ಕಥೆಗಾರನ ಹೆಂಡತಿ …

ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

‘ಮೇಡಂ ನಿಮ್ಮ ಗಂಡ ಮನೆಗೆ ಬರದೆ ಎಷ್ಟು‌ ದಿನವಾಯ್ತು ?’ 

ಇನ್ಸ್ ಪೆಕ್ಟರ್ ಕೇಳಿದ ಪ್ರಶ್ನೆಗೆ ಏನೆಂದು ಉತ್ತರಿಸುವುದು ಎಂಬ ಗೊಂದಲ ಆಕೆಯಲ್ಲಿ ಮೂಡಿತು.  ಏಕೆಂದರೆ ತಾನು ಏನು ಉತ್ತರ ಹೇಳುವವಳಿದ್ದಳೋ ಅದನ್ನು ಪೋಲೀಸ್ ಸ್ಟೇಶನ್ನಿನಲ್ಲಿ ಯಾರಾದರೂ ನಂಬುತ್ತಾರೋ ಇಲ್ಲವೋ ಎಂಬ ಆತಂಕ ಅವಳಿಗೆ. ಅಲ್ಲದೆ ತಾನು ಹೇಳುವ ಉತ್ತರ ಬೇರೇನಾದರೂ ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆಯೋ ಹೇಗೋ ಎಂಬ ಯೋಚನೆಯೂ ಬಂತು. 

ಇನ್ಸ್ ಪೆಕ್ಟರ್ ಮತ್ತೆ ಕೇಳಿದರು. ‘ನಿಮ್ಮ ಗಂಡ ಮನೆ ಬಿಟ್ಟು ಹೋಗಿ ಎಷ್ಟು ದಿನಗಳಾಯ್ತು ?’ 

‘ಇಲ್ಲ ಸರ್. ಅವರು ಮನೆ ಬಿಟ್ಟು ಹೋಗಿಲ್ಲ’ 

‘ಅಯ್ಯೋ . ಮತ್ಯಾಕೆ ಇಲ್ಲಿಗೆ ಕಂಪ್ಲೇಂಟ್ ಕೊಡೋಕೆ ಬಂದ್ರಿ ?’ 

‘ಅವರು ಮನೆಗೆ ಬಂದಿಲ್ಲ ಸರ್ ಅದಕ್ಕೆ’ 

‘ಅಲ್ಲಾರೀ , ಮನೆಗೆ ಬಂದಿಲ್ಲ ಅಂತೀರಿ. ಮನೆ ಬಿಟ್ಟು ಹೋಗಿದಾರೆ ಅಂದ್ರೆ ಅದೂ ಇಲ್ಲ ಅಂತೀರಿ. ದಯವಿಟ್ಟು ಕ್ಲಾರಟಿ ಕೊಡಿ’ 

‘ಅವರು ಮನೆಗೆ ಬರದೆ ಆರು ತಿಂಗಳಾಯ್ತು ಸರ್ ‘ 

ಇನ್ಸ್ ಪೆಕ್ಟರ್ ಆಕೆಯನ್ನು ಒಮ್ಮೆ ಸಂಶಯಾಸ್ಪದವಾಗಿ ನೋಡಿದರು. ಇಡೀ ಪೊಲೀಸ್ ಸ್ಟೇಷನ್ನಿನಲ್ಲಿ ಇರುವವರು ಆಕೆಯನ್ನು ಬಹುತೇಕ ಹಾಗೆಯೇ ನೋಡಿದರು. 

‘ವ್ಹಾಟ್ ? ಆರು ತಿಂಗಳಾಯ್ತಾ ?’ 

‘ಹೌದು ಸರ್’ 

‘ನಿಮ್ಮ ಮನೆ ಇರೋದು ಎಲ್ಲಿ ?’ 

‘ಇದೇ ಏರಿಯಾದಲ್ಲಿ 4ನೇ ಕ್ರಾಸ್ ನಲ್ಲಿ ಸರ್’

‘ನಿಮಗೆ ಇಲ್ಲಿ ಪೋಲಿಸ್ ಸ್ಟೇಷನ್ ಇರೋದು ಗೊತ್ತಿಲ್ಲವಾ ?’

‘ಇಲ್ಲಿ ಇದೆ ಅಂತ ಯಾರೋ ಹೇಳ್ತಿದ್ದು ಕೇಳಿದ್ದೆ’ 

‘ಅಂದ್ರೆ , ನೀವು ಈ ಮೊದ್ಲು ಈ ಸ್ಟೇಷನ್ ನೋಡೇ ಇರಲಿಲ್ಲ ಅನ್ನಿ’ 

‘ಇಲ್ಲ ಸರ್. ಪೋಲಿಸ್ ಸ್ಟೇಷನ್ನಿಗೆ ಬರೋ ಅಂತ ಯಾವ ರೀಸನ್ ಬಂದಿರ್ಲಿಲ್ಲ ಸರ್’ 

ಆಕೆಯ ಮಾತುಗಳನ್ನು ಕೇಳುತ್ತಿದ್ದ ಇನ್ಸ್ ಪೆಕ್ಟರ್ ನಿಗೆ ನಿಜಕ್ಕೂ ಇವಳು ತನ್ನ ಗಂಡನ ಹುಡುಕುವ ಉದ್ದೇಶ ಹೊಂದಿದ್ದಾಳೋ ಇಲ್ಲವೋ ಎಂದೆನ್ನಿಸಿತು. 

‘ಅಲ್ಲಾರೀ ನಾಲ್ಕನೇ ಕ್ರಾಸ್ ಇಂದ ನಾಲ್ಕು ಹೆಜ್ಜೆ ಇಟ್ರೆ ಸ್ಟೇಷನ್ ಇದೆ. ನೀವು ತಿಂಗಳಿಗೊಂದರಂತೆ ಹೆಜ್ಜೆ ಇಟ್ಟಿದ್ದರೂ ಕಂಪ್ಲೇಂಟ್ ಕೊಟ್ಟು ಎರಡು ತಿಂಗಳಾಗಬೇಕಿತ್ತು ಅಲ್ವಾ ?’ ಎಂದು ಇನ್ಸ್ ಪೆಕ್ಟರ್ ಹೇಳಿದಾಗ ಸ್ಟೇಷನ್ನಿನ ತುಂಬ ನಗು… 

‘ಹಾಗೆ ನಿಮ್ಮ ಸ್ಟೇಷನ್ನಿ‌ನ ಪಕ್ಕದಲ್ಲಿ ಒಂದು ಸ್ಮಶಾನವೂ ಇದೆಯಲ್ವ ?’ ಎಂದು ನಿಖರವಾಗಿ ಕೇಳಿದಳಾಕೆ‌.

‘ಅರ್ಥ ಆಯ್ತು ಬಿಡಿ. ನಮಗೆ ಅವಶ್ಯಕತೆ ಬೀಳದ ಹೊರತು ಕೆಲವು ಜಾಗಗಳಿಗೆ ನಾವು ಹೋಗಲ್ಲ ಅನ್ನೋದು ನಿಮ್ಮ ಮಾತಿನ ಅರ್ಥ ತಾನೆ ?’ 

‘ಹಾಗಲ್ಲ ಸರ್ … ಬೇಜಾರು ಮಾಡ್ಕೋಬೇಡಿ.‌’ 

‘ಬೇಜಾರೆಂತದ್ದೂ ಇಲ್ಲ. ನಿಮ್ಮ ಗಂಡನ ವಿಷಯಕ್ಕೆ ಬರೋಣ. ಅವರು ಏನ್ಮಾಡ್ತಾರೆ ?’ 

‘ಕಥೆ ಬರೀತಾರೆ ಸರ್ ‘ 

‘ಅಲ್ಲಾರೀ ಕೆಲಸ ಏನ್ ಮಾಡ್ತಾರೆ ?’ 

‘ಲಾ ಪ್ರಾಕ್ಟೀಸ್ ಮಾಡ್ತಿದ್ರು . ಇತ್ತೀಚಿಗೆ ಅದನ್ನ‌ ನಿಲ್ಸಿದಾರೆ’ 

‘ಕಾನೂನು ಬಿಟ್ಟು ಕಥೆ ಹಿಡಿದಿದ್ದಾರೆ ಅನ್ನಿ’ 

‘ಹುಂ ನೋಡಿ . ಆವಾಗ್ಲಿಂದಾನೆ ಈ ಥರದ್ದೆಲ್ಲ ಶುರುವಾಗಿದ್ದು ?’ 

‘ಯಾವ ಥರದ್ದು ?’ 

‘ಈಗ ಹೋಗಿದಾರಲ್ಲ ಈ ಥರದ್ದು …’ 

ಇನ್ಸ್ ಪೆಕ್ಟರ್ ಗೆ ಇದೇನು ಹೇಳುತ್ತಿದ್ದಾರೆಂದು ಸರಿಯಾಗಿ ಅರ್ಥವಾಗಲಿಲ್ಲ. ಅವನ ತಲೆಯಲ್ಲಿ ಆರು ತಿಂಗಳಾದ ಮೇಲೆ ಗಂಡನನ್ನು ಹುಡುಕಿಕೊಡುವಂತೆ ಬಂದ ಆಕೆಯ ಮೇಲೆ ಇನ್ನೂ ಅನುಮಾನ ಇತ್ತು.‌ ಅದಕ್ಕಾಗಿಯೇ ಕೇಳಿದ. ‘ಆರು ತಿಂಗಳು ನಿಮ್ಮ ಗಂಡನನ್ನು ಹುಡುಕಲು ನೀವೇಕೆ ಕಂಪ್ಲೇಂಟ್ ಕೊಡಲಿಲ್ಲ ?’ 

‘ಏಕೆಂದರೆ ಅವರಿಗೆ ಅದು ಇಷ್ಟವಾಗಲ್ಲ’ 

‘ನನಗೆ ಇದೇನು ಅಂತ ಏನು ಅಂತ ತಿಳೀತಿಲ್ಲ ನೋಡಿ’ 

‘ನೀವು ಆ ಕಥೆಗಾರನ ಹೆಂಡತಿ ಆಗಿದ್ರೆ ತಿಳಿದಿರೋದು’ 

‘ಅಂದ್ರೆ ತಾನು ಕಳೆದು ಹೋಗ್ತೀನಿ. ಆರು ತಿಂಗಳಾದ್ರು ನೀನು ಪೋಲಿಸ್ ಕಂಪ್ಲೇಂಟ್ ಕೊಡಬಾರದು ಅಂತ ನಿಮ್ಗೆ ಹೇಳಿದ್ರಾ ?’ 

‘ಆರು ತಿಂಗಳಗಟ್ಲೆ ಯಾವಾಗಲೂ ಹೋಗಿರ್ಲಿಲ್ಲ ಸರ್’ 

‘ಓಹೋ! ಅಂದ್ರೆ ಅವಾಗಾವಾಗ ಈ ಥರ ಮನೆ ಬಿಟ್ಟು ಹೋಗೋರು ಅನ್ರಿ ?’ 

‘ಅದ್ನ ಮನೆ ಬಿಟ್ಟು ಹೋಗೋದು ಅನ್ಬೇಡಿ ಸರ್. ಅವರು ಕಥಾ ಸಮಯ ಹುಡುಕಿಕೊಂಡು ಹೋಗ್ತಿದ್ರು’ 

ಇದೇನು ಗೊಂದಲವೋ ಅಂದುಕೊಂಡ ಇನ್ಸ್ ಪೆಕ್ಟರ್ ಗೆ ಇದನ್ನು ಸರಿಯಾಗಿ ತಿಳಿದುಕೊಳ್ಳಬೇಕೆಂಬ ಕುತೂಹಲ ಹುಟ್ಟಿ ಆಕೆಯ ಬಳಿ ಒರಟಾಗಿ ಮಾತನಾಡಬಾರದೆಂದು ನಿರ್ಧರಿಸಿದ. ಅವಳಿಗೆ ಚಹ ತರಿಸಿಕೊಟ್ಟು, ‘ಹೇಳಿ ಮೇಡಂ. ಈ ಕಥಾ ಸಮಯ ಅಂದ್ರೇನು ? ಅದೆಲ್ಲಿರುತ್ತೆ ?’

‘ಅದು ನನಗೂ ಇವತ್ತಿಗೂ ಸರಿಯಾಗಿ ಅರ್ಥ ಆಗಿಲ್ಲ ಸರ್.‌ ಆದರೆ ಅವರ ಪ್ರಕಾರ ಅದು ಕಥೆ ಬರೆಯೋ ಕಾಲ. ಕಥೆ ಹುಟ್ಟೋ ಕಾಲ ಅಥವಾ ಕಥೆಯ ಸ್ಥಳ ಅಥವಾ ಕಥೆಯ ಪ್ರೇರಣೆ. ಹೀಗೇ ಏನೇನೋ ಹೇಳ್ತಾರೆ ಸರ್. ನಾನು ಅರ್ಥ ಮಾಡಿಕೊಂಡಂತೆ ಅವರು ಒಂದು ಹೊಸ ಕಥೆ ಬರೆಯೋ ಸಮಯದಲ್ಲೆಲ್ಲ ಹೀಗೆ ಎಲ್ಲಾದರೂ ಹೋಗ್ತಾರೆ ಸರ್’ 

‘ಅಂದ್ರೆ, ನಿಮ್ಗೆ ಇದು ಮೊದಲೇನಲ್ಲ ಅಂತಾಯ್ತು ?’ 

‘ಇಲ್ಲ ಸರ್ ಅವರು ಹೊಸ ಕಥೆ ಬರೆಯೋವಾಗಲೆಲ್ಲ ಹೀಗೆ ಎಲ್ಲಾದರೂ ಹೋಗ್ತಿದ್ರು. ಎರಡು ಮೂರು‌ ದಿನ ಆದ್ರೂ ವಾಪಾಸ್ ಬರ್ತಾ ಇರಲಿಲ್ಲ. ಮೊದಮೊದಲು ನಾನು ಕೇಳ್ತಿದ್ದೆ. ಕಥೆಗೆ ಸಂಬಂಧಪಟ್ಟ ಅನುಭವ ಅಥವಾ ಪ್ರೇರಣೆ ನೀಡುವಂಥ ಜಾಗಗಳಿಗೆ ಹೋಗಿ ಕಥೆ ಬರೆದುಕೊಂಡು ಬರೋರು. ನನ್ನನ್ನೂ ಕರಕೊಂಡು ಹೋಗಿ ಅಂದ್ರೆ , ನಾನು ಹೋಗೋದ್ ಪಿಕ್ ನಿಕ್ ಗೆ ಅಲ್ಲ ಅನ್ನೋರು. ಕಾನೂನು ಕಲಿತವರು ಅಂತ ಮದ್ವೆ ಆದೆ ಸರ್. ಇವರು ಕಥೆಗಾರನಾದ ಮೇಲೆ ಇದೆಲ್ಲ ರೂಢಿ ಆಗೋಯ್ತು.’ 

ಆಕೆಯ ಮಾತನ್ನು ತುಂಡರಿಸಿದ ಇನ್ಸ್ ಪೆಕ್ಟರ್ , ‘ನಿಮಗೆ ಮಕ್ಕಳಿಲ್ವ ? ಅವರಿಂದಾನಾದ್ರೂ ಹೇಳಿಸಬಹುದಲ್ಲ ?’ ಅಂದರು.

‘ಮಕ್ಕಳ ಮಾತನ್ನ ಅವರೆಲ್ಲಿ ಕೇಳ್ತಾರೆ‌. ಅವರು ಹೇಳಿ ಹೇಳಿ ಬೇಜಾರಾಗಿ, ಅವರಿದ್ದಂಗೆ ಇರ್ಲಿ ಬಿಡಮ್ಮ ಅಂತ ಹೇಳ್ತಾರೆ. ಅಲ್ಲದೆ ಅವರಿಬ್ಬರೂ ಈ ದೇಶದಲ್ಲಿಲ್ಲ. ಸುಮ್ನೆ ಅವರು ಸೀರಿಯಸ್ ಅಗಿ ತಗೊಳ್ಳಲ್ಲ ಅಂತ ನಾನು ಏನೂ ತಿಳಿಸಿಲ್ಲ’ 

‘ಇದುವರೆಗೆ ಹೀಗೆ ಹೋದಾಗ ಹೆಚ್ಚೆಂದರೆ ಎಷ್ಟು ದಿನ ಇರ್ತಿದ್ರು ?’

‘ಕೆಲವು ಕಥೆಗಳನ್ನ ಬೆಳಗ್ಗೆ ಹೋಗಿ ಬರೆದುಕೊಂಡು ಸಂಜೆ ಬಂದುಬಿಡೋರು. ಮತ್ತೆ ಕೆಲವು ಸರಿ ಎರಡು ‌ದಿನ‌, ಮೂರು ದಿನ ಒಂದು ಸರಿ ಮಾತ್ರ ಐದು‌ ದಿನ ಆದಮೇಲೆ ಬಂದಿದ್ರು . ಅದೇ ಹೆಚ್ಚು ದಿನ ಸರ್. ಮೊಬೈಲ್ ತಗೊಂಡು ಹೋಗ್ರಿ ಅಂದರೆ ಬೇಡ ಅದು ಡಿಸ್ಟರ್ಬ್ ಮಾಡುತ್ತೆ ಅಂತ ಹೇಳೋರು. ಅಲ್ಲದೆ ನಾನು ಬರೋ ತನಕ ನೀನು ಹುಡುಕೋಕ್ ಹೋಗ್ಬೇಡ. ಸುಮ್ನೆ ಜನ ಏನೇನೋ ಮಾತಾಡ್ಕೋಳ್ತಾರೆ. ಗಾಢವಾದ ಕಥೆ ಬರೀಬೇಕು ಅಂದ್ರೆ ಕಥಾ ಸಮಯ ಕೂಡ ಗಾಢವಾಗಿಯೇ ಇರಬೇಕು ಅಂತ ತುಂಬಾ ಪ್ರೀತಿಯಿಂದ ಹೇಳಿದ್ರು. ಹಾಗಾಗಿಯೇ ನಾನು ಇಷ್ಟು ದಿನ ಆದರೂ ಅವರ ಬಗ್ಗೆ ಕಂಪ್ಲೇಂಟ್ ಕೊಡಲು ಬಂದಿರಲಿಲ್ಲ. ಆದರೆ ನಿನ್ನೆ ಮಗನಿಗೆ ಕೇಳಿದಾಗ ಅವನು ಬೈದ. ಕಂಪ್ಲೇಂಟ್ ಕೊಡು ಎಂದ. ಹಾಗಾಗಿ ಬಂದೆ ಸರ್. ನನಗೂ ಭಯ ಆಗ್ತಿದೆ . ನೀವು ಹೆಲ್ಪ್ ಮಾಡ್ಬೇಕು ಸರ್’ 

ಆಕೆಯ ಮಾತುಗಳನ್ನು ಕೇಳುತ್ತ ಇನ್ಸ್ ಪೆಕ್ಟರ್ ಗೆ ಕೋಪದ ಜೊತೆ ಆಶ್ಚರ್ಯವೂ ಆಯಿತು. 

‘ನಾನು ಹೆಲ್ಪ್ ಮಾಡ್ತೀನಿ ಮೇಡಂ. ಕಿಡ್ನಾಪ್ ಆದೋರ್ನ ಹುಡುಕೋಕೆ ನಮ್ಮಲ್ಲಿ ಒಂದು ಪ್ಲಾನ್ ಅಂತಿದೆ. ಆದ್ರೆ ಹೀಗೆ ತಾವಾಗಿಯೇ ಕಳೆದು ಹೋಗೋರ್ನ ಹುಡುಕೋದು ಹೇಗೆ ಅಂತ ಗೊತ್ತಾಗ್ತಿಲ್ಲ. ಬಟ್ ವಿ ವಿಲ್ ಡೆಫನೆಟ್ಲಿ ಫೈಂಡ್ ದಟ್ ಸ್ಟ್ರೇಂಜ್ ಸ್ಟೋರಿ ಟೆಲ್ಲರ್. ನೀವು ಅವರ ಎಲ್ಲಾ ವಿವರಗಳನ್ನು ಕೊಟ್ಟು, ಒಂದು ಕಂಪ್ಲೇಂಟ್ ಕೊಟ್ಟು ಹೋಗಿ. ಏನಾದ್ರೂ ಮಾಹಿತಿ ಸಿಕ್ಕ ತಕ್ಷಣ ನಾನೇ ನಿಮಗೆ ಕಾಲ್ ಮಾಡ್ತೀನಿ’ ಎಂದು ಭರವಸೆ ಸಿಕ್ಕ ಮೇಲೆ ಆಕೆ ಅಲ್ಲಿಂದ ಹೊರಟಳು. 

‘ಮೇಡಂ, ತಪ್ಪು ತಿಳಿಬೇಡಿ. ನಿಮ್ಮ ಅವರ ಸಂಬಂಧ ಚೆನ್ನಾಗಿತ್ತು ತಾನೆ‌ ?’ 

‘ಬೇಡವಾದವರನ್ನ ಹುಡುಕಿ ಕೊಡಿ ಅಂತ ಯಾರಾದರೂ ನಿಮ್ ಹತ್ರ ಬರ್ತಾರಾ ಸರ್ ?’ 

‘ಹಾಗಲ್ಲ … ಅವರು ಆಗಾಗ ಹೀಗೆ ಹೋಗ್ತಿದ್ರು ಅಂದ್ರಲ್ವಾ ಅದ್ಕೆ ಕೇಳ್ದೆ ? ಕೇವಲ ಕಥೆ ಕಾರಣವಾ ಅಥವಾ …?’ 

‘ಅದನ್ನ ಅವರನ್ನ ಹುಡುಕಿದ ಮೇಲೆ ಅವರನ್ನೇ ಕೇಳಿ ನೋಡಿ’ ಎಂದು ಅಲ್ಲಿಂದ ಹೊರ ನಡೆದಳಾಕೆ. 

ಒಂದೆರೆಡು ವಾರಗಳ ನಂತರ …

‘ಗುಡ್ ಮಾರ್ನಿಂಗ್ ಮೇಡಂ. ನಾನು ಇನ್ಸ್ ಪೆಕ್ಟರ್ ಮಾತಾಡ್ತಿದೀನಿ. ಇವತ್ತಿನ ಪೇಪರ್ ನಲ್ಲಿ ನಿಮ್ಮ ಗಂಡ ಬರೆದಿರೋ ಕಥೆ ಬಂದಿದೆ ನೋಡಿ. ಆದರೆ ಅತೀ ಚಿಕ್ಕ ಕಥೆ ಅನ್ನೋ ಟೈಟಲ್ ಇದೆ. ಅದನ್ನ ಬರೆಯೋಕೆ ಅವರಿಗೆ ಆರು ತಿಂಗಳು ಕಥಾ ಸಮಯ ಬೇಕಿತ್ತಾ ಅಂತ ನನ್ಗೆ ಡೌಟು ಮೇಡಂ. ನಾನು ಪೇಪರ್ ಆಫೀಸಿಗೆ ಕಾಲ್ ಮಾಡಿ ವಿಚಾರಿಸಿದೆ. ಆ ಕಥೆ ಕಳಿಸಿದವರ ವಿಳಾಸ ಲಕೋಟೆಯೊಂದಿಗೆ ಇರಲಿಲ್ವಂತೆ. ಬಹುಷಃ ಹ್ಯಾಂಡ್ ಪೋಸ್ಟ್ ನಲ್ಲಿ ಕೊಟ್ಟಿದ್ದರು ಅನ್ಸುತ್ತೆ. ಯಾವುದಕ್ಕೂ ನೀವು ಒಂದು ಸರಿ ಪೇಪರ್ ನೋಡಿ. ಆಮೇಲೆ ಪೊಲೀಸ್ ಸ್ಟೇಷನ್ನಿಗೆ ಬನ್ನಿ. ಏನಾದ್ರೂ ಕ್ಲೂ ಸಿಗುತ್ತಾ ನೋಡೋಣ’ 

ಕಾಲ್ ಕಟ್ ಆಯಿತು… 

ಆಕೆ ಪೇಪರ್ ತೆಗೆದು ನೋಡಿದಳು. ಹೌದು ಅಲ್ಲಿ ಅತೀ ಚಿಕ್ಕ ಕಥೆಯಿತ್ತು ; 

ಇಬ್ಬರು ಹರೆಯದ ಮಕ್ಕಳನ್ನು ಹೊಂದಿದ್ದ ಪುರುಷನೊಬ್ಬ ಆಕೆಯನ್ನು ಮೆಚ್ಚಿ ಮದುವೆಯಾದ. ಆಕೆಯನ್ನು ಕಂಡರೆ ಆ ಮಕ್ಕಳಿಗೆ ಎಲ್ಲಿಲ್ಲದ ಕೋಪ. ದ್ವೇಷಿಸತೊಡಗಿದರು. ಆಕೆ ಕೂಡ ಮಕ್ಕಳನ್ನು ಸಂಪೂರ್ಣ ನಿರ್ಲಕ್ಷಿಸಿಲಾರಂಭಿಸಿದಳು. ಆ ಪುರುಷ ಒಂದು‌ ಸಣ್ಣ ವಿದಾಯದ ಪತ್ರ ಬರೆದಿಟ್ಟು ಎಲ್ಲರನ್ನು ಬಿಟ್ಟು ಕಣ್ಮರೆಯಾಗಿ ಹೋದ. ಮಕ್ಕಳು ನಿಧಾನಕ್ಕೆ ಅವಳನ್ನು ಸಹಿಸಿಕೊಂಡರು. ಆಕೆ ಆ ಮಕ್ಕಳನ್ನು ಪ್ರೀತಿಸತೊಡಗಿದಳು. ಮೂವರೂ ಸೇರಿ ಆ ಪುರುಷನ ದಾರಿ ಕಾಯುತ್ತಿದ್ದಾರೆ … 

ಅದನ್ನೋದಿದ ನಂತರ ಆಕೆ ಇನ್ಸ್ ಪೆಕ್ಟರ್ ಗೆ ಕಾಲ್ ಮಾಡಲಿಲ್ಲ. ಪೊಲೀಸ್ ಸ್ಟೇಷನ್ನಿಗೆ ಹೋಗಲಿಲ್ಲ.  ಆ ಕಥೆಯ ಕಥಾ ಸಮಯದ ಬಗ್ಗೆ ಯೋಚಿಸುತ್ತಾ ಕುಳಿತಳು … 

November 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Kiran Bhat

    ನಿಮ್ದೂ ‘ಕಥಾಸಮಯ’ ಅಂತ ಇದೆಯಾ?
    …….interesting.

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ಅಬ್ಸರ್ಡ್ ಪ್ಲೇ ತರಾನೇ ಓದಿಸಿಕೊಳ್ತು ಬರಹ…. ಆದರೆ ಕಥಾಸಮಯದೊಳಗೆ ಜೀವಂತ ಬಾಳೊಂದು ಕಳೆದು ಹೋಯಿತು…. ಹೊಸತನವಿದೆ ಮಾವಲಿ ಸರ್….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: