ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲಿಂದ ಬಂದೆಯಯ್ಯ ನೀನು..

ಗಾಂಧಿ-೧೫೦

ಜಿ.ಪಿ.ಬಸವರಾಜು

ಹಣ್ಣೆಲೆಗಳೆಲ್ಲ ಉದುರಿ
ಹೊಸ ಹುಟ್ಟು –
ಹಳೆಯ ಮರಕ್ಕೆ, ಹೊಸ
ಹುರುಪು
ಹಿರಿಯ ಜೀವಕ್ಕೆ;

ನೀನಾಡಿದ ಮಾತುಗಳೆಲ್ಲ
ಸಲ್ಲವೆಂದು ಈ ಕಾಲಕ್ಕೆ
ಮರೆತುಬಿಟ್ಟೆವು ನಿನ್ನ; ಹೀಗೇ
ಬಾನತುಂಬ ರೆಕ್ಕೆ ಬಡಿದು
ದಣಿದು ನೆಲಕ್ಕಿಳಿದರೆ ಅಲ್ಲಿ
ನೀನು, ನಿನ್ನ ಮಾತು, ಕತೆ
ಮತ್ತೆ ಮತ್ತೆ ಹೊಸತು, ಕೇಳಿ
ಕೇಳಿ ಹೊಸ ಹಾದಿ ತುಳಿದೆವು;

ಎಲ್ಲಿಂದ ಬಂದೆಯಯ್ಯ ನೀನು
ಈ ನೆಲಕ್ಕೆ, ನಿನ್ನ ಹುಟ್ಟೊಂದೆ
ನಮಗೆಲ್ಲ ಗೊತ್ತು, ಬಾಳೆಲ್ಲ
ಬಿಡಿಸಲಾಗದ ಗುಟ್ಟು, ನೀನು
ತೆರೆದಿಟ್ಟಿದ್ದೆ ಎಲ್ಲ, ಅದನೆಲ್ಲ
ನೋಡಲಾಗಲಿಲ್ಲ ನಮಗೆ
ಕೇಳಲಾಗಲಿಲ್ಲ ನಮಗೆ,
ಓದಲಾಗಲಿಲ್ಲ ನಮಗೆ,

ನಿನ್ನ ಹೆಸರ ಪತಾಕೆ ಹಾರಾಡುತ್ತಿದೆ
ಬಾನತುಂಬ, ಅದರ ನೆರಳೆಲ್ಲ
ನಮಗೆ ಹೊದಿಕೆ- ಉರಿವ ಸೂರ್ಯನಿಗೆ
ಸುರಿವ ಮಳೆಗೆ, ಗುಡುಗು ಸಿಡಿಲಿಗೆ

ಸಿಕ್ಕರೂ ನೀನು ಸಿಗದಂತವನು
ಹಿಡಿದರೂ ನೀನು ಹಿಡಿಯಲಾಗದವನು
ನಕ್ಕರೆ ನಿನ್ನ ಬೊಚ್ಚು ಬಾಯಿ
ತೆರೆದು ಜಗದಗಲ, ಮುಗಿಲಗಲ,
ಎಲ್ಲಿ ಎಲ್ಲಿ ಯಾವ ನೆಲದವನಯ್ಯ
ನೀನು, ಯಾವ ಜಲವ ಕುಡಿದೆ
ಯಾವ ಮಂತ್ರವ ಹಿಡಿದೆ
ತಿಳಿಯಿತೆಂದರೆ ತಿಳಿಯಲಾಗದ
ನಿನ್ನ ವರಸೆಗೆ ರೇಗಿ, ನಿನ್ನ
ಗುಂಡಿಗೆಯ ಬಗೆದು, ನಿನ್ನ
ನೆತ್ತರಲ್ಲಿ ನನ್ನ ಹೆಸರ ಕೆತ್ತುವ
ಹುನ್ನಾರದಲ್ಲಿ ಗುಂಡಿಕ್ಕಿದರೆ
ನಿನ್ನೆದೆಗೆ, ಆಗಲೂ ಹರಿಯಲಿಲ್ಲ
ನೆತ್ತರು, ನಗುತ್ತಿದ್ದೆ ನೀನು
ಕರುಣೆಯ ನೋಟದಲ್ಲಿ
ಬರೆದೆ ನಮ್ಮೆದೆಯ ಮೇಲೆ
‘ರಾಮ’ ನಾಮ

‍ಲೇಖಕರು avadhi

31 December, 2019

3 Comments

  1. Priyadarshini Shettar

    Wonderful poem sir… Enjoyed reading it.

    • gpbasavaraju

      thank you very much.

  2. gp basavaraju

    thank you very much priyadarshini.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading