ಜೀವದ ಕಣ್ಣು..

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿಮಣ್ಣ ಒಡನಾಟರಂಗಭೂಮಿಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಅನ್ನ ದೇವರ ಮುಂದೆ

ಇನ್ನು ದೇವರು ಇಲ್ಲ

ಅನ್ನವೇ ದೈವ ಜಗಕೆಲ್ಲ ಸರ್ವಜ್ಞ.

ತುಬ್ಬಲಿಯ, ಜಾಲಿಯ ಇಲ್ಲವೇ ಬೇವಿನ ಮರದ ಯಾವುದಾದರೊಂದು ತುಂಡನ್ನು ವರ್ಷೊಂಭತ್ತು ಕಾಲವೂ ಬಾಳ್ಸಿಯಲ್ಲಿ ಕೆತ್ತುತ್ತ ನವ ಮಡಿಕೆಗಳನ್ನು(ಹೊಸ ನೇಗಿಲು) ನೊಗಗಳನ್ನು ಮಾಡಿಕೊಳ್ಳುತ್ತಾ ಕಲಿಕೆಯ ಲೋಕವೇ ತಿಳಿಯದ ನನ್ನ ದೊಡ್ಡಪ್ಪ ಒಳಗೆ ಊರಿಕೊಂಡಿದ್ದ ಸರ್ವಜ್ಞನ ತ್ರಿಪದಿಗಳ ನೇಕವನ್ನು ಆಗಾಗ ನಮಗೆ ಹೇಳೋರು.

ಊರಿನಲ್ಲಿ ಯಾರು ಗದ್ದೆ ಹೊಡೆದರು ಮೊದಲೆರಡು ದಿನ ವ್ರೀಹಿಯನ್ನು ನೆನೆಸಿ ತಟ್ಟಿಗೆ ಬಗ್ಗಿಸಿ ಮಕ ತೊಳ್ಯೋರು. ಮಕ ತೊಳ್ಯದು ಅಂದ್ರೆ ನೆನೆದ ನೆಲ್ಲನ್ನು ಅಂಬಿಲ್ಲದಂತೆ ಅತ್ತ ಬಸ್ದು ಉಲ್ಲೀಸ್ಲು ಮಂದ್ಲಿಕೆಯಲ್ಲಿ ಉಸಿರಿಳಿಯದಂತೆ ಬಿಗಿದು ಸುತ್ತಲೂ ತಂಗ್ಡೆ ಸೊಪ್ಪು ಕುರಿಗೊಬ್ರ ಹಾಕಿ ಕಟ್ಟಿದ ನೆಲ್ಲನ್ನು ಬದ್ರ ಮಾಡೋರು. ಮತ್ತೆರಡು ದಿನ ಇಳಿದ ಮೇಲೆ ಈಸ್ಲು ಗಂಟು ಗಾಳಾಡಿರೆ ಉಲ್ಲಾಗುತ್ತೆ ಅಂತ ಕಣ್ ಬಿಟ್ಟ ಭತ್ತದ ಬೀಜಗಳನ್ನು ಎಂಟೆ ಒಡ್ದು ನೀರ್ಕಟ್ಟಿ ಹದ ಮಾಡಿದ ಗದ್ದೆಗೆ ಎರ್ಸಿರೆ ಪೈರಿನ ಪ್ರಗತಿಗೆ ಕಾಯುವ ಕೆಲಸ ಮುಂದೆ.

ಮಡಿಕೆಗಳನ್ನು ನಿಗವಾಗಿ ಸಿದ್ದಗೊಳಿಸಿ, ನೊಗವು ಏರುಪೇರಾಗದಂತೆ ಎಚ್ಚರದಿಂದ ಎಲ್ಲವೂ ಒದಗುವ ಕ್ರಿಯೆ ಆರಂಭ. ಪೈರು ಬರೋದ್ರೊಳ್ಗೆ ಏಳ್ಸಾಲು ಗದ್ದೆ ನೆಲಗೆಯ್ದು ಹದ ಮಾಡಿ ಒಂದೆರಡು ದಿನ ಎಂಟೆ ಒಡ್ಯ ಬದ್ಕು. ಸಮವಾಗುವಂತೆ ಮಣ್ಣನ್ನು ಮಾಗಾಕಿದ ಮೇಲೆ ಸರ್ಬು ತುಳ್ಯೋ ಕೆಲ್ಸ. ಮೊದಲೇ ಹೊಂಗೆ ಸೊಪ್ಪು ಬೇವಿನ್ ಸೊಪ್ಪು ವಂಚಿರೋರು.

ಪೈರು ಬೇರಿಳಿಸಿ ಫಲವಾಗುವ ನೆಲಕ್ಕೆ ಸರ್ಬು ತುಳ್ಯ ಕೆಲ್ಸ ಮುಂದಾದ್ರೆ ಇದು ಸುಗ್ಗಿ ನಮಗೆ. ಕೆಸ್ರು ಗದ್ದೆಗೆ ಸರ್ಬ್ ತುಳ್ಕಂಡು ಕೆಸ್ರೊಯ್ಕಮ ಬದ್ಕು ಕೊಡೋ ತಣ್ಣಗಿನ ನೆಮ್ಮದಿ ಬಲು ಸಿರಿ ತುಂಬುತ್ತೆ ಮನಸಿಗೆ. ಬದ ಕಟ್ಟುವ, ನೀರು ಹಾಯಿಸುವ ಹಾಗೆ ಸರ್ಬು ತುಳ್ದು ಅದು ಕಳ್ತ್ಕಮೊ ಗಮಲು ಬೇಸಾಯವನ್ನು ಧರಿಸಿ ಒಕ್ಕಲಿಗೆ ಉಸಿರಾದ ಜನಕ್ಕೆ ಕೊಡುವ ಸಂತಸಕ್ಕೆ ಮಿತಿ ಎಲ್ಲಿಂದ ಹುಡುಕಲಿ. ಇಷ್ಟೆಲ್ಲಾ ಶ್ರಮಿಸಿದ ಮೇಲೆ ಪೈರು ಬಂದಿರೋದು.

ಒತ್ತೊತ್ತಾಗಿ ಜತಿ ಅಗಲದಂತೆ ತಾಗಿಸಿಕೊಂಡು ಹಸಿರನ್ನೇ ಕಕ್ಕುವ ಪೈರು ನಿಂತು ನೋಡಿದರೆ ನಾವೇ ಹಸಿರೊದ್ದು ಉಸಿರಾಡುವ ಅನುಭೂತಿಯೊಂದು ನೆಲದೊಡಲಿಂದ ನುಗ್ಗಿ ಬಂದು ಪ್ರಾಣಕ್ಕೆ ಪ್ರಾಣಬೆಸೆದಂತಾಗುತ್ತದೆ. ಎಲ್ಲವೂ ಹೊಂದಿಸಿಕೊಂಡಂತೆ ಶಿಸ್ತಿನಿಂದ ಸಾಗಿ ಒಟ್ಟು ಕೀಳುವ ದಿನ ಬಂದರೆ (ಪೈರಿಗೆ ನಮ್ಮ ಕಡೆ ‘ಒಟ್ಟು’ ಹೇಳ್ತೇವೆ) ಅನ್ನವೇ ಒಡಲಿಗೆ ಚೇತನವಾದಂತೆ. ಒತ್ತುಟ್ಟಕೆ ಮದ್ಲೆ ಹೋಗಿ ಗದ್ದೆ ಪೈರಾಕಕೆ ಜನ ಕರೀಬೇಕು.

ಎರಡು ಮೂರು ದಿನದಲ್ಲಿ ಎಲ್ಲವನ್ನೂ ಸಲೀಸಾಗಿ ಮುಗಿಸುವ ತವಕ ಕಾವೇರುತ್ತದೆ ಮನೆಗಳಲ್ಲಿ. ಸರಬುಂಡು ಎಂಟೆ ಒಡೆಸಿಕೊಂಡು ನೀರ್ಕುಡಿದು ಸಮನಾಗಿ ತಿಳಿನೀರ ತನ್ನಂಗಳದಲ್ಲಿ ತುಂಬಿಕೊಂಡ ಕಳಗುಟ್ಟುವ ನೆಲ ಒಂದಷ್ಟು ದಿನ ಬೆಳ್ಳಕ್ಕಿ ಹಿಂಡಿಗೆ ಗೃಹವಾಗಿಬಿಡುತ್ತದೆ. ಕೆಸರು ಗದ್ದೆಗೆ ಬೆಳ್ಳನೆಯ ಬಟ್ಟೆ ಅಲ್ಲಲ್ಲಿ ನೇತುಬಿಟ್ಟಂತೆ ಗದ್ದೆಯಂಗಳವೆಲ್ಲ ಕೊಕ್ಕರೆಗಳಿಗೆ ತವರು. ಉಳ ಆದ್ಕಂಡು ತಿಂಬಕೆ ಕೊಕ್ರೆ ಬಂದಾವ್ ನಡೀರಿ ನೋಡನ ಅಂತ ಗದ್ದೆತಕೋಗದು ಬೆಳಕ್ಕಿ ಇಳ್ದಂಗೆ ನಾವು ಇಳ್ದು ಮೈತುಂಬ ಕೆಸ್ರೊಯ್ಕಂಡು ಮೆರ್ಯದು… ಇವೆಲ್ಲ ದಕ್ಕಲು ಜೋಗವಿರಬೇಕು (ಯೋಗ-ಜೋಗ).

ಜನಕೂಡಿಸಿಕೊಂಡು ಪೈರಾಕುವಾಗ ಮನೆಯಲ್ಲಿ ಕತ್ತಾಳೆ ನಾರ್ ಸಿಗ್ದು ರಾಟೆ ತಿರ್ವಿ ಮಾಡಿದ ಸಣ್ಣೆಳೆ ಅಗ್ದುರಿನ ಆ ಬದಿನಗೊಬ್ರು ಇತ್ಲು ಬದಿನಗೊಬ್ರು ಇಡ್ಕಂಡು ಸಾಲು ಸೊಟ್ಟ ಓಗ್ದಂಗೆ ಪೈರೂಣ್ಸರು. ಗದ್ದೆ ಪೈರಾಕುವಾಗ ನಮ್ಮೂರಿನ ಗೌರಕ್ಕ,ಆದಿಮನೆ ಪುಟ್ಟಮ್ಮ ಒಂದು ಹಾಡು ಎತ್ಕೊಟ್ರೆ ಸಾಕು ಅವರ ದನಿಗೆ ಉಳಿದವರ ದನಿಕೂಡಿ ಹಸಿರೆದ್ದು ಹರವಿಕೊಂಡಂತೆ ಅನುಭವ ಹಿಗ್ಗೋದು.

ಊರಿನಲ್ಲಿ ಬಹುಪಾಲು ಹಿರಿಯರು ಕತ್ತಾಳೆ ಕೊಯ್ದು ಸಣ್ಣೆಳೆ ಮಾಡಿ ಸಿಗ್ದು ಸಿಗ್ದು ಅಟ್ಟಿಬಾಗ್ಲಗೆ ಒಣ್ಗಾಕಿರ್ತಾರೆ. ಅನೇಕರಿಗೆ ಬೇಸಾಯಕ್ಕೆ ಬೇಕಾಗುವ ಉಪಕರಣಗಳನ್ನೆಲ್ಲ ಮಾಡಿಕೊಳ್ಳುವ ಕ್ರಿಯೆ ಸಿದ್ಧಿಸಿದೆ. ಹೊನ್ನಾರು ಹೂಡುವ ಹಿಂದೆ ಮುಂದೆ ತೊಂಭತ್ತು ಭಾಗ ಮನೆಗಳ ಮುಂದೆ ಹೊಲವೊಂದು ಫಲಕೊಡಲು ಸಮೃದ್ಧಗೊಳ್ಳುವ ಅಪೂರ್ವ ಘಟಿಸುತ್ತಿರುತ್ತದೆ. ನಮಗೆ ಈ ಎಲ್ಲವೂ ತಪಸ್ಸಿನಂತೆ ಕಾಣೋದು.

ನಮ್ಮ ಮನೆಯಲ್ಲಿ ಹಗ್ಗವನ್ನು ಇವತ್ತಿಗೂ ಸಂತೆಯಲ್ಲಿ ತರುವುದಿಲ್ಲ. ಹಗ್ಗ ಸುತ್ತುವ ರಾಟೆಗಳನ್ನು ದೊಡ್ಡಪ್ಪ, ಅಪ್ಪ ತಯಾರು ಮಾಡೋರು. ಶಾಲೆಯಿಂದ ಬಂದ ಕೂಡಲೇ ಅವರು ಎಳೆಗೆ ಎಳೆಯನ್ನು ಗಂಟುಬಿಡಿಸಿ ರಾಟೆಗೆ ಬೆಸೆದು ತಿರುವಲು ಹೇಳೋರು. ನಾವು ಅರ್ಧಪರ್ಲಾಂಗಿನಷ್ಟು ದೂರ ಸೀದ ಉದ್ದನೆಯ ಹಗ್ಗವಾಗುವ ಕ್ರಿಯೆಯನ್ನು ತಲೆಯಲ್ಲಿ ಸಿಂಬೆ ಮಾಡಿಕೊಡು ಧ್ಯಾನಿಸುತ್ತಲೆ ರಾಟೆ ತಿರುವುತ್ತಿದ್ದೆವು.

ಅಳತೆಯೋಪಾದಿಯಲ್ಲಿ ಸಿದ್ಧಗೊಳ್ಳುವ ಈ ಹಗ್ಗಗಳು ಕಡಮಂತಿನಿಂದ ಹಿಡಿದು ಹೋಳಿಗೆಯ ಸಿಬ್ಬಲಿಗೆ ರಕ್ಷಣೆಯಾಗಿ ಜಂತೆ ಸೇರಿ, ಕುಡಿಯೊ ನೀರನ್ನು ಸೇದಲು ಗಾಲಿ, ಬಿಂದಿಗೆಯ ಜೊತೆಗೆ ಬಾವಿಗೆ ಕೂಡಿಕೊಂಡು ಅಷ್ಟಕ್ಕೆ ನಿಲ್ಲದೆ ನೊಗ, ನೇಗಿಲು, ಮಿಣೆ, ಕುಳಕ್ಕೂ ಬೆಸೆದುಕೊಂಡು ಮತ್ತೂ ನಿಲ್ಲದೆ ಪುಂಡ ದನಗಳಿಗೆ, ಕಂಡಾರೊಲ ಮೇಯುವ ಕಳ್ಳದನಗಳಿಗೆ ಕಡಿವಾಣ ಹಾಕಲು ಬಗ್ಗಾಲಾಕುವ ಕೆಲಸಕ್ಕೂ ಮುಂದಾಗಿ ನಿಟ್ಟುಸಿರು ಬಿಡದೆ ಮನೆಮನೆಗಳ ಮಕ್ಕಳನ್ನು ತೂಗಲು ತೊಟ್ಟಿಲಿಗೆ ಸುತ್ತಿ ಮೆದುವಾಗಿ, ಇನ್ನೂ ಸುಮ್ಮನಾಗದೆ ಮನೆಮುಂದೆ ಊರಸುತ್ತ ಇರುವ ಬೇವು, ಮಾವು, ಅಶ್ವತ್ಥ, ವಟ, ತುಬ್ಬಲಿ ಹೀಗೆ ಬಗೆಬಗೆಯ ಧ್ರುಮಗಳಲ್ಲಿ ಹಿರಿಯರು ಕಿರಿಯರೆನ್ನದೆ ಉಯ್ಯಾಲೆಯಾಗಿ ತನ್ನ ಮಡಿಲಲ್ಲಿ ಇಟ್ಟು ತೂಗುತ್ತವೆ.

ಇಷ್ಟೆಲ್ಲಾ ಬಾಳಿನ ಆಳಕ್ಕೆ ಇಳಿಯುವ ಹಗ್ಗಗಳನ್ನು ರೂಪಿಸಿ ಹೆಣೆದ ಕೈಮನಗಳಿಗೆ ದೊಡ್ಡ ಏಕಾಗ್ರತೆ ಇರುತ್ತದೆ. ಇದೇ ಸಣ್ಣ ಎಳೆಯ ಹಗ್ಗವು ಗದ್ದೆಯ ಪೈರಿನ ಸಾಲುಗಳು ನೇರವಾಗಿ ಎಳೆಯಲು ಸಾಲಿಡಿಯುವ ಕೆಲಸಕ್ಕೂ ಜೊತೆಗೂಡಿ ಅಳತೆ ಕೆಡದಂತೆ ಕಾಯುವುದು.

ನಮ್ಮ ಕಡೆ ನೀರಿನ ಅಭಾವದಿಂದ ನೆಲ್ಲು ಬೆಳೆಯುವವರ ಸಂಖ್ಯೆ ಕಡಿಮೆಯೇ. ಬೆದ್ಲು ನೆಲ ಹೆಚ್ಚು ಇರೋದ್ರಿಂದ ಮಳೆಗಾಲದಲ್ಲಿ ಹಸನು ಮಾಡಿ ದಕ್ಕುವಷ್ಟು ಮಾತ್ರ ಬೆಳೆಗಳನ್ನು ಬೆಳ್ಕಮ್ತರೆ. ಸಲಿಲದ ಸೌಕರ್ಯ ಇರುವವರು ಸುಮಾರು ನೂರು ಪಲ್ಲ ನೆಲ್ಲು ಬೆಳೆಯುವುದು ಇದೆ. ನಮ್ಮ ಮನೆಯಲ್ಲಿ ಹಂಸ, ಜಯ, ಮಂಡ್ಯವಿಜಯ ಈ ತಳಿಗಳನ್ನು ಬೆಳೀತಿದ್ರು. ಹೆಚ್ಚು ನಾರಾ (ನೀರು) ಕೇಳದ ಕೊರ್ಲೆ, ನವ್ಣೆ, ಆರ್ಕ, ಸಜ್ಜೆ, ಒಂಬಾಳೆಜೋಳ, ಇವನ್ನೆಲ್ಲ ಸ್ವಲ್ಪ ಆಗಾಗ ಪಸ್ಮೆಯೊದಗುವ ಬೆದ್ಲುನೆಲಕ್ಕೆ ಉಗ್ಗಿ ಅಷ್ಟೇನೂ ಗಮನ ಹರಿಸದಿದ್ದರೂ ಮೂಟೆಗಟ್ಲೆ ಆಗವು.

ಈಗಲೂ ಸಿರಿಧಾನ್ಯಗಳೆಂದು ಹೆಸರೊತ್ತು ಆರೋಗ್ಯದ ಹೆಸರಲ್ಲಿ ನಗರಗಳಲ್ಲಿ ದುಬಾರಿ ಬೆಲೆಗೆ ಮಾರಾಟವಾಗುವ ಇವು ಅತ್ಯಂತ ಕಡಿಮೆ ಬೆಲೆಗೆ ನಮ್ಮ ಕಡೆ ಸಿಗುತ್ತವೆ. ನಗರದ ವ್ಯಾಪರಸ್ಥರ ಕಪಟ ನಮ್ಮ ಹಳ್ಳಿಮಂದಿಯ ಔದಾರ್ಯದ ಮುಂದೆ ಸೋತಿದೆ. ಕವಳ ಬಿದ್ರೆ ಸಾಕು ಅವರೆ, ತರಣಿ, ತೊಗರಿ ಮುಂದಿನ ಮಳೆಗಾಲಕ್ಕೆ ಆಗುವಷ್ಟು ಕಾಳು ಒದಗುತ್ತವೆ. ಕೆಲವರು ಮಾರುಕಟ್ಟೆಯ ಮೋಹಕ್ಕೆ ಬಿದ್ದು ಹಸೆಕಾಯಿ ಮಾರಿ ಒಣಕಾಳು ಮಾಡಿ ಸಂಗ್ರಹಿಸದೆ ಪಡ್ಪಾಟ್ಲು ಬೀಳದ್ನು ನೋಡಿದ್ದೇನೆ.

ಬೇಸಾಯವೆಂಬುದು ಸಮುದಾಯದ ಹಸಿವನ್ನು ತಗ್ಗಿಸುವ ತಪಸ್ಸು. ಈಗಲೂ ನಮ್ಮ ಊರಿನಲ್ಲಿ ಸಜ್ಜೆ ರೊಟ್ಟಿ ಸುಟ್ಟು ಒಣಗಿಸಿ ಮುರಿದಿಟ್ಟುಕೊಂಡು ಉರಿದ ಕಡ್ಲೇಕಾಯಿ ಜೊತೆ ತಿನ್ನುವುದೇ ಹೆಚ್ಚು. ವಿಷಮಶೀತ ಜ್ವರಕ್ಕೆ ಈ ಸಜ್ಜೆ ಗಂಜಿ, ಸಜ್ಜೆ ರೊಟ್ಟಿ ಶಿಫಾರಸ್ಸು ಮಾಡಿದ ಆಹಾರ. ಸಜ್ಜೆಯ ಅಂಬ್ಲಿಗೆ ನಾವು ಮೇಕೆ ಹಾಲು ಮಾಮೇರಿ ಉಷ್ಣ ಒಳ್ಳೆಯದೆಂದು ಬಳಸುತ್ತೇವೆ.

ನಮ್ಮ ಕಡೆ ಕೃಷಿಕರ ಬಾಯಲ್ಲಿ ಈಗಲೂ ಬರುವ ಮಾತು ಮಲ್ನಾಡ್ ಸೀಮೆಗೆ ನೀರಿದ್ದಂಗೆ ನಮ್ಗಿದ್ದಿದ್ರೆ ಬಂಗಾರ್ವೆ ಬೆಳೀತಿದ್ವಿ ಅನ್ನೋದು. ಒಕ್ಕಲುತನ  ಪಲಾಯನವಾದಕ್ಕೆ ಜೊತೆಯಾದರೆ ಕೃಷಿಯ ಲಕ್ಷಣವೇ ಮಂಕಾಗಿಬಿಡುತ್ತದೆ.

ಆರೇಳು ತಿಂಗಳ ಒಳಗೆ ಬರುವ ವ್ರೀಹಿ ಕೆಲಸ ಬಿಡುವು ಕೊಡಲ್ಲ.  ದಿನಾಲು ರಾತ್ರಿ ನೀರು ಕಟ್ಟಬೇಕು. ನಡುನಡುವೆ ಕಳೆತೆಗೆಸುವ ಕೆಲಸ. ಇನ್ನೇನು ತೆನೆಮೂಡಿದವೆನ್ನುವ ಕಾಲಕ್ಕೆ ಹಕ್ಕಿಗಳು ಬರದಂತೆ ಕಾಯುವುದು. ಹಾಲುಒಡೆ  (ಎಳೆಯ ತೆನೆ) ಮೂಡುವಾಗ ಸಣ್ಣ ಹಕ್ಕಿಗಳು ಬರುವುದು ಹೆಚ್ಚು. ಇವು ಗದ್ದೆಯ ಆಸುಪಾಸಿನಲ್ಲಿ ಗೂಡು ಕಟ್ಟಿಕೊಂಡು ನಲ್ಗುಕ್ಕು ಕೊಡುವ ಒಲುಮೆಗೆ ಹೋಲಿಕೆಯಿಲ್ಲ. ಹೀಗೆ ಸಾಗುವ ಗದ್ದೆಯ ಕೆಲಸ ಶ್ರಮದೊಟ್ಟಿಗೆ ಸಡಗರವನ್ನು ಆವರಿಸಿಕೊಳ್ಳುತ್ತದೆ.

ಸಣ್ಣಕ್ಕಿಗಳ ಹಾವಳಿಯನ್ನು ತಡೆಯದಿದ್ದರೆ ಅರ್ಧ ಭತ್ತದ ಬೆಳೆ ಜೊಳ್ಳಾಗಿ ಬಿಡುತ್ತದೆ. ಇನ್ನು ಭತ್ತ ಬಲಿತು ವರ್ಣಬದಲಾಗುವಾಗ ಗೂಸೆಹಕ್ಕಿ ಶುಕಗಳ ಕಾಟ ವಿಪರೀತ. ಇಲ್ಲಿಯೂ ಕಾಯುವ ಕೆಲಸ ಹೆಚ್ಚು. ಕೊಯ್ಲಿಗೆ ಬಂದ ಮೇಲೆ ಕಮ್ಮಾರರ ಅಯ್ಯಣ್ಣನ ಕೊಲುಮೆಯಲ್ಲಿ ಕೆಂಡ ಒಂದೆರಡು ದಿನ ಆರಲ್ಲ.

ಗದ್ದೆ ಕೊಯ್ಯಲು ಅರ್ವಾಳೆ ಕುಡ್ಲು ಸಿದ್ದಗೊಳ್ತವೆ. ಇಲ್ಲವೇ ಮೊದಲು ತಯಾರಾಗಿ ಹಳೆಯವಾದ ಅರ್ವಾಳೆಗಳನ್ನೇ ಮಸೆದು ಒಪ್ಪಮಾಡಿಕೊಂಡು ಗದ್ದೆ ಕೊಯ್ಯುವ ಮೊದಲು ಈಶಾನ್ಯ ಮೂಲೆಯಲ್ಲಿ ಮೂರು ಬೆನಕಗಳು, ಅರ್ವಾಳೆ ಕುಡ್ಲುಗಳನ್ನು ಇಟ್ಟು ಹಾಲು ತುಪ್ಪ ಬಿಟ್ಟು ಪೂಜಿಸಿ ಕೊಯ್ಯುವ ಕೆಲಸ ಮೊದಲಾಗುತ್ತದೆ. ಎಲ್ಲವೂ ಮುಗಿದು ಮೆದೆ ಕಟ್ಟಿ ಬಣ್ಬೆಯಾದರೆ ಮುಂದೆ ಒಂದೆರಡು ದಿನ ಮಂದೆಗಿರೋ ಸಗ್ಣಿ ಬಂದ್ರೆ ಪರ್ಕೆ ಕಣಕ್ಕೆ ಬರುತ್ತವೆ.

ಹಸನಾದ ಬಗ್ಗಡದ ಕಣವೊಂದು ಕಣ್ಣುಬಿಟ್ಟು ಬತ್ತದ ಹುಲ್ಲನ್ನು ಹರಡಿ ಬಡಿಯುವ, ಎತ್ತುಗಳನ್ನು ಕಟ್ಟಿ ತುಳಿಸಿ ಉದುರಿಸುವ ಕಜ್ಜ ಮುಂದಿನದು. ಎಲ್ಲವು ಮುಗಿದು ನೆಲ್ಲು ಮೇಟಿಯ ಸುತ್ತ ಗುಡ್ಡೆಬಿದ್ದು ರಾಶಿಪೂಜೆ ಮಾಡುವ ದಿನದಂದು ಸಣ್ಣದೊಂದು ಪರ್ಸೆ ನಡೆದಂತಾಗುತ್ತದೆ. ಕಣ ಇಕ್ಕೆವ್ರೆ ಇವತ್ತು ಕಡ್ಯಾಗುತ್ತೆ ಅಂತ ನೆಲ್ಲು ಬೆಳೆಯಲು ನೆಲವಿಲ್ಲದ ಅನೇಕರು ಬಂದು ಸೇರುತ್ತಾರೆ.

ಮನೆ ಮಂದಿಯೆಲ್ಲ ಸೇರಿ ಪೂಜಿಸಿಯಾದ ಮೇಲೆ ಬಂದವರಿಗೆಲ್ಲ ಮರಗಳಲ್ಲಿ ನೆಲ್ಲಂಚಿ ಕಣದಿಂದ ಕಣಜಕ್ಕೆ ತಂದು ತುಂಬುತ್ತೇವೆ. ಹೀಗೆ ಜೋಡಿಸಿಕೊಂಡಂತೆ ಶಿಸ್ತಿನಿಂದ ನಡೆಯುವ ಗದ್ದೆಯ ಬದುಕು ಒಕ್ಕಲುತನಕ್ಕೆ ತರುವ ಮೆರುಗು ಅಗಾಧ. ವರ್ಷವಿಡೀ ನೆಲದೊಟ್ಟಿಗೆ ಉಸಿರಾಡುವ ಕೃಷಿ ಮನಸುಗಳ ಅದ್ವಿತೀಯ ಕೆಲಸವೇ ತಪಸ್ಸು.

ಬೇಸಾಯದೊಲುಮೆಯೊಂದು ಜೀವಲೋಕದೊಳಗೆ ಚಲನೆಯಾಗುವ ಕ್ರಿಯೆಯ ಮಹಿಮೆಯನ್ನು ಮುಗಿಸಿ ಪೂರ್ಣವಿರಾಮವಿಡಲಾಗದು.

ಬೇಸಾಯದ ಸ್ಮರಣೆಯ ಒಳತಿರೆಗೆ ಹೋದಂತೆ ಕುವೆಂಪು ಅವರ “ಜಲಗಾರ” ನಾಟಕದ ಸಾಲುಗಳು ಎದುರಾದವು…

“ನಿನ್ನ ನೇಗಿಲ ಗೆರೆಯ ದಿವ್ಯ ದೇವಾಲಯದಿ ಶಿವನ ಕಾಣೆಯ ನೀನು”….

November 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಮಲ್ಲಿಕಾ ಬಸವರಾಜು

    ಗೀತಾ ,ತುಂಬಾ ಚೆನ್ನಾಗಿ ನೆನಪುಗಳನ್ನು ಕಟ್ಟಿಕೊಟ್ಟಿದ್ದಿ ಗೆಳತಿ .ಎಷ್ಟೊಂದು ಪದಗಳು ಮರ್ತೆ ಹೋಗಿದ್ವು ಓದಿ ನೆನಪಾದ್ವು . ಗದ್ದೆ ಬಯಲಲ್ಲಿ ಸುತ್ತಾಡಿಸಿದ್ದಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ
  2. ಗೀತಾ ಎನ್ ಸ್ವಾಮಿ

    ಪ್ರೀತಿಯ ಮಲ್ಲಿಕಾ ಅಕ್ಕ ನಿಮ್ಮ ಪ್ರೀತಿ,ಮಮತೆ ಅನಂತದ್ದು ನನಗೆ, ಧನ್ಯವಾದಗಳು ಅಕ್ಕ.

    ಪ್ರತಿಕ್ರಿಯೆ
  3. ಚೈತ್ರಶ್ರೀ R ನಾಯಕ

    ನಿಮ್ಮ ಅಂಕಣದಿಂದ ನನ್ನೆಲ್ಲ ಬಾಲ್ಯದ ನೆನಪುಗಳು ಹೊರಬಂದವು ಮಳೆಗಾಲದಲ್ಲಿ ಹೊಸಬಾವಿ ತುಂಬಿ ಹೊಳ್ಳುವ ನೀರಿನಿಂದ ಗದ್ದೆಗಳೆಲ್ಲ ಹಸನಾಗುವವು ನೀರು ಕಟ್ಟಿದ ದಿನ ನಾನು ಮತ್ತು ನನ್ನ ಎಲ್ಲ ಸ್ನೇಹಿತರು ಹೋಗಿ ಅಲ್ಲಿ ಕುಣಿಯಿತಿದ್ವ್ ಟ್ರಿಲ್ಲರ್ ಆಗ ನಮ್ಮಳ್ಲಿಗೆ ಪರಿಚಯ ಆಗಿತ್ತು ಅದನ್ನು ನೋಡಲು ಜನರೆಲ್ಲಾ ಬಂದು ಸಾಕಾಗುವತನಕ ನೋಡಿ ಹೋಗೋರು ಅವರಿಗೆ ಟೀ ಊಟ ಉಪಚಾರ ನೆಡಿಯುತ್ತಿದ್ವ್ ತಾತನ ಕೃಷಿ ಸುತ್ತೇಳಳ್ಳಿಗೆ ಹೆಸರುವಾಸಿ ಅಂತಹ ಮನೆಯಲ್ಲಿ ಹುಟ್ಟಿದಕ್ಕೆ ವ್ಯವಸಾಯದ ವ್ಯೆಭವವನ್ನು ಅನುಭವಿಸುತ್ತ ಬೆಳೆದೆ. ಈಗ ಮತ್ತೆ ಎಲ್ಲ ನೆನಪಾಯಿತು ಧನ್ಯವಾದಗಳು.

    ಪ್ರತಿಕ್ರಿಯೆ
  4. ಲಲಿತಾ ಸಿದ್ಧಬಸವಯ್ಯ

    ಲೇಖನವೇ ಒಂದು ಶಬ್ದಕೋಶ!! ಮರೆಯೇ ಆಗಿಬಿಟ್ಟಿರುವ ಒಕ್ಕಲುತನದ ಅದೆಷ್ಟು
    ಶಬ್ದ ಮಣಿಗಳನ್ನು ಇಲ್ಲಿ ಕೋದಿರುವಿರಿ. ತ್ಯಾಂಕ್ಯೂ ಗೀತಾ. ನಿಮ್ಮ ನೆನಪುಗಳ ದಾಖಲೆ ಒಂದು ಭಾಷಾಕವಲಿನ ದಾಖಲೆಯಾಗಿದೆ.

    ನೀವು ನಿಮ್ಮ ಕಡೆ ಭತ್ತದ ಪೈರು ಒಟ್ಲು ಬಿಡುವುದನ್ನು ‌ವಿವರಿಸಿದ್ದೀರಿ. ನೆಲ್ಲು‌ ನೆನೆಸಿ ಮೊಳಕೆಯೊಡೆದ ಮೇಲೆ ನೀರು ನಿಲ್ಲಿಸಿದ‌ ಮಡ್ಲಿಗೆ ಎರಚುವ ಪದ್ಧತಿ ನಿಮ್ಮದು. ನಮ್ಮ ಕಡೆ ಬೀಜದ ನೆಲ್ಲನ್ನು‌ ಕಾಪಿಟ್ಟು ಚೆನ್ನಾಗಿ ತೇವ ಕಟ್ಟಿಸಿ ,ಗೊಬ್ಬರವುಣಿಸಿದ ತಾಕಿಗೆ ಒಣನೆಲ್ಲನ್ನೇ ಎರಚುವ‌ ಪದ್ಧತಿ. ಆಮೇಲೆ ಅದರ ಮೇಲೆ ಚೆನ್ನಾಗಿ ಪುಡಿ ಮಾಡಿದ ತಿಪ್ಪೆಗೊಬ್ಬರ‌, ಹದಮಣ್ಣಿನ ಪದರ ಹಾಕುತ್ತೇವೆ. ನಿತ್ಯ ನೀರುಣಿಸುತ್ತೇವೆ. ವಾರದೊಳಗೆ ಮೊಳಕೆ, ಅಲ್ಲಿಂದಾಚೆಗೆ ಹದಿನೈದು ದಿನಕ್ಕೆ ಗೇಣುದ್ದದ‌ ಪೈರು. ಈ ಒಟ್ಲಿನ ಪೈರನ್ನು ಕಟ್ಟುಗಳಾಗಿ ‌ಕಟ್ಟಿ ನೀರು ನಿಂತ , ಮೂರು ಹದ ಉತ್ತ , ಹೊಂಗೆಸೊಪ್ಪು ತುಳಿದು ಹವಣಿಸಿದ ಗದ್ದೆ ತಾಕುಗಳಿಗೆ ಸಾಗಿಸಿ ಸಾಲು ಪೈರು ಹಾಕುತ್ತೇವೆ.

    ನಿಮ್ಮ ಸರಣಿ ಲೇಖನಗಳನ್ನು ‌ತಪ್ಪದೆ‌ ಓದುವೆ.

    ಪ್ರತಿಕ್ರಿಯೆ
  5. ರೇಣುಕಾ ರಮಾನಂದ

    ಗೀತಾ ಮೇಡಂ..ನನ್ನ ವೈಯಕ್ತಿಕ ಕೆಲಸಗಳ ಕಾರಣಕ್ಕೆ ನಿಮ್ಮ ಕೆಲವೊಂದು ಅಂಕಣಗಳನ್ನು ಓದಲಾಗಿಲ್ಲ..ಈಗ ಒಂದೊಂದೇ ಓದಬೇಕಿದೆ..ನಿಮ್ಮೂರ ನೆಲದ ಬಣ್ಣಗಳು ಒಟ್ಟಾದ ಹಸಿರನ್ನು ಅದೆಷ್ಟು ಸೊಂಪಾಗಿ ಕಟ್ಟಿಕೊಡುತ್ತಿರುವಿರಿ.ಕರಾವಳಿಯ ನನಗೆ ಅರ್ಥವಾಗದಿದ್ದರೂ ಹೆಕ್ಕಿ ಹೆಕ್ಕಿ ಓದುತ್ತಿರುವೆ… ಬಹುತೇಕ ಹಿಂದಿನವರೆಲ್ಲ ಎಲ್ಲವನ್ನೂ ತಾವುತಾವೇ ಮಾಡಿಕೊಳ್ಳುತ್ತಿದ್ದರು..ಅಡಿಕೆ ಹಾಳೆಗೆ ಸಮುದ್ರದ ನೀರು ತಂದು ಹೊಯ್ದು ನಮ್ಮಜ್ಜಿ ಉಪ್ಪನ್ನೂ ಸ್ವತಃ ಮಾಡಿಕೊಳದಳುತ್ತಿದ್ದರು..ಅದೆಲ್ಲ ನೆನಪಾಗುತ್ತಿದೆ ನನಗೆ

    ಪ್ರತಿಕ್ರಿಯೆ
  6. ಗೀತಾ ಎನ್ ಸ್ವಾಮಿ

    ಧನ್ಯವಾದಗಳು ಲಲಿತಕ್ಕ. ದ್ವಿತೀಯ ಪಿಯುಸಿ ಗೆ ಪಠ್ಯವಾಗಿರುವ”ಒಂದು ಹೂ ಹೆಚ್ಚಿಗೆ ಇಡುತ್ತೇನೆ” ಪದ್ಯ ಕುರಿತು ಮಕ್ಕಳ ಜೊತೆ ಮಾತನಾಡುವಾಗ ನಿಮ್ಮನ್ನು ಕಾಲೇಜಿನ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಬೇಕೆಂಬ ಮಹದಾಸೆ ಆಗುತ್ತೆ. ಬದುಕಿನಲ್ಲಿ ಬಂದು ಹೋಗುವ ಅನೇಕಗಳನ್ನು ಎದುರೇ ಘಟಿಸುತ್ತಿದೆಯೆಂಬಂತೆ ಕಡೆಯುವ ನೀವುಗಳೆ ನಮ್ಮ ಬರವಣಿಗೆಗೆ ಪ್ರೇರಣೆ ಅಕ್ಕ. ನಿಮ್ಮ ಪ್ರೋತ್ಸಾಹ ನಲ್ಮಾತುಗಳಿಗಾಗಿ ಮತ್ತೊಮ್ಮೆ ಶರಣು ಅಕ್ಕ.
    ಅವಧಿಯ ಪೂರ್ಣ ಕುಟುಂಬಕ್ಕೆ ಕೂಡ ನಿತ್ಯ ಶರಣು.

    ಪ್ರತಿಕ್ರಿಯೆ
  7. ಗೀತಾ ಎನ್ ಸ್ವಾಮಿ

    ರೇಣುಕಾ ಮೇಡಂ THANKS. ನಿಮ್ಮ ಬರವಣಿಗೆಯನ್ನು ಓದುವಾಗೆಲ್ಲ ಕಡಲೊಂದು ಧ್ಯಾನವಾಗಿ ಕಾಡುತ್ತೆ…. ಸ್ಥಳೀಯ ಭಾಷೆಯನ್ನು ಎಷ್ಟು ಸೊಗಸಾಗಿ ತರುತ್ತೀರಿ ಮೇಡಂ ನೀವು. ನಿಮ್ಮ ಅಂಕಣ ಓದುವಾಗ ನಾನು ಕಾರಂತರ ಸಿರಿಗನ್ನಡ ಅರ್ಥಕೋಶ ಪಕ್ಕದಲ್ಲಿ ಇಟ್ಕತೀನಿ…. ನೀವು ಬರೆಯುವ ಪ್ರತೀಸಾಲು ನನಗಿಷ್ಟ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಮೇಡಂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: