ಎದೆ ನಡುಗಿಸುವ ʼಜೈ ಭೀಮ್ʼ ಮತ್ತು ʼಪ್ರೇಮಂ ಪೂಜ್ಯಂʼ ಎನ್ನುವ ಡಿವೈನ್ ಲವ್

ಎಚ್ ಆರ್ ರಮೇಶ

ಸಿನಿಮಾ ಇಪ್ಪತ್ತನೇ ಶತಮಾನದ ಅಚ್ಚರಿಗಳಲ್ಲಿ ಒಂದು. ಅಂದಿನಿಂದಲೂ ಇದು ವೀಕ್ಷಕರನ್ನು ಸೆಳೆಯುತ್ತಲೇ ಇದೆ. ಎಂತಹ ವೀಕ್ಷಕರನ್ನೂ ಸಹ ರೀಚ್ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಇದರ ಇನ್ನೊಂದು ಸಾಧ್ಯತೆ ಏನನ್ನು ಬೇಕಾದರೂ ದೃಶ್ಯದಲ್ಲಿ ತೋರಿಸ ಬಹುದಾದಂತಹದ್ದು. ಮಾತು ಸೋತಾಗ ದೃಶ್ಯದ ಮೂಲಕ ತೋರಿಸಬಹುದು. ಈ ಮಾಧ್ಯಮಕ್ಕೆ ನಿಜವಾದ ಹೀರೋ ಅಂದರೆ ನಿರ್ದೇಶನ ಮತ್ತು ಛಾಯಾಗ್ರಹಣ. ಮುಖ್ಯವಾಗಿ ಛಾಯಾಗ್ರಹಣ ಒಂದು ಮ್ಯಾಜಿಕ್ಕನ್ನೇ ಸೃಷ್ಟಿಮಾಡಬಲ್ಲದು.

ಸಿನಿಮಾಕ್ಕೆ ಕಲಾತ್ಮಕತೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ಬೆರೆತಿರುವುದರಿಂದ ಅತಿ ಹೆಚ್ಚು ಜನರಿಗೆ ಹತ್ತಿರವಾಗುತ್ತದೆ. ಆದರೆ ಸಮಾಜ ಮುಖಿ ಮತ್ತು ಸೌಂದರ್ಯ ಬಿತ್ತರಗೊಳ್ಳುವುದು ಒಬ್ಬ ಸೃಜನಶೀಲ ಛಾಯಾಗ್ರಾಹಕ/ಳು ಮತ್ತು ನಿರ್ದೇಶಕ/ಳಿಂದ. ಇವರಿಬ್ಬರಿಗೂ ಉತ್ತಮ ಅಭಿರುಚಿಯಿಲ್ಲದಿದ್ದರೆ ಸಿನಿಮಾ ಹಳ್ಳ ಹಿಡಿಯುವುದಂತೂ ಗ್ಯಾರಂಟಿ. ಒಮ್ಮೊಮ್ಮೆ ಪ್ರೇಕ್ಷಕರಿಗೆ ಅದೃಷ್ಟವೆನೋ ಎಂಬಂತೆ ಒಳ್ಳೆಯ ಚಿತ್ರಗಳು ಸಿಗುತ್ತವೆ. ಮರಳು ಗಾಡಲ್ಲಿ ಓಯಸಿಸ್ ಸಿಕ್ಕಂತೆ. ಹಾಗೆ ಇತ್ತೀಚೆಗೆ ಬಂದಿರುವಂತಹವು ತಮಿಳಿನ ಜೈ ಭೀಮ್ ಮತ್ತು ಕನ್ನಡದ ಪ್ರೇಮಂ ಪೂಜ್ಯಂ ಪ್ರೇಕ್ಷಕರನ್ನು ಸೆಳೆದಿರುವಂತಹ ಚಿತ್ರಗಳು.

ಮೊದಲನೆಯದು ಜಾತಿ ವ್ಯವಸ್ಥೆಯಿಂದ ತುಕ್ಕು ಹಿಡಿಯುತ್ತಿರುವ ಭಾರತೀಯ ಸಮಾಜದ ಆತ್ಮಘಾತುಕ ಮನಸ್ಥಿತಿಯನ್ನು ಯಾವ ಮುಲಾಜಿಲ್ಲದೆ ಖುಲ್ಲಂ ಖುಲ್ಲ ನೇರವಾಗಿ, ನಮ್ಮ ಮುಖಕ್ಕೆ ರಾಚುವಂತೆ ತೋರಿಸುತ್ತದೆ. ಎರಡನೆಯದು ಅಂದರೆ ಪ್ರೇಮಂ ಪೂಜ್ಯಂ ಜಾತಿಯ ಜೊತೆಗೆ ಧರ್ಮವನ್ನು, ಅವು ಹೇಗೆ ಮನುಷ್ಯ ಸಂಬಂಧಗಳು ಬೆಸೆದುಕೊಳ್ಳಲು ಅಡ್ಡಿಯಾಗುತ್ತವೆ ಎನ್ನುವುದನ್ನು ತೋರಿಸುತ್ತದೆ.

ಜೈಭೀಮ್ ಕಟು ವಾಸ್ತವದ ಚಿತ್ರಣ. ಇಲ್ಲಿ ಎಂಟರ್ ಟೈನ್ ಮೆಂಟಿಲ್ಲ, ಬದಲಿಗೆ ಎನಲೈಟನ್ ಮೆಂಟ್. ಹೃದಯವನ್ನೇ ಹಿಂಡುತ್ತದೆ. ಮತ್ತು ನಮ್ಮ ವ್ಯವಸ್ಥೆಯನ್ನು ಕಂಡು ನಮಗೇ ಬೇಸರ ಮೂಡುತ್ತದೆ ಮತ್ತು ಸಿಟ್ಟು ಬರುತ್ತದೆ. ಜಾತಿಯನ್ನು ನಂಬುವುದೆಂದರೆ ಹಿಂಸೆಯನ್ನು, ಅಮಾನವೀಯತೆಯನ್ನು ತಬ್ಬಿಕೊಳ್ಳುವುದೇ ಆಗಿದೆ ಎನ್ನುವುದನ್ನು ತುಂಬಾ ಪರಿಣಾಮಕಾರಿಯಾಗಿ ಜೈ ಭೀಮ್ ತೋರಿಸುತ್ತದೆ.

ಇಡೀ ಸಿನಿಮಾದಲ್ಲಿ ಬಾಬಾ ಸಾಹೇಬರ ಚಿಂತನೆಗಳು ಹಾಸುಹೊಕ್ಕಾಗಿ ಸೇರಿರುವುದನ್ನು ಕಾಣುವುದರ ಜೊತೆಗೆ ಅವರು ಜಾತಿಯನ್ನು ನಂಬುವ ಮಡಿವಂತರ ಜೊತೆಗೆ ಹೇಗೆ ಸೆಣೆಸಿದರು ಎನ್ನುವುದು ನಮ್ಮ ಮನಸ್ಸಿನೊಳಗೆ ಬರುತ್ತದೆ. ಚಿತ್ರದಲ್ಲಿ ತೋರಿಸುವ ಹಿಂಸೆ ಅತಿಯಾಗಿ ಕಂಡರೂ ವಾಸ್ತವವಾಗಿ ದಮನಿತರು ಆ ಥರವಾಗಿಯೇ ಹಿಂಸಿಸಲ್ಪಡುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗಾಗಿ ಅಲ್ಲಿ ತೋರಿಸಿರುವ ಹಿಂಸೆ ಅತಿಯಾದರೂ ಕಟು ಸತ್ಯ.

ಪೋಲೀಸಿನ ಅಟ್ರಾಸಿಟಿಗೆ ಬಲಿಯಾಗಿ ಅಪ್ಪನನ್ನು ಕಳೆದು ಕೊಂಡ ಮಗಳು ಕೊನೆಗೆ ಲಾಯರ್ ನ ಜೊತೆ ದಿನ ಪತ್ರಿಕೆಯನ್ನು ಓದುವ ದೃಶ್ಯ ಭಾರತೀಯ ಸಿನಿಮಾ ಜಗತ್ತಿನಲ್ಲಿಯೇ ಮರೆಯಲಾರದಂತಹ ದೃಶ್ಯ. ಭಾರತೀಯ ಸಿನಿಮಾಗಳು ಜೈಭೀಮ್ ನಂತಹ ಚಿತ್ರಗಳಿಂದ ಕಲಿಯುವುದು ಸಾಕಷ್ಟಿದೆ. ಕಲಿತರೆ ಭಾರತೀಯ ಸಿನಿಮಾ ಆರೋಗ್ಯಕರ ದಾರಿಯಲ್ಲಿ ನಡೆಯುತ್ತದೆ. ಇಲ್ಲದಿದ್ದರೆ ಭಾರತೀಯ ಸಿನಿಮಾವನ್ನು ಯಾರೂ ಕಾಪಾಡಲಾರರು. 

ಮತ್ತೊಂದು ಸಿನಿಮಾ ಪ್ರೇಮಂ ಪೂಜ್ಯಂ. ಕನ್ನಡದ ಸಿನಿಮಾಕ್ಕೆ ಇತ್ತೀಚೆಗೆ ಬೀಸಿದಂಥಹ ತಂಗಾಳಿಯಂತಿದೆ ಇದು. ಕೊಳಕು ಸಂಭಾಷಣೆ, ಅಭಿಮಾನಿಗಳನ್ನು ಮೆಚ್ಚಿಸುವ ಅತಿರಂಜಕ ಡೈಲಾಗುಗಳು, ಅರ್ಥವಿಲ್ಲದ ಹಾಡುಗಳು, ಮನೋವಿಕಲ್ಪರಂತೆ ಹೊಡೆದಾಡುವ ಹೀರೋಗಳು, ವಿಲನ್‍ಗಳು ಮೆಲೋಡ್ರಮೆಟಿಕ್ ಎನ್ನುವ ದೃಶ್ಯಗಳು ಇವು ಯಾವೂ ಇಲ್ಲದೆ ಸೊಗಸಾದ ಛಾಯಾಗ್ರಹಣ, ಹಿಡತದ ನಿರ್ದೇಶನ, ಮನಸ್ಸಿಗೆ ಮತ್ತು ಹೃದಯಕ್ಕೆ ಹತ್ತಿರವಾದ ಸಂಭಾಷಣೆ, ಉತ್ತಮ ನಟನೆಗಳಿಂದ ಈ ಚಿತ್ರ ತುಂಬಾ ಇಷ್ಟವಾಗುತ್ತದೆ. ಬಹಳಷ್ಟು ಸಿನಿಮಾಗಳಂತೆ ಇಲ್ಲೂ ಸಹ ಪ್ರೇಮವೇ ಮುಖ್ಯ ವಸ್ತು. ಆದರೆ ಹೇಳಿರುವ ರೀತಿ ತೋರಿಸಿರುವ ಪರಿ ಹೊಸ ಬಗೆಯಲ್ಲಿದೆ. ಸಿನಿಮಾ ಸ್ಲೋ ಅನ್ನಿಸದರೂ ಸೊಗಸಾಗಿದೆ. ಹಿಂದುಸ್ತಾನಿ ಸಂಗೀತವನ್ನು ಸ್ಲೋ ಅನ್ನುವುದಕ್ಕೆ ಆಗುತ್ತದೆಯಾ, ಹಾಗೆ ಇಲ್ಲಿನ ಸ್ಲೋನೇ ಸಿನಿಮಾದ ವೇಗ, ಮತ್ತು ಗತಿ. 

ಆದರ್ಶವಾದ ಪ್ರೇಮವನ್ನು ಅಂದರೆ ಪ್ಲೆಟಾನಿಕ್ ಲವ್ ಅನ್ನು ದೃಶ್ಯಕಾವ್ಯದಲ್ಲಿ ತೋರಿಸಿರುವುದನ್ನು ನೋಡುವುದು ಕಣ್ಣಿಗೆ ಹಬ್ಬ. ಮನಸ್ಸು ಆ ದೃಶ್ಯಗಳಿಗೆ ಸೋಲದೆ ಇರಲು ಸಾಧ್ಯವೇ ಇಲ್ಲ. ಇಲ್ಲೂ ಸಹ ಕತೆಯಲ್ಲಿ ಧರ್ಮ ಮತ್ತು ಜಾತಿ ಪ್ರೇಮ ಸಾಕಾರಗೊಳ್ಳಲು ಅಡ್ಡಿಬರುತ್ತವೆ. ಬಂದು ಮುದ್ದಾದ ಮನಸ್ಸುಗಳನ್ನು ಬೇರೆ ಮಾಡುತ್ತವೆ. ಎರಡು ಜೀವಗಳು ಬೇರೆಯಾಗಿ ಪರಿತಪಿಸುವ ವೇದನೆ, ನೋವು ದೃಶ್ಯದಲ್ಲಿ ವಾಸ್ತವದಲ್ಲಿ ಜರುಗುತ್ತಿದೆಯೇನೊ ಎಂಬಂತೆ ಚಿತ್ರಿತವಾಗಿವೆ.

ದಿನ ನಿತ್ಯ ಮಾಧ್ಯಮದಲ್ಲಿ ಮಾನಭಂಗ, ಅತ್ಯಾಚಾರ, ಮರ್ಯಾದಾ ಹತ್ಯೆಗಳನ್ನು ಕೇಳುತ್ತೇವೆ ಮತ್ತು ನೋಡುತ್ತೇವೆ. ಇಂತಹ ಈ ಸಂದರ್ಭದಲ್ಲಿ ಮತ್ತು, ಹೆಣ್ಣನ್ನು ಒಂದು ಭೋಗದ ವಸ್ತುವನ್ನಾಗಿ ತೋರಿಸುವ ಚಿತ್ರಗಳ ನಡುವೆ ದಿವ್ಯ ಪ್ರೇಮದ ಹಂಬಲವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಪ್ರೀತಿಯ ದೈವಿಕ ಕಳೆಯನ್ನು ಮನೋಜ್ಞವಾಗಿ ಸೆರೆಹಿಡಿದಿದೆ. ಕೆಲವು ದೃಶ್ಯಗಳಂತೂ ಫೋಟೋಗ್ರಫಿಯಲ್ಲಿ ಲೇಯರ್ಡ್ ಎಂದು ಕರೆಯುತ್ತೇವಲ್ಲ ಆ ರೀತಿ ಮೂಡಿಬಂದಿವೆ. ಶೇಕ್ಸ್ ಪಿಯರ್ ನ 43ನೇ ಸಾನೆಟ್ ನಲ್ಲಿ ಕೆಲವು ಸಾಲುಗಳು ಹೀಗಿವೆ: ಗಾಢ ನಿದ್ರೆ ಆವರಿಸಿಕೊಂಡಾಗಲೂ ಧೇನಿಸುವುವು/ನನ್ನ ಮನದ ಕಣ್ಣುಗಳು ನಿನ್ನನೇ/ ಹಗಲಿಡೀ ಕಂಡುದುದು ನೋಟವಲ್ಲ, ದೃಶ್ಯವಲ್ಲ/ಆದರೆ ನಿದ್ರೆಯಲಿ ಮುತ್ತುವ ಕನಸುಗಳಲಿ ಮಾತ್ರ/ಅವು ಕಾಣುವುದು ನಿನ್ನನೇ..

ಈ ಥರ ಇಲ್ಲಿನ ನಾಯಕ ತಾನು ಇಷ್ಟ ಪಟ್ಟವಳನ್ನು ಪ್ರೀತಿಸುತ್ತಾನೆ. ಅದೂ ಅವಳ ಮೈಯನ್ನು ಸೋಕದೆ. ಇವನ ಪ್ರೇಮ ಆರಾಧನೆ. ಪ್ರೀತಿಯಲ್ಲಿಯೇ ವ್ಯಕ್ತಿವನ್ನು ಕಟ್ಟಿಕೊಳ್ಳುತ್ತಾನೆ ಮತ್ತು ಬದುಕನ್ನೂ ಕಟ್ಟಿಕೊಳ್ಳುತ್ತಾನೆ. ಕಳೆದುಕೊಂಡರೂ ಅಂಕುರಿಸಿದ್ದ ಪ್ರೇಮ ಅಚಲವಾಗಿ, ನಿಶ್ಚಲವಾಗಿ ಮತ್ತು ನಿರ್ಮಲವಾಗಿಯೇ ಉಳಿಸಿಕೊಂಡಿರುತ್ತಾನೆ. ಅವನಿಗೆ ಪ್ರೀತಿಯೆಂದರೆ ಬೆಳಕು. ಬೆಳಕಿಲ್ಲದ ದಾರಿಯಲ್ಲಿ ಹೋಗುವುದಾದರೂ ಹೇಗೆ. ಅದಕ್ಕೆ ಅವನು ಹಾಗೆ ಅವಳನ್ನು ಪ್ರೀತಿಸುವುದು. ಅವಳು ದಕ್ಕದಿದ್ದರೂ ಅವನ ದಿವ್ಯವಾದ ಪ್ರೇಮದ ಭಾವವನ್ನು ಹಾಗೆ ಇಟ್ಟು ಕೊಳ್ಳುತ್ತಾನೆ ಎದೆಯಲ್ಲಿ.

ಮತ್ತು..

ಪ್ರಜಾಪ್ರಭುತ್ವ ವ್ಯವಸ್ಥೆಯು ಗಟ್ಟಿಗೊಳ್ಳಬೇಕಾದರೆ ಹಾಗೂ ಸಮಾಜದ ಅಂಚಿನಲ್ಲಿರುವವರೂ ನ್ಯಾಯದ ಭರವಸೆಯನ್ನು  ಇಟ್ಟುಕೊಳ್ಳಬೇಕಾದರೆ ನ್ಯಾಯಾಂಗ ವ್ಯವಸ್ಥೆ ಮತ್ತು ಲಾಯರ್ ಗಳು ಎಷ್ಟು ಮುಖ್ಯ ಎನ್ನುವುದನ್ನು ಜೈ ಭೀಮ್ ಚಿತ್ರ ತುಂಬ ಪ್ರಾಕ್ಟಿಕಲ್ ನೆಲೆಯಲ್ಲಿ ಮತ್ತು ಪರಿಣಾಮಕಾರಿಯಾಗಿ ತೋರಿಸುತ್ತದೆ. ಮತ್ತು ಸಿನೆಮಾದ ಉದ್ದೇಶವೇ ಅದಾಗಿದೆ. ಔಟ್ ಅಂಡ್ ಔಟ್ ಇದು ಪೊಲಿಟಿಕಲ್ ಅಂಡ್ ಸೋಷಿಯಾಲಜಿಕಲ್ ಮೂವಿ.

ಆದರೆ ಪ್ರೇಮಂ ಪೂಜ್ಯಂ ಸಿನೆಮದ ಉದ್ದೇಶ ದಿವ್ಯವಾದ ಮತ್ತು ಆದರ್ಶ ಪ್ರೇಮದ ಸೊಗಸನ್ನು ತೋರಿಸುವುದಾಗಿದ್ದರೂ
ಇದು ವೈದ ಲೋಕದ ಮತ್ತು ವೈದ್ಯರಿಗಿರಬೇಕಾದ ಕಾಳಜಿ, ಸಾಮಾಜಿಕ ಹೊಣೆಗಾರಿಕೆಯನ್ನು ತೋರಿಸುತ್ತದೆ. ಇದು ಸ್ವಲ್ಪ ಮಟ್ಟಿಗೆ ಫಿಲಾಸಪಿಕಲ್ ನೆಲೆಯಲ್ಲಿ ಪ್ರೀತಿಯ ಪರಿಯನ್ನು ಕಾಣಿಸುವುದಾಗಿದೆ. ಛಾಯಾಗ್ರಹಣದ ಜೊತೆ ಸಂಗೀತವೂ ಬೆರೆತು ಕತೆಗೆ ಮತ್ತು ಕತೆಯ ಪಾತ್ರಗಳಿಗೆ ಸಾಥ್ ಕೊಡುತ್ತ ಹೋಗಿವೆ. ಪ್ರಾಸ ಮಿಶ್ರಿತ ಗದ್ಯದ ಸಾಲುಗಳಾಗಿ ಕೇಳುತ್ತವೆ ಹಾಡುಗಳು. ಆದರೆ ಸಿನೆಮಾದ ಇಂಟಿಗ್ರಲ್ ಪಾರ್ಟ್ ಆಗಿ ಅವು ಮೂಡಿ ಬಂದಿರುವುದರಿಂದ, ಇಡೀ ಸಿನೆಮಾದ ಹಾಡುಗಳನ್ನು ಒಂದು ಪ್ಯೂರ್ ಮ್ಯೂಸಿಕಲ್ ಆಲ್ಬಮ್ ಆಗಿ ನೋಡುವುದಕ್ಕೆ ಆಗುವುದಿಲ್ಲ, ಪ್ರತಿ ಹಾಡುಗಳೂ ಸನ್ನಿವೇಶ, ಸಂದರ್ಭಗಳನ್ನು ಮತ್ತು ಪಾತ್ರದ ಮನೋಭಿತ್ತಿಯನ್ನು ಅಭಿವ್ಯಕ್ತಿಸುತ್ತವೆ.

ಜೈ ಭೀಮ್ ಚಿತ್ರದಲ್ಲಿ ಪಾತ್ರಗಳು ಬದುಕಿನಿಂದ ನೇರವಾಗಿ ಕಲೆಯ ಒಳಗೆ ಹೋಗುತ್ತವೆ. ಪ್ರೇಮಮ್ ಪೂಜ್ಯಮ್ ಚಿತ್ರದಲ್ಲಿ ಕಲೆಯ ಅಂದರೆ ಸಿನಿಮಾದ ಒಳಗಿಂದ ವಾಸ್ತವದ ಹೊರಗಿನ ಲೋಕಕ್ಕೆ ಬಂದು ಕಾಡುತ್ತವೆ.

ಕೊನೆಗೆ ಒಂದು ಮಾತು- ಜೈ ಭೀಮ್  ನೋಡುವಾಗ ಸೂರ್ಯನ ಪಾತ್ರವನ್ನು ಕನ್ನಡದಲ್ಲಿ ಯಾರು ಮಾಡಿದ್ದಿದ್ದರೆ ಯಾರು ಮಾಡ ಬಲ್ಲವರಾಗಿದ್ದರು ಎಂದು ಕೊಂಡಾಗ ಸಹಜವಾಗಿಯೇ ಪುನೀತ್ ರಾಜ್ ಕುಮಾರ್ ಮನಸ್ಸಿಗೆ ಬಂದದ್ದು.

ಪ್ರೇಮಂ ಪೂಜ್ಯಂ ನ ಶ್ರೀ ಹರಿಯ ಪಾತ್ರವನ್ನು ಪ್ರೇಮ್ ಅಲ್ಲದೆ ಬೇರೆ ಯಾರು ಮಾಡಿದ್ದರೂ ಪಾತ್ರಕ್ಕೆ ಜೀವ ಬರುತ್ತಿರಲಿಲ್ಲವೆನೋ.

‍ಲೇಖಕರು Admin

November 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: