ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಚಹಾದ ಬಟ್ಟಲು ಮತ್ತು ನೀನು

ಸುಧಾ ಆಡುಕಳ

ಒಂದು ಬಿಸಿಯಾದ ಚಹದ ಬಟ್ಟಲು
ಸೋತು ಕಡಲಿಗಿಳಿವ ಹವಣಿಕೆಯಲ್ಲಿರುವ ಸೂರ್ಯ
ನೂರಾರು ಭಾವಗಳ ತಾಕಲಾಟ ಎದೆಯೊಳಗೆ
ಕ್ಷಮಿಸು, ವಿದಾಯ ಹೇಳುವುದನ್ನೇ ಮರೆತೆ!

ಕುದಿಯುವ ಚಹಾವನ್ನು ತುಟಿಗಿಟ್ಟು ಹೀರುವಾಗ
ಅಬ್ಬಾ! ಅಷ್ಟು ಬಿಸಿಯನ್ನು ಹೇಗೆ ಹೀರುವಿ?
ಮುಗ್ದವಾಗಿ ಪ್ರಶ್ನೆ ಕೇಳುವವನಿಗೆ ತಿಳಿದಿಲ್ಲ
ನೀ ನನ್ನೊಳಗೆ ಹಚ್ಚಿದ ವಿರಹದ ಉರಿ!

ನಿಮಗೊಬ್ಬರಿಗೆಂದು ಚಹಾ ಮಾಡಿಕೊಳ್ಳುವಿರಾ?
ಅಷ್ಟು ತಲುಬೇನು ಚಹಾ ಕುಡಿಯಲು?
ಬರಿಯ ಚಹಾದ ವಿಷಯವಲ್ಲ ಅದು
ಚಹಾದೊಂದಿಗೆ ನಿನ್ನ ನೆನಪುಗಳನ್ನೂ ಗುಟುಕರಿಸುವ ಸುಖ!

ಸಕ್ಕರೆಯೇ ಬೇಕೆಂದೇನೂ ಇಲ್ಲ ಚಹಾ ರುಚಿಗಟ್ಟಲು
ನಿನ್ನ ಚಹಾದ ಬಟ್ಟಲಿನಿಂದ ಕದ್ದ
ಆ ಕೊನೆಯ ಚಹಾದ ಹನಿ
ಸಕ್ಕರೆಯಿಲ್ಲದೆಯೂ ಸವಿಯಾಗಿತ್ತು

ಏನೂ ಕೆಲಸವಿಲ್ಲದ ಒಂದು ಸಂಜೆ
ಮತ್ತೆ ನನ್ನ ನಿನ್ನ ಭೇಟಿಯಾದರೆ ಏನಾಗುತ್ತದೆ?
ಬಿಸಿ ಬಿಸಿ ಚಹಾದ ಬಟ್ಟಲು ಹೊಗೆಯಾಡುತ್ತದೆ
ಮತ್ತೆ ಹೊಸದೇನೋ ಹುಟ್ಟಿಕೊಳ್ಳುತ್ತದೆ

 

‍ಲೇಖಕರು avadhi

10 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading