ಪಾವನ ಭೂಮಿ
ಹೇಳುವುದು ಬಹಳಷ್ಟಿತ್ತಲ್ಲ ನಮ್ಮಿಬ್ಬರ ನಡುವೆ
ಆದಾಗ್ಯೂ ಆ ಸಂಜೆ
ಸುಮ್ಮನೇ ನಡೆದುಹೋದೆವು
ನಿನ್ನ ಸಿಗರೇಟಿನ ಹೊಗೆಯ
ಸುರುಳಿಗಳಲ್ಲಿ ಮಾತುಗಳು ಸುಳಿ ಸುಳಿಯಾಗಿ
ಸುತ್ತಿ ಹೋಗುವಾಗ
ನಿಶ್ಯಬ್ದ ನಿಡುಸುಯ್ದಿತ್ತು

ಈಗ ಸಮಯ ಸುಮ್ಮನೇ ಗದ್ದಲದ
ಮಾತುಗಳ ನಡುವೆ ಕಳೆದುಹೋಗುವಾಗೆಲ್ಲ ,
ನಿನ್ನ ಕಪ್ಪುತುಟಿ,
ವಿದಾಯ ಹೇಳಲಾಗದ
ಗೊಂದಲದ ಕಣ್ಣುಗಳೊಳಗೆ ನಾನು ಇಳಿದು,
ಸುತ್ತುವರಿದು ಕಾಡುವಾಗೆಲ್ಲ
ನಿನ್ನ ಅನುಪಸ್ಥಿತಿಯ
ash trayಯ ಬೂದಿ
ಖಾಲಿ ಗಾಜಿನ ಲೋಟ
ಮಳೆ ರಾತ್ರಿಯ ಗುಡುಗು ಸಿಡಿಲು
ನಿನ್ನ ವಿದಾಯದ ಮೌನ ಹೊತ್ತು ಕುಣಿಯುತ್ತವೆ
ಮತ್ತೀಗ….,
ಕಿಸೆಯಿಂದ ಉದುರುವ ನಾಣ್ಯದ ಸದ್ದೂ
ನಡೆದ ದಾರಿಯ ಹೆಜ್ಜೆ ಸಪ್ಪಳ
ನಮ್ಮ ನಡುವೆ
ಆಡದೆ ಉಳಿದು ಹೋದ
ಮಾತುಗಳನ್ನು ನೆನಪಿಸುವಾಗ,
Phir Se Ud Chala Main
ಮತ್ತದೇ ಹಾಡು
ಅಲ್ಲೆಲ್ಲೊ ಮೊಳಗುತ್ತದೆ ….






ಮೌನ ಕವಿತೆ ಓದಿ ಮೌನವಾದೆ
ಭಾವಪೂರ್ಣ ಸಾಲುಗಳು…