ವೇಶ್ಯೆಯರು ಬೇಕಾಗಿದ್ದಾರೆ..!!

ಹನಿ ಟ್ರಾಪಿಂಗ್ ನ ಇತಿಹಾಸ ಇದೇ ಆಗಿರಬಹುದೇ?

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋಛೇಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

‘ವೈಟ್ ಹೌಸ್ ಗೆ ವೇಶ್ಯೆಯರು ಬೇಕಾಗಿದ್ದಾರೆ’ –

ಎಂಬ ಶೀರ್ಷಿಕೆಯಡಿ ಒಂದು ಜಾಹಿರಾತು ಪ್ರಕಟವಾಗಿತ್ತು. “ಪಟ್ಟಣದ ಅತ್ಯಂತ ಹಳೆಯದಾದ ವೃತ್ತಿ ಈಗ ನ್ಯಾಯಸಮ್ಮತ ವೃತ್ತಿಯಾಗಿ ಮಾರ್ಪಟ್ಟಿದೆ. ವೈಟ್ ಹೌಸ್ ನ ಕೆಳ ಮಹಡಿಯಲ್ಲಿರುವ ಪಾಳಿಯಲ್ಲಿ ಕೆಲಸ ಮಾಡಲು ಮಹಿಳೆಯರು ಬೇಕಾಗಿದ್ದಾರೆ. ಅದ್ಭುತವಾದ ಸಂಬಳ ! ಅದ್ಭುತ ಸಿಬ್ಬಂದಿ! ಅದ್ಭುತವಾದ ಕಾಂಡೋಮ್ಸ್ !!….ಹೀಗೆ ಮುಂದುವರೆದಿತ್ತು ಆ ಜಾಹೀರಾತು.

ಇದು ನ್ಯೂಜಿಲ್ಯಾಂಡ್ ಆಕ್ಲೆಂಡ್ ಪಟ್ಟಣದಲ್ಲಿರುವ ಮಸಾಜ್ ಪಾರ್ಲರ್ ಒಂದರ ಪುಟ್ಟ ಜಾಹಿರಾತು. ಈ ಜಾಹಿರಾತು ಪ್ರಕಟಿಸಿರುವ ಪಾರ್ಲರ್ ನ ಹೆಸರು “ವೈಟ್ ಹೌಸ್”. ಪಾರ್ಲರ್ ನ ಚಿಹ್ನೆಗೂ ಅಮೆರಿಕಾದ ರಾಷ್ಟ್ರಪತಿಗಳ ಕಚೇರಿಯ ಸೀಲ್ ಗೂ ಬಹಳ ಸಾಮ್ಯತೆ ಇತ್ತು. ಅಮೇರಿಕಾದ ಚಿಹ್ನೆಯಲ್ಲಿ ಗರುಡಪಕ್ಷಿ ಇದೆ. ಈ ಜಾಹೀರಾತಿನ ಚಿಹ್ನೆಯಲ್ಲೂ ಗರುಡ ಪಕ್ಷಿಯಿದ್ದು, ಚೊಂಚಿಗೆ ಸಣ್ಣ ರಿಬ್ಬನ್ ಕಟ್ಟಲಾಗಿತ್ತು.

ಈ ಪುಟ್ಟ ಜಾಹೀರಾತು ತನ್ನನ್ನು ತಾನು ಜಗತ್ತಿನ ಹಿರಿಯಣ್ಣ ಎಂದು ಕೊಂಡಿರುವ ಅಮೆರಿಕದ ಕಣ್ಣುಗಳನ್ನು ಕೆಂಪಾಗಿಸಿತ್ತು. ಅಮೆರಿಕದ ಆಕ್ರೋಶಕ್ಕೆ ನ್ಯೂಜಿಲ್ಯಾಂಡ್ ಗುರಿಯಾಗಬೇಕಾಯಿತು. ಅಮೆರಿಕಾ – ನ್ಯೂಜಿಲೆಂಡ್ ಮಧ್ಯೆ ಮನಸ್ತಾಪ ತಂದಿಡುವಷ್ಟು ತಾಕತ್ತು ಆ ಜಾಹೀರಾತಿಗಿತ್ತು.

ಈ ವೃತ್ತಿಯ ಬಗ್ಗೆ ಈ ದ್ವಂದ್ವಗಳು , ಮಾನ್ಯತೆ – ಅಮಾನ್ಯತೆಯ ಗೊಂದಲಗಳು, ಬೆಲೆವೆಣ್ಣುಗಳ ಬದುಕಿನ ಅಸಹನೀಯಗಳು, ತಲ್ಲಣಗಳು ಭಾರತಕ್ಕಷ್ಟೇ ಸೀಮಿತವಲ್ಲ. ಆಧುನಿಕ ಲೋಕದ ಸರದಾರ ಅಮೇರಿಕಾದಂತಹ ದೇಶಕ್ಕೂ ಅದೆಂತಹ ತಲ್ಲಣಗಳ ಮಿಡಿತಗಳನ್ನು ಈ ವಿಚಾರ ಉಂಟು ಮಾಡುತ್ತದೆ ಎನ್ನುವುದನ್ನು ಈ ಮೇಲಿನ ಜಾಹೀರಾತಿನ ಘಟನೆ ತೆರೆದಿಡುತ್ತದೆ.

ದಿನಾಂಕ – 13 ಮಾರ್ಚ್ 2001. ಜಸ್ಟೀಸ್ ವೆಂಕಟಸ್ವಾಮಿ ಆಯೋಗದ ಮುಂದೆ ‘ತೆಹಲ್ಕಾ’ ಡಾಟ್ ಕಾಮ್ ಸಿಡಿಸಿದ ಬಾಂಬ್ ಗೆ ಇಡೀ ದೇಶ ತಲ್ಲಣಗೊಂಡಿತ್ತು. ಸರ್ಕಾರ ತಳಮಳ ಗೊಂಡಿತ್ತು. ಬೃಹತ್ ಪ್ರಜಾಪ್ರಭುತ್ವದ ಭಾರತ ಜಗತ್ತಿನ ಮುಂದೆ ಪ್ರಶ್ನೆಯಾಗಿ ನಿಲ್ಲುವಂತಾಗಿತ್ತು.

ಶಸ್ತ್ರ ತಯಾರಿಕೆ ಕಂಪನಿ ವೆಸ್ಟೆಂಡ್ ಇಂಟರ್ನ್ಯಾಷನಲ್ ಪ್ರತಿನಿಧಿಗಳೆಂದು ಅನಿರುದ್ ಬೆಹಾಲ್ ನಾಯಕತ್ವದ ‘ತೆಹಲ್ಕಾ’ ತಂಡ ರಕ್ಷಣಾ ಇಲಾಖೆಯ ಒಪ್ಪಂದಗಳ ಅಕ್ರಮಗಳನ್ನು ಬಯಲಿಗೆಳೆಯಲು ಕಾರ್ಯತಂತ್ರ ಹೂಡಿತ್ತು. ತೆಹಲ್ಕಾ ಡಾಟ್ ಕಾಮ್ ದೇಶದ ಚುಕ್ಕಾಣಿ ಹಿಡಿದಿದ್ದ ಗಣ್ಯಾತಿಗಣ್ಯರನೇಕರು ಅವರು ಹೆಣದ ಬಲೆಗೆ ಬಿದ್ದಿದ್ದರು.

ಈ ಘಟನೆ ತನಿಖೆಗೆ ಒಳಪಟ್ಟಿತು. ತನಿಖೆಯ ಸಂದರ್ಭದಲ್ಲಿದ್ದ ಈ ಭ್ರಷ್ಟಾಚಾರದ ವಾರಸುದಾರ ಹಣ ಮಾತ್ರವಲ್ಲದೆ “ಲೈಂಗಿಕವೃತ್ತಿ ಮಹಿಳೆ”ಯರನ್ನು ಬಳಸಿಕೊಂಡಿರುವ ವಿಚಾರ ಸ್ಪೋಟವಾಯಿತು. ರಕ್ಷಣಾ ಇಲಾಖೆಯ ಕೆಳಗಿನ ಅಧಿಕಾರಿಗಳಿಗೆ ಮದ್ಯ ಮತ್ತು ಲೈಂಗಿಕವೃತ್ತಿ ಮಹಿಳೆಯರನ್ನು ಒದಗಿಸಿ ಮೇಲಿನ ಅಧಿಕಾರಿಗಳನ್ನು ಸಂಪರ್ಕ ಮಾಡಿಕೊಡುವಂತೆ ವ್ಯವಸ್ಥೆ ಮಾಡಿದ್ದರು.

ಇಲ್ಲಿಂದ ಆರಂಭವಾದ ಈ ನಾಟಕ ಹಲವಾರು ಮಜಲುಗಳೊಂದಿಗೆ ಅಂತ್ಯವಾಗಿತ್ತು. ಈ ನಾಟಕದ ಸೂತ್ರಧಾರ ‘ತೆಹಲ್ಕಾ ತಂಡ ಮತ್ತು ರಕ್ಷಣಾ ಇಲಾಖೆ’ ಹಾಗೂ ಚುಕ್ಕಾಣಿಯ ವಕ್ತಾರರು ತೇಲಿ, ಮುಳುಗಿ ಎದ್ದರು.

ಇಂತಹ ಒಂದು ಅತ್ಯಂತ ಮಹತ್ವದ ಪತ್ತೆ ಕಾರ್ಯ ನಡೆಸಿದ ತೆಹಲ್ಕಾ ಕೂಡ ಕಟಕಟೆಯಲ್ಲಿ ನಿಲ್ಲಬೇಕಾಯಿತು. ಈ ಘಟನೆಯ ಸುತ್ತ ಕೆಲ ನೈತಿಕ ಪ್ರಶ್ನೆಗಳು ತಲೆಯೆತ್ತಿದವು! ಭ್ರಷ್ಟಾಚಾರವನ್ನು ಬಹಿರಂಗ ಪಡಿಸಲು ಅನೀತಿಯುತ ಮತ್ತು ಕಾನೂನುಬಾಹಿರ ವಿಧಾನಗಳನ್ನು ತೆಹಲ್ಕಾ ಅನುಸರಿಸಿದೆಯೇ ಎಂಬುದನ್ನು ತನಿಖೆ ನಡೆಸಲು ವಿಚಾರಣಾ ಆಯೋಗವನ್ನು ನೇಮಿಸಲಾಯಿತು.

ಈ ತನಿಖೆಯಲ್ಲಿ ಬಹಳ ಮುಖ್ಯವಾಗಿ ಲೈಂಗಿಕವೃತ್ತಿ ಮಹಿಳೆಯರನ್ನು ಪತ್ತೆ ಕಾರ್ಯದಲ್ಲಿ ಉಪಯೋಗಿಸಿದ್ದು ನೈತಿಕವೋ ? ಅನೈತಿಕವೋ? ಎನ್ನುವ ಪ್ರಶ್ನೆಯನ್ನು ಮುಂದಿಡಲಾಯಿತು.

ಅಧಿಕಾರಿಗಳು ಆಮಿಷಕ್ಕೆ ಒಳಗಾದುದು ನೈತಿಕವೇ ? ಎನ್ನುವ ಪ್ರಶ್ನೆಗಿಂತ ಲೈಂಗಿಕವೃತ್ತಿ ಮಹಿಳೆಯರನ್ನು ತೆಹಲ್ಕಾ ತನಿಖೆಗೆ ಬಳಸಿದ್ದು ಅನೈತಿಕ ಎನ್ನುವ ಅಭಿಪ್ರಾಯ ಮೂಡಿಸಲಾಯಿತು.

ಈ ವೃತ್ತಿ ಮಹಿಳೆಯರು ಅನೀತಿವಂತರು ಎಂಬ ಪೂರ್ವಗ್ರಹದಿಂದ ಅವರನ್ನು ಬಳಸಿದ್ದೂ ಅನೀತಿಯುತವಾದದ್ದು ಎಂದು ತಿರುಚುವ ಮೂಲಕ ಇಡೀ ಘಟನೆಗೆ ಇದ್ದ ಗಂಭೀರತೆಯನ್ನು ವಿಮುಖ ಗೊಳಿಸಿ ದೇಶದ ಜನತೆಯನ್ನು ತಟಸ್ಥಗೊಳಿಸುವಲ್ಲಿ ಸಂಬಂಧಪಟ್ಟವರು ಯಶಸ್ವಿಯಾದರು.

ಇಲ್ಲಿ ಚರ್ಚೆಯಾಗಿದ್ದು ಭ್ರಷ್ಟಾಚಾರ ಬಯಲಿಗೆಳೆಯಲು ಅನುಸರಿಸಿದ ಮಾರ್ಗ ಅನೈತಿಕವಾದುದು- ಎಂಬುದಾದರೆ ಬೇರೆ ಯಾವುದಾದರೂ ಮಾರ್ಗಗಳನ್ನು ಬಳಸಬಹುದಿತ್ತಾ ? ಅಥವಾ ಬೇರೆ ಯಾವುದೇ ಮಾರ್ಗವಾಗಿದ್ದರೆ ಇಷ್ಟೊಂದು ಚರ್ಚೆಗೊಳಗಾಗುತ್ತಿತ್ತೇ ? ಇಲ್ಲಿ ಭ್ರಷ್ಟಾಚಾರಕ್ಕೆ ಒಳಗಾದ ದೇಶದ ಕವಚದಂತಿರುವ ರಕ್ಷಣಾ ಇಲಾಖೆಯ ಕ್ಷುಲ್ಲಕತನ ಅನೈತಿಕವೋ ಅಥವಾ ಲೈಂಗಿಕ ಮಹಿಳೆಯರು ಬಳಕೆಯಾದದ್ದು ಅನೈತಿಕವೋ? ಈ ವಿಚಾರದಲ್ಲಿ ನೈತಿಕ-ಅನೈತಿಕ ಚರ್ಚೆ ಬಂದದ್ದೇ ಅಲ್ಲಿ ಲೈಂಗಿಕ ವೃತ್ತಿ ಮಹಿಳೆಯರು ಒಳಗೊಂಡಿದ್ದರಿಂದ.

ನೀತಿ ಪಾಲಕರು ಈ ಮನೋಭಾವದೊಂದಿಗೆ ನೈತಿಕ ಚರ್ಚೆಯೊಳಗಡೆ ಆ ವೃತ್ತಿಯನ್ನು ಹೀಗೆಳೆಯುವ ಕೆಲಸವನ್ನೇ ಪ್ರಧಾನವಾಗಿಸಿಕೊಂಡು, ದೇಶವೇ ತಲೆತಗ್ಗಿಸಬೇಕಾದಂತಹ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಜನತೆಯ ಗಮನವನ್ನು ಬೇರೆಡೆಗೆ ತಿರುಗಿಸುವ ಹುನ್ನಾರ ಮಾಡಿದರು.

ಈ ಪರಂಪರೆಯ ಸೃಷ್ಟಿಯ ಮೂಲಕ್ಕೆ ಹೋದಂತೆಲ್ಲಾ, ಆಧುನಿಕ ಕಾಲಘಟ್ಟದ ಈ ಘಟನೆಯ ಪೌರಾಣಿಕ ಸ್ವರೂಪ ಮತ್ತು ಚಾರಿತ್ರಿಕವಾದ ಸ್ವರೂಪವನ್ನು ಹಿಂತಿರುಗಿ ನೋಡಬಹುದಾಗಿದೆ. ಪೌರಾಣಿಕವಾಗಿ ಶತ್ರುಗಳನ್ನು ಸೋಲಿಸಲು ಮತ್ತು ಅವರನ್ನು ಮೋಸಗೊಳಿಸಲು ರಂಭೆ ಊರ್ವಶಿ ಮೇನಕೆ ಮೊದಲಾದವರನ್ನು ಬಳಸುತ್ತಿದ್ದುದರ ಬಗ್ಗೆ ಬಹಳಷ್ಟು ಉಲ್ಲೇಖಗಳಲ್ಲಿದೆ.‌

ಚಾರಿತ್ರಿಕವಾಗಿ ರಾಜರುಗಳು ವಿಷಕನ್ಯೆಯರನ್ನು ಬಳಸುತ್ತಿದ್ದುದು, ಶತ್ರು ರಾಜರುಗಳನ್ನು ಕೊಲ್ಲಲು ಇವರನ್ನು ದಾಳಗಳಾಗಿ ಬಳಸಿ ಕಾರ್ಯ ಸಾಧಿಸುತ್ತಿದ್ದುದು ಇಲ್ಲಿ ಗಮನಾರ್ಹ. ಯಾವುದೇ ಕೆಲಸವು ಪರಪುರುಷನಿಂದ ಆಗಬೇಕೆಂದಿದ್ದಾಗ ರಾಜರು ಅವರನ್ನು ಅಧಿಕೃತವಾಗಿ ಬಳಸಿಕೊಳ್ಳುವ ಕ್ರಮವಿತ್ತೆಂದು ಇತಿಹಾಸದಲ್ಲಿ ನೋಡಬಹುದಾಗಿದೆ.

ಪೌರಾಣಿಕ, ಪ್ರಾಚೀನ, ಇತಿಹಾಸದುದ್ದಕ್ಕೂ ಮನರಂಜನೆಗೆ, ಕಾಮತೃಷೆಗೆ, ಹಗುರಾಗಲು, ಕಾರ್ಯ ತಂತ್ರಗಳಿಗೆ, ಕಲೆಗೆ, ಭೋಗಕ್ಕೆ, ವೈಭವಕ್ಕೆ, ಪರಿಚಾರಿಕೆಗೆ, ಮಧ್ಯಸ್ಥಿಕೆಗೆ, ಒಡನಾಟಕ್ಕೆ, ಕಾರ್ಯಸಿದ್ಧಿಗೆ, ಸೇವೆಗೆ, ಆಲಾಪನೆಗೆ, ಹೊಗಳಿಕೆಗೆ, ಹಣಕ್ಕೆ, ಅಲಂಕಾರಕ್ಕೆ…….. ಹೀಗೆ ಎಲ್ಲಾ ಕಾಲಘಟ್ಟಗಳಲ್ಲೂ ರಾಜಕಾರಣ ಮತ್ತು ಬದುಕಿನೊಂದಿಗೆ ಹೆಣ್ಣು ಬೆಲೆವೆಣ್ಣಾಗಿ ನಡೆದು ಬರುತ್ತಲೇ ಇದ್ದಾಳೆ, ಒಂದನ್ನೊಂದು ಬಿಟ್ಟಿರಲಾರದಷ್ಟು!!!

“ಮಾನಿನಿ ಮದಿರೆ ನನ್ನ ಜೀವನದ ಭಾಗ” ಎಂದು ಈ ರಾಜ್ಯದ ಚುಕ್ಕಾಣಿ ಹಿಡಿದಿದ್ದವರೊಬ್ಬರು ಉಲಿದಾಗ, ಅದೆಷ್ಟು ಮಂದಿ ಹುಬ್ಬೇರಿಸಿದ್ದರು ? ಆದರೆ ದಶಕಗಳ ಕಾಲ ನನ್ನ ಅಧ್ಯಯನ ಸಂದರ್ಭದಲ್ಲಿ ನಾನು ಕಂಡಿದ್ದು, ಅವರ ಹೇಳಿಕೆಯಿಂದ ಭಿನ್ನವಾಗಿಯೇನೂ ಇರಲಿಲ್ಲ!

ವಿಧಾನಸಭೆಗಳು ನಡೆಯುವಾಗ ಅದೆಷ್ಟು ವೇಶ್ಯಾಗೃಹಗಳು ಗಿಜಿಗುಡುತ್ತವೆ, ಅದೆಷ್ಟು ಹೆಣ್ಣುಗಳು ಮೊದಲೇ ಕಾಯ್ದಿರಿಸುತ್ತಾರೆ, ಅದೆಷ್ಟು ಪಿಂಪ್, ಬ್ರೋಕರುಗಳು ಬಿರಬಿರನೆ ನಡಿಗೆಯನ್ನು ತೀವ್ರಗೊಳಿಸಿರುತ್ತಾರೆ ಎನ್ನುವುದು. ಗರಿಗರಿಯಾದ ಖಾದಿಗಳಿಗೆ, ಖಾಕಿಗಳಿಗೆ, ಕಾಟನ್ಗಳಿಗೆ, ಹುಡಿ, ಪುಡಿ ಚೇಲಾಗಳಿಗೆ ಈ ಬೆಲೆವೆಣ್ಣುಗಳು ಬೆವರಿಳಿಸಬೇಕಾಗುತ್ತದೆ ಎನ್ನುವ ಅಂದಾಜು, ಲೆಕ್ಕಾಚಾರ……. ಹಿಂದಿನ ರಾಜಮಹಾರಾಜರುಗಳ ನಡವಳಿಕೆಗಳನ್ನು ಮತ್ತೆ ಮತ್ತೆ ನೆನಪಿಗೆ ತರುತ್ತಲೇ ಇವೆ.!! ಹಾಗಿದ್ದರೆ ಹನಿ ಟ್ರಾಪಿಂಗ್ ನ ಇತಿಹಾಸ ಇದೇ ಆಗಿರಬಹುದೇ?

‍ಲೇಖಕರು ಲೀಲಾ ಸಂಪಿಗೆ

November 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: