ರಕೃತಿ, ಪ್ರೇಮ, ವಿಡಂಬನೆ, ನೋವು, ಚಿಂತೆ.  ದಲಿತರ, ಹಿಂದುಳಿದವರ ಹೋರಾಟ, ಮಹಿಳೆಯರ ನೋವು, ಶಹರು ಜೀವನದ ಒಂಟಿತನ, ತಾಯಿಯ ಪ್ರೀತಿ, ಮಣ್ಣಿನ ಮೋಹ, ಅಧಿಕಾರ ದಾಹ – ಇವೆಲ್ಲದರ ಮಧ್ಯೆ ಪ್ರಕೃತಿ ಸೌಂದರ್ಯ, ನಂಬಿಕೆ, ಭರವಸೆ, ನಿರೀಕ್ಷೆ.  ಹೀಗೆ ಹಲವಾರು ವಿಷಯಗಳು. ಯಾವುದನ್ನೂ ಬಿಡದೇ, ಎಲ್ಲವನ್ನೂ ಸೇರಿಸಿಕೊಂಡು ಮಾನವ ಜೀವನದ ಬಹು ಆಯಾಮಗಳನ್ನು ದೇಶದ ಹಲವು ದಿಕ್ಕುಗಳಿಂದ ತರಿಸಿ ಸೂಕ್ಷ್ಮವಾಗಿ ಅನುವಾದಿಸಿದ್ದಾರೆ ಕಮಲಾಕರ್ ಕಡವೆಯವರು.                    

ಕರ್ನಾಟಕದ ಸುತ್ತು ವಲಯದ ತಮಿಳು, ಮಲಯಾಳಂ, ತೆಲುಗು, ಮರಾಠಿ ಭಾಷೆಗಳು, ಹಾಗೂ ಹಿಂದಿ, ಬಂಗಾಲಿ, ಮತ್ತು ಇಂಗ್ಲಿಷ್ ನಿಂದ ಬಹಳಷ್ಟು ಸಾಹಿತ್ಯ ಕನ್ನಡಕ್ಕೆ ಅನುವಾದವಾಗಿ ಬಂದಿದೆ. ಕನ್ನಡದಲ್ಲಿ ಕಾದಂಬರಿ ಎಂಬ ಹೊಸ ಪ್ರಕಾರ ನೆಲೆಗೊಂಡಿದ್ದೇ 19ನೇಯ ಶತಮಾನದ ಕೊನೆಯಲ್ಲಿ ಹಾಗೂ 20ನೇಯ ಶತಮಾನದ ಆದಿಯಲ್ಲಿ ಬಂಗಾಲಿಯಿಂದ ಹಾಗೂ ಮರಾಠಿಯಿಂದ ಬಿ. ವಂಕಟಾಚಾರ್ಯರು ಮತ್ತು ಗಳಗನಾಥರು ಮಾಡಿದ ಅನುವಾದಗಳಿಂದ. ಈ ಸಂಕಲನದಲ್ಲಿ ನಮಗೆ ಗುಜರಾತಿ, ಪಂಜಾಬಿ, ಅಸಮಿಯಾ, ಹಾಗೂ ಮಣಿಪುರಿ ಭಾಷೆಗಳಿಂದ ಕೆಲವು ಕವನಗಳನ್ನು ಕಾಣುತ್ತೆವೆ.

ಗುಜರಾತಿ ಹಾಗೂ ಪಂಜಾಬಿ ಭಾರತದ ಮುಖ್ಯಧಾರೆಯ ಭಾಷೆಗಳೆಂದೇ ಹೇಳಬೇಕು. ಅಸಮಿಯಾ, ಮಣಿಪುರಿ ಹಾಗೂ ಇನ್ನಿತರ ಭಾರತದ ಈಶಾನ್ಯ (North-East) ರಾಜ್ಯಗಳ ಕತೆ, ಕವನ, ಕಾದಂಬರಿಗಳ ಬಗ್ಗೆ ಕನ್ನಡದ ಸಾಹಿತ್ಯಪ್ರೆಮಿಗಳಿಗೆ ಹೆಚ್ಚು ಪರಿಚಯವಿಲ್ಲ. ಈಗಲೂ ಆ ವಲಯದ ಸಾಹಿತ್ಯ ದೇಶದ ಅಂಚಿನಲ್ಲಿಯೆ ಉಳಿದಿದೆ, ನಮಗೆಲ್ಲರಿಗೂ ದೂರವಾಗಿಯೇ ಇದೆ. ಕಮಲಾಕರ ಕಡವೆಯವರು ಈ ವಲಯದ ಸಾಹಿತ್ಯವನ್ನು ಕನ್ನಡದ ಜನಕ್ಕೆ ಪರಿಚಯ ಮಾಡುವ ಒಂದು ಸಣ್ಣ ಮಟ್ಟಿನ ಪ್ರಯತ್ನ ಮಾಡಿದ್ದಾರೆ ಇಲ್ಲಿ. ಅಸಾಮ್ ಮತ್ತು ಮಣಿಪುರದ ಐದು ಕವಿಗಳ ಒಂದೊಂದು ಕವನವನ್ನು ಅನುವಾದಿಸಿ ಮುಂದಿಟ್ಟಿದ್ದಾರೆ. ಇದು ಸ್ವಾಗತಾರ್ಹ, ಶ್ಲಾಘನೀಯ.  

ಅದೆಷ್ಟೋ ವರ್ಷಗಳಿಂದ ಲೋಕದಾದ್ಯಂತ ಎಷ್ಟೋ ಕವಿಗಳು, ಕಾವ್ಯಾಸಕ್ತರು, ಓದುಗರು, ಕೇಳುಗರು ಕಾವ್ಯದ ಬಗ್ಗೆ, ಕವನಗಳ ಬಗ್ಗೆ, ಕವನ ಹುಟ್ಟುವ ಬಗ್ಗೆ ಬಗೆ ಬಗೆಯಾಗಿ ಬರೆದಿರುವರು. ಓದಿದಾಗ ಅವೆಲ್ಲವೂ ನಿಜವೆನಿಸುತ್ತದೆ. ಕವನ ಬರೆಯುವವರು ತಮ್ಮ ಕವನಗಳಲ್ಲಿ ಏನಾದರೊಂದು ವಿಷಯವನ್ನು ಅಭಿವ್ಯಕ್ತಿಸಲು ಪ್ರಯತ್ನಿಸುತ್ತಾರೆ. ಕಮಲಾಕರ ಕಡವೆಯವರು ಸ್ವತಃ ಕವಿಗಳು, ಕನ್ನಡದ ಹೊಸ ತಲೆಮಾರಿನ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರ ಕವನಗಳಲ್ಲಿ ಅವರ ಸ್ವಂತ ಅಭಿವ್ಯಕ್ತಿಗಳನ್ನು ಬಿಂಬಿಸಿರುತ್ತಾರಾದರೆ ಇಲ್ಲಿ ಅವರು ಬೇರೆ ಬೇರೆ ಪ್ರಾಂತಕ್ಕೆ, ಭಾಷೆಗೆ ಸೇರಿದ 90 ಕವಿಗಳ ಅಭಿವ್ಯಕ್ತಿಗಳನ್ನು ಒಂದೇ ಭಾಷೆಗೆ ತಂದಿದ್ದಾರೆಂದರೆ ಅದು ಸಾಮಾನ್ಯ ಕಾರ್ಯವಲ್ಲ.  

ಇಲ್ಲಿರುವ ಬಹಳಷ್ಟು ಅನುವಾದಗಳನ್ನು ಅವು ಹುಟ್ಟಿದ ದಿನವೇ ನೋಡಿರುವೆ, ನನಗೆ ತಿಳಿದ ಮಟ್ಟಕ್ಕೆ ಪ್ರತಿಕ್ರಿಯಿಸಿರುವೆ. ಕಡವೆಯವರ ‘ಅನುದಿನ ಅನುವಾದ’ದಿಂದ ಸ್ಫೂರ್ತಿ ಪಡೆದು ಕನ್ನಡಕ್ಕೆ ಕಾವ್ಯಾನುವಾದ ಮಾಡಲು ತೊಡಗಿದವರಲ್ಲಿ ನಾನು ಒಬ್ಬನು. ಈ ಕವನ ಸಂಕಲನ ಇನ್ನಷ್ಟು ಕಾವ್ಯಪ್ರಿಯರಿಗೆ ಸ್ಫೂರ್ತಿ ನೀಡಲಿ, ಅವರ ಗಮನ ಕಾವ್ಯಾನುವಾದದ ಕಡೆಗೆ ಹರಿಯಲಿ ಎಂದು ಹಾರೈಸುತ್ತೇನೆ.    

‍ಲೇಖಕರು Admin

August 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: