ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…

ಡಾ. ಎಸ್.ಬಿ.ರವಿಕುಮಾರ್

ಒಂದು ಮಧ್ಯಾಹ್ನ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕಾಗಿದ್ದ ವರದಿಗಳನ್ನು ತಯಾರಿಸುತ್ತಿದ್ದೆ. ಪಕ್ಕದ ಕಿಟಕಿ ಕಡೆಯಿಂದ ಏನೋ ಶಬ್ದ ಕೇಳಿದಂತಾಯಿತು. ನಮ್ಮ ಆಸ್ಪತ್ರೆಯ ಪಕ್ಕದಿಂದಲೇ ನರ್ಸ್ ಕ್ಟಾರ್ಟಸ್‌ಗೆ ಹಾಗೂ ಲಂಬಾಣಿ ತಾಂಡಾಕ್ಕೆ ಅಧಿಕೃತ ರಸ್ತೆಯಲ್ಲದಿದ್ದರೂ, ಆಸ್ಪತ್ರೆಗೆ ಕಾಂಪೌಂಡ್ ಇರದೇ ಇದ್ದುದರಿಂದ ಜನ ಓಡಾಡುತ್ತಿದ್ದರು. ಹಾಗಾಗಿ ನಾನು ವಿಶೇಷ ಗಮನಹರಿಸಲಿಲ್ಲ. ಹೊಗಡೆಯೇ ಮಾತನಾಡುತ್ತಿದ್ದ ಕಾಂಪೌಂಡರ್ ಬಂದು ‘ಸರ್ ಒಂದು ಸ್ಪೆಷಲ್ ಪೇಷಂಟ್ ಬಂದಿದೆ ಬನ್ನಿ’ ಎಂದರು. ‘ಬಂದೆ ಎರಡು ನಿಮಿಷ’ ಎಂದು ಇನ್ನೊಂದು ಚೂರು ಬಾಕಿ ಇದ್ದ ಒಂದು ವರದಿಯನ್ನು ಮುಗಿಸಿಯೇ ಬಿಡೋಣ ಎಂದು ಬರವಣಿಗೆ ಮುಂದುವರೆಸಿದೆ.

ಕೈ ಬರೆಯುತ್ತಿದ್ದರೂ ಮನಸ್ಸು ಯೋಚಿಸುತ್ತಿತ್ತು. ಏನಿರಬಹುದು? ಬಹುಶಃ ಊರಿನ ಎಲ್ಲಾ ಜಾನುವಾರುಗಳಿಗೂ ಚಿಕಿತ್ಸೆ ನೀಡುತ್ತಿದ್ದ ನಿವೃತ್ತ ವೆಟೆರಿನರಿ ಇನ್ಸ್ಪೆಕ್ಟರ್ ಮನೆಯ ಕೇಸಿರಬಹುದೇ? ಅಪರೂಪಕ್ಕೊಮ್ಮೆ ಅವರ ಮನೆಯ ಪೇಷಂಟ್ ಬರುವುದಿತ್ತು. ನಾನೊಮ್ಮೆ ಹಸು ತಂದಿದ್ದ ಇನ್ಸ್ಪೆಕ್ಟರ್ ಮಗನನ್ನು’ಅಲ್ಲ ಮಾರಾಯ ನಿಮ್ಮ ಅಪ್ಪ ಜಗತ್ತಿನ ಎಲ್ಲಾ ಜಾನುವಾರು ನೋಡುತ್ತಾರೆ ಯಾಕೆ ಈ ನಿಮ್ಮ ಹಸು ನೋಡಲಿಲ್ಲವಾ?’ ಎಂದು ಕೇಳಿದರೆ ಮುಖ ಹುಳ್ಳ ಹುಳ್ಳಗೆ ಮಾಡಿಕೊಂಡ ಆತ ಸುಮ್ಮನಾದನೇ ಹೊರತು ಏನೂ ಹೇಳಲಿಲ್ಲ. ‘ಹೋಗಲಿ ಎಲ್ಲಿದ್ದಾರೆ ಇವೊತ್ತು ಮನೇಲಿ ಇಲ್ಲವಾ?’ ಎಂದೆ ‘ಎಲ್ಲೋ ಹೋಗ್ಯಾರ್ರೀ  ಹಳ್ಳಿಮ್ಯಾಗೆ ಇರಬೇಕು’.

ಒಂದು ದಿನ ಮನೆಯಲ್ಲಿರದೆ ಸುತ್ತುಮುತ್ತಲಿನ ನೂರೆಂಟು ಹಳ್ಳಿಗಳಿಗೆ ಸುತ್ತಾಡುತ್ತಾ ಬರೀ ಚಿಕಿತ್ಸೆ ಕೊಡುವುದಷ್ಟೇ ಅಲ್ಲ, ‘ಈಗಿನ ಡಾಕ್ಟರುಗಳಿಗೆ ಏನು ಗೊತ್ತಿರುತ್ತೆ? ಅನುಭವ ಸಾಲದು’ ಎಂದು ಎಲ್ಲಾ ಕಡೆ ವೈದ್ಯರ ವಿದ್ಯಾರ್ಹತೆಗಿಂತ ತನ್ನ ಅನುಭವವೇ ಮೇಲು ಎನ್ನುವಂತೆ ಮಾತನಾಡುತ್ತಿದ್ದ ರಾಗೇರ ಶಿವಪ್ಪ ಎಂದೂ ತನ್ನ ಮನೆಯ ಜಾನುವಾರುಗಳಿಗೆ ಚಿಕಿತ್ಸೆ ನೀಡಿದವರಲ್ಲ. ಭಾವನಾತ್ಮಕ ಸಂಬಂಧದಿಂದ ಮನೆಯವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವುದಿಲ್ಲವಲ್ಲ ಆ ರೀತಿ ಎಂದು ಯೋಚಿಸಬೇಡಿ. ಇಲ್ಲಿ ಆ ಕಾರಣವಲ್ಲ. ಚಿಕಿತ್ಸೆ ನೀಡಿದ ತಕ್ಷಣ ಅದು ಯಾರ ಮನೆಯೇ ಆಗಿರಲಿ ತಮ್ಮ ಫೀಸು ಕೈಗೆ ಬಂದುಬಿಡಬೇಕು ಶಿವಪ್ಪಗೆ. ಕಷ್ಟಪಟ್ಟಿದ್ದಕ್ಕೆ ಅದು ಸಂಜೆಯ ಖರ್ಚಿಗೆ ಒದಗಿ ಅನುಕೂಲವಾಗಬೇಕು.

ತಮ್ಮ ಮನೆಯ ಜಾನುವಾರುಗಳಿಗೆ ಚಿಕಿತ್ಸೆ ಮಾಡಿದರೆ ಫೀಸು ಕೊಡುವವರಾರು? ಇನ್ನೊಂದು ಕೇಸು ಇವೊತ್ತು ಸಿಗದೇ ಇದ್ದರೆ ಏನು ಸಂಜೆಯ ಖರ್ಚಿಗೆ ಏನು ಮಾಡಬೇಕು? ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುವುದಿಲ್ಲವೇ? ಅದೇ ಸಮಯದಲ್ಲಿ ಬೇರೆಡೆ ಹೋದರೆ ಅಂದಿನ ಸಂಜೆಯ ವ್ಯವಸ್ಥೆ ಖಾತ್ರಿಯಾಗಿ ನೆಮ್ಮದಿಯಾಗಿ ಬಿಡುತ್ತಿತ್ತು. ಅದಕ್ಕೆ ಆತ ಎಂದೂ ತಮ್ಮ ಮನೆಯ ಜಾನುವಾರುಗಳಿಗೆ ಟ್ರೀಟ್‍ಮೆಂಟ್ ಕೊಟ್ಟು ಸಮಯ ಹಾಳು ಮಾಡಿದವರಲ್ಲ. ‘ತಗಂದು ಹೋಗೋ ಆಸ್ಪತ್ರೀಗೆ ಯಾಕ ಅದಾರೆ ಅವರೆಲ್ಲ? ಅವ್ರಿಗೇನು ಸರ್ಕಾರ ಸಂಬಳ ಕೊಡಲ್ಲೇನು?’ ಎಂದು ಹೇಳಿ ಕಳಿಸುತ್ತಿದ್ದರಂತೆ.

ಇಲ್ಲದಿದ್ದರೆ ಗಾಂವಟಿ ಔಷಧಿ ಕೊಡುವ ಹುಸೇನಿಯ ಮೇಕೆ ಇರಬೇಕು ಎಂದು ಯೋಚಿಸಿದೆ. ಯಾವುದೇ ಜಾನುವಾರುಗಳಿಗೆ ಕಾಯಿಲೆ ಆದರೂ ಮೊದಲು ಎರಡು ಸೇರು ಹಸುವಿನ ಬೆಣ್ಣೆಯನ್ನು ರೈತರು ತರಬೇಕು. ಬೆಣ್ಣೆಯಲ್ಲೇ ಚಿಕಿತ್ಸೆ ಮಾಡುತ್ತೇನೆಂದು ಹೇಳುತ್ತಿದ್ದ ಹುಸೇನಿ ತನ್ನ ಮೇಕೆ ಕೊಕ್ ಎಂದು ಒಮ್ಮೆ ಕೆಮ್ಮಿದರೂ ತಕ್ಷಣ ಖುದ್ದು ಆಸ್ಪತ್ರೆಗೆ ತಂದುಬಿಡುತ್ತಿದ್ದ. ‘ಯಾಕೆ ಹುಸೇನಿ ನಿನ್ನ ಕೈಗುಣ ಚನ್ನಾಗಿದೆ ಅಂತಾರೆ ಜನ. ನೀನೇ ಕೊಡುವುದಲ್ಲವಾ ಔಷಧೀನ ಮೇಕೇಗೆ?’ ಅಂದರೆ ‘ಹೆ ಹೆ ಅದೆಂಗೆ ಆಯ್ತದೆ ಸಾಮಿ? ನಾನೇನಿದ್ರೂ ಹಸು ಎತ್ತಿಗೆ ಅಷ್ಟೇಯ. ಅದೂ ಅಲ್ಲದೆ ನಾನು ಮಗೀನಂತೆ ನೋಡಿಕೊಂತೀನಿ ಸಾಮಿ ಇವುಳುನ್ನ’ ಎಂದು ತಾನು ಕೇವಲ ಹಸು ಎತ್ತುಗಳ ಸ್ಪೆಷಲಿಸ್ಟ್ ಎಂಬಂತೆ ಮಾತನಾಡುತ್ತಿದ್ದ. ಆದರೆ ಮಗೀನಂತೆ ನೋಡಿಕೊಂಡರೆ ಯಾಕೆ ಚಿಕಿತ್ಸೆ ಕೊಡಬಾರದೋ ಗೊತ್ತಾಗಲಿಲ್ಲ. ಉಳಿದ ಕೆಲಸ ಮುಗಿಸಿ ರಾಗೇರ ಶಿವಪ್ಪನ ಮನೆಯ ಜಾನುವಾರು ಅಥವಾ ಹುಸೇನಿಯ ಮೇಕೆಯನ್ನು ನಿರೀಕ್ಷಿಸುತ್ತ ಎದ್ದು ಬಂದೆ.

ಬಂದಿರುವ ಪೇಷಂಟು ನೋಡಿ ಆಶ್ಚರ್ಯವಾಯಿತು. ಅದು ಎಂದೂ ನಮ್ಮ ಆಸ್ಪತ್ರೆಗೆ ಬಂದಿರದ ವಿಶೇಷ ರೋಗಿ. ಕರಡಿ! ಕೈಗೆ ಕಬ್ಬಿಣದ ಬಳೆ ಹಾಕಿಕೊಂಡು ಸದ್ದು ಮಾಡುತ್ತಾ ಮನೆ ಮನೆಗೆ ತನ್ನ ಕರಡಿಯನ್ನು ಪ್ರದರ್ಶಿಸುತ್ತಾ ಜೀವನ ಮಾಡುವ ಕರಡಿ ಕಲಂದರ್ ಒಬ್ಬ ಅದರ ಕುತ್ತಿಗೆಗೆ ಕಟ್ಟಿದ್ದ ಕೋಲು ಹಿಡಿದುಕೊಂಡು ನಿಂತಿದ್ದ. ಕೈನ ಬಳೆಗಳನ್ನು ತೆಗೆದಿಟ್ಟಿದ್ದನೋ ಅಥವಾ ಬಟ್ಟೆಯನ್ನೇನಾದರೂ ಕಟ್ಟಿಕೊಂಡಿದ್ದನೋ ಶಬ್ದ ಬರುತ್ತಿರಲಿಲ್ಲ. ನಾನು ಬಂದ ಕೂಡಲೇ ಕಾಂಪೌಂಡರ್ ಕೈಲಿದ್ದ ಸಿಗರೇಟನ್ನು ಚಕ್ಕನೆ ಬಿಸಾಕಿ, ‘ಸರ್ ಬೇಧಿಯಂತೆ ಕರಡಿಗೆ ಎರಡು ದಿನಗಳಿಂದ’ ಎಂದು ಹೇಳುತ್ತಾ ಎದ್ದು ಬಂದರು. 

ಈ ಕಾಡು ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ಅವುಗಳನ್ನು ನಿಯಂತ್ರಿಸುವುದೇ ದೊಡ್ಡ ಸಮಸ್ಯೆ. ಅರಣ್ಯ ಇಲಾಖೆಯ ಆಸ್ಪತ್ರೆಯಲ್ಲಿ ಅದಕ್ಕೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿದ ಬೋನುಗಳಿರುತ್ತವೆ. ಆ ಬೋನಿನಲ್ಲಿ ಪ್ರಾಣಿಯನ್ನು ಕೂಡಿ ಒಂದು ಹಿಡಿಕೆಯನ್ನು ತಿರುಗಿಸಿದರೆ ಬೋನಿನ ಒಂದು ಪಾಶ್ರ್ವ ನಿಧಾನವಾಗಿ ಪ್ರಾಣಿಯ ಕಡೆ ಚಲಿಸಿ ಪ್ರಾಣಿಯನ್ನು ಒತ್ತಿ ಹಿಡಿದು ಮಿಸುಗಾಡದಂತೆ ಮಾಡಿಬಿಡುತ್ತದೆ. ಆಗ ವೈದ್ಯರು ತಮಗೆ ಬೇಕಾದ ಪರೀಕ್ಷೆ ಮಾಡಬಹುದು ಚಿಕಿತ್ಸೆಯನ್ನೂ ನೀಡಬಹುದು. ಆದರೆ ನಮ್ಮಲ್ಲಿ ಅಂತಹ ವಿಶೇಷ ಬೋನುಗಳಿಲ್ಲ. ಆದರೂ ಚಿಕಿತ್ಸೆ ನೀಡಲೇ ಬೇಕಲ್ಲ? ವಿಶೇಷ ಬೋನಿನ ತಾತ್ರಿಕತೆಯನ್ನೇ ಉಪಯೋಗಿಸಿಕೊಂಡು ಮಿಸುಗದಂತೆ ಗೋಡೆಗೆ ಒತ್ತಿ ಹಿಡಿದುಕೊಳ್ಳಲು ಕರಡಿಯವನಿಗೆ ಹೇಳಿದೆ. ಇವೊತ್ತು ಜವಾನ ಬೇರೆ ರಜೆಯಿದ್ದುದರಿಂದ ಅವನೊಬ್ಬನೆ ಕರಡಿಯನ್ನು ಗೋಡೆಯ ಕಡೆಗೆ ನಡೆಸಿಕೊಂಡು ಅದರ ಕುತ್ತಿಗೆಯ ಬಳಿ ನಿಂತು ತನ್ನ ಮೊಣಕಾಲಿನಿಂದ ಕುತ್ತಿಗೆಯನ್ನು ಗೋಡೆಯ ಕಡೆ ಒತ್ತಿ ಹಿಡಿದ.

ಈಗ ಹಿಂದೆ ಬಂದವರು ಕರಡಿಗೆ ಕಾಣುವುದಿಲ್ಲವಾದ್ದರಿಂದ ಕಾಂಪೌಂಡರ್ ಕರಡಿಯ ಹಿಂಭಾಗವನ್ನು ಸಮೀಪಿಸಿ ತಮ್ಮ ಕಾಲುಗಳಿಂದಲೇ ಕರಡಿಯ ಹಿಂಭಾಗವನ್ನು ಇನ್ನಷ್ಟು ಗೋಡೆಗೆ ಒತ್ತಿ ನಿಂತುಕೊಂಡರು. ಹೆಚ್ಚು ಕಡಿಮೆ ಕರಡಿ ಮಿಸುಗಾಡದಂತೆಯೇ ಆಯಿತು. ಸೋಂಕು ಇರಬಹುದೇ ಎಂದುಕೊಂಡು ಶರೀರದ ತಾಪಮಾನ ಪರೀಕ್ಷಿಸಲು ಕಾಂಪೌಂಡರ್ಗೆ ಹೇಳಿದೆ. ಅವರು ಕರಡಿಯ ಹಿಂದೆ ಗುದದ್ವಾರದಲ್ಲಿ ಥರ್ಮಾಮೀಟರನ್ನು ಇಡಲು ಬಾಲವನ್ನು ಮುಟ್ಟಿದೊಡನೆಯೇ ಕರಡಿ ಕ್ಷಣಾರ್ಧದಲ್ಲಿ ಬಲವಾಗಿ ತನ್ನ ಹಿಂಭಾಗವನ್ನು ಪಕ್ಕಕ್ಕೆ ಸರಿಸಿ ಒತ್ತಿ ಹಿಡಿದಿದ್ದ ಇಬ್ಬರನ್ನೂ ನಿವಾರಿಸಿಕೊಂಡು ಕಾಂಪೌಂಡರ್ ಕಡೆ ತಿರುಗಿ ನಿಂತು ಗುರುಗುಟ್ಟುತ್ತಾ ಹೆದರಿಸಿತು. ಹಾಗೆ ನೋಡಿದರೆ ಅದು ಹೆದರಿಸುತ್ತಿತ್ತು ಎನ್ನುವುದಕ್ಕಿಂತ ಅದು ಹೆದರಿಕೊಂಡಿತ್ತು ಎನ್ನುವುದು ಹೆಚ್ಚು ಸಮಂಜಸ. ಎಂದೆಂದೂ ಕಲಂದರನನ್ನು ಹೊರತುಪಡಿಸಿ ಅದರ ಬಾಲವನ್ನು ಬೇರೆ ಯಾರೂ ಮುಟ್ಟಿರಲಿಲ್ಲವೇನೋ. ಅದಕ್ಕೆ ಗಾಬರಿಯಾಗುವುದು ಸಹಜ.

ಕರಡಿಯ ಕೊರಳಿಗೆ ಕೋಲು ಕಟ್ಟಿದ್ದರಿಂದ ಕರಡಿಯವನ ಬಳಿಯೇ ನಿಂತು ನಮ್ಮ ಹತ್ತಿರ ಅದು ಬಾರದಂತೆ   ಸುರಕ್ಷಿತ ಅಂತರ ಕಾಪಾಡಿಕೊಳ್ಳಬಹುದು ಎನ್ನುವ ಧೈರ್ಯ ನಮಗೆ.  ಮತ್ತೆ ಮತ್ತೆ ಪ್ರಯತ್ನ ಪಟ್ಟರು ಕರಡಿ ಬಾಲ ಮುಟ್ಟಿ ಜ್ವರ ದಾಖಲಿಸಲು ಅವಕಾಶ ಕೊಡಲೇ ಇಲ್ಲ. ಹೋಗಲಿ ಕೊನೆಗೆ ಕೈಯಲ್ಲಾದರೂ ಮುಟ್ಟಿ ನೋಡಿ ನಮ್ಮ ಅನುಭವದಿಂದ ಜ್ವರ ಇದೆಯೇ ಪರೀಕ್ಷಿಸೋಣವೆಂದರೆ ತನ್ನ ಮೈ ಮುಟ್ಟಲೂ ಅವಕಾಶ ಕೊಡಲಿಲ್ಲ. ಜ್ವರ ಇದೆಯೇ ಪರೀಕ್ಷಿಸಲು ನಾನು ಅದರ ಕೂದಲು ಕಡಿಮೆ ಇರುವ ಮೈಯ ಭಾಗವನ್ನು ಮುಟ್ಟಿ ನೋಡಬೇಕಿತ್ತು.

ಕೈಯಿಂದ ಮುಟ್ಟಿ ನೋಡಿಯೇ ಹೆಚ್ಚು ತಾಪಮಾನಪ್ರಾಣಿಯನ್ನು ಗುರುತಿಸುವ ಅಭ್ಯಾಸ ನಮಗಿರುತ್ತದೆ. ಘನೀಕೃತ ವೀರ್ಯ ಪ್ರಯೋಗ ಮಾಡುವಾಗ ಕರಾರುವಾಕ್ಕಾಗಿ 35 ಡಿಗ್ರಿ ಸೆಂಟಿಗ್ರೇಡ್ ತಾಪಮಾನದ ಬಿಸಿ ನೀರು ಬೇಕು. ಹೋದಲ್ಲೆಲ್ಲಾ ನೀರಿನಲ್ಲಿ ಥರ್ಮಾಮೀಟರ್ ಇಟ್ಟು ಪರೀಕ್ಷಿಸುವುದು ಕಾರ್ಯಸಾಧುವಲ್ಲದ ಕಾರಣ  ಬೆರಳ ತುದಿಯನ್ನು ಅದ್ದಿ ಹೆಚ್ಚು ಕಡಿಮೆ ಕರಾರುವಾಕ್ಕಾಗಿ ಬಿಸಿಯ ಪ್ರಮಾಣವನ್ನು ನಿರ್ಧರಿಸುವ ಅಭ್ಯಾಸ  ನಮಗೆ ಇರುತ್ತದೆ. ನಾವು ರಾಸುಗಳ ಗರ್ಭಕೋಶವನ್ನು ಮುಟ್ಟಿನೋಡುವಾಗ ಎಡಗೈಯನ್ನೇ ಉಪಯೋಗಿಸುವುದುರಿಂದ  ಎಡಗೈಯ ಬೆರಳುಗಳ ಸಂವೇದನೆ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಎಡಗೈ ಬೆರಳುಗಳಿಂದ ಪ್ರಾಣಿಯನ್ನು ಮುಟ್ಟಿನೋಡಿ ಜ್ವರವಿರುವುದನ್ನು ಗುರುತಿಸಬಲ್ಲೆವು. ಆದರೆ ಕರಡಿ ನಾನು ಮುಟ್ಟಿನೋಡಲು ಅವಕಾಶ ಕೊಡಲೇ ಇಲ್ಲ.

ನಾವು ಜ್ವರ ನೋಡಲು ಮೇಲಿಂದ ಮೇಲೆ ಪ್ರಯತ್ನಿಸಿ,  ಕರಡಿ ಹೆದರಿಕೊಂಡು ಉದ್ರೇಕಗೊಂಡರೆ  ಜ್ವರ ಇರದಿದ್ದರೂ ಅದರ  ಮೈ ಬಿಸಿ ಏರುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಈ ಕಾಡು ಪ್ರಾಣಿಗಳು ತುಂಬಾ ಗಾಬರಿಯಾಗಿಬಿಟ್ಟರೆ ಅಪಾಯ. ಜ್ವರ ಪರಿಶೀಲಿಸುವುದು ಉಪಯೋಗವಿಲ್ಲ ಎನಿಸಿತು. ಕಾಂಪೌಂಡರ್ಗೆ ‘ಬೇಡ ಬಿಡಿ ಜ್ವರ ನೋಡುವುದು ಬೇಡ ನೀವು ಹಿಂದೆ ಬಂದು ಬಿಡಿ’ ಎಂದು ಹೇಳಿ ಅವರನ್ನು ಕರೆದು ಕರಡಿಯವನಿಗೇ ‘ಸ್ವಲ್ಪ ಸಮಾಧಾನ ಮಾಡು ಮಾರಾಯ. ಒಂದು ಹತ್ತು ನಿಮಿಷವಾದ ಮೇಲೆ ಅದರ ಮೈ ಮುಟ್ಟಿ ನೋಡು, ಪ್ರತಿದಿನಕ್ಕಿಂತ ಬಿಸಿ ಎನ್ನಿಸುತ್ತಿದ್ದರೆ ಹೇಳು’ ಎಂದು ಆತನಿಗೇ ಜವಾಬ್ದಾರಿ ಹೊರಿಸಿ ನಾವಿಬ್ಬರೂ ಒಳಗೆ ಬಂದೆವು.

ನಾವು ಕಣ್ಣಿಗೆ ಬೀಳದಿದ್ದರೆ ಅದು ಸಮಾಧಾನ ತಳೆಯಬಹುದು ಎಂದು ನಮ್ಮ ಲೆಕ್ಕಾಚಾರ. ಹತ್ತು ನಿಮಿಷದ ನಂತರ ಒಳಗಿನಿಂದಲೇ ಕರಡಿಯವನಿಗೆ ಈಗ ನೋಡು ಎನ್ನುವಂತೆ ಸಂಜ್ಞೆ ಮಾಡಿ ನಾವು ಒಳಗೇ ಉಳಿದೆವು. ಏಕೆಂದರೆ ಅದಕ್ಕೆ ಕಾಣದಂತೆ ನಾವು ಸಮೀಪಿಸುವುದರೂ ನಮ್ಮ ಬರುವಿಕೆಯನ್ನು ಅದು ಗ್ರಹಿಸಿ ಮತ್ತೆ ಗಾಬರಿಯಾಗುವುದು ಶತಃಸಿದ್ಧ. ಅವನು ಕರಡಿಯ  ಮೈಮೇಲೆ ಅಲ್ಲಲ್ಲಿ ಕೈಯಿಟ್ಟು ದೇಹದ ತಾಪಮಾನದ ವ್ಯತ್ಯಾಸ ಏನೂ ಗೊತ್ತಾಗದೆ ಗೊಂದಲದಲ್ಲಿ ಬಿದ್ದಂತೆ ಅನಿಸಿತು. ಅಷ್ಟು ರೋಮಭರಿತ ಕರಡಿಯ ಮೈ ಮುಟ್ಟಿದರೆ ಎಲ್ಲಾದರೂ ತಾಪಮಾನ ಗೊತ್ತಾಗುವುದೇ? 

ದಪ್ಪ ಉಣ್ಣೆಯ ಸ್ವೆಟರ್ ಹಾಕಿಕೊಂಡವನನ್ನು ಸ್ವೆಟರ್ ಮೇಲೆ ಮುಟ್ಟಿ ಜ್ವರ ಇದೆಯೇ ಎಂದು ನಿರ್ಧರಿಸಲು ಸಾಧ್ಯವೇ ? ‘ಅಲ್ಲಲ್ಲ ಮಾರಾಯ ಕೆಳಗೆ  ಕೂದಲು ಕಡಿಮೆ ಇರುವ ಜಾಗದಲ್ಲಿ, ಅಥವಾ ತೊಡೆ ಸಂದಿಯಲ್ಲಿ ನೋಡು’ ಎಂದು ಪಿಸುಗುಡುತ್ತ ಹೇಳಿದೆ. ಅಲ್ಲಿ ಬೇರೆಡೆಗಿಂತ ಕೂದಲು ಕಡಿಮೆ ಇರುವ ಸಾಧ್ಯತೆ ಇತ್ತು.  ಅವನು ತಮ್ಮ ಭಾಷೆಯಲ್ಲಿ ಕರಡಿಯನ್ನು ಸಮಾಧಾನಪಡಿಸುತ್ತ ಮುಟ್ಟಿನೋಡಿ ‘ಹೌದು ಸೊಮೀ. ಸ್ವಲ್ಪ ಬಿಸಿ ಐತೆ’ ಎಂದವನು ‘ಜರಾ ಜಾಸ್ತಿ ಆಟೇ’ ಎಂದು ಸೇರಿಸಿದ. ಅದು ಹೆದರಿಕೆಗೆ  ಇರಬಹುದೋ ಅಥವಾ ನಿಜವಾಗಲೂ ಸ್ವಲ್ಪ ಜ್ವರ ಇದೆಯೊ ಗೊತ್ತಾಗಲಿಲ್ಲ. ದೂರದಿಂದಲೇ ಅದರ ಕಣ್ಣು ಗಮನಿಸಿದೆ. ಕರಡಿ ಸುಸ್ತಾಗಿದೆ. ಸ್ವಲ್ಪ ಜ್ವರ ಇದೆ ಅನಿಸಿತು. ಇದರ ಆಧಾರದ ಮೇಲೆಯೇ ಆಹಾರದ ವ್ಯತ್ಯಾಸದಿಂದ ಕರುಳಿನ ಉರಿಯೂತ ಎಂಟರೈಟಿಸ್ ಇರಬಹುದೆಂದು ಚಿಕಿತ್ಸೆ ನೀಡಲು ನಿರ್ಧರಿಸಿದೆ. ಜೊತೆಗೆ ಕಣ್ಣುಗಳು ಒಳಗೆ ಹೋಗಿರುವುದರಿಂದ ನಿರ್ಜಲೀಕರಣವೂ ಆಗಿದೆ.

ಆಂಟಿಬಯಾಟಿಕ್ ಇನ್ಜೆಕ್ಷನ್ ರೆಡಿ ಮಾಡಲು ಕಾಂಪೌಂಡರ್ಗೆ ಹೇಳಿದೆ. ‘ಸರ್ ಮೆಡಿಕಲ್ ಶಾಪಿಗೆ  ಬರೆದುಕೊಟ್ಟುಬಿಡೋಣ ಸರ್. ಒಳ್ಳೆ ಔಷಧಿ ತಂದುಬಿಡಲಿ’ ಎಂದರು. ನಮ್ಮ ಆಸ್ಪತ್ರೆಗೆ ಸರಬರಾಜಾಗಿರುವ ಔಷಧಿಗಳ ಮೇಲೆ ಅವರಿಗಿರುವ ನಂಬಿಕೆ ಇಂಥದ್ದು! ಎಷ್ಟೋ ಬಾರಿ ನಮ್ಮ ಆಸ್ಪತ್ರೆಯಲ್ಲಿನ ಔಷಧಿಯಿಂದ ಚಿಕಿತ್ಸೆ  ಪ್ರಾರಂಭ ಮಾಡಿ ಪರಿಣಾಮ ಕಾಣದೆ, ಅದೇ ಔಷಧಿಯನ್ನು ಹೊರಗಡೆ ತರಿಸಿ ಕೊಟ್ಟಾಗ ಗುಣವಾಗಿರುವುದನ್ನು ಇಬ್ಬರೂ ಕಂಡಿದ್ದರಿಂದ ನಾನು ಬದಲು ನುಡಿಯಲಿಲ್ಲ. ಕರಡಿಯವನನ್ನು ನೋಡಿದೆ. ಅವನ ವೇಷಭೂಷಣ, ದೈನ್ಯತೆಯೇ ಮೈವೆತ್ತಂತೆ ಇರುವ, ಬಿಸಿಲಲ್ಲಿ ತಿರುಗಿ ತಿರುಗಿ ಕಪ್ಪಾದ ಮುಖ ನೋಡಿ  ಏನಿಲ್ಲವೆಂದರೂ ಸುಮಾರು 100 ರೂಪಾಯಿ ಆಗಬಹುದಾದ ಔಷಧಿ ಬರೆದುಕೊಡಲು ಮನಸ್ಸಾಗಲಿಲ್ಲ. ‘ಇರಲಿ ಇವೊತ್ತು ನಮ್ಮದೇ ಕೊಟ್ಟು ನೋಡೋಣ. ರೆಸ್ಪಾನ್ಸ್ ಇಲ್ಲದಿದ್ದರೆ  ನೋಡಿ ಬೇರೆ ಬರೆದುಕೊಟ್ಟರಾಯಿತು’ ಕಾಂಪೌಂಡರ್ಗೆ ಸಮಾಧಾನ ಹೇಳಿ ಔಷಧಿ ಸೂಚಿಸಿ ಇನ್ಜೆಕ್ಷನ್ ಸಿದ್ಧಪಡಿಸಿಕೊಂಡು ತರಲು ಹೇಳಿದೆ.

ಈಗ ಕರಡಿಗೆ ಇನ್ಜೆಕ್ಷನ್ ಕೊಡುವುದು ಮತ್ತೊಂದು ಸವಾಲು. ಇಲ್ಲಿ ಒಂದು ವಿಚಾರ ಹೇಳಬೇಕು. ವೈದ್ಯರು  ಪೆನ್ನು ಹಿಡಿದುಕೊಂಡಂತೆ ಸಿರಿಂಜನ್ನು ಹಿಡಿದು ಸೂಜಿ ಚುಚ್ಚಿಕೊಡುವುಂತೆ ನಾವು ಚುಚ್ಚುಮದ್ದು ಕೊಡಲಾಗುವುದಿಲ್ಲ. ಹಾಗೆ ಸೂಜಿಯನ್ನು ಚುಚ್ಚಿದರೆ ದನಗಳು ಅನಿರೀಕ್ಷಿತವಾಗಿ ಚಲಿಸಿ ಸೂಜಿ ಮುರಿದುಬಿಡುವ ಸಾಧ್ಯತೆ ಇದೆ. ಹಾಗೆ ಸೂಜಿ ಮುರಿದುಕೊಂಡು ಒಳಗೆ ಒಂದು ತುಂಡು ಉಳಿದುಕೊಂಡರೆ ಮತ್ತೆ ಅದನ್ನು ಆಪರೇಷನ್ ಮಾಡಿಯೇ ತೆಗೆಯಬೇಕಾಗುತ್ತದೆ. ಅದಕ್ಕೆ ನಾವು ಸಿರಿಂಜಿನಿಂದ ಸೂಜಿಯನ್ನು ಬೇರ್ಪಡಿಸಿ ಮೊದಲು ಸೂಜಿಯನ್ನು ನಿಧಾನವಾಗಿ ಚುಚ್ಚದೆ ಸೂಜಿಯನ್ನು ಚಕ್ಕನೆ ಹೊಡೆಯುತ್ತೇವೆ.

ಕ್ಷಣಾರ್ಧದಲ್ಲಿ ಸೂಜಿ ದೇಹ ಸೇರುವುದರಿಂದ ಪ್ರಾಣಿಗೆ ನೋವಿನ ಅನುಭವ ಜಾಸ್ತಿಯಾಗುವುದಿಲ್ಲ. ಆಗ ಪ್ರಾಣಿ ಅಲುಗಾಡಿದರೂ ಸೂಜಿಯನ್ನು ನಾವು ಹಿಡಿದಿರುವುದಿಲ್ಲವಾದ್ದರಿಂದ ಸೂಜಿ ಮುರಿಯುವ ಸಾಧ್ಯತೆ ಇರುವುದಿಲ್ಲ. ಸೂಜಿ ನಾಟಿದ ಕ್ರಿಯೆಗೆ ಅಲುಗಾಡಿ ಪ್ರತಿಕ್ರಿಯೆ ತೋರಿ ದನ ಸುಮ್ಮನಾದಾಗ ಸೂಜಿಗೆ ಸಿರಿಂಜ್ ಸೇರಿಸಿ ಬೇಗನೇ ಇನ್ಜೆಕ್ಷನ್ ಕೊಡುತ್ತೇವೆ. 

ಹಿಂದಿನಂತೆಯೇ ಕರಡಿಯನ್ನು ಗೋಡೆಗೆ ಒತ್ತಿ ಹಿಡಿದು ಮಿಸುಗಾಡದಂತೆ ಹಿಡಿದುಕೊಳ್ಳಲು ಸೂಚಿಸಿದೆ. ಇಬ್ಬರೂ ತಮ್ಮೆಲ್ಲಾ ಶಕ್ತಿಯನ್ನು ಉಪಯೋಗಿಸಿ ಕರಡಿಯನ್ನು ಗೋಡೆಗೆ ಒತ್ತಿ ಹಿಡಿದರು. ಕಲಂದರನಿಗೆ ‘ಅದರ ಜೊತೆಗೆ ನೀನು ಮಾತನಾಡುತ್ತಿರು’ ಎಂದು ಸೂಚಿಸಿ, ಅವನು ಅದರ ಗಮನವನ್ನು ಸೆಳೆದಾಗ ಸೂಜಿಯನ್ನು ಹೊಡೆದು ಅದರ ಹಿಂಭಾಗ ಚಲಿಸುವುದರೊಳಗೇ ಸಿರಿಂಜ್ ಜೋಡಿಸಿ ಪಿಸ್ಟನ್ ಅದುಮಿ ಸಿರಿಂಜ್ ವಾಪಾಸು ತೆಗೆದುಕೊಂಡು ದೂರ ಬಂದು ಬಿಟ್ಟೆ.

ಕರಡಿ ಚುಚ್ಚಿದ ತನ್ನ ದೇಹದ ಕಡೆಗೆ ಒಮ್ಮೆ ನೋಡುತ್ತಾ, ನಮ್ಮ ಕಡೆ ಒಮ್ಮೆ ನೋಡುತ್ತಾ ಗುರುಗುಟ್ಟಿ ಪ್ರತಿಭಟಿಸಿತು. ಇನ್ಜೆಕ್ಷನ್ ಏನೋ ಕೊಟ್ಟಾಯಿತು. ಆದರೆ ಈಗ ಗ್ಲೂಕೋಸು ಕೊಡುವುದು ಹೇಗೆ? ಅದು ನಿಧಾನವಾಗಿ ದೇಹ ಸೇರಬೇಕು. ಗ್ಲೂಕೋಸು ಹೋಗುವವರೆಗೂ ಚುಚ್ಚಿದ ಸೂಜಿ ಹಾಗೇ ಇರಬೇಕು.   ಸಿದ್ಧಪಡಿಸಿಕೊಂಡು ಹತ್ತಿರ ಹೋದೊಡನೆ, ಈಗಾಗಲೇ ಒಮ್ಮೆ ಇನ್ಜೆಕ್ಷನ್ ಕೊಟ್ಟಿದ್ದೆವಲ್ಲ, ಕರಡಿ ಮೊದಲಿಗಿಂತ ಇನ್ನೂ ಉಗ್ರವಾಗಿ ಪ್ರತಿಭಟಿಸಿ ನಮ್ಮನ್ನು ಹತ್ತಿರವೇ ಬಿಟ್ಟುಕೊಳ್ಳಲಿಲ್ಲ. ಬಾಯಿ ಮೂಲಕ ಆಹಾರ ನೀರು ತೆಗೆದುಕೊಳ್ಳುತ್ತಿರಲಿಲ್ಲ. ನಿರ್ಜಲೀಕರಣ ಬಹಳ ಆಗಿರುವುದರಿಂದ ಗ್ಲೂಕೋಸು ಹಾಕಲೇ ಬೇಕು. ನೇರವಾಗಿ ರಕ್ತನಾಳಕ್ಕೆ ಕೊಡುವುದಂತೂ ಅಸಂಭವ. ಕನಿಷ್ಟ ಸಬ್‍ಕ್ಯುಟೇನಿಯಸ್ – ಚರ್ಮದ ಕೆಳಗಾದರೂ ಕೊಡೋಣವೆಂದರೂ ಕರಡಿ ಸಹಕರಿಸುತ್ತಿಲ್ಲ. ಪಾಪ ಅದಕ್ಕೇನು ಗೊತ್ತು? ತನಗೆ ಹುಷಾರಾಗಲಿ ಎಂದೇ ನಾವು ಚುಚ್ಚುತ್ತಿರುವುದು ಎಂದು? ಅದಕ್ಕೆ ಸಮಾಧಾನವಾಗಲಿ  ಎಂದು ನಾವು ಮತ್ತೆ ಒಳಗೆ ಹೋದೆವು. 

ಅಷ್ಟು ಹೊತ್ತಿಗೆ ಶಾಲೆ ಬಿಟ್ಟಿದ್ದರಿಂದ ತಾಂಡಾ ಕಡೆಗೆ ಹೋಗುವ ಮಕ್ಕಳು ಅಪರೂಪಕ್ಕೆ ಕಂಡ ಕರಡಿ ಸುತ್ತಲೂ ಜಮಾಯಿಸಿಬಿಟ್ಟರು. ಮಕ್ಕಳಿಗೆ ಕರಡಿಗೆ ಏನು ಚಿಕಿತ್ಸೆ ಮಾಡುತ್ತಾರೆಂಬ ಕುತೂಹಲ. ಕರಡಿಗೆ  ಮಕ್ಕಳನ್ನು ನೋಡಿ ನೋಡಿ ಅಭ್ಯಾಸವಿದ್ದುದರಿಂದ ಅದೇನೂ ಗಾಬರಿಯಾಗಲಿಲ್ಲ. ಆದರೆ ಈ ಮಕ್ಕಳ ಎದುರು ನಾವು ಚಿಕಿತ್ಸೆ ನೀಡುವುದು ಹೇಗೆ ? ಅದು ಒಮ್ಮೆ ಗುರ್ ಎಂದರೆ ಸುತ್ತಲಿನ ಮಕ್ಕಳೆಲ್ಲಾ ಕೂಗುತ್ತಾ ದೂರ ಓಡುತ್ತಾ ಅದನ್ನು ಇನ್ನೂ ಗಾಬರಿಮಾಡುತ್ತಾರೆ. ಅವರನ್ನು ಹೊರಗೆ ಕಳಿಸೋಣವೆಂದರೆ ನಮ್ಮ ಆಸ್ಪತ್ರೆಗೆ ಕಾಂಪೌಂಡೇ ಇಲ್ಲ. ಎಂದಿನಂತೆ ಅವರು ಓಡಾಡುವ ದಾರಿಯೇ ಅದು. ಇನ್ನು ಇವರು ಶಾಲೆ ಪ್ರಾರಂಭವಾಗುವವರೆಗೂ ಕದಲುವುದಿಲ್ಲವೆಂದು ನಾವೂ ಊಟಕ್ಕೆ ಹೋಗಿ ಮದ್ಯಾನ್ಹ ಚಿಕಿತ್ಸೆ ಮುಂದುವರೆಸೋಣ ಎಂದು ನಿರ್ಧರಿಸಿದೆವು.

ಮಧ್ಯಾಹ್ನ ಇನ್‍ಜೆಕ್ಷನ್ ಕೊಡುವಾಗ ಹಿಡಿದುಕೊಂಡಂತೆಯೇ ಗೋಡೆಗೆ ಒತ್ತಿಹಿಡಿದು ಚರ್ಮದ ಕೆಳಗೆ ಸೂಜಿ ತೂರಿಸಿದೆ. ಕಾಂಪೌಂಡರ್ ಬದಲು ಕರಡಿಯವನ ಕೈಗೇ ಗ್ಲೂಕೋಸು ಬಾಟಲಿ ಕೊಟ್ಟು ಎತ್ತಿಹಿಡಿದುಕೊಳ್ಳಲು ಸೂಚಿಸಿ ನಾವು ದೂರ ಬಂದೆವು. ಆದರೆ ಎರಡು ನಿಮಿಷ ಸುಮ್ಮನಿದ್ದ ಕರಡಿ ತನ್ನ ದೇಹದಲ್ಲಿ ನಿಧಾನವಾಗಿ ದ್ರವ ಸೇರುತ್ತಿರುವುದನ್ನು, ಸೂಜಿಯೊಂದು ನಾಟಿರುವುದನ್ನು ಗಮನಿಸಿ ಹಿಂಭಾಗವನ್ನು ಆ ಕಡೆ ಈ ಕಡೆ ಹೊಯ್ದಾಡುತ್ತಾ ಸೂಜಿಯನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿತು.

ಈ ಪ್ರಾಣಿಗಳಿಗೆ ತಮ್ಮ ಒಂದು ಭಾಗದ ಚರ್ಮವನ್ನಷ್ಟೇ ಅಲುಗಾಡಿಸುವ ವಿಶೇಷ ಶಕ್ತಿಯಿದೆ. ಮೈ ಮೇಲೆ ಒಂದು ನೊಣ ಕುಳಿತರೆ ಆ ಭಾಗದ ಚರ್ಮವನ್ನಷ್ಟೇ ಅಲುಗಾಡಿಸಿ ನೊಣವನ್ನು ನಿವಾರಿಸಿಕೊಳ್ಳುತ್ತವೆ. ಸೂಜಿ ಚುಚ್ಚಿದ ಜಾಗದಲ್ಲಿನ ಚರ್ಮವನ್ನು ಕರಡಿ ಎಡಬಿಡದೆ ನಡುಗಿಸಿ, ಒಂದೆರಡು ನಿಮಿಷಗಳಲ್ಲಿಯೇ ಸೂಜಿಯನ್ನು  ಹೊರಗೆ ತೆಗೆಯಲು ಯಶಸ್ವಿಯಾಗಿಬಿಟ್ಟಿತು. ‘ಹೇ ಸ್ವಲ್ಪ ಅಲ್ಲಾಡದಂಗೆ ಹಿಡ್ಕಾ ಮಾರಾಯ. ಔಷ್ಧಿ ಹೋಗಬೇಕೋ ಬ್ಯಾಡೋ? ಮದ್ಲೇ  ಅಟಕಂದು  ಸುಸ್ತಾಗೇತಿ’ ಎಂದು ಹೇಳುತ್ತಾ ಕಾಂಪೌಂಡರ್ ಕರಡಿಯವನನ್ನು ಬೈದು ಮತ್ತೆ ಕರಡಿಯನ್ನು ಗೋಡೆಗೆ ಒತ್ತಿ ಪಕ್ಕದಲ್ಲೇ  ಅಲ್ಲಾಡಲು ಅಸ್ಪದ ಕೊಡದಂತೆ ಒತ್ತರಿಸಿ ನಿಂತುಕೊಂಡು ‘ಬರ್ರಿ ಸಾ ಈಗ’ ಎಂದು ನನ್ನನ್ನು ಕರೆದರು. ಆದರೆ ಕರಡಿಯವನು ಎಷ್ಟೇ ಬಿಗಿಯಾಗಿ ಹಿಡಿದುಕೊಂಡರೂ ಎಲ್ಲಿಯಾದರೂ ಮಾನವ ಪ್ರಾಣಿಗಳ ಶಕ್ತಿಗೆ ಸಮನಾದಾನೇ? ನಾನು ಹತ್ತಿರ ಹೋಗುತ್ತಿದ್ದಂತೆಯೇ ಅಷ್ಟು ಸುಸ್ತಾಗಿದ್ದರೂ ಕರಡಿ ನನ್ನ ಕಡೆಗೆ ತಿರುಗಲು ಪ್ರಯತ್ನಿಸುತ್ತ ತನ್ನ ಹಿಂಭಾಗವನ್ನು ಅತ್ತಿತ್ತ ವೇಗವಾಗಿ ಚಲಿಸುತ್ತ, ಗುರ್ರೆಂದು ಭಯಾನಕವಾಗಿ ಬಾಯಿ ತೆಗೆದು ನಮ್ಮ ಕಡೆ ನೋಡಿ ಅಸಹನೆ ವ್ಯಕ್ತಪಡಿಸಿತು.

ಈ ಬಾರಿ ಸೂಜಿ ಹೊರಗೆ ಬಾರದಂತೆ ಕಾಂಪೌಂಡರ್ ಹಿಡಿದೇ ನಿಂತು ಕೊಂಡರು. ಸೂಜಿ ಹೊರಗೆ ಬರುವುದು, ನಾವು ಮತ್ತೆ ಚುಚ್ಚುವುದು ನಡೆಯುತ್ತಲೇ ಇತ್ತು. ಕರಡಿಯವನಿಗೆ ಸತತವಾಗಿ ಅದರೊಡನೆ ಮಾತನಾಡುತ್ತಿರಲು ಹೇಳಿ ಹಾಗೂ ಹೀಗೂ ಮಾಡಿ ಸುಮಾರು ಇನ್ನೂರು ಮಿಲಿ ಗ್ಲೂಕೋಸು ಹಾಕಲು ಯಶಸ್ವಿಯಾದೆವು. ಆದರೆ ಇದು ಯಾವುದಕ್ಕೂ ಸಾಲದು. ಕರಡಿ ಚೇತರಿಸಿಕೊಳ್ಳಲು ಕನಿಷ್ಟ ಎರಡು ಬಾಟಲಿ ಆದರೂ ಬೇಕೇ ಬೇಕು. ಕರಡಿ ಆಗಾಗ ಪ್ರತಿಭಟಿಸುತ್ತಲೇ ಇದ್ದುದರಿಂದ ಮೈ ಬಿಸಿಯಾಗಿ ರೋಮದ ಮೇಲೇ ಬಿಸಿ ಅನುಭವಕ್ಕೆ ಬರುವಂತಾಯಿತು. 

ಮತ್ತೊಮ್ಮೆ ಸೂಜಿ ಹೊರಗೆ ಬಂದಾಗ ‘ಮೊದಲೇ ಸುಸ್ತಾಗಿದೆ. ಇನ್ನು ಹೆಚ್ಚು ಸುಸ್ತು ಮಾಡುವುದು ಬೇಡ’ ಎನಿಸಿ ‘ಸಾದ್ಯವಾದಷ್ಟೂ ನೀರು ಕುಡಿಸು. ಅಥವಾ ದ್ರವರೂಪದ ಆಹಾರ ಕೊಡು’ ಎಂದು ಹೇಳಿದೆವು. ಹೇಗೂ ಆಂಟಿಬಯಾಟಿಕ್ ಕೊಟ್ಟಿದ್ದೆವಲ್ಲ. ನಾಳೆ ಹುಷಾರಾಗಬಹುದು ಎಂದುಕೊಂಡು ನಮ್ಮ ಪ್ರಯತ್ನಕ್ಕೆ ತಾತ್ಕಾಲಿಕ ವಿರಾಮ ಕೊಟ್ಟೆವು.

ಬೆಳಿಗ್ಗೆ ಕರಡಿ ಇನ್ನೂ ಸುಸ್ತಾದಂತೆ ಕಂಡಿತು. ಓಡಾಡಲು ತಡವರಿಸುತ್ತಿತ್ತು. ಜವಾನನೂ ಇದ್ದುದರಿಂದ ಇವತ್ತು  ಏನಾದರೂ ಮಾಡಿ ಎರಡು ಮೂರು ಬಾಟಲಿ ಗ್ಲೂಕೋಸು ಹಾಕಲು ಸಾಧ್ಯವಾದರೆ ಮಾತ್ರ ಕರಡಿ ಉಳಿಯಬಹುದು ಎನಿಸಿತು. ಆದರೆ ಸುಸ್ತಾಗಿದ್ದರೂ ಕರಡಿ  ನಮ್ಮನ್ನು ಹತ್ತಿರ ಸೇರಿಸಲಿಲ್ಲ. ಸುಮಾರು ಎರಡು ಗಂಟೆ ಪ್ರಯತ್ನಿಸಿದರೂ ಕೇವಲ ಅರ್ಧ ಬಾಟಲಿ ಮಾತ್ರ ಕರಡಿ ದೇಹ ಸೇರಿತ್ತು. ಮೈ ಬಿಸಿ ಇನ್ನೂ ಇತ್ತು. ನಿನ್ನೆ ಕಾಂಪೌಂಡರ್ ಹೇಳಿದಂತೆ ಸುಮ್ಮನೇ ಮೆಡಿಕಲ್ ಶಾಪಿನಿಂದಲೇ ಆಂಟಿಬಯಾಟಿಕ್ ತರಿಸಿಬಿಡಬೇಕಿತ್ತೇನೋ ? ನಾನು ತಪ್ಪು ಮಾಡಿಬಿಟ್ಟೆನೇನೋ ಅನ್ನಿಸಲು ಶುರುವಾಯಿತು. ‘ಸಂಜೆ ತನಕ ನೋಡೋಣ. ಸುಧಾರಿಸದಿದ್ದರೆ ಬೇರೆ ಔಷಧಿ ಬರೆದುಕೊಡುತ್ತೇನೆ ತರುತ್ತೀಯಾ’ ಎಂದು ಕೇಳಿದೆ ಕರಡಿಯವನ ಬಳಿ ದುಡ್ಡು ಇದೆಯೋ ಇಲ್ಲವೋ ತಿಳಿದುಕೊಳ್ಳಲು. ‘ಆಗ್ಲಿ ಸೊಮೀ. ಬರ್ದು ಕೊಡಿ. ಹೆಂಗೋ ತರ್ತಿನಿ. ಇದರಿಂದಲೇ ಜೀವಣ ಅಲ್ಲ ಸೊಮಿ ನಮ್ದು’ ಎಂದ.

ಮಧ್ಯಾಹ್ನ ಊಟ ಮುಗಿಸಿ ಮೂರು ಗಂಟೆಗೆ ಬಂದರೆ ಕರಡಿ ಕಾಣಿಸುತ್ತಲೇ ಇಲ್ಲ. ಕಾಂಪೌಂಡರ್ ಕರೆದು ‘ಅಲ್ಲರೀ  ಆಂಟಿಬಯಾಟಿಕ್ ಚೇಂಜ್ ಮಾಡೋಣ ಎಂದು ಹೇಳಿದ್ದೆನಲ್ಲ ಯಾಕೆ ಅವನು ಕರೆದುಕೊಂಡು ಹೋಗಿಬಿಟ್ಟಿದ್ದಾನೆ?’ ದುಡ್ಡಿಲ್ಲದಿದ್ದರೂ ಇದೆ ಎಂದು ಹೇಳಿ ಔಷಧಿ ತರಲಾರದೆ ಹೋಗಿಬಿಟ್ಟನೇ ? ‘ಸಾರ್ ನಾನೂ ಅದೇ ನೋಡುತ್ತಿದ್ದೇನೆ ಎಲ್ಲಿ ಹೋದ ಅಂತ. ಇವೊತ್ತೊಂದು ದಿನ ಟ್ರೀಟ್‍ಮೆಂಟ್ ಆಗಿದ್ದರೆ ಹುಷಾರಾಗುತ್ತಿತ್ತು. ನಿನ್ನೇನೇ ಶಾಪಿನಿಂದ ತರಿಸಿ ಹಾಕಿ ಬಿಡಬೇಕಿತ್ತು ಸಾರ್’ ಅವರ ಸಲಹೆ ನಿರ್ಲಕ್ಷಿಸಿದ ನನ್ನನ್ನು ಆಕ್ಷೇಪಿಸುವ ದನಿಯಲ್ಲಿ ಹೇಳಿದರು. ನನಗೂ ಹಾಗೆಯೇ ಅನ್ನಿಸಲಾರಂಭಿಸಿತ್ತು. ಸುಮಾರು ನೂರು ರೂಪಾಯಿ, ಪಾಪ ಬಡವ ನಮ್ಮ ಆಸ್ಪತ್ರೆಯ ಔಷಧಿಗೇ ಹುಷಾರಾದರೆ ಆಗಲಿ ಎಂದು ನಾನು ನಿರ್ಧರಿಸಿದ್ದು ತಪ್ಪಾಯಿತು ಅನ್ನಿಸತೊಡಗಿತು.

‘ಊಟಕ್ಕೇನಾದರೂ ಹೋಗಿದ್ದಾನೇನೋ ನೋಡಿ’ ಕಾಂಪೌಂಡರನ್ನು ಹಾಗೂ ಜವಾನರನ್ನು ಕಳಿಸಿದೆ. ‘ರಿಸ್ಕ್ ತೆಗೆದುಕೊಳ್ಳುವುದು ಬೇಡ. ಅಕಸ್ಮಾತ್ ಅವನ ಬಳಿ ದುಡ್ಡು ಸಾಕಾಗದಿದ್ದರೆ ನಾನೇ ಕೊಟ್ಟರಾಯಿತು. ಇಂದು ಬೇರೆ ಔಷಧಿ ತರಿಸಿ ಹಾಕಿ ಬಿಡೋಣ’ ಯಾಕೆ ಹೋದ ಎಂಬ ಆತಂಕದ ಮಧ್ಯೆಯೇ ಯೋಚಿಸುತ್ತಿದ್ದೆ.  

ಕಾಲು ಗಂಟೆಯ ನಂತರ ಕಾಂಪೌಂಡರ್ ವಾಪಾಸು ಬಂದು ಸಾರ್ ‘ಇಲ್ಲ ಸಾರ್ ಕರಡಿಯನ್ನು ಊರಿಂದ ಆಚೆ ಕಳಿಸಿಬಿಟ್ಟಿದ್ದಾರೆ’ ಎಂದರು. ಅರ್ಥವಾಗಲಿಲ್ಲ. ನಿನ್ನೆಯೇ ಬೇರೆ ಔಷಧಿ ತರಿಸಿ ಹಾಕದ ಬಗ್ಗೆ ನನ್ನ ಮೇಲೆ ನನಗೇ ಇದ್ದ ಅಸಮಾಧಾನ ಒಮ್ಮೆಲೇ ಹೊರಹೊಮ್ಮಿ ‘ಯಾರ್ರೀ ಅದು ನಮ್ಮ ಪೇಷಂಟನ್ನು ಕಳಿಸುವವರು?’ ಕೂಗಿದೆ. ಅನಿರೀಕ್ಷಿತವಾಗಿ ನನ್ನ ಏರಿದ ದನಿ ಕಂಡು ಅಚ್ಚರಿಪಡುತ್ತಾ ‘ಅದೇ ಸಾರ್ ಊರಿನ ಮುಖಂಡರು, ಪಂಚಾಯಿತಿಯಲ್ಲಿ ಎಲ್ಲ ಸೇರಿದ್ದರಂತೆ’ ಆಶ್ಚರ್ಯದೊಂದಿಗೆ ಸಿಟ್ಟೂ ಬಂತು. ‘ನಡೀರೀ ಹೋಗಿ  ಕೇಳೋಣ ಅಧ್ಯಕ್ಷರನ್ನೇ.

ನನ್ನ ಪೇಷಂಟನ್ನು ಅದು ಹೇಗೆ ಕಳಿಸಿದರಂತೆ ನನ್ನ ಅನುಮತಿ ಇಲ್ಲದೆ?’ ಪಂಚಾಯಿತಿ ಕಛೇರಿಗೆ ಹೋಗಲು ಎದ್ದುನಿಂತೆ. ಅಷ್ಟುಹೊತ್ತಿಗೆ ಬಂದ ಜವಾನ  ಬಸಪ್ಪ ‘ಮುನಿಸಿಪಲ್ ಅಧ್ಯಕ್ಷ ನೀಲಕಂಠಪ್ಪ, ಗುಡ್ಡಪ್ಪ ಮತ್ತಿತರ ಲೀಡರ್ಸ್ ಎಲ್ಲಾ ಬೆಳಗ್ನಿಂದ್ಲೂ ಕರಡಿ ಸುಸ್ತಾಗಿರಾದನ್ನ ಗಮನ್ಸಿದ್ದರಂತೆ. ಕರಡಿ ಊರಾಗೆ ಸಾಯಬಾರದಂತೆ. ಸತ್ರೆ ಹಳ್ಳಿ ಮಕ್ಳುಮರೀಗೆ ಒಳ್ಳೇದಲ್ಲಂತೆ. ಏನಾರ ಮಾಡಿ ಅದು ಸಾಯಾದ್ರಾಗೆ ನಮ್ಮ ಊರಿನ ಗಡಿ ದಾಟಿಸಬೇಕು. ಆದರೆ ಇದಕ್ಕೆ ನೀವು ಒಪ್ಪಲ್ಲ ಅಂತ ನಾವೆಲ್ಲಾ ಮಧ್ಯಾಹ್ನ ಊಟಕ್ಕೆ ಹೋಗೋದನ್ನೇ ಕಾಯ್ತಿದ್ದರಂತೆ. ‘ಮದ್ಯಾಣ  ಸೂಜಿ ಕೊಡ್ಸಕಂಡು ಹೋಗ್ತೀನಿ ಸೊಮೀ. ಇನ್ನೂ ಹುಸಾರಾಗಿಲ್ಲ ಬೇರೆ ಸೂಜಿ ಮಾಡ್ತೀನಿ ಎಂದಿದಾರೆ ಡಾಕ್ಟರ್ ಸಾಬ್. ಅವರು ಬರಲಿ’ ಎಂದು ಕರಡಿಯವನು ಗೋಗರ್ದನಂತೆ. ಆದರೆ ಅವನ ಮಾತಿಗೆ ಯಾರೂ ಕಿವಿಗೊಡದೆ ಊರ ಗಡಿಯಿಂದ ಹೊರಗೆ ಕಳ್ಸಿಬಿಟ್ರಂತೆ’ ಎನ್ನುವ ವಿವರವಾದ ವರದಿ ತಂದ.

ನಾನು ‘ಕಾಂಪೌಂಡರೇ ಬೇಗ ನೋಡ್ರೀ ಎಲ್ಲಾದರೂ ಸಿಕ್ಕರೆ ಅಲ್ಲೇ ಕನಿಷ್ಟ ಆಂಟಿಬಯಾಟಿಕ್ ಆದರೂ ಹಾಕಿ ಕಳಿಸೋಣ ಇಲ್ಲಾ ಮಾತ್ರೆನಾದರೂ ಬರೆದುಕೊಡೋಣ’ ಕೋಪ, ಅಸಹಾಯಕತೆ, ಪಶ್ಚಾತ್ತಾಪ  ಸೇರಿದ ವಿಚಿತ್ರ ದನಿಯಲ್ಲಿ ಅವಸರ ಮಾಡಿದೆ. ಅನುಭವಸ್ಥ ಕಾಂಪೌಂಡರ್ ‘ಸಾ ಮಧ್ಯಾನ ನಾವು ಊಟಕ್ಕೆ ಹೋದ ತಕ್ಷಣ ಕಳಿಸಿದ್ದಾರೆಂದರೆ ಈಗಾಗಲೇ ಅವನು ದೂರ ಹೋಗಿರುತ್ತಾನೆ. ಯಾವ ದಿಕ್ಕಿಗೆ ಹೋಗಿದ್ದಾನೋ ಎನೋ? ನಾವಿರೋದು ಇಬ್ಬರು ಯಾವ ದಿಕ್ಕಿಗೇ ಅಂತ ಹೋಗೋಣ? ಯಾರನ್ನಾದರೂ ಕೇಳಿಕೊಂಡು ಹೋದರೂ ಅಲ್ಲಿ ಇನ್‍ಜೆಕ್ಷನ್ ಕೊಡುವುದು ಹೇಗೆ ಜನರ ಮಧ್ಯೆ? ಕರಗಿರ ಆಗಿದ್ದರೆ ಅದೊಂಥರ’ ಎಂದರು. ಏನಾದರೂ ಮಾಡಬಹುದೇನೋ ಎಂಬ ನನ್ನ ಭ್ರಾಮಕ ಉತ್ಸುಕತೆಗೆ ವಾಸ್ತವದ ತಣ್ಣೀರೆರಚಿದಂತಾಗಿ ತೆಪ್ಪಗೆ ಕುಳಿತೆ.  

‍ಲೇಖಕರು Avadhi

4 March, 2021

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading