ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲೆ ಮೀರಿದ ಮನ..

ಭಾರ್ಗವಿ ಮುಡಿಯನೂರು

ಪೊರೆಯುವರಿಲ್ಲದೆ…. ತುಳಿದು ಹೊಸಕಿದ..
ಕನಸುಗಳಿನ್ನು…ಉಸಿರಾಡುತ್ತಿದೆ ಕಾಲ ಕೆಳಗೆ…
ಸಣ್ಣಗೆ ಕೈ ಬೆರಳುಗಳ ಕದಲಿಸುತ ಮೆಲ್ಲಗೆ..
ಹೆಸರಿಲ್ಲದ ಹುಟ್ಟು ಬಿಚ್ಚಿಡುತ್ತಿದೆ ಬೆಚ್ಚಿ ಬೀಳುವ ರೀತಿ…

ಹುಟ್ಟು ಸಾವಿನ ಮಧ್ಯೆ ಮೂಡಿಹುದು ಛಾಯೆ…
ರೆಪ್ಪೆ ಇರದ ಕಣ್ಣ ತೆರೆದು ನಡೆಸುತಿದೆ ಮಾಯೆ …
ಹುಟ್ಟಿದಾ ಉಸಿರಿಗೆ ಹೆಸರಿಂದಲೇ ಉಳಿವೆ?
ಯಾರಿಗೂ ನೆನಪಿರದ ಈ ನಿಶ್ಚಲ ಜಗಕಿಂತ …
ಗರ್ಭದೊಳು ಮೌನವೇ ಹಿತವೆನಿಸುತಿಹುದು..

ಛಾಯೆ – ಮಾಯೆಗಳ ಜೊತೆ ಜೊತೆಯಲಿ….
ತಂಗುದಾಣದಿ ನಿಂತು ಕಾಯುತಿಹೆನು…..
ಕಾಣದ ಊರಿಗೆ ಬೆಳೆಸಿ ಪಯಣ..
ಕಳಚಿ ಕೈಯ ಕಂಕಣ…
ಸೆರೆಯು ಕಳಚಿ ಸಾಗಬೇಕಾಗಿದೆ
ಸಂಜೆ ಜಾರುವ ಮುನ್ನ…

ಉಬ್ಬಿದಾ ಗಂಟಲೊಳು ತೂಗಿ ಅಣಕಿಸುತಿದೆ..
ಬರೀ ನಿಟ್ಟುಸಿರನೇ ಕಂಡ ಕರಿಮಣಿಯ ಮಾಲೆ….
ಬೇಸರದ ಮುಖದಲಿ ಕರಿ ಮೋಡದ ಛಾಯೆ..
ಯಾವ ಭಾರಕೋ ಕುಸಿಯುತಿದೆ ಕಣ್ ರೆಪ್ಪೆ…

ಬಿರುಕು ಬಿಟ್ಟ ತುಟಿಯಂಚಲಿ ಮಡುಗಟ್ಟಿದೆ
ಮೌನ…!
ಕೊರಳು ಕಟ್ಟಿದೆ,.. ಮೊಗವು ಸೊರಗಿದೆ..
ಬೆಚ್ಚಿದೆ ಹೃದಯ ಬಿರುಕ ಕಂಡು..!

ತಂಪನು ಚೆಲ್ಲಿದ ಉಸಿರಿಂದು…ಉರಿವ ಬೆಂಕಿ…
ಸುಖಸ್ಪರ್ಶದಾ ಪಿಸುಮಾತಿಗಿಂದು ನೀರವತೆಯ…. ಮೌನ..
ನಿಶ್ಯಬ್ಧದ ಕಲ್ಲಾಗಿದೆ ಮರುಕವಳಿದ ತನು…..
ನೆಲವ ತಬ್ಬಿದೆ ಕತ್ತಲೆಗಂಜಿದ ಕಾಲಬೆರಳು!

ಮನ ಜಾರಿತು,.. ತನುವಳಿಯಿತು ಮೋಸದ ಜಗದೊಳು.
ಸೆಣಸಲೇನಿದೆ ದುರ್ಮೋಹದಲಿ..
ಮತಿಯಿಲ್ಲದೇ ಮಿತಿಮೀರಿದ್ದು ಹಿತವೆನಿಸಲಿಲ್ಲ…
ಕೊಂಡು ತಂದ ಮೃತ್ಯು ಹೆಗಲ ಹೇರಿತ್ತು..!

‍ಲೇಖಕರು Admin

2 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading