ಎನ್ ಎಸ್ ಶ್ರೀಧರ ಮೂರ್ತಿ ಕಂಡಂತೆ ‘ಕಾಂತ ಮತ್ತು ಕಾಂತ’

ಮಾನವ ಸ್ವಭಾವಗಳ ಹುಡುಕಾಟದ ಪ್ರಯೋಗ ‘ಕಾಂತ ಮತ್ತು ಕಾಂತ’

ಎನ್ ಎಸ್ ಶ್ರೀಧರ ಮೂರ್ತಿ 

ಇಬ್ಬರು ಹಿರಿಯರ ಕಲಾವಿದರು. ಅವರ ಜೋಡಿಯ ನಾಟಕ ಒಂದು ಕಾಲದಲ್ಲಿ ಬಹಳ ಪ್ರಸಿದ್ಧಿ, ಈಗ ಹದಿನಾರು ವರ್ಷಗಳಿಂದಲೂ ಪರಸ್ಪರ ದೂರವಾಗಿದ್ದಾರೆ. ಅವರಿಬ್ಬರನ್ನೂ ಹತ್ತಿರಕ್ಕೆ ತರುವ ಪ್ರಯತ್ನ ಫಲಿಸುತ್ತದೆಯೇ ಒಂದು ಕೊನೆಯ ಷೋ ಸಾಧ್ಯವಾಗುತ್ತದೆಯೇ ಎನ್ನುವ ಎಳೆಯನ್ನು ಹಿಡಿದು ಸಾಗುವ ನಾಟಕ ಎಸ್.ಸುರೇಂದ್ರ ನಾಥ್ ಅವರು ಬರೆದು ನಿರ್ದೇಶಿಸಿರುವ ನಾಟಕ ‘ಕಾಂತ ಮತ್ತು ಕಾಂತ’. ಇದನ್ನು ನಾಟಕದ ವಸ್ತು ಎನ್ನುವಂತಿಲ್ಲ. ಹಾಗೆ ನೋಡಿದರೆ ಇದು ಕಥೆಯ ಚೌಕಟ್ಟಿನ ನಾಟಕ ಅಲ್ಲ.

ಹಲವು ಮಾನವೀಯ ಪ್ರಶ್ನೆಗಳನ್ನು ಇಂತಹ ಎಳೆಗಳ ಮೂಲಕ ಹಿಡಿಯುವ ಪ್ರಯತ್ನ ಇದರಲ್ಲಿದೆ. ಇಬ್ಬರ ನಡುವೆ ಸೇತುವೆ ಆಗಲು ಸಿದ್ದನಾಗಿರುವವನು ಒಬ್ಬನಿದ್ದಾನೆ. ಅವನ ಮೂಲಕವೇ ಎರಡೂ ಪಾತ್ರಗಳ ಅಂತರಂಗ ದರ್ಶನವಾಗುತ್ತದೆ. ಇಬ್ಬರ ಮುಖಾಮುಖಿ ಕೂಡ ಆಗುತ್ತದೆ. ಅಲ್ಲಿ ಇಬ್ಬರೂ ತೆರೆದು ಕೊಳ್ಳುತ್ತಾರೆ. ಆದರೆ ತಮ್ಮ ಮೂಲ ನೆಲೆಯನ್ನು ಕೊಂಚವೂ ಬಿಡುವುದಿಲ್ಲ. 

ಇದು ಮಾನವೀಯ ವ್ಯಕ್ತಿತ್ವದ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಬದಲಾಗದ ವ್ಯಕ್ತಿತ್ವಗಳ ಮೂಲಕವೇ ಸಾವಿರಾರು ಸಲ ಪರಕಾಯ ಪ್ರವೇಶ ಮಾಡಿದ ಪಾತ್ರಗಳ ಇನ್ನೊಂದು ಅವತರಣಿಕೆ ಸಾಧ್ಯ ಆಗ ಬೇಕು. ಪ್ರತಿ  ಪ್ರಯೋಗವೂ ಹೊಸತನ್ನು ನೀಡುತ್ತದೆಯೇ ಇಲ್ಲವೇ ಮರುಕ್ರಮಣಿಕೆ ಆಗುತ್ತದೆಯೇ. ಇದು ನಾಟಕದ ಅಂತರಾಳದಿಂದ  ಏಳುವ ಪ್ರಶ್ನೆ. ಇದಕ್ಕೆ ಇಬ್ಬರೂ ಕಾಂತರಲ್ಲಿಯೂ ವಿಭಿನ್ನ ಉತ್ತರಗಳಿವೆ, ಅದು ಸಂವಾದಿಯೂ ಹೌದು ಸಂಘರ್ಷವೂ ಹೌದು. ಅದು ಮಾನವ ಸ್ವಭಾವದ ಸಹಜ ಲಕ್ಷಣ ಕೂಡ. 

ಇಬ್ಬರು ಕಲಾವಿದರು ದೂರವಾಗಲು ಒಬ್ಬರ ಮಟ್ಟಿಗೆ ಕಲೆಯ ನಿರ್ಲಕ್ಷೆ  ಕಾರಣ. ಇನ್ನೊಬ್ಬರ ಮಟ್ಟಿಗೆ ಅಹಂಕಾರ ಕಾರಣ. ಎರಡೂ ಅರ್ಧ ಸತ್ಯಗಳೇ. ಕಲೆಯ ಅತ್ಯಂತಿಕತೆಯ ಹಲವು ಪ್ರಶ್ನೆಗಳನ್ನು ನಾಟಕ ಎತ್ತುತ್ತಾ ಸಾಗುತ್ತದೆ. ಒಬ್ಬನಿಗೆ  ಸಂಸಾರವಿದೆ ಅದರಲ್ಲಿ ಸಂತೋಷವಿದೆ ಅಥವಾ ಅಂತಹ ಭ್ರಮೆ ಇದೆ. ಇನ್ನೊಬ್ಬನಿಗೆ ಸಂಸಾರವಿಲ್ಲ. ಅದರ ಹತಾಶೆ ಇದೆ, ಹೀಗಿದ್ದರೂ  ಅದನ್ನು ಮೀರುವ ಕೆಚ್ಚು ಇದೆ.  ನಾಟಕ ಸಾಗುವುದು ನಗುವಿನ ಅಲೆಯ ಮೇಲೆ ಆದರೆ ಇವ್ಯಾವುದೂ ನಕ್ಕು ಮರೆತು ಬಿಡುವ ಹಾಸ್ಯದಂತಲ್ಲ. ಅದರೊಳಗೇ ಅಂತ:ಕರಣದ ಸೆಲೆ ಕೂಡ ಇದೆ. ನಗುವಿನ ಒಳಗಿನ ಕಣ್ಣೀರಿನ ಬಿಂದುವನ್ನು ನಾಟಕ ಜತನವಾಗಿ ಕಟ್ಟಿ ಕೊಡುತ್ತದೆ.

ಉಮಾಕಾಂತ್-ರಮಾಕಾಂತ್ ಜೋಡಿಯ ಹಾಗೆ ನಾಟಕದಲ್ಲಿ ರಾಮಸ್ವಾಮಿ ಮತ್ತು ಕೃಷ್ಣಸ್ವಾಮಿಯವರ ಜೋಡಿ ಕೂಡ ಇದೆ. ಇವರಿಬ್ಬರ ಕಥೆಯೂ ಒಂದೇ ರೀತಿಯದು. ಮಕ್ಕಳಿದ್ದೂ ಪರದೇಶಿಗಳ ಹಾಗೆ ಬದುಕ ಬೇಕಾದ ಅನಿವಾರ್ಯತೆ ಅದರಲ್ಲಿನ ಸ್ವಾಭಿಮಾನದ ಪ್ರಶ್ನೆ ಎಲ್ಲವೂ ಸಾಗಿ ಹೋಗುತ್ತದೆ. ಇದು ಇನ್ನೊಂದು ನೆಲೆಯಲ್ಲಿ ಕಾಂತರಿಬ್ಬರ ಸಂಬಂಧವನ್ನು ವಿವೇಚಿಸುವಂತೆ ಮಾಡುತ್ತದೆ. ಇನ್ನೂ ವಿಸ್ತರಿಸಿದರೆ ಇದು ಕಲೆ ಮತ್ತು ಕಲಾವಿದರ ನಡುವಿನ ಸಂಬಂಧದ ಪ್ರಶ್ನೆ ಕೂಡ ಹೌದು. ಇಷ್ಟವಾಗುವ ಅಂಶವೆಂದರೆ ಇದನ್ನು ಎಲ್ಲಿಯೂ ವಾಚ್ಯವಾಗಿಸದೆ ಸುರೇಂದ್ರ ನಾಥ್ ಬೆಳೆಸಿದ್ದಾರೆ.

ಇಡೀ ನಾಟಕ ಅಂತ:ಕರಣದ ಪಕ್ಕದಲ್ಲಿಯೇ ಸಾಗಿ ಹೋಗುತ್ತದೆ. ಕೆಲವೊಮ್ಮೆ ಸುರೇಂದ್ರ ನಾಥ್ ಅವರ ಹಿಂದಿನ ನಾಟಕಗಳ ನೆನಪು ಆದರೂ ಇದರಲ್ಲಿ ಭಿನ್ನತೆ  ಇದ್ದೇ ಇದೆ. ಇಡೀ ನಾಟಕದ ಮಹತ್ವ ಎಂದರೆ ಅದಕ್ಕಿರುವ ಟೈಮಿಂಗ್. ಪ್ರತಿಯೊಂದು ನಿಖರ ಬಾಣದ ಹಾಗೆ ಗುರಿ ತಲುಪುವ ವಿನ್ಯಾಸವನ್ನು ನಾವು ಇಲ್ಲಿ ಗಮನಿಸ ಬಹುದು. 

ಇಂತಹ ನಾಟಕಕ್ಕೆ ಜೀವ ಕೊಟ್ಟವರು ಇಬ್ಬರು ಚಂದ್ರಶೇಖರ್ ಅಥವಾ ಚಂದ್ರುಗಳು. ಮುಖ್ಯಮಂತ್ರಿ ಚಂದ್ರ ಮತ್ತು ಸಿಹಿ ಕಹಿ ಚಂದ್ರು. ಇಬ್ಬರೂ ರಂಗಭೂಮಿಯೂ ಸೇರಿದಂತೆ ಹಲವು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದವರು. ಇಂತಹದೊಂದು ವಿಶಿಷ್ಟ ನಾಟಕಕ್ಕೆ ಜೀವ ನೀಡುವುದು ಇಬ್ಬರಿಗೂ ಸವಾಲು. ಏಕೆಂದರೆ ಅವರಿಗೆ ತಮ್ಮದೇ ಆದ ಇಮೇಜ್‍ಗಳಿವೆ. ಅದಕ್ಕಾಗಿ ನಿರೀಕ್ಷಿಸುವ ಪ್ರೇಕ್ಷಕರೂ ಇದ್ದಾರೆ. ವಿಶೇಷವೆಂದರೆ ಇಬ್ಬರೂ ಅದನ್ನು ಪ್ರಾಜ್ಞಾಪೂರ್ವಕವಾಗಿ ದಾಟಿ ಅಭಿನಯಿಸಿದ್ದಾರೆ.

ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇಬ್ಬರೂ ಒಟ್ಟಿಗೆ ತೆರೆಯ ಮೇಲೆ ಪ್ರತಿಭೆಯ ಮೂಲಕ ಸಂಘರ್ಷಿಸುವಾಗ ಥಟ್ಟನೆ ಅನಂತ ಮೂರ್ತಿಯವರ ‘ಮೌನಿ’ ಕಥೆ ನೆನಪು ಆಗುತ್ತದೆ. ವಿಭಿನ್ನ ಗುಣದಲ್ಲಿಯೇ ಸಾತತ್ಯ ಹೊಂದಿರುವ ವ್ಯಕ್ತಿತ್ವಗಳಂತೆ ಎರಡೂ ಪಾತ್ರಗಳು ಸಾಗುತ್ತವೆ. ಮುಖ್ಯಮಂತ್ರಿ ಚಂದ್ರು ಕೊಂಚವೂ ಮುಖದ ಮೇಲೆ ನಗುವನ್ನು ತಂದು ಕೊಳ್ಳದೆ ಪ್ರೇಕ್ಷಕರನ್ನು ನಗಿಸುತ್ತಾರೆ. ಅದನ್ನೇ ವಿಸ್ತರಿಸಿ ಚಿಂತನೆಗೆ ಹಚ್ಚುತ್ತಾರೆ. ಸಿಹಿ ಕಹಿ ಚಂದ್ರ ನಗುತ್ತಾರೆ, ನಗಿಸುತ್ತಾರೆ ಹಾಗೆಯೇ ಅಳುತ್ತಾರೆ ಅಳಿಸುತ್ತಾರೆ. ಕೊನೆಯ ದೃಶ್ಯದಲ್ಲಿ ಅವರ ಭಾವಪೂರ್ಣ ಮಾತುಗಳು ಇಡೀ ನಾಟಕವನ್ನು ಹೊಸ ನೆಲೆಯಲ್ಲಿ ನೋಡುವಂತೆ  ಮಾಡುತ್ತದೆ. 

ಬಿಕ್ಕಟ್ಟಿನಲ್ಲಿರುವ ಕನ್ನಡ ರಂಗಭೂಮಿಗೆ ‘ಕಾಂತ ಮತ್ತು ಕಾಂತ’ದಂತಹ ನಾಟಕಗಳು ನಿಜಕ್ಕೂ ಚಾಲನೆ ನೀಡ ಬಲ್ಲವು. ಈ ಕಾರಣದಿಂದಲೇ ನಾಟಕದಲ್ಲಿರುವ ದೋಷಗಳು ಮಹತ್ವವಲ್ಲ ಎನ್ನಿಸುತ್ತವೆ. 

‍ಲೇಖಕರು Admin

December 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: