ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲಿ? ಎಲ್ಲಿ ನನ್ನ ಪೌರತ್ವ?

ಪಿ ಆರ್ ವೆಂಕಟೇಶ್

ಅಮ್ಮ
ಅವರು ಕೇಳುತ್ತಾರೆ
ನಿನ್ನುಡಿಯ ಹಾಡು ಹಕ್ಕಿಗೆ,
ಕತ್ತಲನುಟ್ಟು ಬೆತ್ತಲಾದ
ಭ್ರಾಮಕರು
ಹಳಹಳಿಸಿ ಕೇಳುವರು
ಬೆಳಕ ಪೌರತ್ವ.

ಅಮ್ಮ
ನಿನ್ನ ಕೈ ತಟ್ಟು ತಟ್ಟಿ ತಟ್ಟಿ
ಪಡೆದ ರೂಪು ನಾನು
ಪ್ರತಿ ತಟ್ಟಿನಲ್ಲೂ ನಿನ್ನ ಜೋಗುಳವಿದೆ
ಪ್ರೀತಿ ಗಂಧದ ಘಮಲಿದೆ
ಅಮ್ಮಾ
ನೀ ನೆಕ್ಕಿ ಸಾಕಿದ ಕರು ನಾನು
ಆದರೂ
ಅವರು ಕೇಳುತ್ತಾರೆ
ಎಲ್ಲಿ?
ಎಲ್ಲಿ ನಿನ್ನ ಪೌರತ್ವ?

ಅಮ್ಮ
ನಿನ್ನ ಮೈತುಂಬ ನಾ ಒದ್ದ
ಹೆಜ್ಜೆಗಳಿವೆ
ಅಂಪ್ರತಿ ಹೆಜ್ಜೆಯಲ್ಲೂ ಪ್ರವಸ ನೋವು
ಆ ನೋವು ಕಾವಿನಲೆ
ನನ್ನ ಮರುಹುಟ್ಟು
ಉಬ್ಬು ತಗ್ಗಿನ ಮೈಹಾದಿಯ ತುಂಬ
ನನ್ನ ಹಾಡೆ ನಿನ್ನ ಪಾಡು
ನಿನ್ನ ಬಹಿರಂಗಕ್ಕೆ
ನನ್ನಂತರಂಗದ ಚರಿತೆ
ನನ್ನ ಬಹಿರಂಗಕ್ಕೆ
ನಿನ್ನಂತರಂಗದ ಚರಿತೆ
ಆದರೂ ಕೇಳುವರು
ಎಲ್ಲಿ?
ಎಲ್ಲಿ ನಿನ್ನ ಪೌರತ್ವ?

ಅಮ್ಮ
ನೀ ಹೊದ್ದ ಕೌದಿಯಲಿ
ಚಿಪ್ಪೊಡೆದ ಮರಿ ನಾನು
ನಿನ್ನ ಕಸುವನು ಹೀರಿ
ಹಾರಲುಬ್ಬಿದ ಮೈಗೆ
ಯಾವ ಬಣ್ಣದ ರೆಕ್ಕೆ
ಇಟ್ಟೆ ನೀನು.
ರೆಕ್ಕೆ ಪಟಪಟ ಬಡಿದು
ಮುಗಿಲಗಲ ಮೈಚಾಚಿ
ಮೋಡದೊಡಲನು ಹಿಂಡಿ
ಬೆವರಾಗಿ ಜಾರಿದೆ
ನಿನ್ನೊಡಲ ಸಮುದ್ರಕೆ.
ಅದರೂ ಕೇಳುವರು
ಎಲ್ಲಿ?
ಎಲ್ಲಿ ನಿನ್ನ ಪೌರತ್ವ?

ನನ್ನ ನಿನ್ನನು ಮರೆತ
ಕುಚಿ€ಯೊಳಗಿನ ಕುಬ್ಜ
ಕನವರಸುತ್ತಿದ್ದಾನೆ
ಅಮ್ಮಾ
ನೀನೇ ಹೇಳಿಬಿಡು
ಇಲ್ಲಿ?
ಎಲ್ಲಿ ನನ್ನ ಪೌರತ್ವ?

 

‍ಲೇಖಕರು avadhi

25 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading