ಒಂದು ದೀಪದ ಕತೆ

ರವಿಕುಮಾರ್ ಟೆಲೆಕ್ಸ್ 

ದೀಪವೇ ಇಲ್ಲದವರು ಹಚ್ಚುವುದಾದರೂ ಏನನ್ನು?

ಹೊತ್ತು ಮುಳುಗಿ ಕತ್ತಲು ಅಮರಿಕೊಂಡು ಗಂಟೆಗಳೆ ಕಳೆದಿದ್ದವು. ಅಪ್ಪ ಬರುವ ದಾರಿಯನ್ನೆ ಕಾಯುತ್ತಿದ್ದ ಅವಳು ಸತ್ತ ಒಲೆಯ ಮತ್ತೆ ಮತ್ತೆ ನೋಡುತ್ತಾ ದುಃಖಿಸುತ್ತಿದ್ದಳು. ಮೂಲೆ ಮುಡುಕನ್ನೆಲ್ಲಾ ತಡಕಾಡಿ ಹಸೆಕಲ್ಲ ಸಂದಿಯಲ್ಲಿ ಸಿಕ್ಕ ಬೆಂಕಿಕಡ್ಡಿಯೊಂದ ಮಡಿಕೆಯ ಎದೆಗೆ ಗೀಚಿ ಹೊತ್ತಿಸಿದ ಬೆಂಕಿಯನ್ನ ಮೋಟು ಗೋಡೆಯ ಮೇಲಿನ ಚಿಮಣಿಬುಡ್ಡಿಯ ತುಟಿಗಿಡಿದಳು. ಎಣ್ಣೆ ತೀರಿ ಬತ್ತಿ ಸತ್ತು ಎಷ್ಟೋ ಒಪ್ಪತ್ತುಗಳಾಗಿದ್ದು ಮರೆತೆ ಹೋಗಿತ್ತು ಅವಳಿಗೆ. ಬೆರಳ ಬುಡಕ್ಕೆ ಉರಿ ಸೋಕಿ ಅದರ ಚಣ ಆಯಸ್ಸು ತೀರಿಹೋದಾಗ ಕತ್ತಲಿಗೆ ಕತ್ತಲಾಗಿಯೇ ಅವಳು ಜಗಳಕ್ಕಿಳಿಯುತ್ತಿದ್ದಳು.

ಜೋಪಡಿಯ ಗಳಕ್ಕೆ ಹೆಪ್ಪುಗಟ್ಟಿದ್ದ ಚಿಮಣಿ ಬುಡ್ಡಿಯ ಮಸಿ ಆಗ್ಗಾಗ್ಗೆ ಉದುರತ್ತಲೆ ಇರುತ್ತದೆ. ಅದನ್ನೆ ಕೂಸುಗಳಿಗೆ ಕಣ್ಕಪ್ಪಾಗಿ, ದೃಷ್ಟಿ ಬೊಟ್ಟಾಗಿ ಇಡುವ ಅವ್ವ ಬೂದಿಯನ್ನು ಬದುಕಾಗಿಸಿಕೊಂಡೆ ಬದುಕಿಬಿಟ್ಟಳು.

ದಾರಿಯ ತುದಿಯಲ್ಲಿ ಬೀದಿ ದೀಪದ ಬೆಳಕಿಗೆ ನೆರಳು ಸುರಿದರೆ ಸಾಕು, ಅಪ್ಪ ಬಂದನೆಂಬ ಬೆಳಕ ಕಣ್ಣತುಂಬಿಕೊಳ್ಳುತ್ತಿದ್ದ ಅವಳು ಭ್ರಮೆಗೂ… ದಿಟಕೂ ವ್ಯತ್ಯಾಸವೇ ಇಲ್ಲದಷ್ಟು ದಿನಗಳ ಕಳೆದು ಹೋಗಿದ್ದಳು. ಮಂಕರಿ, ಗುದ್ದಲಿಯೊಂದಿಗೆ ಸೊರಗಿ ಸರೊತ್ತಿಗೆ ಬಂದ ಅಪ್ಪ ತುಟಿಗಿಟ್ಟುಕೊಂಡ ತುಂಡು ಬೀಡಿಯ ಕೆಂಡದಲ್ಲಿ ಮಕ್ಕಳ ಮುಖ ನೋಡಲು ತಡಕಾಡುತ್ತಾನೆ . ಅವಳ ಕಣ್ಣ ಕೋಡಿ ಒಡೆದು ಕೆನ್ನೆ ಮೇಲಿಳಿಯುತ್ತಿದ್ದ ನೀರಿನಲ್ಲೆ ಮಣ್ಣ ಕೈಗಳ ತೊಳೆದುಕೊಂಡು ಕತ್ತಲಿಗೆ ನಿಟ್ಟುಸಿರುಗಳ ವರದಿ ಒಪ್ಪಿಸುತ್ತಾನೆ.

ಅವಳು ಸೆರಗ ಜುಂಗ ಹರಿದು ಹೊಸೆದ ಒಣಬತ್ತಿ ಬೀಡಿ ತುದಿಯ ಕೆಂಡ ಸೋಕಿ ಬರ ಬರನೆ ಉರಿದಾಗ ಮೋಟು ಗೋಡೆಯ ದೀಪ ಒಳಗೆಲ್ಲಾ ಬೆಳಕ ಚೆಲ್ಲಿತು. ಕಲ್ಲು ಕರಗೋ ಹೊತ್ತಿನಲ್ಲಿ ಸತ್ತ ಬತ್ತಿ ನಕ್ಕ ಸದ್ದಾಯಿತು. ಒಬ್ಬರಿಗೊಬ್ಬರು ಮುಖ ನೋಡಿಕೊಂಡು, ನೆರಳ ಕಂಡು, ಸಂಕಟಗಳ ನೆಂಚಿಕೆಯಲ್ಲಿ ಅರೆಪಾವು ಗಂಜಿ ಉಂಡು ಅರವಿಯ ನೀರು ಗಟಗಟನೆ ಕುಡಿದದ್ದಾಯಿತು. ಕತ್ತಲೊಳು ಕಾದಾಡುತ್ತಲೆ ಬದುಕಿದ ಅಪ್ಪ ಅದೊಂದು ದಿನ ಮೋಟು ಗೋಡೆಯ ಮೇಲೆ ಕರೆಂಟ್ ಬಲ್ಬು ಕಟ್ಟಿದ. ದಬ್ಬೆ ಗೋಡೆಯನ್ನು ತಬ್ಬಿಕೊಂಡ ಗುಂಡಿ ಅದುಮಿದರೆ ಬಲ್ಬು ಪಕ್ಕನೆ ಉರಿಯುತ್ತದೆ. ಬಲಕ್ಕೂ, ಎಡಕ್ಕೂ ಬೆಳಕ ಚೆಲ್ಲುತ್ತಾ ಬರ್ನ್ ಆಗುವವರೆಗೂ ಹಗಲು ರಾತ್ರಿ ಎನ್ನದೆ ಉರಿಯುತ್ತಲೆ ಇದೆ. ಅವಳ ಕಣ್ಣಲ್ಲೀಗ ಮಿಂಚು ಹೊಳಪು. ದೇವರ ಮುಂದಿನ ಹಣತೆಗೆ ನಿತ್ಯ ಬೆಳಕಿನ ಅನ್ನ ಉಣಿಸುತ್ತಾಳೆ. ಮತ್ತೆಂದೂ ಕತ್ತಲು ಹಸಿದು ಕಾಡದಿರಲೆಂದು. ಅವತ್ತೊಂದು ದಿನ ಅಪ್ಪ ಥಟ್ಟನೆ ಆರಿಹೋದ. ಆದರೆ ಅಪ್ಪ ಕಟ್ಟಿದ ಬಲ್ಬು ಮಾತ್ರ ಉರಿಯುತ್ತಲೆ ಇದೆ.

ಹೀಗೆ ಅಪ್ಪನನ್ನು, ಮೋಟು ಗೋಡೆಯ ದೀಪವನ್ನು ನೆನಪಿಸಿಕೊಳ್ಳುವಾಗ ಟಿವಿಯಲ್ಲಿ ದೀಪ ಆರಿಸಿ, ದೀಪ ಹಚ್ಚಿ ಅನ್ನೋ ಸುದ್ದಿ ಕೇಳಿಸಿಕೊಂಡ ಅವಳು “ಇದೇನು ರೋಗ ಬಂತು ಜನುಕ್ಕೆ, ಹಚ್ಚಿರೋ ದೀಪ ಆರ್ಸಿ ಮತ್ತೆ ಹಚ್ಚೋದಾ ಥೂ..” ಎಂದು ಲೊಚಗುಟ್ಟಿದಳು.

ಝಗಮಗಿಸುವ ಬೆಳಕಿನಲ್ಲಿದ್ದವರಿಗೆ ಕತ್ತಲ ಅನುಭವಕ್ಕೆ ಜಾರುವುದು ರಮ್ಯ ರೋಮಾಂಚನ. ಸುಖದ ಸ್ವರ್ಗ. ಅದೀಗ ರಾಜಕೀಯದ ಬಂಡವಾಳವೂ ಆಗಬಹುದು. ಆದರೆ, ಕತ್ತಲಲ್ಲೆ ಬದುಕುವವರಿಗೆ…..? ಅವರೆಲ್ಲಾ ಆರಿಸುವುದಾದರೂ ಏನನ್ನ, ಹಚ್ಚುವುದಾದರೂ ಏನನ್ನ? ಎಂಬ ಪ್ರಶ್ನೆಗೆ ಉತ್ತರಿಸುವವರಾರು?

ಹಂಸಲೇಖಾ ಅವರ ಜ್ಞಾನಬುತ್ತಿಯ ಹಾಡೊಂದು ಎದೆಯೊಳಗೆ ಹರಿದಾಡಿತು.

ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಿರೋ..
ಮನಸ್ಸಿನಿಂದ ಮನಸ್ಸನು ಬೆಳಗಬೇಕು ಮಾನವ
ಮೇಲು-ಕೀಳು ಭೇದ ನಿಲ್ಲಲೂ…
ಭೇದವಿಲ್ಲ ಬೆಂಕಿಗೆ ,ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ..ನೀ ತಿಳಿಯೋ….

‍ಲೇಖಕರು avadhi

April 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: