ಪ್ರೇಕ್ಷಕರ ಕಣ್ಣು ತೇವಗೊಳಿಸಿದ ನಾಟಕ ʻಕಾಲಘಟ್ಟʼ

ಕುಮಾರ ಬೇಂದ್ರೆ

-ಹುಬ್ಬಳ್ಳಿಯ ಜೀವಿ ಕಲಾ ಬಳಗದಿಂದ ಪ್ರಸ್ತುತಿ
-ಗದಿಗೆಯ್ಯ ಹಿರೇಮಠ ಅವರ ನಿರ್ದೇಶನ
-ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಪ್ರದರ್ಶನ

ಹೆಂಡತಿಯನ್ನು ಕಳೆದುಕೊಂಡು ಏಕಾಂಗಿಯಾದರೂ ಇಳಿ ವಯಸ್ಸಿನಲ್ಲಿ ಮಗ, ಮೊಮ್ಮಗಳು ಮತ್ತು ಸೊಸೆಯೇ ತನ್ನ ಪ್ರಪಂಚ ಎಂದುಕೊಂಡ ನಿವೃತ್ತ ಶಿಕ್ಷಕನೊಬ್ಬ ಹತಾಶೆ, ವಿಷಾದ, ಒಂಟಿತನದಲ್ಲೇ ದಿನ ಕಳೆಯುವಂತಹ ಪರಿಸ್ಥಿತಿ ಸೃಷ್ಟಿಯಾದದ್ದು ಹೇಗೆ? ಸಾಪ್ಟ್​ವೇರ್​ ಇಂಜಿನಿಯರ್​ ಆಗಿದ್ದ ಮಗ ಮತ್ತು ಸೊಸೆ ಎಲ್ಲ ಸಂಪತ್ತು ಹೊಂದಿದ್ದರೂ ತಂದೆಯನ್ನು ಒಂಟಿಯಾಗಿಸಲು ಕಾರಣವಾದರೂ ಏನು? ಸರಳ ವ್ಯಕ್ತಿತ್ವ, ಆದರ್ಶಗಳಲ್ಲಿ ಶ್ರದ್ಧೆ, ಸ್ನೇಹಿತನಲ್ಲಿ ನಂಬಿಕೆ ಹೊಂದಿದ್ದ ಆ ನಿವೃತ್ತ ಶಿಕ್ಷಕ ಕಾಲ ಕಳೆದಂತೆ ತನ್ನ ಬದುಕಿನ ಬಗ್ಗೆ ವಿಶ್ವಾಸ ಕಳೆದುಕೊಂಡು ಹತಾಶನಾಗಿದ್ದಾದರೂ ಏಕೆ?  ಜೀವಿಸಲು ಬೇಕಿರುವಷ್ಟು ತಮ್ಮ ಬಳಿ ಸಂಪತ್ತು, ಹಣ ಇದ್ದರೂ ಮಗ ತಂದೆಯನ್ನು ಒಂಟಿಯಾಗಿ ಬಿಟ್ಟು ವಿದೇಶಕ್ಕೆ ಹೋದದ್ದು ಯಾಕೆ? ಅದೇ ತಂದೆ ಒಂದು ಕಾಲದಲ್ಲಿ ಅನಾಥ ಹೆಣವಾದಾಗ ʻಅವರ ಅಂತ್ಯಕ್ರಿಯೆ ನೆರವೇರಿಸಿ ಬಿಡಿ. ಅದಕ್ಕಾಗಿ ನಿಮ್ಮ ಖಾತೆಗೆ ಹಣ ಕಳಿಸುವೆʼ ಎಂದು ತಂದೆಯ ಸ್ನೇಹಿತನಿಗೆ ನಿರ್ದಯವಾಗಿ ಹೇಳುವ ಪ್ರಸಂಗ ಯಾಕಾದರೂ ಬಂದಿತು?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದ್ದರೆ… ಜೀವಿ ಕಲಾಬಳಗದ ತಂಡದೊಂದಿಗೆ ಗದಿಗೆಯ್ಯ ಹಿರೇಮಠ ಅವರು ನಿರ್ದೇಶಿನಿ ಅಭಿನಯಿಸಿರುವ ʻಕಾಲಘಟ್ಟʼ ನಾಟಕವನ್ನು ಖಂಡಿತ ನೋಡಬೇಕು! ವರ್ತಮಾನ ಕಾಲಘಟ್ಟದ ವೈಪರಿತ್ಯ, ವೈರುದ್ಧ ಮತ್ತು ಹಣ ಸಂಪತ್ತಿನ ದುರಾಸೆ ಸಂಬಂಧಗಳ ಮೌಲ್ಯವನ್ನು ಅಪಮೌಲ್ಯಗೊಳಿಸಿ ವೃದ್ಧಾಪ್ಯದಲ್ಲಿರುವ ಜೀವಗಳನ್ನು ಹೇಗೆ ಜೀವಂತ ಸಮಾಧಿ ಮಾಡುತ್ತಿದೆ ಎಂಬುದನ್ನು ಮನೋಜ್ಞವಾಗಿ ಕಟ್ಟಿಕೊಡುವ ನಾಟಕ ʻಕಾಲಘಟ್ಟʼ. ಹಾಗಾಗಿ ಈ ಕಾಲಘಟ್ಟದ ಎಲ್ಲ ವಯೋಮಾನ ಪ್ರೇಕ್ಷಕರೂ ಅವಶ್ಯವಾಗಿ ನೋಡಬೇಕಾದ ನಾಟಕವಿದು.

ಆದರ್ಶದ ಮೌಲ್ಯಗಳಲ್ಲಿ ನಂಬಿಕೆ ಇರಿಸಿಕೊಂಡು ಶಿಕ್ಷಕ ವೃತ್ತಿಯಲ್ಲಿ ಇಡೀ ಜೀವನ ಸವೆಸಿದ ಆ ವ್ಯಕ್ತಿ ನಿವೃತ್ತಿಯಾಗಿ ನೆಮ್ಮದಿಯ ಜೀವನ ಕಳೆಯಬೇಕು ಎಂದುಕೊಳ್ಳುವ ಹೊತ್ತಿಗೆ ಹೆಂಡತಿ ಕೈ ಬಿಟ್ಟು ಹೋಗಿರುತ್ತಾಳೆ. ಹಾಗಾಗಿ ತನ್ನ ಮನದ ಮಾತುಗಳನ್ನು ಅವಳ ಭಾವಚಿತ್ರದ ಎದುರು ಆಗಾಗ ಹೇಳಿಕೊಳ್ಳುತ್ತಿರುತ್ತಾನೆ. ಸೊಸೆ ಅವನನ್ನು ಪರಕೀಯನೆಂಬಂತೆ ನೋಡುತ್ತ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಹವಣಿಸುತ್ತಾಳೆ. ಮೊಮ್ಮಗಳು ಮೊದಲಾಗಿ ಅವನ ಸರಳತೆಯನ್ನು ಹೀಯಾಳಿಸುತ್ತಾರೆ. ಇದರಿಂದ ವೃದ್ಧ ಜೀವ ಒಳಗೊಳಗೇ ತಲ್ಲಣಿಸುತ್ತದೆ. ಇಂಥ ಕಾಲದಲ್ಲಿ ಅವನಿಗೆ ಜೊತೆಯಾದವನು ಒಬ್ಬನೇ ಸ್ನೇಹಿತ. ಹೆಂಡತಿಯ ಒತ್ತಾಯಕ್ಕೆ ಮಣಿದ ಮಗ ಕಡೆಗೂ ವೃದ್ಧ ತಂದೆಯನ್ನು ಒಂಟಿಯಾಗಿ ಬಿಟ್ಟು ವಿದೇಶಕ್ಕೆ ಹೋದಮೇಲೆ ತಂದೆ ಏಕಾಂಗಿಯಾಗಿ ದಿನಗಳನ್ನು ಕಳೆದು ಒಂದು ದಿನ ಅನಾಥ ಹೆಣವಾಗುತ್ತಾನೆ. ಇದಕ್ಕೂ ಮುನ್ನ ತನಗೆ ಯಾರೂ ಇಲ್ಲ ಎಂಬ ಖಿನ್ನತೆಯಲ್ಲಿ ಆ ತಂದೆ ತಾನು ಜೀವಮಾನವಿಡೀ ದುಡಿದು ಸಂಪಾದಿಸಿದ ಹಣ-ಆಸ್ತಿಯನ್ನು ಸಮಾಜ ಉಪಯೋಗಿ ಕೆಲಸಕ್ಕೆ ದಾನ ಬರೆದಿಟ್ಟು ಸ್ನೇಹಿತನಿಗೆ ಜವಾಬ್ದಾರಿ ನೀಡಿ, ಕಡೆಗೆ ದೇಹವನ್ನೂ ಕೂಡ ಆಸ್ಪತ್ರೆಯೊಂದಕ್ಕೆ ದಾನ ಮಾಡಿ ಪ್ರಾಣ ಬಿಡುತ್ತಾನೆ. ಈ ಸನ್ನಿವೇಶ ಪ್ರೇಕ್ಷಕನ ಅಂತಃಕರಣ ಕದಲುವಂತೆ ಮಾಡುತ್ತದೆ. ಕಣ್ಣುಗಳನ್ನು ಒದ್ದೆಯಾಗಿಸುತ್ತದೆ.

ಈ ನಾಟಕದ ವಸ್ತು ಕೇವಲ ಸಂಯೋಜಿತವಲ್ಲ. ನಿನ್ನೆ ಮೊನ್ನೆಯಷ್ಟೇ ವಾಸ್ತವದಲ್ಲಿ ಘಟಿಸಿರಬಹುದಾದ ನೈಜ ಕಥಾನಕ. ಹಾಗಾಗಿ ಪ್ರೇಕ್ಷನ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ. ಧಾರವಾಡ ಕನ್ನಡ ಭಾಷೆ ಈ ನಾಟಕದುದ್ದಕ್ಕೂ ಕಾವ್ಯಾತ್ಮಕವಾಗಿ ಎದೆಗೆ ನಾಟುತ್ತದೆ. ಧಾರವಾಡ ಕನ್ನಡದ ಶಕ್ತಿಯೇ ಅದು! ಈ ಭಾಷೆಯನ್ನು ಕೇವಲ ಹಾಸ್ಯಕ್ಕೆ ಮಾತ್ರ ಬಳಸಬಹುದು ಎಂದು ಬಿಂಬಿಸುವವರಿಗೆ ಇದು ಅಪವಾದ. ಮತ್ತು ಧಾರವಾಡ ಕನ್ನಡದಲ್ಲಿ ಕಥೆ ಹೇಳಿ ಎದೆಯಲ್ಲಿ ಆರ್ದ್ರತೆ ಹುಟ್ಟಿಸಿ ಕಣ್ಣು ತೇವಗೊಳಿಸಲೂಬಹುದು ಎಂಬುದನ್ನು ʻಕಾಲಘಟ್ಟʼ ನಾಟಕ ನಿಜವಾಗಿಸಿದೆ.

ಈ ಹಿನ್ನೆಲೆಯಲ್ಲಿ ಈ ನಾಟಕದ ಕಥಾವಸ್ತುವನ್ನು ಹೃದ್ಯವಾಗಿ ರೂಪಿಸಿ ಪ್ರಸ್ತುತಪಡಿಸಿದ ನಿರ್ದೇಶಕರಾದ ಗದಿಗೆಯ್ಯ ಹಿರೇಮಠ ಅವರನ್ನು ಮತ್ತು ನಾಟಕದ ಪಠ್ಯ ರಚಿಸಿದ ಅಭಿಷೇಕ ದೇಸಾಯಿ ಅವರನ್ನು ಮೊದಲಾಗಿ ನಾನು ಅಭಿನಂದಿಸುವೆ. ಎಲ್ಲ ಕಲಾವಿದರ ಅಭಿನಯವೂ ಅಷ್ಟೇ ಮನೋಜ್ಞವಾಗಿತ್ತು. ಇತ್ತೀಚೆಗೆ ಜೀವಿ ಕಲಾ ಬಳಗದ ೭ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರಲ್ಲಿ ಈ ನಾಟಕದ ಪ್ರದರ್ಶನ ನಡೆಯಿತು. ಈ ಹಿನ್ನೆಲೆಯಲ್ಲಿ ಜೀವಿ ಕಲಾ ಬಳಗ ಮತ್ತು ತಂಡದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುವೆ.

ಶೀ​ರ್ಷಿಕೆ: ಕಾಲಘಟ್ಟ. ರಚನೆ: ಅಭಿಷೇಕ ದೇಸಾಯಿ. ರಂಗ/ನಿರ್ದೇಶನ: ಗದಿಗೆಯ್ಯ ಹಿರೇಮಠ. ಸಂಗೀತ: ಜೀವಿ ಸ್ವಾಮಿ. ಪ್ರಸಾದನ: ಶ್ರೀಕಾಂತ ಕುಲಕರ್ಣಿ. ಪಾತ್ರವರ್ಗ: ಸಿ.ಎಸ್​. ಪಾಟೀಲ, ಗದಿಗೆಯ್ಯ ಹಿರೇಮಠ, ಜಗದೀಶ ಮೂಕಿ, ಪ್ರೀತಿ ಗಾಯಕವಾಡ, ಕು. ಅಸ್ವಿನಿ ದೇಸಾಯಿ, ದಾನೇಶ ಚೌಕಿಮಠ, ವಾಗೀಶ ಭಿಕ್ಷಾವರ್ತಿಮಠ, ರವಿ ಬೆಣಚಿನಮರಡಿ.

‍ಲೇಖಕರು Admin

October 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: