‘ಒಟ್ರಾಸಿ ಪ್ರಸಂಗಗಳು’ ಬಿಡುಗಡೆ ಫೋಟೋ ಆಲ್ಬಂ…

‘ಒಟ್ರಾಸಿ ಪ್ರಸಂಗಗಳು’ ಬಿಡುಗಡೆ ಫೋಟೋ ಆಲ್ಬಂ…

ಸಾಹಿತಿ ಗೋಪಾಲ್ ತ್ರಾಸಿ ಅವರ ‘ಒಟ್ರಾಸಿ ಪ್ರಸಂಗಗಳು’ ಕೃತಿಯನ್ನು ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಮುಂಬೈನ ಮೈಸೂರು ಅಸೋಸಿಯೇಷನ್ ಕಿರು ಸಭಾಗೃಹದಲ್ಲಿ ಬಿಡುಗಡೆ ಮಾಡಿದರು.

ಮುಂಬೈನ ಚುಕ್ಕಿ ಸಂಕುಲ ಈ ಕೃತಿಯನ್ನು ಪ್ರಕಟಿಸಿದೆ.

ಕನ್ನಡ ಕಲಾಕೇಂದ್ರ, ಕರ್ನಾಟಕ ಸಂಘ, ಅಂಧೇರಿ ಹಾಗೂ ಮುಂಬೈ ಚುಕ್ಕಿ ಸಂಕುಲ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಸುನೀತಾ ಶೆಟ್ಟಿ, ರಂಗ ಕಲಾವಿದೆ ನಳಿನಾ ಪ್ರಸಾದ್, ಗಣೇಶ್ ಕುಮಾರ್, ಅಶೋಕ್ ವಳದೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪುಸ್ತಕ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ.

ಸಾಹಿತಿ ಗೋಪಾಲ್ ತ್ರಾಸಿ, ಅವರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ಯಾಮಲಾ ಮಾಧವ್ ಆಡಿದ ಮಾತುಗಳು:

ಕಿರಿಯ ಗೆಳೆಯ, ಸಾಹಿತಿ ಗೋಪಾಲ್ ತ್ರಾಸಿ, ತಮ್ಮ ಕೃತಿಯೊಂದನ್ನು ನನ್ನ ಕೈಯಿಂದ ಬಿಡುಗಡೆ ಗೊಳಿಸಲೇ ಬೇಕೆಂದು ಕಾದವರು. ಅವರ ಪ್ರೀತಿ, ಅಭಿಮಾನಕ್ಕೆ ಸೋತು, ಕೃತಿ ಲೋಕಾರ್ಪಣೆಯಂತಹ ಈ ಮಹತ್ಕಾರ್ಯದಲ್ಲಿ ನನ್ನ ಅಳಿಲಸೇವೆ ಸಲ್ಲಿಸಿ ಇಂದಿಲ್ಲಿ ನಿಮ್ಮ ಮುಂದೆ ನಿಂತಿರುವೆ.

ಹತ್ತು ದಿನಗಳ ಹಿಂದೆ ಗೋಪಾಲ್ ತಮ್ಮ ಕೃತಿಯನ್ನು ನನ್ನ ಕೈಗೊಪ್ಪಿಸಿದಾಗ, ಅವರ `ಒಟ್ರಾಸಿ ಪ್ರಸಂಗಗಳು’, ತನ್ನ ಹೊರನೋಟದಲ್ಲೇ ವಿಶಿಷ್ಟವೆನಿಸಿತು. ಹೂರಣದ ಒಂದಿಷ್ಟು ಪದಪುಂಜವನ್ನು ಒಟ್ರಾಸಿ ಹೆಕ್ಕಿ ಮುಖಪುಟದಲ್ಲಿ ಚೆಲ್ಲಿದಂತಹ ವಿನ್ಯಾಸ ಕುತೂಹಲಕರವೆನಿಸಿತು, ಹಿಂಬದಿಯಲ್ಲಿ ಕನ್ನಡನಾಡಿನ ಪ್ರಸಿಧ್ಧ ವಾಗ್ಮಿ ಮೈಸೂರಿನ ಪ್ರೊ.ಎಂ.ಕೃಷ್ಣೇಗೌಡರ ಮಹತ್ವದ ಮುನ್ನುಡಿಯಿಂದಾಯ್ದ ಅಮೂಲ್ಯ ಬೆನ್ನುಡಿ! ಕುತೂಹಲವೆನಿಸಿ, ಗೋಪಾಲ್ ಅವರ ಈ ಒಟ್ರಾಸಿ ಪ್ರಸಂಗಗಳನ್ನು ನಾನು ನನ್ನದಾಗಿಸ ಹೊರಟುದರಲ್ಲಿ, ಕೃತಿಯಲ್ಲಿ ಅವರೇ ಹಲವು ಬಾರಿ ಹೇಳಿಕೊಂಡತೆ ನನ್ನ ತಪ್ಪೇನೂ ಇಲ್ಲ!

ಇಲ್ಲಿನ ಕೆಲವು ಬರಹಗಳು ಸುಮಾರು ಎರಡು ದಶಕಗಳಿಗೂ ಹಿಂದಿನ ಪ್ರಬಂಧವೋ, ಹರಟೆಯೋ, ಏನೋ ಒಂದು, ಎಂದು ಹೇಳಿಕೊಂಡಿರುವ ಲೇಖಕರು, ಇವು ಓದುಗರ ಮುಖದಲ್ಲಿ ಕಿರುನಗೆಯೊಂದನ್ನು ಅರಳಿಸಿದರೆ ಸಾಕು, ಎಂದು ತಮ್ಮ ಮನೀಶೆಯನ್ನು ವ್ಯಕ್ತ ಪಡಿಸಿದ್ದಾರೆ. ಅಪರಿಚಿತನಾದ ತನ್ನ ಕಿರುಕುಳವನ್ನು ಸಹಿಸಿ, ಅರ್ಥಪೂರ್ಣ ಮುನ್ನುಡಿ ಬರೆದಿತ್ತು ಹರಸಿದ ಪ್ರೊ.ಕೃಷ್ಣೇಗೌಡರಿಗೆ ವಂದನೆ ಸಲಿಸಿದ್ದಾರೆ. ಖ್ಯಾತನಾಮರಾದ ಬೀಚಿ, ವೈ,ಎನ್ಕೆ, ನರಸಿಂಹಮೂರ್ತಿ, ಪ್ರಿಯತಮ, ಡುಂಡಿರಾಜ್‌ರಂತಹವರ ಹಾಸ್ಯ, ವಿನೋದ, ವಿಡಂಬನಾ, ಚುಟುಕು ಬರಹಗಳಿಂದ ತನ್ನ ಆರಂಭದ ಬರವಣಿಗೆ ಪ್ರಭಾವಿಸಲ್ಪಟ್ಟಿರ ಬಹುದು, ಎಂದೂ ಅಂದಿದ್ದಾರೆ. ನಂತರದ ಕವಿತೆಯ ಗೀಳು ತನ್ನಿಂದ ದೂರ ಸರಿಸಿದ ಆ ಪ್ರಕಾರದ ಈ ಬರಹಗಳನ್ನು ಇದೀಗ ಸಂಕಲಿಸಿ ಚುಕ್ಕಿ ಸಂಕುಲದ ಮೂಲಕ ಬೆಳಕಿಗೆ ತಂದಿದ್ದಾರೆ.

ಕೃತಿ ಪರಿಚಯವನ್ನು ಗೆಳತಿ ನಳಿನಾ ವಿಶದವಾಗಿ ಮಾಡಲಿರುವುದರಿಂದ ಆ ಬಗ್ಗೆ ನಾನು ಹೇಳಬೇಕಾದ್ದೇನೂ ಇಲ್ಲ. ಆದಾಗ್ಯೂ ಓದಿದ ಸಂತಸವನ್ನು ಚುಟುಕಾಗಿ ಹಂಚಿಕೊಳ್ಳುವುದರಲ್ಲಿ, ನನ್ನ ತಪ್ಪೇನೂ ಇಲ್ಲ, ತಪ್ಪೆಲ್ಲ ಲೇಖಕರದು ಎಂದು ಪುನಃ ಅವರದೇ ಉಕ್ತಿಯ ಮೊರೆ ಹೋಗುತ್ತಿರುವೆ.

ಬರವಣಿಗೆ ಎಂಬ ಕೆಟ್ಟ ಚಟದ ಬಗ್ಗೆ, ಹಗುರಾಗಿ ಆದರೂ ರೋಚಕವಾಗಿ ಬರೆದಿದ್ದಾರೆ, ತ್ರಾಸಿ. ತಮ್ಮ ಅರ್ಧತೋಳಿನ ಚೌಕುಳಿ ಅಂಗಿ ಬಗ್ಗೆ ಅವರ ವಿನೋದ ಬರಹ ನಿಜಕ್ಕೂ ಆಪ್ಯಾಯಮಾನ! ಬಜೆಟ್ ಗಿಜೆಟ್ ಅರ್ಥವಾಗದ ನಮ್ಮಂಥವರಿಗೂ ಆಸಕ್ತಿಯೆನಿಸುವಂತೆ ಬಜೆಟ್ ಪುರಾಣವನ್ನು ಬಿಡಿಸಿಟ್ಟಿದ್ದಾರೆ. ಜೋಗದ ಗುಂಡಿಯ ತಮ್ಮ ಸುರಮ್ಯ ಕಥನದಲ್ಲಿ ಮಹಾನ್ ಸಾಹಿತಿ ಕುವೆಂಪು ಅವರನ್ನೇ ಉಲ್ಲೇಖಿಸಿ, “ಹರಟೆಯ ಹಣೆಬರಹವೇ ಹೀಗೆ; ತುದಿಯಿಲ್ಲ, ಬುಡವಿಲ್ಲ, ಗೊತ್ತಿಲ್ಲ, ಗುರಿಯಿಲ್ಲ” ಇದರಲ್ಲಿ ನನ್ನ ತಪ್ಪೇನೂ ಇಲ್ಲ, ಎಂದು ಸಾರಿದ್ದಾರೆ. ಗಾದೆಗಳ ಬಗ್ಗೆ ಹೇಳುತ್ತಾ, ಕನ್ನಡದ ಬಂಗಾರದಂತಹ ಮಾತು ಈಗೀಗ ಮರಾಠಿಯ ಬಂಗಾರ್ ಆಗಿರುವ ಬಗ್ಗೆ ಖೇದ ವ್ಯಕ್ತ ಪಡಿಸಿದ್ದಾರೆ. ಮೂರು ದಶಕಗಳ ಹಿಂದೆ ನಡೆದ ಪತ್ರಿಕೋದ್ಯಮ ತರಬೇತಿ ಶಿಬಿರದ ಬಗೆಗಿನ ಲೇಖನ ಅವರ ಉತ್ಸಾಹವನ್ನು ಎರಕ ಹೊಯ್ದ ಮಹತ್ವಪೂರ್ಣ ಲೇಖನವೆಂದೇ ಹೇಳಬೇಕು. ಕೊನೆಯಲ್ಲಿ ಅಧಿಕ ಪ್ರಸಂಗ ಎಂಬ ಕಿರು ನಾಟಕವನ್ನೂ ರಚಿಸಿ ರಂಜಿಸಿರುವ ಗೋಪಾಲ್ ತ್ರಾಸಿ, ಇನ್ನಷ್ಟು ನಾಟಕ ಬರೆದಾರೆಂದು ಆಶಿಸುವೆ.

ವಾರ್ತಾಭಾರತಿಯ ತಮ್ಮ ಅಂಕಣಗಳಿಂದ ಮೊದಲಿಗೆ ನನಗೆ ಪರಿಚಿತರಾದ ತ್ರಾಸಿ, ತಮ್ಮ ಕವನಗಳಿಂದ, ವಿದೇಶ ಪಯಣದ ತಮ್ಮ ಪ್ರವಾಸ ಕಥನಗಳಿಂದ ನನ್ನನ್ನು ಆಕರ್ಷಿಸಿದವರು, ತಮ್ಮ ಅಭಿರುಚಿಯಾದ ಕವಿತೆಗಳ ರುಚಿಯನ್ನೂ ತೋರಿದವರು. ಸದಾನಂದ ಸುವರ್ಣ ಪ್ರತಿಷ್ಠಾನದ ಕಾರಂತೋತ್ಸವ ಸಮಿತಿ ಮತ್ತು ಕನ್ನಡ ಕಲಾಕೇಂದ್ರಗಳೊಡನೆ ತಾದಾತ್ಮ್ಯಾದಿಂದ ತೊಡಗಿಕೊಂಡವರು. ಕಾರಂತೋತ್ಸವ ಸಮಿತಿಯ ಮಕ್ಕಳ ಚಿತ್ರಕಲಾ ಸ್ಪರ್ಧೆಯ ಆಯೋಜನೆಯಲ್ಲಿ ಅಮಿತ ಆನಂದ ಪಡೆಯುತ್ತಿದ್ದವರು. ಯಂಗ್‌ಮೆನ್ಸ್ ನೈಟ್ ಹೈಸ್ಕೂಲ್‌ನ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಸತತ ಬಹುಮಾನಗಳನ್ನು ಬಾಚಿದವರು. ಸಾಗರೋತ್ತರ ಪಯಣಿಸಿ ಹಲವು ದೇಶಗಳನ್ನು ಸಂದರ್ಶಿಸಿ, ಅಮೂಲ್ಯ ಪ್ರವಾಸಕಥನ ಹೊರತಂದವರು. ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ಅಲ್ಲಿ ಕನ್ನಡದ ಕಂಪು ಬೀರಿ ಬಂದವರು. ಸಮಾನ ವಿಚಾರ, ಸಾಮಾಜಿಕ ಪ್ರಜ್ಞೆ, ಅಭಿರುಚಿಯ ಫೇಸ್ ಬುಕ್ ಫ್ರೆಂಡ್ಸ್, ನಾವು.

ಕಿರಿಗೆಳೆಯ ಗೋಪಾಲ್ ತ್ರಾಸಿ, ಮೊನ್ನೆ ತಾನೇ ನನ್ನೊಡನೆ ನಡೆದ ಮಾತುಕತೆಯಲ್ಲಿ ಪುಸ್ತಕ ಪ್ರಕಾಶನದ ಬಗ್ಗೆ ಬೆಳಕು ಚೆಲ್ಲಿ ಬರೆದು ಬರೆದೂ ಬರಿಗೈಯಾಗೇ ಉಳಿದ ನನ್ನ ಮೌಢ್ಯದ ಬಗ್ಗೆ ಎಚ್ಚರಿಸಿದವರು. ಅವರಿಗೂ, ಅವರ ಕೃತಿಗಳನ್ನು ಹೊರತಂದು ಸಾಹಿತ್ಯಸೇವೆಗೈಯುತ್ತಿರುವ ಮುಂಬೈ ಚುಕ್ಕಿ ಸಂಕುಲಕ್ಕೂ, ಸಾಹಿತ್ಯ ಸೌರಭ ಹರಡುತ್ತಿರುವ ಕನ್ನಡ ಕಲಾಕೇಂದ್ರಕ್ಕೂ, ಜೊತೆಗೂಡಿದ ಕರ್ನಾಟಕ ಸಂಘ, ಅಂಧೇರಿ ಹಾಗೂ ಸಾಹಿತ್ಯಾಸಕ್ತಿಯಿಂದ ಇಂದಿಲ್ಲಿ ನೆರೆದ ಆತ್ಮೀಯರು ನಿಮಗೆಲ್ಲರಿಗೂ ವಂದನೆ.

ಶ್ಯಾಮಲಾ ಮಾಧವ ಅವರ ಕ್ಯಾಮೆರಾ ಕಣ್ಣಲ್ಲಿ ಕಂಡಂತೆ ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು avadhi

February 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ಥ್ಯಾಂಕ್ಯೂ ಅವಧಿ!
    ಪ್ರೀತಿ ಪೂರ್ಣ ವಂದನೆ.

    – ಶ್ಯಾಮಲಾ ಮಾಧವ

    ಪ್ರತಿಕ್ರಿಯೆ
  2. ಗೋಪಾಲ ತ್ರಾಸಿ

    ಈ ಸೊಗಸಾದ ನುಡಿ ತೋರಣ ಪ್ರಸ್ತುತಿಗೆ ವಂದನೆಗಳು ಶ್ಯಾಮಲಾ ಮೇಡಮ್, ಮತ್ತು ಅವಧಿ ಬಳಗಕ್ಕೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: