ಕನ್ನಡ ಕಥನ ಪರಂಪರೆ ಜಾತಿಗಳ ಹಂಗಿಲ್ಲದೆ ಬೆಳೆಯಲಿ..

ಸುವರ್ಣ ಶಿವಪ್ರಸಾದ್ ಅವರ ನೂತನ ಕಾದಂಬರಿ ‘ಒಂದ್ಕಥೆ’ಗೆ

ಖ್ಯಾತ ಕಥೆಗಾರ ಮೊಗಳ್ಳಿ ಗಣೇಶ್ ಬರೆದ ಮುನ್ನುಡಿ 

ಮೊಗಳ್ಳಿ ಗಣೇಶ್

ಲೇಖಕಿ ಸುವರ್ಣ.ಸಿ ಅವರು ‘ಒಂದ್ಕಥೆ’ ಎಂಬ ಕಾದಂಬರಿಯನ್ನು ಮುಗ್ಧವಾಗಿ ಬರೆದಿದ್ದಾರೆ. ದಲಿತ ಲೇಖಕಿಯರು ಎಂದು ಗಟ್ಟಿಯಾಗಿ ಗುರುತಿಸಬಹುದಾದ ದು. ಸರಸ್ವತಿ, ಬಿ.ಯು. ಸುಮ, ಬಿ.ಟಿ. ಜಾಹ್ನವಿ ಅವರ ನಡುವೆ ಸುವರ್ಣ.ಸಿ. ಅವರು ಕುತೂಹಲ ಮೂಡಿಸುತ್ತಾರೆ.

ದಲಿತ ಲೇಖಕರು ರೂಪಿಸಿರುವ ಸಾಹಿತ್ಯದ ವೈಚಾರಿಕತೆ ಸಹಜವಾಗಿಯೇ ಇವರ ಮೇಲೆ ಇದೆ. ಸ್ವತಃ ತನ್ನೊಡಲ ನುಡಿಯನ್ನೇ ನುಡಿಸಬಹುದಾದ ಕ್ರಮಕ್ಕೆ ಮೇಲೆ ಹೆಸರಿಸಿದ ಮೂರೂ ಲೇಖಕಿಯರ ನಿಟ್ಟಿನಲ್ಲಿ ಸುವರ್ಣ.ಸಿ ಅವರು ನಡೆಯಬೇಕಿದೆ. ದಲಿತ ಸಾಹಿತ್ಯ ಈಗ ರೂಪಾಂತವಾಗಿದೆ. ದಲಿತ ಕೇರಿಗಳೂ ಬದಲಾಗುತ್ತಿವೆ. ಸುವರ್ಣ ಅವರು ರೂಪಿಸಿರುವ ಈ ಕಾದಂಬರಿಯು ಹಳ್ಳಿ ಒಂದರ ಸಾಮಾನ್ಯ ಚಿತ್ರಣಗಳನ್ನೇ ಪ್ರತಿಬಿಂಬಿಸುತ್ತದೆ. ಒಂದ್ಕಥೆ ಶೀರ್ಷಿಕೆಯೇನೋ ಸಾಂಕೇತಿಕವಾಗಿ ಇದೆಯಾದರೂ, ಈ ಕಾದಂಬರಿ ಮುಗ್ಧವಾಗಿ ವಿವರಗಳ ಮಾಲೆಯನ್ನು ಕಟ್ಟುತ್ತಾ ಸಾಗುತ್ತದೆ. ಎಪ್ಪತ್ತರ ದಶಕದ ಊಳಿಗಮಾನ್ಯ ವ್ಯವಸ್ಥೆಯ ಹಳ್ಳಿಗಳ ದಲಿತರ ದಾರುಣ ಕಥೆಯನ್ನೇನು ಈ ಕಾದಂಬರಿ ನಿರೂಪಿಸುವುದಿಲ್ಲ. ಅಸ್ಪಷ್ಯತೆಯ ನರಕವನ್ನೇನು ಈ ಬರಹ ತೋರುವುದಿಲ್ಲ. ತಣ್ಣನೆ ಸುಮ್ಮನೆ ಲೇಖಕಿ ಬಾಲ್ಯದಲ್ಲಿ ತಾನು ಕಂಡ ಊರುಕೇರಿಯ ನೆನಪಿನ ಚಿತ್ರಗಳನ್ನು ಯಾವ ದೊಡ್ಡ ಉದ್ದೇಶಗಳಿಲ್ಲದೆ ಈ ಕೃತಿಯಲ್ಲಿ ಮರುರೂಪಿಸುತ್ತಾರೆ.

ದಲಿತರಾಗಿ ಹುಟ್ಟಿ ಬಂದ ಕಾರಣಕ್ಕೆ ಸಾಹಿತ್ಯ ಪ್ರವೇಶಿಸುವವರು ಹಿಂದಿನ ದಲಿತ ಸಾಹಿತ್ಯದ ಕಥನ ಮಾದರಿಗಳನ್ನು ಗಮನಿಸಬೇಕು ಎಂಬುದು ಒಂದು ಅಪೇಕ್ಷೆ ಇದೇನು ಕಡ್ಡಾಯ ಅಲ್ಲ. ಆದರೆ ಸಾಹಿತ್ಯ ಪರಂಪರೆಯ ಹಿಂದಣ ಹೆಜ್ಜೆಯ ಕುರುಹುಗಳನ್ನು ಅರಿಯದೆ ತಾನುಂಟು, ತನ್ನ ಬರಹ ಉಂಟು ಎಂದು ಬರಿದೇ ಅನುಭವಗಳನ್ನು ಒಂದು ದರ್ಶನಕ್ಕೆ ಒಗ್ಗಿಸದೆ ಬರೆದರೆ ಸಾಹಿತ್ಯಲೋಕ ಅದನ್ನು ಮಾನ್ಯ ಮಾಡುವುದಿಲ್ಲ. ಸಾಹಿತ್ಯವೂ ಕೂಡ ಈಗ ಒಂದು ಬಗೆಯಲ್ಲಿ `ಸೆಲ್ಪಿ’ಯ ಸ್ವರೂಪ ಪಡೆಯುತ್ತಿದೆಯೇ ಎಂಬ ಅನುಮಾನ ಉಂಟಾಗುತ್ತದೆ. ಲೇಖಕಿ ಈ ಕಾದಂಬರಿಯಲ್ಲಿ ಬರುವ ಸನ್ನಿವೇಶಗಳನ್ನ ಆಯಾಯ ಸಂದರ್ಭಗಳಲ್ಲಿ ತಾನು ಆ ವಿವರಗಳ ನಡುವೆ ಸೆಲ್ಪಿ ತೆಗೆದುಕೊಂಡಂತೆ ಅನುಭವಗಳನ್ನ ಚಿತ್ರಿಸುತ್ತಾರೆ.

ಕೆಟ್ಟುಹೋಗಿರುವ ಬೋರ್‌ವೆಲ್ ರಿಪೇರಿಯ ಯಮಸಾಹಸವನ್ನು ಉತ್ಸಾಹದಲ್ಲಿ ಚಿತ್ರಿಸುವ ಮೂಲಕ ಆರಂಭವಾಗುವ ಈ ಕಾದಂಬರಿಯು ಒಂದು ಊರಿನ ಬೇಸಾಯದ ರಗಳೆಯನ್ನು ಚಿತ್ರಿಸುತ್ತದೆ. ಅದರ ಜೊತೆಯಲ್ಲೇ ಊರ ಕೆರೆಯ ಹೂಳು ಎತ್ತಿಸುವ ನರೇಗಾ ಯೋಜನೆಯ ಕಾಮಗಾರಿಯೂ ಸೇರಿಕೊಳ್ಳುತ್ತದೆ. ಕೆರೆ ಅಂಗಳಕ್ಕೆ ಬಂದು ನೆಲೆಸಿರುವ ಬೋವಿಗಳ ದಂಡಿನ ಚಟುವಟಿಕೆಗಳ ಕಿರಿಕಿರಿಯನ್ನು ಊರಿಗೆ ಅಂಟಿದ ತರಲೆ ಎಂಬಂತೆ ವಿವರಗಳು ಸುಮ್ಮನೆ ಬರಹದಲ್ಲಿ ಬಂದು ಸೇರಿಕೊಳ್ಳುತ್ತವೆ. ಹಾಗೆಯೇ ಈ ಚಿತ್ರಗಳ ನಡುವೆ ಹಸು ಕಳೆದುಕೊಂಡ ಮುದುಕನೊಬ್ಬ ಅದನ್ನು ಹುಡುಕಾಡಿಕೊಂಡು ಅಲೆವ ವಿವರಗಳು ಹೆಚ್ಚುವರಿಯಾಗಿ ಸೇರಿಕೊಳ್ಳುತ್ತವೆ. ಹೀಗೆ ಅನೇಕ ಚಿತ್ರಗಳು ಸಂತೆಯಲ್ಲಿ ನೆರೆದಂತೆ ಈ ಕಾದಂಬರಿಯಲ್ಲಿ ಸಾಲಾಗಿ ಬರುತ್ತವೆ.

ವಿವಿಧ ಚಿತ್ರಗಳ ಸಾಲಿಗೆ ಒಂದು ಸಾವಯವ ಶಿಲ್ಪ ಸಾಧ್ಯವಾಗುವುದಿಲ್ಲ ಅರೆ ಮಲೆನಾಡಿನ ತಪ್ಪಲಿನ ಒಂದು ಹಳ್ಳಿಯ ಕಥೆಯನ್ನು ಹೇಳುವ ಈ ಕಾದಂಬರಿಯು ನಿರುದ್ವಿಗ್ನವಾಗಿದೆ. ದೊಡ್ಡದೊಂದು ಬಿಕ್ಕಟ್ಟಿಗೆ ಸಿಲುಕಿ ಪಾತ್ರಗಳು ಇಲ್ಲಿ ಕದಡಿಹೋಗುವುದಿಲ್ಲ. ಸ್ವಯಂ ದಲಿತರ ಅನಾಥತೆಯನ್ನು ಬಿಂಬಿಸುವುದಿಲ್ಲ. ಆ ಬಗೆಯ ಅಂಶಗಳು ಸುವರ್ಣ ಅವರಿಂದ ಚಿತ್ರಿತವಾಗಿದ್ದರೆ ಈ ಕಾದಂಬರಿಗೆ ದಲಿತ ಮೌಲ್ಯಮಾಪನ ಮಾಡುವುದು ಸುಲಭ ಇತ್ತು. ಸುವರ್ಣ ಅವರು ಆ ಬಗೆಯ ದಲಿತ ರಿಯಾಯಿತಿಯನ್ನು ಬಯಸುವುದಿಲ್ಲ. ಎಲ್ಲೋ ಮರೆತು ಹೋಗುತ್ತಿರುವ ಬಾಲ್ಯದ ತೆಳು ಭಾವನೆಗಳನ್ನು ಆರಯಿಸಿ ಈ ಕಾದಂಬರಿಯನ್ನು ಕಟ್ಟಲಾಗಿದೆ. ಸುಖ ದುಃಖದ ನಡುವಿನ ವಿರಾಮ ಸಮಯದ ಸಣ್ಣಪುಟ್ಟ ನಿಟ್ಟುಸಿರುಗಳನ್ನು ಆಶ್ರಯಿಸಿ ಈ ಕಾದಂಬರಿ ಬೆಳೆಯುತ್ತದೆ.

ಈ ಕಾದಂಬರಿಯ ಪಾತ್ರ ವಿವರಗಳು ನೆನಪಿಗೆ ಥಟ್ಟನೆ ಬರುವುದಿಲ್ಲ. ಹಾಗೆಂದು ಇದೊಂದು ಸಂಕೀರ್ಣ ಕಾದಂಬರಿಯೂ ಅಲ್ಲ. ಒಂದು ಬಸ್ಸಿನ ಕಿಟಕಿಯ ಪಕ್ಕ ಕುಳಿತು ದಾರಿ ಉದ್ದದ ಚಿತ್ರಗಳನ್ನು ಕಾಣುತ್ತಾ ಸಾಗಿದಂತೆ ಕಾದಂಬರಿಯ ಚಿತ್ರಗಳು ಹಾದು ಹೋಗುತ್ತವೆ. ಈ ಸಾಗುವ ಚಿತ್ರಗಳಿಗೆ ಒಂದು ಕೇಂದ್ರ ಕಥೆ ಇರುವುದಿಲ್ಲ. ಹಾಗೆಯೇ ಅವುಗಳಿಗೆ ನಿರೂಪಕಿಯ ತಾರ್ಕಿಕತೆಯ ಹಂಗೂ ಇರುವುದಿಲ್ಲ. ಲೇಖಕರು ಒಂದೇ ಕ್ಯಾಮರಾ ಆದರೆ ಅಂತಹ ದೊಡ್ಡ ಪ್ರಯೋಜನವಿರದು. ಸುವರ್ಣ ಅವರು ಸೃಜನಶೀಲತೆಯ ಸಾಹಿತ್ಯದ ಬನದಲ್ಲಿ ಬಂದು ನಿಂತು ತಾನೂ ಕೂಡ ಒಂದು ಊರಿನ ಕೇರಿಯ ಕಥೆಯ ಒಂದು ಮರವಾಗಬೇಕು ಎಂದು ಬಯಸಿ ಈ ಬರಹವನ್ನು ರೂಪಿಸಿದಂತಿದೆ. ದಲಿತ ಲೇಖಕರು ಎಷ್ಟೇ ಅಂತಃಕರಣಭರಿತರೇ ಆಗಿರಲಿ, ಅಂತಿಮವಾಗಿ ಅವರು ಗಂಡಸರು. ಸೃಜನಶೀಲತೆಗೆ ಹೆಣ್ಣು ಗಂಡು ಎಂಬ ವೆತ್ಯಾಸ ಇಲ್ಲ ಎಂಬ ಮಾತನ್ನು ನಾನು ಒಪ್ಪಲಾರೆ. ಒಂದು ವಿಶೇಷ ಅಂಶವನ್ನು ಇಲ್ಲಿ ಗಮನಕ್ಕೆ ತರಬಹುದು; ಅದೆಂದರೆ ಯಾವುದೇ ದಲಿತ ಲೇಖಕಿಯರು `ದಲಿತ’ ಎಂಬ ನಿರೂಪಣೆಯ ಗುರುತೊಂದನ್ನು ಆಹ್ವಾನಿಸಿಕೊಳ್ಳದೇ ಇರುವುದು. ಆದರೆ ಪುರುಷ ಮೂಲದ ದಲಿತ ಲೇಖಕರು ದಲಿತ ಎಂಬುದನ್ನು ಒಂದು ಸಾಹಿತ್ಯ ರಾಜಕಾರಣದ ನಿರೂಪಣೆಯಾಗಿ ಸ್ಪಷ್ಟವಾಗಿ ಸ್ಥಾಪಿಸಿಕೊಳ್ಳುವರು. ಈ ಅಂಶ ದಲಿತ ಮಹಿಳಾ ಲೇಖಕಿಯರಲ್ಲಿ ಎದ್ದು ಕಾಣುವುದಿಲ್ಲ. ವಿಚಿತ್ರ ಎಂದರೆ, ಈ ಬಗೆಯ ಗುಣ ಪುರುಷ ಲೇಖಕರಲ್ಲಿ ತಾಯ್ತನದ ಭಾವವಾಗಿ ರೂಪಾಂತರಗೊಳ್ಳುತ್ತದೆ. ಸಾರಾ ಅಬೂಬಕರ್, ವೈದೇಹಿ ಅವರಲ್ಲಿ ಹೆಣ್ಣಿನ ನೆಲೆಯ ಕಥನಗಳು ತಂತಾನೆ ವ್ಯಕ್ತವಾಗುತ್ತವೆ. ಆದರೆ ದಲಿತ ಲೇಖಕಿಯರು ತನ್ನ ನೆಲೆಯ ಸ್ತ್ರೀತ್ವವನ್ನು ಬರಹದಲ್ಲಿ ಸ್ಥಾಪಿಸಿಕೊಳ್ಳಲು ಉತ್ಸಾಹವನ್ನೇ ತೋರುವುದಿಲ್ಲ. ತನ್ನ ನಿಜದ ದಲಿತ ನೆಲೆಯನ್ನೂ ಸ್ತ್ರೀವಾದಿ ನೆಲೆಯನ್ನೂ ಬೇಕೆಂತಲೇ ಮರೆಸಿಕೊಂಡಂತೆ ಬರೆವ ಬಿಕ್ಕಟ್ಟು ಸುವರ್ಣ ಅವರಿಗೆ ಯಾಕೆ ಬಂತೋ ಗೊತ್ತಿಲ್ಲ.

ಒಂದ್ಕಥೆ ಕಾದಂಬರಿಯು ಸರಳವಾದ ಒಂದು ಬರಹ. ಕಾದಂಬರಿಯ ಅರ್ಧಭಾಗದ ತನಕ ಬಿಡಿಬಿಡಿ ವಿವರಗಳು ಆವರಿಸಿಕೊಳ್ಳುತ್ತವೆ. ಚನ್ನಾಪುರದ ಹೊಲೆಯರ ಪೈಕಿ ಓದಿದ್ದ ಮುತ್ತಣ್ಣನ ಕಥೆಗೆ ಬರುವ ಹೊತ್ತಿಗೆ ಕಾದಂಬರಿಯ ಕಾಲ ಬಹಳ ಮುಂದೆ ಹೋಗಿರುತ್ತದೆ. ಅಲ್ಲೆ ಹುಟ್ಟಿ ಅಲ್ಲೆ ಬೆಳೆದು ಬೆಳಕು ಮೂಡುವ ಹೊತ್ತಿಗಾಗಲೇ ಮುತ್ತಣ್ಣನ ಕುಟುಂಬದ ಮಕ್ಕಳಿಗೆ ಮೊಮ್ಮಕ್ಕಳೂ ಆಗಿಬಿಡುತ್ತವೆ. ಲೇಖಕಿ ಕಾದಂಬರಿಯ ಕಾಲದ ಶಿಲ್ಪವನ್ನು ನಿಭಾಯಿಸಲಾರದೆ ಎಣಗಾಡುತ್ತಾರೆ. ಬೋರ್ ವೆಲ್ ರಿಪೇರಿಗಾಗಿ ಸಾಕಷ್ಟು ಪುಟಗಳನ್ನು ವ್ಯಯ ಮಾಡಿ  ಊಳೆತ್ತುವ ಬೋವಿಗಳ ರಗಳೆಗೆ ಮತ್ತಷ್ಟು ಪುಟಗಳನ್ನು ವ್ಯರ್ಥಮಾಡಿ ಮುತ್ತಣ್ಣನ ವ್ಯವಸಾಯಕ್ಕೆ ಬರುವಷ್ಟರಲ್ಲಿ ಕಾದಂಬರಿಯು ಸಾಕಷ್ಟು ದಣಿದಿರುತ್ತದೆ. ಇಂತಲ್ಲಿ ಇದ್ದಕ್ಕಿದ್ದಂತೆ ತನ್ನ ತುಂಡು ಜಮೀನನ್ನು ರಕ್ಷಿಸಿಕೊಳ್ಳಬೇಕಾದ ಬಡಪಾಯಿ ಪಾತ್ರ ಒಂದು ಕಾದಂಬರಿಯಲ್ಲಿ ಎದುರಾಗುತ್ತದೆ. ಅಷ್ಟರಲ್ಲಾಗಲೇ ಈ ಒಂದು ಬಿಡಿ ಪಾತ್ರಕ್ಕೆ ತೋರಬಹುದಾದ ಮರುಕವನ್ನು ಓದುಗರು ಕಳೆದುಕೊಂಡಿರುತ್ತಾರೆ.

ಇದಕ್ಕಿಂತಲೂ ದೊಡ್ಡ ದುರಂತ ಇವತ್ತು ದಲಿತ ಸಾಹಿತ್ಯದ ಸಂದರ್ಭದಲ್ಲಿ ಯಾವುದು ಎಂದರೆ ಸಾಮಾಜಿಕವಾಗಿ ದಲಿತರು ತಮ್ಮ ಪರವಾಗಿದ್ದ ಅಂತಃಕರಣವನ್ನು ಕಳೆದುಕೊಳ್ಳುತ್ತಿರುವುದು. ಸುವರ್ಣ ಅವರ ಕಾದಂಬರಿಗೆ ಇದು ಪರೋಕ್ಷವಾಗಿ ಸಂಬಂಧಿಸುತ್ತದೆ. ಜೀತಗಾರರಾಗಬಹುದಿದ್ದ ಸುವರ್ಣ ಅವರ ಪಾತ್ರಗಳು ಇಲ್ಲಿ ಸ್ವತಂತ್ರವಾಗಿವೆ. ವಾಣಿಜ್ಯ ಬೆಳೆ ಬೆಳೆಯುವಲ್ಲಿ ಮುಂದಾಗಿ ಮಾರುಕಟ್ಟೆಯತ್ತ ಮುಖಮಾಡಿವೆ. ಊಳಿಗಮಾನ್ಯ ವ್ಯವಸ್ಥೆಯಲ್ಲಿರಬಹುದಾಗಿದ್ದ ದಲಿತ ಪಾತ್ರವು ಈಗ ಟೂಮ್ಯಾಟೋ ಬೆಳೆಬೆಳೆದು ಒಳ್ಳೆಯ ಬೆಲೆಗಾಗಿ ಕಾತರಿಸುತ್ತಿದೆೆ. ರೈತರ ಆತ್ಮಹತ್ಯೆಯ ಪ್ರತಿದ್ವನಿಗಳ ನಡುವೆ ದಲಿತ ಪಾತ್ರ ಒಂದು ರೈತನಾಗಿ ಲಾಭಗಿಟ್ಟಿಸಲು ಯತ್ನಿಸುವ ಹೊತ್ತಿಗೆ ಸ್ಥಳೀಯ ಮಂಡಲ ಪಂಚಾಯತಿ ರಾಜಕಾರಣವೂ ಹಾಗೆಯೇ ಜಾಗತೀಕರಣದ ಸ್ಥಳೀಯ ದಲ್ಲಾಳಿಗಳ ಸಂಚೂ ಒಟ್ಟುಗೂಡಿವೆ. ದಲಿತನಾಗಿರಲೂ ಸಾಧ್ಯವಾಗದ, ರೈತನಾಗಿ ರೂಪಾಂತರಗೊಳ್ಳಲೂ ಆಗದ ಸ್ಥಿತಿ ಒಂದನ್ನು ಕಾದಂಬರಿ ಬಿಂಬಿಸಲು ಯತ್ನಿಸುತ್ತಿದೆಯಾದರೂ ಈ ಬರಹ ಈ ಧೋರಣೆಯನ್ನು ಸಾವಯವ ರಚನೆಯಲ್ಲಿ ಕಟ್ಟುವುದಿಲ್ಲ.

ದಿಕ್ಕು ತಪ್ಪಿರುವ ಊರೊಂದರ ಒಟ್ಟು ಪರಿಸ್ಥಿತಿಯನ್ನು ಅರಾಜಕವಾಗಿ ಈ ಬರಹ ತೋರುತ್ತದೆ. ಯಾವ ಕೇರಿಗಳ ಪರವಾದ ವಕಾಲತ್ತುನ್ನೂ ಲೇಖಕಿ ಮಾಡುವುದಿಲ್ಲ. ರೂಪಾಂತಗೊಳ್ಳುತ್ತಿರುವ ವರ್ತಮಾನದ ಭಾರತದ ಪರಿಸ್ಥಿತಿಯನ್ನೂ ಭಾವಿಸುವ ಕಾದಂಬರಿಯು ತಾನುಂಟು ತನ್ನ ನಿರೂಪಣೆ ಉಚಿಟು ಎಂಬ ಅಪಾಯಕಾರಿ ಧೋರಣೆಯಲ್ಲಿ ಸಾಗುತ್ತದೆ. ಆಗಾಗ ನಿರೂಪಕಿ ತನ್ನ ದೊಡ್ಡಪ್ಪನ ಪ್ರಜ್ಞೆಯಲ್ಲಿ ಕಥೆಹೇಳಲು ಪ್ರಯತ್ನಿಸುವರಾದರೂ ಅದನ್ನು ವಿಸ್ತರಿಸದೆ ಕೊನೆಕೊನೆಗೆ ಇದು ಯಾರದೊ ಒಬ್ಬರ ಕಥೆ ಎಂಬ ಅನಾಮಿಕ ಸಂಬಂಧವನ್ನು ತಲುಪುತ್ತದೆ. ತಾನೇ ಹುಟ್ಟಿಸಿ ಬೆಳೆಸಿದ ಪಾತ್ರಗಳನ್ನು ಕಥೆಗಳನ್ನು ನಿರೂಪಕರೇ ಕೈಬಿಟ್ಟು ಕೈ ತೊಳೆದುಕೊಳ್ಳುವಂತೆ ಕಥೆ ಮುಗಿಸಿದರೆ ಹೇಗೆ ಎಂಬ ಪ್ರಶ್ನೆಗಳು ಕಾದಂಬರಿಯ ಉದ್ದಕ್ಕೂ ಎದುರಾಗುತ್ತವೆ. ಒಬ್ಬ ಅಪ್ಪಟ ಹೊಲೆಮಾದಿಗರ ಹೆಣ್ಣು ಮಗಳು ದಲಿತ ಸಂವೇದನೆಯನ್ನು ಆಳವಾಗಿ ಆವಾಹಿಸಿಕೊಂಡು ಬರೆದರೆ ಅವರು ಕುಸುಮಬಾಲೆಗಿಂತಲೂ ವಿಭಿನ್ನವಾದ ಕಾದಂಬರಿಯನ್ನು ಬರೆಯಬಲ್ಲರು ಎಂಬುದು ನನ್ನ ಪ್ರಮೇಯವಾಗಿತ್ತು. ದಲಿತ ಲೇಖಕಿಯರಿಗಿಂತ ದಲಿತ ಲೇಖಕರೇ ತಾಯ್ತನವನ್ನು, ಅಂತಃಕರಣವನು ಅತ್ಯಂತ ಸಮರ್ಥವಾಗಿ ಬರೆದಂತಿದೆ. ಮೂಕಜ್ಜಿಯ ಕನಸುಗಳನ್ನಾದರೂ ದಲಿತ ಲೇಖಕಿಯರು ಇನ್ನೂ ಯಾಕೆ ಬರೆದಿಲ್ಲ ಎಂಬುದು ಕೊರತೆಯಾಗಿಯೇ ಉಳಿದಿದೆ. ಸ್ವತಃ ಸುವರ್ಣ ಅವರ ಸ್ತ್ರೀತ್ವದ ಗುಣ ಈ ಕಾದಂಬರಿಯ ನಿರೂಪಣೆಯಲ್ಲಿ ವ್ಯಕ್ತವಾಗುತ್ತಿದೆಯಾ ಎಂದು ನೋಡಿದರೆ ಅದು ಕೂಡ ಮಸುಕಾಗಿದೆ. ಕಳೆದು ಹೋಗುತ್ತಿರುವ ಕಾಲ, ನಲುಗಿ ಹೋಗುತ್ತಿರುವ ವರ್ತಮಾನ, ಮಸುಕಾಗಿರುವ ನಾಳೆಗಳ ಕುರಿತು ಯಾವುದೇ ಕಥೆಯನ್ನು ಹೇಳುತ್ತಿರುವಾಗ ಲೇಖಕರಿಗೆ ಒಂದು ಬಗೆಯ ದಿವ್ಯ ದುಃಖವೋ, ದಿವ್ಯವಾದ ಒಂದು ಮುಕ್ತಿಯ ಬೆಳಕೋ ಕಾಣಲೇ ಬೇಕು. ಲೇಖಕಿ ಒಂದು ಊರಿನ ಕಥೆ ಹೇಳುವಾಗ ನಿರುಮ್ಮಳವಾಗಿ ತನಗೆ ಕಂಡ ಕಥೆಯನ್ನು ಮಾತ್ರ ಹೇಳುವೆ ಎಂಬAತೆ ಕಥೆ ಬೆಳೆಸುವುದು ವಿಷಾದ ಹುಟ್ಟಿಸಿತು.

ಈ ಲೇಖಕಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನೇ ಬರೆಯಬೇಕು ಎಂದು ನಾನು ಎಷ್ಟೇ ಸಲ ಅಂದುಕೊಂಡರೂ ಸಾಧ್ಯವಾಗದ್ದಕ್ಕೆ ನನ್ನ ಬಗ್ಗೆ ನನಗೇ ಸಿಟ್ಟಾಗುತ್ತದೆ. ಒಂದು ಕಲಾಕೃತಿಯು ಬಣ್ಣಗಳ ಮಾಂತ್ರಿಕ ಸಮಾಗಮದಿಂದ ಸಾಧ್ಯವಾಗುತ್ತದೆ. ಬರಿದೆ ಬಣ್ಣಗಳು ಬೆರೆತರೆ ಕಲೆ ಅಲ್ಲ. ಆ ಬಣ್ಣಗಳಿಗೆ ಜೀವ ಬರುವುದು ಯಾವ ಬಣ್ಣವನ್ನು ಹೇಗೆ ಎಲ್ಲಿ ಎಷ್ಟರಮಟ್ಟಿಗೆ ,ಯಾವ ಉದ್ದೇಶಕ್ಕೆ ಯಾವ ಸಂವೇದನೆಯಲ್ಲಿ ಕಾಲ ದೇಶಗಳ ಹಂಗುತೊರೆದು ಲೀನವಾಗಿಸುತ್ತೇವೆ ಎಂಬುದರಿಂದ ಬಣ್ಣಗಳು ಲೋಕದ ಮಾಯಾ ರೂಪವನ್ನು ತಾಳುತ್ತವೆ. ಒಂದು ಶಿಲ್ಪವು ಧ್ಯಾನದಲ್ಲಿ ಕಡೆಯಲ್ಪಡುತ್ತದೆ. ಮಣ್ಣಿನ ಮುದ್ದೆಯೊಂದು ಕಾಲಚಕ್ರದ ಚಲನೆಯನ್ನು ಅನುಸರಿಸಿ ಭಾವದ ಎರಕವಾಗುತ್ತದೆ. ನಾದ ಒಂದು ನಾಭಿಯ ದನಿಯಾಗಬೇಕಾದರೆ ಅಂತಃಕರಣದ ದನಿಯು ಮಾರ್ದನಿಯಾಗಬೇಕಾಗುತ್ತದೆ. ಇಟ್ಟ ಹೆಜ್ಜೆ ಒಂದು ಪಥವಾಗಬೇಕಾದರೆ, ಆ ಹೆಜ್ಜೆಯ ಒಳಗೆ ಜನಾಂಗದ, ದೇಶ ಕಾಲದ ಪಯಣದ ಸಿದ್ಧತೆ ಇರಬೇಕಾಗುತ್ತದೆ ಕಲೆ ಎಂದರೆ ಅದ್ಹೇನೇನೂ ಅಲ್ಲ. ನೋಡಿದವರು, ಆಲಿಸಿದವರು, ಮುಟ್ಟಿದವರು, ಗ್ರಹಿಸಿದವರು, ಓದಿದವರು ಈ ಅನುಭವ ತಮ್ಮದೆಂದು ಭಾವಿಸಿ ಅಂತರ್ಗತಿಸಿಕೊಳ್ಳಬೇಕಾದ ಸ್ಥಿತಿಯನ್ನು ತಲುಪಬೇಕು. ಅದೇ ಕಲೆ, ಕಲಾತ್ಮಕತೆ, ದಿವ್ಯತೆ ಹಾಗೆಯೇ ಅತೀತವಾದ ಒಂದು ಭಾವನೆ. ಇದನ್ನೆಲ್ಲ ಭಾವಿಸಿ ಸುವರ್ಣ ಅವರ ಈ ಕಾದಂಬರಿಯ ಮೌಲ್ಯಮಾಪನ ಮಾಡುತ್ತಿಲ್ಲ ಅವರಿನ್ನೂ ಚಿಕ್ಕವರು. ದೊಡ್ಡವರಿಗಿಂತಲೂ ಚಿಕ್ಕವರಿಗೆ ದೊಡ್ಡಶಕ್ತಿ. ಸಾಹಿತ್ಯ ಕಥನವೂ ಒಂದು ನ್ಯಾಯಾಲಯದ ನಿರೂಪಣೆ ಇದ್ದಂತೆ. ನಾವು ನಮ್ಮ ಅಹವಾಲುಗಳನ್ನು ಇಲ್ಲಿ ಮಂಡಿಸುತ್ತೇವೆ. ಸುಳ್ಳು ಹೇಳಿಯೂ ನ್ಯಾಯವನ್ನು ಪಡೆಯಲು ಸಾಧ್ಯವಿದೆ ಆದರೆ ಯಾರು ಯಾವ ಬಗೆಯಲ್ಲಿ ಸುಳ್ಳುಗಳನ್ನು ಸ್ಥಾಪಿಸುತ್ತಾರೆ ಎಂಬುದು ಓದುಗರಿಗೆ ಗೊತ್ತಾಗಿ ಬಿಡುತ್ತದೆ. ಸಾಹಿತ್ಯವು ಜನತೆಯ ನ್ಯಾಯಾಲಯದ ಸಾಕ್ಷಿ ಪ್ರಜ್ಞೆಯಲ್ಲಿ ನಡೆಯುತ್ತದೆ. ಹೀಗಾಗಿ ಸಾಹಿತ್ಯ ಸೃಷ್ಟಿಯ ಜವಾಬ್ದಾರಿಯು ಮನುಕುಲದ ನೀತಿಯ ಹಾದಿಯನ್ನು ಅನುಸರಿಸಿಯೇ ನಡೆಯಬೇಕಾಗುತ್ತದೆ.ದೂರದ ಸಂಗತಿಗಳನ್ನು ಸುವರ್ಣ ಅವರ ಕಾದಂಬರಿಯ ಹಿನ್ನೆಲೆಯಲ್ಲಿ ಹೇಳುತ್ತಿಲ್ಲ. ಯಾವುದೂ ದೂರದ ಸಂಗತಿಯೂ ಅಲ್ಲ, ಹತ್ತಿರದ ಸಂಗತಿಯೂ ಅಲ್ಲ, ಹೊರಗಿನ ಸಂಗತಿಯೂ ಅಲ್ಲ ಒಳಗಿನ ಸಂಗತಿಯೂ ಅಲ್ಲ, ಕಾಲದ ಚಲನೆಯಲ್ಲಿ ಎಲ್ಲವೂ ತಕ್ಕಮಟ್ಟಿಗಾದರೂ ಚಲನೆಗೆ ಒಳಪಟ್ಟಿವೆ.

ಚನ್ನಾಪುರದ ದಿಕ್ಕುತಪ್ಪಿದ ಕಥೆಯನ್ನು ಹೇಳುವ ಸುವರ್ಣ ಅವರು ಸರಳತೆಯನ್ನೇ ಸಂಕೀರ್ಣವಾಗಿ ನಿರೂಪಿಸಲು ಯತ್ನಿಸಿದಂತಿದೆ. ಕಾದಂಬರಿಯ ಕೊನೆ ಗಳಿಗೆಯಲ್ಲಿ ಜಾತಿಗಳ ಸ್ಥಳಿಯ ರಾಜಕಾರಣವನ್ನು ಕೌಟುಂಬಿಕ ಪಲ್ಲಟಗಳ ಮೂಲಕ ವಿವರಿಸಲು ಹಾತೊರೆಯುವ ಕಾದಂಬರಿಯು ಲಲಿತ ಎಂಬ ಹೆಣ್ಣುಮಗಳ ವಿಚ್ಛೇದನದ ಆಘಾತದ ಮೂಲಕ ಮುಗಿಯುತ್ತದೆ. ಹಳ್ಳಿಯ ಹಲವಾರು ಪಾತ್ರಗಳ ಬಿಡಿ ವಿವರಗಳನ್ನು ಜೋಡಿಸುತ್ತಾ ಕಾದಂಬರಿಯ ಕಥೆಗೆ ಒಟ್ಟಂದದ ಒಂದು ದುರಂತ ಪ್ರಜ್ಞೆಯನ್ನು ಕೊಡಿಸಲು ಲೇಖಕಿ ಯತ್ನಿಸಿದಂತಿದೆ. ಹೆಂಗಸರ ಜಗಳಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಲೇಖಕಿ ನನ್ನ ಅನುಭವಕ್ಕೆ ಬಂದಂತೆ ಅತ್ಯಂತ ಮಮಕಾರದ , ತ್ಯಾಗ ಭಾವದ ಹೆಣ್ಣುಮಗಳು. ಅತ್ಯಂತ ಸಂಕೀರ್ಣ ಸ್ವಭಾವದ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್ ಅವರ ಕೈಹಿಡಿದು ಮುನ್ನಡೆದಿರುವ ಸುವರ್ಣ ಅವರಿಗೆ ಅತ್ಯುತ್ತಮವಾದ ಕಾದಂಬರಿ ಒಂದನ್ನು ಮುಂದೆ ಮುನ್ನೆಡೆಸಲು ಕಷ್ಟವಾಗದು ಅವರ ಈ ಕಾದಂಬರಿಯನ್ನೂ ಓದಿ ಮುಗಿಸಿದ ಹಲವು ದಿನಗಳ ನಂತರಕ್ಕೆ ಅನಿಸಿದ್ದ ನ್ನು ಯಾವ ಮುಲಾಜೂ ಇಲ್ಲದೆ ಬರೆದಿರುವೆ. ಅದರಿಂದಾಗಿ ಏನಾದರೂ ನನ್ನಿಂದ ಲೋಪ ಆಗಿದ್ದರೆ ಲೇಖಕಿ ಮನ್ನಿಸಬೇಕು. ಸುಧಾರಣೆಗೆ ಸದ್ದಿಲ್ಲದೆ ಒಳಗಾಗುತ್ತಿರುವ ಹೊಲಗೇರಿ ಒಂದರ ಕಥೆಯನ್ನು ಜಾತ್ಯಾತೀತವಾಗಿ ನಿರೂಪಿಸುತ್ತಿರುವ ಸುವರ್ಣ ನಿಸ್ಸಂದೇಹವಾಗಿ ಮುಂದೆ ಅತ್ಯುತ್ತಮ ಕಾದಂಬರಿಗಳನ್ನು ಬರೆಯುವರು ಎಂದು ಆಶಿಸುವೆ. ಇದರಿಂದಾಗಿ ಕನ್ನಡ ಕಥನ ಪರಂಪರೆ ಜಾತಿಗಳ ಹಂಗಿಲ್ಲದೆ ಬೆಳೆಯಲಿ .

‍ಲೇಖಕರು sreejavn

January 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: