ಅವಳ ಕಾಯದ ಬಗ್ಗೆ..

ಕಾಯವ ಇನ್ನಿಲ್ಲದಂತೆ ಕಾದುವ ಹಾಡು

ಡಿ.ಎಸ್.ರಾಮಸ್ವಾಮಿ

ಫೋಟೋಗಳು ಎಂದಿನಂತೆ ತಾಯ್ ಲೋಕೇಶ್

ಜ.ನಾ.ತೇಜಶ್ರೀ ಅವರ “ಅವನರಿವಲ್ಲಿ” ಖಂಡ ಕಾವ್ಯ ಕುರಿತು ಕೆಲವೇ ದಿನಗಳ ಹಿಂದೆ ಅವಧಿಯಲ್ಲಿ ಪ್ರಕಟವಾದ ನನ್ನ ಒಂದು ಟಿಪ್ಪಣಿ ನೀವು ಗಮನಿಸಿರಬಹುದು. ಆ ಲೇಖನ ಮರು ಪ್ರಕಟಿಸಿದ ಕಾರಣ ಈ ಖಂಡ ಕಾವ್ಯದ ನಾಟಕರೂಪ ಮೈಸೂರಲ್ಲಿ ಪ್ರದರ್ಶನಗೊಂಡು ಸಂಚಲನ ಮೂಡಿಸಿತ್ತು.

ಇಡೀ ದಿನ “ಕಾಡುವ ಕಿರಂ” ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿತವಾಗಿತ್ತು. ಬೆಂಗಳೂರು ಆರ್ಟ್ ಫೌಂಡೇಷನ್ ಮತ್ತು ಜನ ಸಂಸ್ಕೃತಿ ಪ್ರತಿಷ್ಠಾನಗಳ ಸಹಯೋಗದಲ್ಲಿ ದಿನವಿಡೀ ನಡೆದ ಕಿರಂ ಸ್ಮರಣೆಯ ಹಲವು ಕಾರ್ಯಕ್ರಮಗಳು ಮತ್ತು ರಾತ್ರಿ ಹತ್ತರಿಂದ ಮರು ಬೆಳಗು ಆರೂವರೆವರೆಗೆ ನಡೆದ ನಾಲ್ಕು ಕವಿಗೋಷ್ಠಿಗಳಲ್ಲಿ ಮಂಡಿತವಾಗಬೇಕಿದ್ದ ಎಂಭತ್ತು ಕವಿತೆಗಳ ಸಂಕಲನ ಕೂಡ ಪ್ರಕಟವಾಗಿ ಬಿಡುಗಡೆ ಆಯಿತು. ಕಿರಂ ತಮ್ಮ ಬದುಕಿನುದ್ದಕ್ಕೂ ಕಾವ್ಯ ಮಾಂತ್ರಿಕರಾಗಿದ್ದುದು ಕಾವ್ಯಮಂಡಲದ ಮೂಲಕ ಅದೆಷ್ಟೋ ಅಜ್ಞಾತ ಕವಿಗಳನ್ನು ಪ್ರಕಟಿಸಿ ಜಗಜ್ಜಾಹೀರು ಮಾಡಿದ್ದು ಕಾವ್ಯಾಸಕ್ತರಿಗೆಲ್ಲ ತಿಳಿದ ವಿಷಯವೇ. ಕಿರಂ ಕುರಿತು ಇರುವ ಕತೆ, ದಂತ ಕತೆಗಳಿಗೂ ಲೆಕ್ಕವಿಲ್ಲ. ಕಿರಂ ಸದಾ ಧ್ಯಾನಿಸುತ್ತಿದ್ದುದು ಮತ್ತು ಪ್ರಮೋಟ್ ಮಾಡುತ್ತಿದ್ದುದು ಹೊಸ ಕವಿಗಳು ಮತ್ತು ಕವಿತೆಗಳು. ಅಂಥ ಕಿರಂ ನೆನಪಿನ ಕಾರ್ಯಕ್ರಮಕ್ಕೆ ಕಳಶವಿಟ್ಟಂತೆ ಅವತ್ತು ನಡೆದದ್ದು ನಾಟಕ ಪ್ರದರ್ಶನ. ನಟರಾಜ್ ಹೊನ್ನವಳ್ಳಿ ಮಹಾಯಾನ ತಂಡಕ್ಕಾಗಿ ನಿರ್ದೇಶಿಸಿರುವ ರಂಗಪ್ರಯೋಗ “ಕಾಯದ ಹಾಡು”. ಮೂಲ ಜ.ನಾ. ತೇಜಶ್ರೀ ಅವರ “ಅವನರಿವಲ್ಲಿ” ಖಂಡ ಕಾವ್ಯ.

ಹೊಸ ಕಾಲದ ಕವಿಗಳ ಹೊಸಬಗೆಯ ಸ್ಪಂದನೆಗಳನ್ನು   ಪ್ರಮೋಟ್ ಮಾಡುವ  ಕೆಲಸ ಅತ್ಯಗತ್ಯ ಬೇಕಿದೆ. ಹೊಸ ಕಾವ್ಯದ ಓದಿಗೆ ಜನ ಸಮೂಹವನ್ನು ಆಕರ್ಷಿಸುವ ಶಕ್ತಿ ಇದ್ದರೂ ಹೊಸ ಕಾಲದ ಮಾಧ್ಯಮಗಳ ಭರದಲ್ಲಿ ತಾಜಾ ಕೃತಿಗಳು ಕೂಡ ತಮ್ಮ ಇರುವಿಕೆಗೆ ಹೊಸ ಪ್ರಯೋಗಗಳನ್ನು ಇವೆಂಟುಗಳನ್ನು ಮಾಡಲೇ ಬೇಕಿರುವ ಪರಿಸ್ಥಿತಿ ಇದೆ. ಓದುವ ಆಸಕ್ತಿ ನಶಿಸುತ್ತಿದೆ ಎನ್ನುವವರ ನಡುವೆಯೇ ಹೊಸ ಪುಸ್ತಕಗಳು ಹೊಸ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಳ್ಳುತ್ತಲೇ ಇವೆ.

ಕವಿತೆಯ ಓದಿನಿಂದ ಸಿಗುವ ಸುಖವನ್ನು ಕಿರುತೆರೆಯ ಧಾರಾವಾಹಿಗಳು ಹಿಂದಿಕ್ಕುತ್ತಿರುವಂತೆಯೇ ವಾಟ್ಸ್ ಆಪ್ ಮತ್ತು ಫೇಸ್ಬುಕ್ ಗುಂಪುಗಳು ಕವಿತೆಯ ತೇರಿಗೆ ಸೀಮಿತ ಪ್ರಾಂಗಣವನ್ನು ನಿಗದಿಮಾಡುತ್ತಿವೆ. ಪತ್ರಿಕೆಗಳಲ್ಲಂತೂ ದೊಡ್ಡ ಜಾಹೀರಾತಿನ ನಡುವೆ ಸಿಕ್ಕ ಪುಟ್ಟ  ಸ್ಥಳದಲ್ಲಷ್ಟೇ ಕಾಣಸಿಗುವ ಕವಿತೆಗಳನ್ನು ಹುಡುಕುವುದೇ ಸಮಸ್ಯೆಯಾಗಿದೆ.

ಕವಿತೆಯನ್ನು ಕಾವ್ಯಾಸಕ್ತರಿಗೆ ಏನಾದರೂ ಮಾಡಿ ತಲುಪಿಸ ಬೇಕಾದ ತುರ್ತು ಇದೆ. ಅದು ಕಿರಂ ನಾಗರಾಜ ಅವರ ಆಶಯವೂ ಆಗಿತ್ತು. ಅವರು ಸದಾಕಾಲ ನಿಮ್ಮ ಕವಿತೆಗಳಿಗೆ ನೀವೇ ರಾಯಭಾರಿಯಾಗಬೇಕು ಎಂಬ ಮಾತನ್ನು ಹೇಳುತ್ತಲೇ ಇದ್ದರು. ಕವಿಯೊಬ್ಬ ಕವಿತೆಯನ್ನು ಬರೆದು ಬಿಟ್ಟರಷ್ಟೇ ಸಾಲದು. ಅದನ್ನು ಜನರಿಗೆ ತಲುಪಿಸುವ ಕೆಲಸ ಮೊದಲಾಗಬೇಕು.

ಪಂಪ ರನ್ನ ಕುಮಾರವ್ಯಾಸ ಮುಂತಾದ ಕವಿಗಳಿಗೆ ಗಮಕಿಗಳ ನೆರವು ಅಬಾಧಿತವಾಗಿ ಈ ಕಾಲದಲ್ಲೂ ಮುಂದುವರೆದಿದ್ದರೆ ನವೋದಯ ಕವಿಗಳ ಕವಿತೆಗಳನ್ನು ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಅಶ್ವತ್ಥ್ ಮುಂತಾದ ಸುಗಮ ಸಂಗೀತಗಾರರು ರಾಗ ಸಂಯೋಜನೆ ಮಾಡಿ ಹಾಡಿ ಜನರಿಗೆ ತಲುಪಿಸುತ್ತಿದ್ದರು.

ಆದರೆ ವರ್ತಮಾನದ ಕವಿಗಳಿಗೆ ಈ ಸೌಲಭ್ಯವಿಲ್ಲ. ಜ.ನಾ. ತೇಜಶ್ರೀ ಅವರ ‘ಅವನರಿವಲ್ಲಿ’ ಎಂಬ ನೀಳ್ಗವಿತೆಯ ಹೆಸರನ್ನು ಕೇಳಿರಬಹುದಾದರೂ ಅದನ್ನು ಎಷ್ಟು ಜನ ಓದಿದ್ದಾರೋ ತಿಳಿದಿಲ್ಲ. ಈ ಕಾಲಕ್ಕೆ ಅಗತ್ಯ ವಸ್ತುವನ್ನು ಹೊಂದಿರುವ ಅಪರೂಪದ ವಿನ್ಯಾಸ ಇದು.

ಕನ್ನಡದಲ್ಲಿ ಸ್ತ್ರೀ ಪರ ಸಂವೇದನೆಗಳು ಚಿರಪರಿಚಿತ. ಅಕ್ಕ ಮಹಾದೇವಿ ಎಂಟು ನೂರು ವರ್ಷಗಳ ಹಿಂದೆಯೇ ಪುರುಷ ಮತ್ತು ಪ್ರಕೃತಿ ಸಂಬಂಧವನ್ನು ಸ್ಪಷ್ಟವಾಗಿ ಅನಾವರಣಗೊಳಿಸಿದ್ದಾಳೆ. ಹೆಣ್ಣಿನ ದೇಹ ಲೋಕ ಮತ್ತು ಭಾವಲೋಕವನ್ನು ಸಾಂದ್ರ ನೆಲೆಯಲ್ಲಿ ಗ್ರಹಿಸುವ ಪ್ರಯತ್ನ ಢಾಳಾಗಿ ಕಾಣಸಿಕ್ಕಿರುವುದು ತೇಜಶ್ರೀಯವರ ‘ಅವನರಿವಲ್ಲಿ’.

ಈ ಖಂಡ ಕಾವ್ಯಕ್ಕೆ ರಂಗರೂಪ ತೊಡಿಸಿ ಮತ್ತೊಂದು ದಾಖಲೆ ಬರೆದದ್ದು ಕನ್ನಡದ ಹಿರಿಯ ನಿರ್ದೇಶಕ ನಟರಾಜ್ ಹೊನ್ನವಳ್ಳಿ. ಐವರು ಹೆಣ್ಣುಮಕ್ಕಳು ವಿಭಿನ್ನ ಬಗೆಯಲ್ಲಿ ನರ್ತಿಸುತ್ತಾ, ಇಡೀ ರಂಗವನ್ನು ಆವರಿಸಿಕೊಳ್ಳುತ್ತಾ ಹೆಣ್ಣಿನ ಸಂಕಟಗಳನ್ನು ಅವಳ ಆತಂಕಗಳನ್ನು ಅದ್ಭುತವಾಗಿ ನಿರೂಪಿಸುತ್ತ ಹೋಗುವುದು ಈ ರಂಗಪ್ರಯೋಗದ ಮೂಲ ಆಶಯ. ಆದರೆ ಇಷ್ಟೂ ದಿನ ನಾಟಕ ಅಂದ ಕೂಡಲೇ ಕತೆ, ತಾಂತ್ರಿಕತೆ ಮತ್ತು ನಾಟಕೀಯ ತಿರುವುಗಳು ಜೊತೆಗೆ ಸಂಗೀತ ಮತ್ತು ಸಂಭಾಷಣೆ. ಈ ಎಲ್ಲ ಕಲಸು ಮೇಲೋಗರಗಳಿಲ್ಲದೇ ನಾಟಕವನ್ನು ನಿರ್ಮಿಸುವುದು ಅಸಾಧ್ಯ ಎನ್ನುವುದು ಸಾಮಾನ್ಯ ಪರಿಕಲ್ಪನೆ. ಆದರೆ ಈ ಸೂತ್ರಗಳನ್ನು ಹೊರಗಿಟ್ಟು ಕವಿತೆಯೊಂದರ ರೆಸಿಟೇಷನ್ ಮೂಲಕವೇ ರಂಗರೂಪವಾಗಿಸುವುದು ಅತ್ಯಂತ ಎಮೋಷನಲ್ ಮತ್ತು ಅಬ್ನಾರ್ಮಲ್ ಅಂಶ.

ಭಿನ್ನಷಡ್ಜ ಇದಕ್ಕೆ ಅಳವಡಿಸಿರುವ ಸಂಗೀತ ಕೂಡ ಮತ್ತೊಂದು ಭಿನ್ನತೆಯ ಕುರುಹೇ!!

ಐವರು ಸ್ತ್ರೀ ರೂಪಿಗಳು ಕವಿತೆಯನ್ನು ಕಂಠಪಾಠ ಮಾಡಿ ಅದನ್ನು ಪರಸ್ಪರರಲ್ಲೇ ಸಂಭಾಷಿಸುತ್ತ ಕವಿತೆಯ ಪೂರ್ಣಪಾಠವನ್ನು ಒಪ್ಪಿಸುತ್ತಾರೆ. ನಡು ನಡುವೆ ತೀರ ಮ್ಯೂಸಿಕಲ್ ಆದ ಲಯವಿರುವ ಸಾಲುಗಳನ್ನು ಹಾಡುತ್ತಾರೆ ಕೂಡ.  ಅಕ್ಷರ ಲಯಕ್ಕೆ ತಕ್ಕಂತೆ ಬೆಳಕಿನ ಲಯವೂ ವಿನ್ಯಾಸಗೊಳಿಸಿರುವ ರಂಗ ತಜ್ಞರನ್ನು ಅಭಿನಂದಿಸಲೇ ಬೇಕು ಸಾಂಪ್ರದಾಯಿಕ ಮನಸ್ಥಿತಿ ಇರುವವರಿಗೆ ಈ ಪ್ರಸ್ತುತಿಯ ವಸ್ತ್ರ ವಿನ್ಯಾಸ ಪ್ರಾಯಶಃ ಇಷ್ಟವಾಗಲಿಕ್ಕಿಲ್ಲ. ಹೆಣ್ಣು ಮಕ್ಕಳು ತಮ್ಮ ಏಕಾಂತದ ಕೋಣೆಗಳಲ್ಲಿ ಬಿಡುಬೀಸಾಗಿ ಕುಳಿತುಕೊಳ್ಳುವ ರೀತಿಯಲ್ಲಿ ರಂಗದ ಮೇಲೆ ಕುಳಿತುಕೊಂಡರೆ ಪ್ರೇಕ್ಷಕ ಮುದಗೊಳ್ಳಬೇಕು. ಆದರೆ ಅಂತಃಪುರದಲ್ಲಷ್ಟೇ ಚಂದ ಕಾಣಬೇಕಿರುವ ಸಂಗಾತಿ ಇತರರಿಗೆ ಕಾಣುವಾಗ ಮಾತ್ರ ಏನೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವ ಗಂಡಿಗೆ ಈ ನಟೀಮಣಿಯರು ಶಾಕ್ ಕೊಡುವುದು ಗ್ಯಾರಂಟಿ! ಏಕಕಾಲದಲ್ಲಿ ಕವಿತೆಯಂತೆಯೂ ಜೊತೆಗೇ ರಂಗ ಪ್ರಯೋಗವಾಗಿಯೂ ಇರುವ ಈ ಪ್ರಸ್ತುತಿ ಬರಿಯ ರಂಗ ಸೀಮಿತವಲ್ಲ ಬದಲಿಗೆ ಹೆಣ್ಣೊಬ್ಬಳ ಮನದ ರಂಗದ ಮೇಲೆ ಆಕೆ ನರ್ತಿಸುವ, ನಟಿಸುವ, ತನ್ನಾಶೆ ಅಭೀಪ್ಸೆ ಹೇಳಿಕೊಳ್ಳುತ್ತಲೇ ತನ್ನಾಳದ ನೋವನ್ನು ಪ್ರಕಟಿಸುವ ಅಪೂರ್ವ ಪ್ರಯೋಗವಾಗಿದೆ. ಇಂಥ ಸಂಕೀರ್ಣ ಮತ್ತು ಜಾಗೃತ ವಸ್ತುವುಳ್ಳ ಕವಿತೆಯನ್ನು ರಂಗ ರೂಪವಾಗಿಸಿದ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಹಾಗೂ ಮಹಾಯಾನ ರಂಗ ತಂಡಕ್ಕೆ ಬರಿಯ ಅಭಿನಂದನೆಗಳನ್ನು ಹೇಳದೇ ಎಲ್ಲೆಲ್ಲಿ ಪ್ರದರ್ಶನದ ಸಾಧ್ಯತೆ ಇರುವ ಸ್ಥಳಗಳಲ್ಲೆಲ್ಲ ಈ ನಾಟಕದ ಪ್ರದರ್ಶನ ಏರ್ಪಡಿಸುವ ರಂಗಾಸಕ್ತ ಗೆಳೆಯರ ಸಹಕಾರ ಅಪೇಕ್ಷಣೀಯ.

ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕ ನೋಡುತ್ತಿರುವಾಗ ಪಕ್ಕದಲ್ಲೇ ಕೂತು ನಾಟಕದಲ್ಲಿ ತಲ್ಲೀನರಾಗಿದ್ದ ಮಧ್ಯ ವಯಸ್ಕ ಮಹಿಳೆಯೊಬ್ಬರು ಮಧ್ಯೆ ಮಧ್ಯೆ ಉದ್ಗರಿಸುತ್ತಿದ್ದುದು, ಕೆಲವು ಸಾಲುಗಳ ಸಂಭಾಷಣೆಗೆ ತಲೆದೂಗುತ್ತಿದ್ದುದನ್ನೂ ಗಮನಿಸಿ ಆಕೆಯನ್ನು ಮೂಲ ಪಠ್ಯ ಓದಿರುವಿರಾ ಅಂತ ಕುತೂಹಲದಿಂದ ಪ್ರದರ್ಶನದ ನಂತರ ಕೇಳಿದೆ . ಆಕೆ ಕೊಟ್ಟ ಉತ್ತರ ದಂಗು ಪಡಿಸಿತು; ಯಾಕೆ ಬರಿಯ ತುಲನೆಯಲ್ಲದೇ ನಿಮ್ಮ ಗಂಡು ಬುದ್ಧಿಗೆ ಬೇರೇನೂ ಹೊಳೆಯದೆ? ಕ್ಷಣ ಆವಾಕ್ಕಾಗಿ ಕ್ಷಮೆ ಕೇಳಿದೆ.

ನಾಟಕದ ಸಂಭಾಷಣೆಯ ನಡು ನಡುವೆ ಯೋನಿ ಅಂಡು ವೀರ್ಯ ಮಿಲನ ಕೂಡು ಥರದ ಕಾಮ ವಾಚಕ ಪದಗಳು ಸುಲಲಿತವಾಗಿ ಬಂದು ಹೋಗುತ್ತವೆ. ಆಪದಗಳು ಯಾವ ಮುಜುಗರವನ್ನೂ ಉಂಟುಮಾಡದೇ ಸಂಭಾಷಣೆಯ ಪಠ್ಯವಾಗಿ ಅಂತರ್ಗತವಾಗಿರುವ ಹಾಗೆ ಮಾಡಿರುವ ನಿರ್ದೇಶಕರ ಜಾಣ್ಮೆಗೆ ಪಾರವೇ ಇಲ್ಲ. ಇಂಥದೊಂದು ಪ್ರಯೋಗಕ್ಕೆ ತನ್ನನ್ನರ್ಪಿಸಿಕೊಂಡಿರುವ  ಮಹಾಯಾನ ಥಿಯೇಟರ್, ಬೆಂಗಳೂರು, ರಂಗ‍ ವಿನ್ಯಾಸಕ್ಕೆ ಸಹಕರಿಸಿರುವ

ಅರ್ಜುನ ನಗರಕರ್, ರಂಗದ ಮೇಲೆ ಈ ಕವಿತೆಯ ರಂಗರೂಪದ ಕಾವ್ಯಭಾಗಕ್ಕೆ ತಕ್ಕನಾಗಿ ನಟಿಸುತ್ತಲೇ ಅದನ್ನು ಕಂಠಸ್ತ ಮಾಡಿಕೊಂಡಿರುವ  ಐವರು ನಟಿಯರಾದ ನಿಶಾ ಯಶ್ರಾಮ್, ನಿಖಿತಾ ಯಶ್ರಾಮ್, ಭಾನುಪ್ರಿಯ,ಭಾರತಿರಾವ್ ಮತ್ತು ಪೂಜಾ ಭಾರದ್ವಾಜ್

ಇನ್ನುಳಿದ ತಾಂತ್ರಿಕ ವರ್ಗಕ್ಕೆ ದೊಡ್ಡದೊಂದು ಲಾಲ್ ಸಲಾಂ.

ಇಷ್ಟೆಲ್ಲ ಹೊಗಳಿದ  ಮೇಲೂ ಹೇಳಲೇ ಬೇಕಾದ ಮಾತೆಂದರೆ ಈ ಹುಡುಗಿಯರು ನಿಗದಿಯಾದ ತಮ್ಮ ತಮ್ಮ ಪಠ್ಯವನ್ನು ಹೇಳುವಾಗ ಕೊಂಚ ಪಾಸ್ ಇಡಬೇಕು. ಜೊತೆಗೇ ಮಾತಿನ ವೇಗವನ್ನೂ ಕೊಂಚ ಕಡಿಮೆ ಮಾಡಿಕೊಳ್ಳಲೇ ಬೇಕು. ಇಲ್ಲದಿದ್ದರೆ ಸಂಭಾಷಣೆಯ ಭಾರದಲ್ಲಿ ಕವಿತೆಯ ತಟ್ಟುವಂಥ ಸಾಲುಗಳು ಮಿಸ್ ಆಗಿ ಬಿಡುವ ಸಾಧ್ಯತೆಗಳು ಹೆಚ್ಚು.

ಆದಿ ಅಂತ್ಯ ತರ್ಕ ಕ್ಲೈಮಾಕ್ಸುಗಳ ಭಾರವಿಲ್ಲದ ಹೆಣ್ಣೊಬ್ಬಳ ಅಂತರಂಗದ ಮಾತಿಗೆ ಗಂಡೊಳಗಿನ ಹೆಣ್ಣು ಜಾಗೃತಗೊಳಿಸುವ ಶಕ್ತಿ ಸಂಚಯವಾಗುತ್ತದಲ್ಲ ಅದಕ್ಕಿಂತ ಸಂಭ್ರಮ ಬೇಕೇನು?. ಅವನರಿವಲ್ಲಿ ಹೆಸರು ಕಾಯದ ಹಾಡು ಆಗುವ ಬದಲು “ಕಾಯವ ಕಾದುವ ಹಾಡು” ಆಗಿ ಬದಲಿಸಿಕೊಂಡು ಓದಿದೆ. ಕಿರಂ ಆಶೀರ್ವಾದದ ನಗೆ ನಕ್ಕು ಸಿಗರೇಟಿನ ಧೂಮ ಚೆಲ್ಲಿಂದಂತಾಯ್ತು.

‍ಲೇಖಕರು avadhi

November 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ನಾಟಕವನ್ನು ನೋಡಬೇಕೆನಿಸಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: