ಕನ್ನಡಿ ಕಲಿಸಿದ ಡೆಮೋಕ್ರಾಟಿಕ್‌ ಪಾಠ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ. ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. 

ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

ಈಗಲೂ ನಾನು ಮನೆಯಿಂದ ಹೊರಗೆ ಹೋಗಬೇಕಾದರೆ ಒಂದು ಸರ್ತಿ ಮುಖ ನೋಡಿಕೊಂಡು, ನೆತ್ತಿಯ ಮೇಲೆ ಇನ್ನೂ ಇರುವ ನಾಲ್ಕೈದು ಕೂದಲನ್ನು ಓರಣ ಮಾಡಿಕೊಳ್ಳುವುದು ಅಪ್ಪ ನಲವತ್ತೈದು ವರ್ಷಗಳ ಹಿಂದೆ ತಂದಿದ್ದ ಕನ್ನಡಿಯ ಮುಂದೆ. ಹಾಗೆ ಕನ್ನಡಿಯನ್ನು ನೋಡಿ ಒಮ್ಮೆ ಮುಗುಳ್ನಕ್ಕು ಹೊರಟರೆ ಒಂಥರಾ ಸಮಾಧಾನ. ʼಅಲಂಕಾರ ಮುಗಿಯಿತುʼ ಅಂತ ನನ್ನ ಹೆಂಡತಿ ಘೋಷಿಸಬೇಕು. 

ಆ ಕನ್ನಡಿ ನನಗೊಂದು ಚಾರಿತ್ರಿಕ ಘಟನೆ. ಅಷ್ಟೇ ಅಲ್ಲ ಅದೊಂದು ಡೆಮೋಕ್ರಾಟಿಕ್‌ ಪಾಠ ಕಲಿಸಿದ ನೆನಪು. ಮಕ್ಕಳ ಹಕ್ಕುಗಳ ತರಬೇತಿ ನಡೆಸುವಾಗ ʼಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿಯ ಹಕ್ಕು ನಂತರದ ಭಾಗವಹಿಸುವ ಹಕ್ಕು ಚರ್ಚೆಗೆ ತೆಗೆದುಕೊಂಡಾಗ ವಿವರಿಸುವ ಪ್ರಸಂಗʼ.

ʼನಿಮ್ಮ ಮನೆಗಳಲ್ಲಿ ಕನ್ನಡಿ ಇರುತ್ತದೆ. ಪುಟ್ಟದೋ ದೊಡ್ಡದೋ. ಅದನ್ನ ಎಲ್ಲಿ ತಗಲು ಹಾಕಿರುತ್ತೀರಿ.ʼ ಇದೇನು ಘನಂದಾರಿ ಪ್ರಶ್ನೆಯೇನು ಎಂಬಂತೆ ಎಲ್ಲರೂ ಉತ್ತರಿಸುತ್ತಾರೆ. ʼತಗಲು ಹಾಕೋದು ಗೋಡೆಗೆʼ ʼಸಾಮಾನ್ಯ ಎಷ್ಟು ಎತ್ತರದಲ್ಲಿ ಕನ್ನಡಿ ತಗಲು ಹಾಕಿರುತ್ತೀರಿʼ ನನ್ನ ತರಬೇತಿಗಳೆಲ್ಲಾ ಸಾಮಾನ್ಯವಾಗಿ ವಯಸ್ಕರೊಂದಿಗೆ. ಹೀಗಾಗಿ ಬರುವ ಉತ್ತರ ʼನಮ್ಮ ಎತ್ತರಕ್ಕೆ. ಮುಖ ಕಾಣುವಂತೆ…ʼ  

ನಮ್ಮ ಎತ್ತರಕ್ಕೆ, ನಮಗೆ ಕಾಣುವಂತೆ… ಆ ನಮಗೆ ʼಯಾರು?ʼ

ಆಯಾ ಗುಂಪಿನ ವಯಸ್ಸು, ಅನುಭವ, ಕಾಣ್ಕೆಯ ಹಿನ್ನೆಲೆಯಲ್ಲಿ ಸ್ವಲ್ಪ ಗೊಂದಲ, ಅನುಮಾನ, ಸರಿಯೋ ತಪ್ಪೋ ಸ್ವಯಂ ವಿಶ್ಲೇಷಣೆಯೊಂದಿಗೆ ಸಾಮಾನ್ಯವಾಗಿ ಸಿಗುವ ಪ್ರತಿಕ್ರಿಯೆ, ʼದೊಡ್ಡವರ ಎತ್ತರಕ್ಕೆʼ ಜೊತೆಗೊಂದಷ್ಟು ಜನ ಆಗಲೇ ರಕ್ಷಣಾತ್ಮಕ ಆಟ ಶುರು ಮಾಡಿಬಿಟ್ಟಿರುತ್ತಾರೆ.

ತೀರಾ ಕೆಳಗಾದರೆ ಮಕ್ಕಳು ಒಡೆದು ಬಿಡುತ್ತಾರೆ, ಹಾಳಾಗುತ್ತದೆ. ಅದಕ್ಕೆ ಸ್ವಲ್ಪ ಮೇಲಿರಬೇಕು. ಸ್ವಲ್ಪ ಎಂದರೆ ಅವರ ಕೈಗೆ ಸಿಗದಷ್ಟು ಎತ್ತಕ್ಕೆ. ಅವರು ಅದನ್ನು ಎಳೆದಾಡಿ, ಅದು ಒಡೆದು ಅವರಿಗೆ ಚುಚ್ಚಿದರೆ ನೀವೇ ಈಗ ತಾನೆ ಚರ್ಚೆ ಮಾಡಿದಿರಲ್ಲ ರಕ್ಷಣೆಯ ಹಕ್ಕು ಉಲ್ಲಂಘನೆ ಅಥವಾ ಮನೆಯನ್ನೂ ಮಕ್ಕಳ ಸುರಕ್ಷತೆಯ ಸ್ಥಳ ಮಾಡಬೇಕು ಎನ್ನುವ ವಿಚಾರಕ್ಕೆ ತೊಂದರೆಯಾಗಬಾರದೆಂದರೆ, ಕನ್ನಡಿ ಮಕ್ಕಳಿಂದ ದೂರವಿರಬೇಕು… ಇತ್ಯಾದಿ. 

ಅಷ್ಟು ಹೊತ್ತಿಗೆ ನಾನು ಕೆಲ ಕ್ಷಣಗಳಲ್ಲಿ ಒಂದು ಸುತ್ತು ನನ್ನ ಬಾಲ್ಯಕ್ಕೆ ಹೋಗಿ ಬಂದಿರುತ್ತೇನೆ.. 

ಆ ಹೊತ್ತು ಅಪ್ಪ ಮನೆಗೊಂದು ಕನ್ನಡಿ ತಂದರು. ನಾವು ಮಕ್ಕಳೆಲ್ಲಾ ಸಂಭ್ರಮದಿಂದ ಅಪ್ಪನ ಸುತ್ತ ನೆರೆದೆವು. ಕನ್ನಡಿಯ ಪ್ರಾಜೆಕ್ಟ್‌ ಮನೆಯಲ್ಲಿ ಸುಮಾರು ದಿನ ಚರ್ಚೆಯಲ್ಲಿತ್ತು. ಅಮ್ಮನ ಉಳಿತಾಯದ ಚಿಕ್ಕ ಗಂಟು ಅದಕ್ಕೆ ಎಂಬ ಬಗ್ಗೆಯೂ ಅಲ್ಪಸ್ವಲ್ಪ ಗೊತ್ತಿತ್ತು.

ಕನ್ನಡಿ ಮನೆಗೆ ಬರುವ ಮುಹೂರ್ತ ನನಗೆ ತಿಳಿದಿರಲಿಲ್ಲ. ಆದರೆ ಆ ದಿನ ಅಪ್ಪ ತನ್ನ ಸೈಕಲ್‌ಗೆ ತಗಲು ಹಾಕಿಕೊಂಡು ಬಂದಿದ್ದ ಚೀಲವನ್ನು ಜೋಪಾನವಾಗಿ ತೆಗೆದು ಒಳಗೆ ತಂದು ʼಲಕ್ಷ್ಮೀ ತೊಗೋʼ ಅಂತ ಅಮ್ಮನ ಕೈಗೆ ಕೊಟ್ಟು ಹೇಳಿದ್ದು ʼಭದ್ರ. ಕನ್ನಡಿʼ ಅಂತ ಹೇಳಿದಾಗ ತಟಕ್‌ ಅಂತ ಮನೆಯಲ್ಲಿ ಹರ್ಷೋದ್ಗಾರ. ನನ್ನ ಮೂರೂ ಜನ ಅಕ್ಕಂದಿರ ಮೊಗದಲ್ಲಿ ಮಿಂಚು. ಅಮ್ಮನ ಮೊಗದಲ್ಲೂ ಒಂದು ಸಮಾಧಾನದ ನಗು.

ಈಗಲೇ ಕನ್ನಡಿ ತೋರಿಸಬೇಕೆಂಬ ನಮ್ಮ ಒತ್ತಾಯ ಬೇರೆ. ತನಗೆ ಕೈಕಾಲು ಮುಖ ತೊಳೆಯಲು ಬಿಡಬೇಕೆಂದೂ, ಆಮೇಲೆ ಕನ್ನಡಿ ತೆಗೆದು ತೋರಿಸುವುದಾಗಿ ಅಪ್ಪನ ಮಾತು. ನಾವು ಬಿಡುತ್ತೇವೆಯೇ. ಅಮ್ಮ ಸಣ್ಣದಾಗಿ ಗದರಿದ ಮೇಲೆ ಎಲ್ಲ ಹಿಂದೆ ನಿಂತೆವು. 

ಆಗ ತುರ್ತು ಪರಿಸ್ಥಿತಿಯ (ಜೂನ್‌ ೧೯೭೫-ಮಾರ್ಚ್‌ ೧೯೭೭) ಅವಧಿ. ಮಾರುಕಟ್ಟೆಯಲ್ಲಿ ಬೇಕಿದ್ದೆಲ್ಲಾ ಸಿಗುತ್ತಿರಲಿಲ್ಲ ಎಂದು ಕೇಳಿದ್ದೆ. ಕನ್ನಡಿಯೂ ಸಿಗುತ್ತಿರಲಿಲ್ಲವೆ, ಕನ್ನಡಿಯೇನು ಐಶಾರಾಮಿ ವಸ್ತುವೆ? ನಮ್ಮ ಮನೆಗೆ ತರಬಹುದಾದ ಕನ್ನಡಿಯೇನೂ ಹೊರ ದೇಶದಿಂದ ಆಮದಾಗುತ್ತಿರಲಿಲ್ಲವೇನೋ. ಗೊತ್ತಿಲ್ಲ. ಆಗೆಲ್ಲಾ ಬೆಲ್ಜಿಯಂ ಗ್ಲಾಸ್‌ ಎಂದರೆ ಅದೊಂದು ಸ್ಟಾಂಡರ್ಡ್‌! ಆಗ ಅಪ್ಪ ತಂದದ್ದು ಬೆಲ್ಜಿಯಂ ಗ್ಲಾಸೋ ಎಲ್ಲಿಯದೋ ಗೊತ್ತಿಲ್ಲ. ಆದರೆ ಆಗ್ಗೆ ಆ ಕನ್ನಡಿಯ ಬೆಲೆ ನಮ್ಮ ಮನೆಗೆ ಸ್ವಲ್ಪ ಬೆಲೆ ಬಾಳುವ ವಸ್ತು ಅನ್ನುವಷ್ಟು ಅರಿವಾಗಿತ್ತು. 

ಅಪ್ಪ ಶುಭ್ರರಾಗಿ, ಪಂಚೆ ಉಟ್ಟು, ಅಮ್ಮ ಕೊಟ್ಟ ಚಿಕ್ಕ ತಿಂಡಿ ತಿಂದು, ಕಾಫಿ ಕುಡಿದು… ಓ, ಆ ದಿನ ಅದೆಷ್ಟು ಹೊತ್ತು ಮಾಡಿದರೆಂದರೆ ಸಮಯ ನಿಂತು ಹೋಯಿತೋ, ಅಥವಾ ಕನ್ನಡಿಯ ದರ್ಶನವಾಗದೆಯೇ ದಿನ ಮುಗಿದು ಹೋಗುತ್ತದೋ ಎನ್ನುವಂತಾಗಿತ್ತು. ಅಂತೂ ಇಂತೂ ಅಪ್ಪ ಎದ್ದರು.

ನಿಧಾನವಾಗಿ ಕನ್ನಡಿಯ ಬಾಕ್ಸ್‌ಗೆ ಸುತ್ತಿದ್ದ ಕಾಗದ ಬಿಚ್ಚಿದರು. ಬಾಕ್ಸ್‌ನಿಂದ ಜತನವಾಗಿ ಕನ್ನಡಿ ಹೊರತೆಗೆದರು. ಫಳಫಳ ಹೊಳೆಯುವ ಕನ್ನಡಿ. ನಮ್ಮ ಮನೆಯಲ್ಲಿ. ಅದೆಂತಹ ರೋಮಾಂಚಕ ಕ್ಷಣ. ನನಗೆ ಜ್ಞಾಪಕ ಇರುವಂತೆ, ನನಗೆ ಮೊದಲು ಹೊಳೆದದ್ದು ಆ ಅರ್ಧ ಮೊಳ ಉದ್ದ, ಒಂದು ಮೊಳ ಅಗಲದ ಆ ಕನ್ನಡಿಯಲ್ಲಿ ಇಬ್ಬರು ಮೂವರು ಒಟ್ಟಿಗೆ ನೋಡಿಕೊಳ್ಳಬಹುದು!

ನನಗೆ ಅನಿಸಿದ ಇನ್ನೊಂದು ಸಂಗತಿ, ಅದರಲ್ಲಿ ಆ ಕನ್ನಡಿಯಲ್ಲಿ ನಾವೆಲ್ಲ ಇರಲಿ ಇಡೀ ಮನೆಯೇ ಕಾಣುತ್ತಿದೆಯೆಲ್ಲ… ನನ್ನ ಮಾತಿಗೆ ಅಕ್ಕಂದಿರು, ಅಮ್ಮ ಅಪ್ಪ ನಕ್ಕಿದ್ದರೋ ಇಲ್ಲವೋ ತಿಳಿಯದು. ಆದರೆ ನನಗೆ ಮಾತ್ರ ಈಗಲೂ ಆ ಮಾತು ನೆನಪಿನ ಭಂಡಾರದಲ್ಲಿ ಊರಿಕೊಂಡಿದೆ.

ಆಗಲೇ ಅಪ್ಪ ಕೇಳಿದ್ದು, ʼಕನ್ನಡಿ ಎಲ್ಲಿ ತಗಲು ಹಾಕಬೇಕುʼ. ತಟಕ್‌ ಎಂದು ಹೊಸ ಪ್ರಶ್ನೆ. ಪ್ರಾಯಶಃ ಇದನ್ನು ನಾವು (ನಾನು) ನಿರೀಕ್ಷಿಸಿರಲಿಲ್ಲ. ಈಗ ಸಮಾಲೋಚನೆಯ ಸುತ್ತು. ಎಲ್ಲಿ ಎಲ್ಲಿ ಎಲ್ಲಿ? ಮನೆಯ ಪಡಸಾಲೆ… ಊಹೂಂ… ನಮ್ಮ ಮನೆಯವರಲ್ಲದೆ ಬೇರೆಯವರು ಬಂದಾಗ ಸರಿ ಹೋಗುವುದಿಲ್ಲ. 

ಅಪ್ಪ ಅಮ್ಮನ ಒಳ ಕೋಣೆ… ಬೇಡ ಎಂದಾಯ್ತು. ಬಚ್ಚಲ ಮನೆಯ ಹತ್ತಿರದ ಗೋಡೆ… ಒಪ್ಪಿಗೆಯಾಗಲಿಲ್ಲ. ಕೊನೆಗೆ ಮಕ್ಕಳೆಲ್ಲಾ ಒಡನಾಡುವ ಪುಟ್ಟ ಕೋಣೆಯ ಬಾಗಿಲು ತಾಗದ ಗೋಡೆ ಎಂದು ನಿಶ್ಚಯವಾಯಿತು. ಅಪ್ಪ ಪೆನ್ಸಿಲ್‌ ತೆಗೆದುಕೊಂಡು, ನನ್ನ ಮೊದಲ ಅಕ್ಕನನ್ನು ಕರೆದು ನಿಲ್ಲಿಸಿಕೊಂಡು, ಅವಳೆದುರು ಗೋಡೆಯ ಮೇಲೆ ಕನ್ನಡಿಯಿಟ್ಟುಕೊಂಡು ಅದರ ಹುಕ್‌ ಗಳಿಗೆ ಸರಿ ಹೊಂದುವಂತೆ ಗುರುತು ಹಾಕಿ, ಮೊಳೆ ಹೊಡೆದು ಕನ್ನಡಿ ತಗಲು ಹಾಕಿದರು. ಮುಗಿಯಿತಲ್ಲ ಕನ್ನಡಿ ಹಾಕುವ ಸಂಭ್ರಮ. 

ಇಲ್ಲ! ಏನೋ ನನಗರ್ಥವಾಗದ ಬಿಗುವೋ, ಅಸಮಾಧಾನವೋ ಆಗಲೇ ಸುಳಿದಿತ್ತು. ನಿಜ ಹೇಳ್ತೇನೆ ನನಗೆ ಆಗ ಗ್ರಾಹ್ಯವಾಗಿರಲಿಲ್ಲ. ನನ್ನ ಎರಡನೇ ಅಕ್ಕ ಅದೇನೋ ಹೇಳಿದಳು. ಅಪ್ಪ ಏನೋ ಹೇಳುತ್ತಾ ಕನ್ನಡಿಯ ಮುಂದೆ ಬಗ್ಗಿ ನೋಡಿ ತಲೆ ಬಾಚಿಕೊಂಡದ್ದು, ಬಹುಶಃ ಅಕ್ಕ ಸಿಟ್ಟು ಮಾಡಿಕೊಂಡು ಕೋಣೆಯಿಂದ ಆಚೆ ಹೋದದ್ದು ಆಯಿತು. ನಾನೂ ನನ್ನ ಮೂರನೇ ಅಕ್ಕನೂ ಸುಮ್ಮನೇ ನೋಡುತ್ತಿದ್ದೆವು. ಅಮ್ಮ ಏನೋ ಹೇಳುತಿದ್ದರು. 

ಎಷ್ಟೋ ವರ್ಷಗಳ ನಂತರ, ಪ್ರಾಯಶಃ ನಾನು ಮಕ್ಕಳ ಹಕ್ಕುಗಳ ಬಗ್ಗೆ ಚರ್ಚೆ, ಅಧ್ಯಯನ ಮಾಡುವ ಕಾಲಕ್ಕೆ ಅಷ್ಟು ಹಿಂದಿನ ಆ ಬಾಡಿ ಲಾಂಗ್ವೇಜ್‌ ಅರ್ಥ ಪಡೆದುಕೊಂಡಿತ್ತು. ʼನನಗೆ ಕಾಣಲ್ಲʼ ಎರಡನೇ ಅಕ್ಕನ ಮಾತು, ʼನಾನು ಬಗ್ಗಿ ನೋಡಬೇಕುʼ ಅಪ್ಪ, ʼನಾನೂ, ಅಮ್ಮನೂ ಬಗ್ಗಿ ನೋಡಬೇಕು. ಅವಳಿಗೆ (ಮೊದಲನೇ ಅಕ್ಕನಿಗೆ) ಎಟಕಬೇಕು ಎಂದರೆ ಕನ್ನಡಿ ಅಷ್ಟು ಎತ್ತರಕ್ಕಿರಬೇಕುʼ.

ಆಗಲೇ ೧೫-೧೬ ವರ್ಷದ ಆಸುಪಾಸಿನಲ್ಲಿದ್ದ ಮೊದಲನೇ ಅಕ್ಕ ಅಷ್ಟು ಎತ್ತರವಿರಲಿಲ್ಲ. ಎರಡನೇ ಅಕ್ಕ ಸ್ವಲ್ಪ ಎತ್ತರವಿದ್ದಳು, ನಾವಿನ್ನೂ ಬೆಳೆಯುತ್ತಿದ್ದವರು. ಅಪ್ಪನಿಗೆ ಮಕ್ಕಳ ಹಕ್ಕುಗಳ ಬಗ್ಗೆ ತಿಳಿದಿತ್ತೋ ಇಲ್ಲವೋ, ಆದರೆ ಮಕ್ಕಳೊಡನೆ ಮಾತನಾಡುವ, ಅಭಿಪ್ರಾಯ ಕೇಳುವ ವ್ಯವಧಾನವಿತ್ತಲ್ಲ, ಜೊತೆಗೆ ಸರ್ವರಿಗೂ ಸಮಬಾಳು, ಸಮಪಾಲು ಎನ್ನುವುದನ್ನು ಜಾರಿಗೆ ತರುವ ಡೆಮೋಕ್ರಾಟಿಕ್‌ ಮನೋಭಾವವಿತ್ತಲ್ಲ ಎನ್ನುವುದು ಅಂದಿನ ನನ್ನ ಅಚ್ಚರಿ. 

ಮಕ್ಕಳೊಡನೆ ಮಾಹಿತಿ, ವಿಚಾರ ಹಂಚಿಕೊಂಡು ಚರ್ಚೆ ಮಾಡುವುದು ಅವರ ಅಭಿಪ್ರಾಯಗಳನ್ನು ಆಲಿಸುವುದು, ಅವುಗಳಿಗೆ ಬೆಲೆ ಕೊಡುವುದು, ಮಕ್ಕಳಿಗೆ ಅನುಕೂಲಗಳನ್ನು ಮಾಡಿಕೊಡುವುದು ಬಹಳ ಉನ್ನತವಾದ ಗುಣ. ಆರಂಭದಿಂದಲೂ ಮಕ್ಕಳಿಗೆ ಪ್ರಶ್ನೆ ಮಾಡುವ, ಉತ್ತರಗಳನ್ನು ಕಂಡುಕೊಳ್ಳುವ, ಚರ್ಚೆಗಳಲ್ಲಿ ಸಮರ್ಥವಾಗಿ ಭಾಗವಹಿಸುವ ಅವಕಾಶಗಳು ದೊರಕಿದ್ದೇ ಆದಲ್ಲಿ ಅಂತಹ ಮಕ್ಕಳು ಮುಂದೆ ಪ್ರಜಾಪ್ರಭುತ್ವ ತತ್ತ್ವಗಳನ್ನು ಮೈಗೂಡಿಸಿಕೊಳ್ಳುತ್ತಾರೆ.

ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯ರ ಪರಿಚ್ಛೇದ ೧೨ ʼಮಕ್ಕಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕುʼ ಖಾತರಿ ಪಡಿಸುತ್ತದೆ. ವಿಶ್ವಸಂಸ್ಥೆ ಹೇಳುವುದು, ಮಕ್ಕಳು ನ್ಯಾಯಾಲಯದಲ್ಲಿ, ಆಡಳಿತಾತ್ಮಕ ವಿಚಾರಗಳಲ್ಲಿ ಮತ್ತು ವಿವಿಧ ಮಂಡಳಿಗಳ ಎದುರು ತಮ್ಮ ಅಭಿಪ್ರಾಯಗಳನ್ನು ಹೇಳಲು ಸರ್ಕಾರವು ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು ಎಂದು.

ಆದರೆ ಬಹಳಷ್ಟು ಮನೆಗಳಲ್ಲಿ, ಶಾಲೆಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಅಭಿಪ್ರಾಯವಿರಲಿ ಮಾತನಾಡಲೂ ಅವಕಾಶ ಮಾಡಿಕೊಡುವುದಿಲ್ಲ. ಇನ್ನು ೧೮ ವರ್ಷ ಆದ ಕೂಡಲೇ ಸಂವಿಧಾನದತ್ತವಾದ ಪರಿಚ್ಛೇದ ೧೯(ಜಿ)ಎ ಹೇಳಿರುವಂತೆ ʼಮಾತನಾಡುವ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕುʼ ಬಳಸಿ ಎಂದು ಪರಿಚ್ಛೇದ ೩೨೬ರಂತೆ ಮತ ಚಲಾವಣೆಗೆ ಕರೆತರುತ್ತದೆ. ಹಾಗೆಂದು ಮಕ್ಕಳ ಮಾತು ಎಂದು ಅವರು ಕೇಳಿದ್ದಕ್ಕೆಲ್ಲಾ ತಲೆಯಾಡಿಸುವುದಲ್ಲ. ಪೋಷಕರ ಇತಿಮಿತಿ, ಸಾಧ್ಯತೆ ಹಾಗೆಯೇ ಸರ್ಕಾರದ ಸಾಧ್ಯತೆಗಳು ಇವೆಲ್ಲವನ್ನೂ ಇಲ್ಲಿ ಗಮನಿಸಬೇಕಿದೆ.

ಉದಾಹರಣೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಜಿಲ್ಲಾ ಮಕ್ಕಳ ನ್ಯಾಯ ಮಂಡಳಿಗಳ ಕೆಲಸಗಳ ಅನುಭವವನ್ನು ಹೇಳಬಹುದು. ಮೊದಮೊದಲು ಮಕ್ಕಳ ಅಭಿಪ್ರಾಯಗಳಿಗೆ ಅವಕಾಶವೇ ಇಲ್ಲವೆನ್ನುತ್ತಿದ್ದ ಆಡಳಿತ ಮತ್ತು ನ್ಯಾಯ ವ್ಯವಸ್ಥೆ ೧೯೯೨ರ ನಂತರ ಒಂದಷ್ಟು ದೊಡ್ಡ ಮನಸ್ಸು ಮಾಡಿದೆ.

ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ, ದಂಪತಿಗಳ ವಿಚ್ಛೇದನ ಸಂದರ್ಭ ಬಂದರೆ, ಫಾಸ್ಟರ್‌ ಕೇರ್‌ ಮತ್ತು ದತ್ತುವಿಗೆ ಸಂಬಂಧಿಸಿದಂತ ಪ್ರಕ್ರಿಯೆಗಳಲ್ಲಿ ಸಂಬಂಧಿಸಿದ ನ್ಯಾಯಾಧಿಕಾರಿಗಳು ಮಕ್ಕಳ ಅಭಿಪ್ರಾಯ ಕೇಳುತ್ತಿದ್ದಾರೆ. ಅದನ್ನು ಸೂಕ್ತವಾಗಿ ನಿರೂಪಿಸುವ ಯತ್ನ ಮಾಡುತ್ತಾರೆ.

ಮಕ್ಕಳಿಗೆ ಸೂಕ್ತವಾಗುವಂತೆ ವ್ಯವಸ್ಥೆಗಳನ್ನು ಮಾಡಬೇಕೆಂದರೆ ಮಕ್ಕಳೊಡನೆ ಮಾತನಾಡಬೇಕು ಅವರಿಗೆ ಮಾಹಿತಿ ನೀಡಬೇಕು ಆ ನಂತರ ಅವರ ಅಭಿಪ್ರಾಯಗಳನ್ನು ಆಲಿಸುವ ಮನಸ್ಸನ್ನೂ ಬೆಳೆಸಿಕೊಳ್ಳಬೇಕು. ಇದನ್ನು ಕರ್ನಾಟಕದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ (೨೦೦೬ರಿಂದ) ಮತ್ತು ಮಕ್ಕಳ ಸಂಸತ್‌ (೨೦೧೧ರಿಂದ) ಗಳಲ್ಲಿ ಜಾರಿಗೆ ತಂದು ಸಮರ್ಥವಾಗಿ ಬಳಕೆ ನಡೆದಿದೆ.

ಮಕ್ಕಳಿಗೆ ಅರ್ಥವಾಗುವಂತಹ, ಅನುಕೂಲಕರವಾದ, ಎಟಕುವಂತಹ, ಎತ್ತರದಲ್ಲಿ ಎಂದ ಕೂಡಲೇ ನನಗೆ ಈಗಲೂ ನೆನಪಿಗೆ ಬರುವುದು ಪುರುಷರ ಮೂತ್ರಾಲಯಗಳಲ್ಲಿರುವ ಬೇಸಿನ್‌ಗಳ ಎತ್ತರ. ಹೊಟೇಲ್‌, ಸಮಾರಂಭಗಳು ನಡೆಯುವ ಸಭಾಭವನಗಳಲ್ಲಿ ಕೈತೊಳೆಯಲಿರುವ ವಾಷ್‌ ಬೇಸಿನ್‌ ಮತ್ತು ಈಗಿನ ಆರ್ಡರ್‌ ಆಗಿರುವ ಡೈನಿಂಗ್‌ ಟೇಬಲ್‌!

ಈಗೀಗ ಒಂದಷ್ಟು ಕಡೆ ಮಕ್ಕಳಿಗೆಂದು ಮೂತ್ರಾಲಯದ ಕೆಲವು ಬೇಸಿನ್‌ಗಳನ್ನು, ಕೆಲವು ಕಡೆ ಒಂದೆರೆಡು ವಾಷ್‌ ಬೇಸಿನ್‌ಗಳು ಕೆಳ ಮಟ್ಟದಲ್ಲಿ ಜೋಡಿಸಿರುತ್ತಾರೆ. ಡೈನಿಂಗ್‌ ಟೇಬಲ್‌ ಎದುರು ತಾವೂ ಸ್ವತಂತ್ರವಾಗಿಯೇ ಕೂರಬೇಕೆಂದು ಅಪೇಕ್ಷಿಸುವ ಮಕ್ಕಳಿಗೆ ಜನರೇ ಕಂಡುಕೊಂಡಿರುವ ಸರಳ ಉಪಾಯವಿದೆ. ಒಂದೆರೆಡು ಛೇರ್‌ಗಳನ್ನು ಒಂದರ ಮೇಲೊಂದರಂತೆ ಹಾಕಿದರಾಯಿತು. ದೊಡ್ಡವರ ಮಟ್ಟಕ್ಕೆ ಮಕ್ಕಳೂ ಊಟ ಮಾಡಲು ಏರುತ್ತಾರೆ!

ಶಾಲೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಎಟುಕುವ ವಾಶ್ ಬೇಸಿನ್, ಪುಟ್ಟದಾದ ಕಕ್ಕಸ್ಸು ಮಾಡುವ ಗುಂಡಿ/ಕಮೋಡ್, ಡೆಸ್ಕ್ ಟೇಬಲ್, ಇತ್ಯಾದಿಗಳನ್ನು ವಿನ್ಯಾಸ ಮಾಡುವ ಮತ್ತು ಬಳಕೆಗೆ ತರುವವರ ಬಗ್ಗೆ ಪ್ರೀತಿಯಾಗುತ್ತದೆ. 

ಆದರೆ, ಮಕ್ಕಳ ಎತ್ತರಕ್ಕೆ ತಕ್ಕುದಾದ ಯಂತ್ರಗಳನ್ನು ನಿರ್ಮಿಸಿ ಮಕ್ಕಳನ್ನು‌ ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳುವಂತಹ ವ್ಯವಸ್ಥೆ ಮಾಡಿದವರ ಬಗ್ಗೆ ಏನು ಹೇಳುವುದು?

‍ಲೇಖಕರು ವಾಸುದೇವ ಶರ್ಮ

September 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anjali Ramanna

    ನಿಲುವುಗನ್ನಡಿ ಎಲ್ಲಾ ಮಕ್ಕಳಿಗೂ ದಕ್ಕಲಿ ಅದರಲ್ಲಿನ ಪ್ರತಿಬಿಂವೂ….
    ಅಂಜಲಿ ರಾಮಣ್ಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: