ಒಂದು ನಾಯಿ ಸತ್ತಿದೆ!

ಮೂಲ: ಪಾಬ್ಲೊ ನೆರೂದ

divya prakash nayak

ಅನುವಾದ: ದಿವ್ಯಪ್ರಕಾಶ

ಒಂದು ನಾಯಿ ಸತ್ತಿದೆ
ಅದು ನನ್ನ ನಾಯಿ
ತೋಟದ ತುಕ್ಕುಹಿಡಿದ ಕುಟಾರಿಯಲ್ಲೇ
ಅವನನ್ನು ಹೂತಿದ್ದೇನೆ.

ಕೆಲವು ದಿನಗಳಲ್ಲಿ ನಾನೂ ಅವನ ಬಳಿ ಹೋಗುವವನೇ.
ಸದ್ಯಕ್ಕೆ ಅವನ ರೊಣೆ,
ಫಟಿಂಗತನ, ಥಂಡಿಯ ಮೂಗು ನನ್ನಿಂದ ಮರೆಯಾಗಿವೆ.
dog3ಮತ್ತೆ ನಾನು ಭೌತವಾದಿ – ಸತ್ತಮೇಲೆ ಮನುಷ್ಯರಿಗೆ ಸಿಗುವ
ಸ್ವರ್ಗದಲ್ಲಿ ನಂಬಿಕೆ ಇಲ್ಲದವ.
ನಾನೆಂದೂ ಸೇರಲಾರದ ಸ್ವರ್ಗವನ್ನೀಗ ನಂಬುತ್ತಿದ್ದೇನೆ
ಹೌದು, ನಾಯಿಪಾಡಿನಲ್ಲೇ ದಕ್ಕುವ ಸ್ವರ್ಗವನ್ನು!
ಅಲ್ಲಿ ನನ್ನ ನಾಯಿ, ತನ್ನ ಬಾಲ ಅಲ್ಲಾಡಿಸುತ್ತಾ
ನನ್ನ ಬರುವಿಕೆಗಾಗಿ ಕಾಯುತ್ತಿದೆ.

ಎಂದೂ ಜೀತ ಮಾಡದ ಈ ಜೊತೆಗಾರನನ್ನು
ಕಳಕೊಂಡ ದುಃಖವನ್ನು ಹೇಗೆ ಹೇಳಲಿ?
ಅವನ ಸ್ನೇಹವೋ – ಎಲ್ಲಾ ಮುಳ್ಳುಗಳನ್ನು ತನಗೇ ನಾಟಿಸಿಕೊಂಡ
ಮುಳ್ಳುಹಂದಿಯಂಥದ್ದು, ಬಂಡಾಯದ್ದು, ಚಾರ್ಕಲದಷ್ಟು ಎತ್ತರದ್ದು,
ಎಷ್ಟು ಬೇಕೋ ಅಷ್ಟರದ್ದು, ಪೋಕಳೆಯಲ್ಲದ್ದು.
ಅವನು ಆಗಾಗ ನಿಗುರುವ ಬೇರೆ ನಾಯಿಗಳಂತೆ
ನನ್ನ ಮೈಮೇಲೆ ಹತ್ತಲಿಲ್ಲ,
ಮೊಣಕಾಲು ನೆಕ್ಕಲಿಲ್ಲ.

ಆತ ಇರುವಾಗ ನನ್ನನ್ನು ಎವೆ ಇಕ್ಕದೆ ನೋಡುತ್ತಿದ್ದ
ನನಗೆ ಬೇಕಾದ ಗಮನವನ್ನು ಕೊಡುತ್ತಿದ್ದ.
ಅವನ ಕಾಳಜಿ ನೋಡಿದರೆ-
ನನ್ನಂತಹ ಟೊಳ್ಳು ಮನುಷ್ಯನಿಗಾಗಿ ಒಂದು
ನಾಯಿ ತನ್ನ ಸಮಯ ವ್ಯರ್ಥಮಾಡುತ್ತಿದೆ ಎನ್ನುವುದು
ಅರ್ಥವಾಗುತ್ತಿತ್ತು.
ಆತನ ಕಣ್ಣುಗಳು ನನಗಿಂತ ಪ್ರಾಮಾಣಿಕ ಕಣ್ಣುಗಳು
ಆತ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ
ಆ ನೋಟ ನನಗಷ್ಟೇ ಮೀಸಲಿತ್ತು.
ಅವನ ರೋಮದಂತೆ ದಟ್ಟವಾದ ಪ್ರೇಮ
ನನ್ನ ಬಳಿಯೇ ಇದೆ, ನನ್ನನ್ನು ಬಾಧಿಸದೆ,
ನನ್ನಿಂದೇನನ್ನೂ ಬೇಡದೆ.

ಸಮುದ್ರ ದಂಡೆಯ ಒದ್ದೆ ರೇವೆಯಮೇಲೆ ನಡೆವಾಗ
ಅವನ ಎದ್ದ ಬಾಲ ನೋಡಿ ನಾನೆಷ್ಟು ಅಸೂಯೆ ಪಟ್ಟಿಲ್ಲ?
ಆಗಸವೆಲ್ಲಾ ಹಕ್ಕಿಗಳಿಂದ ತುಂಬಿರುವಾಗ
ನನ್ನ ರೋಮದ ನಾಯಿ ತನ್ನ
ಚಿನ್ನದ ಬಾಲ ಮೇಲೆತ್ತಿ
ಸಮುದ್ರದ ಅಲೆಗಳೆಡೆಗೆ ಜಿಗಿಯುತ್ತಿತ್ತು,
ಉಪ್ಪುನೀರಿನ ತುಂತುರಿಗೆ ಮುಖಾಮುಖಿಯಾಗುತ್ತಿತ್ತು.

ಸಂತೋಷ! ಸಂತೋಷ! ಸಂತೋಷ!
ಈ ನಾಚಿಕೆಗೆಟ್ಟ ನಿರಂಕುಶ ನಾಯಿಗಳಿಗಷ್ಟೇ ಗೊತ್ತು
ಹೇಗೆ ಸಂತೋಷ ಪಡುವುದೆಂದು.

ನಾನೇನು ನನ್ನ ಸತ್ತನಾಯಿಗೆ ಗುಡ್‌ ಬೈ ಹೇಳುವುದಿಲ್ಲ
ಏಕೆಂದರೆ ನಾವಿಬ್ಬರೂ ಒಬ್ಬರಿಗೊಬ್ಬರು ಸುಳ್ಳು ಹೇಳುವುದಿಲ್ಲ.

 

‍ಲೇಖಕರು admin

April 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sangeeta Kalmane

    ಅಂಟಿಕೊಂಡಿದೆ ಮೈತುಂಬ
    ಕಪಾಟಿನಲ್ಲಿರುವ ಬಟ್ಟೆಗಳ ತುಂಬ
    ಒದ್ದೆ ಮರಳು ಅಂಟಿಕೊಂಡಂತೆ
    ಉದುರುವ ಪೊತ್ತೆ ಕೂದಲೆಲ್ಲ
    ಹಾಗೆ ಕಾಪಾಡಿಬಿಡಲೆಂಬ ಹಂಬಲ
    ಮುಂದೊಂದು ದಿನ
    ನನ್ನ ಮರಿ ಬಾಲದ ಶೋನು
    ಹೀಗೆ ಹಿಡಿದರೆ
    ಬಾರದ ಹಾದಿ
    ಎಲ್ಲೆಯೇ ಇಲ್ಲದಷ್ಟು
    ನೆನಪ ಕುದುರಿಸಿ
    ದಿನ ದಿನವೂ
    ಖುಷಿಯೆಂಬ ಪಲ್ಲಂಗದಲ್ಲಿ
    ನಮ್ಮನೇರಿಸಿ
    ಬದುಕಿನಲ್ಲಿ ಬಿಡಲಾರದ
    ಸಂಗಾತಿಯ ನೆನಪಿಗೆ
    ಇರಲಿ ನಾ ಕೊಡವಲಾರೆ
    ನನ್ನ ಮೈಯೊಳಗೆ
    ನನ್ನ ಬಟ್ಟೆಯೊಳಗೆ
    ನನ್ನ ಮನೆಯೊಳಗೆ
    ನನ್ನ ಕಣ್ಣ ಮುಂದೆ
    ನನ್ನ ಕವನದೊಳಗೆ
    ………………………
    ……‌‌‌‌.‌‌‌‌.‌..‌‌…….‌‌‌‌‌‌‌………..!

    ಪ್ರತಿಕ್ರಿಯೆ
  2. Sangeeta Kalmane

    ಕವನ ಓದಿದರೆ ದುಃಖವಾಗುತ್ತದೆ. ಸಾಕಿದ ನಾಯಿಗಳೊಂದಿಗಿನ attachment ಸಾಕಿದವರಿಗೆ ಗೊತ್ತು. ಒಂದು ದಿನ ಅದಿಲ್ಲ ಅನ್ನುವ ಕಲ್ಪನೆ ಕೂಡ ಕಷ್ಟ. ಅದರ ಮೇಲಿನ ಪ್ರೀತಿ ಸೊಗಸಾಗಿ ವ್ಯಕ್ತ ಪಡಿಸಿದ್ದೀರಾ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: