ಒಂದು ಬಾಂಬಿನ ಪರಿಧಿ
ಮೂಲ :ಯೆಹುದಾ ಅಮಿಚೈ

ಕನ್ನಡಕ್ಕೆ: ಅವಿನಾಶ ಕನ್ನಮ್ಮನವರ
ಬಾಂಬಿನ ಪರಿಧಿ ಮೂವತ್ತು ಸೆಂಟಿಮೀಟರಗಳಷ್ಟು,
ಸಿಡಿದ ತೀವ್ರತೆ ಇದ್ದೀತು ಏಳು ಮೀಟರುಗಳಷ್ಟು,
ಪಡೆದ ಬಲಿ ನಾಲ್ಕು, ಹನ್ನೊಂದು ಗಾಯಳುಗಳು,
ಇವರ ನೋವಿನ ಪರಿಧಿ ಇನ್ನಷ್ಟು ದೊಡ್ಡದು
– ಇದರೊಳಗೆ ಎರಡು ಆಸ್ಪತ್ರೆ ಮತ್ತೊಂದು ಮಸಣ.
ಛಿದ್ರಗೊಂಡ ಮಹಿಳೆಯ ದಫನಾಗಿದೆ ಹುಟ್ಟಿದೂರಿನಲ್ಲಿ,
ಆ ದೂರ ಸೇರಿದರೆ ಬಾಂಬಿನ ಪರಿಧಿ ಹಿಗ್ಗೀತು ನೂರಾರು ಕಿಲೋಮೀಟರಗಳಷ್ಟು,
ಮಹಿಳೆಯ ಪ್ರಿಯಕರನ ದುಃಖ ಕಟ್ಟೆಯೊಡೆದಿರುವುದು ಭೂಮಿಯ ಮತ್ತೊಂದು ಮಗ್ಗುಲಿನಿಂದ,
ಇಲ್ಲಿಗೆ ಬಾಂಬಿನ ಪರಿಧಿ ಇಡೀ ಭೂಮಿಯಷ್ಟಾಯಿತು.
ಬಿಡು ಗಾಯಾಳುಗಳ ಯಾತನೆಯ ಬಗ್ಗೆ ಹೇಳಿದರೆ,
ದೇವರೂ ಕೂಡಾ ಕಿವಿ ಮುಚ್ಚಿಯಾನು.
ಅರಿವಾಯಿತೆ ಕರುಣೆಯೇ ಇಲ್ಲ ಈ ಪರಿಧಿಗೆ ಮತ್ತು ದೇವರಿಗೆ!





0 Comments