ಎದೆ ಝಲ್ಲೆನ್ನಿಸುವ ರೋಚಕ ‘ಸುಪಾರಿ’

ಮೆಹಬೂಬ್ ಮಠದ

ಸುಪಾರಿ ಎಂಬ ಶಬ್ದ ಕೇಳಿದ ಕೂಡಲೇ ಮನಸಿನ ಪರದೆಯಲ್ಲಿ ಕೆಲವು ಭೀಕರ ಕೊಲೆಗಳ ಚಿತ್ರಗಳು ಮಿಂಚಿನ ವೇಗದಲ್ಲಿ ಬಂದು ಹೋಗುತ್ತವೆ. ಪ್ರತಿನಿತ್ಯ ಇದರ ಕುರಿತ ಸುದ್ದಿಗಳನ್ನು ಓದುತ್ತಿರುತ್ತೇವೆ. ಸುದ್ದಿ ವಾಹಿನಿಗಳಂತೂ ಇಂಥ ಸುದ್ದಿಗಳಿಗಾಗಿಯೇ ಪ್ರತ್ಯೇಕ ಸಮಯ ಮತ್ತು ಸಂಚಕೆಗಳನ್ನು ಮೀಸಲಿಡುತ್ತಿವೆ. ಹಣಕ್ಕಾಗಿ, ಆಸ್ತಿಗಾಗಿ, ಹೆಣ್ಣಿಗಾಗಿ, ಪ್ರತಿಕಾರಕ್ಕಾಗಿ ಲೆಕ್ಕವಿಲ್ಲದಷ್ಟು ಸುಪಾರಿ ಕೊಲೆಗಳು ನಡೆಯುತ್ತಿವೆ. ಈಗ ಸುಪಾರಿಗೆ ಅದರದ್ದೇ ಆದ ಒಂದು ಪ್ರತ್ಯೇಕ ಜಗತ್ತು ನಿರ್ಮಾಣವಾಗಿದೆ. ಕನ್ನಡದಲ್ಲಿ ವಿಶಿಷ್ಟವಾಗಿ ಬರೆಯುತ್ತಿರುವ ಭಾರತೀಯ ಲೇಖಕ ಕುಂವೀ ರವರು ‘ಸುಪಾರಿ’ ಯನ್ನು ವಸ್ತುವಾಗಿಟ್ಟುಕೊಂಡು ಬರೆದಿರುವ ‘ಸುಪಾರಿ’ ಕಾದಂಬರಿ ಓದಿ ರೋಮಾಂಚಿತಗೊಂಡೆ. ಕನ್ನಡದ ಮಹತ್ವದ ಲೇಖಕರು, ವಿಮರ್ಶಕರು ಆದ ಅಗ್ರಹಾರ ಕೃಷ್ಣಮೂರ್ತಿ ರವರು ಈ ಕೃತಿಯ ಕುರಿತು “ಕನ್ನಡದಲ್ಲಿ Subvert, Subversive ಮಾದರಿಯ ಸಾಹಿತ್ಯ ರಚನೆಯಲ್ಲಿ ಎದ್ದು ಕಾಣುವಂತೆ ಪ್ರಯೋಗಶೀಲರಾಗಿರುವವರು ಕುಂವೀ ಒಬ್ಬರೆ ಇರಬೇಕು ಅನಿಸುತ್ತದೆ. ಅದರಲ್ಲು ಅವರ ಹೊಸ ಕಾದಂಬರಿ ‘ಸುಪಾರಿ’ ಯನ್ನು ಓದಿದ ಮೇಲೆ ಅದು ಮತ್ತಷ್ಟು ನಿಚ್ಚಳವೆನಿಸುತ್ತದೆ.” ಎಂದು ಬರೆಯುತ್ತಾರೆ. ಮತ್ತೊಬ್ಬ ವಿಮರ್ಶಕರಾದ ಪ್ರೊ.ರಾಜೇಂದ್ರ ಚೆನ್ನಿ ರವರು “ಈ ಕೃತಿಯ ಸ್ವರೂಪವು ಒಂದು ರಹಸ್ಯಮಯ ಕೋಟೆಯ ಸ್ವರೂಪವನ್ನು ಹೋಲುತ್ತದೆ. ಇದನ್ನು ಓದಲು ತೊಡಗುವುದು ಒಂದು ರೀತಿಯ ಸುಪಾರಿ ಸ್ವೀಕರಿಸಿದಂತೆ ಆದರೆ ಇದು ಕುತೂಹಲಕಾರಿ ಪ್ರಯಾಣವಾಗಿದೆ” ಎಂದು ಹೇಳುತ್ತಾರೆ.

ಈ ಕಾದಂರಿಯಲ್ಲಿನ ನಿರೂಪಕ ಸಿದ್ಧಾರ್ಥ್ ಕಂದೀಲು ಇಂಗ್ಲೀಷ್ ನಲ್ಲಿ ಬರೆಯುವ ವಿಶ್ವ ಪ್ರಸಿದ್ಧ ಲೇಖಕ. ಈಗಾಗಲೆ ಅವನು 19 ಜನ ಕುಖ್ಯಾತ ಸುಪಾರಿ ಹಂತಕರನ್ನು ಸಂದರ್ಶಿಸಿ ಕಾದಂಬರಿಗಳನ್ನು ಬರೆದಿದ್ದಾನೆ ಈಗ ಇಪ್ಪತ್ತನೇ ಹಂತಕನನ್ನು ಭೇಟಿಯಾಗಲು ಹೊರಟಿದ್ದಾನೆ ಆದರೆ ಈ ಬಾರಿ ಇದರ ಜೊತೆಗೆ ತನ್ನ ತಂದೆಯ ಹಂತಕನ ಹುಡುಕಾಟವನ್ನು ನಡೆಸಿದ್ದಾನೆ. ಜೋಸೆಫ್ ಎಂಬ ಅತ್ಯಂತ ವಿಲಾಸಿ ಮತ್ತು ಅಪ್ಪಟ ಪುಸ್ತಕ ವ್ಯಾಪಾರಿಯ ಒತ್ತಡ ಅವನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಅತೀ ಕಡಿಮೆ ಸಮಯದಲ್ಲಿ ಕೊಲೆಗಳ ಸುತ್ತ ನಡೆಯುವ ವಸ್ತುವನ್ನು ಇಟ್ಟುಕೊಂಡು ಕಾದಂಬರಿಯೊಂದನ್ನು ಬರೆಯಲೇಬೇಕಾದ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಹಂತಕನ ಕೋಟೆ ಪ್ರವೇಶ ಮಾಡಲು ಕಾಯುತ್ತಿದ್ದಾನೆ. ಸುಪಾರಿ ಹಂತಕರ ಕುರಿತು Phd ಮಾಡಿರುವ IGP ರಾಧಾಕೃಷ್ಣ ಅವನಿಗೆ ಮಾರ್ಗದರ್ಶನ ಮಾಡುತ್ತಿದ್ದರೆ ವಿಪರೀತ ಕುತೂಹಲವಿರುವ ಯಂಗ್ ಪೊಲೀಸ್ ಆಫಿಸರ್ ಸುದರ್ಶನ್ ಚವ್ಹಾಣ್ ಅವನ ಸಹ ಪ್ರಯಾಣಿಕರಾಗಿ ಜೊತೆಗಿದ್ದಾನೆ. ಅವರು ಹೋಗಬೇಕಾಗಿರುವುದು ‘ಶಾನವಾಸಪುರ’ ವೆಂಬ ಭೂ ಲೋಕದ ನರಕದಂತಿರುವ ಊರಿಗೆ ಮಧ್ಯದಲ್ಲಿ ‘ಶ್ವಾನವಾಸಪುರ’ ವೆಂಬ  ವಿಚಿತ್ರ ಊರನ್ನು ಕೂಡ ನೋಡಬೇಕಾಗುತ್ತದೆ.ಎಲ್ಲಿ ನೋಡಿದರೂ ನಾಯಿಗಳೇ ನಾಯಿಗಳು ಅವುಗಳನ್ನು ಪೂಜಿಸಲೆಂದೇ ‘ಶ್ವಾನೇಶ್ವರಸ್ವಾಮಿ ದೇವಸ್ಥಾನ’ ಬೇರೆ ಕಟ್ಟಲಾಗಿದೆ ಈ ದೇವಸ್ಥಾನಕ್ಕೂ ಕುಖ್ಯಾತ ಹಂತಕನಿಗೂ ನೇರ ಸಂಬಂಧವಿದೆ.

ದಯಾನಿಧಿ ಆಚಾರ್ಯ ಈ ಹೆಸರು ಯಾರೊ ಆರ್ಚಕನದ್ದಲ್ಲ ಬದಲಾಗಿ ಇಡೀ ರಾಜ್ಯದ ಪೊಲೀಸ್ ವ್ಯವಸ್ಥೆಗೆ ಸವಾಲಾಗಿರುವ, ಬೆರಳ ತುದಿಯಲ್ಲಿ ರಾಜ್ಯ ರಾಜಕಾರಣವನ್ನು ಕುಣಿಸಬಲ್ಲ, ಸಮಸ್ತ ಸುಪಾರಿ ಹಂತಕರ ಪಾಲಿನ ಗಾಡ್ ಫಾದರ್ ಮತ್ತು ಅಪರಕರ್ಮ ವಿದ್ಯಾ ಪಾರಂಗತನಾದ ಕ್ರೌರ್ಯವನ್ನೇ ಮೂರು ಹೊತ್ತು ಉಸಿರಾಡುವ ಸುಪಾರಿ ಹಂತಕನದ್ದು. ಇವನನ್ನು ಭೇಟಿಯಾಗಿ ಇವನು ಮಾಡಿರುವ ಕೊಲೆಗಳ ಬಗ್ಗೆ ಇವನಿಂದಲೇ ಕೇಳಿ ಅದನ್ನು ಆಧರಿಸಿಯೇ ಸಿದ್ಧಾರ್ಥ ಕಾದಂಬರಿ ಬರೆಯಬೇಕಾಗಿದೆ. ಕರುಣಾ ರಸವನ್ನು ಉಂಡುಟ್ಟು ಬುಕುವಂತೆ ಕಾಣುವ, ಮಗನ ಹತ್ಯೆಯ ಸೂತಕವನ್ನು ಅನುಕ್ಷಣ ಪಾಲಿಸಲು ವರ್ಷಗಳ ಕಾಲದಿಂದ ಮೂಕಿಯಾಗಿ ಕೇವಲ ಸನ್ನೆಗಳಲ್ಲಿ ಮಾತಾಡುವ ವಾತ್ಸಲ್ಯಮಯಿ ಹೆಂಗಸಾದ ‘ಸಾವಿತ್ರಿ’ ಈತನ ಧರ್ಮ ಪತ್ನಿ. ವಿದೇಶದಲ್ಲಿ ಓದುತ್ತಿರುವ ಗಾಂಧಿ, ನೇತಾಜಿ ಮತ್ತು ಝಾನ್ಸಿ ಈತನ ಮಕ್ಕಳು. ದಯಾನಿಧಿಯ ಮನೆಗೆ ಬಂದ ಕೂಡಲೆ ಸಿದ್ಧಾರ್ಥ ‘ಶ್ರೀಕಂಠ ಶಾಸ್ತ್ರಿ’ ಯಾಗಿ ಬದಲಾಗಬೇಕಾಗುತ್ತದೆ. ರಕ್ತದಾಹಿಯನ್ನು ಅಪ್ಪಾಜಿ ಎಂದು ಸಂಭೋಧಿಸುತ್ತಲೆ ಅವನಿಂದ ರಕ್ತ ಚರಿತ್ರೆಯ ಅಧ್ಯಾಯಗಳನ್ನು ಕೇಳಿಸಿಕೊಳ್ಳುವ ನಿರೂಪಕ ತನ್ನ ತಂದೆಯ ಹಂತಕ ಇವನೇ ಇರಬಹುದೇ ಎಂದು ಬಲವಾಗಿ ಯೋಚಿಸುತ್ತಾನೆ.

ಹಲಕುಂದಿ ಸೀಮೆಯ ಕಾಮ್ರೇಡ್ ಶರಭಣ್ಣ ವಕೀಲಿ ವೃತ್ತಿ ಜೊತೆ ಶೋಷಿತರ ಪರ ಹೋರಾಡುತ್ತಿರುವ ಕಮ್ಯುನಿಷ್ಟ್ ಹೋರಾಟಗಾರ ಈತನ ಹೆಸರು ಕೇಳಿದರೆ ಸಾಕು ಅಲ್ಲಿನ ದುರಹಂಕಾರಿ ಜಮೀನ್ದಾರರಿಗೆ ನಡುಕ ಶುರುವಾಗುತ್ತದೆ. ಈತನ ಪ್ರತಿ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಂಡದಂತೆ ಹೋರಾಡುವ ದ್ರಾಕ್ಷಾಯಣಿ ಈತನ ಹೆಂಡತಿ ಅಂದ ಹಾಗೆ ಇವರಿಬ್ಬರು ಕಾದಂಬರಿಯ ಕಥಾ ನಾಯಕ ಸಿದ್ಧಾರ್ಥನ ತಂದೆ-ತಾಯಿಯರು. ಅಲ್ಲಿನ ಆಗರ್ಭ ಶ್ರೀಮಂತ, ಬಡವರನ್ನು, ಶೋಷಿತರನ್ನು ಹುರಿದು ಮುಕ್ಕುತ್ತಿರುವ ಧನದಾಹಿ ವರದರಾಜಲು ನಾಯ್ಡು ನ ಪ್ರತಿ ಯೋಜನೆಗೂ ಕಾಮ್ರೇಡ್ ಶರಭಣ್ಣ ಅಡ್ಡ ಬರುತ್ತಿರುತ್ತಾನೆ ಅದಕ್ಕಾಗಿ ಅವನ ಇಡೀ ವಂಶವನ್ನೇ ಭೀಕರವಾಗಿ ಕತ್ತರಿಸಿ ಬಿಸಾಕುವಂತೆ ಅಲ್ಲಿನ ಹಂತಕನೊಬ್ಬನಿಗೆ ಸುಪಾರಿ ಕೊಡಲು ಹೋದಾಗ ಅವನು ನಿರಾಕರಿಸುತ್ತಾನೆ ಆದರೆ ರಕ್ತಚರಿತ್ರೆಯ ರಾಕ್ಷಸಿ ಸ್ವರೂಪದಂತಿರುವ ಅವನ ಹೆಂಡತಿ ಐದು ಕೋಟಿ ರೂಪಾಯಿಗಳಿಗೆ ಅದನ್ನು ಸ್ವೀಕರಿಸಿ ಅತ್ಯಂತ ಕ್ರೂರ ಹಂತಕರ ಪಡೆಯೊಂದನ್ನ ಈ ಮಾರಣ ಹೋಮಕ್ಕೆ ಸಜ್ಜು ಮಾಡುತ್ತಾಳೆ ಅವಳ ಗಂಡನೆ ಅದರ ನಾಯಕ. ಶರಭಣ್ಣನ ಮನೆಯ ಮೇಲೆ ದಾಳಿ ಮಾಡಿ ಮನೆಯ ಎಲ್ಲ ಸದಸ್ಯರನ್ನ ಅಮಾನುಷವಾಗಿ ಪ್ರಾಣಿಗಳಂತೆ ಕತ್ತರಿಸಿ ಹಾಕಲಾಗುತ್ತದೆ ಅದರಲ್ಲು ಆಗ ತಾನೆ ಹೆರಿಗೆಯಾದ ನವ ಬಾಣಂತಿ ದ್ರಾಕ್ಷಾಯಣಿಯನ್ನು ಕೂಡ ಕೊಲ್ಲುತ್ತಾರೆ ಈ ಭೀಕರ ಹತ್ಯಾಕಾಂಡದಲ್ಲಿ ಹೇಗೋ ನವಜಾತ ಶಿಶು ಪವಾಡ ಸದೃಶ ರೀತಿಯಲ್ಲಿ ಬದುಕುಳಿಯುತ್ತದೆ ಆ ಮಗುವೇ ವಿಶ್ವ ಪ್ರಸಿದ್ಧ ಕಾದಂಬರಿಕಾರ ಸಿದ್ಧಾರ್ಥ ಕಂದೀಲು…. ಹೌದು ನಿಮ್ಮ ಊಹೆ ಸರಿ ಅವನ ತಂದೆಯ ಹಂತಕ ಅದೇ ದಯಾನಿಧಿ ಸುಪಾರಿ ಪಡೆದವಳು ಸಾವಿತ್ರಿ ಎಂಬ ಸಾಧ್ವಿ!!

ಇನ್ನೂ ವಿಚಿತ್ರವೆಂದರೆ ಸಿದ್ಧಾರ್ಥ ತನ್ನನ್ನು ಕೊಲ್ಲಲು ತಾನೇ ಪಪ್ಪು ಯಾದವ್ ಎಂಬ ಹಂತಕನಿಗೆ ಸುಪಾರಿ ಕೊಟ್ಟುಕೊಳ್ಳುವುದು ಮತ್ತು ಅವನು ನಿರಾಕರಿಸುವುದು. ತಿರುಮಲ ಎಂಬುವ ಮುಗ್ಧ ಸಹಾಯಕ ಅಪ್ಪಲ್ನಾಯ್ಡು ಎನ್ನುವ ಹೆಸರಿನ ಹಾರ್ಡಕ್ರೋರ್ ಕ್ರಿಮಿನಲ್ ಎಂದು ಗೊತ್ತಾಗುವುದು, ಟೈಗರ್ ಶ್ರೀಹರಿ ಮತ್ತು ಜಹನಾರಾಳ ಪ್ರೇಮ ಕತೆ. ಪಕ್ಷದ ಟಿಕೇಟಿಗಾಗಿ ಗಂಡನ ಹಂತಕರೊಂದಿಗೆ ರಾಜಿಯಾಗುವ ಪದ್ಮಾವತಿ, ಪ್ರತಿ ಹತ್ಯಾಕಾಂಡದಲ್ಲು ಕಂಡು ಬರುವ ಚಿನ್ನದಾಯುಧ ಕಣ್ಮರೆಯಾಗುವುದು, ನರಕ ಲೋಕದ ಹೆಬ್ಬಾಗಿಲಿನಂತಿರುವ ರಹಸ್ಯಮಯ ಗರುಡ ಪುರಾಣವೆಂಬ ಅಡಗುತಾಣ. ಇವಕ್ಕೆಲ್ಲ ಕಳಶವಿಟ್ಟಂತೆ ಸಚ್ಚಿದಾನಂದ ಭಗವತ್ಪಾದನೆಂಬ ಸುಪಾರಿ ಹಂತಕರ ಅನಭಿಷಿಕ್ತ ದೊರೆಯ ನಾಟಕೀಯ ಅಂತ್ಯ ಹೀಗೆ ಕಾದಂಬರಿಯಲ್ಲಿನ ಪಾತ್ರಗಳು ಘಟನೆಗಳು ಅನೂಹ್ಯ ರೀತಿಯಲ್ಲಿ ರೂಪಾಂತರಗೊಳ್ಳುತ್ತವೆ. ಪುಟ ಪುಟದಲ್ಲೂ ಎದೆ ಝೆಲ್ಲೆನಿಸುವ ರೋಮಾಂಚನಕಾರಿ ನಿರೂಪಣೆ ಇದೆ.

ಸೀಟಿನ ತುದಿಗೆ ಉಸಿರು ಬಿಗಿ ಹಿಡಿದು ಕೂತು ಉಗುರು ಕಚ್ಚುತ್ತಾ ನೋಡುವ ಬ್ಲಾಕ್ ಬಸ್ಟರ್ ಕ್ರೈಂ ಥ್ರಿಲ್ಲರ್ ಸಿನೆಮಾ ನೋಡಿದ ಅನುಭವವನ್ನು ನೀಡುತ್ತಲೇ ಬದ್ಧತೆ ಮತ್ತು ಮನುಷ್ಯತ್ವದ ಅರಿವಿನ ಬೆಳಕನ್ನು ಓದುಗರೆದೆಗೆ ದಾಟಿಸುವಲ್ಲಿ ಕಾದಂಬರಿ ಗೆದ್ದಿದೆ. ದಯಾನಿಧಿ ಆಚಾರ್ಯನೆ ತನ್ನ ತಂದೆಯ ಹಂತಕ ಎಂದು ಗೊತ್ತಾದಾಗ ಸಿದ್ಧಾರ್ಥ ಏನು ಮಾಡುತ್ತಾನೆ? ಮಾರಕ ಚಿನ್ನದಾಯುಧದ ರಹಸ್ಯವೇನು? ಮಂದಾಕಿನಿ ಏಕೆ ನಿರೂಪಕನ ಬದುಕಲ್ಲಿ ಬಂದಳು? ಕಾಮ್ರೇಡ್ ಶರಭಣ್ಣನ ಹೋರಾಟ ಯಾರು ಮುಂದುವರೆಸುತ್ತಾರೆ? ಎನ್ನುವ ತೀವ್ರ ಕುತೂಹಲಗಳಿಗೆ ಕಾದಂಬರಿ ಓದಲೇಬೇಕು. ಒಂದು ಪಕ್ಕಾ ಕಮರ್ಶಿಯಲ್ ಸಿನೆಮಾ ಮಾಡಲು ಈ ಕಾದಂಬರಿ ಅತ್ಯಂತ ಸೂಕ್ತವಾಗಿದೆ. ತಮ್ಮ ಪ್ರತಿ ಕಾದಂಬರಿಯಿಂದ ಕನ್ನಡದ ಓದುಗರಿಗೆ ಅಚ್ಚರಿಗಳ ಸರಮಾಲೆಯನ್ನು ತೊಡಿಸುವ ನಿರಂತರ ಲೇಖಕ, ಸಮೃದ್ಧಿ ಲೇಖಕ ಮತ್ತು ವರ್ತಮಾನದ ತಲ್ಲಣಗಳಿಗೆ ತೀಕ್ಷ್ಣವಾಗಿ ಪ್ರತಿಸ್ಪಂದಿಸುವ ಉಪದ್ರವಿ ಲೇಖಕ ಎಂದು ವಿಮರ್ಶಕರಿಂದ ಕರೆಸಿಕೊಳ್ಳುವ ಕನ್ನಡದ ಮಹತ್ವದ ಲೇಖಕರಾದ ಕುಂವೀ ರವರ ಮತ್ತೊಂದು ಮಹತ್ವದ ಕೃತಿಯ ನಿರೀಕ್ಷೆಯಲ್ಲಿ…..

‍ಲೇಖಕರು avadhi

June 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: