ಕತ್ತರಿ ಮತ್ತು ಬೈಂಡು…

ಜಿ ಎನ್‌ ಮೋಹನ್

ರಾಜೇಶ್ವರಿ ತೇಜಸ್ವಿ ತಮ್ಮ ಬ್ಯಾಗು ಮುಟ್ಟಿ ನೋಡಿಕೊಳ್ಳುತ್ತಾ ಇದ್ದರು. ಇದು ಸುಮಾರು ಸಲ ನಡೆದಿತ್ತು.

ಅದು ತೇಜಸ್ವಿಯವರ ‘ಕರ್ವಾಲೋ’ ಕೃತಿಯ ಜರ್ಮನ್ ಅನುವಾದದ ಬಿಡುಗಡೆ ಸಮಾರಂಭದ ದಿನ. ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿತ್ತು.

ಕೃತಿಯ ಇಬ್ಬರು ಅನುವಾದಕರಾದ ಪ್ರೊ ಬಿ ಎ ವಿವೇಕ ರೈ, ಕತ್ರಿನಾ ಬಿಂದರ್ ಜೊತೆ ಪ್ರೊ ಸಿ ಎನ್ ರಾಮಚಂದ್ರನ್, ಎನ್ ಆರ್ ವಿಶುಕುಮಾರ್, ಕೆ ಪಿ ಈಶಾನ್ಯೆ, ಎಚ್ ಆರ್ ಸುಜಾತಾ ಹಾಗೂ ನಾನು ವಿಶು ಚೇಂಬರ್ ನಲ್ಲಿ ಕುಳಿತು ಹರಟೆ ಹೊಡೆಯುತ್ತಾ ಇದ್ದೆವು.

ಆಗಲೇ ಇದನ್ನು ನಾನು ಗಮನಿಸಿದ್ದು.
ನಾನು ತಕ್ಷಣ ‘ಮೇಡಂ ಅದೇನು ಇಟ್ಟಿದ್ದೀರಿ ಬ್ಯಾಗ್ ನಲ್ಲಿ?’ ಎಂದು ಕೇಳಿಯೇಬಿಟ್ಟೆ.

ಆಗ ರಾಜೇಶ್ವರಿ ತೇಜಸ್ವಿ ಹಾಗೂ ಈಶಾನ್ಯೆ ಮುಖದಲ್ಲಿ ಮುಗುಳ್ನಗೆ ರಾಜೇಶ್ವರಿ ಒಂದು ಶತಮಾನದ ಗುಟ್ಟು ಬಿಟ್ಟುಕೊಟ್ಟರು.

ಯಾವುದೇ ಪುಸ್ತಕ ಬಿಡುಗಡೆಗೆ ಹೋದರೂ ಒಂದು ಸಮಸ್ಯೆ ಇರುತ್ತೆ. ಈಗ ಅದು ಹೇಗೆ ಪ್ಯಾಕ್ ಮಾಡುತ್ತಾರೋ ಏನೋ..‌ ಪುಸ್ತಕ ಬಿಡುಗಡೆ ಮಾಡುವಾಗ ಪ್ಯಾಕ್ ಮಾಡಿದ ಕವರ್ ತೆಗೆಯಲು ಹರಸಾಹಸ ಪಡಬೇಕು. ಮೊದಲೇ ಪ್ಲಾಸ್ಟಿಕ್ ರೀತಿಯ ಕವರ್ ಅದಕ್ಕೆ ಎಷ್ಟು ಸೆಲೋ ಟೇಪ್ ಮೆತ್ತಿರುತ್ತಾರೆ ಎಂದರೆ ಪುಸ್ತಕಕ್ಕೆ ವಿಮೋಚನೆ ಕೊಡುವಷ್ಟರಲ್ಲಿ ಸಾಕು ಸಾಕಾಗಿ ಬಿಡುತ್ತದೆ. ನೋಡುಗರಿಗೂ ಬೇಜಾರು.. ಎಂದವರೇ ಹಾಗಾಗಿ ನಾನು ಒಂದು ಪ್ಲಾನ್ ಮಾಡಿದ್ದೇನೆ. ನನ್ನನ್ನು ಯಾವುದೇ ಪುಸ್ತಕ ಬಿಡುಗಡೆಗೆ ಕರೆದರೂ ಬ್ಯಾಗ್ ನಲ್ಲಿ ಒಂದು ಕತ್ತರಿ ಇಟ್ಟುಕೊಂಡೇ ಹೊರಡುತ್ತೇನೆ. ಬೈಂಡ್ ಮಾಡಿರುವ ರೀತಿ ನೋಡಿ ಬ್ಯಾಗ್ ನಿಂದ ಕತ್ತರಿ ಹೊರಬರುತ್ತದೆ. ಕಟ್ ಮಾಡಿ ಸಮಸ್ಯೆಯನ್ನು ಚಿಟಕಿ ಹೊಡೆಯುವುದರಲ್ಲಿ ಮುಗಿಸುತ್ತೇನೆ ಎಂದರು.

ರೂಮ್ ನಲ್ಲಿದ್ದವರೆಲ್ಲರೂ ಸೂರು ಹಾರಿಹೋಗುವಂತೆ ನಕ್ಕೆವು.

ಇನ್ನೂ ನಗು ಮುಗಿದಿರಲಿಲ್ಲ. ಆಗ ಪ್ರೊ ಸಿ ಎನ್ ಆರ್ ‘ಆದರೆ… ಇವತ್ತು ಅದು ತರೋದು ಬೇಕಿರಲಿಲ್ಲವೇನೋ’ ಎಂದು ದನಿ ತೆಗೆದರು.

ಮಾತು ಇಲ್ಲವೇ ಇಲ್ಲ ಎನ್ನುವಂತೆ ಯಾವಾಗಲೂ ಇರುವ ಸಿ ಎನ್ ಆರ್ ಹಾಗೆ ಅಂದದ್ದು ಎಲ್ಲರಿಗೂ ಆಶ್ಚರ್ಯ ತಂದಿತ್ತು.
ರಾಜೇಶ್ವರಿಯವರೂ ಸೇರಿದಂತೆ ಎಲ್ಲರೂ ‘ಅದ್ಯಾಕೆ..ಯಾಕೆ’ ಎಂದು ಕೇಳಿದರು.

ಸಿ ಎನ್ ಆರ್ ಮುಗುಳ್ನಗುತ್ತಾ ‘ಇವತ್ತು ಕತ್ತರಿಯನ್ನು ನಾವೇ ಕರೆದುಕೊಂಡು ಬಂದಿದ್ದೇವೆ’ ಎಂದರು.
ಎಲ್ಲರೂ ಇದೇನಪ್ಪಾ ಎಂದು ಆವಾಕ್ಕಾದರು.

ಆಗ ಸಿ ಎನ್ ಆರ್ ತೋರಿಸಿದ್ದು ಈ ಪುಸ್ತಕ ಬಿಡುಗಡೆಗಾಗಿಯೇ ಜರ್ಮನಿಯಿಂದ ಹಾರಿಬಂದಿದ್ದ ‘ಕತ್ರಿನಾ’ ಕಡೆಗೆ

ತಕ್ಷಣ ಎಲ್ಲರಿಗೂ ಬಲ್ಬ್ ಹತ್ತಿದಂತಾಗಿ ಮತ್ತೊಮ್ಮೆ ಜೋರಾಗಿ ನಕ್ಕೆವು.

ಇನ್ನೂ ನಗೆ ಅಡರಿರಲಿಲ್ಲ. ಆಗ ಸಿ ಎನ್ ಆರ್ ಮತ್ತೆ ‘ಬರೀ ಕತ್ತರಿ ಅಲ್ಲ.. ಅವರು ಬೈಂಡೂ ಮಾಡ್ತಾರೆ’ ಎಂದು ನಗು ನಿಲ್ಲದೆ ಮತ್ತೆ ಮುಂದುವರಿಯಲು ಕಾರಣರಾದರು.

ಯಾಕೆಂದರೆ ನಮ್ಮೆದುರು ಇದ್ದ ಆಕೆಯ ಸಂಪೂರ್ಣ ಹೆಸರು ‘ಕತ್ರಿನಾ ಬಿಂದರ್’

‍ಲೇಖಕರು Admin

December 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: