ಸುಧೀಂದ್ರ ಭಂಡಾರ್ಕರ್ ಅವರ ಕಾದಂಬರಿ ‘ಸಾಯ್ಬಿಣಿ’
ಈ ಕಾದಂಬರಿಗೆ ಕೆ ಅರುಣ್ ಪ್ರಸಾದ್ ಬರೆದ ಮುನ್ನುಡಿ ಇಲ್ಲಿದೆ.
-ಕೆ ಅರುಣ್ ಪ್ರಸಾದ್
ಸುಧೀಂದ್ರ ಭಂಡಾರ್ಕರ್ ಬಿದನೂರು ನಗರ ಈ ಹೆಸರಿನಲ್ಲಿಯೇ ಇದೆ ಪೂರ್ಣವಾದ ಅವರ ಮಾಹಿತಿ.
ಹೌದು, ಇವರು ಬಿದನೂರು ನಗರ ಸಂಸ್ಥಾನದ ಕೆಳದಿ ಅರಸರ ಖಜಾನೆ ನಿರ್ವಹಣೆ ಮಾಡುತ್ತಿದ್ದ ಕುಟುಂಬದ ವಂಶಸ್ಥರು.
ಹೈದರಾಲಿ ಬಿದನೂರು ನಗರದಿಂದ ಆನೆಗಳ ಮೇಲೆ ತುಂಬಿಕೊಂಡು ಹೋದ ಬಂಗಾರದ ಅಗಾದ ಪ್ರಮಾಣದ ಮಾಹಿತಿ ಇತಿಹಾಸದಲ್ಲಿದೆ.
ಅಲ್ಲಿಯ ತನಕ ಇವರ ಕುಟುಂಬದ ವಂಶಸ್ಥರು ಕೆಳದಿ ಅರಸರ ಸಂಪತ್ತಿನ ಖಜಾನೆ ರಕ್ಷಿಸಿಕೊಂಡು ಬಂದಿದ್ದರು.
ಈ ವಂಶದವರೇ ಆದ ಬಿದನೂರು ನಗರ ವಾಸಿಗಳಾದ ಸುಧೀಂದ್ರ ಭಂಡಾರ್ಕರ್ ಇತಿಹಾಸ ಸಂಶೋದಕರು, ಸಾಹಿತಿಗಳೂ ಮತ್ತು ಅತ್ಯುತ್ತಮ ಛಾಯಾಚಿತ್ರಕಾರರು ಆಗಿದ್ದಾರೆ.
ಇವರು ಕ್ಯಾಮೆರಾದಲ್ಲಿ ಸೆರೆ ಹಿಡಿದ ಕೆಳದಿ ಇತಿಹಾಸದ ಶಾಸನಗಳು, ಕೋಟೆಗಳು, ಶರಾವತಿ ನದಿ ಮುಳುಗಡೆಯ ಅವಶೇಷಗಳು,ಮಲೆನಾಡಿನ ಜಲಪಾತಗಳು ಮತ್ತು ವಿಶೇಷವಾಗಿ ಜಾತ್ರೆಗಳ ಚಿತ್ರಗಳ ಛಾಯಾಚಿತ್ರ ಪ್ರದಶ೯ನ ಮಾಡಿದರೆ ಅದೊಂದು ಮಲೆನಾಡಿನ ವಿಶೇಷಗಳ ದಾಖಲೆ ಆಗುತ್ತದೆ.
ಇವರು ಬರೆದ “ಸಶೇಷ ” ಎಂಬ ಕಾದಂಬರಿ ಅಪೂರ್ವವಾದದ್ದು, ಇದು ಕೆಳದಿ ಇತಿಹಾಸದ ನಾಲ್ಕುನೂರು ವರ್ಷದ ಕಥೆಯನ್ನು ವಿಭಿನ್ನವಾದ ಸಂಭಾಷಣೆ ಶೈಲಿಯಲ್ಲಿ ಪಾತ್ರಗಳು ಕಾಲಾತೀತವಾಗಿ ನೋಡುವ ಮತ್ತು ಹೇಳುವ ಇತಿಹಾಸದ ಸತ್ಯ ಕಥೆ.
ಈ ಪುಸ್ತಕ ನನ್ನ ಇತಿಹಾಸ ಆಸಕ್ತ ಪುಸ್ತಕಗಳ ಜೊತೆ ಜೋಪಾನವಾಗಿ ಕಾಪಾಡಿಕೊಂಡು ಇಟ್ಟುಕೊಂಡಿದ್ದೇನೆ.
ಈಗ ಎರಡನೆ ಕಾದಂಬರಿ ಬರೆದಿದ್ದಾರೆ, ಇದು ಕೂಡ ವಿಶಿಷ್ಟವಾದ ಕಥೆಯ ಎಳೆಯಿಂದ… ಇದು ಮನೋವಿಜ್ಞಾನ, ಪುನರ್ಜನ್ಮ ಮತ್ತು ಕೆಳದಿ ಇತಿಹಾಸದ ಜೊತೆ ಒಂದು ಮಧ್ಯಮವರ್ಗದ ಬದುಕು ಬವಣೆಗಳನ್ನ ಒಳಗೊಂಡಿದೆ.

ಪ್ರತಿ ಪುಟದಲ್ಲಿಯೂ ಥ್ರಿಲ್ ಇದೆ, ಸಸ್ಪೆನ್ಸ್ ಇದೆ. ನಾನು ಈ ಕಥೆಯ ಕರಡು ಪ್ರತಿ ಬೆಳ್ಳಂಬೆಳಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಜನ ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಓದುವಾಗ ಹವಾ ನಿಯಂತ್ರಿತ ರೈಲು ಬೋಗಿಯಲ್ಲಿನ ಸಣ್ಣ ಚಳಿಯಲ್ಲೂ ಮೈ ಜುಂ ಎಂದು ಬೆವತಿದ್ದೆ.
ಕೆಳದಿ ಅರಸರ ಬಿದನೂರು ಸಂಸ್ಥಾನದ ಮಂತ್ರಿಗಳಾಗಿದ್ದ ಕುಟುಂಬದ ಮತ್ತು ಅಲ್ಲಿ ಸೈನ್ಯಾದಿಕಾರಿ ಆಗಿದ್ದ ವೀರ ಸೇನಾನಿ ಪತ್ನಿ ಜೀವಂತ ಸತಿ ಸಹಗಮನ ಆದವರ ಪುನರ್ಜನ್ಮದ ಕಥೆ ಇದು.
‘ಸಾಯ್ಬಿಣಿ’ ಎನ್ನುವ ಈ ಕಾದಂಬರಿಯ ಕಥಾ ನಾಯಕಿ ಅಂಜನಾದೇವಿ ಮುಂಬಾಯಿ ಪಟ್ಟಣದ ಯುವತಿ,ಪ್ರೇಮ ವಿವಾಹ ಆಗಿ ಅವಿಬಿಜಿತ ಸಿಹಿತಿಂಡಿ ಮಾರಾಟ ಮತ್ತು ಹೊಟೇಲ್ ಉದ್ಯಮದ ಕುಟುಂಬ ಸೇರಿ ಬಯಲು ಸೀಮೆ ಪ್ರದೇಶದಲ್ಲಿ ನೆಲೆಸಿ ಅಲ್ಲಿಂದ ಆ ಕುಟುಂಬ ಬೆಂಗಳೂರು ನಗರ ಸೇರಿ ವಿಭಜಿತವಾದ ಕುಟುಂಬದ ಯಶಸ್ವಿ ಉದ್ಯಮಿ ಆಗುವ ಪತಿ.
ಈ ಕಾಲಾವಧಿಯಲ್ಲಿಯೇ ಅಂಜನಾದೇವಿಯಲ್ಲಿ ಪರಕಾಯ ಪ್ರವೇಶ ಮಾಡುವ ಕಾಮಾಖ್ಯ ದೇವಿ ನಂತರ ಸುಖ ಸಂಸಾರದ ಕುಟುಂಬದಲ್ಲಿ ನಡೆಯುವ ದುರಂತಗಳು.
ಬದಲಾಗುವ ಕಾಲದಲ್ಲಿ ಮಕ್ಕಳು ಸಂಸಾರಸ್ಥರಾಗಿ ಈ ದಂಪತಿಗಳು ವೃದ್ಧಾಪ್ಯದೆಡೆಗೆ ಸಾಗುತ್ತಾ ಇರುವಾಗ ನಗರೀಕರಣದಿಂದ ಕುಟುಂಬದ ವ್ಯವಹಾರಗಳೂ ಬದಲಾಗಿ ನಿವೃತ್ತ ಜೀವನ ಅರಸಿ ಕರಾವಳಿಗೆ ಬಂದು ಜಾಗ ಖರೀದಿಸಿ ಮನೆ ನಿರ್ಮಾಣ ಮಾಡಲು ಪ್ರಾರಂಬಿಸಿ ಅದರ ಗೃಹ ಪ್ರವೇಶದ ತನಕ ಅಗೋಚರ ಶಕ್ತಿಗಳು ವಿಜೃಂಬಿಸುವುದು, ನಂತರ ಆ ಜಾಗ ರಣಗಳ ಸಂಚಾರದ ಜಾಗ ಅಂತಲೂ, ಜೈನರ ಪೂರ್ವಿಕರ ಜಾಗ ಅಂತ ಸ್ಥಳೀಯರ ಮಾತುಗಳಿಗೆ ಇಂಬು ಇಟ್ಟಂತೆ ಇವರ ದೈವ ಕೂಡ ಈ ಜಾಗ ತೆರವು ಮಾಡಲು ತಿಳಿಸಿದಾಗ ಅಲ್ಲಿಂದ ಉಡುಪಿಗೆ ನಂತರ ಬೆಂಗಳೂರಿನ ಮಗನ ಮನೆ ತಲುಪುತ್ತಾರೆ.
ಕಥಾನಾಯಕಿಯ ಮೈಮೇಲೆ ಬರುವ ಕಾಮಾಖ್ಯ ದೇವಿ ಅವೇಶ ಅಂಜನಾದೇವಿಯ ವೃದ್ದಾಪದ ವಯಸ್ಸು ಮತ್ತು ಅನಾರೋಗ್ಯದಿಂದ ಭರಿಸಲಾಗದೇ ದೇವಿಯಲ್ಲಿ ಮುಕ್ತಿಗಾಗಿ ಪ್ರಾರ್ಥನೆ ಸಲ್ಲಿಸುವ ದಂಪತಿಗಳು.
ಇನ್ನೊಮ್ಮೆ ಯೋಚಿಸೆ ನಿರ್ಧರಿಸಲು ಗಣ ಮಗನ ಸಲಹೆ ಒಪ್ಪದ ಕುಟುಂಬಕ್ಕೆ ಮುಂದೆ ಆವರಿಸಿ ವಿಜೃಂಬಿಸುವ ದುಷ್ಟ ಶಕ್ತಿಗಳು.
ಈ ಸನ್ನಿವೇಶಗಳು ಮಲೆನಾಡಿನ ಈಗಲೂ ನಂಬಿಕೆಯ ಮತ್ತು ನಡೆಯುವ ಘಟನೆಗಳಾಗಿದೆ.
ಅಂತಿಮವಾಗಿ ಮನೋವೈದ್ಯರ ಪ್ರವೇಶ ಅವರ ದೃಷ್ಟಿಯಲ್ಲಿ ಇದು ಅಗೋಚರ ಶಕ್ತಿಗಳಲ್ಲ ಮನೋವಿಜ್ಞಾನ ಎಂಬ ವ್ಯಾಖ್ಯಾನ.
ಸಣ್ಣ ಹಲ್ಲು ನೋವು ವೈದ್ಯರ ತಪ್ಪು ಸ್ಥಳದ ಚುಚ್ಚುಮದ್ದಿನಿಂದ ಕಥಾ ನಾಯಕಿ ಮೂಕಳಾಗುವುದು ಇದೇ ಸಂದರ್ಭದಲ್ಲಿ ಬೆನ್ನಿನ ಹುರಿ ಮೇಲಿನ ಕುರ ಒಂದು ಕಾರಣವಾಗಿ ಮರಣ ಶಯ್ಯೆಗೆ ಒಯ್ಯುವುದು.
ಮಗನ ಅಂತರ್ ಧರ್ಮಿಯ ವಿವಾಹದಿಂದ ಬೇಸರದಿಂದ ಅಂತರ ಕಾಪಾಡಿಕೊಂಡಿದ್ದ ಅಂಜನಾದೇವಿಯ ಆರೋಗ್ಯ ಸುಧಾರಣೆಗೆ ಕ್ರೈಸ್ತ ಸೊಸೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಆರೈಕೆ ಮಾಡುವುದು ಇವೆಲ್ಲ ಮಧ್ಯಮ ವರ್ಗದ ಕುಟುಂಬದಲ್ಲಿನ ಜಂಜಾಟಗಳನ್ನ ವಸ್ತುನಿಷ್ಟವಾಗಿ ಸುಧೀಂದ್ರ ಭಂಡಾರ್ಕರ್ ನಿರೂಪಿಸಿದ್ಧಾರೆ.
ಅಂಜನಾದೇವಿ ಇಹಲೋಕದಿಂದ ಬಿಡುಗಡೆಯ ಕ್ಷಣಗಳಲ್ಲಿ ಶತಮಾನಗಳ ಹಿಂದಿನ ಸೇನಾ ನಾಯಕನ ಪತ್ನಿ ಸಹಗಮನದಲ್ಲಿ ಮಣ್ಣಾಗುವ ಕ್ಷಣಗಳನ್ನೇ ಅನುಭವಿಸುವಂತೆ ಕಾದಂಬರಿಯನ್ನ ಮುಕ್ತಾಯ ಮಾಡಿ ಭಂಡಾರ್ಕರ್ ಬರೆದಿದ್ದಾರೆ.
ಹಿಂದಿನ ಇವರ ಸಶೇಷ ಮತ್ತು ಈಗಿನ ಸಾಯ್ಬಿಣಿ ಎರಡೂ ಕಾದಂಬರಿ ಇತಿಹಾಸ ಆಸಕ್ತರು ಮತ್ತು ಇತಿಹಾಸ ಸಂಶೋದಕರು ಓದಲೇ ಬೇಕಾದ ಪುಸ್ತಕ.
ಖ್ಯಾತ ಸಾಹಿತಿಗಳೂ,ವಿಮರ್ಶಕರು, ಲೇಖಕರು ಆಗಿರುವ ಡಾಕ್ಟರ್ ಜನಾರ್ದನ ಭಟ್ಟರು ಗಮನಿಸಿ ದಾಖಲಿಸಿದಂತೆ ಈಗಿನ ಹೊಸ ತಲೆಮಾರಿನ ಇತಿಹಾಸದ ಲೇಖಕರು ಹಿಂದಿನ ಇತಿಹಾಸದ ಲೇಖಕರಂತೆ ರಾಜನನ್ನ ಬರೀ ಹೊಗಳಿ ಬರೆಯುವವರಾಗದೇ ಇತಿಹಾಸದಲ್ಲಿ ದಾಖಲಾಗದ ಆದರೆ ಜನಪದಲ್ಲಿ ಉಳಿದ ನಿಜ ಕಥೆಗಳನ್ನು ಆಯ್ದು ಅದನ್ನು ಹೊಸ ದೃಷ್ಟಿಕೋನದಲ್ಲಿ ಬರೆಯುವ ಹೊಸ ತಲೆಮಾರಿನ ಇತಿಹಾಸ ಲೇಖಕರು ಆಗಿದ್ದಾರೆ ಎಂದು ಬರೆದಿದ್ದಾರೆ.
ಅಂತವರಲ್ಲಿ ಒಬ್ಬರಾಗಿದ್ದಾರೆ ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದನೂರು ನಗರದ ಸುದೀಂದ್ರ ಭಂಡಾರ್ಕರ್.
ಅವರ ಈ ಸಾಯ್ಬಿಣಿ ಕಾದಂಬರಿಗೆ ಮುನ್ನುಡಿ ಬರೆಯುವ ಅವಕಾಶ ನನಗೆ ನೀಡಿದ್ದಾರೆ ಸುದೀಂದ್ರ ಭಂಡಾರ್ಕರ್.






0 Comments