ಅಂಕೋಲೆಯೊಂದಿಗೆ ಆತನದು ಭಾವನಾತ್ಮಕ ಸಂಬಂಧವೂ ಹೌದು..

ನೆನಪು ೪೮
ಅಂಕೋಲೆಯ ನೆನಪುಗಳು

ಬರೆಯುತ್ತಾ ಹೋದರೆ ಅಂಕೋಲೆಯ ಬಗ್ಗೆ ಒಂದು ಸರಣಿ ಬರಹ ಮಾಡಿ ಇಡಬಹುದಾದಷ್ಟು ಅಣ್ಣನ ಮತ್ತು ಅಲ್ಲಿಯ ಸಂಬಂಧದ ಕುರಿತು ಸಂಗತಿಗಳಿವೆ.

ಆತ ಜಿಲ್ಲೆಯಾದ್ಯಂತ ಭಾಗವಹಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಲೆಕ್ಕ ಹಾಕಿದರೂ ಬಹುಶಃ ಅಂಕೋಲೆಯಲ್ಲಿ ಭಾಗವಹಿಸಿದ ಕಾರ್ಯಕ್ರಮಗಳಿಗಿಂತ ಕಡಿಮೆ ಇರಬೇಕು. ಅಂಕೋಲೆಯೊಂದಿಗೆ ಆತನದು ಭಾವನಾತ್ಮಕ ಸಂಬಂಧವೂ ಹೌದು. ಹಾಗೆಯೆ ತಾತ್ವಿಕ ಸಂಬಂಧವೂ ಹೌದು.

ಅಲ್ಲಿ ಆತನ ಹಲವು ಆತ್ಮೀಯರಿದ್ದರೂ ಐದು ಮನೆಗಳು ಸದಾ ನೆನಪಿನಲ್ಲಿ ಉಳಿಯುವಂತಹುದು. ಗಿರಿ ಪಿಕಳೆ, ಅಂಕೋಲೆಯ ಶ್ಯಾಮ ಹುದ್ದಾರ, ವಂದಿಗೆಯ ವಿ.ಜೆ. ನಾಯಕ, ಹಿಚ್ಕಡದ ಶಾಂತಾರಾಮ ನಾಯಕ ಮತ್ತು ಅಂಬಾರಕೊಡ್ಲಿನ ವಿಷ್ಣು ನಾಯ್ಕ.

ಅಣ್ಣನಿಗಿಂತ ಹಿರಿಯರು ಶ್ಯಾಮ ಹುದ್ದಾರರು. ದಿನಕರ ದೇಸಾಯಿಯವರ ‘ಜನಸೇವಕ’ದಲ್ಲಿ ಕೆಲಸ ಮಾಡುತ್ತಿದ್ದರು. ಜನಸೇವಕ ನಿಂತುಹೋದ ಮೇಲೆ ಇವರು ಜೆ.ಸಿ ಕಾಲೇಜಿನ ಗುಮಾಸ್ತ ಹುದ್ದೆಗೆ ನೇಮಕವಾದರು. ಪಕ್ಕಾ ಬಾಗಲಕೋಟೆಯ ಜವಾರಿ ಭಾಷೆಯ ಕವಿ ಮತ್ತು ಹರಟೆಗಾರ.

ಅವರ ‘ಖಾನಾವಳಿ ಡಬ್ಬಿ’ ನಾನು ಓದಿದ ಅವರ ಮೊದಲ ಪುಸ್ತಕ. ಅಣ್ಣನೊಂದಿಗೆ ನಾನು ಅವರ ಮನೆಗೆ ೨-೩ ಬಾರಿ ಹೋಗಿದ್ದ ನೆನಪು. ಶ್ಯಾಮ ಹುದ್ದಾರ ಅವರ ಮಕ್ಕಳು ನನ್ನ ಆತ್ಮೀಯ ಸ್ನೇಹಿತರು ಕೂಡ. ಹುದ್ದಾರರು ನನ್ನನ್ನು ಆರ್.ವಿ.ಯ ಮಗನೆಂದು ತೀರಾ ಆತ್ಮೀಯವಾಗಿ ನೋಡುತ್ತಿದ್ದರು. ಅಪ್ಪನ ಹಾಗೆ ಕವಿ ಆಗಬೇಕು ಅಂತ ಹೇಳುತ್ತಿದ್ದರು. ಹುದ್ದಾರರ ಹೆಂಡತಿ ಕೂಡಾ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಪಕ್ಕಾ ಬಯಲು ಸೀಮೆಯ ಆತಿಥ್ಯ.

ಒಮ್ಮೆ ಹುದ್ದಾರರು “ನಿಮ್ಮ ಅಪ್ಪ ಈ ಗುಮಾಸ್ತನ ಮನೆಗೆ ಉಳಿಯಲು ಬರುವುದಿಲ್ಲ. ನೀನಾದರೂ ಬಾ” ಎನ್ನುತ್ತಿದ್ದರು. ಉಲ್ಲಾಸ, ರವಿ ಆಗ ಹೆಚ್ಚು ಕಡಿಮೆ ನನ್ನಷ್ಟೇ ಸಣ್ಣ ಹುಡುಗರಾದ್ದರಿಂದ ನನಗೂ ಅಲ್ಲಿಗೆ ಹೋಗಿದ್ದರೆ ಒಳ್ಳೆಯದು ಎನ್ನಿಸಿದ್ದಿದೆ.

ಹುದ್ದಾರರ ಮನೆಯಲ್ಲಾದ ಸಣ್ಣಪುಟ್ಟ ಮನಸ್ತಾಪವನ್ನು ಕೂಡಾ ಅವರು ಅಣ್ಣನೊಂದಿಗೆ ಪತ್ರ ಮುಖೇನ ಹೇಳಿಕೊಳ್ಳುತ್ತಿದ್ದರು. ಒಮ್ಮೆಯಂತೂ ಜಗಳ ಕಾಯುವಂತೆ ಅವರ ಪತ್ರ ಇತ್ತು. ಇನ್ನು ಅವರು ಮಾತನಾಡಿಕೊಳ್ಳುವುದಿಲ್ಲ ಅಂದುಕೊಂಡಿದ್ದೆ. ಆದರೆ ಹಾಗೇನು ಆಗಲಿಲ್ಲ. ಯಾವುದೋ ಕಾರ್ಯಕ್ರಮಕ್ಕೆ ಅಂಕೋಲೆಯಲ್ಲಿ ಸಿಕ್ಕಾಗ ಮೊದಲಿನ ಆತ್ಮೀಯತೆಯೇ ಮುಂದುವರಿದಿದ್ದನ್ನು ನೋಡಿದೆ. ಒಮ್ಮೆ ಅವರ ಮನೆಗೆ ಅಣ್ಣ ಹೋದಾಗ ಅವರು ಅಣ್ಣನೊಂದಿಗೆ ಮುನಿಸುಗೊಂಡಿದ್ದರು. ಬಹುಶಃ ಸಣ್ಣ ಜಗಳ ಮಾಡಿರಬೇಕು. (ಜಗಳವೆಂದರೆ ಸಾಹಿತಿಗಳ ಜಗಳವದು. ಸಿಂಪಲ್ ಆಗಿ ತುಸು ಎತ್ತರದ ದನಿಯಲ್ಲಿ ವಾಕ್ಯವನ್ನೋ, ವಾಕ್ಯ ಭಾಗವನ್ನೋ ಒಂದೆರಡು ಸಲ ರಿಪೀಟ್ ಮಾಡುವುದು.) ಅಣ್ಣ ಅದಕ್ಕೆ ನಗುತ್ತ ಉತ್ತರಿಸುವುದು. ಇದಾದ ಎರಡನೇ ದಿನಕ್ಕೆ ಅವರ ಪತ್ರ ಬಂತು.

ಪ್ರಿಯ ಡಾ. ರೋಹಿ ಅವರಿಗೆ-
ವಂದನೆಗಳು.

ನಿಮ್ಮ ಕಾರ್ಡ ಬಂದು ಬಹಳ ದಿನಗಳಾದವು. ನೀವು ನಮ್ಮಲ್ಲಿ ಬಂದು ಹೋದ ನಂತರ ನನ್ನ ಶ್ರೀಮತಿ ಮತ್ತು ಮಗ ರವಿ ನನಗೆ ಬೈದರು. ಆ ರೀತಿ ಮಾತಾಡಿದಿರಿ. ಅವರು ಅಂಕೋಲಾಕ್ಕೆ ಬಂದರೂ ನಮ್ಮ ಮನೆಗೆ ಬರುವುದೇ ಕಡಿಮೆ. ಬಹಳ ದಿವಸಗಳ ಮೇಲೆ ಬಂದಿದ್ದರು. ಯಾಕೆ ಬಂದಿದ್ದಿರೆಂದೂ ಕೇಳಲಿಲ್ಲ. ನೀವು ಹೇಳುವ ವಿಷಯ ಸಮಾಧಾನದಿಂದ ಹೇಳಬೇಕಾಗಿತ್ತು. ಭಂಡಾರಿಯವರು ಬೇಸರ ಮಾಡಿಕೊಂಡು ಹೋದರೇನೋ ಮುಂತಾಗಿ ಅಂದೇ ಅಂದರು.

ಇಷ್ಟನ್ನು ಕೇಳಿ ನನಗೆ ನಶೆ ಇಳಿದಂತಾಯಿತು. ಹೌದು! ನಮ್ಮಿಬ್ಬರೂ ಕೌಟುಂಬಿಕ ಸ್ವಾಸ್ಥ್ಯ, ಮಕ್ಕಳು, ಮನೆಯವರು- ಎಲ್ಲದರ ಬಗ್ಗೆಯೂ ವಿಚಾರಿಸಿಕೊಳ್ಳುವವರು. ಆ ದಿನ ನಾನು ಏನೂ ಕೇಳಲೇ ಇಲ್ಲ. ಹಾಗೇ ಅವಸರದಲ್ಲಿ ಹೋದಿರಿ…

ನಿಮ್ಮ
ಶ್ಯಾಮ್ ಹುದ್ದಾರ

ಅಣ್ಣನ ಸಮಸ್ಯೆಯೆಂದರೆ ಎಲ್ಲೇ ಹೋದರು ಸಂಜೆ ಮನೆಗೆ ಬಂದು ಮುಟ್ಟಬೇಕು. ಹಾಗಾಗಿ ಕಾರ್ಯಕ್ರಮ ಮುಗಿದ ಮೇಲೆ ಗಡಿಬಿಡಿಯಿಂದ ಮನೆಗೆ ಓಡಿ ಬರುತ್ತಿದ್ದ. ಬರುವಾಗ ಮನೆಗೆ ಚಿಪ್ಪಿಕಲ್ಲಿನ ಸುಕ್ಕಾ ತರ‍್ತಿದ್ದ.
ಹುದ್ದಾರರು ಮಾಡಿದ ಒಂದು ಮಹತ್ವದ ಕೆಲಸ ಕರ್ನಾಟಕದ ಹಲವು ಲೇಖಕರ ಹಸ್ತಾಕ್ಷರ ಸಂಗ್ರಹಿಸಿದ್ದು. ಅವರ ಜೀವನ ಧ್ಯೇಯವನ್ನು ಬರೆಸಿಕೊಂಡಿದ್ದು ಒಂದು ಅದ್ಭುತ ಕೆಲಸ. ಎಲ್ಲವೂ ಪೋಸ್ಟ್ ಕಾರ್ಡಿನಲ್ಲಿ ಇತ್ತು.

ಅಣ್ಣ ಆಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯನಾಗಿದ್ದ. ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರ ಗಮನಕ್ಕೆ ತಂದು ಅವನ್ನು ಅಕಾಡೆಮಿಯ ಸಂಗ್ರಹಾಲಯಕ್ಕೆ ಸೇರಿಸಿದ. ಹಾಗಾಗಿ ಒಂದಿಷ್ಟು (ಸರಿಯಾಗಿ ಗೊತ್ತಿಲ್ಲ ೮ ಸಾವಿರ ರೂ. ಇರಬೇಕು) ಹಣಕಾಸಿನ ಸಹಾಯ ಕೊಡಿಸಿದ. ಅವರ ಶ್ರಮಕ್ಕೆಲ್ಲಾ ಹಣ ಏನೂ ಅಲ್ಲ. ಸಾಹಿತ್ಯ ಅಕಾಡೆಮಿ ಕಛೇರಿಯು ನೃಪತುಂಗ ರಸ್ತೆಯಲ್ಲಿ ಇರುವಾಗ ಗ್ಲಾಸ್ ಕಬೋರ್ಡ್ ಮಾಡಿ ಅದನ್ನು ಪ್ರದರ್ಶನಕ್ಕಿಟ್ಟಿದ್ದ ನೆನಪು. ಸಾಧ್ಯವಾದರೆ ಸಾಹಿತ್ಯ ಅಕಾಡೆಮಿ ಈಗಲೂ ಅವನ್ನು ಮುದ್ರಿಸಿ ಪ್ರದರ್ಶಿಸಬೇಕು.
ಈ ಕುರಿತು ಅವರ ಮಾತುಗಳಿವು.

ಈ ಹಿಂದೆ ಸಾಹಿತ್ಯ ಅಕಾಡೆಮಿಗೆ ಅನೇಕರು ಅಧ್ಯಕ್ಷರಾಗಿ ಹೋಗಿದ್ದಾರೆ. ಅವರಲ್ಲಿ ಅನೇಕರು ಪರಿಚಯದವರಿದ್ದರೂ ನನ್ನ ಸಂಗ್ರಹವನ್ನು ಅಕಾಡೆಮಿಗೆ ಕೊಡಬೇಕೆಂದು ಮನಸ್ಸೇ ಇರಲಿಲ್ಲ. ಆದರೆ ಶ್ರೀ ಬರಗೂರು ರಾಮಚಂದ್ರಪ್ಪನವರು ಅಧ್ಯಕ್ಷರಾದಾಗ ನನ್ನ ಸಂಗ್ರಹ ಅವರ ಕಣ್ಣಿಗೆ ಬಿತ್ತು. ಅದನ್ನು ಅವರು ತುಂಬಾ ಆಸಕ್ತಿ- ಆಸ್ಥೆಯಿಂದ ನೋಡಿ ಅಕಾಡೆಮಿಗೆ ಕೊಡಲು ಹೇಳಿದರು. ಮತ್ತು ನನ್ನ ಆತ್ಮೀಯ ಮಿತ್ರರಾದ ಡಾ. ಆರ್. ವಿ. ಭಂಡಾರಿಯವರು ಅಕಾಡೆಮಿಯ ಸದಸ್ಯರಾಗಿದ್ದರು. ಈ ಇಬ್ಬರ ಆಸಕ್ತಿಗೆ ಮತ್ತು ಶ್ರೀ ಬರಗೂರು ರಾಮಚಂದ್ರಪ್ಪನವ ಸರಳ ಸಜ್ಜನಿಕೆ ನೀಡಿದ ಪ್ರೋತ್ಸಾಹದ ಅಭಿಪ್ರಾಯ ಮತ್ತು ಆ ಸಂಗ್ರಹಕ್ಕೊಂದು ಶಾಶ್ವತ ಮೆಟ್ಟು ತೋರಿಸಿದ್ದರಿಂದ ನನ್ನ ಸಂಗ್ರಹ ಕೊಟ್ಟಿದ್ದೇನೆ.

ನಾನು ಅದನ್ನು ಮಾರುವ ಉದ್ಧೇಶವನ್ನೇ ಇಟ್ಟುಕೊಂಡು ಮಾರುಕಟ್ಟೆಗೆ ತಂದಿದ್ದರೆ ಅದಕ್ಕೆ ನಾನು ಕೇಳುವ ಬೆಲೆಯೇ ಬೇರೆ ಇರುತ್ತಿತ್ತು. ಅದನ್ನು ನಾನು ಅಕಾಡೆಮಿಗೆ ಕೊಡುವಾಗ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂದು ನನ್ನ ಕರಾರಿತ್ತು. ಅದಕ್ಕೆ ಅಕಾಡೆಮಿಯು ಒಪ್ಪಿಕೊಂಡಿತ್ತು..”

ಆದರೆ ಅಷ್ಟರೊಳಗೆ ಅಕಾಡೆಮಿ ಅವಧಿ ಮುಗಿದಿದ್ದರಿಂದಲೋ, ಅವರು ರಾಜಿನಾಮೆ ಕೊಟ್ಟಿದ್ದರಿಂದಲೋ ಆ ಮಹತ್ವದ ಕೆಲಸ ಆಗಲೇ ಇಲ್ಲ.

ವಿ. ಜೆ ನಾಯಕ:
ಇನ್ನೊಬ್ಬರು ಸಮಾಜವಾದಿ ಶಿಕ್ಷಕ, ಲೇಖಕ ವಿ.ಜೆ. ನಾಯಕರು. ಸುಂದರ ರೂಪ ಅವರದು. ಬೆಳ್ಳಗಿದ್ದರು. ಅಣ್ಣನಂತೆಯೇ ಕೂದಲು. ನಾಟಕ, ಯಕ್ಷಗಾನ ಅಕಾಡೆಮಿಯ ಸದಸ್ಯರೂ ಆಗಿದ್ದರು. ಅಂಕೋಲೆಯಲ್ಲಿ ಅಥವಾ ಹೊನ್ನಾವರದಲ್ಲಿ ನಡೆದ ಹಲವು ಕಾರ್ಯಕ್ರಮದಲ್ಲಿ ಅವರಿಬ್ಬರೂ ಸೇರುತ್ತಿದ್ದರು. ನಮ್ಮೂರು ಕೆರೆಕೋಣದಲ್ಲಿ ಉದ್ಘಾಟನಾ ಸಮಾರಂಭಕ್ಕೆ ಅವರು ಬಂದಿದ್ದರು. ಯಾವಾಗಲೂ ಗಂಭೀರವಾಗಿ, ನೀಟಾಗಿರುತ್ತಿದ್ದರು. ಒಳ್ಳೆಯ ಶಿಕ್ಷಕರೆಂದು ಹೆಸರು ಮಾಡಿದ್ದರು. ಶಿಕ್ಷಕ ರಾಷ್ಟ್ರ ಪ್ರಶಸ್ತಿ ಕೂಡ ಅವರಿಗೆ ಲಭಿಸಿತ್ತು.

ಒಳ್ಳೆಯ ಯಕ್ಷಗಾನ ನಟರು, ಲೇಖಕರು ಮತ್ತು ಸಮಾಜವಾದಿ ಆಗಿರುವುದರಿಂದ ಅವರಿಗೂ ಅಣ್ಣನಿಗೂ ತುಂಬಾ ಸ್ನೇಹ. ಸಣ್ಣ ಸಣ್ಣ ಸಂಗತಿಗೂ ಪತ್ರ ವ್ಯವಹಾರ. ನುಡಿದಂತೆ ಬದುಕಿದ ಧೀಮಂತ ಮನುಷ್ಯ ಅವರು. ನಮಗಂತೂ ಅಣ್ಣ ತೀರಿಕೊಂಡ ಮೇಲೆ ಅವರೇ ತಂದೆಯಂತೆ ಕಾಣುತ್ತಿದ್ದರು. ಅಣ್ಣ ನಮ್ಮನ್ನಗಲಿದ ನಂತರ ಅವರ ಮನೆಗೆ ಅನೇಕ ಬಾರಿ ಹೋಗಿದ್ದೆ. ಒಮ್ಮೆ ಅವರ ಸಂದರ್ಶನವನ್ನು ‘ಚಂದನ’ಕ್ಕಾಗಿ ಮಾಡಬೇಕೆಂದು ಆರತಿಯವರಿಗೆ ಹೇಳಿ ಒಪ್ಪಿಸಿದ್ದೆ. ಅದರೆ ಅದಕ್ಕೆ ವಿ.ಜೆ. ನಾಯಕರು ಒಪ್ಪಲೇ ಇಲ್ಲ. ನಾವೆಲ್ಲ ಔಟ್‌ಡೇಟೆಡ್ ಆಗಿದ್ದೇವೆ. ಹೊಸ ಹುಡುಗರು ಮುಂದೆ ಬರಲಿ, ಅವರ ಸಂದರ್ಶನ ಮಾಡಿ ಅನ್ನುತ್ತಿದ್ದರು.

ಕೊನೆಗೂ ಅವರನ್ನು ಒಪ್ಪಿಸಲು ಆಗಲೇ ಇಲ್ಲ. ಅವರು ತೀರಿಕೊಳ್ಳುವ ಒಂದೆರಡು ವಾರದ ಮೊದಲು ಅವರೊಂದಿಗೆ ೨-೩ ತಾಸು ಮಾತನಾಡಿ ಬಂದಿದ್ದೆ. ಅವರಿಗೆ ಗೊತ್ತಿಲ್ಲದಂತೆ ಮಾಡಿಕೊಂಡ ಅವರ ಮಾತು ಇನ್ನು ನನ್ನಲ್ಲಿ ಇದೆ. ಇನ್ನೊಮ್ಮೆ ಖಾಸಗಿಯಾಗಿ ನಾನು ನನ್ನ ಕ್ಯಾಮರಾದಲ್ಲಿ ವೀಡಿಯೋ ಮಾಡಿಕೊಳ್ಳುತ್ತೆತ್ತೇನೆ ಎಂದು ಹೇಳಿ ಒಪ್ಪಿಸಿ ಬಂದಿದ್ದೆ. ಆದರೆ ಆಕಾಲ ಬರಲೇ ಇಲ್ಲ. ತಾವೆಲ್ಲ ಹೋರಾಟ ಮಾಡಿದ ನೆಲದಲ್ಲಿ, ಸಮಾಜವಾದಿ ಆಶಯದೊಂದಿಗೆ ಜೀವಿಸಿದ್ದ ಈ ನೆಲದಲ್ಲಿ ಈಗ ಕೋಮುವಾದ, ಜಾತಿವಾದ ತೀವ್ರಗೊಂಡಿರುವ ಬಗ್ಗೆ ಕೊನೆಯ ದಿನಗಳಲಿ ತುಂಬಾ ನೊಂದುಕೊಂಡಿದ್ದರು.

ಅವರ ಜಾತಿಯ ಕುರಿತೇ ಅವರು ಟೀಕಿಸುತ್ತಿದ್ದರು. ವೈಭವದ ಮದುವೆ, ಸಾಮಾನ್ಯರಿಗೆ ನಿಲುಕದ ವರದಕ್ಷಿಣೆ, ಅವರೊಂದಿಗೆ ತಮ್ಮ ಮೂಲ ನಿಲುವನ್ನು ಬಿಟ್ಟು – ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿ– ಕೋಮುವಾದ, ರಾಜಕೀಯ ಭ್ರಷ್ಟಾಚಾರದ ಕಡೆಗೆ ನಾಡವರು ಬದಲಾಗುತ್ತಿರುವ ಕುರಿತು ಅವರು ತುಂಬಾ ಸಲ ಮಾತನಾಡಿದ್ದರು.

ಯಾವುದೇ ಕಾರ್ಯಕ್ರಮದ ಕರೆಯೋಲೆ ಕಳಿಸಿದರೆ, ಅಥವಾ ಯಾವುದಾದರೂ ನಾವು ನಡೆಸಿದ ಕಾರ್ಯಕ್ರಮದ ವರದಿ, ಪ್ರತಿಕ್ರಿಯೆ ಪತ್ರಿಕೆಯಲಿ ಬಂದರೆ ನೋಡಿದ ದಿನ ಬೆಳಿಗ್ಗೆ ೮.೦೦ ಗಂಟೆಯೊಳಗೆ ಒಂದು ಫೋನ್ ಬಂತೆಂದರೆ ಅದು ವಿ.ಜೆ. ನಾಯಕರದೇ ಆಗಿರುತ್ತಿತ್ತು. ಅಣ್ಣ ಮತ್ತು ಅವರು ಈ ಕಾರಣದಿಂದ ತದ್ರೂಪ ಗುಣದವರು. ಆತನೂ ಹಾಗೆ. ಒಂದು ಇನ್ವಿಟೇಶನ್ ಬಂದರೆ ಮರು ಟಪಾಲಿಗೆ ಆತನಿಂದ ಒಂದು ಕಾರ್ಡ್ ಹೋಗುವುದೇ! ಯಾರದಾದರೂ ಪತ್ರಿಕೆಯಲ್ಲಿ ಒಂದು ಲೇಖನ, ಪ್ರತಿಕ್ರಿಯೆ, ಕವಿತೆ ಬಂದರೆ ಸಾಕು. ಒಂದು ಕಾರ್ಡ್ ಅಥವಾ ಫೋನ್ ಹೋಗುತ್ತಿತ್ತು. ಅಣ್ಣ ತೀರಿಕೊಂಡ ಮೇಲಂತು ವಿ.ಜೆ. ನಾಯಕರು ಇನ್ನಷ್ಟು ಹೆಚ್ಚು ನಮ್ಮೊಂದಿಗೆ ಸಂಪರ್ಕದಲ್ಲಿದ್ದರು. ತನ್ನ ತಲೆಮಾರು ಸಾವಕಾಶ ಮಾಯವಾಗುತ್ತಿರುವ ಬಗ್ಗೆ ಅವರು ನಗುತ್ತಲೇ ಹೇಳುತ್ತಿದ್ದರು. ಆದರೆ ಹೊಸ ತಲೆಮಾರು ಹೆಚ್ಚು ಪ್ರಜ್ಞಾವಂತ ಆಗಲಿಲ್ಲವೆಂದು ಅವರಿಗಿರುವ ವಿಷಾದ ಆ ನಗುವಿನ ಆಳದಲ್ಲಿತ್ತು.

ವಿದ್ಯಾರ್ಥಿ ಜೀವನದಿಂದಲೇ ಅವರು ‘ಲೋಹಿಯಾ’ ವಿಚಾರದ ಕಡೆ ಸೆಳೆಯಲ್ಪಟ್ಟರು. “ನಾವೆಲ್ಲ ಕುವೆಂಪು ಓದಿಕೊಂಡವರು. ಅಂಕೋಲೆಯಲ್ಲಿ ನಡೆದ ದೇಸಾಯಿ, ಪಿಕಳೆ, ಇವರು ನಡೆಸುವ ಕಮ್ಯುನಿಸ್ಟ್ ಹೋರಾಟದ ಪರಿಚಯವೂ ಇತ್ತು. ಗ್ರಂಥಾಲಯದಲ್ಲಿ ಲೋಹಿಯಾ ಅವರ ಬರಹ ಸಿಕ್ಕಿತು. ಆಗ ನೆಹರು ಈ ದೇಶ ಆಳುತ್ತಿದ್ದರು. ಲೋಹಿಯಾ ಪಕ್ಕಾ ನೆಹರು ವಿರೋಧಿಗಳು. ನಮಗೆ ಆಗಲೇ ಓದುವ ಅಭ್ಯಾಸ ಇತ್ತು. ಓದಿದ ನಮಗೆ ತಕ್ಷಣ ಲೋಹಿಯಾ ಅವರ ಆಲೋಚನೆ ಎಷ್ಟು ಫ್ರೆಶ್ ಆಗಿದೆ ಅನ್ನಿಸಿ ಅವರನ್ನು ಫಾಲೋ ಮಾಡಲು ತೊಡಗಿಕೊಂಡೆವು” ಅಂತ ಹೇಳುತ್ತಿದ್ದರು.

“ಕೊನೆ ಕೊನೆಗೆ ಈ ಸೋಶಲಿಸ್ಟರು ನಿರುಪಯೋಗಿ ಆಗ್ಬಿಟ್ಟರು. ಭ್ರಷ್ಟರಾಗಿಬಿಟ್ಟರು. ನಿನ್ನ ಅಪ್ಪ ಈ ಸಿದ್ಧಾಂತದ ಬಗ್ಗೆ ಇದೇ ಅನುಮಾನ ವ್ಯಕ್ತಪಡಿಸಿದ್ದರು. ಅವರು ಹೇಳೋ ಹಾಗೆ ಮಾರ್ಕ್ಸ್ ಮತ್ತು ಅಂಬೇಡ್ಕರ್ ಈ ಕಾಲದ ಅಗತ್ಯ. ಅದರಲ್ಲೂ ಈ ದೇಶಕ್ಕೆ ಕಮ್ಯುನಿಷ್ಟರು ಅನಿವಾರ್ಯ. ಅವರು ಸ್ವಲ್ಪ ಜಾತಿಯ ಕುರಿತು ಮರು ಆಲೋಚನೆ ಮಾಡಬೇಕು. ಪಿಕಳೆ, ದೇಸಾಯಿ, ಜಗಳ ಮಾಡ್ಕೋಬಾರದಾಗಿತ್ತು. ಈಗ ನೀವೇ ಸರಿಯಾದ ಸೈದ್ಧಾಂತಿಕ ಹೋರಾಟ ಮಾಡುವವರು” ಎಂದು ಹೇಳಿ ಬೆನ್ನು ತಟ್ಟಿದ್ದರು. ಮಾತ್ರವಲ್ಲ ಚಳುವಳಿ ಕೆಲಸಗಳಿಗೆ ೫೦೦ ರೂ. ಕೊಟ್ಟು ಕಳುಹಿಸುತ್ತಿದ್ದರು. ಮೊದಲು ‘ಐಕ್ಯರಂಗ’ ನಂತರ ‘ಜನಶಕ್ತಿ’ಯ ಚಂದಾದಾರರೂ ಕೂಡ ಆಗಿದ್ದರು. ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ ಇಬ್ಬರೂ ಸೇರಿ ಕೆಲಸ ಮಾಡಿದರು.

ಅವರ ಪತ್ರ ಇದು.

ಪ್ರಿಯ ಆರ್.ವಿ ಯವರಿಗೆ
ವಂದನೆಗಳು.

ನವೆಂಬರ್ ೪ ರಂದು ನೀವು ಬರೆದ ಕಾರ್ಡ್ ತಲುಪಿದೆ. ತನ್ಮಧ್ಯೆ ನಾವು ಫೋನಿನಲ್ಲಿ ಮಾತಾಡಿದೆವು. ನಿಮ್ಮ ಆರೋಗ್ಯ ಸುಧಾರಿಸಿರುವುದನ್ನು ತಿಳಿದು ತುಂಬಾ ಸಂತೋಷವಾಯಿತು. ನೀವು ಇನ್ನೂ ಬಹುಕಾಲ ನಮ್ಮ ಜೊತೆಗಾರರಾಗಿದ್ದು ಕ್ರಿಯಾಶೀಲರಾಗಿ ಓಡಾಡಿಕೊಂಡಿರಬೇಕು. ನಾನು ಚೆನ್ನಾಗಿದ್ದೇನೆ. ಕಳೆದ ೧೧ ಕ್ಕೆ ಹುಬ್ಬಳ್ಳಿ- ದಾವಣಗೆರೆ ಕಡೆಗೆ (ನಮ್ಮ ಮಕ್ಕಳನ್ನು ಕಾಣಲು) ಹೋಗಿ ಬಂದೆ. ಇವತ್ತು ನವೆಂಬರ್ ೨೦- ನನ್ನ ಜನ್ಮ ದಿನ- ಮರಳಿ ಮನೆಗೆ ಬಂದಿದೇನೆ. ಆರೋಗ್ಯವಾಗಿದ್ದೆದ್ದೇನೆ.

ಈ ಸಂದರ್ಭದಲ್ಲಿ ಪ್ರತಿ ವರ್ಷಕ್ಕೆ ಒಂದು ನನ್ನ ಹಳೆಯ ಬರಹಗಳನ್ನು ಜೋಡಿಸಿ ಸಿದ್ಧಪಡಿಸಿದ ಗ್ರಂಥವನ್ನು ಪ್ರಕಟಿಸುವ ಕಾರ್ಯಯೋಜನೆಯಂತೆ ಈ ಬಾರಿ ನಮ್ಮ ಸೀಮೆಯ ಜನಜೀವನದೊಡನೆ ನಾನು ಬೆಳೆದು ಬಂದ ವಿವರಗಳನ್ನೊಳಗೊಂಡ ಲೇಖನಗಳ ಸಂಗ್ರಹ “ಕಾಲ್ನಡಿಗೆ ಪಯಣ” ಎಂಬ ಶೀರ್ಷಿಕೆಯಡಿಯಲ್ಲಿ ಬರುವುದಿತ್ತು. ಸ್ವಲ್ಪ ವಿಳಂಬವಾಗಬಹುದು.

ಮುಂದಿನ ಪ್ರಕಟಣೆಗೆ ಇನ್ನೊಂದು ಸಂಗ್ರಹ ಸಿದ್ಧತೆಯಲ್ಲಿದೆ. ನಾನು ಗೌರವ ಭಾವವನ್ನು ಹೊಂದಿರುವ ಹಲವಾರು ವ್ಯಕ್ತಿಗಳ ಚಿತ್ರಗಳಲ್ಲಿ ನಿಮ್ಮ ಬಗ್ಗೆ ಹಿಂದೆ ಬರೆದಿದ್ದನ್ನು ಸ್ವಲ್ಪ ವಿಸ್ತರಿಸಿ- ಹಿಂದಿನ ಎರಡು ಪತ್ರಗಳನ್ನು ಜೋಡಿಸಿದ್ದೇನೆ- ಪ್ರತಿಯನ್ನು ಕಳಿಸಿದೆ. ಪುಸ್ತಕದ ಹೆಸರು “ಕೈಗನ್ನಡಿಯಲ್ಲಿ ಕಂಡ ಬಿಂದುಗಳು” ಆಗಬಹುದೇ? ಸೂಕ್ತ ಹೆಸರನ್ನು, ಅಂದದ ಚಿತ್ರಗಳನ್ನು ಸೂಚಿಸಿ. ಒಟ್ಟು ಸುಮಾರು ೨೦ ವ್ಯಕ್ತಿ ಚಿತ್ರಗಳಿವೆ. ಹೆಚ್ಚಾಗಿ ಗುರುವೃಂದದವರೇ.

ಸ್ನೇಹ ಪೂರ್ವಕ-
ನಿಮ್ಮ
ವಿ.ಜೆ ನಾಯಕ
೨೦-೧೧-೨೦೦೭

‘ಕಾಲ್ನಡಿಗೆ ಪಯಣ’ ನಂತರ ಪ್ರಕಟವಾಯಿತು. ಅದರ ಬಗ್ಗೆ ನಾನೂ ಕೂಡ ಒಂದು ಪರಿಚಯ ವಿಮರ್ಶೆ ಬರೆದಿದ್ದೆ. ಅವರು ತುಂಬಾ ಖುಷಿ ಪಟ್ಟಿದ್ದರು. ಆದರೆ “ಕೈಗನ್ನಡಿಯಲ್ಲಿ ಕಂಡ ಬಿಂದುಗಳು” ಬಂದಂತಿಲ್ಲ. ಬರಬೇಕಾಗಿತ್ತು.

‍ಲೇಖಕರು avadhi

June 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: