ಕನ್ನಡಕ್ಕೆ ಮತ್ತೆ 'ಓಲ್ಗಾ'


ಖ್ಯಾತ ಕಥೆಗಾರ್ತಿ ವೋಲ್ಗಾ ಅವರ ಕಥೆಗಳು ಮತ್ತೆ ಕನ್ನಡಕ್ಕೆ ಸಿಕ್ಕಿದೆ.
ಅಜಯ್ ವರ್ಮಾ ಅಲ್ಲೂರಿ ಈ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ.
‘ವಿಮುಕ್ತೆ’ ಕೃತಿ ರಾಮಾಯಣವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಶ್ಲೇಷಿಸಿದೆ.
ಈ ಕೃತಿಯ ಬಗ್ಗೆ ಖ್ಯಾತ ಸಾಹಿತಿ ವೈದೇಹಿ ಹಾಗೂ ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಅವರ ನೋಟ ಇಲ್ಲಿದೆ- 

ವೈದೇಹಿ  

ಪ್ರಸಿದ್ಧ ತೆಲುಗು ಕತೆಗಾರ್ತಿ ಶ್ರೀಮತಿ ಓಲ್ಗಾ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ವಿಮುಕ್ತೆ. ಓದುತ್ತಾ ಹೋದಂತೆ ನನ್ನನ್ನು ಆವರಿಸಿಬಿಟ್ಟಿರುವ ಕೃತಿ ಇದು. ಎಲ್ಲವೂ ಸಹಜ ಸ್ವಭಾವಿಕ ಆಗುಹೋಗುಗಳಂತೆ ನಾವು ಒಪ್ಪಿಕೊಂಡು, ಕಥೆಯ ರೂಪದಲ್ಲಿ ನಮ್ಮನ್ನು ಒಳಗೊಂಡಿರುವ ನಮ್ಮ ಪುರಾಣಗಳು ಇಷ್ಟು ಆಧುನಿಕವಾಗಿಯೇ!
ಇಲ್ಲಿ ಸೀತೆಯ ಕಥೆಯೇ ಆಧಾರ ಶೃತಿಯಾಗಿ ಶೂರ್ಪನಖಿ, ಅಹಲ್ಯೆ, ರೇಣುಕೆ, ಊರ್ಮಿಳೆ, ಮಂಡೋದರಿ ಮತ್ತು ರಾಮ – ಈ ಎಲ್ಲಾ ಪಾತ್ರಗಳು ನಮಗೆ ಇನ್ನೊಂದೇ ರಾಗಾಲಾಪದಲ್ಲಿ ಗೋಚರಿಸಿ ಅವಕ್ಕಾಗಿಸುತ್ತವೆ. ಇಲ್ಲಿನ ಸಮಸ್ಯೆಗಳೆಲ್ಲ ಇಂದಿಗೂ ಹೇಗೆ ಅಹುದಹುದೆನ್ನುವಂತೆ ಜೀವಂತವಾಗಿವೆ ! ಇದು ಆ ನಾಯಕಿಯರ ಅಂತರಂಗದ, ಅಷ್ಟೇ ಅಲ್ಲ, ರಾಮನಂಥವರ ಒಳತೋಟಿಗಳನ್ನೂ ಆಳಕ್ಕಿಳಿದು ಗ್ರಹಿಸಿದ ಭಾವ ಮತ್ತು ಅರ್ಥಾನುಸಂಧಾನದ ದೊಡ್ಡ ಪಯಣ.
ಪಂಡಿತರ ವಿದ್ವತ್ಪೂರ್ಣ ವ್ಯಾಖ್ಯಾನದಲ್ಲಿ ಜಡ ಬಿದ್ದು ನಿಂತ ನೀರಂತಾಗಿರುವ ಪಾತ್ರಗಳ ನವದರ್ಶನ. ತಂತಮ್ಮ ಸ್ಥಿತಿಗತಿಗಳ ಮೂಲ ಸಾಮ್ಯವನ್ನು ಕಂಡು ನಿಬ್ಬೆರಗಾಗುವ ಮತ್ತು ವಿಮುಕ್ತರಾಗಿಯೂ ಬಾಹ್ಯ ಜಗತ್ತಿಗೆ ಬಂಧಿತರಂತೆಯೂ ಕಾಣುವ ಅಗೋಚರ ಧೀರ ಸ್ತ್ರೀಪಾತ್ರಗಳ ಅನಾವರಣ.
ಪ್ರಾಚೀನವೋ ಪುರಾಣವೋ ಇತಿಹಾಸವೋ ವರ್ತಮಾನವೋ ಯುಗಯುಗಗಳಲ್ಲಿಯೂ ಅಗ್ನಿದಿವ್ಯವನ್ನು ಎದುರಿಸುವ, ತನ್ನ ಅಸಾಧಾರಣ ಧಾರಣಾ ಶಕ್ತಿಯಿಂದಲೇ ಸ್ತ್ರೀ ವಿಮುಕ್ತಳಾಗುವಳಾದರೆ, ಪುರುಷನೋ ಜನ್ಮಾಂತರಕ್ಕೂ ಬಿಡಿಸಲಾಗದ, ತನ್ನೊಳಗೆ ತಾನೇ ಹೆಣೆದುಕೊಂಡ ಆಳದ ತುಮುಲಗಳ ಸಿಕ್ಕುಗಳಲ್ಲಿ ಬಂಧಿತನಾಗುತ್ತಾನೆ. ಇಂಥ ಒಂದು ಗಂಭೀರ ವಿಶ್ಲೇಷಣೆಯನ್ನು ಯಾವ ರೋಷಾವೇಷವಿಲ್ಲೆಯದೆ, ಆಟಾಟೋಪವಿಲ್ಲದೆ, ಆಪಾದನೆಗಳ ಸುರಿಮಳೆಯಿಲ್ಲದೆ ಇನ್ನಿಲ್ಲದಷ್ಟು ಸಾವಧಾನತೆಯಿಂದ ಪಕ್ವ ಪ್ರಖರ ಚಿಂತನೆಯಿಂದ ಸೃಜನಶೀಲವಾಗಿ ಕಟ್ಟಿಕೊಟ್ಟಿರುವ ಲೇಖಕಿ ಓಲ್ಗಾ ನಿಜಕ್ಕೂ ಅಭಿನಂದನೀಯರು.
ಭಾರತದ ಈ ಉಜ್ವಲ ಬರಹಗಾರ್ತಿಯ ಕೃತಿಯನ್ನು ಅಜಯ್ ವರ್ಮಾ ಅಲ್ಲೂರಿ ಅವರು ತೆಲುಗು ಮೂಲದಿಂದಲೇ ನೇರವಾಗಿ ಅನುವಾದ ಮಾಡಿ ನಮಗೆ ತಲುಪಿಸುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಇದೊಂದು ಓದಲೇಬೇಕಾದ ಅಪೂರ್ವ ಕೃತಿ
 ಓ.ಎಲ್. ನಾಗಭೂಷಣ ಸ್ವಾಮಿ
ಓಲ್ಗಾ ಎಂಬ ಹೆಸರಿನಿಂದಲೇ ಪ್ರಖ್ಯಾತರಾಗಿರುವ ಪಿ. ಲಲಿತಾ ಕುಮಾರಿ ತೆಲುಗಿನ ಪ್ರಮುಖ ಲೇಖಕರು. ರಾಮಾಯಣದ ಅಮುಖ್ಯವೆಂದು ಭಾವಿಸಲಾಗಿರುವ ಹೆಣ್ಣು ಪಾತ್ರಗಳು ‘ವಿಮುಕ್ತೆ’ಯಲ್ಲಿ ತಮ್ಮ ಕಥೆಯನ್ನು ನಾಯಕಿ ಎಂದು ಪರಿಗಣಿತಳಾಗಿರುವ ಸೀತೆಗೆ ಹೇಳಿಕೊಳ್ಳುತ್ತವೆ. ಈ ಕಥೆಗಳನ್ನು ಕೇಳುತ್ತ ಸೀತೆ ಬಿಡುಗಡೆ ಪಡೆಯುತ್ತಾಳೆ, ಇಡೀ ರಾಮಾಯಣವನ್ನು ಹೆಣ್ಣು ಪಾತ್ರಗಳ ದೃಷ್ಟಿಯಿಂದ ಓದುಗರು ಮತ್ತೆ ಕಟ್ಟಿಕೊಳ್ಳುವಂತಾಗುತ್ತದೆ.
ಪರಸ್ಪರ ಅಕ್ಕ-ತಂಗಿಯರ ಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕವೇ ಮಹಿಳೆಯರ ಬಿಡುಗಡೆ ಸಾಧ್ಯವೆನ್ನುವುದು ಈ ಸಂಕಲನದ, ಓಲ್ಗಾ ಅವರ ಒಟ್ಟು ಬರವಣಿಗೆಯ ಶ್ರುತಿ. ರಾಮಾಯಣದ ಪಾತ್ರಗಳ ಕಥನದ ಮೂಲಕ ಮಹಾಕಾವ್ಯಕ್ಕೆ ಸಾಂಪ್ರದಾಯಿಕ ವ್ಯಾಖ್ಯಾನದಿಂದ ವಿಮುಕ್ತಿ ದೊರಕಿಸಿದ್ದಾರೆ ವೋಲ್ಗಾ.

ಶ್ರೀಮತಿ ಓಲ್ಗಾ


ಭಾರತೀಯ ಸ್ತ್ರೀವಾದದ ಪ್ರಮುಖ ಕಥಾ ಸಂಕಲನವನ್ನು ಅಜಯ್ ವರ್ಮಾ ಅಲ್ಲೂರಿ ಕನ್ನಡಕ್ಕೆ ತಂದು ಓದುಗರ ಕೃತಜ್ಞತೆಗೆ ಪಾತ್ರವಾಗಬೇಕಾದಂಥ ಕೆಲಸ ಮಾಡಿದ್ದಾರೆ. ವಿಜ್ಞಾನದ ವಿದ್ಯಾರ್ಥಿಯಾದ ವರ್ಮಾ ಅವರಿಗೆ ಇರುವ ತೆಲುಗಿನ ಒಡನಾಟ, ಕನ್ನಡದ ತಿಳಿವು, ಅನುವಾದದಲ್ಲಿ ಗಂಭೀರ ಆಸಕ್ತಿ, ವಿಶ್ವಸಾಹಿತ್ಯದ ಬಗ್ಗೆ ಕುತೂಹಲ, ಅಪಾರವಾದ ಓದಿನ ಪ್ರೀತಿ ಇವೆಲ್ಲ ಮೇಳೈಸಿ ಕನ್ನಡದ ಈ ಸಂಕಲನ ರೂಪುಗೊಂಡಿದೆ.
ತೆಲುಗಿನ ಕೃತಿಗೆ ಅನ್ಯಾಯವಾಗದಂತೆ, ಕನ್ನಡದಲ್ಲಿ ಅಸಹಜವಾಗದಂತೆ ವಿಮುಕ್ತೆಯನ್ನು ಅನುವಾದಿಸಿರುವ ಅಜಯ್ ವರ್ಮ ಅಭಿನಂದನೆಗೆ ಅರ್ಹರು. ಭಾಷೆಗಳ ಅಧ್ಯಯನದ ಬಗ್ಗೆಯೇ ಶೈಕ್ಷಣಿಕ ಆಸಕ್ತಿ ಕುಗ್ಗುತ್ತಿರುವ ಈ ಹೊತ್ತಿನಲ್ಲಿ ನಮ್ಮ ನೆರೆಹೊರೆಯ ನುಡಿಗಳ, ದೇಶ ವಿದೇಶಗಳ ಭಾಷೆಗಳ ಸಾಹಿತ್ಯವನ್ನು ಕನ್ನಡ ಮಾತ್ರ ಬಲ್ಲ ಓದುಗರಿಗೆ ಒದಗಿಸುವ ಕಾರ್ಯದಲ್ಲಿ ತೊಡಗುವುದು ಬಹಳ ಮುಖ್ಯವಾದ ಸಾಂಸ್ಕೃತಿಕ ಜವಾಬ್ದಾರಿ. ಅಜಯ್‍ ವರ್ಮಾ ಕನ್ನಡದ ಮುಖ್ಯ ಅನುವಾದಕಾರಾಗಿ ಬೆಳೆಯುವ ಸೂಚನೆಗಳೆಲ್ಲ ಈ ಕೃತಿಯಲ್ಲಿವೆ.

‍ಲೇಖಕರು avadhi

November 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: