ಎಲೆಲೆ..‌‌‌. ನಾಯಿಯೇ.. ನಿನಗಾರು ಸರಿಯೇ.!?

ಗೊರೂರು ಶಿವೇಶ್

ನಟ ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಚಿತ್ರ ಚಾರ್ಲಿ ಬಿಡುಗಡೆಯಾಗಿ ಯಶಸ್ಸಿನ ಹಾದಿ ಹಿಡಿದಿದೆ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಹೇಳಿಕೊಂಡಂತೆ ಮೊದಲ ಮೂರು ದಿನ ಪ್ರಾಣಿಪ್ರಿಯರು ನೋಡಿ ಚಿತ್ರವನ್ನು ಆನಂದಿಸಿ ಚಿತ್ರ ಅವರನ್ನು ಮುಟ್ಟಿದರೆ ಅವರ ಮೂಲಕ ತನ್ನಷ್ಟಕ್ಕೆ ತಾನೇ ಪ್ರಚಾರ ಪಡೆಯುತ್ತದೆ ಎಂಬ ನಿರೀಕ್ಷೆಯಂತೆ ಚಿತ್ರವು ಕನ್ನಡದ ಜೊತೆಜೊತೆಗೆ ಇತರೆ ಭಾಷೆಗಳಲ್ಲೂ ವೀಕ್ಷಕರನ್ನು ಸೆಳೆಯುತ್ತಿದೆ. ಚಿತ್ರದ ಕೆಲವು ಭಾವನಾತ್ಮಕ ಸನ್ನಿವೇಶಗಳು ನೋಡುಗರ ಹೃದಯವನ್ನು ತೋಯಿಸಿದೆ.

ಇದೇ ಸಂದರ್ಭದಲ್ಲಿ 2009 ರಲ್ಲಿ ಬಿಡುಗಡೆಗೊಂಡ ಹಾಚ್ಚಿ ಚಿತ್ರದ ಪ್ರಸ್ತಾಪವಾಗುತ್ತಿದೆ. ಜಪಾನಿನ ಮಾಂಟೇಸರಿಯಿಂದ ರವಾನೆಯಾದ ನಾಯಿ ಮರಿಯೊಂದು ವಿಳಾಸದ ಪಟ್ಟಿ ಕಿತ್ತು ಹೋಗಲಾಗಿ ರೈಲ್ವೆ ನಿಲ್ದಾಣದಲ್ಲಿ ಸಂಚರಿಸುತ್ತಿರುವಾಗ ಅದು ಪ್ರತಿದಿನ ರೈಲ್ಲಿನಲ್ಲಿ ಸಂಚರಿಸುವ ಪಾರ್ಕರ್ ಕೈಗೆ ಸಿಗುತ್ತದೆ. ಆ ನಾಯಿಮರಿಯನ್ನು ಅದರ ಮಾಲೀಕರಿಗೆ ತಲುಪಿಸುವ ಎಲ್ಲ ಪ್ರಯತ್ನಗಳು ವಿಫಲವಾದ ನಂತರ ಅದು ಆತನ ಮನೆಯಲ್ಲಿ ಉಳಿಯುತ್ತದೆ. ಮುಂದೆ ಪಾರ್ಕರ್ ಮತ್ತು ನಾಯಿಗೆ ಒಡನಾಟ ಪ್ರತಿದಿನ ಸಂಗೀತಗಾರರಾದ ಆತ ಪಯಣಿಸುವ ರೈಲಿಗೆ ಬಿಡುವುದರ ಜೊತೆಗೆ ಸಂಜೆ ವಾಪಸ್ ಮನೆಗೆ ಬರುವಾಗ ಮತ್ತೆ ರೈಲ್ವೆ ನಿಲ್ದಾಣಕ್ಕೆ ಹೋಗಿ ಜೊತೆಯಲ್ಲಿ ಬರುವ ಪರಿಪಾಟ ಬೆಳೆಸಿಕೊಳ್ಳುತ್ತದೆ ಹಾಚಿ.

ಮುಂದೆ ಒಮ್ಮೆ ದಿಡೀರನೆ ಹೃದಯಾಘಾತಕ್ಕೆ ಒಳಗಾಗಿ ಪಾರ್ಕರ್ ತನ್ನ ಸಂಗೀತ ಶಾಲೆಯಲ್ಲಿಯೇ ನಿಧನ ಹೊಂದಿದಾಗ ಶವಸಂಸ್ಕಾರಕ್ಕೆ ಹೋದರೂ ಸಾವಿನ ಅರಿವಿಲ್ಲದ ಆ ನಾಯಿಯಾದರೂ ಪ್ರತಿದಿನ ರೈಲ್ವೆ ಸ್ಟೇಷನ್ ಗೆ ಹೋಗಿ ತನ್ನ ಮಾಲೀಕನನ್ನು ಕಾಯುವುದನ್ನು ಮುಂದುವರಿಸುತ್ತದೆ. ಮುಂದೆ ಪಾರ್ಕರ್ ಕುಟುಂಬ ಮನೆಯನ್ನು ಮಾರಿ ಆ ಊರನ್ನು ಬಿಡುತ್ತದೆ. ಅವರ ಜೊತೆ ಹೋಗದ ನಾಯಿ ಅಲ್ಲಿಯ ಉಳಿಯುತ್ತದೆ. ಕೆಲವರ್ಷಗಳ ವರ್ಷಗಳ ನಂತರ ಪಾರ್ಕರ್ ನ ಹೆಂಡತಿ ಮತ್ತು ಆತನ ಸ್ನೇಹಿತ ಆತನ ಸಮಾಧಿಗೆ ಭೇಟಿ ನೀಡುವ ಸಂದರ್ಭಕ್ಕೆ ಅದೇ ರೈಲ್ವೆ ನಿಲ್ದಾಣದಲ್ಲಿ ಮುದಿಯಾಗಿ ಹೋದ ಆದರೂ ಯಜಮಾನ ಇನ್ನೂ ಬರಬಹುದೆಂದು ಕಾಯುತ್ತ ಕುಳಿತ ಹಾಚಿಯನ್ನು ಗಮನಿಸುತ್ತಾರೆ. ಆ ಸನ್ನಿವೇಶವು ಕೂಡ ಅತ್ಯಂತ ಹೃದಯಸ್ಪರ್ಶಿ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರನ್ನು ಒಮ್ಮೆ ರಾತ್ರೋ ರಾತ್ರಿ ಬಂದಿಸಿ ಕರೆದೊಯ್ದಾಗ ಅವರು ಸಾಕಿದ್ದ ಏಳೆಂಟು ನಾಯಿಗಳು ಅವರು ಬರುವವರೆವಿಗೂ ಆಹಾರ ನೊಬ್ಬ ತ್ಯಜಿಸಿದ್ದು, ಮಾಜಿ ಮಂತ್ರಿ ಬೈರೇಗೌಡ ನಿಧನರಾದಾಗ ಅವರ ನಾಯಿ ಅದರ ಸಮಾಧಿಯ, ಬಳಿ ಹೋಗಿ ದುಃಖಿಸುತ್ತಿದ್ದು, ನಾಟಕ ಕ್ಷೇತ್ರದ ದಿಗ್ಗಜ ಬಿ.ವಿ. ಕಾರಂತರು ನಿಧನರಾದಾಗ ಪ್ರೇಮ ಕಾರಂತರ ಒಡನಾಡಿಯಾಗುಳಿದ ನಾಯಿ, ನಟಿ ಲೀಲಾವತಿಯವರಿಗೆ ಬೆಂಗಾವಲಾದ ನಾಯಿ… ಈ ರೀತಿ ನಾಯಿ ತನ್ನ ಯಜಮಾನನ ಮೇಲೆ ತೋರುವ ನಿರ್ವಾಜ್ಯ ಮಮತೆ ಎಲ್ಲರನ್ನು ಅದರೆಡೆಗೆ ಆಕರ್ಷಿಸುತ್ತಿದೆ.

ಅವಿಭಕ್ತ ಕುಟುಂಬದಿಂದ ವಿಮುಖರಾಗುತ್ತಿರುವ ಮಾನವ ನ್ಯೂಕ್ಲಿಯಸ್ ಕುಟುಂಬಕ್ಕೆ ಜಾರುತ್ತಿರುವಂತೆ ಹಳ್ಳಿಯಿಂದ ನಗರಕ್ಕೆ ವಲಸೆ ಬಂದಂತೆ ಪ್ರಾಣಿಗಳನ್ನು ಸಾಕುವ ಅದರಲ್ಲೂ ನಾಯಿಗಳನ್ನು ಸಾಕುವವರ ಸಂಖ್ಯೆ ಹೆಚ್ಚಿದೆ. ಇವುಗಳಿಗೆ ಮಾಡುವ ಖರ್ಚು ಜನಸಾಮಾನ್ಯನೊಬ್ಬನ ಮನೆಯ ಖರ್ಚಿಗಿಂತ ಹೆಚ್ಚು . ನಾಯಿಗೆ ಹೆಸರಿಡಲು ಮಕ್ಕಳಿಗೆ ಹೆಸರಿಡಲು ಕಷ್ಟಪಡುವಂತೆ ಜನ ಕಷ್ಟಪಡುವುದನ್ನು ಗಮನಿಸಿದ್ದೇನೆ. ಹಿಂದೆ ಟೈಗರ್, ಜಿಮ್ಮಿ, ಟಾಮಿ, ರೋಸಿ ಮುಂತಾಗಿ ಬರೀ ವಿದೇಶಿ ಹೆಸರುಗಳೇ ಇತ್ತೀಚೆಗೆ ಇಲ್ಲೂ ಸ್ವದೇಶಿಕರಣವಾಗುತ್ತಿದೆ.

ರವಿ ಬೆಳಗೆರೆ ತನ್ನ ನಾಯಿಗೆ ‘ಕುಳ್ಳಂಜ’ ಎಂದು ಹೆಸರಿಟ್ಟ ಹಾಗೇ ಓದಿದ ನೆನಪು. ಅದೇ ರೀತಿ ಕರಿಯ ಕೆಂಚ, ಪುಟ್ನಂಜ, ಸಣ್ಣಕ್ಕಿ ಮುಂತಾಗಿ ಕೆಲವರು ಅಚ್ಚ ಕನ್ನಡದ (ಸಿನಿಮಾಗಳ ಪ್ರಭಾವ ಇರಬಹುದೇ?) ಹೆಸರನ್ನು ಇಟ್ಟು ಕನ್ನಡ ಪ್ರೇಮ ಮೆರೆಯುತ್ತಿದ್ದಾರೆ. ಸಿಲ್ಕ್ ಸ್ಮಿತಾ ಎಂಬ ನಟಿ ತಾನು ದ್ವೇಷಿಸುತ್ತಿದ್ದ ನಿರ್ಮಾಪಕನ ಹೆಸರನ್ನು ತನ್ನ ನಾಯಿಗೆ ಇಟ್ಟಿದ್ದಳಂತೆ. ಗಣೇಶನ ಮದುವೆ ಚಿತ್ರದಲ್ಲಿ ನಾಯಕಿ ಅನಂತನಾಗ್ ತನ್ನ ಮನೆ ಮಾಲೀಕ ‘ರಮಣಮೂರ್ತಿಯ ಹೆಸರಿಟ್ಟು ನಾಯಿಗೆ ಬೈಯುವ ನೆಪದಲ್ಲಿ ಓನರನ್ನು ಬೈಯುವುದು, ಆ ಚಿತ್ರದ ಹಾಸ್ಯದ ಸನ್ನಿವೇಶದಲ್ಲೊಂದು. ಇನ್ನೂ ಉಳಿದಂತೆ ನಾಯಿ ಬಿಸ್ಕತ್ ತಿಂದೋ ಇಲ್ಲವೆ ನಾಯಿಗೆ ನೀಡಬೇಕಾದ ಇಂಜೆಕ್ಷನ್ ತೆಗೆದುಕೊಂಡು ಕಂಬಕ್ಕೆ ಕಾಲೆತ್ತುವ ನಾಯಿ ಜೋಕ್ಸ್‌ಗಳು ‘ಜಾಪಾಳ ಪಾತ್ರೆ’ ತಿನ್ನಿಸಿ ಲೈಟ್ರಿನ್ ರೂಮಿಗೆ ಎಡತಾಕುವ ಜೋಕ್ಸ್‌ಗಳಿಗೆ ಪೈಪೋಟಿ ನೀಡುತ್ತಿವೆ.

ಸಾಕು ನಾಯಿ ಮತ್ತು ಬೀದಿ ನಾಯಿಗಳ ನಡುವಿನ ವ್ಯತ್ಯಾಸವನ್ನು ಕುರಿತು ಬೀದಿಯ ಹುಡುಗರು ನನ್ನ ಪ್ರೀತಿಯ ಹುಡುಗ ಚಿತ್ರದ ಸೊಂಟಕ್ಕೆ ಬೆಲ್ಟು ಕಟ್ಟಿಕೊಂಡು ಹಾಡನ್ನು ಅಣಕ ಹಾಡನಾಗಿಸಿ ಹಾಡುತ್ತಿದ್ದ ರೀತಿ ಹೀಗೆ.

ಕೊರಳಿಗೆ ಬೆಲ್ಟ್ ಹಾಕಿಕೊಂಡು
ಠೀವಿಯಲ್ಲಿ ನಡೆದುಕೊಂಡು
ಓನರ್ ಎಳ್ಕೊಂಡು ವಾಕಿಂಗ್ ಹೋಗ್ತಾವೋ |

ನಮ್ಮೂರಲ್ಲಿ ಹಂಗೇನಿಲ್ಲ
ಹೊಟ್ಟೆಗೆ ಹಿಟ್ಟು ಹಾಕೋದಿಲ್ಲ
ರೋಡಲ್ಲಿ ನಿಂತ್ಕಂಡು ಜೋರಾಗಿ ಕೂಗ್ತಾವೋ |

ಮೊದಲಿನಿಂದಲೂ ನನಗೆ ನಾಯಿ ಕಂಡರೆ ವಿಪರೀತ ಭಯ ಇದಕ್ಕೆ ಚಿಕ್ಕಂದಿನಲ್ಲಿ ನೋಡಿದ ಅಂಬರೀಶ್ ಅಭಿನಯದ ‘ಪೂರ್ಣಚಂದ್ರ’ ಚಿತ್ರದಲ್ಲಿ ಹುಚ್ಚು ನಾಯಿ ಕಡಿತದಿಂದಾಗಿ ನಾಯಕ ಅಪ್ಪುವ ಭೀಕರ ಸಾವು ಹಾಗೂ ಹೊಕ್ಕಳಿನ ಸುತ್ತಲೂ ಕೊಡಿಸಿಕೊಳ್ಳಬೇಕಾಗಿದ್ದ 14 ಇಂಜೆಕ್ಷನ್‌ಗಳ ಭಯ. ಸ್ಕೂಟರ್ ಕೊಂಡು ಹೊಡೆಯಲು ಆಸಕ್ತಿ ಇಲ್ಲದೆ ಮನೆಯಲ್ಲಿ ನಿಲ್ಲಿಸಿದ್ದೆ. ಆದರೆ ಹೆಂಡತಿಯ ವಿಪರೀತ ಬಲವಂತದಿಂದಾಗಿ ಚಾಲನೆ ಮಾಡಲು ಹೊರಟೆ. ಮೀಟರ್‌ಗೊಂದು ಗುಂಡಿ ಹತ್ತು ಮೀಟರ್‌ಗೊಂದು ಹಂಪ್ಸನ್ನು ದಾಟಿಸಿ ‘ಸಾಕಪ್ಪ’ ಎನ್ನುತ್ತಾ ಬರುವಾಗ
ಒಂದು ‘ಕಿವಿಹರುಕ ನಾಯಿ’ ಅದರ ಮನೆಯ ಪಕ್ಕಕ್ಕೆ ಬರುವವರೆವಿಗೂ ಸುಮ್ಮನಿದ್ದು ಏಕಾಏಕಿ ಒಮ್ಮೆಲ್ಲೆ ಅಟ್ಟಿಸಿಕೊಂಡು ಬರುವುದೇ!

ಮೊದಲೇ ಸರಿಯಾಗಿ ಚಾಲನೆ ತಿಳಿಯದ ನನಗೆ ಇದೂ ಸೇರಿ ಹಾವನ್ನು ಮೈಮೇಲೆ ಎಸೆದಂತೆ ಗಾಬರಿಯಾಗಿ ದೆವ್ವ ಹಿಡಿಯಲ್ಪಟ್ಟವನಂತೆ ಎದುರಿಗೆ ಬಂದವರ ಮೇಲೆಲ್ಲಾ ಗುದ್ದಿಸ ಹೊರಟವನಂತೆ ಚಾಲನೆ ಮಾಡಿ, ಅವರಿಗೂ ಗಾಬರಿ ಹುಟ್ಟಿಸಿ ಮನೆಗೆ ಸೇರುವಷ್ಟರಲ್ಲಿ ಸಾಕು ಸಾಕಾಗಿತ್ತು. ಅಂತ ಸಂದರ್ಭವನ್ನು ಎದುರಿಸಲು ಅನೇಕ ಸಲಹೆಗಳನ್ನು ಸ್ನೇಹಿತರು ನೀಡುವವರಾದರೂ ಈಗಲೂ ಬೆಳಗಿನ ಜಾವ ಯೋಗ ಅಥವಾ ವಾಕಿಂಗ್ ಆಗಿ ರಸ್ತೆಯಲ್ಲಿ ಸಾಗುತ್ತಿರಬೇಕಾದರೆ ತುದಿಯಲ್ಲಿ ನಾಯಿಗಳ ಹಿಂಡು ಕಂಡರೆ ತಕ್ಷಣವೇ ಎಸ್ಕೇಪ್ !ಎಂದು ಸಿಗುವ ಪಕ್ಕದ ಬೀದಿಯನ್ನು ಹಿಡಿದು ಅವುಗಳಿಂದ ಮರೆಯಾಗುತ್ತೆನೆ.

ನನ್ನ ಸ್ನೇಹಿತರೊಬ್ಬರು ತಾವು ಸಾಕುತ್ತಿರುವ ನಾಯಿಯ ಕುರಿತಾಗಿ ಹೇಳುತ್ತಿದ್ದ ವಿಷಯಗಳು ಪ್ರತಿದಿನ ಪ್ರತಿ ದಿನದ ಹರಟೆಯ ವಿಷಯವಾಗಿತ್ತು. ಅದಕ್ಕಾಗಿ ಪ್ರತ್ಯೇಕ ವಾಶ್ರೂಮ್, ಅದು ತಿನ್ನುವ ವಿಶೇಷ ಆಹಾರ ಪೆಡಿಗ್ರಿ ಮತ್ತು ಏರ್ ಕಂಡೀಷನ್ ಕಾರಿನಲ್ಲಿ ಅದರ ಪಯಣ, ಕಾರಿನ ಎಸಿ ಆಫ್ ಮಾಡಿದರೆ ಕೆಳಗಿಳಿದು ಓಡುತ್ತಿದ್ದ ಅದರ ಪರಿಯನ್ನು ರಂಜನೀಯ ವಾಗಿ ವಿವರಿಸುತ್ತಿದ್ದರು.

ಒಮ್ಮೆ ಅದರ ಹುಟ್ಟಿದ ಹಬ್ಬವನ್ನು ಮಾಡಿ ಆ ಫೋಟೋಗಳನ್ನು ಹಂಚಿಕೊಂಡಿದ್ದರು. ನನಗೆ ಅಚ್ಚರಿಯೆನಿಸಿ ಹುಟ್ಟಿದ ದಿನ ನಿಮಗೆ ಏನು ಗೊತ್ತು ಅಂದಾಗ ನಮ್ಮ ಮನೆಗೆ ತಂದ ದಿನವೇ ಅದರ ಹುಟ್ಟಿದದಿನ ಎಂದು ಉತ್ತರಿಸಿದರು. ಮದುವೆಗೆಂದು ರೆಸಾರ್ಟ್ಗೆ ಹೋದ ಸಂದರ್ಭದಲ್ಲಿ ಬೀದಿನಾಯಿಗಳ ಜೊತೆಗೆ ಹೋದ ಅದನ್ನು ಬಿಡಿಸಲು ಹೋಗಿ ಕಚ್ಚಿಸಿಕೊಂಡು ಇಂಜಕ್ಷನ್ ತೆಗೆದುಕೊಂಡಿದ್ದನ್ನು ವಿಷಾದದ ಜೊತೆಗೆ ವಿನೋದವನ್ನು ಬೆರೆಸಿ ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು.

ನನ್ನ ಶ್ರೀ ಮತಿ ಯ ಆತ್ಮೀಯ ಸ್ನೇಹಿತೆ ಒಬ್ಬರ ಮನೆಯಲ್ಲಿ ತಂದಾಗ ಪುಟ್ಟದಾಗಿ ಮುದ್ದಾಗಿದ್ದ ನಾಯಿಮರಿ ವರ್ಷದೊಳಗೆ ಅಗಾಧವಾಗಿ ಬೆಳೆದು ಅಲ್ಲಿ ಹೋದವರ ಎದೆ ನಡುಗಿಸುವ ಜೊತೆಗೆ ಅದರ ಬೊಗಳುವಿಕೆ ಹೃದಯವನ್ನು ಬಾಯಿಗೆ ತರಿಸುತ್ತಿತ್ತು. “ಏನು ಮಾಡೋಲ್ಲ ಬನ್ನಿ” ಎಂದರೂ ಮುಂದಡಿಯಿಡಲು ಹೆದರಿಕೆ .ಒಂದು ಸಂಜೆ ವಾಕಿಂಗ್ ಕರೆದುಕೊಂಡು ಹೋಗುವ ಸಂದರ್ಭ ಅದು ಎಳೆಯುವ ಭರಾಟೆಗೆ ಜಾರಿಬಿದ್ದು ಕೈ ಫ್ಯಾಕ್ಚರ್ ಆಗಿ ಕೆಲವರು ದಿನ ಆಸ್ಪತ್ರೆ ನಂತರ ನಾಲ್ಕು ತಿಂಗಳು ಪಟ್ಟಿ ಕಟ್ಟಿಸಿಕೊಂಡು ಇರಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ ನಾಯಿಯನ್ನು ಬೇರೊಬ್ಬರಿಗೆ ಕೊಡಬೇಕೆಂದು ಕೊಂಡರೂ ಅದರೊಂದಿಗಿನ ಬಂಧ ಹೇಗಿದೆಯೆಂದರೆ ಅದಿನ್ನು ಸಾಧ್ಯವಾಗಿಲ್ಲ.

ಮದುವೆಗೆ ಇಲ್ಲವೇ ಬೇರಾವುದೋ ಸಮಾರಂಭಕ್ಕೆ ಹೋಗಬೇಕಾದರೆ ಈ ನಾಯಿಗಳನ್ನು ಕಾಯಲು ಒಬ್ಬ ಒಬ್ಬರಾದರೂ ಇರಬೇಕಾದ ಪರಿಸ್ಥಿತಿ ಬಹಳಷ್ಟು ಸಂದರ್ಭದಲ್ಲಿ ತಂದೆಗೆ ಇದರ ಜವಾಬ್ದಾರಿ. ತಂದವರು ಮಕ್ಕಳು ಕಾಯ ಬೇಕಾದವರು ನಾವು ಎಂದು ಆಗಾಗ ಅವರು ಸ್ನೇಹಿತರೆದರು ಸ್ನೇಹಿತರು ಗೊಣಗುವುದು ಹೀಗಿದೆ ಇದಕ್ಕಾಗಿ 3-4 ದಿನಗಳಿಗಾಗಿ ಅವುಗಳನ್ನು ಸಂರಕ್ಷಿಸಿರುವ ಕಾಯುವ ಡಾಗ್ ಹೌಸ್ ಗಳು ಹುಟ್ಟಿಕೊಂಡು ಅನೇಕರಿಗೆ ಜೀವನದ ಹಾದಿಯಾಗಿದೆ.

ಕುವೆಂಪುರವರ ಮಲೆಗಳಲ್ಲಿ ಮದುಮಗಳು ಮಹಾಕಾದಂಬರಿ ನಾಟಕವಾಗಿ ರಾತ್ರಿಯಿಡೀ ಮೂರ್ನಾಲ್ಕು ರಂಗಸಜ್ಜಿಕೆಯಲ್ಲಿ ಭಿನ್ನ ರಂಗ ಸಂಯೋಜನೆಯಿಂದ ಬಸವಲಿಂಗಯ್ಯನವರ ನಿರ್ದೇಶನದಲ್ಲಿ ರಂಗಾಯಣದ ತಂಡದಿಂದ ಪ್ರದರ್ಶಿತವಾಗಿಹೆಸರು ಮಾಡಿದ ನಾಟಕ. ಸದಾಕಾಲ ಹಿಂಬಾಲಿಸುವ ನಾಯಿಯಿಂದ ನಾಯಿಗುತ್ತಿ ಎಂದು ಹೆಸರು ಪಡೆದ ಗುತ್ತಿ ಮತ್ತು ನಾಯಿಯ ಒಡನಾಟ ಕುವೆಂಪುರವರ ಕಾದಂಬರಿಯಲ್ಲಿ ಸಹಜವಾಗಿ ಹರಿದು ಬಂದಂತೆ ರಂಗದಲ್ಲಿ ಅದನ್ನು ತರಲಾಗಿದೆ. ಕಾದಂಬರಿಯ ಕೊನೆಯಲ್ಲಿ ಪ್ರವಾಹದಲ್ಲಿ ಕೊಚ್ಚಿಹೋಗುವ ನಾಯಿಯನ್ನು ಉಳಿಸಿಕೊಳ್ಳಲು ಯತ್ನಿಸುವ ಗುತ್ತಿಯ ಪ್ರಯತ್ನಕಾದಂಬರಿಯ ಹೃದಯಂಗಮ ಸನ್ನಿವೇಶಗಳಲ್ಲಿ ಒಂದು.ನಾಟಕದಲ್ಲಿ ಈ ಸನ್ನಿವೇಶವೇ ಪ್ರಮುಖವಾಗಿ, ಆ ಮೂಕ ನಾಯಿ ಪಾತ್ರ ನಿರ್ವಹಿಸಿದ ಪಾತ್ರಧಾರಿಯೇ ಪ್ರೇಕ್ಷಕರಿಗೆ ಹೆಚ್ಚು ಮೆಚ್ಚುಗೆಯಾದದ್ದು ಕೂಡ ವಿಶೇಷ.

ಇನ್ನು ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳ ಅದರಲ್ಲೂ ಕರ್ವಾಲೋ ಕಾದಂಬರಿಯ ಭಾಗವಾಗಿರುವ ಕಿವಿಮತ್ತು ಪರಿಸರದ ಕಥೆಗಳಲ್ಲಿನ ಪ್ರಬಂಧಗಳ ಭಾಗವಾಗಿರುವ ಅದರ ಸಾಹಸಗಳು, ಅವರ ಆರಂಭದ ಕಥೆ ಮಾಯಾಮೃಗದಲ್ಲಿ ರೂಪಕವಾಗಿ ಕಾಣಿಸಿಕೊಳ್ಳುವ ನಾಯಿಗಳ ಬಗ್ಗೆ ಯೇ ಒಂದು ಪ್ರಬಂಧವನ್ನು ಬರೆಯಬಹುದು .

ಇನ್ನೂ ಸಿನಿಮಾ ಸರ್ಕಸ್‌ನವರಿಗೆ ನಾಯಿ ಅಚ್ಚು -ಮೆಚ್ಚು. ಹಿಂದೆ ಮಕ್ಕಳ ಸಿನಿಮಾ ಎಂದರೆ ಅಲ್ಲಿ ಕಡ್ಡಾಯವಾಗಿ ನಾಯಿಗೊಂದು ಸ್ಥಾನ ಖಚಿತ. ಸಿನಿಮಾಗಳ ಹೀರೋಗಳಿಗಿಂತ ನಾಯಿಯ ಸಂಭಾವನೆ ದುಬಾರಿ. ಪ್ರಖ್ಯಾತಳಾಗಿದ್ದ ತಾರೆಯೊಬ್ಬರು ನನ್ನೆದುರು ನಾಯಿ ಕೋತಿ, ಹೀರೋ, ಆದರೂ ಓಡುತ್ತೆ ಎಂದು ಹೇಳಿ ವಿವಾದ ಎಬ್ಬಿಸಿದರು. ನಾಯಿ-ಹಾವು, ಆನೆ, ಕಾಂಬಿನೇಶನ್ ಭಾರತೀಯ ಚಿತ್ರರಂಗದಲ್ಲಿ ಬಹಳಷ್ಟು ದಿನಗಳ ಕಾಲ ಆಳಿದೆ. ಆದರೆ ಇತ್ತೀಚಿನ ಪ್ರಾಣಿ ದಯಾ ಸಂಘದವರ ಪ್ರಭಾವ ಸೆನ್ಸಾರಿನ ಬಿಗಿ ನೀತಿಯಿಂದಾಗಿ ಇವುಗಳ ಏಕಸ್ವಾಮ್ಯಕ್ಕೆ ದಕ್ಕೆ ಬಂದು ಅವುಗಳನ್ನು ಈಗ ಗ್ರಾಫಿಕ್‌ನಲ್ಲಿ ನೋಡಿ ಆನಂದಿಸುವ ಭಾಗ್ಯ ನಮ್ಮದಾಗಿದೆ. ಹೀಗಾಗಿ ಸರ್ಕಸ್ ಕಂಪೆನಿಗಳು ಒಂದೊಂದಾಗಿ ಬಂದಾಗುತ್ತಿವೆ.ತಮ್ಮಚಾರ್ಲಿ ಸಿನಿಮಾಕ್ಕಾಗಿ ಅನಿಮಲ್ ಬೋರ್ಡ್ ನಿಂದ ಅನುಮತಿ ಪಡೆಯಲುಪ್ರತಿ ಹಂತದಲ್ಲೂ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು ತಾವು ಒದಗಿಸಬೇಕಾದ ದಾಖಲೆಗಳು ಕುರಿತಾಗಿ ಚಿತ್ರತಂಡ ಸುದೀರ್ಘ ವಿವರಣೆಯನ್ನು ನೀಡಿತ್ತು .

ಇನ್ನೂ ಆಧ್ಯಾತ್ಮದವರಿಗಂತೂ ನಾಯಿಯೆಂಬುದು ಜೀವನದ ಅನೇಕ ಮಹತ್ವಗಳನ್ನು ತಿಳಿಸುವ ಸಾಧನ. ಹರಿಕಥೆ ದಾಸರು ಹೇಳುತ್ತಿದ್ದದ್ದು. ಸ್ವರ್ಗ ರೋಹಣ ಪರ್ವದಲ್ಲಿ ಧರ್ಮರಾಜನ ಒಡನೆ ಸ್ವರ್ಗಕ್ಕೆ ದಾಟಿದ ನಾಯಿಯ ಪ್ರಸಂಗ, ‘ಜೀವನವೆಂಬುದು ನಾಯಿಯ ತಲೆಯ ಮೇಲಿನ ಬುತ್ತಿ’ ಎಂದು ದಾಸರು ಒಮ್ಮೆ ವರ್ಣಿಸಿದರೆ, ಇನ್ನೊಮ್ಮೆ ಚಲಿಸುವ ಚಿತ್ತದ ಕುರಿತು `ಡೊಂಕುಬಾಲದ ನಾಯಕರೆ ನೀವೇನೂಟವ ಮಾಡಿದಿರಿ, ಕಣಕ ಮಾಡುವ ಜಾಗಕ್ಕೆ ಹೋಗಿ ಇಣುಕಿ ಇಣುಕಿ ನೋಡುವಿರಿ ಕಣಕ ಮಾಡುವ ಒನಕೆಲಿ ಹೊಡೆದರೆ ಕುಂಯ್ ಕುಂಯ್ ರಾಗದ ಹಾಡುವಿರಿ’ ಎಂದು ಹಾಡುತ್ತ ವರ್ಣಿಸುತ್ತಿದ್ದುದ್ದು ಇನ್ನು ಕಿವಿಯಲ್ಲಿದೆ. ಪುರ್ನಜನ್ಮದ ಕುರಿತಾದ ತಮ್ಮ ಕಾದಂಬರಿಗೆ ಎಸ್.ಎಲ್. ಭೈರಪ್ಪನವರು ನಾಯಿ ನೆರಳು ಎಂದೇ ಹೆಸರಿಟ್ಟಿದ್ದಾರೆ. ಇಟ್ಟ ಅನ್ನಕ್ಕಿಂತ ಕೊಟ್ಟ ಅಲ್ಪ ಪ್ರೀತಿಗಾಗಿ ಗೌಡನ ಹಿಂದೆ ಹೋದ ನಾಯಿ ಮರಿ ಕುರಿತಾದ ಪು. ತಿ.ನ ರವರ ಕಥೆ ಬಹಳ ಇಷ್ಟವಾಗುತ್ತೆ.

ಟಾಮ್ ಅಂಡ್ ಜೆರಿಯ ಕಾರ್ಟೂನ್‌ನಲ್ಲಿ ಬೆಕ್ಕು ಇಲಿಯ ಆಟದ ನಡುವೆ ನಾಯಿಯನ್ನು ‘ಬುದ್ದು’ ವಿನಂತೆ ಚಿತ್ರಿಸಿದ್ದರೂ ನಿಜ ಜೀವನದಲ್ಲಿ ಪೋಲಿಸರಿಗೆ ಅಪರಾಧಿಗಳನ್ನು ಪತ್ತೆ ಹಚ್ಚಲು ಇದು ಸಹಕಾರಿಯಾಗಿದೆ. ಎರಡನೇ ಮಹಾಯುದ್ಧದ ಅಮೋಘ ಅಧ್ಯಾಯಗಳಲ್ಲಿ ನಮ್ಮ ಪರಮವೀರಚಕ್ರ ಪ್ರಶಸ್ತಿಗೆ ಸಮಾನವಾದ ‘ಡಿಕನ್‌ಕ್ರಾಸ್’ ಪ್ರಶಸ್ತಿ ಪಡೆದ ಜರ್ಮನ್ ಪೆಷರ್ಡ್ ನಾಯಿ ‘ಆಂಟಿಸ್’ ಕಥೆಯು ಒಂದು. ತನ್ನ ಜೀವದ ಹಂಗು ತೊರೆದು ಹಲವಾರು ಜನರ ಜೀವ ಉಳಿಸಿದ ಧೈರ್ಯ, ಸಾಹಸ, ಪರಾಕ್ರಮದ ಕಥೆ ರೋಮಾಂಚಕಾರಿ.

ಮಾನವನ ಉಗಮಕಾಲದಿಂದಲೂ ಬಡವನ ಸಹವರ್ತಿಯಾಗಿ ಶ್ರೀಮಂತನ ಸ್ನೇಹಿತನಾಗಿ ಅವನ ನೆರಳಿನಂತೆ ಹಿಂಬಾಲಿಸಿಕೊಂಡು ಬಂದ ಕಾರಣದಿಂದಲೇ ಇದು ಇಷ್ಟೊಂದು ಪ್ರಬಂಧಗಳಿಗೆ ಸಿನಿಮಾಗಳಿಗೆ ವಸ್ತುವಾಗಿರಬಹುದು.

‍ಲೇಖಕರು Admin

June 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: