
ಹಂಝ ಮಲಾರ್
ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ… ಇದು ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಗಡಿ ಗ್ರಾಮವಾದ ತ್ರಿಕಾರಿಪುರದ ಉದಿನೂರು ಎಂಬಲ್ಲಿನ ಮುಹಮ್ಮದ್ ಕುಂಞಿ ಅವರು ರಚಿಸಿದ ಕನ್ನಡ ಕೃತಿ. 1963ರಲ್ಲಿ ಹುಟ್ಟಿದ ಇವರ ಮಾತೃಭಾಷೆ ಮಲಯಾಳಂ. ಆದರೆ ಕಲಿತದ್ದು, ಕನ್ನಡ ಮಾಧ್ಯಮದಲ್ಲಿ. ಅದೂ ಬೆಂಗಳೂರಿನಲ್ಲಿ. ಅದಕ್ಕೆ ಕಾರಣ ಅವರ ತಂದೆ ಶಾಹುಲ್ ಹಮೀದ್ ಹಾಜಿ ಬೆಂಗಳೂರಿನಲ್ಲಿ ವ್ಯಾಪಾರ- ವಹಿವಾಟು ನೋಡಿಕೊಂಡು ಬೆಂಗಳೂರಿನಲ್ಲೇ ನೆಲೆಸಿದ್ದುದು.
ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಬಳಿಕ ಸೌದಿ ಅರೇಬಿಯಾದ ರಿಯಾದ್‌ನ ಖಾಸಗಿ ಕಂಪೆನಿಯೊಂದರಲ್ಲಿ 23 ವರ್ಷ ಉದ್ಯೋಗ ಮಾಡಿದ್ದರು. ಸೌದಿ ಅರೇಬಿಯಾದ ಸಚಿವಾಲಯದ ಅಧೀನದ ಜಾಲತಾಣದಲ್ಲಿ ಭಾರತೀಯ ಭಾಷೆಗಳ ಅನುವಾದಕರಾಗಿಯೂ ಕೆಲಸ ಮಾಡಿದ್ದರು. ಸಾಹಿತ್ಯದಲ್ಲಿ ಅತೀವ ಆಸಕ್ತಿ ವಹಿಸಿದ್ದ ಇವರು ಮಲಯಾಳಂ ಮತ್ತು ಇಂಗ್ಲಿಷ್‌ಗೆ ಕೃತಿಗಳನ್ನು ಅನುವಾದಿಸಿದ್ದರು. ದೇಶ-ವಿದೇಶದ ಹಲವು ಪತ್ರಿಕೆಗಳಲ್ಲಿಯೂ ಇವರ ಲೇಖನ ಪ್ರಕಟವಾಗಿದೆ. ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. 60ರ ಹರೆಯದ ಉದಿನೂರು ಮುಹಮ್ಮದ್ ಕುಂಞಿ “ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ” ಎಂಬ ಕೃತಿಯನ್ನು ತುಂಬಾ ಅಸ್ಥೆಯಿಂದ ರಚಿಸಿ ನಾಡಿಗೆ ಅರ್ಪಿಸಿದ್ದಾರೆ. 2023ರ ಎಪ್ರಿಲ್ 30ರಂದು ಕೊಚ್ಚಿನ್‌ನಲ್ಲಿ ನಡೆದ ಕನ್ನಡ ಸಂಸ್ಕತಿ ಹಬ್ಬದಲ್ಲಿ ಈ ಕೃತಿ ಬಿಡುಗಡೆಗೊಂಡಿತ್ತು. ಅದಕ್ಕೆ ನನ್ನ ಸಹಿತ ಹಲವು ಮಂದಿ ಸಾಕ್ಷಿಯಾಗಿದ್ದೆವು.
ಸಾಹಿತ್ಯ – ಸಾಂಸ್ಕೃತಿಕ ಸಂಘಟಕ ಎ.ಆರ್. ಸುಬ್ಬಯ್ಯಕಟ್ಟೆ (ಅಬ್ದುಲ್ ರಹ್ಮಾನ್ ಸುಬ್ಬಯ್ಯಕಟ್ಟೆ) ಅವರು ತನ್ನ ಕೈರಳಿ ಪ್ರಕಾಶನದ ಮೂಲಕ ಈ ಕೃತಿಯನ್ನು ಪ್ರಕಟಿಸಿದ್ದರು. ಈ ಕೃತಿಗೆ ಡಾ. ಮನು ಬಳಿಗಾರ್ ಮುನ್ನುಡಿ ಮತ್ತು ಡಾ. ಬರಗೂರು ರಾಮಚಂದ್ರಪ್ಪ ಬೆನ್ನುಡಿ ಬರೆದು ಪ್ರೋತ್ಸಾಹಿಸಿದ್ದಾರೆ. ಹಿರಿಯ ಕವಿ ದಿವಂಗತ ನಿಸಾರ್ ಅಹ್ಮದ್ ಅವರ “ಕನ್ನಡವೆಂದರೆ ಬರಿ ನುಡಿಯಲ್ಲ” ಕವನವನ್ನು ಆರಂಭದ ಪುಟದಲ್ಲಿ ಬಳಸಿಕೊಳ್ಳಲಾಗಿದೆ. “ಕನ್ನಡ ಸಾಹಿತ್ಯದ ಚರಿತ್ರೆ” ಎಂಬ ಕಿರುನೋಟವಿದೆ. ಮುಸ್ಲಿಂ ತತ್ವಪದಕಾರರು, ಪುರಾತನ ಮುಸ್ಲಿಂ ತತ್ವಪದಕಾರರು, 20ನೆ ಶತಮಾನದ ಮುಸ್ಲಿಂ ತತ್ವಪದಕಾರರು ಅಧ್ಯಾಯದಲ್ಲಿ ಹಲವು ತತ್ವಪದಕಾರರನ್ನು ಪರಿಚಯಿಸಲಾಗಿದೆ. “ಆಧುನಿಕ ಕನ್ನಡ ಸಾಹಿತ್ಯಕ್ಕೆ ಮುಸ್ಲಿಂ ಸಮುದಾಯದ ಕೊಡುಗೆ” ಎಂಬ ಪೀಠಿಕೆಯೂ ಇದೆ.

ಅಧ್ಯಾಯ 4ರಲ್ಲಿ 1901ರಲ್ಲಿ ಜನ್ಮತಾಳಿದ ಪಟೇಲ ಧೂಳಾ ಸಾಹೇಬ ಅವರಿಂದ ಹಿಡಿದು 1982ರಲ್ಲಿ ಹುಟ್ಟಿದ ಇಸ್ಮತ್ ಪಜೀರ್‌ವರೆಗಿನ 47 ಲೇಖಕರು ಬರೆದ ಕೃತಿಗಳ ಸಹಿತ ವ್ಯಕ್ತಿ ಪರಿಚಯವಿದೆ. ಅಧ್ಯಾಯ 5ರಲ್ಲಿ 1936ರಲ್ಲಿ ಜನ್ಮ ತಾಳಿದ್ದ ಸಾರಾ ಅಬೂಬಕ್ಕರ್ ಅವರಿಂದ ಹಿಡಿದು 1976ರಲ್ಲಿ ಜನ್ಮತಾಳಿದ ಮುಮ್ತಾಝ್ ಬೇಗಂ ಗಂಗಾವತಿವರೆಗಿನ 10 ಲೇಖಕಿಯರ ಪರಿಚಯವೂ ಇದೆ. ಕನ್ನಡ ಸಾಹಿತ್ಯಕ್ಕೆ ಮುಸ್ಲಿಂ ಸಾಹಿತಿಗಳ ಕೊಡುಗೆ ಅಪಾರ. ಅದರಲ್ಲೂ ಕರಾವಳಿಯ ಬ್ಯಾರಿ ಮುಸ್ಲಿಂ ಲೇಖಕ-ಲೇಖಕಿಯರ ಕೊಡುಗೆಯಂತೂ ಗಮನಾರ್ಹ. ಸುಮಾರು 15 ವರ್ಷದ ಹಿಂದೆಯೇ ಮಂಗಳೂರಿನಲ್ಲಿ ಈ ಬಗ್ಗೆ ಗೋಷ್ಠಿಯನ್ನು ಕೂಡ ಆಯೋಜಿಸಲಾಗಿತ್ತು.
ಒಂದೆರಡು ವರ್ಷದ ಹಿಂದೆ ನನಗೆ ಕರೆ ಮಾಡಿದ್ದ ಉದಿನೂರು ಮುಹಮ್ಮದ್ ಕುಂಞಿ ಕೃತಿಯ ಬಗ್ಗೆ ವಿವರಿಸಿ ನನ್ನ ಕೃತಿಗಳ ಪಟ್ಟಿ ಮತ್ತು ವ್ಯಕ್ತಿ ಪರಿಚಯ ಕೇಳಿದ್ದರು. ನಾನು ನನ್ನ ವ್ಯಕ್ತಿ ಪರಿಚಯದೊಂದಿಗೆ ಇತರ ಹಲವು ಸಾಹಿತಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆ ನೀಡಿದ್ದೆ. ಆ ಬಳಿಕ ನಾನು ಆ ವಿಷಯವನ್ನೇ ಮರೆತಿದ್ದೆ. ಒಂದೆರಡು ತಿಂಗಳ ಹಿಂದೆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಲೇಖಕರು ನನ್ನನ್ನು ಸೇರಿಸಿಕೊಂಡಾಗಲೇ ಪುಸ್ತಕ ಮುದ್ರಣದ ಹಂತದಲ್ಲಿದೆ ಎಂಬುದನ್ನು ತಿಳಿದುಕೊಂಡೆ. ಅಂತೂ 2023ರ ಎಪ್ರಿಲ್ 30ರಂದು ಕೊಚ್ಚಿನ್‌ನಲ್ಲಿ ಬಿಡುಗಡೆಗೊಂಡ ಈ ಕೃತಿಯ ಪ್ರತಿಯನ್ನು ಅಲ್ಲೇ ನನಗೆ ಗೌರವಯುತವಾಗಿ ನೀಡಿದ್ದರೂ ಕೂಡ ಮೊನ್ನೆ ಮಂಗಳೂರಿನಲ್ಲಿ ನಾನು ಕೆಲಸ ಮಾಡುವ ಕಚೇರಿಗೆ ಆಗಮಿಸಿ ಮತ್ತೊಂದು ಕೃತಿ ನೀಡಿ ನೆನಪಿಗಾಗಿ ಫೊಟೊ ಕ್ಲಿಕ್ಕಿಸಿಕೊಂಡಿದ್ದರು.
ಮೇ 1ರಂದೇ ಕೃತಿಯನ್ನು ಓದಿ ಮುಗಿಸಿದ್ದೆ. ಆದರೆ ಕೆಲಸದ ಒತ್ತಡದಿಂದ ಕೃತಿಯ ಬಗ್ಗೆ ನಾಲ್ಕು ಮಾತು ಬರೆಯಲು ಸಾಧ್ಯವಾಗಿರಲಿಲ್ಲ. ಆ ಭಾಗ್ಯ ಇಂದು ಕೂಡಿ ಬಂದಿದೆ. ಅಂದಹಾಗೆ ಈ ಕೃತಿಯಲ್ಲಿ ಅನೇಕ ಪ್ರಮುಖ ಸಾಹಿತಿಗಳ ಬಗ್ಗೆ ಉಲ್ಲೇಖವೇ ಇಲ್ಲ. ಅದಕ್ಕೆ ಈ ಕೃತಿಯ ಲೇಖಕರನ್ನು ದೂರಿ ಪ್ರಯೋಜನವಿಲ್ಲ. ನಮ್ಮಲ್ಲಿ ಕೆಲವು ಲೇಖಕ-ಲೇಖಕಿಯರಿಗೆ ಒಂದು ರೀತಿಯ ಉಡಾಫೆ ಇದೆ. ಯಾರಾದರು, ಏನಾದರು ಕೇಳಿದರೆ ಮಾಹಿತಿ ನೀಡಲು ಹಿಂದೇಟು ಹಾಕುವುದು, ವಿಳಂಬಿಸುವುದು, ನಿರ್ಲಕ್ಷಿಸುವುದು, ಇನ್ನೂ ನಾಲ್ಕು ಸಲ ಕೇಳಲಿ ಎಂದು ಕಾಯಿಸುವುದು. ಕೆಲವರು ಅರ್ಧರ್ಧ ಮಾಹಿತಿ ನೀಡುವುದು, ಪೂರಕ ಮಾಹಿತಿ ಕೇಳಿದರೆ ಕೊಡದೆ ಮತ್ತೆ ಮತ್ತೆ ಸತಾಯಿಸುವುದು, ಫೊಟೊ ಕೊಡಲು ವಿಳಂಬಿಸುವುದು ಕೂಡ ಅಭ್ಯಾಸವಾಗಿದೆ.
ಕೊನೆಗೆ ಕೃತಿಯ ಲೇಖಕರು ಹತಾಶೆಯಿಂದ ಸಿಕ್ಕಿದಷ್ಟು ಮಾಹಿತಿ ಪ್ರಕಟಿಸಿ ಬಿಡುತ್ತಾರೆ. ಇಲ್ಲೂ ಅಷ್ಟೆ, ಅನೇಕ ಪ್ರಮುಖ ಲೇಖಕರು ತಮ್ಮ ಉಡಾಫೆಯ ವರ್ತನೆಯಿಂದಾಗಿ ಈ ಕೃತಿಯಲ್ಲಿ ಅವಕಾಶ ಕಳಕೊಂಡಿರುವ ಸಾಧ್ಯತೆ ಇದೆ. ಇದೀಗ ನನ್ನನ್ನು ಕೈ ಬಿಡಲಾಗಿದೆ ಎಂದು ಕೆಲವರು ನನ್ನಲ್ಲಿ ಅಲವತ್ತುಕೊಂಡಿದ್ದಾರೆ. ಕೆಲವೊಂದು ತಪ್ಪು-ಒಪ್ಪುಗಳ ಮಧ್ಯೆಯೂ ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದೆ. ಅಧ್ಯಯನ ವಿದ್ಯಾರ್ಥಿಗಳಿಗೆ ಇದೊಂದು ಆಕರ ಕೃತಿಯೂ ಆಗಿದೆ. ಕೇರಳದ ಮಣ್ಣಲ್ಲಿ ಹುಟ್ಟಿ ಬೆಳೆದು, ಕರ್ನಾಟಕದ ಮಣ್ಣಲ್ಲಿ ಕಲಿತು, ವಿದೇಶವನ್ನು ಕರ್ಮಭೂಮಿಯನ್ನಾಗಿಸಿ, ಇದೀಗ ಊರಲ್ಲೇ ನೆಲೆಸಿರುವ ಉದಿನೂರು ಮುಹಮ್ಮದ್ ಕುಂಞಿ ಅವರ ಪ್ರಯತ್ನವನ್ನು ಅಭಿನಂದಿಸಲೇಬೇಕಿದೆ. ಕನ್ನಡದ ಮಣ್ಣಲ್ಲಿ ಈ ಕೃತಿಯ ಮರು ಬಿಡುಗಡೆ, ಚರ್ಚೆಗಳಾದರೆ ಲೇಖಕರು ತನ್ನ ಪ್ರಯತ್ನಕ್ಕೆ ಸಿಕ್ಕಿದ ಮನ್ನಣೆ ಎಂದು ಭಾವಿಸಿಯಾರು, ಕುಶಿಪಟ್ಟಾರು.






0 Comments