ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲಿ ಬಿದ್ದಿತೋ ನನ್ನ ನತ್ತು

ಸ್ಮಿತಾ ಶೆಣೈ

ಮದುವೆಯಾದ ಲಗಾಯ್ತು ಮೂಗಲ್ಲೇ ಇತ್ತು
ರಾತ್ರಿ ಹಗಲು ಎಲ್ಲ ಹೊತ್ತು
ಬೆಳಕು ಬೀಳಲು ಥಳಥಳ ಹೊಳೆಯತಿತ್ತು
ಎಲ್ಲಿ ಬಿದ್ದಿತೋ ನನ್ನ ನತ್ತು

ಮಾವನ ಮುಂಗೋಪದ ಮುಖಕ್ಕೆ ಮುದುರಿ
ಅತ್ತೆಯ ರಿವಾಜಿನ ಶಾಸನಕ್ಕೆ ಹೆದರಿ
ಗಂಡನ ವಜ್ರದ ಪ್ರತಿವಾದಕ್ಕೆ ಒದಗಿ
ಅಕ್ಕಸಾಲಿಗನ ಚಿಮಟಕ್ಕೆ
ಮೂಗೊಡ್ಡಿದ ದಿನ ಇನ್ನೂ ನೆನಪಿದೆ
ಎಲ್ಲಿ ಹೊಯಿತೋ ನತ್ತು

ಚುಚ್ಚಿಸಿಕೊಂಡೆನಾದರೂ ಎಲ್ಲರಂತೆ
ಎಡಕ್ಕಲ್ಲ ಬಲಕ್ಕೆ
ನನ್ನ ಮೂಗಿಗೆ ನನ್ನದೂ ಒಂದು ಶರತ್ತು
ಕೊನೆಗೂ ಕೋಪ ರಾಜಿಯಾಗಿ
ಮೂಗೇರಿತ್ತು ನತ್ತು

ಅರೆರೆ ಹೆಂಗಸಾದಳು!! ಎಂಬ ತವರವರ ಸೋಜಿಗ
ಇರಲಿ ಮನೆತನದ ಗೌರವಕ್ಕಾಯಿತೆಂಬ
ಮಾತಿಗೆ ಮತ್ತಷ್ಟೂ ಭಾರವಾದರೂ
ಅದು ಮಿನುಗುತ್ತಿದದ್ದು ನನಗೂ ಗೊತ್ತು

ಸರ ಬಳೆಗಳು ಪೋಣಿಸಿದಲ್ಲೇ ಇವೆ
ಕಣ್ರೆಪ್ಪೆ ಅಡಿ ಕೂತು ನೋಟಕ್ಕೆಲ್ಲಾ
ಒಂದು ಹೊಳಪಿಡುತಿದ್ದ ನತ್ತೆಲ್ಲಿ ಹೊಯಿತು
ದೂರ ನೋಡುತ್ತಿರುವಾಗ ಹತ್ತಿರದಲ್ಲೆಲ್ಲೊ ಬಿತ್ತು

ಮುಂದೆ ಬಂದವರ ಕಣ್ಣು ತಪ್ಪಿಸುತ್ತೇನೆ
ಮುಸುಕು ಮೇಲೆಳೆದು ಮೂಗು ಮುಚ್ಚಿ
ಮಾತು ಬದಲಿಸುತ್ತೇನೆ
ಕೇಳದಿದ್ದರೂ ನನಗಂತು ಗೊತ್ತು
ಅಲ್ಲಿಲ್ಲ ನನ್ನ ಅಭಿಮಾನದ ಸೊತ್ತು

ವಜ್ರದಲ್ಲವಾದರೂ ಮುತ್ತಿನದು
ಮತ್ತೆ ಮಾಡಿಸಬೇಕು
ಅದೇ ಹಳೆಯ ತಿರುಗಣೆಗೆ ಸುತ್ತಿ
ಮೂಗೆತ್ತಿ ನಡೆಯಬೇಕು
ಅದೇ ಅಲ್ಲದಿದ್ದರೂ
ಅದರ ನೆನಪಾದರೂ ಬರಬೇಕು
ಅಂತೂ ನತ್ತೊಂದು ಬೇಕು

‍ಲೇಖಕರು Avadhi

19 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading