ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎಸ್ ವೆಂಕಟೇಶಮೂರ್ತಿ ಕವಿತೆ- ಗರಿಸುಟ್ಟ ಹಕ್ಕಿ…

ಎಚ್ ಎಸ್ ವೆಂಕಟೇಶಮೂರ್ತಿ

ಸಂಪಾತಿಯ ಮಾತು ಯಾರಿಗೆ ಬೇಕಾಗಿದೆ ಈಗ?
ಗರಿ ಸೀದು ಅಪ್ಪಳಿಸಿದ್ದಾನೆ ನೆಲಕ್ಕೆ. ದರೀಕ
ಹಕ್ಕಿಗಳು ಸಂಜೆಯ ಹೊ೦ಬಣ್ಣದ ಮೀಹಕ್ಕಿ
ಗುಂಪು ಗುಂಪಾಗಿ ಹಾರುತ್ತಿವೆ. ದೇಹದ ತೂಕಕ್ಕೆ
ಜೋಲಿ ಹೊಡೆದು ಮುಗ್ಗರಿಸಿ ಬೀಳುತ್ತಾವೆ.
ಸಮತೋಲ ತಪ್ಪಿ. ಆಸರೆಗೆ ಹಿಡಿದ ಕುರಚಲು
ಕಡ್ಡಿ ತಾವೂ ಬೀಳುತ್ತವೆ ಜೊತೆಯಲ್ಲಿ.

ನೀನಿನ್ನು ತೆಪ್ಪಗೆ ಒಂದು ಮೂಲೆಯಲ್ಲಿ
ಬಿದ್ದಿರುವುದೇ ಲೇಸು. ಕೊರಳು ಚಾಚಿ
ದಕ್ಕಿದ ಹುಳ ಹುಪ್ಪಟೆ ಹೊಟ್ಟೆಗೆ ಹಾಕಿ.
ಸಂಪಾತಿ ಜಪಿಸುತ್ತಾನೆ: ಹೊಂಗಿರಣ ದೈವವೇ
ಗರಿ ಮೂಡಲಿ ಮುದುರಿ ಬಿದ್ದ ಮಹತ್ವಾಕಾಂಕ್ಷೆಗೆ.
ತಮ್ಮಾ, ಬಾ, ಹಿಡಿ ನನ್ನ ಕಾಲು. ರಿವ್ವನೆ
ತಿರುಗಿ ಬೀಸಿ ಒಗಿ ಆಕಾಶಕ್ಕೆ. ಅಡ್ಡ
ಬರುವ ಮೇಘಗಳು ಚದುರಿ ಚೆಲ್ಲಾಪಿಲ್ಲಿಯಾಗಲಿ.
ನಿನ್ನ ತೋಳ್ಬೀಸಿನ ರಭಸಕ್ಕೆ ಮೇಲೇರುತ್ತೇನೆ.
ಗರಿಗಳ ಹಂಗಿರದೆ, ರವಿ ಕಿರಣ ಮೆಟ್ಟಿಕೊಂಡು,
ಒಡಲಿಗೆ ತಾವೇ ಆಗುತ್ತವೆ ರೆಕ್ಕೆ ಇಕ್ಕೆಲಕ್ಕೆ ಸಪ್ತ ವರ್ಣ ಶಲಾಕೆ.

ಕೆಳಗೆಲ್ಲೋ ಕಡಲ ತೊದಲ್ನುಡಿ. ದೂರವಾಯಿತು
ಕ್ಷಿತಿಜದ ಗಡಿ. ನೀಲಾಕಾಶವ ಭೇದಿಸಿತೆನ್ನ ಚೂಪಾದ
ಕೊಕ್ಕು. ಮೈಯಲ್ಲಿ ಯಾವುದೋ ಆವೇಶ
ಹೊಕ್ಕಂತೆ, ಹೊಮ್ಮಿದ ನೀಳ ಕೀರಲು ಸಂಪಾತಿಯ
ಕೇಕೆ. ಆಹಾ! ನೆಲದ ಎಳೆತವಿಲ್ಲದೆ ಹಗು
ರಾಗಿದೆ ದೇಹಾ. ನಿನ್ನ ಕರುಣೆಗೆ ಶರಣು ಸೋದರ.
ಮುಗಿಲಿಗೆ ನೀರಿನ ರೆಕ್ಕೆ. ನೀಲಿಗೆ ಬಾನಿನ ರೆಕ್ಕೆ.
ತಾರೆಗೆ ಬೆಳಕಿನ ರೆಕ್ಕೆ. ಸಂಪಾತಿಗೆ ಸಂಕಲ್ಪದ ರೆಕ್ಕೆ !

‍ಲೇಖಕರು Admin

17 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading