ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ ಕನ್ನಡ ಜಾರಿಯುಕ್ತರು ಬೇಕು…

ಕೆ ಆರ್ ಸೌಮ್ಯಾ

ಕನ್ನಡ ತಾಯಿಯ ಅದೃಷ್ಟಕ್ಕೆ ಎಣೆಯೇ ಇಲ್ಲ! ಬೊಮ್ಮಾಯಿ ಸರ್ಕಾರ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ೨೦೨೨” ವಿಧಾನಸಭೆಯಲ್ಲಿ ಮಂಡಿಸಿ ಕನ್ನಡ ತಾಯಿಯ ಋಣವನ್ನು ತೀರಿಸಿದ ಸಂತೃಪ್ತಿಯಲ್ಲಿದೆ. ಆದರೆ ಅಸಂತೃಪ್ತಿ ಕಸಾಪ ಅಧ್ಯಕ್ಷರಿಗಿದೆ. ಕನ್ನಡಿಗರಿಗಂತೂ ಇದರಲ್ಲಿ ತೃಪ್ತಿಯೂ ಇಲ್ಲ, ಅಸಂತೃಪ್ತಿಯೂ ಇಲ್ಲ. ಏಕೆಂದರೆ ಇಂತಹ ವಿಧೇಯಕಗಳನ್ನು ಉದ್ದಕ್ಕೂ ಕನ್ನಡಿಗರು ನೋಡುತ್ತಾ ಬಂದಿದ್ದಾರೆ.

ಕರ್ನಾಟಕ ಏಕೀಕರಣಗೊಂಡ ಮೊದಲಿನಲ್ಲಿಯೇ; ವಿಶಾಲ ಮೈಸೂರು ರಾಜ್ಯವಾಗಿದ್ದಾಗಲೇ ೧೯೬೩ರಲ್ಲಿಯೇ ಕನ್ನಡವನ್ನು ರಾಜ್ಯಭಾಷೆ ಕರ್ನಾಟಕ ರಾಜಭಾಷಾ ಅಧಿನಿಯಮ ಕಾಯ್ದೆಯನ್ನು ತರಲಾಯ್ತು. ಅಲ್ಲಿಂದ ಇಲ್ಲಿನವರೆಗೂ ಎಲ್ಲ ಸರ್ಕಾರಗಳು ತಾವು ಕನ್ನಡಪರ ಎಂದು ತೋರಿಗೊಳ್ಳಲು ಹಲವು ಕಾಯ್ದೆಗಳನ್ನು ನಮಗೆ ತೋರಿಸುತ್ತಿದ್ದಾರೆ. ಪ್ರಸ್ತುತದ ಈ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಅದರ ಮುಂದಿನ ಭಾಗ ಎನ್ನುವುದು ನನ್ನ ಅನಿಸಿಕೆ. ರಾಜಕೀಯ ಇಚ್ಚಾಶಕ್ತಿ ಇಲ್ಲದೆ ನಾವೂ ಮಾಡಿದ್ದೇವೆ; ಮಾಡುತ್ತಿದ್ದೇವೆ ಎಂಬ ತೋರಿಕೆಯ ಮತ್ತೊಂದು ವಿಧೇಯಕವಿದು.

ಆದರೆ ಕಸಾಪ ಅಧ್ಯಕ್ಷರ ಅಸಂತೃಪ್ತಿ ಮತ್ತೊಂದು ಬಗೆಯದು. ಕಾಡಿಬೇಡಿ ರಾಜ್ಯ ಸಚಿವ ಸ್ಥಾನಮಾನ ಪಡೆದ ಕಸಾಪ ಅಧ್ಯಕ್ಷರಿಗೆ ಈ ವಿಧೇಯಕದಲ್ಲಿ ಯಾವುದೇ ಸ್ಥಾನಮಾನ ಇಲ್ಲ. ಹಾಗಾಗಿಯೇ ಅವರು ವಯಸ್ಸಾದವರನ್ನೆಲ್ಲ ಗುಡ್ಡೆಹಾಕಿ ನೆನ್ನೆ ಒಂದು ಸಭೆ ಮಾಡಿದ್ದಾರೆ. ಅವರೆಲ್ಲರೂ ಹೇಳಿರುವುದು ಒಂದೇ: ಕಸಾಪ ಅಧ್ಯಕ್ಷರನ್ನು ಇದರಲ್ಲಿ ಸೇರಿಸಿಕೊಳ್ಳಿ. ಪಾಪ! ನಮ್ಮ ಪ್ರೀತಿಯ ಬೈರಪ್ಪನವರು ಬಹು ಹೆಚ್ಚು ಮಾತನಾಡಿದ್ದಾರೆ.
ಸಮಗ್ರ ಎನ್ನುತ್ತಲೇ ಕನ್ನಡವನ್ನು ಸಂಕ್ಷಿಪ್ತಗೊಳಿಸಿರುವ ವಿಧೇಯಕದ ಕುರಿತಾಗಿ ನನ್ನ ಕೆಲವು ಟಿಪ್ಪಣ ಗಳು :

೧. ವಿಧೇಯಕದ ೪ನೇ ಪ್ರಕರಣದ ೪ ಅಂಶಗಳ ನಂತರ ಉಲ್ಲೇಖಿಸಿರುವ ಪರಂತುವಿನಲ್ಲಿ ಎ ಅನ್ನು ಹೊರತುಪಡಿಸಿ ಬಿ ಮತ್ತು ಸಿ ಭಾಗಗಳು ಆಂಗ್ಲಭಾಷೆಯ ಬಳಕೆ ಮತ್ತು ಉತ್ತೇಜನಕ್ಕೆ ಪೂರಕವಾಗಿವೆ. ಇದು ಅಡಿಗೆಯವನನ್ನು ನೇಮಿಸಿ, ಅಡುಗೆಯನ್ನು ತಾನೇ ಮಾಡಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ಭಾಷಾ ಅಲ್ಪಸಂಖ್ಯಾತರು, ಇಲಾಖಾ ಮುಖ್ಯಸ್ಥರು ಕಡ್ಡಾಯವಾಗಿ ಕನ್ನಡವನ್ನು ಕಲಿತು ಕನ್ನಡದ ಅಧಿಸೂಚನೆಗಳನ್ನು ಓದಿ ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಅಂತೆಯೇ ಸಿಯಲ್ಲಿನ ಅಂಶ ವೈಜ್ಞಾನಿಕ ಮತ್ತು ತಾಂತ್ರಿಕ ಅಂಶಗಳನ್ನು ಕನ್ನಡದಲ್ಲಿಯೇ ಜಾರಿಗೆ ತರುವ ಪರಿಪಾಠ ಆರಂಭವಾಗಬೇಕಾಗಿದೆ.

೨. ಉದ್ದೇಶಿತ ಮಸೂದೆಯ ೫ನೇ ಪ್ರಕರಣದಲ್ಲಿ ಪ್ರಸ್ತಾಪಿಸಿರುವ ರಾಜಭಾಷಾ ಆಯೋಗದಲ್ಲಿ ನಿವೃತ್ತರ ನೇಮಕಾತಿಯಿದ್ದು, ಸರ್ಕಾರಿ ಸೇವೆಯಿಂದ ನಿವೃತ್ತರಾಗಿರುವ ಅಧಿಕಾರಿಗಳಿಗೆ ಸಾಮಾನ್ಯವಾಗಿ ಸ್ವತಂತ್ರಶೀಲತೆಯ ಕೊರತೆಯಿದ್ದು, ಇಚ್ಚಾಶಕ್ತಿಯನ್ನೇ ಕಳೆದುಕೊಂಡಿರುವರು ರಾಜಭಾಷಾ ಆಯೋಗದಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ. ಬದಲಿಗೆ ಯುವ ಪ್ರತಿಭಾವಂತ ಭಾಷಾ ತಜ್ಞರು – ವಿದ್ವಾಂಸರನ್ನು ಸ್ವತಂತ್ರ ಸದಸ್ಯರನ್ನಾಗಿ ನೇಮಿಸಬೇಕು.

೩. ಇಡೀ ಮಸೂದೆಯಲ್ಲಿ ನಮ್ಮ ಕಸಾಪ ಅಧ್ಯಕ್ಷರು ಚಿಂತಿತಗೊ೦ಡಿರುವ ಅಂಶವಾಗಿರುವ ಪ್ರಕರಣ ಏಳನ್ನು ನಾನೂ ಸಹ ಬಹುಮುಖ್ಯವೆಂದು ಭಾವಿಸುತ್ತೇನೆ. ಆದರೆ ಕಸಾಪ ಚಿಂತೆಗೆೆ ವಿಭಿನ್ನವಾದ ಚಿಂತನೆ ನನ್ನದಾಗಿದೆ. ಇಲ್ಲಿಯ ಜಾರಿ ಪ್ರಾಧಿಕಾರದ ವ್ಯವಸ್ಥೆಗೆ ಕಸಾಪ ಅಧ್ಯಕ್ಷರು ಸದಸ್ಯರಾಗಿ ಸೇರಿಕೊಂಡರೆ ಯಾವುದೇ ಘನ ಸಾಧನೆಯಾಗುವುದಿಲ್ಲ ಎನ್ನುವುದು ನನ್ನ ಪ್ರಾಮಾಣ ಕ ಅನಿಸಿಕೆಯಾಗಿದೆ. ಏಕೆಂದರೆ ಸದಸ್ಯ ಬಹುಮತದಲ್ಲಿ ಕಸಾಪ ಅಧ್ಯಕ್ಷರು ಏನನ್ನು ಮಾಡಲಾಗುವುದಿಲ್ಲ; ಮೊದಲೇ ಅವರ ಆಯವ್ಯಯ ಬೇಡಿಕೆಯ ಪತ್ರಗಳನ್ನೂ ಸಹ ಇವರ ಸಹ ಸದಸ್ಯರೇ ವಿಲೇವಾರಿ ಮಾಡಬೇಕಾಗುತ್ತಾದ್ದರಿಂದ, ಮಾನ್ಯ ಕಸಾಪ ಅಧ್ಯಕ್ಷರು ಈಗಾಗಲೇ ಮಾಡುತ್ತಿರುವಂತೆ ಅಲ್ಲಿಯೂ ಮೌನವಾಗಿ ಬೆಂಬಲಿಸಿ ಸಹಿ ಮಾಡಿ ಬರಬೇಕಾಗುತ್ತದೆ ಅಷ್ಟೇ !
ಅದರ ಬದಲಿಗೆ ಜಾರಿ ಪ್ರಾಧಿಕಾರವನ್ನು ಶಾಸನಾತ್ಮಕ ಚಾಲನೆಯಾಗಿ ಮಾಡಬೇಕಾದ ಅಗತ್ಯವಿದೆ. ಲೋಕಾಯುಕ್ತ ಮಾದರಿಯಲ್ಲಿ “ಕನ್ನಡ ಜಾರಿಯುಕ್ತ”ರ ನೇಮಕವಾಗಬೇಕು, ಅವರಿಗೆ ಇಬ್ಬರು ಉಪ ಜಾರಿಯುಕ್ತರು ನೆರವಾಗಬೇಕು. ಯಾವ ಅಧಿಕಾರಿ ಕನ್ನಡವನ್ನು ಬಳಸುವುದಿಲ್ಲವೋ, ಯಾವ ಇಲಾಖೆಯಲ್ಲಿ ಕನ್ನಡ ಭಾಷೆ ಜಾರಿಯಾಗಿರುವುದಿಲ್ಲವೋ, ಅಂತಹ ಅಧಿಕಾರಿಯನ್ನು – ಅಧಿಕಾರಿ ಸಿಬ್ಬಂದಿಗಳ ಮೇಲೆ ದಾಳಿ ಮಾಡಿ ಅವರುಗಳನ್ನು ಬಂಧಿಸಿ ರಾಜಭಾಷಾ ವಿರೋಧಿಗಳೆಂದು ಅಪರಾಧ ಪಟ್ಟಿ ತಯಾರು ಮಾಡಿ ಅವರುಗಳ ವಿರುದ್ದ ರಾಜ್ಯದ್ರೋಹ ಕಾನೂನನ್ನು ಅನ್ವಯಿಸುವಂತೆ ಈ ಕಲಂ ಸಿದ್ಧವಾಗಬೇಕಾಗಿದೆ. ಲೋಕಾಯುಕ್ತರ ನೇಮಕದಂತೆ, ಈ ಕನ್ನಡಜಾರಿಯುಕ್ತರ ನೇಮಕವನ್ನು ಮಾನ್ಯ ಮುಖ್ಯಮಂತ್ರಿಗಳು, ವಿರೋಧಪಕ್ಷದ ನಾಯಕರು, ಮಾನ್ಯ ಶ್ರೇಷ್ಟ ನ್ಯಾಯಮೂರ್ತಿಗಳ ಸಮಿತಿ ನೇಮಕ ಮಾಡುವಂತಾಗಬೇಕು. ಈ ಜಾರಿಯುಕ್ತರು ಕಾನೂನು ತಜ್ಞರಾಗಿದ್ದು, ಆಡಳಿತ ನೈಪುಣ್ಯ ಹಾಗೂ ಕನ್ನಡ ಭಾಷಾ ವಿದ್ವತ್ತನ್ನು ಹೊಂದಿರತಕ್ಕದ್ದು.

೪. ಪ್ರಕರಣ ೯ರಲ್ಲಿ ನಮೂದಿತವಾಗಿರುವ ಜಾರಿ ಅಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಥವಾ ಬೇರೆ ಯಾವುದೋ ಇಲಾಖೆಯ ಅಧಿಕಾರಿಗಳಾಗಿರದೇ, ಲೋಕಾಯುಕ್ತ ಮಾದರಿಯಲ್ಲೇ ಪೋಲೀಸ್ ಅಧಿಕಾರಿಗಳಾದಲ್ಲಿ ಮಾತ್ತ ಈ ಜಾರಿ ಅಧಿಕಾರಿಗಳ ಕಾರ್ಯ ಸುಲಲಿತವಾಗುತ್ತದೆ. ಅದರ ಹೊರತಾಗಿ ಸಿವಿಲ್ ಅಧಿಕಾರಿಯು ಜಾರಿ ಅಧಿಕಾರಿಯಾದರೆ, ಅವರೊಬ್ಬ ಅನುಪಯುಕ್ತರಾಗುತ್ತಾರೆ ಅಷ್ಟೇ! ಅದೇ ತಿಳುವಳಿಕೆ ಪತ್ರ, ಎಚ್ಚರಿಕೆ ಪತ್ರಗಳಿಗೆ ಇದು ನಿಲ್ಲುತ್ತದೆ. ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕನ್ನಡ ಭಾಷೆಯ ಜಾರಿಗಾಗಿ ಲೋಕಾಯುಕ್ತ ಮಾದರಿಯಲ್ಲೇ ಪೋಲೀಸ್ ವ್ಯವಸ್ಥೆಯ ಬಲದೊಂದಿಗೆ ಸಂಘಟನಾತ್ಮಕ ವ್ಯವಸ್ಥೆ ಅಳವಡಿಕೆಯಾದರೆ ಮಾತ್ರ ಕನ್ನಡ ರಾಜ್ಯದಲ್ಲಿ ಕನ್ನಡ ಭಾಷೆ ಆಡಳಿತವಾಗಿ ಜಾರಿಯಾಗಲು ಸಾಧ್ಯವೇ ಹೊರತು, ಕಸಾಪ ಅಧ್ಯಕ್ಷರು, ಜಿಲ್ಲಾಧ್ಯಕ್ಷರುಗಳು, ತಾಲ್ಲೂಕು ಅಧ್ಯಕ್ಷರುಗಳು ಸದಸ್ಯರಾಗಿ ಮೂರು ತಿಂಗಳಿಗೊಮ್ಮೆ ಉಪಹಾರ ಸೇವಿಸಬಹುದು ಅಷ್ಟೇ ಹೊರತು ಇನ್ಯಾವ ಸಾಧನೆಯೂ ಆಗುವುದಿಲ್ಲ.

೫. ಪ್ರಕರಣ ೧೧ ಹೇಳುವ ಅಧಿಕೃತ ಭಾಷಾ ಜಾರಿ ನಿರ್ದೇಶನಾಲಯವನ್ನು ಕನ್ನಡ ಮತ್ತು ಸಂಸ್ಕತಿ ಇಲಾಖೆಗೆ ವಹಿಸಲಾಗಿದೆ. ನಮ್ಮೆಲ್ಲರಿಗೂ ಗೊತ್ತಿದೆ; ಘನತೆವೆತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಷ್ಟು ಎಕ್ಕುಟೋಗಿದ್ದೆ ಎಂದು. ಹಾಗಾಗಿ ಈಗಾಗಲೇ ನಾನು ಹೇಳಿರುವಂತೆ ಕನ್ನಡ ಜಾರಿಯುಕ್ತ ಇಲಾಖೆಯ ಸೃಷ್ಟಿಯಾಗಬೇಕಾಗಿದೆ.

೬. ಪ್ರಕರಣ ೧೪ರಲ್ಲಿ ಉನ್ನತ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣದಲ್ಲಿ ಮೀಸಲಾತಿ ಬಗ್ಗೆ ಉಲ್ಲೇಖವಿದೆಯೇ ವಿನಾ: ಶೇಕಡಾವಾರು ಮೀಸಲು ಹೇಳಿರುವುದಿಲ್ಲ. ಈಗಾಗಲೇ ಗ್ರಾಮೀಣ ಮಕ್ಕಳ ಮೀಸಲಾತಿ ಇದೆ, ಕನ್ನಡ ಮಾಧ್ಯಮದವರಿಗೂ ಶೇಕಡ ೫ ಮೀಸಲಾತಿ ಇದೆ. ಅದನ್ನು ಕನಿಷ್ಟ ೫೦ ಶೇಕಡಕ್ಕೆ ಏರಿಸುವ ಅಗತ್ಯವಿದೆ.
ಉಳಿದ ಎಲ್ಲ ಪ್ರಕರಣಗಳು ಅದೇ ಸರ್ಕಾರಿ ಮಾದರಿಯ ಮುಂದುವರಿಕೆಯ ಅಂಗವಾಗಿದ್ದು, ಮಾನ್ಯ ಕಸಾಪ ಅಧ್ಯಕ್ಷರು ಹೇಳಿರುವಂತೆ ಅಧಿಕಾರಷಾಹಿಯ ನಿರ್ಲಕ್ಷ್ಯ – ತಾತ್ಸಾರ ಮತ್ತು ಬೇಜವಾಬ್ದಾರಿಯ ಪಳೆಯುಳಿಕೆಗಳಾಗಿವೆ.

ಮುಖ್ಯವಾಗಿ, ಇಂದು ಉದ್ಯೋಗಗಳನ್ನು ಬೃಹತ್ ಪ್ರಮಾಣದಲ್ಲಿ ಸೃಜಿಸುತ್ತಿರುವ ಐ.ಟಿ. ಕಂಪನಿಗಳ ಕುರಿತಾಗಿ ಈ ವಿಧೇಯಕದಲ್ಲಿ ಯಾವುದೇ ಅಂಶವಿಲ್ಲ. ಈಗಾಗಲೇ ನಮಗೆಲ್ಲ ಗೊತ್ತಿದೆ. ಐ.ಬಿ.ಎಂ., ನಲ್ಲಿ ಏನಾಗುತ್ತಿದೆ; ಬೇರೆ ಬೇರೆ ಸಾಫ್ಟ್ವೇರ್ ಕಂಪನಿಗಳಲ್ಲಿ ಎಷ್ಟು ಜನ ಕನ್ನಡಿಗರಿಗೆ ಉದ್ಯೋಗಗಳು ಸಿಕ್ಕಿವೆ? ಈಗಾಗಲೇ ಅಲ್ಲಿ ದುಡಿಯುತ್ತಿರುವ ಕನ್ನಡಿಗರಿಗೆ ಅದೆಷ್ಟು ಅನ್ಯಾಯಗಳು ನಡೆಯುತ್ತಿದೆ ಎಲ್ಲವೂ ನಮ್ಮ ನಮ್ಮ ಆತ್ಮಗಳಿಗೆ ಗೊತ್ತಿದೆ.
ಹಾಗಾಗಿ, ಒಂದು ಸದಸ್ಯತ್ವಕ್ಕಾಗಿ ಅಂಗಲಾಚುವ ಬದಲು, ಸಮಗ್ರ ಕನ್ನಡ ಜಾರಿಗಾಗಿ ಕನ್ನಡ ಜಾರಿಯುಕ್ತ ಇಲಾಖೆಯನ್ನು ಸೃಷ್ಟಿಸಿ ಈ ವಿಧೇಯಕದ ಎಲ್ಲ ಅಂಶಗಳನ್ನು ಜಾರಿಗೊಳಿಸಬೇಕಾಗಿದೆ.

ದಂಡನೆಯ ಅಧಿಕಾರವಿಲ್ಲದೆ ಕೇವಲ ಸದ್ಭಾವನೆಯಿಂದ ಕನ್ನಡ ಜಾರಿ ಸಾಧ್ಯವಿಲ್ಲ. ರಾಜ್ಯ ಸಚಿವ ದರ್ಜೆಯ ಸ್ಥಾನಮಾನದಿಂದ ಕನ್ನಡ ಬಳಕೆಗೆ ಏನೂ ಪ್ರಯೋಜನವಿಲ್ಲ. ಕನ್ನಡವನ್ನು ಅನ್ನದ ಭಾಷೆಯನ್ನು ಮಾಡುವಲ್ಲಿ ದಿಟ್ಟ ಹೆಜ್ಜೆ ಇಡದೆ, ಕನ್ನಡವನ್ನು ಪ್ರತಿ ಹಂತದಲ್ಲಿಯೂ ಬಳಕೆ ಮಾಡದೆ ನಿರ್ಲಕ್ಷ್ಯ ತೋರುವ ಅಧಿಕಾರಿ – ನೌಕರಷಾಹಿಗೆ ತಕ್ಕ ಶಾಸ್ತಿ ಮಾಡುವ ಕೆಚ್ಚೆದೆ ತೋರದೆ, ಮುಖ್ಯವಾಗಿ ಹಿಂಬಾಗಿಲಿನಿ೦ದ ತೂರುತ್ತಿದ್ದ ಹಿಂದಿಯೆAಬ ರಾಷ್ಟ್ರಭೂತ ಇದೀಗ ನೇರವಾಗಿ ಧುಮುಕ್ಕುತ್ತಿರುವಾಗ, ಕನ್ನಡನ್ನು ಉಳಿಸಿ ಬೆಳೆಸುವ, ನಮ್ಮತನವನ್ನು ಕಾಪಾಡಿಕೊಳ್ಳುವ, ನಮ್ಮವರಿಗೆ ರಕ್ಷೆ ನೀಡಿ, ಅನ್ನ ನೀಡಿ, ಉದ್ಯೋಗ ಒದಗಿಸಿ ಸ್ವಾವಲಂಬ ಕಲ್ಯಾಣ ರಾಜ್ಯವನ್ನು ಕಟ್ಟಬೇಕಿದೆ. ಆ ನಿಟ್ಟಿನ ವಿಧೇಯಕ ನಮಗೆ ಬೇಕಾಗಿದೆ.

‍ಲೇಖಕರು Admin

October 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: