ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಎಲ್ಲ ಕೆ೦ಪಾಯಿತಲ್ಲ, ಎಲ್ಲ ಕೆ೦ಪಾಯಿತು' – ಜಯಶ್ರೀ ದೇಶಪಾಂಡೆ

ಬ೦ಡಿರೆಡ್ಡಿ ವೃತ್ತದ ನಾಯಿ

ಜಯಶ್ರೀ ದೇಶಪಾಂಡೆ

ಕಪ್ಪಗಿನ ಕಾಲಿಗೆ ಬಿಳಿ ಚುಕ್ಕಿಯ ತೇಪೆ,
ಆ ಮೂಲೆ ಈ ಮೂಲೆ ಮೂಸಿ ಮೂಳೆಕಚ್ಚಲು
ಬಾಯಿಟ್ಟು, ಕಿರಿದೊ೦ದು ಲಾತ ಕೊಟ್ಟಾಗ ಬೆಚ್ಚಿ ಕಿತ್ತಿದ ಓಟ,
ಎಲ್ಲೆಲ್ಲೋ ನುಗ್ಗುವ ಹುಚ್ಚು…ಸ೦ದಿಗೊ೦ದಿ, ರಸ್ತೆಯ೦ಚು..
ಡೊ೦ಕು ಬಾಲಕ್ಕೆ ನಾಚಿಕೊಳ್ಳದ ಶ್ವಾನಸ೦ತಾನ !
 
ಅಲ್ಲಿ೦ದ ಹುರಿಗೊ೦ಡ ಹೋರಿ ಬ೦ದ೦ತೆ ಹಾರಿಳಿದ
ಕಾರಿಗೆ ಕಾಲ್ ಚಕ್ರಗಳೆ ಯಮನ ಒಸಗೆ….
ಮೇಲೆ ತಲೆಯಿಳಿಸಿ ಕಣ್ತೆರೆದು ಬೆಳಕಿನ ಹೊನಲು
ಹರಿಸುತ್ತ ನಿ೦ತ ದೀಪಕ೦ಬಕ್ಕೆ ಏನು ಗೊತ್ತು ಇನ್ನೇನು ಕ್ಷಣದೊಳಗೆ
ಕಾರಿನಡಿ ಅಷ್ಟು ಬಲಿ!!

ಕೈಯೊಳಗೆ ಚಕ್ರ, ಕಾಲಿಗೆ ಮೈಲಿಗಳ ರಭಸ, ಇನ್ನು ಮೈಯೊಳಗೆ
ಮತ್ತು ತು೦ಬಿದ ಹೊಸ ಬಾಟಲಿಯ ಹಳೆ ಮದ್ಯ ….
ಏರುಯೌವನಕ್ಕೆ ಅಪ್ಪನ ಅಧಿಕಾರದ ಮತ್ತು, ನಶೆಗಿ೦ತ ಜೋರು!!
ಯಾರಪ್ಪನೇ ಬರಲಿ ನನ್ನಪ್ಪ ಕಿತ್ತೆಸೆವ ಹ್ಹ ಹ್ಹಾ ..ಕಿಸೆಯೊಳಗಿದೆ
ಸರಕಾರದ ಸೂತ್ರ…
ಕಾರುಚಕ್ರಕ್ಕೆ ನೂರು ಮೈಲಿನ ರಭಸ ಯಾರು ಕ೦ಡಾರಲ್ಲಿ
ಅದಕ್ಕಿಲ್ಲ ಕಣ್ಣು. !
 
ಗಾಜು ಹಿ೦ದಲ್ಲಿ ಆರಡಿಯ ಪೋರ.. ಅದೇ ಅಧಿಕಾರದಪ್ಪನ
ವ೦ಶವ್ರುಕ್ಷದ ಥಳಥಳಿಸುವ ಚೆಲುವ…
ಮನಸೊ೦ದೆ ಅಚ್ಚ ಕರಿದು…ಉಳಿದೆಲ್ಲ ok ! ಹಗಲಿರುಳು
ಓಟವೊ೦ದೇ ಕನಸು, ಅದಕ್ಕೆ ಜತೆ ಅಪ್ಪ ಕೊಡಿಸಿದ ಅಚ್ಚ ಹೊಸ ಕಾರು.!
 
ಆದರೂ ಬ೦ಡಿರೆಡ್ಡಿ ವೃತ್ತ ಏನೆಲ್ಲಾ ಕ೦ಡು..ಕ೦ಡೂ ಕಾಣದ೦ತೆ
ಕಣ್ಮುಚ್ಚ್ಚಿ, ಮನದೊಳಗೆ ಉಕ್ಕಿ ಬರುವ ಕ್ಯಾಕರಿಕೆಯನೇನು
ಮಾಡಲಿ ತಿಳಿಯದ೦ತೆ ಕಣ್ಣೀರಿನೊಟ್ಟಿಗೆ
ಅದನೂ ನು೦ಗಿಬಿಡುವುದ೦ತೆ… ಸತ್ಯಕ್ಕೆ
ಸಾವಿಲ್ಲ , ಕಣ್ಣು, ಕೈ ಕಾಲುಗಳಿಲ್ಲ ಬಾಯಿಯ೦ತೂ
ಮೊದಲೇ ಇಲ್ಲ !!
 
ಕಣ್ಮುಚ್ಚಿ ಒಳಗೊಳಗೇ ಹನಿಗೂಡಿ ಬಿಕ್ಕಳಿಸಿ
ಗೋಗರೆದ ವ್ರತ್ತ ಮೌನದಲಿ ಬೇಡಿತ್ತು ,ಕೊಲ್ಲಬೇಡೆ೦ದು ಕಿರುಚಿತ್ತು…
ಯಾರು ಕೇಳಿದರದರ ಅಹವಾಲ …?
ನುಗ್ಗಿ ಚಕ್ರಕೆ ಸೊಕ್ಕು ಇಳಿಬಾಲದ ನಾಯೊಡಗೂಡಿ
ದಾರಿಕಟ್ಟೆಯ ಪಕ್ಕ, ಹರಕು ತಟ್ಟಿನ ಗೋಣಿಯಲ್ಲಿ
ಗಾಢ ನಿದ್ದೆಯ ವಶದಲ್ಲಿ ಆರು ಜೀವಗಳ ಒ೦ದೇ
ಕ್ಷಣದ ಮಾರಣ ಹೋಮ… ಬೆಳಕು ಚಲ್ಲಿದ ದೀಪಕಂಬಕ್ಕೆ
ಚಣದೆ ಕಣ್ ಮುಚ್ಚುವಾಸೆ…ಚಿಮ್ಮಿ ಚೆಲ್ಲಿದ ರಕ್ತಕ್ಕೆ
ನಿಲ್ಲೆನ್ನುವಾಸೆ…
 
ನಾಯಿಬಾಲದ ನೆತ್ತರಿಗೆ ಮೂರು ಕೂಸುಗಳ ಜೊಲ್ಲು ಸೇರಿ
ಎಲ್ಲ ಕೆ೦ಪಾಯಿತಲ್ಲ….
ಎಲ್ಲ ಕೆ೦ಪಾಯಿತು…!!
 

‍ಲೇಖಕರು G

28 December, 2014

1 Comment

  1. chandrashekhar

    U illa Kannu kaikal v…..yaru ..ahawalu?…Nice.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading