ಎಸ್‌ ಸಾಯಿಲಕ್ಷ್ಮಿ ಅವರ ‘ಅಡುಗೆಯೆಂಬ ಮಹಾಪೂಜೆ’

ಎಸ್‌ ಸಾಯಿಲಕ್ಷ್ಮಿ ಅಯ್ಯರ್

ಅಮ್ಮ ಯಶೋಧೆ ತೂಗುತಾ ಜೋಲಿಕಂದ ಮುಕುಂದಗೆ ಹಾಡಿದಳು‌ ಲಾಲಿಸಂತ ಸೂರದಾಸರ‌ ಕವನದ ಕನ್ನಡದ ಸಾಲುಗಳಿವು. ಕೃಷ್ಣ ಸೊಂಪಾಗಿ ನಿದ್ರೆ ಮಾಡುವ ಹಂತ ತಾಯಿಯ ಜೋಗುಳದಲ್ಲಿ ತಲುಪಿದ ಎಂದರೆ ಅದರ ಹಿಂದೆ ಅವನ ಆಟಪಾಠ, ದಣಿವು, ತಾಯಿಯು ಪರಮಪ್ರೀತಿಯಿಂದ ಉಣಿಸುವ ರಸಗವಳ ಎಲ್ಲವೂ ನಮ್ಮ ಕಣ್ಮುಂದೆ ತೇಲಿಬರುವುದು. ಪುಟ್ಟಮಗುವಿಗೆ ಅಲ್ಪಪ್ರಮಾಣದಲ್ಲಿ ಎಲ್ಲವನ್ನು ಒಗ್ಗಿಸುವ ಅಭ್ಯಾಸ ತಾಯಿ ಮಾಡುತ್ತಲೇ ಇರುತ್ತಾಳೆ. ಅವಳೇ ತನ್ನ ಕಂದನಲ್ಲಿ ರುಚಿ ಆಭಿರುಚಿ ಮೂಡಿಸುವಲ್ಲಿ ಮೂಲ ವ್ಯಕ್ತಿಯಾಗುತ್ತಾಳೆ.
ಮಗುವಿಗೆ ತಾಯಹಾಲು ಸಾಲದಂತೆ ತೋರುವ ಸಮಯದಲ್ಲಿ ಪೂರಕ ಆಹಾರ ಪದ್ಧತಿಯ ಅಗತ್ಯ ಮೂಡುತ್ತದೆ.

ಆರಂಭದಲ್ಲಿ ಕೂಸಿಗೆ ಹದವಾದ ಬಿಸಿ ಅನ್ನ ಅಥವಾ ಪುನಃಪಾಕ, ಬೆಂದ ಬೇಳೆಯ‌ ಕಟ್ಟು, ಗಮ್ಮೆನ್ನುವ ಸ್ವಲ್ಪ ತುಪ್ಪ, ಬೇಯಿಸಿದ ಮೃದು ತರಕಾರಿ ಇವೆಲ್ಲವನ್ನು ಕಿವಿಚಿ ತಿನ್ನಿಸಿದರೆ ಮಗು ಕೇಕೆ ಹಾಕುತ್ತಾ ನಡುನಡುವೆ ನೀರು ಬೇಡುತ್ತಾ ಸುಖಿಸುತ್ತಾ ಸೇವಿಸುತ್ತದೆ. ತಂಪು ಚಂದಿರ, ತಂಗಾಳಿ, ರಸ್ತೆಯಲ್ಲಿ‌ ಕಾಣುವ ಮರಗಿಡ, ನಾಯಿ, ಬೆಕ್ಕು, ಹಸು ಇವುಗಳ‌ ಮೇಲೆಲ್ಲ‌ ಮಗುವಿನ ಗಮನ ಸಾಗಿ ಸುತ್ತಲಿನ‌ ಪ್ರಪಂಚದೊಡನೆ ಆಪ್ತತೆ ಉಂಟಾಗುತ್ತದೆ. 

ಈ ಮೊದಲ ಊಟದಲ್ಲಿ ಪ್ರಧಾನ ಶಕ್ತಿವರ್ಧಕವಾಗಿ ಪೋಷಕಾಂಶ ನಿರ್ವಹಣೆಯಲ್ಲಿ ಬೇಳೆಯ ಪಾತ್ರ‌ ಮಹತ್ವಪೂರ್ಣ. ಕೆಲವೊಮ್ಮೆ ಪಾಪುವಿಗಿಂತ ಅದರಮ್ಮನೇ ದಷ್ಟಪುಷ್ಟವಾಗಿ ಕಾಣುವುದುಂಟು. ಮಗು ಒಲ್ಲೆನೆಂದ ಊಟದ ಸಿಂಹಪಾಲು ಅದರ ಮಾತೆಗಲ್ಲದೆ ಮತ್ತಾರಿಗೆ? ಮಸಾಲೆ, ಹುಳಿ, ಸಿಹಿ, ಖಾರರಹಿತ ಕಟ್ಟಿನಿಂದ ಮೊದಲ ಜಿಹ್ವಾ ಪ್ರಯಾಣ ತಿಳಿಸಾರಿನತ್ತ. ಎಲ್ಲ ಒಳ್ಳೆಯ ಪದಾರ್ಥದ ಸಾರವೇ ಈ ಸಾರು. ಈ ಹೆಸರು ಎಷ್ಟು ಅರ್ಥಪೂರ್ಣ ಹಾಗು ಔಚಿತ್ಯಪೂರ್ಣ. 

ಶೃಂಗೇರಿ ಮೂಲದ ನಮ್ಮಪ್ಪನ ಮನೆಯ ಮಲೆನಾಡ ಅಡುಗೆಗಳೊಡನೆ ಅಮ್ಮನ ತೌರಾದ ಚಾಮರಾಜನಗರದ ಮೈಸೂರು ಸೀಮೆಯ ಅಡುಗೆಗಳು‌ ನಮ್ಮನೆಯ‌ ಮನದ ಪಾತ್ರೆಗಳಲ್ಲಿ ಸ್ಥಾನ‌ ಪಡೆದಿದ್ದು‌ ನಿಜವಾದರೂ ನಮ್ಮ‌ ನಾಲಿಗೆ ಚಪಲ ತಣಿಯುತ್ತಿದ್ದದ್ದು ಅಮ್ಮ ರುಚಿಪ್ರಭುತ್ವ ಸಾಧಿಸಿದ್ದ ಅಪ್ಪನ ಮನೆಯ ಅಡುಗೆಗಳ‌ ಮೇಲೆ. ಆದರೂ ಅಮ್ಮ‌ ಮಾಡುತ್ತಿದ್ದ ತರಕಾರಿ ಹಾಕಿದ ಹುಳಿಯಲ್ಲಿ, ಆ ಹೆಚ್ಚಿದ ಹೋಳಿನ ಕಲೆಗಾರಿಕೆ ಎದ್ದುಕಾಣುವುದು. ಪ್ರತಿಯೊಂದು ತರಕಾರಿಯು ನಿರ್ದಿಷ್ಡ ಆಕಾರದಲ್ಲಿ ಕತ್ತರಿಸಲಾಗಿದ್ದು, ಇಂತಿಷ್ಟೇ ಬೇಯಬೇಕೆಂಬ ಕ್ರಮ,‌ ನಿಯಮ. ಹುಳಿ ಮಾಡಿದ ದಿನವೆಲ್ಲ ಅಮ್ಮ ಸಣ್ಣುರಿಯಲ್ಲಿ ಅಗ ತಾನೆ  ಕೊತ್ತಂಬರಿ‌ ಬೀಜ,‌ ಕಡಲೆಬೇಳೆ, ಮೆಂತ್ಯ, ಮೆಣಸಿನಕಾಯಿ, ಕರಿಬೇವು ಹುರಿದು ತಣಿಸಿ ತೆಂಗಿನಕಾಯಿ ತುರಿದು (ಮನೆಯದು) ಒರಳಲ್ಲಿ ಮಣಿಸಲೇಬೇಕು.

ಅಮ್ಮ ಮಡಿಯುಟ್ಟು ಕುಮಟಿಯಲ್ಲಿ (ಇದ್ದಿಲು ಒಲೆ) ಬೇಯಲು ಹಾಕಿದ ತೊಗರಿಬೇಳೆ ಟೊಮೆಟೊ ಸಾಥ್ ನಲ್ಲಿ ತುಸು ಎಣ್ಣೆ ಅರಿಶಿನದಲ್ಲಿ ಮಿಂದು ಪುನೀತಭಾವದಲ್ಲಿ ಬೇಯುತ್ತಿರುವಾಗ ಸ್ವಲ್ಪ ಕಲ್ಲುಪ್ಪು ತರಕಾರಿಗಳೊಡನೆ ತಪಲೆ ಸೇರಿ ಭಾವೈಕ್ಯ ಸಾಧಿಸುವುದು. ಎಲ್ಲಿಂದಲೋ ಬಂದು ಸೇರಿ‌ ಮನೆಮಗಳಾಗುವ ಸೊಸೆಯಂದಿರಂತೆ ಬಿಸಿನೀರಲ್ಲಿ ನೆನೆದ ಕಿವುಚಿದ ಹುಣಿಸೆಹಣ್ಣು, ಬೆಲ್ಲ ಸಮಯಸಾಧಿಸಿ ಯಜಮಾನತಿಯ ಹುಕುಂ ಪಡೆದು ಕುದಿಯುವ ನರ್ತನದಲ್ಲಿ ಹೊಂದಿಕೊಳ್ಳುತ್ತವೆ.

ಒರಳಿಂದ ಗಟ್ಟಿಮುದ್ದೆಯಾಗಿ ಎದ್ದು ಬಂದು ಪಾತ್ರೆಯ ತಳ ಸೇರಿ, ಒರಳು ತೊಳೆದ ನೀರಿನಲ್ಲಿ ಮೈ ತೊಳೆಯುತ್ತದೆ ಈ ಇಡೀ ಹುಳಿ. ಆಗೊಂದು ಸಣ್ಣ ಒಗ್ಗರಣೆ ಈ ಹುಳಿಗೆ ಎಲ್ಲಿಲ್ಲದ ಘನತೆ ದೊರಕಿಸಿಕೊಡುತ್ತದೆ. ಮೆಂತ್ಯ, ಕರಿಬೇವು ಸಾಸಿವೆ, ಎಣ್ಣೆ , ಇಂಗಿನೊಡನೆ ಮಿಳಿತವಾಗಿ ಮೂಗಿನ ಹೊಳ್ಳೆ ಅರಳಿಸುತ್ತಾ ತಪಲೆ ಹೊಕ್ಕರೆ ಸಾಕು ಕಂಡೀತು ಹೊಂಬಣ್ಣ, ಹೊರಬಂದೀತು‌ ದಿವ್ಯ ಪರಿಮಳ. ಮನೆಗೆ ಬಂದಿಳಿದ ಬಂಧು ಮಿತ್ರರು ‘ಶ್ರೀಮದ್ ಬೇಳೆಹುಳಿ‌‌ ಸಿದ್ದವೋ’ ಎಂದು ಸುವಾಸನೆಯ ಜಾಡುಹಿಡಿದು‌ ಕೇಳಿಬಿಟ್ಟರೆ ಅಮ್ಮನ ವದನದಲ್ಲಿ ಅದೆಂತಹ ಸಾರ್ಥಕಭಾವ. ಕಣ್ಣಲ್ಲಿ ತೃಪ್ತಿಯ ಮಿನುಗು.

ಇನ್ನು ಅಮ್ಮನ ನಿಂಬೆ, ಮಾವಿನಕಾಯಿ ರಸ‌ ಬಳಸಿ ಮಾಡಿದ ಕಾಯಿ ಸಾಸಿವೆ ಗೊಜ್ಜು ಅಬ್ಬಾ ಹದವಾಗಿ ಬೆಂದ ಬಿಸಿ ಸಣ್ಣಕ್ಕಿ ಅನ್ನ, ಅದರ ಮೇಲೆ ಒಮದು ಚಮಚ ಶುದ್ಧ ಸುವಾಸನೆಯ ಕಡಲೇಕಾಯಿ ಎಣ್ಣೆ  ಮೇಲೊಂದು ಸೌಟು ಗೊಜ್ಜು. ಊಟದ ಸಮಯದಲ್ಲಿ ಹರಡಿದ ಬಾಳೆಲೆಯ ಮೇಲೆ ಇವಿಷ್ಟು ಜೀವಾತ್ಮನಿಗೆ ಅರ್ಪಣೆಯಾದರೆ ಆಹಾ ಅದಕ್ಕೆಂತಹ ದೈವೀಕ ರುಚಿ.

ಎಲೆಗೋಮೆ ಮಾಡಬೇಕಲ್ಲ ಎಂಬ ಕಾರಣಕ್ಕೆ ಬಾಲ್ಯದಲ್ಲಿ ನಾನು ಎಷ್ಟೋ ಬಾರಿ ‘ಅಮ್ಮ ಹಸಿವಿಲ್ಲ’ ಎಂದು ಮಲಗುವಂತೆ ನಟಿಸುತ್ತಿದ್ದೆ‌  ಬಿಡಬೇಕಲ್ಲ ಅಮ್ಮ. ‘ಊಟ ಮಾಡು ಬಾರೆ. ನಾನು ಎಂಜಲು ಗೋಮ ಮಾಡ್ತೀನಿ’. ಅಕ್ಕರೆಯ ಕರೆ ಅದು ಅಡುಗೆಮನೆಯಿಂದ ಬಂದರೆ ನಿರಾಕರಿಸಲಾದೀತೇ? ಅಂತಹ ಸಮಯದಲ್ಲಿ‌ ಹಸಿವು ಹೆಚ್ಚೇ. ‘ಹಸಿವಿಲ್ಲದೂಟ ಹಲಸಿನಕಾಯಿಯಷ್ಟು’ ಎಂದು ಅಮ್ಮ‌ ಮಲೆನಾಡ ಗಾದೆಯಲ್ಲೇ ಕಿಚಾಯಿಸುವರು. ‘ಕಂಡರೆ‌ ಮಾಣಿ ಉಂಡರೆ ಗೋಣಿ’ ಇದು ಆ ಜಾತಿಗೆ ಸೇರಿದ ರೂಢಿಮಾತು. 

ನಮ್ಮನೆಯಲ್ಲಿ ಆ ದಿನಗಳಲ್ಲಿ ಗೊಜ್ಜು, ಸಾರು, ಪಲ್ಯ, ಚಟ್ನಿ, ಪಳಿದ್ಯ ಇಷ್ಟೆಲ್ಲವೂ ಖಾಯಂ ಊಟದ ವಿಧಗಳು. ಜೊತೆ ನೀಡಲು ಬಾಳಕಾ, ಅರಳು ಸಂಡಿಗೆ, ಹಪ್ಪಳ, ಮಾವಿನಮಿಡಿ ಇದ್ದಾಗಲೇಬೇಕು. ನಮ್ಮ ಅಮ್ಮನ ಅಮ್ಮ‌ ಮನೆಗೆ ಬಂದಾಗ ಮಗಳ ಪಾಕ ವೈವಿಧ್ಯ ಕಂಡು ಹೇಳುವರು’ಜಯಾ‌ ಎಲೆಕೊನೆಗೆ ಒಂದು ಪಾಯಸ‌ ಮಾಡಿಬಿಡೆ.‌ ಹಬ್ಬದ ಅಡುಗೆ ಸಿದ್ಧ.’ 

ಇನ್ನು ಪೂಜೆ, ಪುನಸ್ಕಾರ, ಹಬ್ಬ ಹರಿದಿನ, ತಿಥಿ, ಹೆಚ್ಚುಗಟ್ಟಲೆಗಳನ್ನು ಲೀಲಾಜಾಲವಾಗಿ ಆ ಮಹಾತಾಯಿ‌ ನಿರ್ವಹಿಸುವರು. ಎಷ್ಟೇ ಉಪವಾಸವಿರಲಿ, ಎಷ್ಟೇ ತಡವಾಗಿರಲಿ ಶಾಂತವಾದ ಅಬ್ಬರವಿಲ್ಲದ ಕಡಲಂತಹ ತಾಳ್ಮೆ ಅಮ್ಮನದು. ಅಂತಹ ಸಂದರ್ಭದಲ್ಲಿ ಅಮ್ಮ‌ ಮಡಿಯಲ್ಲಿರುವಾಗ ಮಕ್ಕಳ ರಾಜ್ಯದ ಮೆಚ್ಚಿನ ಶಾರದಾ ಚಿಕ್ಕಮ್ಮ ಭಕ್ಷ್ಯ ಭೋಜ್ಯಗಳನ್ನು ಸೆರಗಲ್ಲಿ‌ ಬಚ್ಚಿಟ್ಟು ತಂದು ನಮ್ಮ‌ ಮಕ್ಕಳ ಗುಂಪಿಗೆ ಹಂಚಿಬಿಡುವರು. ಅಕಸ್ಮಾತ್ ಈ ವಿಷಯ ಬಯಲಾಗಿಬಿಟ್ಟರೆ‌ ಮುಗಿಯಿತು. ಅಮ್ಮ ಚಿಕ್ಕಮ್ಮನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದುದು ನೆನೆದರೆ ಈಗಲೂ ನಗು ಉಕ್ಕಿಬರುತ್ತದೆ. ‘ಶಾರದೆ ನಿನಗೆ ವಯಸ್ಸಾಯ್ತು ಅಷ್ಟೆ. ಮಡಿ ಇಲ್ಲ‌ ಮಾರ್ಗ‌ ಇಲ್ಲ’

ಈ ಶಾರದಾ ಚಿಕ್ಕಮ್ಮನು ಅಡುಗೆ ತಯಾರಿಯಲ್ಲಿ ಪ್ರವೀಣೆ. ಆದರೆ‌ ಮಾತ್ರ ಅಚ್ಚುಕಟ್ಟಾಗಿ ಸಾಮಾನು ಸರಂಜಾಮು ಇದ್ದರಷ್ಟೆ‌ ಅವರು ಸೌಟು‌ ಹಿಡಿಯುತ್ತಿದ್ದುದು.‌ ಅವರು ಸೇರಿದ್ದು ತಮಿಳುನಾಡಿನ ಸಂಸಾರಕ್ಕೆ. ಅವರತ್ತೆ‌ ಅದ್ವಿತೀಯವಾಗಿ ಮಾಡುತ್ತಿದ್ದ ಪಾಗಲಕಾಯಿ (ಹಾಗಲಕಾಯಿ) ಪಿಟಲೆ, ತೊಹೆಲ್, ಅವಿಯಲ್, ಪೊರಚ್ಚ ಕೂಟ್, ಪೊಂಗಲ್, ರಸಂ, ಮುರಂಗ್‌ಕಾಯಿ ಸಾಂಬಾರ್, ವೆತ್ತ ಕೊಳಂಬ್, ಅಡೈ ದೋಸಾ ಮುಂತಾದುವುಗಳನ್ನೆಲ್ಲ ತಮ್ಮದಾಗಿ ಮಾಡಿಕೊಂಡ ಪಾಕನಿಪುಣೆ ನಮ್ಮ ಚಿಕ್ಕಮ್ಮ. ಮಾತೆತ್ತಿದರೆ ತಮಿಳು ಭಾಷೆಯಲ್ಲಿ ಸಂವಹನ. 
ತಮಿಳುನಾಡು ಅಡುಗೆಯಲ್ಲದೆ  ನಮ್ಮ‌ ಮೈಸೂರು ಕಡೆಯ ಸಾರು ಮಾಡುವುದರಲ್ಲೂ ಚಿಕ್ಕಮ್ಮ ಎತ್ತಿ ಇಳಿಸದ ಕೈ. ಯಾರು‌ ಮಾಡಲಾರದ ರೀತಿಯ ಆ ಸಾರಿನಲ್ಲಿ ಅದೆಷ್ಟು ಸೂಕ್ಷ್ಮತೆಗಳು ಸೇರಿ‌ ದೈವಿಕತೆ ತಂದುಕೊಟ್ಟಿದೆ. 

ನಾನು ಬಹಳ ವರುಷಗಳು ಚಿಕ್ಕಮ್ಮನ ಸಾರಿನ ಹದ ಲಪಟಾಯಿಸಲು ಹೊಂಚು ಹಾಕುತ್ತಿದ್ದೆ. ಒಂದು ದಿನ ಈ ಚಿಕ್ಕಮ್ಮನನ್ನು ನಮ್ಮ ಅಡುಗೆಮನೆಯ ಬಂಧಿಯಾಗಿಸಿ‌ಬಿಟ್ಟೆ. ‘ಈಗ ನೀನು ಸಾರಿನ ರಹಸ್ಯಗಳನ್ನು ಬಿಟ್ಟುಕೊಟ್ರಷ್ಟೆ ನಿನಗೆ ಬಿಡುಗಡೆ’ ಎಂದು ಘೋಷಿಸಿಬಿಟ್ಟೆ. ಚಿಕ್ಕಮ್ಮ‌ ಈಗ ಒಂದೊಂದೇ‌ ಮಂತ್ರೋಪದೇಶ ಮಾಡಲಾರಂಭಿಸಿದರು. ‘ತೊಳೆದ ತೊಗರಿಬೇಳೆ, ಟೊಮೆಟೊಗೆ ಎಣ್ಣೆ, ಅರಿಶಿನ ಬೆರೆಸಿ ಎರಡು ಅಳತೆ ನೀರು ಸೇರಿಸಿ ಕುಕ್ಕರ್ ನಲ್ಲಿ ನುಣ್ಣಗೆ ಬೇಯಿಸಿಕೊಳ್ಳಬೇಕು.

ಇನ್ನು ಸಾರು ಮಾಡುವ ಪಾತ್ರೆಯಲ್ಲಿ ಹುಣಿಸೇಹಣ್ಣಿನ ಕಿವುಚಿದ ರಸ, ಉಪ್ಪು, ಬೆಲ್ಲ, ಇನ್ನೊಂದು ಹಸಿ ಟೊಮೆಟೊ ಸಣ್ಣಗೆ ಹೆಚ್ಚಿ ಸೇರಿಸಿ‌ ಒಂದು ಮಿಳ್ಳೆ ತುಪ್ಪ, ಇಂಗು, ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು ಇವುಗಳೊಂದಿಗೆ ಸಣ್ಣ ಉರಿಯಲ್ಲಿ ಕುದಿಸುವುದು. ನಂತರ ಹುಣಿಸೆರಸ ಹೀಗೆ ಹೊಂದಿಕೊಂಡ ಮೇಲೆ ಬೆಂದಬೇಳೆಯ ಕಟ್ಟಿನ ಅಂಶ ಬೆರೆಸುವುದು ಹಾಗೆ ಕುದಿಯುವಾಗ ಮೆಣಸಿನಪುಡಿ ಹಾಕಿ ಅದರೊಡನೆ ಕುದಿ ಹತ್ತುವಾಗ ಬೇಯಿಸಿರುವ ಬೇಳೆ ನುಣ್ಣಗೆ ಕಡೆದು ಕಡೆಗೆ ಹಾಕಿಬಿಟ್ಟರೆ ಮುಗಿಯಿತು.

ಪಕ್ಕದಲ್ಲೇ ಒಂದು ಬಟ್ಟಲು ಕುದ್ದ ಬಿಸಿನೀರು ಸಿದ್ಧವಾಗಿಟ್ಟಿರಬೇಕು. ಕುಕ್ಕರ್ ನಲ್ಲಿರುವ ಅಳಿದುಳಿದ ಬೇಳೆಗೆ ಈ‌ ನೀರಿನ ಪ್ರಮಾಣ ನೋಡಿಕೊಂಡು‌ ಸಾರಿಗೆ ಸೇರಿಸಬೇಕು. ನಾಲ್ಕು ಕಡೆಯು‌ ಕುದ್ದ ಸಾರು‌ ಮಧ್ಯಭಾಗದಲ್ಲಿ ಕುದಿಯುವಾಗ ಉಪ್ಪುಕಾರ ಸಿಹಿ ಹುಳಿ ಎಲ್ಲವೂ ಸರಿಹದದಲ್ಲಿ ಸೌಹಾರ್ದದಿಂದ ಬೆರೆತಿದೆಯೆಂದು ಸೂಚನೆ. ಈ ಸಾರಿಗೆ ಈಗ ತುಪ್ಪದಲ್ಲಿ ಮಿಳಿತವಾದ ಇಂಗು ಸಾಸಿವೆ ಜೀರಿಗೆ ಎರಡೇ ಎರಡು ಕಾಳು ಮೆಣಸಿನ‌ ಒಗ್ಗರಣೆ ಕೊಟ್ಟುಬಿಟ್ಟರೆ ಹೊಮ್ಮುವ ಪರಿಮಳಕ್ಕೆ‌ ನಾಲ್ಕು ರಸ್ತೆಯವರು‌ ತಲೆದೂಗಬೇಕು. ಅಂತಹ‌ ಪರಮಾಯಶಿ ಸಾರು ಸಿದ್ಧ. ಇದರ ಎದುರು ಯಾವ ಕೀರು‌ ಇಲ್ಲ.’

ಕೆಲವರು ಸಾರಿಗೆ ತುರಿದ ತೆಂಗಿನಕಾಯಿ ಸ್ವಲ್ಪ ನೀರಲ್ಲಿ ನೆನೆಸಿ ಆ ರಸ ಹಿಂಡಿ ಅದಕ್ಕೊಂದು ಸೌಮ್ಯತೆ ತರುತ್ತಾರೆ. ಆ ಘಾಟೆಲ್ಲ ಹಿತವಾಗಿ. ಮಾರ್ಪಾಡಾಗುವ ರಸಗಳಿಗೆ. ಇನ್ನು ಕೆಲವರು ಸಾರಿಗೆ‌ ಕಾಯಿತುರಿ‌ ಹಾಗೆ ತೇಲಿಬಿಡುತ್ತಾರೆ. ಅದನ್ನು ಹಾಗೆ ಕಾಣುವಾಗ ನನಗಂತೂ ಒಗ್ಗದು. ಇನ್ನು ಬಾಯಿಗೆ ಸಿಕ್ಕರೆ ಆಗದೇ ಆಗದು.

ಒಬ್ಬಟ್ಟಿನ ಸಾರಿನ ಮಹಿಮೆಯಂತೂ ಬಲ್ಲವರೇ ಬಲ್ಲರು. ಬೆಲ್ಲದ ಸವಿಯು ಮುಂದಾಗಿ ಅದ್ಭುತ ರುಚಿ. ಅಂತಹ ಪರಿಮಳಭರಿತ ಹಬೆಯಾಡುವ ಸಾರನ್ನು ಸೌಟಲ್ಲಿ ಹಿಡಿದು ಅರ್ಧ ನಿಮೀಲಿತ ನೇತ್ರದಲ್ಲಿ ನೋಟದಲ್ಲೇ ಆಸ್ವಾದಿಸುವಾಗಿನ ಮೋಕ್ಷ ಬಿಡಿ‌ ಮಾತಿನ‌‌ ವರ್ಣನೆಗೆ‌ ನಿಲುಕದ್ದು‌.
ಸಮಾರಂಭಗಳಲ್ಲಿ ಅಡುಗೆಯವರ ಅಡುಗೆ ತಂತ್ರ ಕದ್ದು ನೋಡಿ ಅನುಷ್ಠಾನಕ್ಕೆ ತರುವ ಹುಮ್ಮಸ್ಸು ನನಗೆ. ನನ್ನ ಗ್ರಹಣಶಕ್ತಿಗೆ ಎಟುಕಿದ್ದಕ್ಕೆ ಈ ಮಾತು ಸಲ್ಲುತ್ತದೆ. ತೊವ್ವೆ, ಸಾರು, ಮಜ್ಜಿಗೆಹುಳಿ, ತರತರ ಪಾಯಸ, ಬಗೆಬಗೆಯ ಕಲೆಸಿದ ಅನ್ನಗಳು ಇವೆಲ್ಲ ರುಚಿಯ ಲಕ್ಷಣದ ಪರಮೋನ್ನತಿ ಸಾಧಿಸಿರುವುದಾದರೆ ಈ ತೀವ್ರ ಲಕ್ಷಿಸುವಿಕೆಯಿಂದ. 

ಬೇಳೆ ತೊವ್ವೆಗೆ ತೆಂಗಿನತುರಿಯೊಂದಿಗೆ ಹಸಿಯಾಗಿ ಜೀರಿಗೆ, ಮೆಣಸು ಹಸಿ ಸಾಸಿವೆ ಸೇರಿಸಿ ಕೊತ್ತಂಬರಿ ಸೊಪ್ಪು, ಕಲ್ಲುಪ್ಪು ಒಂದು ಸ್ಪೂನ್ ಹುರಿಗಡಲೆ ಜೊತೆಯಲ್ಲಿ ರುಬ್ಬಿದರೆ ಅದು ನೀಡುವ ರುಚಿ ಸ್ಪರ್ಶದ ಎತ್ತರವೇ ಬೇರೆ. ಹಾಗೆ ಸಾರು ತಯಾರಿಸುವಾಗ ಹೊಸದಾಗಿ ಮಾಡಿಕೊಂಡ ಮೆಣಸಿನಪುಡಿ ಬಳಸಿದಾಗ ಸಾಕ್ಷಾತ್ಕಾರವಾಗುವ ರುಚಿದರ್ಶನವೇ ವಿಭಿನ್ನ. ಹಾಗೆ ಕುದಿವ ಸಾರಿಗೆ ತಟ್ಟೆಯಾಗಲಿ ಬೇರೆ ಯಾವುದೇ‌ ಆಗಲಿ‌ ಮುಚ್ಚಲೇಬಾರದೆಂಬುದು ಸರಳ ಸೂಕ್ಷ್ಮ ವಿಧಾನ. ಅದರ ಹಿಂದೊಂದು ನಿಗೂಢ ಅರ್ಥ ಹೊಳಹು ಸಾರು‌ ಕುದ್ದು ತಟ್ಟೆಯ ಅಡಿ ಶೇಖರವಾಗುವ ಹಬೆ ನೀರಾಗಿ‌ ಪುನಃ ಸಾರ ಸೇರಿ ರುಚಿಯಲ್ಲಿ‌ ಏರುಪೇರಾಗುವುದು ಖಚಿತವೆಂದು‌‌ ಅನುಭವ ವಾಣಿ. ಪ್ರಕೃತಿಯಲ್ಲಿನ ಜಲಚಕ್ರದ ಹಾಗೆ.

ಅಮ್ಮನ‌ ಇನ್ನೊಂದು ಹಿತವಚನ ಯಾವುದೇ ಅಡುಗೆ ಇರಲಿ ಅದರ ತಯಾರಿಯಲ್ಲಿ ನಮ್ಮ ಗಮನ, ಬುದ್ಧಿ, ಮನಸ್ಸು ಎಲ್ಲವನ್ನು ಅರ್ಪಿಸಿಕೊಳ್ಳಬೇಕು ಹಾಗೆಯೆ ಅಡುಗೆಯ ರುಚಿ, ಬಣ್ಣ, ಸುವಾಸನೆ ನಮ್ಮ ಮೂಗಿನ ಹೊಳ್ಳೆ‌ ಅರಳಿಸಿ, ನಾಲಿಗೆಯಲ್ಲಿ ನೀರು ತರುವಂತಿರಬೇಕು. ಇನ್ನು ಯಾವ ಆಹಾರ ಪದಾರ್ಥದ ನಿರ್ಮಾಣವೇ ಇರಲಿ‌, ಒಲೆಯ‌ ಮೇಲೆ ಮಾಡುವಾಗ ಸಣ್ಣ‌ ಉರಿಯೇ ಕ್ಷೇಮ. ಅಧಿಕ ರುಚಿ ಹಾಗೆ ಇಂಧನದ ಮಿತಬಳಕೆ ಈ ಎರಡೂ ಸಾಧಿಸುವಲ್ಲಿ ಇದು ಸುಲಭ ಸೂತ್ರ.

ಪ್ರತಿಯೊಂದು ಅಡುಗೆಗೂ ಇಂತಿಷ್ಟೇ ಪ್ರಮಾಣದ ಶಾಖ ಬೇಕು ಎಂಬುದು ಸತ್ಯ. ಅದು ಜಾಸ್ತಿಯಾದರೂ ಇಲ್ಲ ಕಡಿಮೆಯಾದರೂ ಹೊರಹೊಮ್ಮುವ ರುಚಿಯಲ್ಲಿ ವ್ಯತ್ಯಾಸ ಎದ್ದುಕಾಣುತ್ತದೆ ಹಾಗೆ ಬಡಿಸುವಾಗ ಅಡುಗೆಮನೆಯ ಕಟ್ಟೆ, ತಟ್ಟೆ, ಲೋಟ, ಬಟ್ಟಲುಗಳ ಸ್ವಚ್ಛತೆಯೊಡನೆ ಆ ಪರಿಸರವೂ, ಆಹಾರ ಸೇವಿಸುವ ಪ್ರಕ್ರಿಯೆಯಲ್ಲಿ ಪ್ರೇರೇಪಿಸುವಂತಿರಬೇಕು ಪ್ರೀತಿಯಿಂದ ಉಣಬಡಿಸಬೇಕು‌ ವಾತಾವರಣ ಹಿತವಾಗಿರಬೇಕು. ಊಟದ ನಂತರ ಉಂಡವರ ಆರೋಗ್ಯ ಕೆಡದೆ, ಮತ್ತೊಮ್ಮೆ ಬರುವಂತಹ ಮನಸ್ಥಿತಿ ಉಂಟಾಗಿದ್ದರೆ ಮಾಡಿದ್ದಕ್ಕೂ ಬಡಿಸಿದ್ದಕ್ಕೂ ಉಂಡಿದ್ದಕ್ಕೂ ಒಟ್ಟಾರೆ ಕರೆದು ಕಳಿಸಿದ್ದಕ್ಕೂ ಗೌರವ.

ನನ್ನ ಅಜ್ಜಿಯ ಎಚ್ಚರಿಕೆಯ ಮಾತು ಇನ್ನು‌ ಈಗ‌ ಕಿವಿಯಲ್ಲಿ‌ ಹೇಳಿದಂತಿದೆ.’ಮನೇಲಿ ಅಡುಗೆಮನೆ ವಿಶಾಲವಾಗಿ ಗಾಳಿ, ಬೆಳಕು‌ ಚೆನ್ನಾಗಿ ಬರುವಂತಿರಬೇಕು. ಅಡುಗೆ‌ ಸ್ವಲ್ಪವೇ ಮಾಡಲಿ ಸುತ್ತಲು ಕೂಡಲೇ ಓರಣ‌ ಮಾಡಬೇಕು. ಇಲ್ಲವಾದರೆ‌ ಹಸು ಕರು‌ ಹಾಕಿದ ಹಾಗಿರತ್ತೆ. ಜೊತೇಲಿ ಬಹಳಷ್ಟು‌ಜನ ನಮ್ಮನ್ನು‌ ನಂಬಿ‌ ಊಟ, ತಿಂಡಿ‌ ಮಾಡೋದ್ರಿಂದ ಅವರೆಲ್ಲರ ಅಮೂಲ್ಯ ಪ್ರಾಣದ ಹೊಣೆಗಾರಿಕೆ‌ ನಮ್ಮ‌ಮೇಲಿರತ್ತೆ. ಬಡಿಸೋವ್ರು ಸ್ವಚ್ಛವಾಗಿದ್ದು‌ ನಗುವಿನ‌ ಆಭರಣ ಧರಿಸಿದ್ದರೆ ಆಹಾ ಅದರ ಸೊಗಸೇ‌‌ ಬೇರೆ.‌ ಉಪಚಾರವಿಲ್ಲದಾಗ ಆವರಿಸಿಕೊಳ್ಳೊ ಸಂಕೋಚಕ್ಕಿಂತ ಅಗತ್ಯಕ್ಕಿಂತ ಹೆಚ್ಚು‌ ಉಪಚಾರ‌ ಮಾಡಿದಾಗ‌ ಆಗೋ ಸಂಕೋಚ‌ ಜಾಸ್ತಿ. 

ಬದುಕಿನ‌ ಪ್ರತಿಯೊಂದು ಜೀವಂತ‌ ಕ್ರಿಯೆಗೆ ಉಸಿರಾಟ ಎಷ್ಟು ಮುಖ್ಯವೋ‌‌ ಹಾಗೆ ಚೈತನ್ಯದ‌‌ ಮೂಲವೇ‌ ಶಕ್ತಿ ಪೂರೈಸುವ ಆಹಾರ ಕ್ರಮ ಎಲ್ಲ ಕಲೆಗೂ ಸಾಹಿತ್ಯಕ್ಕೂ ಸಂಗೀತಕ್ಕೂ ಪ್ರಾಣವೇ ತ್ರಾಣ. ಅಡುಗೆ ಮಾಡುವ ಕರಗಳಿಗೆ, ಬಡಿಸುವ ಹೃದಯಗಳಿಗೆ ಜಯವಾಗಲಿ. ಧನ್ಯಭಾವ ಮೂಡಲಿ.

‍ಲೇಖಕರು Avadhi

June 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: