ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಮಾದಶಿಯನ್ನು ತಿನ್ನದೆ ಬರಬೇಡಿ..

ನೂರು ಕಣ್ಣು ಸಾಲದು …

ವಿಜಯಕ್ಕ ಅಜ್ಜೀಮನೆ 

ಭೂತಾನ್ ಎಂಬ ಭೂಲೋಕದ ಸ್ವರ್ಗ ತಲುಪುವುದಕ್ಕೆ ದೆಹಲಿಯಿಂದ ನೇರ ವಿಮಾನ ವ್ಯವಸ್ಥೆಯಿದೆ. .. .ಭಾರತೀಯ ಪಾಸ್ ಪೋರ್ಟ್ ಅಥವಾ ವೋಟರ್ ಐಡಿ,ಹೊಂದಿದವರಿಗೆ ವೀಸಾ ಪಡೆಯುವ ಅಗತ್ಯವಿಲ್ಲ.. ಮುಂಗಡ ಕಾದಿರಿಸಿದ ಹೋಟೆಲ್ ಕೊಠಡಿಗಳು ಹಿಂತಿರುಗುವ ಟಿಕೆಟ್ ಇದ್ದರೆ ಸಾಕು ಭೂತಾನ್ ನಿಮಗೆ ಸ್ವಾಗತಿಸುತ್ತದೆ.. ಸಾಮಾನ್ಯವಾಗಿ ಕೊಡುವ 7 ದಿನದ ಪರ್ಮಿಟ್ ಮತ್ತೊಂದು ವಾರ ಹೆಚ್ಚಿಸಿಕೊಳ್ಳಬಹುದು…

ವಿಮಾನದಲ್ಲಿನ ಮೂರು ಗಂಟೆ ಪ್ರಯಾಣ ಮುಗಿಸಿ “ಪಾರೋ “ ಏರ್ಪೋರ್ಟ್ ನಲ್ಲಿ ಕಾಲಿಡುತಿದ್ದಂತೆ ಅರಮನೆಯಂತೆ ಕಾಣುವ ಸುತ್ತಲಿನ ಕಟ್ಟಡಗಳು, ನೀಲಿ ಆಕಾಶ , ಬಿಳಿಯ ಮೋಡಗಳ ಜೊತೆಯಲ್ಲಿ ನೀವು ಹೇಗೇ ಯಾವುದೇ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದರೂ ಸುಂದರವಾದ ಚಿತ್ರ ಹುಟ್ಟಿಸಿಬಿಡುತ್ತದೆ .. ಪ್ರಪಂಚದ ನಕ್ಷೆಯಲ್ಲಿ ಸಣ್ಣ ಬಿಂದುವಿನಂತಿರುವ ಈ ದೇಶದೊಳಗೆ ಇದ್ದ ಬದ್ದ ಚೆಲುವನ್ನೆಲ್ಲಾ ತುಂಬಿಸಿದ್ದು ನೋಡಿದರೆ, ದೇವರು ತನಗಾಗಿಯೇ ಸೃಷ್ಟಿಸಿಕೊಂಡಿರಬಹುದೆಂಬ ಭಾವ ..

ಭಾರತದ ಈಶಾನ್ಯ ದಿಕ್ಕಿಗಿರುವ ಭೂತಾನ್ ದೇಶದ ಉತ್ತರಕ್ಕೆ ಟಿಬೆಟ್, ಚೀನಾ ಇದ್ದರೆ, ಪಶ್ಚಿಮ ಹಾಗೂ ದಕ್ಷಿಣಕ್ಕೆ ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶವಿದೆ. ಯಾವುದೇ ದಿಕ್ಕಿಗೆ ತಿರುಗಿದರೂ ಹುಚ್ಚು ಹಿಡಿಸುವ ಪ್ರಕೃತಿ ಸೌಂದರ್ಯ. ಫೆಬ್ರುವರಿಯಿಂದ ಸೆಪ್ಟೆಂಬರ್ ತನಕ ಒಳ್ಳೆಯ ಹವಾಮಾನ ..ಅಂತ ಹೇಳ್ತಾರೆ .. ಸಣ್ಣಗೆ ಹೆಚ್ಚು ತೋಯಿಸದೆ ಮಳೆ ಆಗಾಗ ಇಣುಕಿ ಹೋಗುತ್ತೆ. ಭಾರತೀಯ ರುಪಾಯಿ ಮತ್ತು ಭುತಾನಿನ ನ್ಯೂ ಮೌಲ್ಯ ಸಮಾನವಾಗಿದೆ.. ೫೦೦ ಹಾಗೂ ಇದರ ಕೆಳಗಿನ ಕರೆನ್ಸಿಯನ್ನು ಮಾತ್ರ ಚಲಾವಣೆ ಮಾಡಬಹುದಾಗಿದೆ.

ಭಾರತಸ್ನೇಹಿ ಭೂತಾನ್ ನಮಗೆ ವಿದ್ಯುತ್, ಕರಕುಶಲವಸ್ತುಗಳನ್ನು ರಫ್ತು ಮಾಡುತ್ತದೆ. ತನ್ನಲ್ಲಿನ ಅಪಾರ ವನ ಸಂಪತ್ತನ್ನು ರಕ್ಷಿಸಿಕೊಳ್ಳುವ ಸಲುವಾಗಿ ಹೆಚ್ಚು ಅರ್ಥಿಕ ಲಾಭಗಳ ಕಡೆಗೆ ಗಮನ ಕೊಡದೆ, ತನ್ನ ಸಂಸ್ಕೃತಿ, ಭಾಷೆ ಉಡುಗೆ, ಪ್ರತಿಯೊಂದರಲ್ಲೂ ತನ್ನತನವನ್ನು ಬಿಟ್ಟುಕೊಡದೆ ಸರಳವಾಗಿ, ತಣ್ಣಗೆ ಬದುಕುತ್ತಿದೆ.. ಶಾಲಾ ಮಕ್ಕಳಾಗಲಿ, ಸರಕಾರಿ ನೌಕರರಾಗಲಿ ಅವರ ಪ್ರಾದೇಶಿಕ ಉಡುಪಿನಲ್ಲೇ ಕಾಣಿಸಿಕೊಳ್ಳುತ್ತಾರೆ ,

ಹೋಟೆಲಿನ ಸ್ವಾಗತ ಕೊಠಡಿಯಿಂದ ಹಿಡಿದು ಲಗೇಜನ್ನು ವ್ಯಾನಲ್ಲಿ ಹಾಕುವ ತನಕದ ಎಲ್ಲ ಕೆಲಸಗಳಲ್ಲಿ ಮಹಿಳೆಯರೇ ಕಾಣಿಸಿಕೊಳ್ಳುವ ಬುತಾನ್ನಲ್ಲಿ ಹೆಣ್ಣು ಮಕ್ಕಳ ಬಗ್ಗೆ ಹೆಚ್ಚಿನ ಗೌರವವಿದೆ.. ತಂದೆಯ ಆಸ್ತಿಯಲ್ಲಿ ಮಗಳಿಗೆ ಮಾತ್ರ ಪಾಲು.. ಗಂಡು ಮಕ್ಕಳಿಗೆ ಪಾಲಿಲ್ಲ ಅಂತ ನಮ್ಮ ಗೈಡ್ ಹೇಳಿದ ಮಾತು ಎಷ್ಟು ನಿಜವೋ ಗೊತ್ತಾಗಲಿಲ್ಲ .. ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಆರಾಮವಾಗಿ ನಡೆದಾಡುವ ತಾಯಂದಿರನ್ನು ಕಂಡಾಗ ಖುಷಿಯಾಗುತ್ತದೆ,,

ಪಾರೋ, ಥಿಂಪು, ಮತ್ತು ಪುನಾಖಾ ..ಈ ಮೂರು ಜಾಗಗಳು ಆರಾಮವಾಗಿ 6 ದಿನದಲ್ಲಿ ಮುಗಿಸಿ ಬಿಡಬಹುದು .. ಚಾರಣಪ್ರಿಯರಿಗೆ ಪಾರೋ ದಲ್ಲಿನ ಟೈಗರ್ ನೆಸ್ಟ್ ಇಡೀ ದಿನವನ್ನು ಎಳೆದುಕೊಂಡರೂ ಸದಾ ಕಾಲ ಒಂದು ಸುಂದರ ನೆನಪಿನ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವುದಂತೂ ಖಂಡಿತಾ ..

ಬಹಳಷ್ಟು ನಿಮ್ಮ ಅಚ್ಚರಿ ಹಾಗೂ ಮೆಚ್ಚಿಗೆಗೆ ಕಾರಣವಾಗುವ ಹಲವಾರು ವಿಷಯಗಳಿವೆ.. ತಂಬಾಕು ಸೇವನೆ ಸಾರ್ವಜನಿಕ ಸ್ಥಳದಲ್ಲಿ ನಿಷೇಧ ..ಸ್ಮೋಕಿಂಗ್ ಜೋನ್ಗಳು ಪ್ರತ್ಯೆಕವಾಗಿವೆ ..ಬ್ಯಾನರುಗಳಿಲ್ಲ .. ರಾಜ, ತನ್ನ ಪತ್ನಿ ಹಾಗೂ ಎಳೆಯ ಮಗುವಿನೊಂದಿಗೆ ಇರುವ ಚಿತ್ರಗಳು ಕೆಲವು ಅಂಗಡಿ ಹಾಗೂ ನಗರ ಪ್ರವೇಶವಾಗುವ ಸ್ಥಳಗಳಲ್ಲಿ ಕಾಣಬಹುದು.. ಟ್ರಾಫಿಕ್ ಲೈಟೆ ಇಲ್ಲದ ದೇಶ.. ಕೆಲವು ಕಡೆ ಟ್ರಾಫಿಕ್ ಪೊಲೀಸರು ಡಾನ್ಸ್ ಮಾಡುವ ರೀತಿಯಲ್ಲಿ ಕೈ ತಿರುಗಿಸುತಿದ್ದುದು .. .. .

ಎಂಟನೇ ಶತಮಾನದಲ್ಲಿ ಬೌದ್ಧ ಸಂತ ಗುರು ಪದ್ಮಸಂಭವ ಮೂಲಕ ಭೂತಾನ್ ಗೆ ಆಗಮಿಸಿದ ಬೌದ್ಧ ಧರ್ಮ,ಇದೀಗ ಬಲವಾಗಿ ತಳವೂರಿದೆ..ಅಚ್ಚರಿಯ ವಿಷಯವೆಂದರೆ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ದೇಶದ ಒಳಿತಿಗಾಗಿ ಪ್ರಾರ್ಥನೆ ಸಲ್ಲುತ್ತದೆ.. ಎಲ್ಲರಲ್ಲೂ ಸೌಮ್ಯ ಸ್ವಭಾವದ ನಗು ಮುಖದ ಬುದ್ಧ ಕಾಣುತ್ತಾನೆ..

ಇವರು ಹೇಳುವ ಬುದ್ದನ ಕಥೆ ಮತ್ತು ನಾವು ಕೇಳಿದ ಬುದ್ದನ ಕಥೆ ಬೇರೆಯೇ.. ಬುದ್ಧನಾದ ನಂತರದ ಕಥೆ ಇಲ್ಲಿಯದು.. ಬುದ್ದನ ಹೆಂಡತಿ ಮಗನ ಬಗ್ಗೆ ಇಲ್ಲಿ ಏನೂ ಪ್ರಸ್ತಾಪವಿಲ್ಲ .. ಹೆಸರುಗಳು ನಾಲಿಗೆ ಮೇಲೆ ಹೊರಳುವುದು ಕಷ್ಟದ ವಿಷಯ.. ಥಿಂಪುವಿನಲ್ಲಿ ಬೆಟ್ಟದ ಮೇಲೆ ತಾವರೆ ಹೂವಿನ ಮೇಲೆ ಕೂತ ೧೭೭ ಅಡಿಯ ಬುದ್ಧ ಬಹಳ ದೂರದವರೆಗೂ ಕಾಣಿಸಿಕೊಳ್ಳುತ್ತಾನೆ .. ಬೆಟ್ಟದ ಮೇಲೆ ಬಣ್ಣ ಬಣ್ಣದ ಕೆರ್ಚಿಪಿನಂಥ ಬಟ್ಟೆಗಳು ಒಣ ಹಾಕಿರುವಂತೆ ಕಾಣುವ ಪ್ರಾರ್ಥನಾ ಬಾವುಟಗಳು ಹಸಿರ ಹಿನ್ನೆಲೆಗೆ ಮತ್ತಷ್ಟು ಬೆರಗು ತುಂಬುತ್ತದೆ .. ನಮ್ಮಲ್ಲಿರುವಂತೆ ಇಲ್ಲೂ ಮಕ್ಕಳಾಗದಿರುವವರಿಗೆ ಮಕ್ಕಳನ್ನು ಕರುಣಿಸುವ ದೇವಸ್ಥಾನಗಳು .. ಮಕ್ಕಳಾದ ಮೇಲೆ ಮತ್ತೆ ಭೇಟಿ ಮಾಡಿದ ತಂದೆ ತಾಯಿಯ ಚಿತ್ರಗಳು ಅಲ್ಬಮ್ ನಲ್ಲಿ ಸಿಗುತ್ತವೆ.. .. ಹುಂಡಿಗಳಿವೆ .

ಪ್ರವಾಸೋದ್ಯಮದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಭೂತಾನ್ ನಲ್ಲಿ ಹೋಟೆಲ್ ರೂಮುಗಳು ಎಲ್ಲಾ ವ್ಯವಸ್ಥೆಗಳನೊಳಗೊಂಡಿರುತ್ತೆ .ಹೀಟರ್ ಹಾಗೂ ಎಸಿ ಸ್ವಚ್ಛವಾದ ವಿಶಾಲ ರೂಮುಗಳು ಎಲ್ಲಾ ಕಿಡಕಿಯಲ್ಲೂ ಇಣುಕುವ ಬಣ್ಣಬಣ್ಣದ ಪ್ರಕೃತಿಸೌಂದರ್ಯ ..

ಕೃಷಿ ಪ್ರಧಾನ ಭೂತಾನಿನ ಪ್ರಮುಖ ಆಹಾರ ಅಕ್ಕಿ, ಜೋಳ, ಮಾಂಸ …ಬೆಳಿಗ್ಗೆ ಗಂಜಿ ಬಹಳಷ್ಟು ಜನರ ಉಪಹಾರ.. ನಮ್ಮ ಕುಸುಬಲಕ್ಕಿ ತರಹದ್ದೇ ಕೆಂಪಕ್ಕಿ ಮಧ್ಯಾಹ್ನದ ಊಟಕ್ಕೆ.. ಕೆಂಪು ಮೆಣಸಿನ ಕಾಯಿಯನ್ನು ಚೀಸ್ ಜೊತೆಗೆ ಹುರಿದ ಖಾದ್ಯ ಎಮಾದಶಿಯನ್ನು ತಿನ್ನದೆ ಬರಬೇಡಿ.. ಬಹಳಷ್ಟು ಹೋಟೆಲಿನಲ್ಲಿ ಜೈನ್ ಫುಡ್ ಅಂತ ಹೇಳಿದ್ದಲ್ಲಿ ಬೆಳ್ಳುಳ್ಳಿ ಈರುಳ್ಳಿಗಳಿಲ್ಲದ ತರಕಾರಿ ಊಟ ಸಿಗುತ್ತೆ.. ಸ್ಥಳೀಯ ವೈನ್ ರುಚಿ ನೋಡದ ಟೂರ್ ಕಂಪ್ಲೀಟ್ ಆಗೋಲ್ಲಾ ಅಂತೆ .. .

‍ಲೇಖಕರು avadhi

24 November, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading