ಅನಾಮಿಕಾ @ ಹ್ಯಾಂಡ್ ಪೋಸ್ಟ್ : ತನುವಿನೊಳಗೆ ದಿನವೂ ಇದ್ದು, ನನ್ನ ಮನಕೊಂದು ಮಾತು ಹೇಳದೆ ಹೋದನಲ್ಲ..

ಭಾವಭೃಂಗ ಹೂದೋಟದ ಬೇಲಿಯ ದಾಟಿ ಬಾರೋ…

ಎಲ್ಲವನ್ನೂ ಹೀಗೆ ಹೇಳಿಕೊಳ್ಳುವ ಕ್ರಮದಲ್ಲೇ ಸಂಕಟ ಒಂದು ಹದಕ್ಕೆ ಬರಬಹುದು ಎಂಬ ನಿರೀಕ್ಷೆಯಿಂದ ಬರೆಯುತ್ತಿದ್ದೇನೆ. ಅವನ ನೆನಪೆಂದರೆ ಸಮುದ್ರದ ಅಲೆ ದಡ ಮುಟ್ಟಿ ಹಿಂತಿರುಗುವಾಗಿನ ಕೊರೆತದಂತದ್ದು. ಕಣ್ಣಿನಿಂದ ದೂರವಾಗಿದ್ದು ಮನಸಿನಿಂದಲೂ ಏಕೆ ದೂರವಾಗೋಲ್ಲ? ರೆಪ್ಪೆ ಕೂಡಿದರೆ ಆ ಮುಖವೇ ಕಣ್ಮುಂದೆ ಬಂದು ಒದ್ದಾಡುತ್ತಿರುವವಳಿಗೆ ನಿದ್ದೆ ಹತ್ತಿದರೆ ಜೀವವನ್ನೇ ದಾನ ಕೊಡಬಲ್ಲೆ ಎನಿಸುತ್ತಿದೆ. ತಲೆ ಕೊಡವಿಕೊಳ್ಳುತ್ತೇನೆ, ಏನು ಕೊಡವಿಕೊಂಡೆ ಎನ್ನುವುದೂ ಗೊತ್ತಾಗುವುದಿಲ್ಲ. ಬೇಡದ್ದನ್ನು ಕೊಡವಿ ಹಾಕಿದ ನೆಮ್ಮದಿಯಲ್ಲಿ ಮಲಗಬೇಕೆನಿಸುತ್ತದೆ, ತಲೆಯನ್ನು ಅವನ ಹೊಟ್ಟೆಗೆ ಒತ್ತಿ.

ಕವಿ ಜಾನ್ ಡೆನ್ ತನ್ನ ಡೈರಿಯೊಂದರಲ್ಲಿ ‘ಯಾವುದೇ ಸಾವು ನನ್ನನ್ನು ಕುಗ್ಗಿಸುತ್ತದೆ,’ ಎಂದು ಬರೆಯುತ್ತ, ‘ಕಾಲನ ಘಂಟಾನಾದ ಯಾರ ಮರಣವನ್ನು ಸೂಚಿಸುತ್ತದೆ ಎಂದು ಕೇಳಬೇಡ; ಅದು ಸೂಚಿಸುವುದು ನಿನ್ನದೇ ಮರಣವನ್ನು,’ ಎನ್ನುತ್ತಾನೆ. ಇದು, ಇರುವವರೆಗೆ ಬದುಕು, ಹುಟ್ಟು-ಸಾವು ಪ್ರಕೃತಿ ಸಹಜ ನಿಯಮ ಎನ್ನುವ ಸತ್ಯದೆಡೆಗಿನ ಸಾರ್ವತ್ರಿಕತೆಯ ಮಾತಾಯಿತು. ಆದರೆ ಆತ್ಮೀಯರ ಅಗಲುವಿಕೆ ನಮ್ಮನ್ನು ನಿಷ್ಕ್ರಿಯರನ್ನಾಗಿಸುವುದು ಸ್ವಂತದ ಅನುಭವ. ಮೊನ್ನೆ, ಅಕ್ಟೋಬರ್ 26ರಂದು ಇಪ್ಪತ್ತೊಂಬತ್ತು ವರ್ಷಕ್ಕೆ ದಢಕ್ಕನೆ ಎದ್ದು ನಡೆದವ ನನ್ನ ಆಲೋಚನೆಯಲ್ಲಿ ಜೀವಂತವಾಗಿರುವಷ್ಟು ಕಾಲ ಜೀವಕ್ಕೆ ಸುಖವಿಲ್ಲ.

ಕಲಿತಿದ್ದು ಮುಗಿಯಿತು, ಕೆಲಸ ಸಿಕ್ಕಿತು ಹೀಗೆ ಎಲ್ಲ ಸುಸಂಗತವಾಗಿ ನಡೆಯುತ್ತಿದೆ ಎನ್ನುವಾಗ ಸಮಾನ ವಯಸ್ಕ-ಮನಸ್ಕ ಅವನಂಥ ಒಂದು ಮೊಗ್ಗು ಅರಳುವುದಕ್ಕಿಂತ ಮುಂಚೆಯೇ ಕಳಚಿ ಬಿತ್ತು. ಹೀಗಾಗಲು ದೋಷ ಯಾರದು? ಕೆಲಸದಿಂದ ಉಂಟಾಗುವ ಮಾನಸಿಕ ಒತ್ತಡ ದೇಹವನ್ನು ಜರ್ಜರಿತಗೊಳಿಸುತ್ತಿದೆ ಎನ್ನುವುದು ಗೊತ್ತಾದ ಮೇಲೂ ಕಾಳಜಿ ವಹಿಸದಿದ್ದೇ? ಈ ಮಹಾನಗರದಲ್ಲಿ ಇರುವೆಗಳಂತೆ ಜನ ಬದುಕುತ್ತಿರುವಾಗ ಅವನೊಬ್ಬನ ಪಾಲಿಗೆ ಬದುಕು ಯಾಕಿಷ್ಟು ಜಿಪುಣವಾಯಿತು?

ಈ  ಪ್ರಶ್ನೆಗಳಿಗೆ ಉತ್ತರವೆಲ್ಲಿ? ಆರಾಧಿಸುವ ಮೂರ್ತಿಯ ಭಾಗವೊಂದು ಕಳಚಿ ಬಿದ್ದು ವಿರೂಪವಾದಾಗ ಆಗುವಂತಹ ಈ ಎದೆ ಬಿರಿಯುವ ನೋವನ್ನು ಹೇಳುವುದು, ತಾಳುವುದು ಹೇಗೆ? ಬದುಕೇಕೆ ಇಂತಹ ಅನಿರೀಕ್ಷಿತ ಆಘಾತ ತಂದೊಡ್ಡುತ್ತದೆ. ತುಂಬು ಹೃದಯದ ಭೂಮಿ, ತಾಯಿ, ದೇವರು, ತಂದೆ ಅವನಿಗೂ ಇದ್ದರಲ್ಲವೇ?  ಆಫೀಸಿಗೆ ಬಂದ ಮೊದಲ ದಿನ ಅವನನ್ನು ನೋಡಿದ ತಕ್ಷಣ ಒಮ್ಮೆ ತಿರುಗಿ ನೋಡಬೇಕೆನಿಸಿ ನೋಡಿದ್ದೆನಷ್ಟೇ. ಸದಾ ನಿಷ್ಕಲ್ಮಶ,  ಮುಗ್ಧ ಕಿರುನಗೆ ಅವನಿಗೆ ದೇವರು ಕರುಣಿಸಿರುವ ವರ ಎನಿಸುತ್ತಿತ್ತು. ನಗುವಿನ ಆ ಪರಿಭಾಷೆಯಿಂದಾಗಿಯೇ ಅವನು ನನ್ನ ವಿಪರೀತವಾಗಿ ಸೆಳೆದಿದ್ದು.

ವಾರದ ನಂತರ ಕ್ಯಾಂಟೀನ್‌ನಲ್ಲಿ ಎದುರು ಕೂತು ಚೂರು ಹರಟಿ, ಸೆಲ್ ನಂಬರ್ ಅದಲು ಬದಲು ಮಾಡಿಕೊಂಡು, ದಿನೇ ದಿನೇ ಇಷ್ಟಿಷ್ಟೇ ಹತ್ತಿರವಾಗಿದ್ದೆವು. ಸ್ಮಾರ್ಟ್ ಫೋನ್, ಒಳ್ಳೆ ಡ್ರೆಸ್ ತಗೊಳ್ಳೊ ಎಂದಾಗಲೆಲ್ಲ, “ಮುಂದಿನ ವರ್ಷಕ್ಕಾದರೂ ಮನೆಯ ಜವಾಬ್ದಾರಿಗಳೆಲ್ಲ ಕಳೆದು ನೆಮ್ಮದಿಯಾಗಿ ಉಸಿರಾಡಬಹುದು,” ಎಂದು ಓಡುವ ಅವ, “ನೀ ಓಡುವುದನ್ನು ಬೇಗ ಕಲಿಯುತ್ತೀ, ನಡೆಯುವುದನ್ನು ರೂಢಿಸಿಕೊ ಜೊತೆ ಬರುತ್ತೇನೆ,” ಎನ್ನುವ ನಾನು. ಅವನ ಸಮಸ್ಯೆಗಳಿಗೆಗೆ ನನ್ನ ಹತ್ತಿರ ಪರಿಹಾರ ಇರಲಿಲ್ಲವಾದ್ದರಿಂದ ಇಬ್ಬರೂ ಬೇರೆ-ಬೇರೆ ಲೋಕಗಳಲ್ಲಿ ಬದುಕುತ್ತಲೇ ಒಬ್ಬರನ್ನೊಬ್ಬರು ಕಾಡುತ್ತಿದ್ದೆವು.

ಅನಿವಾರ್ಯ ಕಾರಣಗಳಿಂದ ತಮ್ಮನ ಮದುವೆ ಮಾಡುವ ನಿರ್ಧಾರಕ್ಕೆ ಬಂದವನು, ‘‘ಏನೋ ಹುಡುಕುತ್ತ ಬಂದು, ಈ ಮಹಾನಗರದಲ್ಲಿ ನಾನೇ ಕಳೆದು ಹೋಗಿದ್ದೇನೆ. ಯಾವ ಸುಖ ನೀಡದ, ಗುರಿ ಸ್ಪಷ್ಟವಾಗದ ಏನು ಊರಿದು? ಇಲ್ಲಿಗೇಕೆ ಬಂದೆ ಎಂದು ಯೋಚಿಸುತ್ತಿದ್ದೇನೆ. ಬಂದು ಏನು ಸಾಧಿಸಿದೆ ಎಂದು ಕೇಳಿಕೊಂಡರೆ ಉತ್ತರ ಶೂನ್ಯ. ಬದುಕಿನಲ್ಲಿ ಹಲವು ಸಲ ಹೊಸ ಪ್ರಯೋಗ ಮಾಡುವ ಕುರಿತು ತುಂಬಾ ಉತ್ಸಾಹದಿಂದ ಯೋಚಿಸಿದ್ದೆ, ಅಷ್ಟೇ ಉತ್ಸಾಹದಿಂದ ಕೆಲವನ್ನ ಮರೆತೂಬಿಟ್ಟೆ. ಒಂದು ರಜೆ ಇಲ್ಲ, ಹಬ್ಬವಿಲ್ಲ. ಮುಂದಾದ್ರೂ ಒಂದು ದೀರ್ಘ ರಜೆ ತೆಗೆದುಕೊಂಡು ಕಾಡಿನಲ್ಲಿ ಇದ್ದು ಬರಬೇಕೆನಿಸುತ್ತಿದೆ. ಇಲ್ಲ ಕೆಲಸದ ಸಹವಾಸವೇ ಸಾಕು ಕೃಷಿ ಮಾಡುತ್ತೇನೆ,’’ ಎಂದಿದ್ದ.

ವಯೋಸಹಜ ಆಸೆ-ಆಕಾಂಕ್ಷೆಗಳನ್ನು ಹಲ್ಲು ಕಚ್ಚಿ ನಿಯಂತ್ರಿಸಿದ್ದಕ್ಕೆ ಆ ಜೇನುಕಣ್ಣಲ್ಲಿ ಮಡುಗಟ್ಟಿದ ನಿರಾಸೆಯನ್ನ ಪದಗಳಲ್ಲಿ ಹೇಳಿದರೂ ಊಹೆಗೆಟುಕುವುದು ಕಷ್ಟ. ಅವನನ್ನು ಇನ್ನಷ್ಟು ಬಿಗಿಯಾಗಿ ತಬ್ಬಿ ಹಿಡಿಯುವುದನ್ನು ಬಿಟ್ಟು ಇನ್ನೇನೂ ತೋಚಿರಲಿಲ್ಲ ನನಗೆ. ಕೊನೆಗೆ ಜವಾಬ್ದಾರಿ ಭಾರ ಹೊತ್ತು ಕುಸಿದ. ಗಳಿಗೆ ಇರು ಬಂದೆ ಎಂದವ ಬರದೇ ಹೋಗಿದ್ದಕ್ಕೆ ಏನು ಅನಿವಾರ್ಯತೆಯೋ ಗೊತ್ತಾಗುತ್ತಿಲ್ಲ. ಅವನು ಹೋದ ದಿನದಿಂದ ಅಂಗಳದಲ್ಲಿ ಅರಳುತ್ತಿರುವ ಹೂಗಳಲ್ಲಿ ಕಂಪಿಲ್ಲ. ಬಣ್ಣಗಳಲ್ಲಿ ಸೊಬಗಿಲ್ಲ. ಹಿಂದೆ ಕತ್ತಲಾದರೆ ಚುಕ್ಕಿಗಳನ್ನು ಕಾಣಬಹುದೆಂಬ ಆಸೆಯಾದರೂ ಇತ್ತು. ಹೊಳೆಯಬೇಕಿದ್ದ ಆಕಾಶ ಖಾಲಿಯಾದರೆ ಕಾಣುವುದೇನು? ಆದರೂ ಪ್ರತಿದಿನ ರಾತ್ರಿ ಅಂಗಳಕ್ಕೆ ಬಂದು ನನ್ನಿಷ್ಟದ ನಕ್ಷತ್ರಗಳಿಗಾಗಿ ಗಗನದತ್ತ ಮುಖ ಮಾಡುತ್ತೇನೆ. ಏನೂ ಕಾಣುವುದಿಲ್ಲ. ಹತಾಶಳಾಗುತ್ತೇನೆ. ನನಗೆ ಬಣ್ಣ-ಬಣ್ಣದ ಕಾಮನಬಿಲ್ಲು ಬೇಕಿಲ್ಲ. ಆದರೆ ಖಾಲಿ ಆಕಾಶವನ್ನು ಸಹಿಸಿಕೊಳ್ಳಲಾರೆ. ಅಲ್ಲಿ ಒಂದಾದರೂ ತಾರೆ ಹೊಳೆಯುತ್ತಿರಲಿ. ಆಗ ಕತ್ತಲಿಗೂ ಒಂದು ಕಳೆ. ಆ ಒಂದೇ ನಕ್ಷತ್ರ ಅವನೇ ಆಗಿರಲಿ ಎನ್ನುವುದು ನನ್ನೊಳಗಿನ ತುಡಿತ.

ಹೃದಯಕ್ಕೆ ಪೆಟ್ಟು ಬಿದ್ದಾಗಲೆಲ್ಲ ನೋವಿಗಿಂತ ಬದುಕಿನಡೆಗಿನ ಪ್ರೀತಿಯನ್ನ ತುಸು ಹೆಚ್ಚು ಮಾಡುವುದು ವಿ.ಸ. ಖಾಂಡೇಕರ ಅವರ ‘ಅಮೃತವೇಲ್’ ಕಾದಂಬರಿಯ ಮುನ್ನುಡಿಯಲ್ಲಿ ಬರುವ, ‘‘ಭಗ್ನಸ್ವಪ್ನದ ಕನಸುಗಳನ್ನು ಒಟ್ಟುಗೂಡಿಸಿಕೊಂಡು ಕುಳ್ಳಿರಲು ಮನುಷ್ಯ ಹುಟ್ಟಿಬಂದಿಲ್ಲ. ಮನುಷ್ಯನಿಗೆ ತನ್ನ ಮನಸ್ಸನ್ನು ಕೇವಲ ಭೂತಕಾಲದ ಕೊಂಡಿ-ಸಲಾಕೆಯಿಂದ ಗಟ್ಟಿಯಾಗಿ ಕಟ್ಟಿಡಲು ಬರುವುದಿಲ್ಲ. ಅದಕ್ಕೆ ಭವಿಷ್ಯದ ಗರುಡರೆಕ್ಕೆಯ ವರದಾನವೂ ಲಭ್ಯವಾಗಿದೆ. ಒಂದು ಕನಸು ಕಾಣುವುದು, ಅದನ್ನು ಅರಳಿಸುವುದು ಮತ್ತು ಅದನ್ನು ಸತ್ಯಸೃಷ್ಟಿಗೆ ಇಳಿಸಬೇಕೆಂದು ಹಳಹಳಿಸುವುದು ಹಾಗೂ ಅದರಲ್ಲೇ ಆನಂದ ಅನುಭವಿಸುವುದು ಮತ್ತು ದುರ್ದೈವದಿಂದ ಆ ಕನಸು ಭಗ್ನವಾದರೆ ಅದರ ತುಣುಕಗಳ ಮೇಲಿಂದ, ರಕ್ತಮಯ ಕಾಲುಗಳಿಂದ ಬೇರೆ ಕನಸಿನ ಹಿಂದೆ ಓಡುವುದು. ಇದು ಮಾನವೀ ಮನಸ್ಸಿನ ಧರ್ಮ, ಮನುಷ್ಯನ ಜೀವನಕ್ಕೆ ಅರ್ಥ ಬರುವುದು ಇದರಿಂದಲೇ,’’ ಎನ್ನುವ ಸಾಲುಗಳು.

ಎದುರು ಸಿಕ್ಕರೆ ಕಣ್ಣಿನಿಂದಲೇ ಕುಡಿದುಬಿಡುವ ಅವನ ತೀವ್ರತೆ ನೆನಪಾದರೆ ಈ ಸಲ ಓಟವಲ್ಲ, ಹೆಜ್ಜೆ ಕಿತ್ತಿಡುವುದೂ ಸಾಧ್ಯವಿಲ್ಲ ಎನಿಸುತ್ತಿದೆ. ನೋಡಲೇಬೇಕು ಎಂದವಳಿಗೆ ಕಾಣಿಸಿಕೊಳ್ಳುತ್ತಾನೆ ಆಡುವ ಮಕ್ಕಳ ಕಣ್ಣಲ್ಲಿ ಎಂದು ಸಂತೈಸಿಕೊಂಡರೂ, ತನುವಿನೊಳಗೆ ದಿನವೂ ಇದ್ದು, ನನ್ನ ಮನಕೊಂದು ಮಾತು ಹೇಳದೆ ಹೋದನಲ್ಲ. ನನ್ನಿಂದ ನಿನ್ನ ಕಸಿದು ಅಡಗಿಸಿಟ್ಟುಕೊಂಡಿರುವ ಆ ಭಾವಭೃಂಗ ಹೂದೋಟದ ಬೇಲಿಯ ದಾಟಿ ಬಾರೋ ನನ್ನದೆ ಬಳಿಗೆ.

 

‍ಲೇಖಕರು avadhi

November 24, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಅಂತಃಕರಣದ ಬರಹ. ಇಷ್ಟವಾಯಿತು.

    ಪ್ರತಿಕ್ರಿಯೆ
  2. ರೇಣುಕಾ ರಮಾನಂದ

    ಬಹಳ ಇಷ್ಟವಾಯ್ತು ಬರಹ.ಮತ್ತೆ ಕಾಯುವೆವು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: