ಎಸ್ ಬಿ ಜೋಗೂರರ ’ನೀನ್ಯಾಕೋ ನಿನ್ನ ಹಂಗ್ಯಾಕೋ’

ಡಿಶೆಂಬರ್ 20-12-2014 ರಂದು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಬಿಡುಗಡೆಯಾಗಲಿರುವ ಡಾ.ಎಸ್.ಬಿ.ಜೋಗುರ ಅವರ ‘ನೀನ್ಯಾಕೊ ನಿನ್ನ ಹಂಗ್ಯಾಕೊ’ ಎನ್ನುವ ಕತಾಸಂಕಲನಕ್ಕೆ ಜಿ.ಪಿ.ಬಸವರಾಜು ಅವರು ಬರೆದ ಮುನ್ನುಡಿ ಮತ್ತು ಮುಖಪುಟ ’ಅವಧಿ’ ಓದುಗರಿಗಾಗಿ.

ಕತೆಯೆಂಬ ಕಾಮಧೇನುವಿನ ಧ್ಯಾನದಲ್ಲಿ

ಸೂಕ್ಷ್ಮ ಸಂವೇದನೆಯ ಕತೆಗಾರನಿಗೆ ತನ್ನ ಅನುಭವವೇ ಎಲ್ಲ ಸಾಮಗ್ರಿಯನ್ನು ಒದಗಿಸುತ್ತದೆ ಎಂಬುದು ನಿಜವಾದರೂ, ಗ್ರಾಮೀಣ ಹಿನ್ನೆಲೆಯಿಂದ ಬರುವ ಕತೆಗಾರನಿಗೆ ಇನ್ನೂ ಕೆಲವು ಅನುಕೂಲಗಳಿರುತ್ತವೆ. ಪ್ರಾದೇಶಿಕ ಭಾಷೆ ಎನ್ನುವುದು ಅವನ(ಳ) ನಾಲಗೆಯಲ್ಲಿಯೇ ನೆಲಸಿರುತ್ತದೆ. ಈ ಭಾಷೆಯ ಏರಿಳಿವು, ಗತಿ ಗಮ್ಯತೆ, ಕಸುವ, ಒಳಗೇ ಹರಿಯುವ ಸಂಗೀತ, ಪೆಡಸು, ನಯಗಾರಿಕೆ, ಮೋಹಕತೆ ಯಾವುದನ್ನೂ ಈ ಕತೆಗಾರರು ಹೊಸದಾಗಿ ಕಲಿಯಬೇಕಾಗಿರುವುದಿಲ್ಲ. ಅದೆಲ್ಲ ಅಂತರ್ಗತ ಸತ್ವದಂತೆ, ಅಪಾರ ನಿಧಿಯಂತೆ ಈ ಕತೆಗಾರರಲ್ಲಿರುತ್ತದೆ. ಈ ನಿಧಿಯನ್ನು ಬಳಸುವ ಕಲೆಗಾರಿಕೆಯನ್ನು ದಕ್ಕಿಸಿಕೊಂಡರೆ ಸಾಕು ಈ ಭಾಷೆಯ ಎಲ್ಲ ಸಂಪತ್ತೂ ಕತೆಗಾರರ ಕೈವಶವಾಗಿಬಿಡುತ್ತದೆ. ಹಾಗೆಯೇ ತಾನು ಬದುಕುವ ಅಥವಾ ಬದುಕಿದ ಪರಿಸರದಲ್ಲಿನ ನೂರಾರು ಸಂಗತಿಗಳು, ವ್ಯಕ್ತಿಗಳು, ಸಮಸ್ಯೆಗಳು, ಕಿಲಾಡಿತನಗಳು, ವಿನೋದಗಳು, ಅವುಗಳ ಸಂಕೀರ್ಣ ಸ್ವರೂಪ ಇತ್ಯಾದಿ ಎಲ್ಲವೂ ಈ ಕತೆಗಾರನ ಜೋಳಿಗೆಯಲ್ಲಿ ಸದಾ ಬುತ್ತಿಯಂತೆ ಇರುತ್ತವೆ. ಇದೆಲ್ಲವನ್ನು ಒಳಹೊಕ್ಕು ನೋಡುವ, ಬದುಕಿನ ಒಟ್ಟು ಸ್ವರೂಪವನ್ನು ಸ್ವೀಕರಿಸುತ್ತಲೇ ಬೇಡವಾದ ಕೇಡುಗಳನ್ನು ತೋರಿಸುತ್ತ, ಸಮಾಜದ ಸ್ವಾಸ್ಥ್ಯವನ್ನು ಕಾಯುವ ಅಂಶಗಳತ್ತ ಬೆರಳು ಮಾಡುತ್ತ ಸಾಮಥ್ರ್ಯವನ್ನು ಪಡೆದುಕೊಂಡ ಕತೆಗಾರ ಸಮಾಜದ ಮುನ್ನಡೆಗೆ ಉಪಯುಕ್ತವಾದ ಕೃತಿಗಳನ್ನು ಕಟ್ಟಿಕೊಡಬಹುದು; ತನ್ನ ಪರಂಪರೆಗೆ ಹೊಸದನ್ನು ಸೇರಿಸಬಹುದು; ಹಾಗೆಯೇ ಹೊಸ ಹೆಜ್ಜೆ ಗುರುತುಗಳನ್ನೂ ಮೂಡಿಸಬಹುದು. ಭಾಷೆ ಮತ್ತು ಅನುಭವಗಳ ಗಣಿಯಲ್ಲಿರುವ ಅಪಾರ ಸಂಪತ್ತನ್ನು ಬಳಸುವುದು ಹೇಗೆ?-ಇದೇ ಎಲ್ಲ ಕತೆಗಾರರ ಮುಂದಿರುವ ಸವಾಲು. ಈ ಮಂತ್ರದಂಡವನ್ನು ವಶಪಡಿಸಿಕೊಂಡ ಕತೆಗಾರ ಸಲೀಸಾಗಿ ಕತೆಗಳನ್ನು ಹೇಳಬಲ್ಲ; ಆ ಮೂಲಕ ಸಮಾಜದ ಒಳದನಿಯನ್ನು ಕೇಳುವಂತೆ ಮಾಡಬಲ್ಲ.
ನನ್ನ ಮಿತ್ರರಾದ ಡಾ.ಎಸ್.ಬಿ.ಜೋಗುರ ಅವರು ಇಂಥ ಸೌಲತ್ತುಗಳನ್ನು ಸಹಜವಾಗಿಯೇ ಪಡೆದುಕೊಂಡು ಬಂದಿರುವ ಕತೆಗಾರರು. ಬಿಜಾಪುರ ಜಿಲ್ಲೆಯ ಭಾಷೆ, ಬದುಕು, ಸಮಸ್ಯೆಗಳು, ಜನ ಇತ್ಯಾದಿ ಎಲ್ಲದರಲ್ಲೂ ಮುಳುಗಿ ಎದ್ದವರು. ಸದ್ಯ ಧಾರವಾಡದ ಕಾಲೇಜೊಂದರಲ್ಲಿ ಸಮಾಜಶಾಸ್ತ್ರವನ್ನು ಬೋಧಿಸುತ್ತ ಅಲ್ಲಿಯೇ ನೆಲೆ ನಿಂತಿದ್ದರೂ, ಅವರ ಸೃಜನಶೀಲತೆಯ ಬೇರುಗಳಿರುವುದು ಬಿಜಾಪುರ ಮಣ್ಣಿನಲ್ಲಿಯೇ. ಸಾಹಿತ್ಯವನ್ನೇ ತಮ್ಮ ಮೊದಲ ಆಸಕ್ತಿಯಾಗಿ ಉಳಿಸಿಕೊಂಡಿರುವ ಜೋಗುರ ಈವರೆಗೆ ನಾಲ್ಕು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಈಗಿನದು ಐದನೇ ಸಂಕಲನ. ಹೀಗಾಗಿ ಅವರು ಕಥನ ಕಲೆಯೊಂದಿಗೆ ನಡೆಸುತ್ತಿರುವ ತಾಲೀಮು ಹೊಸದಲ್ಲ.
ಜೋಗುರ ಅವರ ನೀತಿ ನಿಲುವುಗಳೇನು, ಅವು ನಮ್ಮ ಬದುಕನ್ನು ಮುನ್ನಡೆಸಲು ನೆರವಾಗುತ್ತಿವೆಯೇ ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ. ಇಂಥ ಒಂದು ಪ್ರಶ್ನೆಗೆ ಉತ್ತರಿಸುವಂತೆ ಈ ಸಂಕಲನದಲ್ಲಿ ಒಂದು ಕತೆಯಿದೆ: ‘ಒಂದಂಕಣ ಮನೆ ಮತ್ತು ಡಾಗುಬಿದ್ದ ಹಣ್ಣು.’ ಈ ಕತೆ ಎಷ್ಟು ಸೊಗಸಾದ ಕತೆ! ಬಡತನ-ಸಿರಿತನಗಳನ್ನು ಮೀರಿ, ಜಾತಿ-ಧರ್ಮಗಳನ್ನು ಮೀರಿ, ಹೃದಯಗಳನ್ನು ತೆರೆದು ಮನುಷ್ಯರು ಒಬ್ಬರನ್ನೊಬ್ಬರು ನೋಡುವ, ಗೌರವಿಸುವ, ಜೊತೆಜೊತೆಯಲ್ಲಿಯೇ ಬದುಕುವ ಅನನ್ಯ ರೀತಿಯೊಂದು ಈ ಕತೆಯಲ್ಲಿ ಅನಾವರಣಗೊಂಡಿದೆ. ಈ ನಡುವಿನ ಬೆಳವಣಿಗೆಗಳು, ಮನುಷ್ಯರನ್ನು ಒಡೆಯಲು ಧರ್ಮವನ್ನು ಬಳಸುವ ಹುನ್ನಾರಗಳು, ಅವುಗಳಿಂದ ಪೆಟ್ಟುತಿನ್ನುವ ಜನ ಮತ್ತು ಅದರ ನಡುವಿನಿಂದಲೇ ಮೇಲೆದ್ದು, ಹೊರದಾರಿಗಳನ್ನು, ನೆಮ್ಮದಿಯ ಬಾಳುವೆಯನ್ನು ಕಂಡುಕೊಳ್ಳುವ ಈ ಜನರ ಪ್ರಯತ್ನ-ಇವೆಲ್ಲದನ್ನು ಜೋಗುರ ಅವರ ಈ ಕತೆೆ ಸೂಕ್ಷ್ಮವಾಗಿ ಮತ್ತು ಕಲಾತ್ಮಕವಾಗಿ ತೆರೆದಿಡುತ್ತದೆ. ಒಂದು ಪ್ರದೇಶದ ಬದುಕಿನ ವಿವರಗಳನ್ನು, ವೈಶಿಷ್ಟ್ಯಗಳನ್ನು ಕಟ್ಟಿಕೊಡುತ್ತಲೇ ಮಾನವೀಯ ಮೌಲ್ಯಗಳನ್ನು ಗುರುತಿಸುವ ಕೆಲಸವನ್ನು ಅಬ್ಬರವಿಲ್ಲದೆ, ಕಲೆಯ ಸೂಕ್ಷ್ಮಗಳನ್ನು ಬಿಟ್ಟುಕೊಡದೆ ಮಾಡಿಮುಗಿಸುತ್ತದೆ. ಇಂಥ ಕತೆಗಳನ್ನು ರೂಪಿಸುವುದು ಸುಲಭದ ಸಂಗತಿ ಎಂದು ಕಾಣುವುದಿಲ್ಲ. ಜೋಗುರ ಈ ಪ್ರಯತ್ನದಲ್ಲಿ ಕಂಡಿರುವ ಯಶಸ್ಸು ಮೆಚ್ಚುಗೆಯನ್ನು ಪಡೆಯುತ್ತದೆ.
ಇನ್ನು ಜೋಗುರ ಅವರ ಕಥಾ ಪಾತ್ರಗಳನ್ನೇ ನೋಡಿ. ಇದೇ ಮಣ್ಣಿನಿಂದ ಎದ್ದುಬಂದ ವ್ಯಕ್ತಿಗಳು. ಅಂದರೆ ಮುಗ್ಧತೆಯೂ ಇದೆ; ಸಣ್ಣಪುಟ್ಟ ಆಸೆಗಳೂ ಇವೆ; ದೌರ್ಬಲ್ಯಗಳೂ ಇವೆ. ಅವುಗಳ ಈಡೇರಿಕೆಗಾಗಿ ಸುಳ್ಳುಹೇಳುವ, ಕದಿಯುವ, ಚಾಲೂಕಿತನ ತೋರಿಸುವ ಇತ್ಯಾದಿ ಎಲ್ಲ ಕೌಶಲಗಳೂ ಅಂಟಿಕೊಂಡಿರುವ ವ್ಯಕ್ತಿಗಳೇ. ಆದರೆ ಈ ಎಲ್ಲ ಕೆಸರಿನಿಂದ ಮೇಲೆದ್ದು ಉತ್ತಮ ಬದುಕಿನ ಕಡೆಗೆ ನಡೆಯುವ ಹೋರಾಟ ಈ ವ್ಯಕ್ತಿಗಳಲ್ಲಿರುವುದರಿಂದ ಇವರು ಹುಟ್ಟುತ್ತಲೇ ಹೀರೋಗಳಾಗಿ ಹುಟ್ಟುವುದಿಲ್ಲ; ಬೆಳೆಯುತ್ತ ಉದಾತ್ತತೆಯ ಕಡೆಗೆ ಸಾಗುತ್ತಾರೆ. ‘ಅಂಬಣ್ಣನ ಅಪರಾವತಾರ’ ಕತೆಯ ಅಂಬಣ್ಣ, ‘ಸೀತನಿ’ ಕತೆಯ ಯಬಡ ರಾಚಪ್ಪ, ‘ಹೊತ್ತಿಗೊದಗಿದ ಮಾತು’ ಕತೆಯ ಯಮನಪ್ಪ-ಹೀಗೆ ಅನೇಕ ಪಾತ್ರಗಳು ಈ ಮಾದರಿಯವು. ಬದುಕಿನ ಛಲವನ್ನು ಎಂದೂ ಬಿಟ್ಟುಕೊಡದ ಈ ಪಾತ್ರಗಳು ಬದುಕಿನ ಮೌಲ್ಯಗಳನ್ನೂ ಬದಿಗೊತ್ತಿದವಲ್ಲ. ಈ ಮೌಲ್ಯಗಳತ್ತ ತುಡಿಯುತ್ತ, ಬದುಕಿನ ದುರ್ಭರತೆಯಲ್ಲಿ ನವೆಯುತ್ತ ಮೇಲೆ ಮೇಲೆ ಏರುವ ಪ್ರಯತ್ನದಲ್ಲಿಯೇ ನಿರತವಾದವು. ಇವತ್ತಿಗೂ ಇಂಥ ನೂರಾರು ವ್ಯಕ್ತಿಗಳು ನಮ್ಮ ಹಳ್ಳಿಗಳಲ್ಲಿ ಅರ್ಥಪೂರ್ಣ ಬದುಕನ್ನು ನಡೆಸುತ್ತಿರುವುದನ್ನು ನೋಡಬಹುದಾಗಿದೆ. ನೋಡುವ ಕಣ್ಣು ಮಾತ್ರ ಬರಹಗಾರನಿಗೆ ಬೇಕಾಗುತ್ತದೆ. ಬದುಕಿನ ಬಗೆಗೆ ನಂಬಿಕೆ ಮತ್ತು ತಾಳ್ಮೆ ಇರುವ ಬರಹಗಾರ ಇದನ್ನೆಲ್ಲ ನೋಡುವುದು ಸಾಧ್ಯ. ಜೋಗುರ ಅವರ ಒಟ್ಟೂ ಪ್ರಯತ್ನದಲ್ಲಿ ಇಂಥ ಗುಣವೂ ಅಡಗಿರುವಂತಿದೆ. ಇಲ್ಲವಾದರೆ ಅಂಬಣ್ಣ, ರಾಚಪ್ಪ, ಯಮನಪ್ಪ ಸಿಕ್ಕುವುದು ಸಾಧ್ಯವಿರಲಿಲ್ಲ.
ಇಷ್ಟಾದರೂ ಕತೆಗಾರನೊಬ್ಬನ ಹಾದಿ ಸುಲಭವಲ್ಲ. ಪ್ರತಿಯೊಂದು ಕತೆಯೂ ಹೊಸ ಹೊಸ ಶಿಖರದಂತೆಯೇ ಎದುರಾಗುತ್ತ ಇರುತ್ತದೆ. ನಾನಾಗಲೇ ಶಿಖರ ಏರಿದವನು ಎಂದು ಕತೆಗಾರ ಬೀಗಿದರೆ ಆಗುವುದಿಲ್ಲ. ಪ್ರತಿ ಶಿಖರವನ್ನೂ ಅವನು ಏರಲೇಬೇಕು. ಪ್ರತಿಯೊಂದು ಸವಾಲಿಗೂ ಎದೆಯೊಡ್ಡಲೇಬೇಕು. ಜೋಗುರ ಎಲ್ಲ ಶಿಖರಗಳನ್ನು ಏರಿಳಿದಿದ್ದಾರೆ ಎಂದು ನಾನು ಹೇಳುವುದಿಲ್ಲ. ಅವರು ಏರಲಾರದ ಶಿಖರಗಳೂ ಈ ಸಂಕಲನದಲ್ಲಿವೆ. ಕತೆಯ ಮಂತ್ರದಂಡ ಸಿಕ್ಕದೇ ಹೋದರೆ ಕತೆ ಎನ್ನುವುದು ಪ್ರಬಂಧವಾಗುವ, ಹರಟೆಯಾಗುವ ಸಂಭವವೇ ಹೆಚ್ಚು. ಇದು ಯಾಕೆ ಕತೆಯಾಗಲಿಲ್ಲ? ಕತೆಯಾಗಲು ಏನು ಮಾಡಬೇಕು?-ಇಂಥ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟ. ಯಾವುದೋ ಒಂದು ಸೂಕ್ಷ್ಮ ಎಳೆ ಹೃದಯ ಸಂವಾದಕ್ಕೆ ಅನುವು ಮಾಡಿಕೊಡಬಲ್ಲದು. ಈ ಹೃದಯ ಸಂವಾದ ಸಾಧ್ಯವಾದಾಗಲೇ ‘ಕತೆ’ ಎನ್ನುವುದು ಓದುಗನೊಳಕ್ಕೆ ಇಳಿದು ಬೆಳೆಯುವುದು ಸಾಧ್ಯ. ಆಗಲೇ ನಿಜವಾದ ಕತೆಯ ಹುಟ್ಟು.
ಜೋಗುರ ಅವರಿಗೆ ಅನುಭವದ ವಿಸ್ತಾರವಿದೆ, ಸೂಕ್ಷ್ಮ ಸಂವೇದನೆಯೂ ಇದೆ. ಅವರ ನಿಲುವು ಆರೋಗ್ಯಕರವಾದ ನಿಲುವು. ಈ ಪ್ರಬಲ ಅಸ್ತ್ರಗಳ ಜೋಗುರ ಇನ್ನಷ್ಟು ಸಾವಧಾನದಿಂದ ಬದುಕನ್ನು ನೋಡುವ ಅಗತ್ಯವಿದೆ. ಧ್ಯಾನಸ್ಥ ಮನಸ್ಸಿನಿಂದ ಕತೆಯ ಮಂತ್ರದಂಡವನ್ನು ಪಡೆಯಬೇಕಾದ ಹೊಣೆಗಾರಿಕೆಯೂ ಅವರ ಮೇಲಿದೆ. ಅವರು ಪಡೆಯುವರೆಂಬ ಭರವಸೆ ಇಟ್ಟುಕೊಳ್ಳುವುದಕ್ಕೆ ಈ ಸಂಕಲನದ ಕೆಲವು ಕತೆಗಳಾದರೂ ಒತ್ತಾಸೆಯಾಗಿ ನಿಲ್ಲುತ್ತವೆ.
-ಜಿ.ಪಿ.ಬಸವರಾಜು, ಮೈಸೂರು
 

‍ಲೇಖಕರು G

December 12, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: