‘ಜ್ಞ’ ಗೂ ‘ಘ್ನ’ ಕ್ಕೂ ವ್ಯತ್ಯಾಸ…

ಬಾಲ ಒಂದಿಲ್ಲ ಅಷ್ಟೇ..ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. 

ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ. 

‘ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿ’ ಅಂತ ತಮ್ಮ ಎಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ. 

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ ಎಂದು ಮಾತು ಸೇರಿಸುತ್ತಾರೆ.  ಪ್ರತೀ ವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

ವಿಶ್ವ ತಾಯಿನುಡಿ ದಿನಕ್ಕೆ ಬರೆಯಬೇಕು ಎಂದಿದ್ದ ಬರಹ ಇದು.

… ಮಲ್ಲಿಕ್ ಹಾಗೂ ಆ ಫೈಲಿನ ಯಜಮಾನನ ಜಗಳ ನೋಡಿ ಇಂಗ್ಲಿಷಿನಲ್ಲಿ ಜಗಳವಾಡುವುದು ಎಷ್ಟೊಂದು ಕಷ್ಟ ಎಂದು ನನ್ನ ಅರಿವಿಗೆ ಬಂತು. ಇಬ್ಬರ ಜಗಳವೂ ಅವರ ಕೋಪಾವೇಶದ ಅಭಿವ್ಯಕ್ತಿಯಂತೆ ಕಾಣದೆ ಯಾವುದೋ ಸರ್ಕಾರಿ ವ್ಯವಹಾರದಂತೆ ಕಾಣುತ್ತಿತ್ತು. ಅದೇ ತಮ್ಮ ಮಾತೃಭಾಷೆಯಲ್ಲಿ ಜಗಳ ಆಡಿದ್ದರೆ ಇಬ್ಬರೂ ಮರ್ಮಕ್ಕೆ ತಾಗುವಂತ ವಾಗ್ಬಾಣಗಳನ್ನು ಬಿಟ್ಟು ಈ ವೇಳೆಗೆ ಜಗಳ ಸಲೀಸಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿತ್ತು. ಈಗಲಾದರೋ ಇಬ್ಬರೂ ಇಂಗ್ಲಿಷ್ ಗ್ರಾಮರನ್ನು ಮರೆಯದೆ ವಾಕ್ಯ ರಚನೆಯ ಕಡೆಗೆಲ್ಲಾ ಗಮನವಿಟ್ಟು ಜಗಳವಾಡಬೇಕಿತ್ತು. ಮಾತೃಭಾಷೆ ಎಷ್ಟೊಂದು ಆಪ್ತ ಮತ್ತು ಆತ್ಮೀಯ ಎಂದು ನಾನು ಯೋಚಿಸಿದೆ. ನಮ್ಮ ಆಲೋಚನೆಗೂ ಅಭಿವ್ಯಕ್ತಿಗೂ ಮಧ್ಯೆ ಕಂದರವೇ ಇರುವುದಿಲ್ಲ!

– ಪೂರ್ಣಚಂದ್ರ ತೇಜಸ್ವಿ ಅವರ ‘ಅಲೆಮಾರಿ ಅಂಡಮಾನ್’ ಪುಸ್ತಕದಿಂದ.

ನಾನು ಬೆಳೆದ ಪರಿಸರದಲ್ಲಿ ‘ಸಣ್ಣೀ, ಬಾ ಇಲ್ಲಿ…’ ಅಂತ ಕನ್ನಡದಲ್ಲಿ ಕರೆದರೂ ‘ಆತೂಂ…’ ಎಂದು ಉರ್ದುವಿನಲ್ಲಿ ಉತ್ತರಿಸುವಂತ ವಾತಾವರಣ. ಹೀಗಾಗಿ ಅಚ್ಚಕನ್ನಡ, ಚೆಂದಕನ್ನಡ ಎಲ್ಲ ತಿಳಿವಳಿಕೆ ಬಂದ ಮೇಲೆ ರೂಢಿಸಿಕೊಂಡಿದ್ದು. ಚೆಂದಕನ್ನಡ ಎಂದಾಗಲೆಲ್ಲ ನನಗೆ ಮೊದಲು ನೆನಪಿಗೆ ಬರುವ ಹಾಡು ಬಿಎಂಶ್ರೀ ಅವರ ‘ಮೊದಲ ತಾಯ ಹಾಲು ಕುಡಿದು…’ ಈ ಹಾಡಿನಲ್ಲೇ ಇನ್ನೊಂದು ಸಾಲು ಬರುತ್ತದೆ. ಕನ್ನಡ ನನ್ನ ತಾಯಿ ಅಥವಾ ತಾಯಿ ನುಡಿ ಎಂದು ಕೇಳಿದ ಕಿವಿಗಳಿಗೆ ಬಲು ಇಂಪಾಗಿ ಕೇಳಿದ ಸಾಲುಗಳಿವು…

ಕನ್ನಡ ನುಡಿ ನಮ್ಮ ಹೆಣ್ಣು
ನಮ್ಮ ತೋಟದಿನಿಯ ಹಣ್ಣು
ಬಳಿಕ ಬೇರೆ ಬೆಳೆದ ಹೆಣ್ಣು
ಬಳಿಗೆ ಸುಳಿದಳು
ಹೊಸದು ರಸದ ಬಳ್ಳಿ ಹಣ್ಣು
ಒಳಗೆ ಸುಳಿದಳು

ಹಾಡಿನ ಬನಿ ಮತ್ತು ಮೈಸೂರು ಅನಂತಸ್ವಾಮಿ ಅವರ ಉಚ್ಚಾರಣೆಗಾಗಿಯೇ ಈ ಹಾಡನ್ನು ನಾನು ಲೆಕ್ಕವಿಲ್ಲದಷ್ಟು ಸಲ ಕೇಳಿದ್ದೇನೆ. ಈ ರೀತಿ ಉಚ್ಚಾರಣೆಗಾಗಿಯೇ ನಾನು ಕೇಳುವ ಹಾಡುಗಳ ಯಾದಿ ದೊಡ್ಡದಿದೆ. ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹಾಡುಗಳೆಂದರೆ, ಅಣ್ಣಾವ್ರ ‘ಯಾವ ಕವಿಯೂ ಬರೆಯಲಾರ… ಮತ್ತು ಕಣ್ಣೀರ ಧಾರೆ ಇದೇಕೆ…’ ನಂತರದ್ದು ಅನಂತಸ್ವಾಮಿಯವರು, ‘ತಂಪು ಗಾಳಿಯಂತೆ…’ ಅಂತ ಹಾಡುತ್ತಿದ್ದರೆ ಗಾಳಿ ನನ್ನನ್ನ ಸುಳಿದು ಸುತ್ತಿರುತ್ತದೆ. ಇದೇ ಹಾಡಿನಲ್ಲಿ ಬರುವ ‘ಯಾವ ಶಿವದ ಸೃಷ್ಟಿಗಾಗಿ…’ ಸಾಲನ್ನು ಅವರ ಉಚ್ಚಾರಣೆಯಲ್ಲಿಯೇ ಕೇಳಬೇಕು!! ‘ಕನ್ನಡವು ಕನ್ನಡವ ಕನ್ನಡಿಸುತಿರಲಿ’ ಎನ್ನುವುದಕ್ಕೆ ವ್ಯಾಚ್ಯದಂತಹ ಉಚ್ಚಾರಣೆ.

ಉಚ್ಚಾರಣೆ ವಿಷಯಕ್ಕೆ ಬಂದರೆ ನನಗೆ ಕಿರಿಕಿರಿಯಾಗುವ ಸಂಗತಿಯೊಂದಿದೆ. ಅನೇಕರು ‘ಅಭಿಜ್ಞಾ, ಅಭಿಜ್ಞಾನ, ಸರ್ವಜ್ಞ’ ವನ್ನು ‘ಅಭಿಘ್ನಾ, ಅಭಿಘ್ನಾನ, ಸರ್ವಘ್ನ’ ಅಂತ ಉಚ್ಚರಿಸುತ್ತಾರೆ. ಇದು ಇಂಗ್ಲಿಷಿನಲ್ಲಿ ಬರೆದುದನ್ನು ಓದುವುದಕ್ಕೆ ಹತ್ತಿರ ಇರಬಹುದು. ಎರಡೂ ಸರಿಯೇ ಇರಬಹುದು.

ಆದರೆ, ಕೃತಜ್ಞ, ಕೃತಘ್ನ ಪದಗಳ ಭಿನ್ನತೆ ಇರುವುದೇ ಉಚ್ಚಾರಣೆಯಲ್ಲಿ. ಅದನ್ನು ಕಂಡುಕೊಂಡು ‘ಜ್ಞ’ ಕ್ಕೆ ‘ಘ್ನ’ ಉಚ್ಚಾರಣೆ ರೂಢಿಸಿಕೊಂಡ ನಾಲಿಗೆ ಸರಿಯಾದುದಕ್ಕೆ ಹೊಡಮರಳಿಸುವುದನ್ನು ನೋಡುವ ಆಸೆಯಿದೆ ನಂಗೆ. ಜಗತ್ತಿನಲ್ಲಿ ಬರೆದಂತೆ ಓದಲು ಬರುವ ಭಾಷೆ ಕನ್ನಡವೊಂದೇ!!

ಉಚ್ಚಾರಣೆಯ ಭಿನ್ನತೆಯನ್ನು ಗುರುತಿಸುವಲ್ಲಿ, ಯಾವ ಪದದಲ್ಲಿ ಯಾವುದು ಹ್ರಸ್ವಾಕ್ಷರ, ಯಾವುದಕ್ಕೆ ಧೀರ್ಘಾಕ್ಷರ ಬಳಸಬೇಕು ಎನ್ನುವುದು ಎಷ್ಟೇ ರೂಢಿಗತವಾಗಿದ್ದರೂ, ಒಮ್ಮೆಯಾದ್ರು, “ಜೇನು ಪೋಷಕರ ಸಹಕಾರಿ ಸಂಘ ಎಂಬ ಬರಹದಲ್ಲಿ “ಷ” ಇರಬೇಕೋ “ಶ” ಇರಬೇಕೋ ಎಂದು ಯೋಚಿಸುತ್ತೇವೆ.” ‘ಜ್ಞ’ ಕ್ಕೆ ‘ಘ್ನ’ ಬಳಸುವವರನ್ನು ನೋಡುವಾಗಲೆಲ್ಲ ನಾನೂ “ಜ್ಞ” ನಾ “ಘ್ನ” ಅಂತ ಯೋಚಿಸುತ್ತ ನಿಂತಿರುತ್ತೇನೆ.

ನಮ್ಮಲ್ಲಿ ಮಕ್ಕಳಿಗೆ ಮಾತು ಬರುವುದು ತಡವಾದರೆ ಅರಳೀ ಮರದ ಎಲೆ ತಂದು ಅದರಲ್ಲಿ ಅನ್ನದ ತುತ್ತಿಟ್ಟು, ಊಟ ಮಾಡಿಸುತ್ತಾರೆ. ಈ ಸಂಗತಿಯೇ ಲಕ್ಷ್ಮೀನಾರಾಯಣ ಭಟ್ಟ ಅವರ ‘ತಾಯೇ ನಿನ್ನ ಪ್ರೀತಿಯ ಬಾಗಿನ…’ ಹಾಡಿನಲ್ಲಿ ಬರುವ ‘ಭಾರಿ ಅರಳಿ ಮರ ನಡುವೆ ಪುಟ್ಟ ಎಲೆ, ಎಲೆಗೆ ಎಂಥ ಹಿರಿಮೆ…’ ಎನ್ನುವ ಸಾಲಿಗೆ ಉಪಮೇಯವಾದಂತಿದೆ.. ‘ನಿನ್ನ ಪರಂಪರೆಯಲ್ಲಿ ಬಂದು ನಾ ಯಾರಿಗೇನು ಕಡಿಮೆ…’ ಎನ್ನುವ ಆತ್ಮವಿಶ್ವಾಸ ಕೊಟ್ಟಿದ್ದು ನನಗೆ ಕನ್ನಡವೇ.

ಈ ಆತ್ಮವಿಶ್ವಾಸದ ಹೊತ್ತಿನಲ್ಲೇ ನಾನು ಓದಿದ ‘ತಮಿಳು ತಲೆಗಳ ನಡುವೆ’ ಭಾಷಾಭಿಮಾನ ಎನ್ನುವುದು ನಮ್ಮನ್ನ ಹೇಗೆ ನಿಂತ ನೀರಾಗಿಸುತ್ತದೆ ಎನ್ನುವುದರ ಅರಿವು ಮೂಡಿಸಿ, ಬೇರೆ ಭಾಷೆಯನ್ನು ಅರ್ಥ ಮಾಡಿಕೊಳ್ಳಲು, ಕಲಿಯಲು ಪ್ರೇರೆಪಿಸಿದ್ದು.

ಮತ್ತು, ಅಭಿಪ್ರಾಯ ಭೇದ ಭಾಷೆಗೆ ಸಂಬಂಧಿಸಿದ್ದು, ವೈಯಕ್ತಿಕ ಅಲ್ಲ. ಅದನ್ನು ವೈಯಕ್ತಿಕವಾಗಿ ತಗೊಂಡು ಇನ್ನೊಬ್ಬರ ಭಾಷಾಭಿಮಾನಕ್ಕೆ ಕುಂದು ತರಬಾರದು ಎನ್ನುವ ವಿಶಾಲ ದೃಷ್ಟಿಕೋನ ಕಟ್ಟಿಕೊಟ್ಟಿದ್ದು ಕೂಡ ಇದೇ ಪುಸ್ತಕ.

ಇಂದಿಗೂ ನೆನಪಿರುವ ಪುಸ್ತಕದಲ್ಲಿನ ಸಾಲುಗಳು…

“ನಿಮ್ಮ ಅಧ್ಯಯನದ ವಿಷಯ?”

“ಚಂಗಕಾಲದಲ್ಲಿ ಹುಡುಗರು.”

“ಇದೇ ತೆರನಾದ ವಿಷಯವನ್ನು ನಿಮ್ಮ ಡಿಪಾರ್ಟಮೆಂಟಿನಲ್ಲೇ ಬೇರೆಯಾರೋ ಆರಿಸಿಕೊಂಡ ಹಾಗಿದೆಯಲ್ಲವೆ?”

“ಅದು ಚಂಗಕಾಲದ ಹುಡುಗಿಯರು. ಇನ್ನೊಬ್ಬರು ಚಂಗಕಾಲದ ಮಕ್ಕಳು.”

“ಏನ್ರೀ ಇದು. ಹುಡುಗಿಯರೂ ಹುಡುಗರೂ ಮಕ್ಕಳೇ ಅಲ್ಲವೇನ್ರೀ?”

“ಇರಬಹುದು ಶಾರ್, ಆದರೆ, ನಮ್ಮ ತಮಿಳು ಸಂಸ್ಕೃತಿಯ ಪ್ರಕಾರ ಹತ್ತು ವರ್ಷದ ಕೆಳಗಿರುವವರು ಮಕ್ಕಳು, ಹತ್ತರಿಂದ ಹದಿನೈದರವರೆಗಿರುವವರು ಹುಡುಗರು, ಹುಡುಗಿಯರು.”

“ಇರಬಹುದು, ನಿಮ್ಮ ಚಂಗಸಾಹಿತ್ಯದಲ್ಲಿ ಈ ಬಗೆಯ ವಿಂಗಡವನ್ನು ಮಾಡಲು ಅವಕಾಶವಿದೆಯೇನ್ರಿ? ನನಗೆ ತಿಳಿದ ಮಟ್ಟಿಗೆ ಅಲ್ಲಿ ವಯಸ್ಸಿನ ಸಂಗತಿಯೇ ಬರುವುದಿಲ್ಲವಲ್ರೀ?”

“ಅದನ್ನೇ ಶಾರ್, ಸಂಶೋಧನೆ ಎನ್ನುವುದು! ನಾವು ಕಂಡು ಹಿಡಿಯಬೇಕು ಶಾರ್!”

‘ಚಂಗಸಾಹಿತ್ಯದಲ್ಲಿ ಎಳೆಗೂಸು’ ಎಂಬೊಂದು ಅಧ್ಯಯನಕ್ಕೆ ಪಿಎಚ್.ಡಿ. ಡಿಗ್ರಿ ದಕ್ಕಿಗೆ. ಅದರಲ್ಲಿರುವ ಕೆಲವು ಸಮಾರೋಪ ವಾಕ್ಯಗಳನ್ನು ಕೇಳಿ: “ತಮಿಳು ಕೂಸುಗಳಿಗೆ ತಾಯಂದಿರು ಮೊಲೆಹಾಲನ್ನು ಕೊಡುತ್ತಿದ್ದರು. ಮುದ್ದು ಮಾತುಗಳನ್ನಾಡಿ ಸಂತೈಸುತ್ತಿದ್ದರು. ಮುತ್ತುಕೊಟ್ಟು ಮುದ್ದಾಡುತ್ತಿದ್ದರು. ತಲೆಸವರುತ್ತಿದ್ದರು. ತಲೆಗೂ ಮೈಗೂ ಎಣ್ಣೆಹಚ್ಚಿ ಸ್ನಾನ ಮಾಡಿಸುತ್ತಿದ್ದರು. ಮಕ್ಕಳು ಹಸಿವಿನಿಂದ ಅತ್ತಾಗ ಹಾಲುಣಿಸುತ್ತಿದ್ದರು. ಮಕ್ಕಳನ್ನು ಎತ್ತಿಕೊಳ್ಳುತ್ತಿದ್ದರು. ಎಳೆಗೂಸಿನ ಬೆಳವಣಿಗೆಯನ್ನು ನೋಡಿ ಹೆತ್ತವರು ಸಂತೋಷ ಪಡುತ್ತಿದ್ದರು.” 

ಚೆಂಗಕಾಲದ ತಮಿಳರಲ್ಲದೆ ಬೇರಾರಾದರೂ ಇಂಥದನ್ನೆಲ್ಲ ಮಾಡಿದ್ದಾರೆಯೆ? ಎಂಥ ಗಹನವಾದ ಸಂಶೋಧನೆ!

September 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ವಿಜಯವಾಮನ

    ಇದು ಕನ್ನಡ ಭಾಷೆಯ ಕುರಿತದ್ದಾರಿಂದ ಒಂದು ವಿಷಯ.
    “ಉಚ್ಛಾರಣೆ ” ಸರಿಯಲ್ಲ ಎಂದು ಕನ್ನಡ ನಿಘಂಟು ಹೇಳುತ್ತದೆ. ಅದು ಉಚ್ಚಾರಣೆ ಎಂದಾಗಬೇಕು.

    ಪ್ರತಿಕ್ರಿಯೆ
  2. Hema

    ಖಂಡಿತ. ಓದಿ ಪ್ರತಿಕ್ರಿಯಿಸಿದ್ದಕ್ಕೆ ವಂದೇ.

    ಪ್ರತಿಕ್ರಿಯೆ
  3. Shyamala Madhav

    ದಕ್ಷಿಣ ಕನ್ನಡದಲ್ಲಿ ಎಂದೂ ಕೃತಜ್ಞ – ಕೃತಘ್ನ ಆಗುವುದಿಲ್ಲ.
    ವಿಜ್ಞಾನ – ವಿಜ್ಞಾನವೇ.
    ಬೆಂಗಳೂರು ಕಡೆಯಲ್ಲಿ ಮಾತ್ರ ಹೀಗೆ ಕನ್ನಡದ ಕೊಲೆಯಾಗ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: