ಅನಾಮಿಕಾ @ ಹ್ಯಾಂಡ್ ಪೋಸ್ಟ್: ಎರೆಹೊಲದ ಬದುವಿನ ಮೇಲೆ ಒಂದು ನವಿಲುಗರಿ..

ಎಲ್ಲರೊಡನೆಯು ಇದ್ದು ನಾ ಒಂಟಿಯಾದಾಗ..

ತಿಳಿಗೇಡಿ ವಯಸ್ಸಿನಲ್ಲಿ ನಾ ಇಷ್ಟಪಡದೆ ಇದ್ದರು ನನ್ನ ಇಷ್ಟಪಟ್ಟು ಕರೆದವರ ಅಂಗಳದಲ್ಲಿ ಕೆಲಕಾಲ ನಿಂತಿದ್ದು ಬರುವಂತಿದ್ದರೆ ಬದುಕು ಎಷ್ಟು ಚೆಂದವಿರುತ್ತಿತ್ತು ಎಂದು ಕನಸುವಾಗ ಅಸ್ತು ದೇವತೆಗಳು ತಥಾಸ್ತು ಎಂದರೆಂದು ಕಾಣುತ್ತದೆ.

ಬಂದ ದಾರಿಯನ್ನೊಮ್ಮೆ ಹಿಂದಿರುಗಿ ನೋಡಿದರೆ, ಸುಮ್ಮನೆ ಭೇಟಿಯಾದ ಬಾಲ್ಯಸ್ನೇಹಿತನ ಗೆಳೆಯರು, ಆಪ್ತ ಸಮಾರಂಭದಲ್ಲಿ ಕಲೆತ ಕಣ್ಣುಗಳು, ನಡುರಾತ್ರಿಯ ಸಾಂಗತ್ಯಕ್ಕೆ ಒದಗಿ ಬಂದ ಭವವಿಧುರರು -ಎಷ್ಟೆಲ್ಲ ಹೃದಯಗಳನ್ನು ಬೈಪಾಸ್ ಮಾಡಿ ಬಂದಿದ್ದೇನೆ ಎಂದು ಗಾಬರಿಯಾಗುತ್ತದೆ.

ಬಿಟ್ಟು ಬಂದ ಅಷ್ಟು ಜನರಲ್ಲಿ ಒಬ್ಬ ಅಚಾನಕ್ ಆಗಿ ಸಿಕ್ಕಾಗ, “ಅಕಸ್ಮಾತ್ ಆಗಿ ಇವತ್ತು ನಿನ್ನನ್ನು ಫ್ಲೈಟಿನಲ್ಲಿ ನೋಡಿದೆ. ಮತ್ತೆ ನೀನು ಒಂಟಿ ಅನಿಸಿತು. ಆಮೇಲೆ ನೋಡಿದರೆ Lost & Foundನ ಕೌಂಟರಿನಲ್ಲಿ ನಿಂತಿದ್ದೆ. ಕಳೆದುಕೊಳ್ಳುವ ಚಟ ನಿನ್ನ ಇನ್ನು ಬಿಟ್ಟಿಲ್ಲವೆ ಹಾಗಾದರೆ?” ಎಂದು ಕೇಳಿದ್ದ.

ಅನಿರೀಕ್ಷಿತ ಒಲವಿನೆಡೆಗೆ ಕನ್ನಡಕ ಇಲ್ಲದೆಯು ನಾಲ್ಕು ಕಂಗಳ ನಿರೀಕ್ಷೆ ನನ್ನದು. ಹೀಗೊಂದು ಸಂವೇದನೆ ಇಲ್ಲದೆ ಬದುಕುವುದೆಂದರೆ ಮೈಮನಸ್ಸಿಗೆ ಕ್ಷಾಮ ಆವರಿಸಿ ಬಿಡುತ್ತದೆ. ಇಂದೆಂಥ ಹುಚ್ಚು ಎಂದೆನಿಸಿದರು ನನಗೆ ಹೀಗಲ್ಲದೆ ಬೇರೆ ಥರ ಇರಲು ಬರುವುದಿಲ್ಲ.

ನಿಶ್ಚಿಂತೆಯಿಂದ ಆಕಾಶದಲ್ಲಿ ಹಾರಬಲ್ಲ ಹಕ್ಕಿಗೆ ಬೇಲಿ ಹಾರುವುದು ಎಷ್ಟು ದುಗುಡ ಮತ್ತು ಸಂಕೋಚದ ಸಂಗತಿಯೊ, ಅಷ್ಟೆ ಸಂತೃಪ್ತಿಯ ವಿಷಯವೂ ಹೌದು. ಕಳೆದ ವರ್ಷ ಡಿಸೆಂಬರಿನ ಇಳಿಸಂಜೆಯ ಚಳಿಯಲ್ಲಿ ಬೆಚ್ಚನೆಯ ಅನುಭವಕ್ಕಾಗಿ ಹೊಸಿಲು ದಾಟಿದವಳಿಗೆ ಅವನು ಸಿಕ್ಕಿದ್ದ.

ಜೀವದಿಂದ ಜೀವಕ್ಕೆ ಬದಲಾದಾಗಲೆಲ್ಲ… ಛೇ, ಸ್ವಲ್ಪ ದಿನ ರೈತನೊಬ್ಬನ ಸಖಿಯಾಗಿರಬೇಕು ಎಂದುಕೊಳ್ಳುತ್ತಿದ್ದುದು ಅಂದು ಹೆದ್ದಾರಿ ಪಕ್ಕದ ಕಾಫಿ ಡೇನಲ್ಲಿ ಈಡೇರಿತ್ತು. ಕೈಯ್ಯಲ್ಲಿ ಗತದ ಮಣ್ಣು, ಭವಿಷ್ಯದ ಬೀಜ ಹಿಡಿದು. ನಿದ್ದೆ, ಎಚ್ಚರದ ನಡುವೆ ಬದುಕುವ ರೈತಾಪಿ ಮನೆಯಲ್ಲೆ ಹುಟ್ಟಿ ಬೆಳೆದಿದ್ದು. ಆದರೂ ಕ್ಯಾಪುಚಿನೊ ಸ್ವಾದಿಸುವ ಕೃಷಿಕನನ್ನು ಅಷ್ಟೊತ್ತಿಗೆ ಅಲ್ಲಿ ನೋಡಿದ್ದು ತುಸು ಹೆಚ್ಚೆ ಥ್ರಿಲ್ ಮೂಡಿಸಿತ್ತು. ನೀನು ಜೊತೆಗಿದ್ದರೆ ಅದೆ ದೊಡ್ಡ ಇಳುವರಿ ಎಂದವನ ಹೊಲ, ಮನೆಯ ಖಾಲಿತನವನ್ನು ನಾನು ತುಂಬಿದೆ. ಗಂಡು ತಾನು ಇಚ್ಛಿಸಿದ ಹೆಣ್ಣನ್ನು ಪೂರ್ತಿಯಾಗಿ ಆವಾಹಿಸಿಕೊಳ್ಳುವಂತೆ ನನ್ನನ್ನು ಆವರಿಸಿದ.

‘ಮಂಗನ ಬ್ಯಾಟೆ’ಯಲ್ಲು ಸಿಕ್ಕಿರದ ನವಿಲಿನ ಬಗೆಗಿನ ಅಪೂರ್ವ ಮಾಹಿತಿಯೊಂದು ನನಗೆ ದೊರಕಿದ್ದೆ ಅವನ ಹೊಲದಲ್ಲಿ. ಮೊಟ್ಟೆಗೆ ಕಾವು ಕೊಡುವುದರಿಂದ ಹಿಡಿದು, ಮರಿಗಳಿಗೆ ಅತ್ಯಂತ ಅಗತ್ಯವಾದ ಪ್ರೀತಿಯನ್ನು ನೀಡಿ ಕಾಪಾಡುವ ತಾಯಿ ನವಿಲಿನ ಅಕ್ಕರೆಯನ್ನು ಕಂಡೆ. ಈ ಕಾಣ್ಕೆಗೆ ವಿರುದ್ಧವಾದ, ಮರಿಗಳ ನೆತ್ತಿಯ ಮೇಲಿನ ಜುಟ್ಟು ಒಡೆಯುವಾಗ ಮಕ್ಕಳಿಗೆ ಮೊದಲ ಹಲ್ಲುಗಳೊಡೆಯುವಾಗ ಆಗುವಷ್ಟೆ ನೋವಾಗಿ ಕೆಲವು ಮರಿಹಕ್ಕಿಗಳು ಅಸುನೀಗಿದ್ದನ್ನು ನೋಡಿದೆ. ಯಾವ ವಿಶ್ವವಿದ್ಯಾಲಯವು ನನಗೆ ನೀಡದ ಶಿಕ್ಷಣ ಇದು.

ಕಳೆದ ಬೇಸಿಗೆ ಶುರುವಿಗು ಮುನ್ನವೆ ಅವನೂರಿನ ಸುತ್ತಮುತ್ತ ಬರದ ಛಾಯೆ. ಹೀಗಾದರೆ ಎಂಭತ್ತು ಎಕರೆಗು ಮಿಕ್ಕಿದ ಭೂಮಿಯ ಹಸುರನ್ನು ಕನಿಷ್ಠ ಇದ್ದ ಹಾಗಾದರು ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಚಿಂತೆ ಸಹಜವಾಗಿ ಅವನನ್ನು ಅಸಹನೆಗೆ ನೂಕಿತು. ಪರಿಣಾಮ, ನನ್ನ ಆಸೆಗಳ ಪೂರೈಕೆಗಾಗಿ ಅವನ ಕಡೆ ನೋಡುವುದು ತಪ್ಪು. ಅವನು ದುಃಖದಲ್ಲಿದ್ದಾನೆ ನಾನು ಸಂಭ್ರಮ ಹಂಚಿಕೊಳ್ಳಬೇಕಿದೆ ಎನ್ನುವಂತಾಯಿತು.

ರಕ್ಷಣೆಯ ಭಾವ ಮೂಡಿದ ಮೇಲೆ ಒಬ್ಬರಿಂದ ಇನ್ನೊಬ್ಬರು ಬಿಡುಗಡೆ ಬಯಸುವುದಿಲ್ಲ. ಸುಖ ಚಲಾವಣೆಯಲ್ಲಿರುತ್ತದೆ ಎಂಬ ಖಾತರಿ ಇದ್ದರೆ ಸಂಬಂಧಗಳು ಹೇಗೆ ಜಡವಾಗುತ್ತವೆ ಎನ್ನುವುದನ್ನು ಬಲ್ಲ ನಾನು ಅಲ್ಲಿಂದ ನಿರ್ಗಮಿಸುತ್ತೇನೆ ಎಂದೆ. ಇಡಿ ರಾತ್ರಿ ಅವನು ಸಂಕಟವೆ ತಾನಾಗಿ ಉರಿದಂತೆ ಉರಿದ. ಹೊರಡುವ ಮುನ್ನ ಎರಡೂ ಕೈಯಲ್ಲಿ ಮುಖ ಹಿಡಿದು ಹಣೆಗೆ ಮುತ್ತಿಡುವಾಗ ಕಣ್ಣ ರೆಪ್ಪೆಗೆ ಸೋಕಿದ ಆ ಸುಟ್ಟುಸಿರಿನಲ್ಲಿ ಅವನ ಮುಂದಿನ ಬದುಕಿನ ಒಲವ ಬಡತನದ ಕತೆ ಇತ್ತು. ನನಗದು ಸಂಜೀವಿನಿ ಸ್ಪರ್ಶವಾಗಿತ್ತು.

ಕೃಷಿ, ಮಣ್ತನ ಬದುಕಿನ ಅವಿಭಾಜ್ಯ ಅಂಗಗಳೆಂದು ನಂಬಿದವನ ಕಣ್ಣ ಬೆಳಕು ನಂದದಂತೆ ನೋಡಿಕೊಳ್ಳುವುದು ನನ್ನ ಪಾಲಿನ ಕರ್ತವ್ಯವು ಆಗಿತ್ತಲ್ಲವೆ? ಅಜ್ಜಿ, ದೊಡ್ಡವ್ವ, ಚಿಗವ್ವಂದಿರು ಎಷ್ಟೆಲ್ಲ ವರ್ಷಗಳಿಂದ ಎಲ್ಲ ಕಷ್ಟ, ನೋವುಗಳ ನಡುವೆಯು ರೈತರ ಸಹಗಾರ್ತಿಯರಾಗಿ ಚೆಂದದ ಬದುಕನ್ನು ಬದುಕಿದ್ದು ಕಣ್ಮುಂದೆ ಇದ್ದರು ನನ್ನ ಯೋಚನೆಯ ಹದ ತಪ್ಪಿದ್ದು ಎಲ್ಲಿ? ಎದೆಯೊಳಗನೆ ಕಡೆದು ಆತ್ಮವನೆ ಕೊರೆಕೊರೆದು ಬಿರುಬಿಸಿಲಲ್ಲಿ ಕೃಷಿ ಮಾಡುತ್ತಲೆ ಮನವ ಮರಳು ಮಾಡಿದವನ ಮೋಡಿಗೆ, ಮಣ್ಣಿನಿಂದ ಗಂಧ ತರುತ್ತಿದ್ದ ತಂತ್ರಕ್ಕೆ ಈಗಲೂ ಮಣಿ ಎಂದು ತುಡಿವ ಎದೆಯಿಂದ ಬಿಸಿ ಉಸಿರು ಹೊಮ್ಮುತ್ತದೆ.

ಮೊನ್ನೆ ಹೊಲಕ್ಕೆ ನೀರು ಹಾಯಿಸುತ್ತಿದ್ದೆ. ಮಧ್ಯಾಹ್ನ ಬಹಳ ಕಠೋರವಾಗಿ ಸುಡುತಿದೆ ಎನಿಸಿ ಹಿಂದೆ ನಾನು ಬಿಟ್ಟು ಹೋದ ಮನೆಯ ಬಾಗಿಲು ತೆರೆದು ಒಳಗೆ ಕೂತೆ. ಇಂತದ್ದೆ ಉರಿಬಿಸಿಲಲ್ಲಿ ಒಮ್ಮೆ ಅವನು ಹನಿ ನೀರಾವರಿ ನಿರ್ವಹಣೆ ಬಗ್ಗೆ ತಿಳಿಸಿಕೊಡುತ್ತಿದ್ದಾಗ ನಾನು ಇದೆಲ್ಲ ಗೊತ್ತು ಎನ್ನುವಂತೆ ವರ್ತಿಸಿದ್ದೆ. ಪರಿಣಾಮ ಆ ಸರಣಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು. ಅದೊಂದೆ ಅಲ್ಲ, ಅವನು ಹೊಲವನ್ನು ವ್ಯವಸ್ಥಿತಗೊಳಿಸಲು ಮಾಡುವ ಪ್ರಯತ್ನಗಳನ್ನೆಲ್ಲ ಹಾಳುಗೆಡಹುವುದೊಂದೆ ನನ್ನ ಕೆಲಸ ಎನ್ನುವಂತೆ ವರ್ತಿಸುತ್ತಿದ್ದ ನನ್ನ ದಡ್ಡತನವನ್ನು ತಮಾಷೆಯಾಗಿ ಸ್ವೀಕರಿಸಿದವನ ವಾತ್ಸಲ್ಯ ನೆನಪಾದರೆ ಮನದ ತುಂಬ ಚಿಗುರು ಬೇವಿನ ಮರಗಳ ಹೂ ವಾಸನೆ.

ಮನೆಯ ಕಿಟಕಿಯಿಂದ ಆಗಸ ನನ್ನ ಕೋಣೆಯೊಳಗೆ ಬಂದ ಹೊತ್ತಲ್ಲಿ ಹೊಸ ಭಾವನೆಗಳಿಗಾಗಿ ಹುಡುಕಾಡುತ್ತಿದ್ದೆ. ದೂರವಾದ ನಂತರ ಹೊಲದ ಮನೆ ವಿಳಾಸಕ್ಕೆ ಅವನು ಬರೆದ ಪತ್ರ! ಒಡೆದು ಓದುವ ಬೆರಳುಗಳಿಲ್ಲದೆ ಅನಾಥವಾಗಿ ಕೂತಿತ್ತು.

ಅದರಲ್ಲಿ ಇದ್ದಿದ್ದೆ, ಮುಂದೆ ಇಲ್ಲಿರುವುದು..

ಎಲ್ಲರೊಡನೆಯೆ ಇದ್ದು ಒಂಟಿಯಾಗಿರುವುದನ್ನು ನೀನಲ್ಲದೆ ಇನ್ನಾರು ಇಷ್ಟು ಚೆನ್ನಾಗಿ ಹೇಳಿಕೊಡಲಾರರು. ನೀನು ಕಲಿಸಿದ, ಮಣ್ಣು ಎಂಬುದನ್ನು ಮುಂದಿನ ತಲೆಮಾರಿಗೆ ಕೂಡಿಡುವ ಆಸ್ತಿಯಾಗಿಸುವ ಹಂಬಲಕ್ಕೆ ಬೀಳಬೇಡ. ಅದು ಜೀವಗಳನ್ನು ಚಿಗುರಿಸುವ, ಪೊರೆವ ಚೈತನ್ಯದಾಯಿ. ಅದು ನಿನಗೆ ಗೊತ್ತಿದೆ. ಅನೇಕರಿಗೆ ಇದು ಗೊತ್ತಿಲ್ಲ. ಮಣ್ಣಿನ ಕಣ್ಣು ಇಲ್ಲದವರು ನಮ್ಮ ನಡುವೆ ಇದ್ದಾರೆ. ಅವರಿಗೆ ಸುತ್ತಣ ಜೀವ ಜಗತ್ತಿನ ದನಿಗಳು ಕೇಳಲಾರವು. ಸ್ವತಃ ಅವರ ಎದೆ ಮಿಡಿತ ಸಹ ಅರಿವಿಗೆ ಬರದು. ಮಣ್ಣಿನೊಂದಿಗೆ ನಮ್ಮ ಸಂಪರ್ಕ ನಮ್ಮ ಭಾವಲೋಕವನ್ನು, ಅಂತರಂಗದ ಸಂಪತ್ತನ್ನು ಎಲ್ಲ ಕಲೆ ಶೋಧನೆಗಳ ಮೂಲದ್ರವ್ಯವಾದ ಅಂತಃಕರಣ ಬೆಳೆಸುತ್ತದೆ, ವಿಸ್ತರಿಸುತ್ತದೆ. ಇದರ ಅರಿವಿಲ್ಲದವರಿಂದ ಈ ಲೋಕದದಲ್ಲಿ ಹೊಸದೇನು ಸೃಷ್ಟಿಯಾಗಲಾರದು. ಏಕೆಂದರೆ ಯಶಸ್ಸು ಯಾವುದಾದರೂ, ಎಷ್ಟೇ ದೊಡ್ಡದಿದ್ದರೂ… ಕೊನೆಗೆ ಉಳಿಯುವುದು ಬಾಳಬೇಕಾದ ನೆಲದ ಮೇಲಿನ ಬದುಕೇ ಎನ್ನುವ ಪಾಠವನ್ನು ನಾನು ಇಂದು ಎಲ್ಲರಿಗು ಕಲಿಸುತ್ತಿದ್ದೇನೆ.

ಬರ, ಮಳೆ, ಒಲವು ಮೂರರ ಕೆಲಸವೆ ಬರೋದು ಹೋಗೋದು. ಸುಭಿಕ್ಷೆ ತರುವ ಬದಲು ಮೂರು ಮತ್ತೆ ವಾಪಸ್ ಬರೋದು ಆದ ಅನಾಹುತದ ಪರಿಶೀಲನೆಗೆ ಮಾತ್ರ. ಆವತ್ತು ಅಚಾನಕ್ ಆಗಿ ನನ್ನ ಕೈ ಹಿಡಿದು ಕಿವಿಯಲ್ಲಿ ಪಿಸುಗುಟ್ಟಿದೆ, ‘ಎಡಗಡೆ ಒಂದು ಸಣ್ಣ ಗಲ್ಲಿ ಇದೆ ಬಾ, ಓಡಿಹೋಗೋಣ…’ ನೀನು ನನಗೆ ಅಪರಿಚಿತಳು, ಸಮಜಾಯಿಷಿ ಕೇಳುವ ಮೊದಲೆ ನನ್ನ ಕೂಗಿ ಗದ್ದಲದಿಂದ ಎಳೆದುಕೊಂಡುಬಿಟ್ಟೆ. ಕೈ ಜಾರಿ ಹೋಗಿದೆ ಇವತ್ತು, ಆದರೂ… ಮೊದಲ ಬಾರಿ ಎದೆಬಡಿತ ನಿಂತ ನೋವು ಸಾಕಷ್ಟು ಹಿತವಾಗಿಯೆ ಇತ್ತು. ಇತಿಹಾಸದ ಪುಟ ಪುಟದಲ್ಲು ಭಾಗ್ಯವಂತರದೆ ಹಾಡು. ಈ ನಿರ್ಭಾಗ್ಯ ರೈತನ ಹೆಸರಲ್ಲಿ, ಧ್ವಜ ಒಮ್ಮೆಯಾದರು ಅರ್ಧ ಹಾರಲಿ. ಮುಕ್ತಿಯ ದಾರಿಯಲ್ಲಿ ಹೊತ್ತು ಒಯ್ಯುವುದು ನಿಷಿದ್ಧವಂತೆ. ಎಲ್ಲ ಕಳಚಿದ್ದೇನೆ. ಒಮ್ಮೆ ಮುಟ್ಟಿ ಸಾಬೀತು ಮಾಡಲಾದರೂ ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತಪೃಥ್ವಿಯಲ್ಲಿ…

ಮುಂದಿನ ಅಕ್ಷರಗಳು ಕಾಣದಷ್ಟು ಕಣ್ಣು ಮಂಜಾಗಿದ್ದಕ್ಕೆ ಎದ್ದು ಹೊರಗೆ ಬಂದೆ. ಎರೆಹೊಲದ ಬದುವಿನ ಮೇಲೆ ಒಂದೆ ಒಂದು ನವಿಲುಗರಿ ನನ್ನನ್ನು ಸಮಾಧಾನಿಸಲು ಎನ್ನುವಂತೆ ಕಾಯುತ್ತಿತ್ತು!

‍ಲೇಖಕರು avadhi

April 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: