ಐ ಕಾಂಟ್ ಬ್ರೀದ್.. ವ್ಯವಸ್ಥೆಯ ಸಂಕೇತ

ಸತೀಶ ಕುಲಕರ್ಣಿ

ಕಾಲ ಕಾಲಕ್ಕೆ ಹೊಸ ನೀರಿನಂತೆ, ಹೊಸ ಹರಿವಿನಂತೆ ಕಾವ್ಯದಲ್ಲಿಯೂ ಕೂಡ ಹೊಸ ಹೊಸ ಧ್ವನಿಗಳು ಬರುತ್ತವೆ. ಇಂತಹದೊಂದು ಮಾತಿಗೆ ಸಾಕ್ಷಿ : ಐ ಕಾಂಟ್ ಬ್ರೀದ್ – ಕವನ ಸಂಕಲನ. ಕೊಪ್ಪಳದ ಯುವ ಕವಿ ಮಹೇಶ ಬಳ್ಳಾರಿಯವರದು. ೨೦೧೫ ರಲ್ಲಿ ಎಡವಿ ಬಿದ್ದ ದೇವರು ಎಂಬ ಸಂಕಲನದ ನಂತರ ಬಂದುದು.

ಐ ಕಾಂಟ್ ಬ್ರೀದ್
ಯು ಕಾಂಟ್
ಹಿ ಕಾಂಟ್, ಶಿ ಕಾಂಟ್
ಇಟ್ ಕಾಂಟ್
ಒನ್ಲಿ
ದೇ ಕ್ಯಾನ್

ಸೂಚ್ಯವಾಗಿ, ಅತ್ಯಂತ ಸೂಕ್ಷ್ಮವಾಗಿ ದಬ್ಬಾಳಿಕೆಯ ಪದರುಗಳನ್ನು ಬಿಚ್ಚಿ ತೋರಿಸುವ ಪ್ಲಾಯ್ಡ್ ಎಂಬ ಕರಿಯನ ಉಸಿರುಗಟ್ಟಿದ ಸಾಲುಗಳಿವು. (ಜಗತ್ತೇ ಬಲ್ಲಂತೆ ಅಮೇರಿಕಾ ಪೊಲೀಸರ ವಶದಲ್ಲಿರುವಾಗ ಸಾವಿಗೀಡಾದ ಕಪ್ಪು ವರ್ಣೀಯನೀತ. ಮೇ ೨೫ (೨೦೨೦) ಬಿಳಿ ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್ ಎಂಬುವವ ಒಂಭತ್ತು ನಿಮಿಷಗಳ ಕಾಲ ಕತ್ತನ್ನು ಅದುಮಿದ್ದ.)

ಇಡೀ ಸಂಕಲನದ ಹೆಚುಗಾರಿಕೆ ಇರುವುದೇ ಇಂತಹ ಒಂದು ನುಡಿಗಟ್ಟುಗಳ ಪದ ಭಾವದ ಮೂಲಕ ಕಾವ್ಯ ಕಟ್ಟಿದ ರೀತಿಯಲ್ಲಿ. ಇಂದಿನ ಹಲವು ಸಂಕಷ್ಟಗಳಿಗೆ ಅಡರಿರುವ ದಾಳಿಗಳಿಗೆ ಮಹೇಶ ಕಾವ್ಯ ದನಿ ಕೊಟ್ಟಿದೆ. ಇವೆಲ್ಲ ಇಂದಿನ ಕವಿತೆಗಳು. ವರ್ತಮಾನದ ಉರಿಯಲ್ಲಿ ಸುಡುವ ಸತ್ಯಗಳೇ ರೂಪಕದಲ್ಲಿ ಅನಾವರಣಗೊಂಡಿದೆ.

ಹೆಚ್ಚು ಹೀಚದೆ, ಅಸಹನೀಯ ದಮನವನ್ನು ಮುಚ್ಚಿಟ್ಟಿರುವ ತೀಕ್ಷ್ಣ ಒಳ ಸಣ್ಣಾಟಗಳು ‘ಐ ಕಾಂಟ್ ಬ್ರೀದ್‌’ದಲ್ಲಿ ಮುಖ ಮೈ ಪಡೆದಿವೆ. ವಸ್ತು ವೈವಿಧ್ಯತೆಯೇ ಸಂಕಲನದ ಮತ್ತೊಂದು ವಿಶೇಷ. ಒಟ್ಟಾರೆ ಆಶಯ ಒಂದೇಯಾಗಿದೆ. ಅಸಮಸ್ಥಿತಿ ಸಹಿಸಲಾಗದ ತಾಕಲಾಟಗಳ ಹೊತ್ತ ಕವಿತೆಗಳಿವು.

ಸ್ವರೋಗ ಸಾಮ್ರಾಜ್ಯ, ಪಂಚ ವರುಷದ ವೈದ್ಯ, ನಾವೀಗ ಬೇರುಗಳ ಮಗ್ಗಲು ನಿಂತಿದ್ದೇವೆ, ಹೌದು ಎಷ್ಟು ದಿನ, ಚಂದ್ರ ಹುಡುಗಿಯ ಹೊಟ್ಟೆ ಸೇರಬೇಕಾಗಿದೆ, ಬಲಿ ಪೀಠದ ಶೋಕ ಚರಮಗೀತೆ ಹಾಡಿತ್ತು, ತಾಳ ಧಾರಿಗಳಾಗಿ ಗಾಳದ ಮೀನುಗಳಾಗಿ, ಬಲ ದಟ್ಟಾಯಿತು.. ಎಡ ವಟ್ಟಾಯಿತಲೆ ಪರಾಕ, ಗೋಳು ಮತ್ತು ಗೋಳ ಜೊತೆಯಾಗಿ ಬಿಕ್ಕುತ್ತಿವೆ. ಇಂತಹ ಚಿಕ್ಕ ಚಿಕ್ಕ ಸಾಲುಗಳು ಇಲ್ಲಿಯ ಕವಿತೆಗಳಲ್ಲಿ ಸಿಗುತ್ತವೆ. ಇಷ್ಟು ಓದಿದರೆ ಸಾಕು ‘ಐ ಕಾಂಟ್ ಬ್ರೀದ್‌’ ಸಂಕಲನದ ನಾಡಿ ಬಡಿತ ತಿಳಿಯಲು.

ಇಂದು ಅನೇಕರು ಬರೆಯುತ್ತಿದ್ದಾರೆ, ಓದುಗರು ಅವರೇ ಆಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಕವಿತೆ ದಾಟಬೇಕಾದ ಅಗ್ನಿ ಕುಂಡ ನಮ್ಮೆದರು ಇದೆ. ಒಂದಿಷ್ಟು ಸಂಯಮದ ಓದು, ಅಂತಹ ಓದನ್ನು ಕಾವ್ಯ ಪ್ರೀಯರ ಎದೆಗೆ ದಾಟಿಸುವ ಕೆಲಸವಾಗಬೇಕಿದೆ. ‘ಐ ಕಾಂಟ್ ಬ್ರೀದ್‌’ – ಸದ್ಯ ಈ ಅರ್ಹತೆಗೆ ಪಾತ್ರವಾಗಬಹುದಾದ ಸಂಕಲನ.

ಕಲಾತ್ಮಕತೆಯು ಲೋಪವಾಗದಂತೆ ‘ಈಜಮ್’ ಗಳಲ್ಲಿ ಕರಗಿಸದ ಕಾವ್ಯ ಬೇಕಿದೆ. ಈ ಹಾದಿಯಲ್ಲಿ ಅನೇಕ ಹೊಸಬರು ಬರೆಯುತ್ತಿದ್ದಾರೆ. ಗೊತ್ತಿಲ್ಲದಂತೆ ಟ್ರೆಂಡೊಂದು ಸೆಟ್ಟಾಗುತ್ತಿದೆ. ಇತ್ತೀಚೆಗೆ ಕವಿ ಅಲ್ಲಾ ಗಿರಿರಾಜರ ನೋಟು ಮುದ್ರಿಸ ಬಹುದು, ರೊಟ್ಟಿ ಸೃಷ್ಟಿಸಲಾಗುವುದಿಲ್ಲ. ಸಂಕಲನ ನಮಗೊಂದು ದೊಡ್ಡ ಮಾದರಿ. ಚಿಂತನೆಗಳು ನವ ಎಚ್ಚರದಿಂದ ಕಾವ್ಯದಲ್ಲಿ ಬಳಕೆಯಾಗುತ್ತಿವೆ. ಹತ್ತಿಕ್ಕಿರು, ಹಕೀಕತ್ತನ್ನು ಯಾವ ಮುಲಾಜಿಲ್ಲದೆ ಅಭಿವ್ಯಕ್ತಿಸುವ ಕಾವ್ಯ ಮಾರ್ಗವೊಂದು ಸೃಷ್ಟಿಯಾಗುತ್ತಿವೆ.

ನಮ್ಮೆದೆಯ ನೋವಿನ
ಹಾಡುಗಳಿಗೆ
ಅಸಂಖ್ಯಾತ ಮಡವುಗಳಿವೆ
ಹೌದು, ಎಷ್ಟು ದಿನ – ಎಂಬ ಕವಿತೆಯ ಮೂರು ಸಾಲುಗಳು ಮಡುವುಗಟ್ಟಿದ ನೋವು ಮತ್ತದನ್ನು ನಿವೇದಿಸುವ ಸಂವೇದನೆಗಳಿಲ್ಲಿವೆ.
ಕೆಲವರ ಲೋಕ ಮರುಳಾಯಿತು
ಕೆಲವರ ಲೋಕ ಉರುಳಾಯಿತಲೇ ಪರಾಕ್
ಯಾರೋ ನುಡಿದಂತಾಯಿತು

ರಾಜ ಬಂದ ಕವಿತೆಯಲ್ಲಿ ಮೇಲಿನಂತೆ ಹೇಳುವ ಕವಿ, ಬಲ ದಟ್ಟಾಯಿತು, ಎಡ ವಟ್ಟಾಯಿತು ಪರಾಕ್ ಅನ್ನುತ್ತ ಕವಿ ಮಹೇಶ, ಬಣ್ಣ ಮತ್ತು ಜಾತಿಗಳ ಮಾರುಕಟ್ಟೆಯಲ್ಲಿ/ಮನುಷ್ಯತ್ವ ಮಾರಟ್ಟಕ್ಕಿದೆ. ಇಲ್ಲಿ ಬಸವ ಗಡಿಪಾರಾದ/ಅಲ್ಲಿ ಲಿಂಕನ್ ಗುಂಡಿಗೆ ಬಲಿಯಾದ – ಐ ಕಾಂಟ್ ಬ್ರೀದ ಕವಿತೆ ಹೀಗೆ ನುಡಿಯುತ್ತದೆ.

ಒಂದು ಕವಿತೆಯಲ್ಲಿ ಎಷ್ಟು ಹೇಳಬೇಕು, ಎಷ್ಟು ಶಬ್ದಗಳ ಬಳಸಬೇಕು ಎಂಬುದರ ಅರಿವು ಕವಿ ಮಹೇಶರಿಗಿದೆ. ಪ್ರತಿರೋಧದ ನೆಲೆಯಲ್ಲಿಯೆ ಚಲಿಸುವ ಚೂರು ಚುಟುಕು ಸಾಲುಗಳ ಕಾವ್ಯ, ಶಬ್ದ ಹೆಣಿಕೆ ಮೊನಚ್ಚುಗಳು, ಗಮನಿಸಬಹುದಾದ ಅಂಶಗಳು.

ಕವಿತೆಯಂದರೆ
ಜೀಕಿದಷ್ಟು ಎತ್ತರೆತ್ತರ
ಸಿಗಲಾರದೇ ಉತ್ತರ..

ಇದು ಕವಿ ಕಂಡುಕೊಂಡ ಸತ್ಯ. ಇಲ್ಲಿಯ ಯಾವ ಕವಿತೆ ಓದಿದರೂ ಅಲ್ಲಿ ಭಾವ ವಿಚಾರಗಳ ಕುಸುರಿಯ ಅಚ್ಚು ಓದಿಗೆ ತಾಕುತ್ತವೆ. ಒಂದೆಡೆ ಮೌನವೂ ಮಹಾ ಕವಿತೆ ಅನ್ನುತ್ತಾರೆ.

ಧಗಿಸುವ ಬೆಂಕಿಯುಂಡೆಗಳಲ್ಲಿ
ದೇವರ ಹೆಸರಿನಲ್ಲಿ ಸಾಯಲು
ಸಾವಿರ ಸಂಖ್ಯ್ಯೆಯಲ್ಲಿ
ಸರದಿ ಸಾಲಿನಲ್ಲಿ ನಿಲ್ಲುತ್ತಾರೆ.
ನಶೆಯ ನಿಶೆಗೆ
ಬೆಂಕಿಯೇ ಬೆಳಕೆಂದು ತಿಳಿಯುತ್ತಾರೆ.
ಅಮಲು ಕವಿತೆಯ ಸಾಲುಗಳಿವು ಸದ್ಯ ಎಲ್ಲವನ್ನು ಬಿಚ್ಚಿಟ್ಟು ಬೆಳಕೇ ಬೆಂಕಿಯಾಗಬಾರದೆಂಬ ತಾತ್ಪರ್ಯದ್ದು.
ಮನವು ತಾಳ
ಮನವು ದಾಳ
ಮನವು ಆಳ
ಮನವು ಬೇತಾಳ
ಇಂತಹ ಪ್ರಬುದ್ಧ ಚಿಂತನೆಯಲ್ಲಿ ಐ ಕಾಂಟ ಬ್ರೀದ್ ಇಡೀ ವ್ಯವಸ್ಥೆಗೆ ಒಂದು ಸಂಕೇತವಾಗಿ ನಿಲ್ಲುತ್ತದೆ.

‍ಲೇಖಕರು Avadhi

March 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: