ಅಮೃತಾ ಹೆಗಡೆ ಅಂಕಣ – ಧುತ್ತೆಂದಿತ್ತು ಕಟು ಸತ್ಯ

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

4

ಅನಸ್ತೇಶಿಯಾ ಸಿರಪ್‌ ಹಾಕಿದಾಗ ಬಂದ ಗಾಢ ನಿದ್ದೆಯಾಗಿತ್ತು ಅದು..!. ಎರಡು ಗಂಟೆಗಳ ಕಾಲದ ಮಹತ್ವದ ಪರೀಕ್ಷೆ ನಡೆಯುತ್ತಿತ್ತು ಆ ರೂಮ್‌ನಲ್ಲಿ. ಮಲಗಿರುವ ಮಗುವಿನ ಹಣೆಯ ಮೇಲೊಂದು, ಎರಡೂ ಕಿವಿಗಳ ಹಿಂದೆ ಒಂದೊಂದು, ಹಿಂಭಾಗದ ತಲೆಯ ಮೇಲೊಂದು ಎಲೆಕ್ಟ್ರೋಡ್ಸ್‌ ಅಂಟಿಸಿ, ಆ ಕೇಬಲ್‌ಗಳನ್ನು ಅಲ್ಲಿದ್ದ ವಿಶೇಷ ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಲಾಗಿತ್ತು.

ಪಕ್ಕದಲ್ಲಿಯೇ ಕುಳಿತ ನಮ್ಮಿಬ್ಬರಿಗೆ ಮಷಿನ್‌ ನಿಂದ ಹೊರಟ ಬೀಪ್‌ ಬೀಪ್‌ ಶಬ್ಧವು ಒಂದೊಂದು ಬಾರಿ ಸಣ್ಣದಾಗಿಯೂ, ಮಗದೊಂದು ಬಾರಿ ಜೋರಾಗಿಯೂ ಕೇಳಿಸುತ್ತಿತ್ತು. ಅಲ್ಲಿ ನಡೆಯುತ್ತಿರುವುದು ಬೆರಾ ( ಬಿ. ಇ. ಆರ್‌. ಎ ) ಟೆಸ್ಟ್‌. ಅಂತಷ್ಟೇ ಗೊತ್ತಿದ್ದ ನಮಗೆ ಅದೆಲ್ಲವೂ ಹೊಸತು. ಆ ಅನುಭವಿ ಆಡಿಯೋಲಾಜಿಸ್ಟ್‌ ಜತೆಯಲ್ಲಿರುವ ಇಬ್ಬರೂ ಇಂಟರ್ನ್‌ಶಿಪ್‌ ವಿದ್ಯಾರ್ಥಿನಿಯರಂತೂ ಅತೀ ಆಸಕ್ತಿಯಿಂದ ಎಲ್ಲವನ್ನೂ ದಾಖಲಿಸಿಕೊಳ್ತಾ ಇದ್ರು. ತಮ್ಮ ಪುಸ್ತಕದಲ್ಲಿಯೂ ಏನನ್ನೋ ಬರೆದುಕೊಳ್ತಾ ನಮ್ಮ ಫೈಲ್‌ನಲ್ಲೂ ಬರೆಯುತ್ತಿದ್ದರು.

ಇ.ಎನ್‌.ಟಿ ಡಾಕ್ಟರ್‌ ಸಲಹೆಯಂತೆ ಎಲ್ಲ ಔಷಧವನ್ನೂ ಮಗುವಿಗೆ ಕೊಟ್ಟು ಒಂದು ವಾರದ ನಂತರ ಮತ್ತೆ ಎಸ್‌.ಆರ್‌. ಚಂದ್ರಶೇಖರ ಇನ್‌ಸ್ಟಿಟ್ಯೂಟ್‌ಗೆ ಬಂದಿದ್ದೆವು. ಅದೇ ಚಡಪಡಿಕೆ, ಅದೇ ಆತಂಕ, ಅದೇ ತಹತಹಿಕೆಗಳ ಜೊತೆಗೆ ಸ್ವಲ್ಪ ಧೈರ್ಯ ನೀಡುತ್ತಿದ್ದ ಭರವಸೆಯನ್ನೂ ಸ್ವಲ್ಪ ಗಂಟು ಕಟ್ಟಿಕೊಂಡು, ಅತ್ತ ಹೆಜ್ಜೆ ಇಟ್ಟಿದ್ದೆವು. ಬೆಳಗ್ಗೆ ಬಂದ ತಕ್ಷಣ ಇ.ಎನ್‌.ಟಿ ಡಾಕ್ಟರ್‌ ಕೈಯ್ಯಲ್ಲಿ ಟೆಸ್ಟ್‌ ಮಾಡಿಸಿ, ಮುಂದಿನ ಪರೀಕ್ಷೆ ಮುಂದುವರೆಸಬಹುದು ಎಂದು ಅವರು ಒಪ್ಪಿಗೆ ಕೊಟ್ಟಮೇಲೆ ಟೆಸ್ಟ್‌ಮುಂದುವರೆದಿತ್ತು.

ಮೊದಲು ಓ. ಏ. ಇ ಸ್ಕ್ರೀನಿಂಗ್‌ (Otoacoustic Emission (OAE) Screening ) ಟೆಸ್ಟ್‌ಮಾಡುವಂತೆ ಡಾಕ್ಟರ್‌ ಸಲಹೆಯಿದ್ದ ಕಾರಣ, ಇಂಟರ್ನ್‌‌ಶಿಪ್‌ ಸ್ಟೂಡೆಂಟ್ಸ್‌ ಈ ಟೆಸ್ಟ್‌ ನಡೆಸಲು ತಯಾರಿ ನಡೆಸಿದ್ದರು. ನಮ್ಮನ್ನ ಒಂದು ಸೌಂಡ್‌ಪ್ರೂಫ್‌ ಕೋಣೆಯೊಳಗರೆ ಕರೆದೊಯ್ದರು. ಭಾರವಾದ ದಪ್ಪ ಬಾಗಿಲು ತೆರೆದು ಒಳಹೋದರೆ, ಒಮ್ಮೆಲೆ ಎ.ಸಿ ಗಾಳಿಯ ತಂಪು ಅನುಭವ.

ಯಾವುದೇ ಕಿಟಕಿಗಳು ಇಲ್ಲದ ಆ ಪುಟಾಣಿ ಕೋಣೆಯ ನೆಲ, ಗೋಡೆಗಳು, ಸೀಲಿಂಗ್‌ನ್ನ ಕೂಡ ವಿಶೇಷವಾಗಿ ಕವರ್‌ ಮಾಡಿರಲಾಗಿತ್ತು. ಅಲ್ಲಿಯೇ ಓ.ಎ.ಇ ಸ್ಕ್ರೀನಿಂಗ್ ಟೆಸ್ಟ್‌ ನಡೆಯುವುದಾಗಿತ್ತು. ಒಂಚೂರೂ ಅಲ್ಲಾಡದೇ, ಗಂಟಲಲ್ಲೇನೂ ಶಬ್ಧವನ್ನೂ ಹೊರಡಿಸದೇ ಮುಖವನ್ನು ನೇರವಾಗಿಟ್ಟುಕೊಂಡು, ಸ್ತಬ್ಧವಾಗಿದ್ದುಕೊಂಡು ಟೆಸ್ಟ್ ಮಾಡಿಸಿಕೊಳ್ಳಬೇಕಿತ್ತು. ಒಂದೂವರೆ ವರ್ಷದ ಮಗುವನ್ನ ಹಾಗೆ ಕೂರಿಸುವುದು ಒಂದು ದೊಡ್ಡ ಸವಾಲಾಗಿತ್ತು ನಮಗೆ. ಆದರೂ ಪ್ರಯತ್ನವಂತೂ ನಡೆಯಿತು. ವಿಶೇಷ ಕಂಪ್ಯೂಟರ್‌ಗೆ ಕನೆಕ್ಟ್‌ ಆಗಿದ್ದ ಚಿಕ್ಕ ಮೈಕ್ರೋಫೋನ್‌ನ್ನು ಮಗುವಿನ ಕಿವಿಯ ರಂದ್ರದೊಳಗೆ ತೂರಿಸಿದ್ದರು.

ಈ ಟೆಸ್ಟ್‌ ನಿಂದ ಮಗುವಿನ ಒಳಕಿವಿ ಮತ್ತು ಕಾಕ್ಲಿಯರ್‌ ನರದೊಳಗಿನ ಹೇರ್‌ಸೆಲ್ಸ್‌ನ ಸಾಮರ್ಥ್ಯವನ್ನು ಅಳೆಯಬಹುದಂತೆ. ಪ್ರತ್ಯೇಕವಾಗಿ ಎರಡೂ ಕಿವಿಗಳ ಟೆಸ್ಟ್‌ನ್ನೂ ಮುಕ್ಕಾಲು ಗಂಟೆಯೊಳಗೆ ಮಾಡಿ ಮುಗಿಸಿದ್ದರು. ಮಗು ಆಶ್ಚರ್ಯಕರವಾಗಿ ಸಹಕರಿಸಿಬಿಟ್ಟಿದ್ದ.

ಮತ್ತೆ ಡಾಕ್ಟರ್‌ ಬಳಿ ಓಡಿ ಹೋಗಿ ರಿಪೋರ್ಟ್‌ ತೋರಿಸಿಕೊಂಡು ಬಂದ, ಇಂಟರ್ನ್‌ ‌ಶಿಪ್‌ ಹುಡುಗಿಯರು, ಮಧ್ಯಾಹ್ನ ಊಟವಾದ ನಂತರ, ಬೆರಾ ಟೆಸ್ಟ್‌ ಮಾಡಲಾಗುತ್ತದೆ, ಆಗ ಮಗುವಿಗೆ ಸಿರಪ್‌ ಹಾಕಿ ಮಲಗಿಸಬೇಕು ಎಂಬುದನ್ನ ತಿಳಿಸಿ, ಔಷಧಿಯ ಹೆಸರು ಬರೆದಿದ್ದ ಚೀಟಿಯನ್ನ ನಮ್ಮ ಕೈಲಿತ್ತರು. ನಾವಿಬ್ಬರು ಮುಖ ಮುಖ ನೋಡಿಕೊಂಡ್ವಿ. ತರಾತುರಿಯಲ್ಲಿದ್ದ ಆ ಹುಡುಗಿಯರು, ಈಗ ಆಡಿಯೋಗ್ರಾಮ್‌ ಟೆಸ್ಟ್‌ ಮಾಡಿಬಿಡೋಣ ಅನ್ನುತ್ತಾ ಮತ್ತೆ ಅಂಥದ್ದೇ ಇನ್ನೊಂದು ಸೌಂಡ್‌ಪ್ರೂಫ್‌ ಕೋಣೆಯೊಳಗೆ ಕರೆದೊಯ್ದರು.

ಆ ಕೋಣೆಯ ಬಾಗಿಲಿನ ಮೇಲೆ Audiometric Test Room ಅಂತ ಬರೆದಿತ್ತು. ಆ ಪುಟ್ಟ ಕೋಣೆಯೊಳಗೆ ಮತ್ತೊಂದು ಕೋಣೆ..! ಅವೆರಡರ ನಡುವಿನ ವಿಭಾಗ ಗೋಡೆಗೆ ಗಾಜಿನ ಪರದೆ..! ಪುಟಾಣಿ ಕೋಣೆಯ ನಡುವಿನ ಪಾರ್ಟಿಶನ್‌ ಗಾಜಿನದ್ದಾಗಿತ್ತು. ಒಂದು ಕಡೆ ನಾನು ಅಥರ್ವನನ್ನ ಕಾಲಮೇಲೆ ಕೂರಿಸಿಕೊಂಡು ಕುಳಿತಿದ್ದೆ. ನನ್ನ ಜೊತೆಗೊಬ್ಬರು ಸ್ಟೂಡೆಂಟ್‌ ಇದ್ದರು. ಅವರೇ ಮಗುವಿನ ಕಿವಿಗೆ ಹೆಡ್‌ಫೋನ್‌ ಹಾಕಿ, ಮಗುವಿನ ಮುಂದೆ ಒಂದಷ್ಟು ಆಟಿಕೆಯನ್ನ ಹರಡಿದ್ದರು. ಒಂಚೂರು ಕಿರಿಕಿರಿ ಮಾಡದೇ, ಅಥರ್ವ ಹೆಡ್‌ಫೋನ್‌ ಹಾಕಿಕೊಂಡು, ತನ್ನ ಮುಂದಿದ್ದ ಆಟಿಕೆಗಳನ್ನ ನೋಡ್ತಾ, ಆಡ್ತಾ ಖುಷಿಯಾಗಿದ್ದ. ಇನ್ನೊಂದು ಕಡೆ ಇದ್ದ ಇಬ್ಬರು ಇಂಟರ್ನ್‌‌ಶಿಪ್‌ ವಿದ್ಯಾರ್ಥಿನಿಯರು, ಅಥರ್ವನ ಒಂದೊಂದೇ ಕಿವಿಗೆ ಬೇರೆ ಬೇರೆ ಡೆಸಿಬಲ್‌ನಲ್ಲಿ ಶಬ್ಧವನ್ನ ಅವನ ಕಿವಿಗೆ ಹರಿಸುತ್ತಾ, ಅವನ ರೆಸ್ಪಾನ್ಸ್‌ ದಾಖಲಿಸಿಕೊಳ್ತಾ ಇದ್ರು.

ಒಮ್ಮೆಮ್ಮೆ ಜೋರಾಗಿಯೂ ಒಮ್ಮೊಮ್ಮೆ ಸಣ್ಣದಾಗಿಯೂ ಆ ಹೆಡ್‌ಫೋನ್‌ ನಿಂದ ಸೌಂಡ್‌ ನನಗೆ ಕೇಳಿಸುತ್ತಿತ್ತು. ಅಥರ್ವನ ಪ್ರತಿಕ್ರಿಯೆ ಮಾತ್ರ ಗೊಂದಲ ಉಂಟುಮಾಡುತ್ತಿತ್ತು. ಕೆಲವೊಮ್ಮೆ ಶಬ್ಧ ಕೇಳಿಸಿದ ಹಾಗೆ ಮುಖಭಾವ ತೋರಿಸುತ್ತಿದ್ದ ಹುಡುಗ, ಇನ್ನು ಕೆಲವು ಸಮಯ ಎಷ್ಟೇ ಜೋರಾದ ಶಬ್ಧವಿದ್ದರೂ ಅವನಿಂದ ಯಾವುದೇ ಪ್ರತಿಕ್ರಿಯೆ ಇರುತ್ತಿರಲೇ ಇಲ್ಲ. ಒಂದು ಗಂಟೆಗಳ ಕಾಲ ಈ ಟೆಸ್ಟ್‌ ಮುಂದುವರೆದಿತ್ತು. ಟೆಸ್ಟ್‌ ಮುಗಿಯುವ ಹೊತ್ತಿಗೆ ಹೆಡ್‌ಫೋನ್‌ ಕಿತ್ತೆಸೆಯತೊಡಗಿದ್ದ. ಹೆಡ್‌ಫೋನ್‌ ಬೇಡವೇ ಬೇಡ ಅಂತ ಅಳುವುದಕ್ಕೆ ಶುರುವಿಟ್ಟುಕೊಂಡಿದ್ದ. ನಮ್ಮ ಅದೃಷ್ಟಕ್ಕೆ ಆ ಸಮಯಕ್ಕಾಗಲೇ ಆಡಿಯೋಗ್ರಾಮ್‌ ಪರೀಕ್ಷೆ ಮುಗಿಯುವ ಹಂತ ತಲುಪಿತ್ತು.

ನಾನು, ವಿನಯ್‌ ಇಬ್ಬರೂ ಅಲ್ಲಿ ನಡೆಯುತ್ತಿರುವ ಎಲ್ಲ ಪರೀಕ್ಷೆಗಳ ಬಗ್ಗೆ ಮನಸ್ಸು ಗಟ್ಟಿ ಮಾಡಿಕೊಂಡಿದ್ದೆವು. ರಿಪೋರ್ಟ್‌ ಏನು ಬಂತು..? ನಿಮಗೇನನ್ನಿಸುತ್ತೆ..? ಅಂತ ಮತ್ತೆ ಮತ್ತೆ ಯಾರನ್ನೂ ನಾವು ಕೇಳುತ್ತಿರಲಿಲ್ಲ. ಎಲ್ಲವೂ ಮುಗಿದ ಮೇಲೆ ಗೊತ್ತಾಗಿಯೇ ಆಗುತ್ತಲ್ಲ ಅನ್ನೋ ನ್ಯೂಟ್ರಲ್‌ ಮನಸ್ಥಿತಿ ಅದು. ವಿನಯ್‌ ಯಾವಾಗಲೂ ಹೇಳುತ್ತಿದ್ದ, ‘ಪರಿಸ್ಥಿತಿಗೆ ನಾವು ಶರಣಾಗಿಬಿಡಬೇಕು. ಆಗ ಮಾನಸಿಕ ಒತ್ತಡ ಕಾಡೋದಿಲ್ಲ’ ಅಂತ. ಅವನ ಆ ಸಲಹೆಯನ್ನೇ ನಾನೂ ಪಾಲಿಸತೊಡಗಿದ್ದೆ.

ಆಡಿಯೋಗ್ರಾಮ್‌ ಕೋಣೆಯಿಂದ ಹೊರಬಂದ ತಕ್ಷಣ, ಮಗುವಿಗೆ ಹಾಲೂಡಿಸಲು ಒಂದು ಕೋಣೆ ತೋರಿಸಿದ್ದರು. ಬೆಳಿಗ್ಗೆ 9 ರಿಂದ ವಿವಿಧ ಟೆಸ್ಟ್‌‌ಮಾಡಿಸಿಕೊಂಡಿದ್ದ ನನ್ನ ಕೂಸು, ಹಾಲು ಕುಡಿದು ಸ್ವಲ್ಪ ಗೆಲುವಾದ. ತಕ್ಷಣವೇ ನಮ್ಮನ್ನ ಇನ್ನೊಂದು ಕಡೆ ಕರೆದೊಯ್ದರು. ಅದೊಂದು ಸಾಮಾನ್ಯ ಕೋಣೆ. ಅಲ್ಲಿಯೂ ಇಬ್ಬರು ಇಂಟರ್ನ್‌‌ಶಿಪ್‌ ಸ್ಟೂಡೆಂಟ್ಸ್‌ ನಮ್ಮ ಫೈಲ್‌ ಹಿಡಿದುಕೊಂಡು ನೆಲಕ್ಕೆ ಹಾಸಿದ ಚಾಪೆಯ ಮೇಲೆ ಒಂದು ರಾಶಿ ಆಟಿಕೆಗಳನ್ನು ಹರಡಿಕೊಂಡು ಕೂತಿದ್ದರು.

ಆಟಿಕೆ ನೋಡಿದ್ದೇ, ಅಪ್ಪನ ಕೈಯ್ಯಿಂದ ಬಿಡಿಸಿಕೊಂಡು, ಖುಷಿಯಿಂದ ಓಡಿಬಂದ ಅಥರ್ವ ಅವರಿಗೆಲ್ಲ ಇಷ್ಟವಾದ. ಮಗುವಿನ ಜತೆಗೆ ಆಟವಾಡ್ತಾ ಆಟವಾಡ್ತಾ ಹಲವಾರು ರೀತಿಯ ಶಬ್ಧ ಮಾಡುತ್ತಾ, ಮಗುವಿನ ರೆಸ್ಪಾನ್ಸ್‌ ಬರೆದುಕೊಳ್ಳೋದು ಅವರಿಗೆ ವಹಿಸಿದ ಕೆಲಸ. ಅಥರ್ವನ ಪಾಲಿಗೆ ಆಟದ ಜೊತೆಗೆ ನಡೆದ ಆ ಪರೀಕ್ಷೆಯಂತೂ ತುಂಬಾ ರಿಫ್ರೆಶಿಂಗ್ರಿ ಆಗಿತ್ತು.

ಗುಳ್ಳೆಗಳಾಟ ಅಂದ್ರೆ ಯಾವ ಮಕ್ಕಳಿಗೆ ಇಷ್ಟವಿಲ್ಲ ಹೇಳಿ..! ಅಲ್ಲಿರೋ ಸ್ಟೂಡೆಂಟ್ಸ್ ಕೈಯಲ್ಲಿ ಬಬಲ್ಸ್‌ ಗನ್‌ ಇತ್ತು. ಸಾಬೂನು ನೀರಲ್ಲದ್ದಿದ್ದ ಬಬಲ್ಸ್‌ ಕಡ್ಡಿಯನ್ನ ಅಥರ್ವನ ಬಾಯಿಯ ಮುಂದೆ ಹಿಡಿದು ಊದಿಸುವಂತೆ ಹೇಳಿದ್ದರು. ‘ಪುಟ್ಟಾ… ಉಫ್‌ ಮಾಡು..’ ಅಂತ ನಾನೆಷ್ಟೇ ಹೇಳಿದರೂ.. ಅವನ ಮುಂದೆ ಊಫ್‌ ಮಾಡಿ ತೋರಿಸಿದರೂ ಅವನಿಂದ ಊದಲು ಸಾಧ್ಯವಾಗಲೇ ಇಲ್ಲ. ಜ್ಯೂಸ್‌ ಟೆಟ್ರಾ ಪ್ಯಾಕ್‌ ತರಿಸಿ, ಸ್ಟ್ರಾ ಮೂಲಕ ಜ್ಯೂಸ್‌ ಹೀರಲು ಹೇಳಿದ್ದರು. ಜ್ಯೂಸ್ ಕುಡಿಯುವುದು ಅವನಿಗೆ ಇಷ್ಟವಿದ್ದರೂ, ಸ್ಟ್ರಾದಲ್ಲಿ ಅವನಿಗೆ ಜ್ಯೂಸ್‌ ಹೀರಲು ಸಾಧ್ಯವೇ ಆಗಿಲ್ಲ. ಬಾಯೊಳಗೆ ಹಾಕು ಎನ್ನುವಂತೆ ತನ್ನ ನಾಲಿಗೆ ಸುಳಿಯುತ್ತಿದ್ದನೇ ಹೊರತು ಸ್ಟ್ರಾದಲ್ಲಿ ಹೀರುವುದು ಅವನಿಂದ ಸಾಧ್ಯವೇ ಆಗಿರಲಿಲ್ಲ. ಇಂಥ ವಿಶೇಷ ಪರೀಕ್ಷೆಗಳು ಅಲ್ಲಿ ನಡೆದಿದ್ದವು. ಅವನ್ನೂ ಕೂಡ ಫೈಲ್‌ನಲ್ಲಿ ದಾಖಲಿಸಿಕೊಂಡರು ಅವರು.

ಮಧ್ಯಾನ 1 ಗಂಟೆಯಿಂದ 2 ಗಂಟೆಯ ತನಕ ಲಂಚ್‌ಬ್ರೇಕ್‌..! ಇನ್‌ಸ್ಟಿಟ್ಯೂಟ್‌ನ ಕ್ಯಾಂಟೀನ್‌ನಲ್ಲಿಯೇ ಅಥರ್ವನಿಗೇನೋ ಊಟ ಮಾಡಿಸಿ, ನಾವೂ ಏನೋ ತಿನ್ನುತ್ತಿದ್ದೆವು. ನಮ್ಮ ಮುಂದಿನ ಟೇಬಲ್‌ನ ಮೇಲೆ ಊಟ ಮಾಡುತ್ತಾ, ಸಂವಹಿಸುತ್ತಿದ್ದ ಇಬ್ಬರು ಮಕ್ಕಳು ನಮ್ಮ ಗಮನ ಸೆಳೆದರು. ಹೈಸ್ಕೂಲು ಓದುತ್ತಿರುವ ಮಕ್ಕಳಾಗಿರಬಹುದು, ಒಂದೇ ಒಂದು ಶಬ್ಧವನ್ನೂ ಗಂಟಲಿನಿಂದ ಹೊರಡಿಸದೇ, ಸನ್ನೆ ಭಾಷೆ ಬಳಸಿ ಗಹನವಾಗಿ ಮಾತನಾಡುತ್ತಿದ್ದರು. ಅವರ ಹಾವ ಭಾವ, ಸಂವಹನ ನೋಡಿ ಅದೇನೋ ಅವ್ಯಕ್ತ ಸಂಕಟ ನನ್ನ ಆವರಿಸಿಕೊಳ್ತಾ ಇತ್ತು.

ನನ್ನ ಮುಖ ನೋಡಿದ ವಿನಯ್‌ ಆ ಕ್ಷಣ ಏನೂ ಹೇಳದಾದ. ಅಂತೂ ಊಟದ ಶಾಸ್ತ್ರ ಮುಗಿಸಿ ಅಲ್ಲಿಂದ ಹೊರಬಂದೆವು. ಮಟ ಮಟ ಮಧ್ಯಾಹ್ನ ಹೊಟ್ಟೆಗೆ ಊಟ ಬಿದ್ದಿದ್ದೇ, ಅಥರ್ವನಿಗೆ ನಿದ್ದೆ ಆವರಿಸಿಕೊಳ್ತಾ ಇತ್ತು, ಆ ಸಹಜ ನಿದ್ದೆಯಲ್ಲದೇ, ಡಾಕ್ಟರ್‌ಸೂಚಿಸಿದಷ್ಟು ಸಿರಪ್‌ ಕೂಡ ಅವನ ಹೊಟ್ಟೆಗೆ ಸೇರಿದ್ದರಿಂದ, ಅತೀ ಕಡಿಮೆ ಸಮಯದಲ್ಲಿ ಅಥರ್ವ ನಿದ್ದೆ ಮಾಡಿಬಿಟ್ಟಿದ್ದ. ಲಂಚ್‌ ಬ್ರೇಕ್‌ ಮುಗಿಯುತ್ತಿದ್ದಂತೆ, ವಿನಯ್‌ ಹೋಗಿ ಟೆಸ್ಟ್‌ ಮಾಡಲಿದ್ದ ಸ್ಟೂಡೆಂಟ್ಸ್‌ಗೆ ತಿಳಿಸಿ ಬಂದಿದ್ದೂ ಆಯ್ತು. ಆಗಿದ್ದಾಂಗ್ಲೇ, ಅವರು ಎಲ್ಲ ತಯಾರಿ ಮಾಡಿಕೊಂಡು ನಮ್ಮನ್ನ ಟೆಸ್ಟಿಂಗ್‌ ರೂಂಗೆ ಕರೆದರು.

ಫೈನಲ್‌ ಟೆಸ್ಟ್‌ ಬೆರಾ ( ಬಿ.ಇ.ಆರ್‌.ಎ )! ಇದು ಅಂತಿಮ ಪರೀಕ್ಷೆ ಎಂಬ ಕಾರಣಕ್ಕೋ ಏನೋ ಕಾಲುಗಳು ಸಣ್ಣಗೆ ಅದುರುತ್ತಿದ್ದವು. ಮಗುವನ್ನ ನಿಧಾನವಾಗಿ ಬೆಡ್‌ಮೇಲೆ ಮಲಗಿಸಿದೆ. ಅಲ್ಲಿದ್ದ ಸೀನಿಯರ್‌ ಆಡಿಯೋಲಾಜಿಸ್ಟ್‌ ಆಣತಿಯಂತೆ, ಮಗುವಿನ ಕಿವಿಗಳ ಹಿಂದೆ, ಹಣೆ, ತಲೆಯ ಹಿಂಭಾಗವನ್ನು ಅಲ್ಲಿದ್ದ ಇಬ್ಬರು ಇಂಟರ್ನ್‌‌ಶಿಪ್‌ ವಿದ್ಯಾರ್ಥಿನಿಯರು ಯಾವುದೋ ಔಷಧದಲ್ಲಿದ್ದ ಹತ್ತಿಯಿಂದ ಸ್ವಚ್ಛಗೊಳಿಸಿ, ಎಲೆಕ್ಟ್ರೋಡ್‌ ಕೇಬಲ್‌ಗಳನ್ನ ಅಂಟಿಸಿದರು. ಹಣೆ, ಕಿವಿ, ತಲೆಯ ಮೇಲೆಲ್ಲಾ ಕೇಬಲ್‌ ಅಂಟಿಸಿಕೊಂಡು, ಮೈಮೇಲೆ ಎಚ್ಚರವಿಲ್ಲದೆ ಮಲಗಿದ್ದ ನನ್ನ ಮಗುವನ್ನ ನೋಡಿದರೆ ದುಃಖ ಉಮ್ಮಳಿಸುತ್ತಿತ್ತು.

ಟೆಸ್ಟ್‌ ಆರಂಭವಾಯ್ತು. ವಿಶೇಷ ಕಂಪ್ಯೂಟರ್‌ನ ಮಾನಿಟರ್‌ ಸ್ಕ್ರೀನ್‌ನ ಮೇಲೆ ಬಳುಕಾಡುತ್ತಿರುವ ಫ್ರೀಕ್ವೆನ್ಸಿ ಲೈನ್‌ಗಳನ್ನ ನೋಡುತ್ತ ನಾವಿಬ್ಬರೂ ಅಲ್ಲೇ ಕೂತಿದ್ದೆವು. ವಿನಯ್‌ಗಾದರೂ ಏನಾದರೂ ಅರ್ಥವಾಗುತ್ತಿರಬಹುದು ಎಂಬ ಬಲವಾದ ಅಂದಾಜಿನಲ್ಲಿಯೇ ಆಗಾಗ ಅವನ ಮುಖವನ್ನ ಪ್ರಶ್ನಾರ್ಥಕವಾಗಿ ನೋಡುತ್ತಿದ್ದೆ. ನಾನು ಎಷ್ಟು ಸಲ ಅವನ ಮುಖ ನೋಡಿದ್ದೆನೋ ಅಷ್ಟೂ ಸಲವೂ ಎಲ್ಲ ಅರ್ಥವಾದವನಂತೆ, ಮಗುವಿಗೆ ನಾರ್ಮಲ್‌ ಹಿಯರಿಂಗ್‌ ಇದೆ… ಡೋಂಟ್‌ ವರಿ ಅನ್ನುವಂತೆ ಸನ್ನೆ ಮಾಡುತ್ತಲೇ ಇದ್ದ. ಅರ್ಥವಾಗದ ಆ ಕಂಪ್ಯೂಟರ್‌ ಸ್ಕ್ರೀನ್‌ ನೋಡುತ್ತಲೇ ಬರೋಬ್ಬರಿ ಒಂದೂಮುಕ್ಕಾಲು ಗಂಟೆ ಕಳೆದು ಹೋಗಿತ್ತು. ಅಂತೂ ಪರೀಕ್ಷೆಯೂ ಮುಗಿದಿತ್ತು.

ಮಗುವಿನ ದೇಹದ ಮೇಲಿದ್ದ ಕೇಬಲ್‌ಗಳನ್ನು ವಿದ್ಯಾರ್ಥಿನಿಯರು ನಿಧಾನವಾಗಿ ತೆಗೆಯುತ್ತಿದ್ದರೆ, ಸೀನಿಯರ್‌ ಆಡಿಯೋಲಾಜಿಸ್ಟ್‌ ನಮ್ಮ ಫೈಲ್‌ನ್ನು ಕೂಲಂಕುಷವಾಗಿ ಚೆಕ್‌ ಮಾಡಿ ಮುಗಿಸಿ, ನಮ್ಮ ಕಡೆ ಮುಖ ಮಾಡಿದರು. ಎಲ್ಲ ಟೆಸ್ಟ್‌ಗಳೂ ಮುಗಿದ ಮೇಲೆ ಅಲ್ಲೊಂದು ಗಾಢ ಮೌನ ಆವರಿಸಿತ್ತು. ಅವರೇ ಮಾತನಾಡಲಿ ಅನ್ನೋ ಕಾರಣಕ್ಕೆ ನಾವೂ ಸುಮ್ಮನಿದ್ದೆವು. ಅವರೇ ಪ್ರಾರಂಭಿಸಿದರು.

‘ನೀವಿಬ್ಬರೂ ಧೈರ್ಯವಾಗಿರಬೇಕು. ಇಷ್ಟೊತ್ತು ಇಲ್ಲಿ ನಾವು ಮಾಡಿರುವ ಪರೀಕ್ಷೆಯ ಹೆಸರು ಬೆರಾ. ಅಂದರೆ ಬ್ರೇನ್‌ ಸ್ಟೆಮ್‌ ಇವೋಕ್ಡ್‌ ರೆಸ್ಟಾನ್ಸ್‌ ಆಡಿಯೋಮೀಟರಿ { Brain Evoked Response Auditory (BERA))} ಅಂತ. ಕಿವಿಯ ಶ್ರವಣೇಂದ್ರಿಯ ನರ ( cochlear ) ದಿಂದ brainstem ವರೆಗೂ ಶಬ್ಧಗಳು ಹರಿಯುತ್ತವೋ ಇಲ್ಲವೋ, ಎಷ್ಟು ಪ್ರಮಾಣದಲ್ಲಿ ಶಬ್ಧಗಳು ಹರಿಯುತ್ತಿವೆ ಅನ್ನುವುದನ್ನ ಪರೀಕ್ಷೆ ಮಾಡುವ ಟೆಸ್ಟ್‌ ಇದು. ಇದೊಂದು ಕಿವಿ ನರದ ಪ್ರತಿಕ್ರಿಯೆಯನ್ನು ಅಳೆಯುವ ನಿಖರವಾದ ಮೌಲ್ಯಮಾಪನ. ಹೀಗಾಗಿ ಈಗ ಬಂದ ಫಲಿತಾಂಶದಲ್ಲಿ ಯಾವುದೇ ಅನುಮಾನ ಬೇಡ..’

ಅವರು ವಿವರಿಸುವ ಓಘದಲ್ಲಿದ್ದಾಗಲೇ, ನಾನು ಆತಂಕದಿಂದಲೇ ಕೇಳಿದ್ದೆ. ‘ಮೇಡಮ್‌, ಬೆಳಗ್ಗೆಯಿಂದ ಈ ಕಾಕ್ಲಿಯರ್‌ ನರದ ಬಗ್ಗೆ ಮಾತನಾಡುತ್ತಿದ್ದೇವಲ್ಲ.. ಹಾಗಂದರೆ ಏನು..?’ ಮಧ್ಯದಲ್ಲಿ ಬಂದ ಈ ಪ್ರಶ್ನೆಗೆ ಸ್ವಲ್ಪವೂ ಬೇಸರ ಪಡದೇ ವಿವರಿಸಿದರು ‘ಕಾಕ್ಲಿಯರ್‌ ನರ ನಮ್ಮೆಲ್ಲರ ಒಳಕಿವಿಯಲ್ಲಿ ಇರುವ ಒಂದು ಅಂಗ. ನೋಡಲು ಸುರುಳಿ ಸುತ್ತಿದ ಚಕ್ಕುಲಿಯ ತರಹವೇ ಇರುತ್ತೆ. ಈ ಕಾಕ್ಲಿಯರ್‌ ನರದೊಳಗೆ ಹೇರ್‌ಸೆಲ್ಸ್‌ ಇರುತ್ತವೆ. ಈ ಹೇರ್‌ಸೆಲ್‌ಗಳು ಶ್ರವಣೇಂದ್ರೀಯ ನರಗಳಿಗೆ ವಿದ್ಯುತ್‌ ತರಂಗಗಳನ್ನು ಕೊಡುತ್ತವೆ. ಹೀಗೆ ಕೊಕ್ಲಿಯರ್‌ ನರದಿಂದಾಗಿಯೇ ನಾವೆಲ್ಲ ಕೇಳಿಸಿಕೊಳ್ಳುತ್ತಿರುವುದು. ಹೇರ್‌ಸೆಲ್ಸ್‌ಇವೆಯಾ..? ಇಲ್ಲವಾ..? ಇದ್ದರೂ ಅವು ಎಷ್ಟು ಸಮರ್ಥವಾಗಿವೆ ಅನ್ನುವುದರ ಮೇಲೆ ನಮ್ಮೆಲ್ಲರ ಶ್ರವಣ ಶಕ್ತಿ ನಿರ್ಧರಿತವಾಗಿರುತ್ತದೆ. ಈಗ ನಾವು ಮಾಡಿರುವ ಬೆರಾ ಟೆಸ್ಟ್‌ನಲ್ಲಿ ನಾವು ಕೊಟ್ಟ ಶಬ್ಧಗಳಿಗೆ ಮಗುವಿನ ಕಾಕ್ಲಿಯರ್‌ ನರ ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನ ಅಳೆದಿದ್ದೇವೆ’ ವಿವರಿಸುತ್ತಿದ್ದಾಗಲೇ ಅವರ ಕೈಗಳು ಪೇಪರ್‌ಮೇಲೆ ಕಾಕ್ಲಿಯರ್‌ಚಿತ್ರ ಬರೆಯುತ್ತಿದ್ದವು. ಚಿತ್ರ ತೋರಿಸಿ ಅರ್ಥ ಮಾಡಿಸಿ, ಮುಂದುವರಿದರು.

‘ನಾವು ಅತ್ಯಂತ ಕಡಿಮೆ ಡೆಸಿಬಲ್‌ನಿಂದ ಹಿಡಿದು 70 ಡೆಸಿಬಲ್‌ನ ಶಬ್ಧಗಳನ್ನೂ ಮಗುವಿನ ಕಿವಿಗೆ ಹರಿಸಿ ಟೆಸ್ಟ್‌ಮಾಡಿದ್ದೇವೆ. 70 ಡೆಸಿಬಲ್‌ ದಾಟಿದ ಶಬ್ಧಕ್ಕೂ ಮಗುವಿನ ಮೆದುಳು ಪ್ರತಿಕ್ರಿಯಿಸಿಲ್ಲ. ಒಂದು ವೇಳೆ 50 ಡೆಸಿಬಲ್‌ ಶಬ್ಧಕ್ಕೆ ರೆಸ್ಪಾನ್ಸ್‌ ಬಂದಿದ್ದರೆ, ಹಿಯರಿಂಗ್‌ ಏಡ್‌ ಸಾಕಾಗುತ್ತಿತ್ತು. ಆದರೆ, ಬೆಳಗ್ಗೆಯಿಂದ ಇಲ್ಲಿ ನಡೆದ ಓ.ಎ.ಇ ಟೆಸ್ಟ್‌, ಆಡಿಯೋಗ್ರಾಂ, ಮತ್ತು ಬಿಹೇವಿಯರಲ್‌ಟೆಸ್ಟ್‌ಮತ್ತು ಬೆರಾ ಈ ಎಲ್ಲದರ ರಿಪೋರ್ಟ್‌ಗಳನ್ನೂ ನೋಡಿ ಹೇಳುವುದಾದರೆ ನಿಮ್ಮ ಮಗುವಿಗೆ 75 ರಿಂದ 80 ಪರ್ಸೆಂಟ್‌ ಹಿಯರಿಂಗ್‌ ಲಾಸ್‌ ಇದೆ. ನಿಮ್ಮ ಮಗುವಿನ ಎರಡೂ ಕಿವಿಗಳಿಗೂ ಇರುವುದು ‘ಸೀವಿಯರ್‌ ಟು ಪ್ರೊಫೌಂಡ್‌ ಹಿಯರಿಂಗ್‌ ಲಾಸ್‌.’ ಎಂದು ಹೇಳಿ ಒಂದು ಕ್ಷಣ ಸುಮ್ಮನಾದರು.

ದುಖಃ ಹತ್ತಿಕ್ಕುತ್ತಲೇ ಇದ್ದ ನಾನು ಆ ಕ್ಷಣ ಸೋತುಬಿಟ್ಟೆ. ಕಣ್ಣೀರು ಒತ್ತರಿಸಿಕೊಂಡು ಬಂತು. ವಿನಯ್‌ ನನ್ನ ಹೆಗಲು ಬಳಸಿ ಹಿಡಿದುಕೊಂಡ. ಕಂಪಿಸುವ ದನಿಯಲ್ಲಿಯೇ ವಿನಯ್‌ ಅವರನ್ನ ಕೇಳಿದ್ದ ‘ಮುಂದೇನು ಮಾಡುವುದು ನಾವು..?’

‘ಪ್ರೊಫೌಂಡ್‌ ಹಿಯರಿಂಗ್‌ ಲಾಸ್‌ ಇರೋದ್ರಿಂದ, ಮಗುವಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಮಾಡಿಸಿದರೆ ಮಗುವಿನ ಭವಿಷ್ಯಕ್ಕೆ ಒಳ್ಳೆಯದು. ಮಗುವಿಗಿನ್ನೂ ಒಂದೂವರೆ ವರ್ಷವಲ್ಲವೇ…? ಬೇಗ ಸರ್ಜರಿ ಮಾಡಿಸಿದರೆ ಮಗುವಿಗೆ ಸಹಜ ಮಾತು ಬರುತ್ತೆ.

‘——–‘

ನಮ್ಮ ಕಡೆಯಿಂದ ಯಾವ ಮಾತುಗಳೂ ಇರಲಿಲ್ಲ.

ಆದರೆ ಸಧ್ಯದಲ್ಲಿ ಈಗ ನೀವು ‘ಎಂ‌.ಆರ್‌.ಐ ಮತ್ತು ಸಿ.ಟಿ ಸ್ಕ್ಯಾನ್‌ ಮಾಡಿಸಲೇಬೇಕು. ಆ ರಿಪೋರ್ಟ್ ನಿಂದ ಮಗುವಿನ ಕಾಕ್ಲಿಯರ್‌ ನರದ ರಚನೆ ಮತ್ತು ಮೆದುಳಿನಲ್ಲಿ ಕೇಳಿಸಿಕೊಳ್ಳುವ ಭಾಗದ ರಚನೆ ತಿಳಿಯಬಹುದು. ಕಾಕ್ಲಿಯರ್‌ನರಗಳು ಇವೆಯೋ ಇಲ್ಲವೋ ಅನ್ನೋದೂ ತಿಳಿಯುತ್ತದೆ. ಒಂದುವೇಳೆ ಕಾಕ್ಲಿಯರ್‌ ನರವೇ ಇಲ್ಲ ಎಂದಾದಲ್ಲಿ, ಮಗುವಿಗೆ ಸೈನ್‌ ಲ್ಯಾಂಗ್ವೇಜ್‌ ಕಲಿಸಬೇಕಾಗುತ್ತದೆ, ನೀವೂ ಕಲಿಯಬೇಕಾಗುತ್ತದೆ’ ಅನ್ನುತ್ತಾ, ಎಂ.ಆರ್‌.ಐ ಸ್ಕ್ಯಾನ್‌ ಮಾಡಿಸುವ ಸಲುವಾಗಿ ಚೀಟಿ ಬರೆದುಕೊಟ್ಟರು.

‘ಮಗೂಗೆ ಹಿಯರಿಂಗ್‌ಏಡ್‌ ತಗೋಬೇಕಲ್ವಾ..? ನಿಮ್ಮ ಹತ್ರಾನೇ ಸಿಗುತ್ತಲ್ವಾ..?’ ಕೇಳಿದ ವಿನಯ್‌. ‘ಖಂಡಿತ. ನಮ್ಮಲ್ಲಿ ಸಿಗುತ್ತೆ. ಸರ್ಜರಿ ಮಾಡಿಸುವುದೇ ಆದರೂ ಸ್ವಲ್ಪ ದಿನಗಳ ಕಾಲ ಹಿಯರಿಂಗ್‌ ಏಡ್‌ ಮಗುವಿಗೆ ಹಾಕಬೇಕಾಗುತ್ತೆ’ ಅಂದ ಅವರು, ಒಂದು ಕ್ಷಣ ಬಿಟ್ಟು ‘ಮೊದಲು ಎಂ.ಆರ್‌.ಐ ಮತ್ತು ಸಿ.ಟಿ ರಿಪೋರ್ಟ್‌ ಬರಲಿ. ಆಮೇಲೆ ಮಗುವಿಗೆ ಹಿಯರಿಂಗ್‌ ಏಡ್‌ ಸಜೆಸ್ಟ್‌ ಮಾಡ್ತೀವಿ. ಹಿಯರಿಂಗ್‌ ಏಡ್‌ ಹಾಕಿದ ಮೇಲೆ ನಮ್ಮಲ್ಲಿಯೇ ಟ್ರೈನಿಂಗ್‌ ಕ್ಲಾಸ್‌ ಕೂಡ ಇದೆ. ತಾಯಿ ಮತ್ತು ಮಗು ಅಟೆಂಡ್‌ ಮಾಡಬೇಕಾಗುತ್ತೆ’ ಮಾಹಿತಿ ನೀಡಿದ್ದರು ಅವರು.

ಅಷ್ಟೊತ್ತು ನಮ್ಮ ಜತೆಯಲ್ಲಿಯೇ ಇದ್ದ ಭರವಸೆ ಇದ್ದಕ್ಕಿದ್ದಂತೆ ಮಾಯವಾಗಿತ್ತು. ಆಶಾಗೋಪುರ ಕುಸಿದಿತ್ತು. ನಮ್ಮ ಮಗು ‘ಕಿವುಡು ಮಗು’ ಎಂಬ ಕಟು ಸತ್ಯವನ್ನ ನಾವಿಬ್ಬರೂ ಅರಗಿಸಿಕೊಳ್ಳಲೇಬೇಕಿತ್ತು.

। ಮುಂದಿನ ವಾರಕ್ಕೆ ।

‍ಲೇಖಕರು Avadhi

June 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Jayalaxmi Patil

    ಅಮೃತ, ನಾಲ್ಕೂ ಕಂತುಗಳನ್ನು ಓದುತ್ತಾ ಓದುತ್ತಾ ನಾಭಿಯಿಂದೆದ್ದ ಸಂಕಟ ನರನಾಡಿಗಳಲ್ಲಿ ವ್ಯಾಪಿಸಿದಂಥಾ ಅನುಭವ. ಮುಂದಿನ ಕಂತಿನಲ್ಲಿ ಮಗುವಿನ ಶ್ರವಣ ಸಾಮರ್ಥ್ಯ ಚಿಗುರಿದ ಭರವಸೆಯ ಸಾಲುಗಳನ್ನು ಎದುರು ನೋಡುತ್ತಿರುವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: