ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ಬೆಳಗಿನ ಹಾಡು ಒಂದು ಇರುಳಿನ ಪಾಡು

ನಂದಿನಿ ಹೆದ್ದುರ್ಗ

ಒಂದು ಇರುಳನ್ನು
ಮಲಗಿಸುವುದೆಂದರೆ
ಸುಮ್ಮನೆ ಅಲ್ಲ.

ಇನ್ನಿಲ್ಲದಂತೆ ಕಾದಾಡಿ
ಇವನ ಆಚೆಗಟ್ಟಬೇಕು

ಎದೆಗಿಷ್ಟು ದಿಗಿಲು ಹೊದ್ದು
ಮರಕೆ ಹಕ್ಕಿಯಾಗುವ ಕನಸುಣಿಸಿ
ಗೆಜ್ಜೆ ಹುಳುವಿಗೆ ಹಾಡು ಎನಬೇಕು.

ಬೆಳದಿಂಗಳ ತೊಳೆದು ಹಾಸಿ
ತುದಿ ಚಿವುಟಿ ಚುಕ್ಕಿಗಳ ಚೆಲ್ಲಿ
ಮುಗಿಲಿಗೆ ಮೌನ ಹಚ್ಚಬೇಕು.

ಕೂಸೆಬ್ಬಿಸಿ ರಚ್ಚೆ ಹಿಡಿಸಿ
ಹಾಲುಕ್ಕುವ ಎದೆಯ ತುಟಿಗಿಟ್ಟ
ಜೀವವ ಗಾಡನಿದ್ದೆಗೆ ದೂಡಬೇಕು‌

ಒಂದು ಇರುಳು ಮಲಗಿಸುವುದೆಂದರೆ
ಆ ಬದಿಯ ಅವನೂ
ಈ ಜಗದ ನಾನೂ
ಇಡಿ ರಾತ್ರಿ ಎಚ್ಚರಿದ್ದು
ಪಿಸುಗುಡಬೇಕು…


__


ಈ ಬೆಳಗೂ ಅಷ್ಟೇ
ಸುಮ್ಮನೆ ಆಗುವುದಿಲ್ಲ

ಮುಗಿಲ ಮೋಹ ಅತಿಯಾಗಿ
ಅನುರಾಗ ಭಾರದಲಿ
ಕದತೆರೆದು ಕಿರುನಕ್ಕು ಕರೆ
ದರೆ
ಒಳಬಂದವನು ಮೆಲ್ಲನೆ ತನ್ನ
ಬಿಸಿ ತುಟಿಯನೊತ್ತುತ್ತಾನೆ
ನಲ್ಲೆಗೆ..
ಮರ ನಾಚಿ‌ ಕೊರಳೆತ್ತಿ ಹಾಡುತ್ತದೆ.
ಹಕ್ಕಿ ಹರೆ ಹೊಕ್ಕು
ತೊನೆದಾಡಿ ಎಲೆಯಾಗುತ್ತದೆ.
ರಾಗ
ಮುಗುಳಾಗಿ,ಹೂವಾಗಿ
ಹೂವ‌ಬೆಳಕು ಮುಗಿಲ
ಹಗಲಾಗಿಸುತ್ತದೆ.
ಮೆದುವಾಗಿ ಮರ ಮಣ್ಣಾಗುತ್ತದೆ

ಈ ಬೆಳಗೂ ಅಷ್ಟೇ
ಸುಮ್ಮನೆ ಆಗುವುದಿಲ್ಲ

ಜಗದ ಆ ಬದಿಯ‌ ಹೊದಿಕೆಯೊಂದು
ಸುಪ್ರಭಾತಕ್ಕೆ ನನ್ನ ಹೆಸರನೇ ಹೇಳಿ
ಕನವರಿಸಿ ಅರೆಗಣ್ಣಾಗಿ
ಯಾರೊ ಕರೆದಂತಾಗಿ;
ಅರೆನಿದ್ದೆ ಎಚ್ಚರ
ಆಕಳಿಸಿ ಅವನೆದೆಗೆ ತುಟಿಯೊತ್ತಿ
ದರೆ
ಜಗದ ತುಂಬೆಲ್ಲಾ‌ ಬೆಳಗು
ಹಾಲು ಹಣ್ಣು ಹಸೆ ತೋರಣಕೆ
ಒಂದು ನೋಟ ಸಾಕು

ಈ ಬೆಳಗೂ ಅಷ್ಟೇ
ಸುಮ್ಮನೇ ಆಗುವುದಿಲ್ಲ
ಮುಟ್ಟಿಕೊಳ್ಳದ ಮುತ್ತುಗಳೆರಡರ
ಸ್ವಪ್ನ ಲೋಕ.


__
ಈ ಹಗಲುಗಳೂ ಅಷ್ಟೇ.
ಸುಮ್ಮನೇ ಆಗುವುದಿಲ್ಲ.
ಮರಗಳು ಬೆಳಕು ಕರುಣಿಸುತ್ತವೆ.

ಹಕ್ಕಿ ತನ್ನ ಪುಟ್ಟ ರೆಕ್ಕೆಯಡಿ
ಮಡಿಚಿಟ್ಟುಕ್ಕೊಳ್ಳುವ
ಪ್ರೇಮಪತ್ರದಂತೆ
ಇರುಳು ಹೊರಳುವಾಗ
ದಾರಿಯೊಂದು ಹಾಡು ಹೇಳುತ್ತದೆ

ಮೂರನೇ ಜಾವಕ್ಕೆ ಕಾಯುತ್ತೇನೆ ನಾನು.
ಯಾಕೆಂದು ಮತ್ತೂ ಕೇಳಬೇಡಿ ನೀವು..

ಅಗಲ ಹರಿವಾಣದ ತುಂಬಾ ಸಂಪಿಗೆ ನನ್ನ
ಹೊಸ್ತಿಲಲ್ಲಿ.
ಅವಸರದಲಿ ಹೆಜ್ಜೆ ಒರೆಸಿ ರಂಗೋಲಿ ಹಾಕುವೆ.

ಮರಗಳು ಬೆಳಕು ಅರಳಿಸೋ ಮೊದಲೇ
ವಿದಾಯದ ಮುತ್ತೊಂದು ದಕ್ಕುತ್ತದೆ ಇಲ್ಲಿ
….

‍ಲೇಖಕರು Avadhi

24 October, 2020

2 Comments

  1. Vishnu

    ಚೆನ್ನಾಗಿದೆ ಕವಿತೆ.

  2. T S SHRAVANA KUMARI

    ಸುಂದರ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading