ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಸು ಕಟ್ಟುವುದಕ್ಕೂ ಕಾಣೆಯಾಗಿರಬೇಕು..

ಚಿನ್ಮಯ್ ಎಂ.


ದೀಪ ಚೆಲ್ಲಿದ ಬೆಳಕು
ನನ್ನ ತಲುಪುವ ತನಕ
ದಾರಿ ತುಂಬಾ ಕತ್ತಲು.
ಆದರೂ ಸಾಗಲೇ ಬೇಕು
ನಾನು, ಬೆಳಕು…

***

ಕಚ್ಚಿದ ಇರುವೆ
ತಕ್ಷಣ ಕೇಳಿತು
‘ಹಳೇ ನೋವುಗಳು ದೊಡ್ದವೋ?
ಹೊಸ ನೋವು ದೊಡ್ಡದೋ?’
ಇಲ್ಲ…ಆ ಕ್ಷಣ
ನನ್ನಲ್ಲಿ ಉತ್ತರವಿರಲಿಲ್ಲ…
 

***

 
ಗುಳ್ಳೆ…
ಅವನಜ್ಜ ಹಾರಿಸಿರಬಹುದು
ಮೊಮ್ಮಗ ಹಾರಿಸಬಹುದು
ಅವರಂತೆ ಇವನಿಗೂ ಅದು ಕ್ಷಣಿಕ ಸುಖ…
ಆದರೆ ಸುಖ-ದುಃಖ-
ದ ಅನುಭವಕ್ಕೂ ಸಮಯವಿಲ್ಲ,
ಹುಟ್ಟುತ್ತಲೇ ಯಾರಿಗೂ ಅರ್ಥವಾಗದ
ಸಾವಿನ ಭಯ
ಗುಳ್ಳೆಗೆ!
 

***

 
ಎಲ್ಲ ಓಡುತ್ತಿರುವಾಗ
ಸುತ್ತ ಸುತ್ತುತ್ತಿರುವಾಗ
ಆ ಮರ,ಆ ಕಲ್ಲು
ಲೈಟು ಕಂಬ, ರೋಡು, ಮನೆ
ಶಾಲೆ, ಪುಸ್ತಕ, ಶಬ್ದ, ಅರ್ಥ…
ಹೀಗೇ ಕೆಲವು
ಇದ್ದಲ್ಲೇ ಇದ್ದಂತೇ ಉಳಿದುಬಿಟ್ಟಿರುವುದು
ಕ್ರೌರ್ಯ ಮತ್ತು ಸೌಂದರ್ಯ…

***

 
ತಲೆದಿಂಬಿನ ತುಂಬೆಲ್ಲ
ಕೆಂಗುಲಾಬಿ ಮುಳ್ಳು
ಬಚ್ಚಲಮನೆ ಹಾಡಿಗೆ
ಭಾವನೆಗಳ ತೆವಲು
ಶಬ್ದ ಮಾಡೋ ಎದೆಯೊಳಗೆ
ಮರಳು ಸಿಮೆಂಟು ಕಲ್ಲು
ಈಗಷ್ಟೆ ಹುಟ್ಟಿದ ಕವಿತೆಗೆ
ಸುರುಳಿ ಮುಂಗುರುಳಿನುರುಳು…
ಸಾಕು,
ಇನ್ನಾದರೂ ಬಿಟ್ಟುಬಿಡು!!!
 

***

 
ಕತ್ತಲ ಗುರುತಿಸಲು
ಬೆಳಕು ಕಂಡಿರಬೇಕು,
ಕನಸು ಕಟ್ಟುವುದಕ್ಕೂ
ಕಾಣೆಯಾಗಿರಬೇಕು,
ಅತ್ತುಬಿಡುವುದಕ್ಕೂ
ಭಾವನೆಗಳು ಬೇಕು,
ಇಲ್ಲವಾಗುವುದಕ್ಕೂ
ಇದ್ದೆನೆಂಬುದು ಬೇಕು,
ಸರಿಯಾಗಿಲ್ಲ ಅನ್ನುವುದಕ್ಕೂ
ತಪ್ಪಾಗಿರುವುದು ಬೇಕು.
ಹೀಗೇ ಕಡೇಪಕ್ಷ
ಸುಮ್ಮನೇ ಗೀಚುವುದಕ್ಕೂ
ಏನೇನೋ ಬೇಕು!
 
ಅದೇ ಸಮಸ್ಯೆಯಾಗಿರುವುದು…
 

***

 
ಕವಿತೆ
ಬರೆಯಬೇಕು ಅಂದುಕೊಳ್ಳುವುದೇ
ಒಂದು ಚೆಂದದ
ಕವಿತೆ!
ಕಂಡಿದ್ದು ಕಾಣದ್ದು
ಅಂಟಿಸಿ ಕಿತ್ತು ಜೋಡಿಸಿ
ಕೊನೆಗೂ ಅದು ‘ಕ್ಲಿಕ್’ ಆಗುವುದು
ಏನೂ ಬರೆಯದೇ
ಉಳಿದುಬಿಡುವ ವ್ಯಂಗ್ಯದಲ್ಲೇ!!!
 
 

‍ಲೇಖಕರು avadhi

7 June, 2013

2 Comments

  1. pravara

    ಚಿನ್ಮಯ್, ಹೊಸತುಗಳನ್ನು ಒಸರುವ ಕವಿತೆ,
    ಕತ್ತಲನ್ನು ಗುರುತಿಸಲು ಬೆಳಕ ಕಂಡಿರಬೇಕು ಈ ತರಹದ ಎಷ್ಟೊಳ್ಳೆ ಸಾಲುಗಳು ಇವೆ,
    ಮತ್ತೆ ಮತ್ತೆ ಓದಿಸಿ ಶುಭವಾಗಲಿ

  2. mmshaik

    kavite tumbaa..tubaa chennaagide..dahnyavaadagaLu.!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading