'ಏನೋ ನಿನ್ನ ಹೆಸರು' ಅಂದೆ. 'ಕಾಲಿಯಾ' ಅಂದ..


ಅಂಜಲಿ ರಾಮಣ್ಣ
ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ
 
“ಏನೋ ನಿನ್ನ ಹೆಸರು” ಅಂದೆ. “ಕಾಲಿಯಾ” ಅಂದ.
“ಬಾ ಇಲ್ಲಿ ಕೂತ್ಕೋ. . . ಎಷ್ಟು ವಯಸ್ಸು” ಕೇಳಿದೆ.
“ಹದಿನಾಕೋ ಹದಿನೈದೋ ಇರಬಹುದು” ಅಂದ.
ಕೇಳಿದ್ದಷ್ಟಕ್ಕೇ ಉತ್ತರ ಹೇಳುತ್ತಿದ್ದ ಹುಡುಗ ನಿರ್ಭಾವುಕನಾಗಿ ಕುಳಿತಿದ್ದ. ನೀರು ಕೊಟ್ಟೆ , ಗಟಗಟ ಕುಡಿದ. “ ಟೀ ಕುಡೀತೀಯಾ” ಎನ್ನುವ ಪ್ರಶ್ನೆ ಮುಗಿಯುವ ಮೊದಲೇ ಲೋಟ ಕೈಗೆತ್ತಿಕೊಂಡು ಸೊರ್ ಅಂತ ಒಂದು ಗುಟುಕು ಎಳೆದುಕೊಂಡ. ಮಾಸಲು ಕೆಂಪು ಬಣ್ಣದ ಬನಿಯನ್ ಕೆಳಗೆ ನೀಲಿ ಪ್ಯಾಂಟ್ ಹಾಕಿಕೊಂಡಿದ್ದ ಹುಡುಗನನ್ನು ಮತ್ತೆ ಕೇಳಿದೆ “ಏನೆಲ್ಲಾ ಮಾಡ್ತೀಯಾ?” “ನೀವು ಏನು ಹೇಳಿತೀರೋ ಅದೆಲ್ಲಾ ಮಾಡ್ತೀನಿ” ಎಂದು ಉತ್ತರಿಸಿದ ಸಣಕಲು ಬಾಲಕ. ನಿಮ್ಮ ನಮ್ಮ ಮನೆಯ ಮಕ್ಕಳು ಈ ವಯಸ್ಸಿನಲ್ಲಿ ಟಿವಿ ನೋಡುತ್ತಾ, ಮೊಬೈಲ್ ಫೋನ್ ಚುಚ್ಚುತ್ತಾ , ಕುಳಿತ ಕಡೆ ತುತ್ತು ತೆಗೆದುಕೊಳ್ಳುತ್ತಾರೆ.  ಆದರೆ ಕಾಲಿಯನಿಗೆ ಒಂದಿಪ್ಪತ್ತು ತರಹದ ಅಡುಗೆ ಮಾಡಲು ಬರುತ್ತೆ. ಮನೆ ಗುಡಿಸಿ ಸಾರಿಸಿ, ಧೂಳು ತೆಗೆದು, ಬಟ್ಟೇ ಒಗೆದು ಇಸ್ತ್ರೀ ಮಾಡಿ, ಶೂಝ್ ಪಾಲಿಷ್ ಮಾಡಿ, ಶೌಚಾಲಯ ಸ್ವಚ್ಛಗೊಳಿಸಲು ಬರುತ್ತೆ. ಆ ಊರಿನ ಅವನು ನಾಲು ವರ್ಷಗಳಿಂದ ಈ ಊರಿನ ಒಬ್ಬರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ. ಕಾಲಿಯಾ ಅವನಿಗೆ ಕೆಲಸದ ಮನೆಯ ಯಜಮಾನಿ ನೀಡಿದ್ದ ಹೆಸರು. ಅಪ್ಪ ಅಮ್ಮನನ್ನು ಮರೆತಿದ್ದ. ಅವರಿಟ್ಟ ಹೆಸರನ್ನು ಕೆರೆಯುವವರನ್ನು ಕಳೆದು ಕೊಂಡಿದ್ದ. ಈ ಹುಡುಗನನ್ನು ಭೇಟಿ ಆಗುವವರೆಗೂ ಅಪ್ರಾಯಸ್ಥ ಹೆಣ್ಣು ಮಕ್ಕಳನ್ನು ಮಾತ್ರ ಈ ರೀತಿಯ ಮನೆಗೆಲಸದಲ್ಲಿ ನೋಯುತ್ತಿರುತ್ತಾರೆ ಎಂದುಕೊಂಡಿದ್ದವಳಿಗೆ ಬೇರೆಯದೇ ಜಗತ್ತನ್ನು ತೋರಿಸಿದ್ದ ಕಾಲಿಯ. ಮಕ್ಕಳು ಎಂದರೆ ಲಿಂಗಬೇಧವಿಲ್ಲ ಒಂದು ಪರಿಮಳ ಅಷ್ಟೇ ಎನ್ನುವ ನನ್ನ ನಂಬಿಕೆಯನ್ನು ಬಲಗೊಳಿಸಿದ ಹುಡುಗ.

ಬಾಲ ಕಾರ್ಮಿಕ ಪದ್ಧತಿ ಬಲು ಕೆಟ್ಟದ್ದು. ಅದರ ನಿಷೇಧಕ್ಕಾಗಿ ಕಾನೂನು ಬಂದಿದೆ. ಅದಕ್ಕೇ ಗ್ಯಾರೇಜುಗಳಲ್ಲಿ, ಹೋಟೆಲು ಅಂಗಡಿಗಳಲ್ಲಿ ಬಾಲ ಕಾರ್ಮಿಕರು ಕಾಣುತ್ತಿಲ್ಲ ಎಂದುಕೊಂಡು ನಾಗರಿಕರಂತೆ ಬದುಕುತ್ತಿದ್ದೇವೆ. ಹೀಗೆ ಮನೆಗೆಲಸದ ಕ್ಷೇತ್ರಗಳಲ್ಲಿ ದುಡಿಯುತ್ತಾ, ಸವೆದುಹೋಗುತ್ತಾ ಬಾಲಕಾರ್ಮಿಕತೆ ಇನ್ನೂ ಜೀವಂತವಾಗಿದೆ ಎನ್ನುವ ಸತ್ಯವನ್ನು ಹೊರಹಾಕುತ್ತಿದ್ದರೂ  ’ ಅಯ್ಯೋ ಪಾಪ’ ಎನ್ನುವ ಉದ್ಗಾರದಿಂದ ಆಚೆಗೆ ಮಕ್ಕಳನ್ನು ಕೊಂಡೊಯ್ಯಲು ಸೋಲುತ್ತಿದ್ದೇವೆ.
ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ೧೮ ವರ್ಷದ ಒಳಗಿನ ಎಲ್ಲರನ್ನೂ ಮಕ್ಕಳು ಎಂದು ವ್ಯಾಖ್ಯಾನಿಸಿದ್ದರೂ ನಮ್ಮ ದೇಶ ಅದನ್ನು ಒಪ್ಪದೆಯೇ ಆಕ್ಷೇಪಣೆಯನ್ನು ಇಟ್ಟುಕೊಂಡೇ ಒಡಂಬಡಿಕೆಗೆ ಸಹಿ ಹಾಕಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಇದೇ ವಿಷಯಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿಯೂ ತನ್ನ ನಿಲುವಿಗೆ ಅಂಟಿಕೊಂಡಿತ್ತು ಭಾರತ. ಮಕ್ಕಳೆಡೆಗೆ ಕಾಳಜಿ ಹೊಂದಿದ್ದವರ ಒತ್ತಡಕ್ಕೆ ಮಣಿದು ಕೊನೆಗೂ ಮಕ್ಕಳ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ೧೯೮೬ ಇದಕ್ಕೆ ೨೦೧೬ರಲ್ಲಿ ತಿದ್ದುಪಡಿ ತಂದು ೧೮ ವರ್ಷದ ಒಳಗಿನ ಎಲ್ಲರೂ ಮಕ್ಕಳೇ ಅಂತಹ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವ ಹಾಗಿಲ್ಲ ಎನ್ನುವ ಕಾನೂನು ಜಾರಿಗೆ ಆಯ್ತು.
ಹದಿನಾಲ್ಕು ವರ್ಷ ವಯಸ್ಸಿನ ಒಳಗಿರುವ ಎಲ್ಲಾ ಮಕ್ಕಳಿಗೂ ಖಡ್ಡಾಯವಾಗಿ ಶಿಕ್ಷಣ ಕೊಡಬೇಕಿರುತ್ತದೆ. ೧೫ ರಿಂದ ೧೮ ವರ್ಷದ ಒಳಗಿನವರು ಯಾವುದೇ ಒತ್ತಡ ಇಲ್ಲದೆ ತೊಡಗಿ ಕೊಳ್ಳಬಹುದಾದ ಕೆಲವು ಕೆಲಸಗಳನ್ನು ಮತ್ತು ಮಾಡಲೇ ಬಾರದ ಕೆಲಸಗಳನ್ನು ಕಾನೂನು ಶೆಡ್ಯುಲ್ ಏ ಮತ್ತು ಶೆಡ್ಯೂಲ್ ಬಿ ಯಲ್ಲಿ ನಿಗಧಿ ಮಾಡಿದೆ. ನೀವು ಮಧ್ಯಾಹ್ನ ಊಟ ಮಾಡುವ ನಿಮ್ಮ ಆಫೀಸಿನ ಕ್ಯಾಂಟೀನ್ ಅಥವಾ ಊಟ ತರುವವರ ಜಾಗವನ್ನು ಒಮ್ಮೆ ಗಮನಿಸಿ ೧೫ ವರ್ಷ ಒಳಗಿನ ಮಕ್ಕಳು ಪಾತ್ರೆ ತೊಳೆಯುತ್ತಿರಬಹುದು. ನಿಮ್ಮ ಅಪಾರ್ಟ್ಮೆಂಟಿನ ಬಾಲ್ಕನಿಯಲ್ಲಿ ಸ್ವಲ್ಪ ಹೊತ್ತು ಕುಳಿತು ನೋಡಿ ಪಕ್ಕದ ಮನೆಯ ಬಾಲ್ಕನಿಯಲ್ಲಿ ಬಾಲಕಿಯೊಬ್ಬಳು ಬಟ್ಟೆ ಒಣಗಿ ಹಾಕುತ್ತಿರಬಹುದು. ನೀವುಗಳು ಇರುವ ಪಿಜಿ (ಪೇಯಿಂಗ್ ಗೆಸ್ಟ್) ಗಳಲ್ಲಿ  ಗಮನಿಸಿ ೧೨ ವರ್ಷದ ಹುಡುಗನೊಬ್ಬ ನೆಲ ಸಾರಿಸುತ್ತಿರಬಹುದು. ಗ್ಯಾರೇಜಿನಲ್ಲಿ, ಹೋಟೆಲಿನಲ್ಲಿ, ಮಾಲ್‌ಗಳಲ್ಲಿ ನಿಮಗೆ ಮಕ್ಕಳು ಕಾಣಿಸುತ್ತಿಲ್ಲ ಎಂದ ಮಾತ್ರಕ್ಕೆ ಬಾಲಕಾರ್ಮಿಕರು ಇಲ್ಲ ಅಂತಲ್ಲ. ಅಲ್ಲಿ ನೋಡಿ ನೀವು ಪೆಟ್ರೋಲ್ ಹಾಕಿಸಿಕೊಳ್ಳುವ ಬಂಕ್‍ನ ಪಕ್ಕದಲ್ಲಿ ಏಳುತ್ತಿರುವ ಕಟ್ಟಡಕ್ಕೆ ೧೫ ವರ್ಷದ ಹುಡಿಗಿಯೊಬ್ಬಳು ಇಟ್ಟಿಗೆಯನ್ನು ತಲೆ ಮೇಲೆ ಹೊತ್ತು ಸಾಗಿಸುತ್ತಿದ್ದಾಳೆ.
ಈ ರೀತಿ ಮಕ್ಕಳಿಂದ ಕೆಲಸ ಮಾಡಿಸುವವರು ಮಾತ್ರವಲ್ಲ ಅದನ್ನು ನೋಡಿ ಸುಮ್ಮನಾಗುವ, ಏನೂ ಮಾಡದೆ ಮುಂದೆ ಹೋಗುವ ನಾವೂ ಅಪರಾಧದಲ್ಲಿ ಪಾಲುದಾರರು. ಇಂತಹ ಸಂದರ್ಭದಲ್ಲಿ ೧೦೯೮ ಗೆ ಒಂದು ಕರೆ ಮಾಡಿದರೂ ಸಾಕು ನಾವುಗಳು ಒಂದು ತಲೆಮಾರಿಗೆ ಜೀವನ ಕಟ್ಟಿಕೊಡುತ್ತಾ ನಮ್ಮದೇ ನಾಳೆಗಳನ್ನು ಬೆಳಕಾಗಿಸಿಕೊಳ್ಳಬಹುದು. ಬನ್ನಿ, ಮಕ್ಕಳ ಲೋಕದ ಕಡೆಗೆ ತುಸುವೇ ಮಿಡಿಯೋಣ, ಹೆಚ್ಚಿನ ಮನುಷ್ಯರಾಗೋಣ.
#UNCRC30

‍ಲೇಖಕರು avadhi

November 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Dakshayani

    ಇದು ಎಲ್ಲರ ಕರ್ತವ್ಯವಾಗಿದೆ.ಆದರೆ ಎಷ್ಟೋ ಜನ ಬರೀ ಶಿಕ್ಷಕರದು ಅಂತಲೇ ನಿರ್ಲಕ್ಷ್ಯ ಮಾಡುತ್ತಾರೆ. ವಿಷಾದದ ಸಂಗತಿ ಅಂದರೆ ನಮ್ಮ ಶಾಲೆಯ ಕೆಲವು ಪೋಷಕರು ಇದಕ್ಕೆ ಪ್ರೋತ್ಸಾಹ ಕೊಡುತ್ತಾರೆ.ಅಂತರವನ್ನು convince ಮಾಡಿ ಮಕ್ಕಳನ್ನು ಮುಖ್ಯವಾಹಿನಿ ತರುವಷ್ಟರಲ್ಲಿ ಮತ್ತೊಂದು ಮಗು ಕೆಲಸಕ್ಕೆ ಹೋಗಲು ಪ್ರಾರಂಭಿಸಿರುತ್ತದೆ. ನಿಜವಾಗಲೂ ಅಂಥ ಮಕ್ಕಳು ದಿನಾಲೂ ಶಾಲೆಗೆ ಬಂದು ಕಲಿತರೆ ನಮ್ಮಂಥ ಎಷ್ಟೋ ಶಿಕ್ಷಕರಿಗೆ ಅತೀವವಾದ ಸಂತೋಷ ಆಗುತ್ತೆ. ಲೇಖನ ಮೌಲ್ಯಯುತವಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: