’ನಮ್ಮೂರಿನ ಈ ವರ್ಷದ ಮಾರಿ ಹಬ್ಬ ಮತ್ತು ಹುಲೀರ್ ಸೋಮಿ…’

ಮೋಹನ್ ವಿ ಕೊಳ್ಳೇಗಾಲ

ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಮಾರಮ್ಮನ ದೇವಸ್ಥಾನವೆಂದಿರುತ್ತದೆ. ಸಾಮಾನ್ಯವಾಗಿ ಈ ದೇವಸ್ಥಾನ ಊರಿನ ಮುಂಬಾಗಿಲು ಅಥವಾ ಹಿಂಬಾಗಿಲಿನಲ್ಲಿ ಪ್ರತಿಷ್ಠಾಪಿತಗೊಂಡಿರುತ್ತದೆ. ಈಗೀಗ ಹಳ್ಳಿಗಳು ಈ ದೇವಸ್ಥಾನವನ್ನೂ ಮೀರಿ ಬೆಳೆದುಕೊಂಡಿವೆ. ಊರಂಚಿನಲ್ಲಿ ತಾಯಿ ಮಾರಮ್ಮ ರಾತ್ರಿಯೆಲ್ಲಾ ಗಸ್ತು ಹೊಡೆಯುತ್ತಿರುತ್ತಾಳೆ, ಆ ಮೂಲಕ ಊರಿನೊಳಗೆ ಯಾವುದೇ ದುಷ್ಟಶಕ್ತಿಯೂ ಅಷ್ಟು ಸುಲಭವಾಗಿ ಬರಲಾಗುವುದಿಲ್ಲವೆಂಬ ನಂಬಿಕೆ ಹಳ್ಳಿಯ ಜನರಲ್ಲಿ ಇನ್ನೂ ಹಸಿ ಹಸಿಯಾಗಿದೆ. ಮಕ್ಕಳಿಗೆ ಜ್ವರ ಬಂದರೆ, ಹುಷಾರು ತಪ್ಪಿದರೆ, ಬೆಚ್ಚಿದರೆ ಈ ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ, ದೇವರಿಗೆ ಅಡ್ಡ ಬೀಳಿಸಿ ಹಣೆಗೆ ‘ಧೂಳ್ತಾ’ ಹಾಕಿಸಿಕೊಂಡು ಬರುತ್ತಾರೆ, ಕೆಲವೊಮ್ಮೆ ತಂಬಡಪ್ಪ(ಪೂಜಾರಿ)ನ ಕೈಯಿಂದ ಬೇವಿನ ಸೊಪ್ಪಿನಲ್ಲಿ ಇಳಿ ಎತ್ತಿಸಿಕೊಂಡು ಮಂತ್ರವನ್ನು ಹಾಕಿಸಿಕೊಳ್ಳುತ್ತಾರೆ, ಅದಿಲ್ಲದಿದ್ದರೆ ಆತ ಆ ಕ್ಷಣದಲ್ಲಿ ಮಂತ್ರಿಸಿದ ವಿಭೂತಿ ಉಂಡೆಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಬೇವಿನ ಸೊಪ್ಪು ಮತ್ತು ವಿಭೂತಿ ಉಂಡೆ ಎರಡೂ ಸಿಗದಿದ್ದಾಗ ಎಷ್ಟೋ ಬಾರಿ ಟವೆಲ್‍ನಲ್ಲಿಯೇ ಇಳಿ ತೆಗೆದು ಮಂತ್ರ ಹಾಕಿರುವುದನ್ನೂ ಕಂಡಿದ್ದೇನೆ.

ಮಕ್ಕಳಲ್ಲದೇ ಬೆಳೆದವರೂ, ಮುದುಕರೂ ಆಗಾಗ ಬಂದು ದೇವರ ಹೆಸರಿನಲ್ಲಿ ಈ ಶುಶ್ರೂಶೆಯನ್ನು ಮಾಡಿಸಿಕೊಂಡು ಹೋಗುತ್ತಿರುತ್ತಾರೆ. ಜೊತೆಗೆ, ಊರಿನ ಬರಗಾಲಕ್ಕೆ ಮಾರಮ್ಮನ ಮುನಿಸೇ ಕಾರಣವೆಂದು ಕಲ್ಪಿಸಿಕೊಂಡು, ನಂತರ ಭಯ ಭೀತಿ ಭಕ್ತಿಯಿಂದ ವರ್ಷಕ್ಕೊಮ್ಮೆ ನಡೆಯುವ ಮಾರಿ ಹಬ್ಬದಲ್ಲಿ ತಂಬಡಿಯ ಮೈ ಮೇಲೆ ದೇವರ ಆವಾಹನೆಯಾಗಿದೆ ಎಂದುಕೊಂಡು ಈ ಬಾರಿ ಮಳೆ ಬೆಳೆ ಚೆನ್ನಾಗಿ ಕೊಡವ್ವ, ಮುನ್ಸ್ಕೋಬೇಡ ಕಣವ್ವಾ ಎಂದು ಬೇಡಿಕೊಳ್ಳುತ್ತಾರೆ, ಕಾಣಿಕೆ ಕಟ್ಟುತ್ತಾರೆ, ಹರಕೆ ಹೊರುತ್ತಾರೆ, ರಕ್ತ ಬಲಿಯನ್ನೆಲ್ಲಾ ನೀಡುತ್ತಾರೆ. ಕೆಲವೊಮ್ಮೆ ಮಾರಮ್ಮ ‘ಉಶ್… ಆಗ್ಲಿ ಶಿಶುಮಕ್ಕಳೇ…’ ಎನ್ನುವವರೆವಿಗೂ ತುಂಡೈಕಳು ಬಿಡುವುದಿಲ್ಲ!

ಕೊಳ್ಳೇಗಾಲ ತಾಲ್ಲೋಕಿನಲ್ಲಿರುವ ನನ್ನೂರು ಲೊಕ್ಕನಹಳ್ಳಿಯಲ್ಲಿ ವರ್ಷಕ್ಕೊಮ್ಮೆ ಚಾಚೂ ತಪ್ಪದೆ ನಡೆಯುವ ಈ ಮಾರಿ ಹಬ್ಬ ನನ್ನ ಬಾಲ್ಯವನ್ನು ಯತೇಚ್ಛವಾಗಿ ಸವಿಗೊಳಿಸಿದೆ ಎಂದರೆ ತಪ್ಪಾಗಲಾರದು. ಅಂದು ಊರಿನ ತುಂಬಾ ನಕ್ಷತ್ರಗಳೇ ಬಾಡಿಗೆಗೆ ಬಂದು ಮಿನುಗಿದಂತೆ ಬೀದಿ ದೀಪಗಳು ವಾಲಾಡುತ್ತಿರುತ್ತವೆ, ರಸ್ತೆಯ ಇಕ್ಕೆಲಗಳಲ್ಲಿ ಕಪ್ಪು ಬಟ್ಟೆಗೆ ಚಿನ್ನದ ಮೊಟ್ಟೆಗಳನ್ನು ಹೊಲೆದಂತೆ ಸೀರಿಯಲ್ ಬಲ್ಬುಗಳು, ಬೃಹದಾಕಾರದ ದೇವರ ಬೋರ್ಡ್‍ಗಳು, ಪಕ್ಕದಲ್ಲಿಯೇ ಗಿರಗಿಟ್ಲೆಯಂತೆ ತಿರುಗೋ ಹೂವಿನಾಕಾರದ ಬಲ್ಬುಗಳ ಗುಂಪು ಗುಂಪು. ಸಾಲು ಸಾಲು ಬೆಳಕು ಓಡುತ್ತಿರುವಂತೆ ಭಾಸವಾಗುತ್ತದೆ.

ಒಂದೆಡೆ ಗುರುರಾಜು ನಾಯ್ಡುರವರ ಸಿರಿಕಂಠದ ನಲ್ಲತಂಗಿಯ ಕಥೆ ಧ್ವನಿವರ್ಧಕಗಳ ಮೂಲಕ ಮೊಳಗಿ ನಮ್ಮನ್ನೆಲ್ಲಾ ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತಿದ್ದರೆ, ಅದಾದ ನಂತರ ನಮ್ಮ ನೆಲದ ಕಥೆಯಾದ ‘ಸಿದ್ಧಪ್ಪಾಜಿಯ ಪವಾಡ’ವೆಂಬ ಹರಿಕಥೆ ನಮ್ಮನ್ನೆಲ್ಲಾ ನೆಲದ ಸೊಗಡಿನ ಮೂಲಕ ಆಕಾಶಕ್ಕೆ ಕೊಂಡೊಯ್ಯುತ್ತಿತ್ತು. ನಲ್ಲತಂಗಿಯ ಕಣ್ಣೀರನ ಕಥೆ, ಆಕೆ ‘ಅಣ್ಣಾ…’ ಎಂದು ಕೂಗುವುದು, ಈತ ‘ತಂಗಾ…’ ಎಂದು ಕೂಗುವುದು, ಸಿದ್ಧಪ್ಪಾಜಿಯು ಹಾಡುವ ‘ಹೋಗಲಾರೆ ಹಲಗೂರಿಗೆ ನಾ…’ ಎಂಬ ಹಾಡು, ಪವಾಡ ಗೆಲ್ಲುವಾಗ ತನ್ನ ಗುರುಗಳಾದ ‘ಧರೆಗೆ ದೊಡ್ಡವರನ್ನು’ ಕೂಗಿಕೊಳ್ಳುವುದು, ಅಪ್ಪಾ ರಾಚಪ್ಪಾಜಿ ಅಮ್ಮ ದೊಡ್ಡಮ್ಮತಾಯಿ ಎಂದು ಹೇಳಿ ಅವರಿಗೆ ನಮಸ್ಕರಿಸಿ ಆ ಕಬ್ಬಿಣದ ಸಲಾಕೆಗಳನ್ನು ಬಾಚುವುದು ಮುಂತಾದ ಸನ್ನಿವೇಶಗಳಲ್ಲಿ ನಾವೇ ಭಾವುಕರಾಗಿ ಒಂದು ಬಗೆಯ ಖಾಲಿತನಕ್ಕೆ ಬಿದ್ದುಕೊಳ್ಳುತ್ತಿದ್ದೆವು.

ಇದೆಲ್ಲದರ ಜೊತೆಗೆ ನೆಲವೇ ಕಾಣದಂತೆ ಓಡಾಡುವ ಜನಗಳು, ಸುತ್ತ ಹತ್ತಾರು ಹಳ್ಳಿಯ ಹೊಸ ಹೊಸ ಮುಖಗಳು, ಪಂಚೆ ಕಟ್ಟಿ ಕತ್ತಿಗೆ ಟವೆಲ್ ಸುತ್ತಿಕೊಂಡು ಓಡಾಡೋ ಮುಗ್ಧರು. ಇಷ್ಟಾದರೂ ಮೈ ತುಂಬಿಕೊಂಡು, ಟಾಪ್‍ಲೆಲ್ಲಾ ಜನರನ್ನು ಕೂರಿಸಿಕೊಂಡು ಬರುವ ಬಸ್‍ಗಳು, ವರ್ಷವೆಲ್ಲಾ ಸ್ನಾನ ಮಾಡದಂತೆ ಕಾಣುತ್ತಿದ್ದ ಎಷ್ಟೋ ಜನ ಇಂದು ಹಠಕ್ಕೆ ಬಿದ್ದವರಂತೆ ಮೈ ಕೈ ತಿಕ್ಕಿ ಬಿಳಿ ಬಿಳಿ ಬಟ್ಟೆ ತೊಟ್ಟು, ಇಲ್ಲದಿರೆ ನನ್ನಂತೆ ಮೈ ಬಣ್ಣಕ್ಕೂ ಬಟ್ಟೆಗೂ ಅಜಗಜಾಂತರ ವ್ಯತ್ಯಾಸ ಇರುವ ಬಟ್ಟೆಗಳನ್ನು ಖುಷಿಯಿಂದಲೇ ಧರಿಸಿ ಎದ್ದು ಕಾಣುವ ಜನ. ಮಾರಮ್ಮನೇ ಅನುಮತಿ ಕೊಟ್ಟಂತೆ ಕಂಠಪೂರ್ತಿ ಕುಡಿದು ತಮ್ಮದೇ ಸ್ಟೆಪ್‍ಗಳ ಮೂಲಕ ತೂರಾಡುವ ಮಂದಿ. ಇದ್ದಕ್ಕಿದ್ದಂತೆ ನನ್ನಂತಹ ಪುಟಾಣಿಗಳನ್ನು ಮೇಲಕ್ಕೆತ್ತಿ ಹೆಗಲ ಮೇಲೆ ಕೂರಿಸಿಕೊಂಡು ಕುಣಿಯುತ್ತಿದ್ದದ್ದು, ಹಠಾತ್ತನೇ ಕೈಬಿಟ್ಟು ಬಿಚ್ಚಿಹೋದ ಪಂಚೆಯನ್ನು ಕಟ್ಟಿಕೊಳ್ಳಲು ಪ್ರಯತ್ನಿಸಿ ಸೋತು ಮತ್ತೆ ಪ್ರಯತ್ನಿಸಿ ಗೆಲ್ಲುತ್ತಿದ್ದದ್ದು.

ಇದೆಲ್ಲದರ ಜೊತೆಗೆ ತಂಬಿಟ್ಟನ್ನು ಹೊತ್ತುಕೊಂಡು ಡೋಲು ಪೀಪಿಯ ಸದ್ದಿನ ಮೂಲಕ ಬೀದಿ ಬೀದಿಗೆ ಮೆರವಣಿಗೆ ಸಾಗುವಾಗ ಅಲ್ಲಲ್ಲಿ ಕೂಡಿಕೊಳ್ಳುತ್ತಿದ್ದ ಸೀರೆ ಸುತ್ತಿಕೊಂಡ ಪುಟಾಣಿ ಹುಡುಗಿಯರು, ಮದುವೆಯಾದವರು, ಮದುವೆ ಮಾಡಿಕೊಳ್ಳಲು ಸಜ್ಜಾಗಿರುವವರು, ಆಗಷ್ಟೇ ಮೈನೆರೆದಿರುವವರು… ಇವರದೇ ಮತ್ತೊಂದು ಸೊಬಗು, ವೈಭೋಗ. ನಮ್ಮ ಹಳ್ಳಿಯಲ್ಲು ಇಷ್ಟೊಂದು ಹೆಣ್ಣು ಮಕ್ಕಳುಗಳಿವೆ ಎಂದು ಹುಬ್ಬೇರಿಸುವ ಸಮಯ. ಅಂದಿನಿಂದ ಇಂದಿನವರೆವಿಗೂ ತಂಬಿಟ್ಟು ಹೊತ್ತು ತರುವವರ ಹಾದಿಯುದ್ದಕ್ಕೂ ಸೀರೆ ಹಾಸುವ ನಮ್ಮ ಅಗ್ಸಣ್ಣ. ಇದನ್ನು ‘ತಂಪು ಹೊತ್ತು ತರುವುದು’ ಎನ್ನುತ್ತಾರೆ.

 

ಇದು ಒಂದು ಮುಖವಾದರೆ, ಖುಷಿಯ ನೆರಳಿನಲ್ಲಿಯೇ ನಲುಗುವ ಮತ್ತೊಂದು ಮುಖವೂ ಈ ಹಬ್ಬಕ್ಕೆ ಮೊದಲಿನಿಂದಲೂ ತಳುಕು ಹಾಕಿಕೊಂಡೇ ಬಂದಿದೆ. ನನಗೆ ಬುದ್ಧಿ ಬಂದ ಕಾಲದಿಂದಲೂ ದೇವಸ್ಥಾನದೊಳಗೆ ದಲಿತರು ಯಾವುದೇ ಕಾರಣಕ್ಕೂ ಪ್ರವೇಶಿಸಬಾರದೆಂಬ ನಿರ್ಬಂಧವಿತ್ತು. ನಾವು ಪ್ರವೇಶಿಸಿಯೇ ತೀರುತ್ತೇವೆ ಎಂಬ ಛಲ ದಲಿತರಲ್ಲಿತ್ತು. ಕೆಲವರು ಪ್ರವೇಶಿಸಬೇಕು ಮತ್ತೆ ಕೆಲವರಿಗೆ ಪ್ರವೇಶ ನಿಷಿದ್ಧ ಎಂದು ಹೇಳುವ ಮೂಲಕ ದೇವರನ್ನು ಅಸ್ಪೃಶ್ಯಗೊಳಿಸುತ್ತಿದ್ದದ್ದು ಊರಿಗೆ ದೊಡ್ಡವರೆನಿಸಿಕೊಂಡವರಿಗೆ, ಯಜಮಾನರಿಗೆ ಅರ್ಥವಾಗುತ್ತಿರಲಿಲ್ಲ. ಬದಲಾಗಿ ದಲಿತರು ದೇವಸ್ಥಾನದೊಳಗೆ ನುಗ್ಗಿದರೆ ಪಾವಿತ್ರ್ಯತೆ ಹಾಳಾಗುತ್ತದೆ ಎಂಬ ಒಂದು ಸನಾತನ ಮೂಢನಂಬಿಕೆ ಅವರಲ್ಲಿ ಹುತ್ತಗಟ್ಟಿತ್ತು. ಈ ವಿಚಾರವಾಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಬಸವನ ಗುಡಿಯ ಚಾವಡಿಯಲ್ಲಿ ಎಷ್ಟೋ ದಿನ ಎಲ್ಲಾ ಜಾತಿಯವರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ನಡೆದಿದೆ.

ಅಲ್ಲೂ ಕೂಡ ಎಲ್ಲಾ ಜಾತಿಯ ಜನರಿಗೆ ಚಾವಡಿಯೊಳಗೆ ಪ್ರವೇಶವಿದ್ದರೆ, ದಲಿತರು ಚಾವಡಿಯ ಕೆಳಗಿನ ಚಪ್ಪಡಿ ಕಲ್ಲಿನ ಮೇಲೆ ಅಸಹಾಯಕರಾಗಿ ಕುಳಿತುಕೊಳ್ಳುತ್ತಿದ್ದರು. ಆಯಾ ಗುಂಪಿನವರು ದೊಣ್ಣೆ, ಕತ್ತಿ ಮಚ್ಚು ಕಾರದಪುಡಿಯನ್ನು ತಂದಿದ್ದು ಇದೆ, ಎಷ್ಟೋ ಬಾರಿ ಜಗಳವೂ ನಡೆದಿದೆ. ‘ಸೂಳೆಮಕ್ಳು, ಎಲ್ಲಿರ್ಬೇಕು ಅಲ್ಲಿರ್ಬೇಕು, ಇವತ್ತು ಮಾರವ್ವನ್ ಗುಡಿಗೆ ಬಿಟ್ರೆ ನಾಳೆ ಪೆರುಮಾಳ ಸ್ವಾಮಿ ಗುಡಿಗೂ ಬತ್ತರೆ, ಆಮೇಕೆ ರಾಮಮಂದ್ರಕ್ಕೂ ಬತ್ತರೆ, ನಿಮ್ಮಟ್ಟಿಗೂ ಬತ್ತರೆ, ನಿಮ್ಮ ಹೆಣ್ಣನ್ನೂ ಕೇಳ್ತಾರೆ, ಬಡ್ಡೈಕ್ಳಿಗೆ ಇವತ್ತು ಒಂದು ಗತಿ ಕಾಣಿಸ್ಬೇಕು, ಅವನವ್ವನ್ನ ___’. ಇಂಥಹ ಬೈಗುಳಗಳು ಯತೇಚ್ಛವಾಗಿ ಹರಿದಾಡಿವೆ. ಮಾರಮ್ಮನ ದೇವಸ್ಥಾನದ ಮುಂದಿರುವ ಕುಣಿತದ ರಂಗದಲ್ಲಿಯೂ ದಲಿತರು ಮತ್ತು ಉಳಿದವರು ಬೇರೆ ಬೇರೆ ಕುಣಿಯಬೇಕೆಂಬ ನಿಯಮವಿತ್ತು. ಕುಡಿದ ಅಮಲಿನಲ್ಲಿ ಅವನನ್ನು ಇವನು ನೂಕಿದ, ಇವನನ್ನು ಅವನು ನೂಕಿದ ಎಂದು ಗಲಾಟೆ ಪ್ರಾರಂಭವಾಗಿಬಿಟ್ಟರೆ, ಕೈ ಕೈ ಮಿಲಾಯಿಸಲು ಮುತ್ತಿಕೊಳ್ಳುತ್ತಿದ್ದ ಸಾವಿರಾರು ಜನಗಳ ನಡುವೆ ಸಿಲುಕಿಕೊಂಡು ಉಸಿರುಗಟ್ಟಿ ಅನೇಕಬಾರಿ ಒದ್ದಾಡಿದ್ದೇನೆ. ನಿಮ್ಮ ಜಗಳಗಳಿಗೆ ನೀವೆ ಕಾರಣವೆಂದು ಹೇಳಿ ಹೇಳಿ ಸಾಕಾಗಿ ಮೌನಗೊಂಡಂತೆ ಮಾರಮ್ಮ ಕಾಣುತ್ತಿದ್ದಳು.

ಇದಲ್ಲದೇ, ನಮ್ಮ ಹಳ್ಳಿಯಲ್ಲಿ ಎಲ್ಲದಕ್ಕೂ ಗೆರೆ ಎಳೆಯುತ್ತಿದ್ದ ಮತ್ತೊಂದು ಬಾಲಿಶ ಕಾರಣವಿತ್ತು. ಕರ್ನಾಟಕ ಮತ್ತು ತಮಿಳುನಾಡಿನ ಗಡಿಭಾಗದಲ್ಲಿರುವ ನಮ್ಮ ಹಳ್ಳಿಯಲ್ಲಿ ಕನ್ನಡಿಗರಷ್ಟೇ ಸಮವಾಗಿ ತಮಿಳರ ಜನಸಂಖ್ಯೆಯಿದೆ. ಇದು ಹಳ್ಳಿಯನ್ನು ಕನ್ನಡಿಗರು ಮತ್ತು ತಮಿಳಿಗರು ಎಂದು ಮತ್ತೊಂದು ವಿಧವಾಗಿ ವಿಂಗಡಿಸಲು ಕಾರಣವಾಗುತ್ತದೆ. ಮದುವೆ, ಸಾವು ಪ್ರತಿಯೊಂದಕ್ಕೂ ಇಬ್ಬರಿಗೂ ಅವರದೇ ನೀತಿ, ಸಂಪ್ರದಾಯಗಳಿವೆ. ಆ ವಿಚಾರವಾಗಿ ಅನ್ಯ ಭಾಷಿಗರ ನಡುವೆ ಒಡಕು ಕಾಣಿಸಿಕೊಳ್ಳುವುದಿಲ್ಲ. ಮದುವೆ ಸಮಾರಂಭಗಳಲ್ಲಿ ಬೆರೆತು ಸಂಭ್ರಮಿಸುತ್ತಾರೆ, ಅವರಿವರನ್ನು ಮತ್ತು ಇವರವರನ್ನು ಮದುªಗೆÉ ಕರೆಯುತ್ತಾರೆ, ಒಟ್ಟಿಗೆ ಉಣ್ಣುತ್ತಾರೆ. ಗೌಂಡರ್ ಜನಾಂಗದವರು ಮಾಡುವ ತಿಳಿ ಸಾಂಬಾರನ್ನು ನಮ್ಮ ಕನ್ನಡಿಗರು ಇಂದಿಗೂ ಇಷ್ಟ ಪಟ್ಟು ನಾಲಗೆಯಲ್ಲಿ ಸವಟಿ ಕುಡಿಯುತ್ತಾರೆ. ಆದರೆ, ಯಾವುದೇ ಸಮಾರಂಭವಿರಲಿ, ಒಸಗೆಯಿರಲಿ ಎರಡು ಕಡೆಯೂ ದಲಿತರಿಗೆ ಪ್ರವೇಶವಿಲ್ಲ.

ಈ ದೇಶದ ಪರಮನೀಚ ವ್ಯವಸ್ಥೆಯೊಂದಕ್ಕೆ ಸಿಲುಕಿ ನಲುಗಿರುವ ಈ ಜನಕ್ಕೆ ಜನಾನುರಾಗಿಯಾದ ಭಾವನೆಗಳಲ್ಲಿಯೂ, ಸ್ಪಂದನೆಗಳಲ್ಲಿಯೂ ತಾರತಮ್ಯ ಉಂಟಾದದ್ದು ಮನಸ್ಸಿಗೆ ನೋವುಂಟು ಮಾಡುವ ವಿಚಾರ. ಊರನ್ನು ಬೀದಿ ಬೀದಿಯಾಗಿ ವಿಂಗಡಿಸಿದ ದೊಡ್ಡವರೆನಿಸಿಕೊಂಡವರು ಗಿಡಗಂಟೆ ಕಡಿದು ನೆಲ ಕಾಣುವಾಗ ಅವರ ಕೈ ಕಾಲಿಗೆ ಪೆಟ್ಟಾಗಿದ್ದರೆ, ಅದು ಚಿಮ್ಮಿಸಿದ ರಕ್ತದ ಬಣ್ಣ ಕೇವಲ ಕೆಂಪು ಎಂದು ಅವರು ಅಂದು ಅರ್ಥ ಮಾಡಿಕೊಳ್ಳಲಿಲ್ಲ. ಮಾರಿಹಬ್ಬದ ವಿಚಾರ ಬಂದಾಗ ಸ್ಪೀಕರ್ ಅಳವಡಿಸುವ ವಿಚಾರದಲ್ಲಿ ಈ ಎರಡು ಭಾಷಿಗರ ನಡುವಿನ ಜಗಳ ಉಂಟಾಗಿ ಕೊನೆಗೆ ಅದೂ ಕೂಡ ಕೈ ಕೈ ಮಿಲಾಯಿಸುವವರೆವಿಗೂ ಹೊರಟುಹೋಗುತ್ತಿತ್ತು. ಅವರು ತಮಿಳು ಹಾಡು ಕೇಳಬೇಕು, ಇವರು ಕನ್ನಡ ಹಾಡು ಕೇಳಬೇಕು. ಮಾರಿಹಬ್ಬದ ಸ್ಪೀಕರ್, ಡೆಕ್ ಗಳೆಂದರೆ ಪಕ್ಕದ ಹಳ್ಳಿಯವರೆವಿಗೂ ಕೇಳಿಸುವಷ್ಟು ಸದ್ದು ಗದ್ದಲವಿರುತ್ತದೆ. ಕೊನೆಗೆ ತಮಿಳಿಗರ ಬೀದಿಯ ಕಡೆಗೆ ಕನ್ನಡಿಗರು ಒಂದಷ್ಟು ಸ್ಪೀಕರ್‍ಗಳನ್ನು ತಿರುಗಿಸಿ ಚೀರಾಟ ಹೆಚ್ಚಿರುವ ಹಾಡುಗಳನ್ನೇ ಹಾಕಿ ಫುಲ್ ವಾಲ್ಯೂಮ್ ಕೊಡುತ್ತಿದ್ದರು. ಕಾರಣ, ಇವರಿಗಿಂತ ಮೊದಲು ಅವರೇ ಈ ರೀತಿ ಮಾಡಿಬಿಡುತ್ತಿದ್ದರು. ಆ ಸ್ಪೀಕರ್ ಗಳಿರುವ ಜಾಗಕ್ಕೆ ತೆರಳಿದೊಡನೆ ಕಿವಿಗಳಿಗೆ ಇನ್ನಿಲ್ಲದ ಕಿರಿ ಕಿರಿ. ಒಮ್ಮೆ ತಮಿಳು ಹಾಡು ಕೇಳಿದರೆ, ಮತ್ತೊಮ್ಮೆ ಕನ್ನಡ ಹಾಡು. ಒಟ್ಟೊಟ್ಟಿಗೆ.

ಕಳೆದೆರಡು ಬಾರಿಯ ಮಾರಿ ಹಬ್ಬಕ್ಕೆ ಹೋಗಲಾಗಲಿಲ್ಲ. ಆದರೆ, ಈ ಬಾರಿ ಹೋಗಿಬರೋಣವೆಂದು ನಿರ್ಧರಿಸಿಕೊಂಡಿದ್ದೆ. ಆದರೆ, ಕೆಲವು ದಿನಗಳ ಹಿಂದೆಯಷ್ಟೇ ತೂರಿ ಬಂದಿದ್ದ ಮಾತೆಂದರೆ – ‘ಬರಗಾಲವಿರುವ ಕಾರಣ ಈ ಬಾರಿ ಮಾರಿಹಬ್ಬವನ್ನು ಮಾಡುವುದಿಲ್ಲ’. ಅಬ್ಬಾ! ನಮ್ಮ ಹಳ್ಳಿಯ ಜನ ನಿಜಕ್ಕೂ ಪ್ರಬುದ್ಧರಾದರು ಎಂದುಕೊಂಡು ಖುಷಿ ಪಟ್ಟಿದ್ದೆ. ಯಾಕೆಂದರೆ, ಎಷ್ಟೋ ಜನ ತಾವು ವರ್ಷವೆಲ್ಲಾ ದುಡಿದ್ದದ್ದನ್ನೆಲ್ಲಾ ನೆಂಟರಿಷ್ಟರ ಖುಷಿಗೋಸ್ಕರ ಈ ಹಬ್ಬದ ನೆಪದಲ್ಲಿ ಮಾರಿ ಕೇರಿ ತಿಂದುಬಿಡುವುದಲ್ಲದೇ, ಸಾಲವನ್ನೂ ಮಾಡಿಕೊಂಡು ಮತ್ತೆ ಸಾಲ ತೀರಿಸಲು ವರ್ಷವೆಲ್ಲಾ ದುಡಿಯುತ್ತಾರೆ. ಆದರೆ ಹಳ್ಳಿಯಲ್ಲಿ ಎದೆ ನಿಗುರಿಸಿಕೊಂಡು ನಡೆಯುವ ತುಂಡೈಕಳು ಒಪ್ಪದ ಕಾರಣ ಹಬ್ಬದ ನೆಪದಲ್ಲಿ ಮತ್ತೆ ಹಳ್ಳಿ ಹಳದಿ ಬಟ್ಟೆ ತೊಟ್ಟಿತ್ತು. ಬರಗಾಲದ ಕಾರಣವೋ ಅಥವಾ ಹಳ್ಳಿಗಳೂ ವಿದ್ಯುನ್ಮಾನಗೊಳ್ಳುತ್ತಿರುವ ಸಬೂಬಿನಿಂದಲೋ ಮಾರಿಹಬ್ಬಕ್ಕೆ ಮೊದಲಿನಷ್ಟು ಕಳೆ ಇರಲಿಲ್ಲ. ಅಂದು ಸಂಭ್ರಮದಿಂದ ಓಡಾಡುತ್ತಿದ್ದ ಜನ ಇಂದು ಮೊಬೈಲ್‍ನಲ್ಲಿ ಬ್ಯುಸಿಯಾಗಿರುವುದು ಕಂಡೆ.

ಮನೆಯವರ ಹಿಂಸೆಗೆ ಮಣಿದು ಮಾರಮ್ಮನ ದೇವಸ್ಥಾನದ ಬಳಿ ಕೈ ಮುಗಿದುಕೊಂಡು ಬರಲು ಹೋಗಿದ್ದಾಗ, ಅಗ್ನಿ ಕಂಬಕ್ಕೆ ಪೂಜೆ ನಡೆಯುತ್ತಿತ್ತು. ಪೂಜೆ ಮುಗಿದ ನಂತರ ದೇವರ ದರ್ಶನಕ್ಕೆ ಎಲ್ಲರೂ ಒಳಗೆ ಓಡಿದರು. ಓಹ್! ಒಮ್ಮೆಲೇ ನನಗೆ ಇನ್ನಿಲ್ಲದ ಆಶ್ಚರ್ಯ. ಅಂದು ದೇವಸ್ಥಾನಕ್ಕೆ ನುಗ್ಗಲೇಬೇಕೆಂದು ಹೋರಾಡುತ್ತಿದ್ದ ನನ್ನ ದಲಿತ ಗೆಳೆಯರೆಲ್ಲಾ ದೇವಸ್ಥಾನದೊಳಗೆ! ಆ ಘಳಿಗೆಗೆ ಆ ಘಟನೆಯನ್ನು ನಿಜಕ್ಕೂ ಕನಸ್ಸೆಂದುಕೊಂಡಿದ್ದೆ. ಎಷ್ಟೋ ರಕ್ತಪಾತಕ್ಕೆ ಕಾರಣವಾಗಿದ್ದ ಹೋರಾಟವೊಂದು ಇಂದು ಮೂರ್ತಗೊಂಡಿದೆ.

ಹೊರಬಂದವನೇ ಗೆಳೆಯನೊಬ್ಬನನ್ನು ಈ ವಿಚಾರವಾಗಿ ವಿಚಾರಿಸಿದೆ. ಆತನ ಮಾತನ್ನು ಕೇಳಿ ಜೇನು ಸವಿದಷ್ಟೇ ಖುಷಿಯಾಯಿತು. ನನ್ನ ಇಷ್ಟೂ ಹಬ್ಬಗಳಲ್ಲಿ ಈ ಹಬ್ಬವೇ ಹೆಚ್ಚು ಕಳೆಗಟ್ಟಿದಂತೆ ಕಂಡಿತು. ದೇವರ ವಿಚಾರದಲ್ಲಿ ಜನರು ಪ್ರಬುದ್ಧರಾಗಿದ್ದಾರೆಂದೆನಿಸಿತು. ಎಲ್ಲರೂ ನ್ಯಾಯದ ಕಟ್ಟೆಗೆ ಸೇರಿ, ದೇವರ ವಿಚಾರದಲ್ಲಿ ಇನ್ನು ಮುಂದೆ ಜಗಳವಾಡುವುದು ಸಲ್ಲ, ದೇವರಿಗೆ ಮೇಲು ಕೀಳಿಲ್ಲ, ಎಲ್ಲಾ ಜನರನ್ನೂ ಆಲಂಗಿಸಿಕೊಳ್ಳುವ ದೈವತ್ವ ಎಲ್ಲರಲ್ಲೂ ಮೂಡಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಆದರೂ ಈ ವಿಚಾರಕ್ಕಾಗಿ ಗೊಣಗುತ್ತಿದ್ದ ಜನರನ್ನು ಅಲ್ಲಲ್ಲಿ ಕಂಡೆ. ಮೆದುಳಿಗೇ ಕಪ್ಪುಬಟ್ಟೆಯನ್ನು ಸುತ್ತಿಕೊಂಡಿರುವವರನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ. ಮಾನವತೆಯ ಇಂಬಿನಲ್ಲಿಯೇ ಬೆಳೆಯುವ ಮಗುವಿನ ಮನಸ್ಸಿನ ಲಕ್ಷಣಗಳನ್ನು ಮನುಷ್ಯ ಬೆಳೆದಂತೆ ಉಳಿಸಿಕೊಳ್ಳಬೇಕು. ಇದರ ಜೊತೆಗೆ, ಎಲ್ಲಾ ಹೋಟೆಲ್ ಗಳಲ್ಲಿಯೂ ದಲಿತಬಂಧುಗಳಿಗೆ ಪ್ರವೇಶಿಸಲು ಒಪ್ಪಿಗೆ ಸೂಚಿಸಿರುವುದು ಮೆಚ್ಚಬೇಕಾದ ಮತ್ತೊಂದು ಬೆಳಗವಣಿಗೆ. ಈ ಮಾನವ ಸಂಬಂಧಿ ವಿಚಾರಗಳು ಮತ್ತೆ ಕೋಪ ತಾಪಗಳಿಗೆ ಎಡೆ ಮಾಡಿಕೊಡದೆ, ವೈಷಮ್ಯಕ್ಕೆ ಕಾರಣವಾಗದೆ ಎಲ್ಲರೂ ಒಂದೇ ಎಂಬುದು ಇನ್ನೂ ಮೊಳಗಲಿ, ಬೀದಿ ಬೀದಿ ನಡುವಿನ ಗೆರೆಗಳು ಸುಟ್ಟು ಹೋಗಿ ಕೇವಲ ಮನುಷ್ಯ ಮಾತ್ರ ಸಂಬಂಧಗಳು ಉಳಿದುಕೊಳ್ಳಲಿ.

ನಮ್ಮ ಹಳ್ಳಿಗರಿಗೆ ಪರಸ್ಥಳವೇ ಪರದೇಶದಂತೆ. ನಾವುಗಳು ಬೆಂಗಳೂರಿನಲ್ಲಿ ತುತ್ತು ಅನ್ನಕ್ಕಲೆದಾಡುತ್ತಿದ್ದರೂ ಊರಿಗೆ ಹೋದಾಗ ಇನ್ನಿಲ್ಲದ ಅಕ್ಕರೆಯಲ್ಲಿ ಮಾತನಾಡುತ್ತಾರೆ. ‘ಅಲ್ಲಿದ್ದಯಂತ, ಇಲ್ಲಿದ್ದಯಂತ, ಒಟ್ನಲ್ಲಿ ಚೆನ್ನಾಗಿರಪ್ಪ’ ಎಂದು ಬಾಯಿ ತುಂಬ ಹರಸುತ್ತಾರೆ. ಕೆಲವರು ತೂರಾಡಿಕೊಂಡು ಬಂದು ಮೈಮೇಲೆ ಬಿದ್ದು ನಂತರ ಗುರುತು ಹಚ್ಚಿ ಮಾತನಾಡಿಸುತ್ತಾರೆ. ಅದೇ ತರಹನಾಗಿ ನನಗೆ ಈ ಬಾರಿ ಸಿಕ್ಕಿದ ಒಬ್ಬ ಅಪರೂಪದ ವ್ಯಕ್ತಿಯೆಂದರೆ ಹುಲೀರ್ ಸೋಮಿ. ಆತನನ್ನು ಹುಲೀರ್ ಸೋಮಿ ಎಂದು ಕರೆಯಲು ಕಾರಣವೇನೆಂಬುದೆನಗೆ ತಿಳಿಯದು. ಆದರೆ ಆತ ನಮ್ಮ ಹಳ್ಳಿಯಲ್ಲಿರುವ ಅನೇಕರಿಗೆ ಅಪರೂಪದ ಮತ್ತು ಕುಖ್ಯಾತಿ ಪಡೆದಿರುವ ವ್ಯಕ್ತಿ. ಈ ಬಾರಿ ನನ್ನಲ್ಲಿ ಒಂದಷ್ಟು ಜಿಜ್ಞಾಸೆ ಹುಟ್ಟುಹಾಕಿದ್ದೂ ಹೌದು.

ಮೊದಲನೆಯದಾಗಿ ಎಲ್ಲರೂ ಹೇಳುವಂತೆ ಆತ ಸರಿ ಸುಮಾರು 35 ವರ್ಷಗಳಿಂದ ಕುಡಿಯುತ್ತಿದ್ದಾನೆ. ಮುಂಜಾನೆ ಸೂರ್ಯೋದಯಕ್ಕಿಂತಲೂ ಮೊದಲೇ ಗಂಟಲಿಗೆ ಸಾರಾಯಿ ಇಳುಗಿಸಿದರೆ ಮತ್ತೆ ತೂರಾಡಿಕೊಂಡು ಮನೆಗೆ ಸೇರಿದ ಮೇಲೂ ಮನೆಯಲ್ಲೂ ಮತ್ತೊಂದು ರೌಂಡು! ಆತ ಕುಡಿಯದೇ ಇದ್ದ ದಿನಗಳಿಲ್ಲ, ಆತ ಚರಂಡಿಗೆ ಬೀಳದೆ ಇದ್ದ ದಿನವಿಲ್ಲ. ವಾರಕ್ಕೊಂದೈದು ಬಾರಿ ಮತ್ತಷ್ಟು ಕುಡುಕರ ಜೊತೆ ಇಲ್ಲದ ವಿಚಾರಕ್ಕೆ ಗುದ್ದಾಡಿಕೊಂಡು ರಸ್ತೆಯ ಮೇಲೆಲ್ಲಾ ಹೊರಳಾಡಿ ಮೈ ಕೈಗೆಲ್ಲಾ ತೊಪ್ಪೆ, ಕೆಸರು ಮೆತ್ತಿಕೊಳ್ಳುತ್ತಿದ್ದವನು. ಅವನ ಹಲ್ಲುಗಳಲ್ಲಿ ಪಾಚಿ ಕಟ್ಟಿತ್ತು, ಕೂದಲೆಲ್ಲಾ ಗಂಟು ಹಾಕಿಕೊಂಡಿತ್ತು. ಹರಿದ ಬಟ್ಟೆ, ತಲೆಗೆ ಸಿಂಬಿಯಂತೆ ಸುತ್ತಿಕೊಂಡ ಕೊಳಕು ಟವೆಲ್, ಅವನಿಗಿಂತ ಹೆಚ್ಚಾಗಿ ತೂರಾಡೋ ಅವನ ಪಂಚೆ. ದುಡಿದು ಮನೆಗೆ ಹಾಕುತ್ತಿರಲಿಲ್ಲ, ಬದಲಾಗಿ ದುಡಿದು ಏನನ್ನೋ ಬೇಯಿಸುತ್ತಿದ್ದ ಹೆಂಡತಿಯ ಪಾದವೇ ಪ್ರತಿದಿನ ಅವನಿಗೆ ಗತಿ. ಆಕೆ, ಈ ಶೂರನನ್ನು ಕಟ್ಟಿಕೊಂಡು ಎರಡು ಹೆತ್ತು ಪ್ರತಿದಿನ ಸೆಣೆಸಾಡುತ್ತಿದ್ದಳು. ಗಂಡನಿಂದ ಒದೆ ತಿನ್ನದೇ ಇರುತ್ತಿದ್ದ ದಿನ ಅವಳಿಗೆ ತುಟ್ಟಿ. ಮೊದಲು ಆತ ಕುಡಿಯುತ್ತಿದ್ದದ್ದು ಭಟ್ಟಿ ಸರಾಯಿ, ನಂತರ ಪ್ಯಾಕೆಟ್ ಸರಾಯಿ, ಪ್ಯಾಕೆಟ್ ಸರಾಯಿ ಬ್ಯಾನ್ ಆದ ಈ ದಿನಗಳಲ್ಲಿ ಅವನು ಕುಡಿಯುವುದು 55 ರೂಪಾಯಿಯ ಯಾವುದೋ ಬ್ರಾಂಡಿಯಂತೆ.

ಇಷ್ಟಾದರೂ ಆತನಿಗೆ ಕಿಡ್ನಿ, ಲಿವರ್ ಏನೂ ಫೇಲ್ ಆಗಲಿಲ್ಲವೇ? ಇನ್ನೂ ಗಟ್ಟಿಮುಟ್ಟಾಗಿಯೇ ಇದ್ದಾನೆ. ಇದೆಲ್ಲದರ ಜೊತೆಗೆ ಆತ ಮೈ ಮುರಿದು ಅಲ್ಲಿ ಇಲ್ಲಿ ದುಡಿಯುವುದರಿಂದ, ಮರದ ದಿಮ್ಮಿಗಳನ್ನು ಹೊರುವುದರಿಂದ ದಢೂತಿಯಾಗಿದ್ದಾನೇನೋ. ಅದಿರಲಿ, ಆತನನ್ನು ಒಂದು ಜಗುಲಿಯ ಮೇಲೆ ಕೂರಿಸಿಕೊಂಡು ‘ಅಲ್ಲಣ್ಣ, ಕುಡಿಯೋದು ಬಿಟ್ಟುಬಿಡೋದಲ್ವೇ?’ ಅಂದೆ. ಆತ ಏಕ್‍ದಂ ಸಿಟ್ಟಿನಿಂದ ‘ಯೋ, ನೀನ್ ಅದೆಷ್ಟೋ ಓದಿದ್ಯ ಅಂತಾರೆ, ನಿನಗೆ ಬಿಡ್ಸೋ ಯೋಗ್ಯತೆ ಇದ್ದೇನಯ್ಯಾ, ಅದೇನೇನೋ ಔಸ್ದಿ ಹಾಕುದ್ರೂ ನಾ ಬಿಡ್ಲಿಲ್ಲ ಕಣಯ್ಯಾ, ನೀನ್ ಬುಡ್ಸಯ್ಯಾ ಮತ್ತ’ ಎಂದ. ಚಟ ಅವನನ್ನು ತಿನ್ನುತ್ತಿದೆ ಎಂದೆನಿಸಿತ್ತು. ಇದ್ದಕ್ಕಿದ್ದಂಗೆ ‘ಮುಕ್ ಮಂತ್ರಿ ಸಿದ್ರಾಮಣ್ಣನಿಗೆ ಜೈ’ ಎಂದ. ‘ತಗಾಳಪ್ಪ! ಯಾಕಪ್ಪಾ?’ ಎಂದೆ. ‘ಸಿದ್ರಾಮಣ್ಣ, ಬಾಟ್ಲಿಗೆ 20 ರುಪಾಯಿ ಇಳ್ಗುಸ್ತಾರಂತೆ, ಅದೊಂದ್ ಆದ್ರೆ ಅವಯ್ಯಾ ನಂ ದೇವ್ರು’ ಅಂದ. ‘ಸರಿಹೋಯ್ತು, ಇನ್ನೂ ಕಡಿಮೆ ಮಾಡ್ಲಿ, ಕುಡಿದು ಕುಡಿದು ಹಾಳಾಗಿ, ಆ ಸಾರಾಯಿ ಪ್ಯಾಕೆಟ್ಟು ಕೂಡ ಬಿಡ್ತಾರೆ, ಕುಡಿದು ಕರುಳೆಲ್ಲಾ ಸುಟ್ಕೊಳ್ಳಿ’ ಎಂದೊಡನೆ ನನ್ನ ಕೈಯನ್ನು ಹಣೆಗೆ ಒತ್ತಿಕೊಂಡು ಒಂದು ಮುತ್ತನ್ನೂ ಕೊಟ್ಟ. ‘ನಿನ್ ಬಾಯ್ನಲ್ಲಿ ಕಡ್ದಂಗಾಗ್ಲಪ್ಪೋ, 12 ರುಪಾಯಿ ಪ್ಯಾಕೆಟ್‍ನ ಕಿಕ್ಕು 55 ರುಪಾಯ್ನ ಎರಡು ಬಾಟ್ಲು ಕೊಡೋಲ್ಲ ಕಣಯ್ಯೋ, ಎಣ್ಣೇಲಿ ಒಳ್ಳೇದು ಕೆಟ್ಟದು ಅಂತ ಏನಿದೆ ಹೇಳು, ಒಂದು 12 ರುಪಾಯಿ ಪ್ಯಾಕೆಟ್ ಬಿಟ್ಟಿದ್ರೆ ಹತ್ತತ್ರ ನೂರುಪಾಯಿ ಉಳ್ಸಿ ಹೆಂಡ್ರು ಮಕ್ಕಳನ್ನ ಸಾಕಬಹುದಾ?’ ಎಂದ.

ಆ ಕ್ಷಣದಲ್ಲಿ ಹೌದಲ್ಲವೇ ಎನಿಸಿತ್ತು. ಯಾಕೆಂದರೆ, ನಾವು ನೀವೂ ಕಂಡಂತೆ ಸಾರಾಯಿ ಪ್ಯಾಕೆಟ್ ನಿಷೇಧಗೊಳಿಸಿದ ನಂತರ ಕುಡುಕರ ಸಂಖ್ಯೆ ಇಳಿಮುಖವಂತೂ ಆಗಲಿಲ್ಲ. 12 ರೂ ಕೊಟ್ಟು ಕುಡಿಯುತ್ತಿದ್ದವ, ಅದೇ 12 ರ ಬದಲಾಗಿ ನೂರಾರು ರೂ ಖರ್ಚು ಮಾಡಲು ಮುಂದಾದ ಅಷ್ಟೇ. ಅಗ್ಗದ ಸಾರಾಯಿ ನಿಷೇಧಗೊಂಡದ್ದರ ಪರಿಣಾಮವಾಗಿ ಕುಡುಕರ ಸಂಖ್ಯೆ ಕಡಿಮೆಯಾಗಲಿಲ್ಲ, ಬದಲಾಗಿ ಬಾರ್‍ಗಳಿಗೆ ಬಂದು ಹೆಚ್ಚು ದುಡ್ಡು ತೆತ್ತು ಕುಡಿಯಲು ಪ್ರಾರಂಭಿಸಿದರಷ್ಟೇ. ಮನೆ ಮಂದಿಯನ್ನು ಉಪವಾಸ ಕೆಡವಿಯಾದರೂ ದುಬಾರಿ ಮದ್ಯ ಕೊಂಡುಕೊಳ್ಳುವ ಪರಿಪಾಠ ಬೆಳೆಯಿತು. ಕುಡಿಯುವವನಿಗೆ ಅಗ್ಗವಾದರೇನು, ತುಟ್ಟಿಯಾದರೇನು, ಒಟ್ಟಿನಲ್ಲಿ ಕುಡಿಯಲು ಧಕ್ಕಿದರೆ ಸಾಕು. ಒಂದು ಸಾರಾಯಿ ಪ್ಯಾಕೆಟ್ ಕಿಕ್ಕಿಗೆ ಮೂರು ಬಾಟಲಿ ಸಮವಾದರೂ ದುಡ್ಡು ಕೊಟ್ಟು ಕೊಳ್ಳುತ್ತಾರೆ. 12 ರೂನ ಒಂದು ಸಾರಾಯಿ ಪ್ಯಾಕೆಟ್ ಕಿಕ್ಕಿಗೋಸ್ಕರ ಅವರು ನೂರಾರು ರೂಪಾಯಿಯನ್ನು ಖರ್ಚು ಮಾಡಲೇಬೇಕು. ಅಷ್ಟು ಸಾಲದಿದ್ದರೆ ಹೆಂಡತಿಗೆ ಬಡಿದು ಕಿತ್ತುಕೊಂಡು ಬರುತ್ತಾರೆ, ವಾಲೆ, ಸರ, ಝುಮುಕಿಯನ್ನೆಲ್ಲಾ ಅಡವಿಗಿಟ್ಟು ಇಲ್ಲದಿದ್ದರೆ ಮಾರಿಯಾದರೂ ಕುಡಿಯುತ್ತಾರೆ. ಮೈ ಕೈ ನೋಯುವಂತೆ ದುಡಿಯುವವರಿಗೆ ಕುಡಿಯದಿದ್ದರೂ ಕಷ್ಟ!

 

‍ಲೇಖಕರು avadhi

June 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Rajath Rakshath

    ಸೂಪರ್ ಸರ್… ಗುಡ್ಡಗಾಡಿನ ಹಳ್ಳಿಗಳ ಬಗ್ಗೆ ತಿಳಿಯುವುದೆಂದರೆ ನನಗೆ ಇನ್ನಿಲ್ಲದ ಖು‍ಶಿ. ನೀವು ರಸವತ್ತಾಗಿ ಚಿತ್ರಿಸಿದ್ದೀರಿ… ರಜತ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: