ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ಭಯವಾಗುತ್ತಿದೆ…

ಎಸ್ ಜಿ ಸಿದ್ದರಾಮಯ್ಯ

ಭಯವಾಗುತ್ತಿದೆ ನನಗೆ
ಎರಗಲಿರುವ ಸಾವಿನ ಕುರಿತು ಅಲ್ಲ
ಮನುಷ್ಯ ಕಳೆದು ಹೋಗಿರುವ ಬಗ್ಗೆ.

ದಿನಕ್ಕೊಂದು ದ್ವೇಷದ ಸಂಚು
ಹೆಣೆಯುತ್ತಿರುವ ಕುತಂತ್ರದ ಬಗ್ಗೆ
ಅಮಾಯಕರ ಬದುಕ ಬಲಿಗೈಯ್ಯುತ್ತಿರುವ ಬಗ್ಗೆ.

ಬೆಳೆಯಲಾರದವರಿಗೆ ಅನ್ನದ ಬೆಲೆ
ಗೊತ್ತಾಗದ್ದರ ಬಗ್ಗೆ.
ಪಾಲನೆ ಪೋಷಣೆ ಮಾಡಲಾರದವರಿಗೆ
ಜೀವದ ಬೆಲೆ ಗೊತ್ತಾಗದ್ದರ ಬಗ್ಗೆ.

ಭಯವಾಗುತ್ತಿದೆ ನನಗೆ ಈ ಖದೀಮರು ನಮ್ಮ
ಮಕ್ಕಳನ್ನು ಕಾಲಾಳು ಮಾಡಿಕೊಂಡಿರುವ ಬಗ್ಗೆ.
ಭಯವಾಗುತ್ತಿದೆ ನನಗೆ ನಮ್ಮ ಮಕ್ಕಳಿಗೆ ನಾವು
ಹೇಳಿದ ಮನುಷ್ಯತ್ವದ ಪಾಠ ಮರೆತಿರುವ ಬಗ್ಗೆ.

ಭಯವಾಗುತ್ತಿದೆ ನನಗೆ ದ್ವೇಷದ ಪಾಠವೇ
ದೇಶಪ್ರೇಮವಾಗುತ್ತಿರುವ ಬಗ್ಗೆ.
ಭಯವಾಗುತ್ತಿದೆ ನನಗೆ ಕೊಡಲಿಯ ಕಾವು
ಮರಕ್ಕೆ ಮೃತ್ಯುವಾಗುತ್ತಿರುವ ಬಗ್ಗೆ.

ಭಯವಾಗುತ್ತಿದೆ ನನಗೆ ಕವಿತೆ ಸತ್ತು
ಭಾಷೆ ಭ್ರಷ್ಟವಾಗುತ್ತಿರುವ ಬಗ್ಗೆ.
ಭಯವಾಗುತ್ತಿದೆ ನನಗೆ ಸುಳ್ಳೇ ಸತ್ಯದ ವೇಷ
ತೊಟ್ಟು ,ಸಂತವಾಣಿಯಾಗುತ್ತಿರುವ ಬಗ್ಗೆ.

‍ಲೇಖಕರು Admin

12 April, 2022

2 Comments

  1. prathibha nandakumar

    ನನಗೂ ಸರ್… ಭಯವಾಗುತ್ತಿದೆ, ಇದೆಲ್ಲ ಎಲ್ಲಿಗೆ ಹೋಗಿ ಮುಟ್ಟುತ್ತೋ ಏನೋ

    ಪ್ರತಿಭಾ ನಂದಕುಮಾರ್

  2. G.N.Ranganatha Rao

    priya siddarmaiah avre,
    Nimma By nmma bhayavuu h owdu. nammellara Astankagalige daniyagiddakke dhanyavadagalu.
    G.N.Ranganatha Rao

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading